ArticlesLatest

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ ಮತ್ತು  ಕೃತಿಗಳ ಪರಿಚಯ.. ಭಾಗ-16

ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದ ಕೃತಿಗಳನ್ನು ಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ಸಂಕ್ಷಿಪ್ತವಾಗಿ ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ   ಪುಸ್ತಕ ವಿಮರ್ಶೆ)ವಾಗಿದೆ. ಇದನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ನಾಲ್ಕು ದಶಕಗಳ ಹಿಂದೆಯೇ ಬರೆದಿದ್ದು,  ವಿವಿಧ ಲೇಖಕರ ಸಂಪಾದಕತ್ವದ  ಗ್ರಂಥಗಳಲ್ಲಿ ಬೆಳಕು ಕಂಡಿವೆ. ಅದನ್ನು ಸಂಗ್ರಹಿಸಿ ಜನಮನಕನ್ನಡಕ್ಕೆ ನೀಡಿದ್ದಾರೆ.

76-ಕೃತಿ : ಭುಜಂಗಯ್ಯನ ದಶಾವತಾರಗಳು

ಕರ್ತೃ : ಶ್ರೀಕೃಷ್ಣ ಆಲನಹಳ್ಳಿ

ಪ್ರಕಾಶಕರು: ಭಾರತೀ ಪ್ರಕಾಶನ, ಮೈಸೂರು

ಮೊದಲಮುದ್ರಣ1983; ಎರಡನೆಮುದ್ರಣ 1985, ಪುಟಗಳು:422. ಬೆಲೆ:75 ರೂ.

ಪುಸ್ತಕ ವಿಮರ್ಶೆ:

1980ರ ದಶಕದಲ್ಲಿ ಕನ್ನಡ ಸಾಹಿತ್ಯ ಸಾಗರದಲ್ಲಿ ತಿಮಿಂಗಲವೆನಿಸಿ, ಕಾದಂಬರಿ ಸಾಮ್ರಾಜ್ಯದ ರಾಜಕುಮಾರನೂ ಕವನ ಪ್ರಪಂಚದ ಉದಯರವಿಯೂ ಎನಿಸಿಕೊಂಡರು ಆಲನಹಳ್ಳಿ ಕೃಷ್ಣ. ‘ಕಾಡು’ ಕಾದಂಬರಿ ಆಧಾರಿತ ಕನ್ನಡ ಸಿನಿಮ ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತು. ಇವರ ಮತ್ತೊಂದು ಕಾದಂಬರಿ ‘ಪರಸಂಗದ ಗೆಂಡೆತಿಮ್ಮ’ ಆಧಾರಿತ ಫಿಲಂ ಕೂಡ ಕನ್ನಡ ಚಿತ್ರಪ್ರಪಂಚದಲ್ಲಿ ಸುನಾಮಿ ಎಬ್ಬಿಸಿತ್ತು. 3ನೇದಾಗಿ ‘ಭುಜಂಗಯ್ಯನ ದಶಾವತಾರಗಳು’ ಕಾದಂಬರಿಯು ಸಿನಿಮಾ ರೂಪ ತಾಳುವ ಮುನ್ನವೇ ಇವರು ಇಹಲೋಕ ತ್ಯಜಿಸಿದ್ದರು.

ಅಧ್ಯಾಪಕ ವೃತ್ತಿಯಲ್ಲಿ 10ವರ್ಷ ದುಡಿದರೂ ದೊರಕದ ಖ್ಯಾತಿಯು ಇವರ ಕಾದಂಬರಿ ಆಧಾರಿತ ಸಿನಿಮಗಳು ಬಿಡುಗಡೆಯಾದ ನಂತರ ದೊರಕಿತು. ಮಾತ್ರವಲ್ಲ ಕನ್ನಡದಿಂದ ಹಲವು ಭಾಷೆಗಳಿಗೆ ಡಬ್-ರೀಮೇಕ್ ಆದ ಬಳಿಕ ಭಾರತೀಯ ಸಿನಿಮ ಇತಿಹಾಸದಲ್ಲಿ ಧೂಳೆಬ್ಬಿಸಿದ್ದವು. ನಾಲ್ಕೈದು ವರ್ಷದೊಳಗೆ ಆಲನಹಳ್ಳಿ ಕೃಷ್ಣರವರ ಖ್ಯಾತಿಯು ಇಮ್ಮಡಿ  ಆಯಿತು. ಇವರ ಕಾದಂಬರಿ ಆಧಾರದ ಎರಡೂ ಫಿಲಂಸ್ ಕ್ಲಾಸ್-ಮಾಸ್ ಆಡಿಯನ್ಸ್ ಹಾಗೂ ಮಾಧ್ಯಮದವರ ತನುಮನ ಸೂರೆಗೊಂಡುದ್ದಲ್ಲದೆ ದೇಶದ ಕಮರ್ಷಿಯಲ್ ಎಕ್ಸ್ಪರಿಮೆಂಟಲ್ ಚಿತ್ರೋದ್ಯಮಿಗಳ ತಲೆಯೊಳಕ್ಕೆ ಹುಳು ಬಿಟ್ಟಿದ್ದವು.

ಇವರು ಬರೆದ ಪ್ರತಿಯೊಂದು ಕಾದಂಬರಿಯೂ ಬಿಸಿಬಿಸಿ ಮೈಸೂರ್ ಪಾಕ್ ನಂತೆ ಒಂದೇ ತಿಂಗಳೊಳಗೆ ಪುಸ್ತಕದ ಅಂಗಡಿಯಿಂದ ಮಾಯವಾಗುತ್ತಿದ್ದವು. ಕೆಲವುಸಲ ಬ್ಲಾಕ್ ಮಾರ್ಕೆಟ್ ಮೂಲಕ ಖರೀದಿಸುವ ಪರಿಸ್ಥಿತಿ ಬಂದೊದಗಿದ್ದೂ ಉಂಟು. ಇಂಥವರ ಜತೆಗೆ ರಾತ್ರೋರಾತ್ರಿ ಸಹಜಕವಿ ಪ್ರೊ. ದೊಡ್ಡರಂಗೇಗೌಡರ ಹೆಸರೂ ಮಿಂಚಿನಂತೆ ನಾಡಿನಾದ್ಯಂತ ಜನಪ್ರಿಯತೆ ಕಂಡಿತ್ತು “ಪರಸಂಗದ ಗೆಂಡೆತಿಮ್ಮ” ಚಿತ್ರದ ಗೀತೆಗಳಿಂದ.

1973ರಲ್ಲಿ ಬಿಡುಗಡೆಯಾದ “ಕಾಡು” ಸಿನಿಮ, 1978ರಲ್ಲಿ ತೆರೆಕಂಡ “ಪರಸಂಗದ ಗೆಂಡೆತಿಮ್ಮ” ಹಾಗೂ 1991ರ “ಭುಜಂಗಯ್ಯನ ದಶಾವತಾರಗಳು” ಚಂದನವನ ಚರಿತ್ರೆಯ ಮೈಲಿಗಲ್ಲು ಗಳಾದವು. ಈ ಪೈಕಿ 2 ಚಿತ್ರಗಳಲ್ಲಿ ಲೋಕೇಶ್ ನಟಿಸಿ, ನಿರ್ಮಿಸಿ, ನಿರ್ದೇಶಿಸಿದ ಬ್ಲಾಕ್ ಬಸ್ಟರ್ ಸಿನಿಮ “ಭುಜಂಗಯ್ಯನ ದಶಾವತಾರ’. ಈ ಚಿತ್ರದ ಅಮೋಘ ಅಭಿನಯದ ಮೂಲಕ ಹಣ ಕೀರ್ತಿ ಪ್ರಶಸ್ತಿ ಗಳಿಸಿದ್ದಲ್ಲದೆ ಅಂದಿನಿಂದ “ಗೆಂಡೇತಿಮ್ಮ ಲೋಕೇಶ್” ಎಂದೇ ಪ್ರಸಿದ್ಧರಾದರು.

ಆಲನಹಳ್ಳಿ ಶ್ರೀಕೃಷ್ಣರವರಿಗೆ ವರ್ಷಪೂರ್ತಿ ಪ್ರತಿದಿನವು ಒಂದಿಲ್ಲೊಂದು ಸಾರ್ವಜನಿಕ ಕಾರ್ಯಕ್ರಮ ಇದ್ದೇ ಇರುತ್ತಿತ್ತು. ಕವಿಗೋಷ್ಠಿ, ವಿಚಾರಗೋಷ್ಠಿ ಸೇರಿದಂತೆ ಕೆಲವು ವಿಶೇಷ ಸಂದರ್ಭಗಳಲ್ಲಿ ಉದ್ಘಾಟನೆ ಅಧ್ಯಕ್ಷತೆ ಮುಖ್ಯಅತಿಥಿ, ಮುಖ್ಯಭಾಷಣಕಾರ ಇತ್ಯಾದಿ ಜವಾಬ್ಧಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರಿಂದ ದಿನದ 24 ಗಂಟೆ ಸಾಲುತ್ತಿರಲಿಲ್ಲ! ಕಾರಣಾಂತರದಿಂದ ಬೋಧನೆ ಹುದ್ದೆ ತೊರೆದು ಕೃಷಿ ಉದ್ಯೋಗ್ಯವನ್ನು ಶಾಶ್ವತವಾಗಿ ಆರಿಸಿ ಕೊಂಡು ಆನಂದವಾಗಿದ್ದರೂ ಎಂದಿನಂತೆ ತಮ್ಮ ಸಾಹಿತ್ಯ ಕೃಷಿಯನ್ನೂ ಸಹ ಮುಂದುವರೆಸಿದ್ದರು.

ಆದರೆ ಅನಿರೀಕ್ಷಿತವಾಗಿ ಆಶ್ಚರ್ಯಕರವಾಗಿ ಕ್ರೂರ ಕಾಲನ ಕೆಂಗಣ್ಣಿಗೆ ಬಿದ್ದ ಈ ಮಹಾನ್ ಕವಿ, ಕಥೆ-ಕಾದಂಬರಿಕಾರ ತಮ್ಮ 41ನೇ ವಯಸ್ಸಿಗೆ ದಿ.4.1.1989 ರಂದು ವಿಧಿವಶರಾದರು. ಕನ್ನಡ ಸಾರಸ್ವತಲೋಕಕ್ಕೆ ಭರಿಸಲಾರದ ಕಷ್ಟನಷ್ಟ ಉಂಟಾಯಿತು. ಕೋಟ್ಯಂತರ ಕನ್ನಡಿಗರು ಗಣ್ಯಾತಿಗಣ್ಯರು ಕಂಬನಿಗರೆದರು, ಬಹುಶಃ ಇನ್ನಷ್ಟು ವರ್ಷಗಳ ಕಾಲ ಇವರು ಬದುಕಿದ್ದಿದ್ದರೆ ಕನ್ನಡ ಸಾಹಿತ್ಯಕ್ಕೆ ಮತ್ತೊಂದು ಜ್ಞಾನಪೀಠ ಪ್ರಶಸ್ತಿ ದೊರಕಿಸಿ ಕೊಡುತ್ತಿದ್ದರೇನೋ? ಇಂಥ ಅಪ್ರತಿಮ ಅಸಾಧಾರಣ ಲೇಖಕ ಶ್ರೀಕೃಷ್ಣ ಆಲನಹಳ್ಳಿ ದೈಹಿಕವಾಗಿ ನಮ್ಮೊಡನಿಲ್ಲದಿದ್ದರೂ ಮಾನಸಿಕವಾಗಿ ಆಚಂದ್ರಾರ್ಕ ಅಜರಾಮರ!

ಕೃತಿ ಮತ್ತು ಕರ್ತೃ ಬಗ್ಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ.ಕೆ.ವಿ. ನಾರಾಯಣ ಬರೆಯುತ್ತಾರೆ ಹೀಗೆ…

“ಈ ಕಾದಂಬರಿಯನ್ನು ಮತ್ತೆ ಮತ್ತೆ ಓದಿ ನೋಡಿದರೆ ಇಲ್ಲಿ ನಡುಗನ್ನಡದ ದೇಸೀ ಕಥನ ಕಾವ್ಯಗಳ ಬಂಧ ಅಡಗಿರುವುದು ಕಾಣತೊಡಗುತ್ತದೆ. ನಾಯಕ ಭುಜಂಗಯ್ಯ ಸಾಹಸಿ. ಪರಿಸರದೊಡನೆ ಅವನನ್ನು ಇರಿಸಿ ನೋಡಿದರೆ ಆತ ಎಲ್ಲರಿಂದ ಭಿನ್ನವಾಗಿ ತೋರುತ್ತಾನೆ. ಅವನಿಗೆ ಆರಾಧಕರಿದ್ದಾರೆ ಜೊತೆಗೆ ಅವನ ಏಳಿಗೆಯನ್ನು ಕಂಡು ಕರುಬುವವರೂ ಇದ್ದಾರೆ. ಆದರೆ ಇವರು ಮಾರ್ಗಕಾವ್ಯಗಳಲ್ಲಿರುವಂಥ ಪ್ರತಿನಾಯಕರಂತಲ್ಲ.ನಾಯಕನ ಅಭ್ಯುದಯಕ್ಕೆ ಇವರು ವಿರೋಧಿಗಳಾಗಿದ್ದೂ ನೆರವಾಗುವವರು. ಪಾರ್ವತಿ ರುದ್ರಪ್ಪ ಮಂಜ ಮೊದಲಾದವರು ಇಲ್ಲಿ ಗಮನಕ್ಕೆ ಬರುವ ಪಾತ್ರಗಳು.

ಇವರು ನಾಯಕನ ಎದುರು ಕುಬ್ಜರು. ನಾಯಕನ ಒಳಗಿರುವ ‘ನಾಯಕ’ ನನ್ನು ಬಯಲಿಗಿಡಲು ತಕ್ಕ ಸಂದರ್ಭಗಳನ್ನು ರೂಪಿಸುತ್ತಾರೆ. ದೇಸಿ ಕಥನ ಕಾವ್ಯಗಳಲ್ಲಿ ಇರುವಂತೆ ಇಲ್ಲಿಯು ಕೂಡ ಪಾತ್ರವೆಂಬುದು ವರ್ತನೆಗಳಲ್ಲಿ ತನ್ನ ಸ್ವಭಾವವನ್ನು ಕಂಡು ಕೊಳ್ಳುತ್ತದೆ –ಕೆ.ವಿ.ನಾರಾಯಣ.

‘ಭುಜಂಗಯ್ಯನ ದಶಾವತಾರಗಳು” ಪಕ್ಕಾ ಗ್ರಾಮೀಣ ಸೊಗಡಿನ ಅದ್ಭುತ ಕಾದಂಬರಿ. ಇದರಲ್ಲಿ ಚಿತ್ರಿಸಿರುವ ಹಲವಾರು ಪಾತ್ರಗಳಲ್ಲಿ  ಅತ್ಯಂತ ಪ್ರಮುಖವಾದವು ಮೂರು. ಭುಜಂಗಯ್ಯ ಮತ್ತವನ ಮಡದಿ ಪಾರ್ವತಿ ಹಾಗೂ ಸುಶೀಲ. ಮಣ್ಣಿನ ಮಗನಾದ ಭುಜಂಗಯ್ಯನು ತನ್ನಂತೆ ಕುಲಕಸುಬು ನಂಬಿದ ತನ್ನೂರಿನವರಿಗೆಲ್ಲ ಮಾರ್ಗದರ್ಶಿಯಂತೆ, ರೈತರಿಗೆ ಹಿರಿಯಣ್ಣನಂತೆ ಬದುಕಿರುತ್ತಾನೆ. ಸಾಮಾನ್ಯವಾಗಿ ಎಲ್ಲ ವಿಷಯದಲ್ಲು ಊರಿನ ಶ್ರೇಯೋಭಿಲಾಷಿ ಯಾವಾಗಲೂ ಕೃಷಿ ಕಾಯಕದ ಹಿತಚಿಂತಕ ರಕ್ಷಕ, ಎಂಬೆಲ್ಲ ಅಚಲ ನಂಬಿಕೆ ಗಳಿಸಿದ್ದ.

ಇಡೀ ಹಳ್ಳಿಯ ಪ್ರತಿಯೊಬ್ಬರಿಗು ಇವನು ಹೇಳಿದ್ದೇ ಆಜ್ಞೆ ಮಾಡಿದ್ದೇ ಕಟ್ಟಳೆ ಮಾಡಿಸಿದ್ದೆ ನಂಬಿಕೆ, ಹಾಗಿತ್ತು ಅವನ ನಡೆ ಮತ್ತು ನುಡಿ. ಇದನ್ನು ಸದುಪ(ದುರುಪ)ಯೋಗ ಪಡಿಸಿಕೊಳ್ಳುವ ಅವಕಾಶ ಅಧಿಕಾರ ಇವನಿಗಿತ್ತು. ಬಿಸಿಲು/ಮಳೆ ಹೆಚ್ಚಾದರೂ ಮಳೆ ಬಾರದಿದ್ದರೂ ಇವನೇ ಎಲ್ಲದಕ್ಕೂ ಪರಿಹಾರ ಸೂಚಿಸುತ್ತಿದ್ದನು. ಹೀಗೆ ಹಲವು ವರ್ಷ ಮಳೆರಾಯ ಕೈಕೊಟ್ಟಾಗ ಕ್ಷಾಮದ ಸಮಸ್ಯೆ ಬಗೆಹರಿಸಲು ಮಳೆಗಾಗಿ ‘ಪರ’ ಮಾಡುವುದನ್ನ ಪ್ರಾರಂಭಿಸಿದ. ಕ್ರಮೇಣ ವರ್ಷಕ್ಕೊಮ್ಮೆ ಬದಲು ಮೂರ್ನಾಲ್ಕು ಸಲ ಪರ ಮಾಡಿಸುತ್ತಿದ್ದುಂಟು.

ಇವನನ್ನೂ,  ಪರ ಆಚರಣೆಯನ್ನೂ ಬಹಳವಾಗಿ ನಂಬಿದ್ದ ಊರಿನವರದ್ದು ಮೂಢನಂಬಿಕೆಯೆಂದು ಭುಜಂಗಯ್ಯನಿಗೆ ಚೆನ್ನಾಗಿ ತಿಳಿದಿತ್ತು. ಎಲ್ಲರನ್ನು ಮೂರ್ಖರನ್ನಾಗಿಸುತ್ತಿದ್ದ ಬಗ್ಗೆ ತನ್ನಷ್ಟಕ್ಕೆ ತಾನೇ ಮನದೊಳಗೇ ಮಂಥನ ಮಾಡಿ ಒಮ್ಮೊಮ್ಮೆ ಮುಗುಳ್ನಗೆ ಬೀರುತ್ತ ಮಂಡಿಗೆ ತಿನ್ನುತ್ತ ಸ್ಯಾಡಿಸ್ಟ್ ಅಥವ ಡಿಪ್ಲೋಮಾಟಿಕ್ ಸಂದರ್ಭ ಅನುಭವಿಸುತ್ತ ಒಬ್ಬನೇ ಒಂಟಿಯಾಗಿ ಎಂಜಾಯ್ ಮಾಡುತ್ತಿರುತ್ತಾನೆ.

ಮುಗ್ಧಹೆಂಡತಿ ಪಾರ್ವತಿಯ ಗಂಡನಾದ ಭುಜಂಗಯ್ಯನಿಗೆ ಪಕ್ಕದೂರಿನ ಸುಶೀಲ ಎಂಬ ಹೆಣ್ಣಿನೊಡನೆ ಅಕ್ರಮ ಸಂಬಂಧ ಒಡನಾಟ ಪ್ರಾರಂಭವಾಗುತ್ತದೆ. ವಿಷಯ ತಿಳಿದ ಪಾರ್ವತಿ, ತನ್ನ ಗಂಡನನ್ನಾಗಲೀ ಅಥವ ಸುಶೀಲೆ/ಸವತಿ ಯನ್ನಾಗಲೀ ಕೀಳರಿಮೆಯಿಂದ ಕಂಡು ಯಾರೊಬ್ಬರ ಮನಸ್ಸನ್ನೂ ನೋಯಿಸುವುದಿಲ್ಲ. ಆದರೆ ಈ ವಿಷಯವು ಸುತ್ತಮುತ್ತಲ ಹತ್ತೂರಿಗೆ ಜಗಜ್ಜಾಹೀರಾಗಿ ಭುಜಂಗಯ್ಯನ ಸ್ಥಿತಿಯು “ತಾ ಕಳ್ಳ ಪರರ ನಂಬ” ಎಂಬಂತಾಯಿತು. ಯಾರೇನೇ ಅಂದರೂ ತನಗಲ್ಲ ಎಂಬ ಭಂಡಬಾಳಿಗೆ ಹೊಂದಿಕೊಳ್ಳುತ್ತಾನೆ. ಆದರೂ ತನ್ನ ಮನಸ್ಸಾಕ್ಷಿಗೆ ಮುಖಾಮುಖಿ ಉತ್ತರಿಸದಾಗಿ ಆಗಾಗ್ಗೆ ಸೋಲನ್ನು ಒಪ್ಪಿಕೊಳ್ಳುತ್ತಾನೆ.

ತನ್ನನ್ನು ನಂಬಿದ್ದ ಪಾರ್ವತಿಗಾಗಲೀ, ಸುಶೀಲಳಿಗಾಗಲೀ  ಅಥವ ತನ್ನನ್ನು ಗೌರವಿಸುತ್ತಿದ್ದ ಊರಿನವರಿಗಾಗಲೀ ಪಂಚಾಯ್ತಿ ಕಟ್ಟೆಗಾಗಲೀ ತೃಪ್ತಿಕರವಾಗಿ ಮನವರಿಕೆ ಮಾಡುವಲ್ಲಿ ಯಶಸ್ವಿ ಯಾಗದೇ ವಿಫಲನಾಗುತ್ತಾನೆ. ಹೀಗೆಯೇ ತನ್ನ ಜೀವಮಾನವಿಡೀ ಸಂಧರ್ಭಕ್ಕೆ, ವ್ಯಕ್ತಿಗೆ, ಪರಿಸರಕ್ಕೆ, ತಕ್ಕಂತೆ ಹತ್ತು ಬಗೆಯ ದಶಾವತಾರಗಳಲ್ಲಿ ತನ್ನನ್ನು ತಾನೇ ಹೊಂದಿಸಿಕೊಂಡು ಎಲ್ಲರ ನಂಬಿಕೆ ಉಳಿಸಿಕೊಳ್ಳಲೆತ್ನಿಸುವಾಗ ‘ಸತ್ಯಮೇವ ಜಯತೆ’ ಎಂಬಂತೆ ಒಂದು ಅನಿರೀಕ್ಷಿತ ಕೆಟ್ಟಘಳಿಗೆಯಲ್ಲಿ ತನ್ನ ಬಡಿವಾರವೆಲ್ಲ ಬಯಲಾಗಿ ಸತ್ಯವು ಹೊರಬಂದು ಗೆಲ್ಲುತ್ತದೆ, ಮಿಥ್ಯದ ನಡೆನುಡಿ ಸೋಲುತ್ತದೆ, ಎಂಬುದೇ ಕಾದಂಬರಿಯ ತಾತ್ಪರ್ಯ.

ಕಡೆಗೆ ಸುಶೀಲಳ ಬಳಿ ಮಲಗಿದ್ದ ಭುಜಂಗಯ್ಯ ಮರಣಕ್ಕೆ ಶರಣಾಗುವ ಮುನ್ನ ನಿಷ್ಕ್ರಿಯತೆಯತ್ತ ಸಾಗುತ್ತಿದ್ದ ತನ್ನ ಬಾಯಿಂದ “ಎಲ್ಲಾ ಅವನ ಲೀಲೆ” ಎನ್ನುತ್ತ ಮೃದುವಾಗಿ ತನ್ನವಳ ಮೈತಟ್ಟಿ ಸಂತೈಸುವಾಗ ನೆರೆದಿದ್ದ ಜನರು ನೋಡ ನೋಡುತ್ತಿದ್ದಂತೆ ಅವನ ಕೈಗಳು ಮರಗಟ್ಟಿ ಸುಶೀಲಳ ಮೈಮೇಲಿಂದ ಜಾರಿಬೀಳುತ್ತದೆ. ಸಾವೊಂದನ್ನು ಗೆದ್ದು ಬೀಗಿದ್ದ ಜೀವ ತನಗೆತಾನೇ ಸಾವಿನ ಕ್ರೂರ ದವಡೆಗೆ ಸಿಕ್ಕಿಬೀಳುತ್ತದೆ. ಇವನನ್ನು ಉಳಿಸಿಕೊಳ್ಳಬಲ್ಲ ಪವಾಡಪುರುಷ ಮಾದಳ್ಳಿಯಲ್ಲಿ ಯಾರೂ ಇರಲಿಲ್ಲ.

ಅಷ್ಟುಹೊತ್ತೂ ಬೇನೆಯನ್ನೆಲ್ಲ ತಡೆದುಕೊಂಡು ಉಬ್ಬಸ ಪಡುತ್ತಿದ್ದ ಇಡೀ ಮಾದಳ್ಳಿ ಎಲ್ಲವನ್ನು ಒಮ್ಮೆಲೇ ಕಕ್ಕುವಂತೆ ಗೋಳಾಡಿತು. ಅವಕಾಶ ಸಮಯ ಒದಗಿಬಂದರೂ ತನ್ನನ್ನು ತಾನು ತಿದ್ದಿಕೊಳ್ಳುವ ಬದಲು ತನ್ನದನ್ನೆ ಮುಂದುವರೆಸಹೋಗಿ ಎಲ್ಲರಿಂದ ಥೂ..ಛೀ.. ಎನಿಸಿಕೊಂಡು ಕಡೆಗಣಿಸಲ್ಪಟ್ಟು ದುರಂತದಂತ್ಯ ಕಾಣುತ್ತಾನೆ. ಫಲಿತಾಂಶ ಏನೇಇರಲಿ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವಂತಿದೆ ಕಾದಂಬರಿಯ ಸಾರಾಂಶ.

‘ಭುಜಂಗಯ್ಯನ ದಶಾವತಾರ’ ಸಿನಿಮಾ ನೋಡಿದವರಿಗೂ ನೋಡದಿದ್ದವರಿಗೂ ಆಪ್ಯಾಯಮಾನವಾಗುವಂತೆ ಗ್ರಾಮೀಣ/ಆಡು ಭಾಷೆಯಲ್ಲಿ ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಅರ್ಥಪೂರ್ಣವಾಗಿ ಬರೆದಿದ್ದಾರೆ. ಹಾಡು ಇಂಟರ್ವಲ್ ಜನಜಂಗುಳಿ ಜಾಹೀರಾತು ಇತ್ಯಾದಿ ಮಧ್ಯೆ ಸಿನಿಮ ನೋಡುವುದು ಒಂಥರ ಖುಷಿಯಾದರೆ ನಾಮೆಚ್ಚಿದ ಸಂಗಾತಿಯೊಡನೆ ಅಥವ ಏಕಾಂಗಿಯಾಗಿ ಬೇಕಾದಾಗಲೆಲ್ಲ ಎಷ್ಟು ಸಾರಿಬೇಕಾದರೂ ಯಾವಾಗಲಾದ್ರೂ ಕಾದಂಬರಿ ಓದುವುದೇ ಇನ್ನೊಂಥರ ಮಜಾ. ಈ ಪುಸ್ತಕವನ್ನು ಮತ್ತೆ ಮತ್ತೆ ಓದುವಾಸೆ, 50ಕ್ಕೆ ಒಂದೇ ಕಡಿಮೆ ಇರುವ ನಲವತ್ತೊಂಬತ್ತು ಅಧ್ಯಾಯದಲ್ಲೂ ಹೆಜ್ಜೆಹೆಜ್ಜೆಗೂ ಕುತೂಹಲ ಹುಟ್ಟಿಸುವಂತೆ ಪುಟದಿಂದ ಪುಟಕ್ಕೆ ತಿರುವಿದಾಗೆಲ್ಲ ಓದುಗರ ಆಸೆ ಆಕಾಂಕ್ಷೆ ಚಿಗುರುವಂತೆ ಮಾಡುತ್ತದೆ.

423 ಪುಟಗಳುಳ್ಳ ಈ ಕಾದಂಬರಿಯ ಪ್ರತಿ ಪುಟವೂ ಆಸಕ್ತಿ ಅನುರಾಗ ವೈರಾಗ್ಯ ವಿಷಯಗಳಿಂದ ಕೂಡಿ ರಾರಾಜಿಸುತ್ತಿದೆ. ಪಟ್ಟಣ ಮತ್ತು ಹಳ್ಳಿ ಜೀವನದ ಸಾಮರಸ್ಯ ತೋರಿಸುವಂಥ ಈ ಉತ್ತಮ ಕಾದಂಬರಿಯನ್ನು ಗ್ರಾಮೀಣ-ನಗರ ವಾಸಿಗಳೆಲ್ಲರೂ ಮೆಚ್ಚಿ ಕೊಂಡಾಡುವುದರಲ್ಲಿ ಲವಲೇಶವೂ ಸಂಶಯವಿಲ್ಲ.

– ಕುಮಾರಕವಿ ಬಿ.ಎನ್.ನಟರಾಜ 3.3.1991.

77 “ಅಡ್ವೈಸರ್” ಮಾಸಪತ್ರಿಕೆ ಸಂಪಾದಕರು ಏರ್ಪಡಿಸಿದ್ದ ಸ್ಫರ್ಧಾಕಣ ಕವನ-2012

ಕವಿ: ಸತೀಶ್ ಜವರೇಗೌಡ

ಕವನ:ನಾನು, ಬೆಳಕು ಹಾಗೂ ಬದುಕು

ತೀರ್ಪುಗಾರ: ಕುಮಾರಕವಿ ನಟರಾಜ

ನಾನು, ಬೆಳಕು ಹಾಗೂ ಬದುಕು

ಕಣ್ಣ ಮೇಲೆ

ಕುಳಿತ ಕತ್ತಲು

ರೆಪ್ಪೆ ತೆರೆಯಲು

ಅನುವು ಮಾಡುತ್ತಿಲ್ಲ

ನೋವಿನ ತಾವುಗಳನ್ನು

ನೋಟಗಳು ದಾಟಿ ಬರಲು

ನಿರಂತರ ಪ್ರಯತ್ನಿಸುತ್ತಿವೆ

ಗಾಯದ ಕಣಿವೆಯಲ್ಲೂ

ಒಲವಿನ ಗೀತೆಯು

ಚಿಮ್ಮುತ್ತಿದೆ

ಆಕಾಶದ ನಕ್ಷತ್ರಗಳೇ…

ಕಣ್ಣ ಕೊರೆದು

ಹೃದಯದಾಳಕ್ಕಿಳಿದು

ಬೆಳಕಿನ ಸೆಳಕುಗಳ ತುಂಬಿ

ಬರಡು ನೆಲದ

ಕನಸು ಮುಖದಲ್ಲಿ ಅರಳಿದೆ ಜೀವ

ಬೆಳಕೇ….

ಕೈಹಿಡಿದು ನಡೆಸು

ಮೈಮರೆಯದಂತೆ

ಬದುಕು ಹೊರೆಯಾಗದಂತೆ

ನಡೆಯುವ ದಾರಿ

ತಲುಪುವ ಗುರಿ

ಎಂದೂ ಲಯ ತಪ್ಪದಂತೆ

ಸಾವು ಉಸಿರಿನ

ತೆರಿಗೆ ಕೇಳುವವರೆಗೂ

ಕತ್ತಲೆ ಗರ್ಭದಲ್ಲಿ

ಬೆಳಕಿನ ಬೀಜಗಳು ಕುಡಿಯೊಡೆಯಲಿ

ಅಕಾಲದಲ್ಲಿ ಬಿದ್ದ

ಅನಾಥ ಮಳೆಹನಿಗಳಿಗೆ

ಹೊಳೆಸಾಲಿನ ಒಡನಾಟ ಸಿಗಲಿ

ಜಾತ್ರೆಯಲ್ಲಿ ಕಳೆದುಹೋದ ಮಗುವಿಗೆ

ತನ್ನವ್ವ ಸಿಕ್ಕಂತೆ!

ನಾನು, ಬೆಳಕು ಮತ್ತು ಬದುಕು” ಕವಿತೆಯನ್ನು ವಾಚಿಸಿದ ನಂತರ ಯಾವುದೆ ಸಹೃದಯ ಓದುಗರಿಗೆ ಕವನದ ಶೀರ್ಷಿಕೆಯು ಅರ್ಥಪೂರ್ಣವಾಗಿದೆ ಎನಿಸುತ್ತದೆ. ನನ್ನ ಸುಧೀರ್ಘ 38 ವರ್ಷದ ಕಾವ್ಯ ಲೋಕದಲ್ಲಿ ಹುದುಗಿದ್ದ ಸಹೃದಯ ವಿಮರ್ಶಕನ ಹಾದಿಯಲ್ಲಿ ನನ್ನದೆ ಆದ ಸ್ಪಷ್ಟ ನಿಲುವಿದೆ ಸತ್ಯ ನಿಷ್ಠುರವೂ ಇದೆ? 1975ರಿಂದಲೂ “ಬರೆದವರಾರು ಎಂಬುದಕ್ಕಿಂತ ಬರೆದಿರುವುದೇನು?”ಎಂಬ ನನ್ನ ನಿಲುವಿಗೆ ನಾನೂ ಬದ್ಧ. ದಾಕ್ಷಿಣ್ಯಕ್ಕೆ ಬಸಿರಾಗುವುದಿಲ್ಲ. ನನ್ನ ನೇರ ದಿಟ್ಟ ನಿರಂತರ ಸ್ವಭಾವ ಕೆಲವರಿಗೆ ಇಷ್ಟ ಆಗುವುದಿಲ್ಲ. ಆದರೂ ರಾಜೀ  ಆಗುವ ಪ್ರಯತ್ನ ನನ್ನಲ್ಲಿಲ್ಲ. ಅಸಲಿಯತ್ತಿಗೆ ಗಟ್ಟಿತನಕ್ಕೆ ಮಾತ್ರ ‘ಜೈ’ಎನ್ನುವ ಹುಟ್ಟುಬುದ್ಧಿ ನನ್ನದು.

ಹಿರಿಯ ಕಿರಿಯ ಸಹೋದ್ಯೋಗಿ,ಮಿತ್ರ,ಬಂಧುಬಳಗದವರಿಂದ ನನ್ನ ವಿರುದ್ಧ ಇ[ಬ]ರುವುದು ಇದೊಂದೇ ಕಂಪ್ಲೇಂಟ್?!  ಯಾರೇನೆ ಹೇ[ಕೇ]ಳಲಿ, ತಿಳಿದುಕೊಂಡಿರಲಿ ನಾನುಮಾತ್ರ ಪ್ರತಿಭೆಗೆ ಮನ್ನಣೆ ನೀಡುತ್ತೇನೆ. ಪ್ರಸ್ತುತ ವಿಮರ್ಶೆಯಲ್ಲು ಇದೇತತ್ವ ಅನುಸರಿಸಿದ್ದೇನೆ. ಯಾವುದೆ ಕಾವ್ಯ-ಕವಿಬಗ್ಗೆ ಮುಲಾಜಿಲ್ಲದೆ ವಿಮರ್ಶೆ ಮಾಡಿದ್ದೇವೆಂದು ತಮ್ಮಬೆನ್ನು ತಾವೆ ತಟ್ಟಿಕೊಳ್ಳುವವರ ಸಾಲಿಗೆ ನಾನು ಸೇರುವುದಿಲ್ಲ. ಬದಲಿಗೆ ಸ್ವಲ್ಪ ಸ್ಫೂರ್ತಿ ಒಂದಷ್ಟು ಚೇತನ ತುಂಬುವುದು ಲೇಸು. ಈ ನನ್ನ ಅಚಲ ನಂಬಿಕೆ, ನಿಲುವಿನ ಅಭಿಪ್ರಾಯವನ್ನಿಲ್ಲಿ ವ್ಯಕ್ತಪಡಿಸಿದ್ದೇನಷ್ಟೆ:

ಈ ಕವನದ[ಕವಿಯ] ಪ್ರಕಾರ ‘ನಾನು’ ಎಂಬುದು ಅಹಂ/ಸ್ವಾರ್ಥ ಎಂತಲೂ ‘ಬೆಳಕು’ಎಂಬುದು ಜ್ಞಾನ/ಚಿತ್ತ ಎಂತಲೂ ಹಾಗೂ ‘ಬದುಕು’ಎಂದರೆ ಜೀವನ/ಸಾರ್ಥಕತೆ ಎಂತಲೂ ಇರಬಹುದು?  ಇವುಗಳನ್ನು ಓದುಗರಿಗೆ ಮನವರಿಕೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂಬುದಿಲ್ಲಿ ಗಮನಾರ್ಹಅಂಶ. ಸತೀಶ್ ಬೆಳೆಯಬೇಕಾದ/ಬೆಳೆಯುತ್ತಿರುವ ಕವಿ ಎಂದು ಮಾತ್ರ ತಿಳಿಸಬಯಸದೆ ಮುಂದಿನ ದಿವಸಗಳಲ್ಲಿ ಇವರಿಂದ ಸತ್ವದ, ಪ್ರಭುತ್ವದ ಕವಿತೆಗಳನ್ನು ಖಂಡಿತ ನಿರೀಕ್ಷಿಸಬಹುದು. ಈ ಬಗ್ಗೆ ನಾನು ಭರವಸೆ ನೀಡುತ್ತೇನೆ.

ಸಧ್ಯದ ಕವಿತಾರಾಶಿಯಲ್ಲಿ ಜಳ್ಳು ಕಡಿಮೆಇದ್ದು ಗಟ್ಟಿಕಾಳು ಹೆಚ್ಚಾಗಿದೆ. ಕವನದಲ್ಲಿ  ಬಾಲ್ಯದ ಎಳೆತನ, ಯೌವ್ವನ ಶೃಂಗಾರದ ಲೇಪನ, ಸವಿಗನ್ನಡ ಪದಗಳ ಜೋಡಣೆ ಹೆಚ್ಚು ಆಕರ್ಷಿಸುತ್ತದೆ. ಕೆಲವೆಡೆ ಅಧಿಕ ಬಿರುಸುತನ, ವೃದ್ಧಾಪ್ಯದ ವೈರಾಗ್ಯತನ ತುಂಬಿ ತುಳುಕುತ್ತದೆ.

“ಎಳಸು-ಪಡ್ಡೆ-ಮುದಿ” ಈಮೂರೂ ಹಂತದ ಸುತ್ತ ಹೆಣೆದ ಮಾನವನ ಕಿರುಗತೆ/ಕಥನಕವನ. ಇಲ್ಲಿನ ಪದಗಳು ಕಬ್ಬಿಣದ ಕಡಲೆ ಅಂತಿಲ್ಲದೆ ಶ್ರೀಸಾಮಾನ್ಯನಿಗೂ ಅರ್ಥ ಆಗುವಂತೆ ಬರೆದಿರುವುದು ಕವಿಯ ಪ್ಲಸ್ ಪಾಯಿಂಟ್ ಸಕಾರಾತ್ಮಕ ತಾಕತ್ ಹಾಗಾಗಿ ನನ್ನಿಂದ ಪ್ರೋತ್ಸಾಹದ ಹೆಗ್ಗಳಿಕೆ ಈ ತರುಣ ಕವಿಯ ಮನಕೆ. ಉದಾ:“ಎಂದೂ ಲಯ ತಪ್ಪದಂತೆ ಸಾವು ಉಸಿರಿನ ತೆರಿಗೆ ಕೇಳುವವರೆಗೂ” ಸಾಲುಗಳಲ್ಲಿ “ಕೇವಲ ಟ್ಯಾಕ್ಸ್” ಬಗ್ಗೆ ವ್ಯಂಗ್ಯವಲ್ಲದ ಕಾಳಜಿಇದೆ. ಇನ್ನು “ಕತ್ತಲೆ ಗರ್ಭದಲ್ಲಿ,,,”ಎಂಬ ಸಾಲುಗಳಲ್ಲಿ ನಾವುನೀವು ಆಗಾಗ್ಗೆ ಮರೆತು ಹೋಗು[ತ್ತಿರು]ವ ಶೋಚನೀಯ ವಾಸ್ತವತೆ, ರಕ್ತಗತ ಆ(ನಿರಾ)ಶಾ ಭಾವನೆಯನ್ನು ಪುನರ್ ನೆನಪಿಸುವಂತೆ ಚಿತ್ರಿಸಿರುವುದು ಶ್ಲಾಘನೀಯ.

ನನ್ನದೊಂದು ನಿತ್ಯಸತ್ಯ ಸಲಹೆ:

ಒಂದು ಕವಿತೆಯನ್ನು ಏಳು  ವಿಂಗಡಣೆ ಮಾಡಿ ಬರೆದಿದ್ದಾರೆ. 32 ಸಾಲುಗಳು ಬೇಕಾಗಿರಲಿಲ್ಲವೇನೋ?! ಪ್ರಪಂಚದ ಯಾವುದೆ ಭಾಷಾ ಸಾಹಿತ್ಯದ ಪದ್ಯಪ್ರಾಕಾರ ವಿಭಾಗದಲ್ಲಿ ಸಾಧ್ಯವಾದಷ್ಟು ಅನ್-ಇಂಟರ್ರಪ್ಟೆಡ್ ಕಂಟಿನ್ಯುಟಿ ಸಾಲುಗಳಿದ್ದಾಗ ಮಾತ್ರ ಓದುಗನಿಗೂ ವಿಮರ್ಶಕನಿಗೂ ಆಪ್ಯಾಯಮಾನ ಎನಿಸುತ್ತದೆ. ಸಾಹಿತ್ಯಕವಾಗಿ ಅಳವಡಿಸಿ ಕೊಳ್ಳಲು ಚೆಂದ ಇರುತ್ತದೆ, ಮಾತ್ರವಲ್ಲ ಬಹಳಷ್ಟು ಸಾಹಿತ್ಯಾಸಕ್ತರಿಗೆ ಬಲು ಇಷ್ಟವಾಗಿ, ಖುಷಿಯನ್ನೂ ಕೊಡುತ್ತದೆ!

ನನ್ನ ಅವಲೋಕನದ ಕಟ್ಟಕಡೆಯ ನಿರ್ಧಾರ: ಸಮಾಜಮುಖಿ ದೃಷ್ಟಿಯಲ್ಲಿ ಇಡೀ ಕವನ ಓ.ಕೆ.? ಭವಿಷ್ಯದಲ್ಲಿ ದೊಡ್ಡದಾಗಿ ಮಿನುಗುವ ಯೋಗ್ಯತೆಯುಳ್ಳ ಪ್ರತಿಭಾವಂತ ಕವಿ ಸತೀಶ್ ಜವರೇಗೌಡರಿಗೆ ಕನ್ನಡ ಸರಸ್ವತಿಯ ಕೃಪಾಕಟಾಕ್ಷವು ಸದಾ ಇರಲೆಂದು ಹಾರೈಸುತ್ತೇನೆ. ಅಡ್ವೈಸರ್  ಮಾಸಪತ್ರಿಕೆ ಬಳಗಕ್ಕೆ ಸ್ಪಂದಿಸಿ ಪ್ರಸ್ತುತ ಕವಿತೆಯ ಬಗ್ಗೆ ನನ್ನ ಪ್ರಾಮಾಣಿಕ ಅನಿಸಿಕೆಯ ಕೆಲವು ಸಾಲುಗಳನ್ನು ನಿಷ್ಪಕ್ಷಪಾತದಿಂದ ಬರೆದಿದ್ದೇನೆಂಬ ಸಮಾಧಾನದಿಂದ ವಿರಮಿಸುತ್ತಿದ್ದೇನೆ.

-ಕುಮಾರಕವಿ ಬಿ.ಎನ್.ನಟರಾಜ್ , ಮೈಸೂರು, 15.6.2012

78:ಕೃತಿ: ಚಂದ್ರಬಿಂಬ

ಲೇಖಕ: ಎಂ.ಆರ್.ನಾಗರಾಜರಾವ್ ಮಕ್ಕಳ ಕಥಾಪುಸ್ತಕ

ಕುಮಾರಕವಿ ಬಿ.ಎನ್.ನಟರಾಜ ರವರ

ಮುನ್ನುಡಿ

ಶ್ರೀವಿದ್ಯಾಗಣಪತಿಯ ಕೃಪಾಕಟಾಕ್ಷದಿಂದ ಇವತ್ತಿಗೆ ಸರಸ್ವತಿ ಸೇವಾವಧಿಯ ನನ್ನ 40 ವರ್ಷ ಜೀವನದ ಜತೆಗೆ 58 ಯುಗಾದಿ ಸಂವತ್ಸರದ ಕಹಿ-ಸಿಹಿಯನ್ನೂ ಕಂಡುಂಡಿರುವೆ. ಪ್ರಸ್ತುತ 78 ದೀಪಾವಳಿ ಕಂಡ ಹಿರಿಯ ಸಾಹಿತಿ ಎಂ.ಆರ್. ನಾಗರಾಜರಾವ್ ಬರೆದ “ಚಂದ್ರಬಿಂಬ” ಎಂಬ ಮಕ್ಕಳ ಪುಸ್ತಕದ ಕಡೆಗೆ ಒಂದು ಇಣುಕುನೋಟ ಬೀರುತ್ತ ಮುನ್ನುಡಿ ಬರೆವ ಕಾಯಕ ದೊರಕಿದ್ದು ನನ್ನ ಸೌಭಾಗ್ಯ. ಇಂಥ ಸದವಕಾಶ ದೊರಕಿಸಿಕೊಟ್ಟ”ಅನನ್ಯ” ಮಾಸಪತ್ರಿಕೆಯ ಸಂಪಾದಕ ಎಂ.ವಿ. ತ್ಯಾಗರಾಜರಿಗೆ ವಂದನೆ. “ಖಂಡಿತವಾದಿ ಲೋಕವಿರೋಧಿ” ನಾಣ್ಣುಡಿಯಂತೆ ಒಬ್ಬರ ಅನಿಸಿಕೆ, ಅಭಿಪ್ರಾಯವನ್ನು ಮತ್ತೊಬ್ಬರು ಅಲ್ಲಗಳೆಯುವಂತಿಲ್ಲ! ಸಹೃದಯತೆ ವಿಷಯದಲ್ಲಿ ನಾನೂಸಹ ಶ್ರೀಮಂತ ಎಂದು ಘಂಟಾಘೋಷವಾಗಿ ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ!

ನಾಗರಾಜರಾವ್‍ರವರು ಎಳೆಯ ಮನಸ್ಸನ್ನು ಕೇಂದ್ರಬಿಂದು ಆಗಿಸಿ ರಚಿಸಿರುವ ಮಕ್ಕಳ ಕಥಾ ಸಂಕಲನ “ಚಂದ್ರಬಿಂಬ”ದ ಮೇಲೆ ಕಣ್ಣಾಡಿಸುತ್ತಿದ್ದಂತೆ ಸದಭಿರುಚಿಯ ಸಾರಾಂಶ ಕಂಡುಬಂತು. ಕೆಲವು ಕತೆಗಳಲ್ಲಿ ಸಾಮಾಜಿಕ ಕಳಕಳಿ ಜತೆಗೆ ಸಾಂಸಾರಿಕ ತಿಳುವಳಿಕೆಯೂ ಇದೆ. ವರ್ತಮಾನ ಕಾಲದ ಸಾಹಿತ್ಯಗಳಲ್ಲಿ ಚಲಾವಣೆಯಲ್ಲಿರುವ “ಪ್ರೇಮ-ಕಾಮ” ವಿಷಯಕ್ಕೆ ಹೆಚ್ಚಿನ ಒತ್ತು ಕೊಟ್ಟಿಲ್ಲದಿರುವುದು ಇಲ್ಲಿನ ಬಹುತೇಕ ಕತೆಗಳಲ್ಲಿ ಕಾಣಿಸುತ್ತದೆ.

ಹಲವು ಕಥೆಗಳ ನಿರೂಪಣೆಯು ಮನ ಮುಟ್ಟುವಂಥ ತನು ತಟ್ಟುವಂಥ ಪದಗಳ ಲೇಪನದ ಮೂಲಕ ಅಣಿಗೊಳಿಸಿ ನೀತಿ ಬೋಧನೆಯ ತಿರುಳನ್ನು ಒತ್ತಿ ಹೇಳಿದ್ದಾರೆ. ಕೆಲವು ಕತೆಗಳು ಮೆಲುಕು ಹಾಕುವಂತಿದೆ. ನಾನಂತೂ “ಬರೆದವರು ಯಾರು”ಎಂಬುವ ಬದಲು “ಬರೆದಿರುವುದು ಏನು” ಎಂಬುದಕ್ಕೆ ಪ್ರಾಶಸ್ತ್ಯ ನೀಡುತ್ತೇನೆ. ಹೀಗಾಗಿ, ಪ್ರಸ್ತುತ ಕಥಾಗೊಂಚಲಲ್ಲಿ ಇರುವ ಗಟ್ಟಿ ಮತ್ತು ಜಳ್ಳು ಬಗ್ಗೆ ಮಾತ್ರ ಕೆಲವು ಸೌಮ್ಯ ಅಭಿಪ್ರಾಯ ಮತ್ತು ಸೂಕ್ತ ಸಲಹೆ ಸೂಚಿಸಿದ್ದೇನಷ್ಟೆ!

ಆದಾಗ್ಯೂ ಇಂಥ ಸದೃಢ ಲೇಖಕರ ಪರಿಕಲ್ಪನೆಯ ಪ್ರಯತ್ನವನ್ನು ಮನಸಾರೆ ಮೆಚ್ಚಿಕೊಂಡಿದ್ದೇನೆ. ಶ್ರೀಯುತರ ಪ್ರಾಮಾಣಿಕ ಪ್ರಯತ್ನದಲ್ಲಿ ಅಡಗಿರುವ ಭಾಷಾ ಸೌಂದರ್ಯದ ಜತೆಗೆ ಕನ್ನಡ ದೇಶದ ಸಂಸ್ಕೃತಿಯ ಕಟ್ಟುಪಾಡು ಇತಿಹಾಸ ಪುರಾಣ ಅಡಗೂಲಜ್ಜಿಯ ಕಲ್ಪನೆ ಸಾಮಾಜಿಕ ನಡವಳಿಕೆ ಜಾನಪದ ಸೊಗಡು ಇದೆಲ್ಲದರ ಬಗ್ಗೆ ಓರ್ವ ಜವಾಬ್ಧಾರಿಯುತ ಲೇಖಕನಿಗೆ ಇರಬೇಕಾದ ಸ್ವಂತಿಕೆಯ ಬದ್ಧತೆಯನ್ನು ತೋರ್ಪಡಿಸುತ್ತದೆ.

ಇಂಥ ತೀವ್ರತೆಗಳನ್ನು ಮಿಲನಗೊಳಿಸಿ ಬರೆದ ‘ಚಂದ್ರಬಿಂಬ’ ಕೃತಿಯೊಳಗೆ ಪಾತಾಳಗರಡಿ ಬಿಟ್ಟಾಗ ಮಕ್ಕಳ ಪ್ರಪಂಚದ ಬಗ್ಗೆ ಲೇಖಕನಿಗಿರುವ ಅಪರಿಮಿತ ಜ್ಞಾನ, ಅನನ್ಯ ಕಾಳಜಿ ಪ್ರತಿಬಿಂಬಿಸುತ್ತದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ವಿವಿಧ ಪ್ರಾಕಾರಗಳ ಸಾಹಿತ್ಯ ಸಂಪುಟಗಳು ವಿಶೇಷವಾಗಿ ಪರಿಣಿತರಾಗಿರುವ ಮಕ್ಕಳ ಸಾಹಿತ್ಯದಲ್ಲಿ ಹೆಚ್ಚೆಚ್ಚು ಕಥಾ ಸಂಕಲನ ಹೊರ ಬರಲಿ ಆ ಮೂಲಕ ಉತ್ತಮ ಸಾಹಿತಿಗಳ ಗುಂಪಿಗೆ ನಾಗರಾಜರಾಯರೂ ಸೇರುವಂತಾಗಲೆಂದು ಅಂತರಾಳದಿಂದ ಹಾರೈಸುತ್ತೇನೆ.

ಯಾರೇನೇ ಹೇಳಲಿ, ಹೇಗಾದರೂ ಟೀಕೆ ಟಿಪ್ಪಣಿ ಬರೆಯಲಿ ಒಂದಂಶವಂತು ನಿತ್ಯಸತ್ಯ, ಅದೇನೆಂದರೆ: ಒಬ್ಬ ಬರಹಗಾರನಿಗೆ ಮತ್ತೊಬ್ಬ ಬರಹಗಾರನು ಸ್ಫೂರ್ತಿಯ ಸೆಲೆಯಾಗಿ ಬೆನ್ನು ತಟ್ಟುವಂತೆ ಇರಬೇಕು ಹಾಗೂ ಓರ್ವ ಪ್ರಕಾಶಕನಿಗೆ ತಾನು ಹಾಕಿದ ಬಂಡವಾಳ ಹಿಂದಕ್ಕೆ ಬರುವಂಥ ರೀತಿಯಲ್ಲಿ ಸಕಾರಾತ್ಮಕವಾಗಿ ಓದುಗರಿಂದ, ವಿಮರ್ಶಕರಿಂದ ಪ್ರಾಮಾಣಿಕ ಪ್ರೋತ್ಸಾಹ, ಬೆಂಬಲ ಸಿಗಬೇಕು ಎಂಬುದು ಸಹೃದಯ ಓದುಗರ ಹಾಗೂ ವಿಮರ್ಶಕರ ಒಕ್ಕೊರಲಿನ ಅಭಿಮತ?!

ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತಿಗಳ, ಪ್ರಕಾಶಕರ ಪುಸ್ತಕಗಳನ್ನು ಸಾಹಿತ್ಯಾಸಕ್ತರು ಮಾತ್ರವಲ್ಲದೆ ಕನ್ನಡ ಓದುವಂತಹ ಪ್ರತಿಯೊಬ್ಬ ಶ್ರೀಸಾಮಾನ್ಯ ಕೊಂಡು ಓದುವ ಅಭಿರುಚಿಯನ್ನು ಕಡ್ಡಾಯವಾಗಿ ಬೆಳೆಸಿಕೊಳ್ಳಬೇಕು. ತಾನೊಬ್ಬ ಸಾಹಿತ್ಯಾಭಿಮಾನಿ ಆಗಬೇಕೆಂದು ಪ್ರತಿಜ್ಞೆ ಮಾಡಿಕೊಳ್ಳಬೇಕು! ಆಗಮಾತ್ರ ಲೇಖಕರಿಗೆ ಸ್ಫೂರ್ತಿ ಸಿಗುತ್ತದೆ, ಪ್ರಕಾಶಕರಿಗೆ ಹಣ ದೊರಕುತ್ತದೆ. ಅಂತೆಯೆ ಇವರಿಬ್ಬರ ಶ್ರಮ, ಜೀವನ ಸಾರ್ಥಕವಾಗುತ್ತದೆ. ತತ್ಪರಿಣಾಮ ಕನ್ನಡದ, ಕನ್ನಡಿಗರ ಸ್ಥಾನಮಾನವು ಗಣನೀಯವಾಗಿ ಉನ್ನತಮಟ್ಟಕ್ಕೆ ಏರುತ್ತದೆ.

ಈಗ ಕಥಾಸಂಕಲನದೊಳಗೆ ಕಣ್ಣಾಡಿಸೋಣ ಬನ್ನಿ:

ಮೊದಲನೆಯದಾಗಿ; ಅಲಕಾಪುರಿ ಮಹಾರಾಜನ ಕಥೆಯು ಕಾಡುಮನುಷ್ಯನ ಮೂಲಕ ‘ಮನ:ಶಾಂತಿ’ ಯಿಂದ ಜೀವನದ ಎಲ್ಲವೂ ದೊರಕುತ್ತದೆ’ ಎಂಬ ತತ್ವವನ್ನು ಎಳೆಯರಿಗೆ ತಿಳಿಹೇಳುತ್ತದೆ. 2ನೇ ಕತೆ; ತಾನು ಸಂಕಷ್ಟದಲ್ಲಿದ್ದಾಗ ಪಾರುಮಾಡಿದ ವೃದ್ಧ ದಂಪತಿಗಳಿಗೆ ‘ಋಣ’ ತೀರಿಸಲು ತನ್ನನ್ನೇ ಆಹಾರವನ್ನಾಗಿಸಿಕೊಟ್ಟು ಅಮರವಾದ ಒಂದು ಮೊಲದ ಬಲಿದಾನವನ್ನು ಪ್ರಧಾನವಾಗಿ ಬಿಂಬಿಸಿದರೆ, 3ನೇ ಕುರಿ-ಮೇಕೆ ಕತೆಯಲ್ಲಿ ಸ್ನೇಹ ಬೆಳೆಸಿದರೆ ಒಳ್ಳೆಯ ಪ್ರತಿಫಲ ಸಿಗುತ್ತದೆ ಎಂಬ ಜಾಣ್ಣುಡಿಯಿದೆ.

ಕತೆ ನಂಬರ್-4ರಲ್ಲಿ ಶಾಲಾ ಬಾಲಕಿ ‘ಅಂಬಿಕ’ ಮರ ಗಿಡ ಕಾಪಾಡುವ ಪರಿಸರ ಪ್ರೇಮವನ್ನು ಪಸರಿಸಿದರೆ 5ನೇ ಕತೆಯಲ್ಲಿ; ಯುವಕರು ತಮ್ಮ ಗುರಿಮುಟ್ಟಲು ‘ಏಕಾಗ್ರತೆ’ ಬೇಕೇಬೇಕು ಎಂಬ ಮಾರ್ಗದರ್ಶನ ಮಾಡಿ ಸುತ್ತದೆ. 6ನೆದು; ರಂಗ-ಸಿಂಗ ಪಾತ್ರಧಾರಿಗಳ ಹಾಸ್ಯಮಯ ಕತೆಯಲ್ಲಿ ‘ಪ್ರಾಮಾಣಿಕತೆ’ ಬಗ್ಗೆ ಚಿಣ್ಣರಿಗೆ ಮನಮುಟ್ಟುವಂತೆ ಇದೆ.

7ನೇ ಕಥೆಯು ನಾಗಜ್ಜಿಯ ‘ಧರ್ಮಸೂತ್ರ’ ದ್ದಾದರೆ, 8ನೇದು ‘ಪಕ್ಷಿಶಾಸ್ತ್ರಜ್ಞ’ ತಿಮ್ಮನ ತರಲೆಯಲ್ಲದ ಕತೆಯಾಗಿದೆ. “ಬುದ್ಧಿವಂತಿಕೆ, ಬುದ್ಧಿವಂತ, ಅತಿಬುದ್ಧಿವಂತ, ಚಿಕ್ಕಯ್ಯನ (ಧೋಬಿ) ಬುದ್ಧಿವಂತಿಕೆ, ಹುಡುಗನ ಬುದ್ಧಿವಂತಿಕೆ ಹಾಗೂ ಮೇಕೆಮರಿ ಬುದ್ಧಿವಂತಿಕೆ” ಎಂಬ ಕಥಾ ಶೀರ್ಷಿಕೆಗಳಲ್ಲಿ ಅಲ್ಪಸ್ವಲ್ಪ ಏಕಸ್ವಾಮ್ಯವಿದ್ದಂತೆ ಕಂಡರೂ ಒಳ ಹೂರಣದಲ್ಲಿ ಒಂದಕ್ಕೊಂದು ತುಸು ವ್ಯತ್ಯಾಸ ಕಂಡುಬರುತ್ತೆ. ಓದುಗನಿಗೆ ಬೇಸರ ಆಗದಂತೆ ನೋಡಿಕೊಳ್ಳುತ್ತ ‘ಕುರುಡರ ಲೆಕ್ಕ’ ಕಥೆ ಮೊಗಲ್‍ಚಕ್ರವರ್ತಿ ಅಕ್ಬರ್ ಆಸ್ಥಾನದ ಹಾಸ್ಯ ಸಂದರ್ಭ ಒಂದನ್ನು ನೆನಪಿಗೆ ತರಿಸುತ್ತದೆ. ಮಿಕ್ಕ ಕತೆಗಳಾದ ಕಷ್ಟಗಳರಾಶಿ, ಗುರುಬೋಧನೆ, ಫಲಿತಾಂಶ, ಕೆಟ್ಟಮೇಲೆ ಬುದ್ಧಿಬಂತು, ಅತಿಆಸೆಗತಿಕೇಡು; ಎಲ್ಲವೂ ಹೊಸ ಹುರುಪು ನೀಡುತ್ತವೆ.

‘ಆನಂದ’ ಕಥೆಯಲ್ಲಿ ‘ಕೋಗಿಲೆ ಮತ್ತು ನವಿಲು’ ಪಕ್ಷಿಗಳ ಪಾತ್ರ ಸೃಷ್ಟಿಸಿ, ನಂತರ ಅದೇ ಪಕ್ಷಿಗಳಿಂದ ಗುಣಗಾನ ಮಾಡಿಸಿದ್ದಾರೆ. ಕಾಡಿನ ಸುಂದರ ವರ್ಣನೆ ಮನೋಜ್ಞವಾಗಿದೆ. ‘ಶ್ರದ್ಧೆ’ ಕತೆಯಲ್ಲಿ ರಾಜ ಮಹಾರಾಜ ಕಾಲದ ಗೌಡಿಕೆಯ ಗಮ್ಮತ್ತು ಜೀವ ಜೀವನಗಳ ಜಗತ್ತು ಕಂದಾಯ ಬೇಸಾಯ ವ್ಯವಹಾರ ವ್ಯಾಪಾರ ಮುಂತಾದ ಗ್ರಾಮೀಣ ಜೀವನದ ಚಿತ್ರಣ ಸೊಗಸಾಗಿದೆ.  “ಅರಮನೆ ವಿಗ್ರಹಗಳ ಕಳುವು” ಕಥೆಯು ಮಹಾರಾಜ ನಂದಿಕೇಶ ಶರ್ಮರ ಕಾಲದ ಒಂದುಘಟನೆ ಆಧರಿಸಿದ ತುಣುಕು. ಇದರಲ್ಲಿ ಸಾಮಾಜಿಕ ಕಳಕಳಿಯುಳ್ಳ ಪ್ರಜ್ಞೆಯು ಮಕ್ಕಳು ಮತ್ತು ಪೋಷಕರ ನಡುವೆ ಮರುಕಳಿಸುವಂತೆ ಮನದಟ್ಟು ಮಾಡಿಕೊಡುತ್ತದೆ.

‘ಗಿಡವಾಗಿ ಬಗ್ಗದು ಮರವಾಗಿ ಬಗ್ಗೀತೆ?’ ಅಥವಾ ಸುಳ್ಳು, ಕಳ್ಳತನ, ಮೋಸ ಇತ್ಯಾದಿ ಸಮಾಜ ಕಂಟಕ ಗುಣವುಳ್ಳ ಪ್ರಜೆಯು ಆಗಬಾರದು ಎಂಬ ತಿಳುವಳಿಕೆಯನ್ನು ಮನವರಿಕೆ ಆಗುವಂತೆ ಇವತ್ತಿನ ಮರಿಪ್ರಜೆ ಚಿಣ್ಣರಿಗೆ ಅಚ್ಚುಕಟ್ಟಾಗಿ ಬೋಧಿಸಿದ್ದಾರೆ. ‘ಅಂಬಿಕ’ ಕತೆಯಲ್ಲಿ ಬರುವ ಬಾಲಕಿಯನ್ನು ‘ಪರಿಸರಪ್ರೇಮಿ ಗೋಪಾಲ’ ಕಥೆಯಲ್ಲಿ ಮತ್ತೊಮ್ಮೆ ನೆನಪಿಸಿದ್ದಾರೆ? ಆದರೆ ಸ್ತ್ರೀಲಿಂಗ ಪುಲ್ಲಿಂಗ ಸಮಾನತೆಗೆ ಪ್ರಾಧಾನ್ಯತೆ ನೀಡಿರುವುದು ನಿರುಮ್ಮಳ ನೀಡುತ್ತದೆ.

‘ಊಹೆಗೂ ಸಿಗದ ಲಾಭ’ ಕಥೆಯಲ್ಲಿ ಕಾಡಿನ ರಾಜ ಸಿಂಹಕ್ಕೂ ಕರಡಿಗೂ ನಡುವಣ ನಡೆಯುವ ವಾಗ್ಯುದ್ಧ, ಪ್ರತಿಜ್ಞೆ, ಸವಾಲ್, ತಾಕತ್ ಇತ್ಯಾದಿಗಳ ಪ್ರದರ್ಶನ ಮತ್ತು ಮುಕ್ತಾಯದ ವಿವರಣೆ ಜೊತೆಗೆ ಕಥಾ ಸಾರಾಂಶವನ್ನು ಅದ್ಭುತವಾಗಿ ಬಣ್ಣಿಸಲಾಗಿದೆ. ‘ಅವಕಾಶದ ಉಪಯೋಗ’ ಕತೆಯಲ್ಲಿ ಬೆಕ್ಕು ಮತ್ತು ನಾಯಿಗಳ ನಡುವಣ ಕದನ, ಸ್ವಪ್ರತಿಷ್ಟೆ, ಕರ್ತವ್ಯ, ಕಿತಾಪತಿಗಳ ನಂತರ ಒಂದಾಗಿ ಬಾಳುವ ರಾಜೀಸೂತ್ರದ ಬಗ್ಗೆ ಎಳೆಎಳೆಯಾಗಿ ಹುಳಿಮಾವಿನಂತೆ ಎಳೆಯರಿಗೆ ತಿಳಿ ಹೇಳುತ್ತದೆ. ‘ನೆರೆ-ಹೊರೆ’ ಕತೆಯು ಸಕ್ಕರೆ ಪಾಕದಂತಿದ್ದು ಸೋಮಣ್ಣ-ಭೀಮಣ್ಣ ಎಂಬುವರ ನಡೆನುಡಿ, ಕಾಯಕ ಬಾವಣಿಕೆ, ಆಪತ್ಕಾಲದ ಸಹಾಯಹಸ್ತ, ಇತ್ಯಾದಿಗಳನ್ನು ಹೇಳುತ್ತ ಎಂದೆಂದೂ ಮನೆಯ ಅಥವ ನೌಕರಿಯಲ್ಲಿರುವ ಅಕ್ಕಪಕ್ಕದವರನ್ನು, ನೆರೆಹೊರೆಯವರನ್ನು ಪರಸ್ಪರ ಪ್ರೀತಿ ಗೌರವಗಳಿಂದ ಕಾಣಬೇಕು ಎಂಬುದನ್ನು ಸೂಚ್ಯವಾಗಿ ಎಚ್ಚರಿಸುವಂತಿದೆ.

‘ಹೇಳಿಕೆ ಮಾತುಗಳು’ ಕತೆಯಲ್ಲಿ ಗಾಡಿ ಗಂಗಣ್ಣನು ತನಗಿದ್ದ ಎತ್ತಿನ ಜೊತೆಗೆ ಕುದುರೆಯನ್ನೂ ಕೊಂಡು ಒಟ್ಟಿಗೆ ಸಾಕುವಾಗ ಅವನು ಎದುರಿಸಿದ ಕಷ್ಟ-ಸುಖ, ನೋವು-ನಲಿವು ಅಥವಾ ಲಾಭ-ನಷ್ಟಗಳ ಸವಿವರಣೆಯು ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ‘ಥಳುಕು ಬಳುಕಿಗೆ ಮೋಸ ಹೋಗಬಾರದು’ ಕತೆಯಲ್ಲಿ ರಣಹದ್ದು ಮತ್ತು ನಾಗರಹಾವು ಮೂಲಕ ಒಂದು ಸಂದೇಶ ರೂಪದಲ್ಲಿ ವಿವೇಕ ಹೇಳಿಸಿದ್ದಾರೆ ನಾಗರಾಜರಾಯರು.

ಮನುಷ್ಯ ಜೀವನದಲ್ಲಿ ‘ಮೇಲೆಥಳುಕು ಒಳಗೆಹುಳುಕು’ ಗಾದೆಯಂತೆ ಕೇವಲ ಬೆಡಗು-ಬಿನ್ನಾಣ,  ಡೌಲು-ಡಂಭಾಚಾರಕ್ಕೆ ಮಾತ್ರ ಆದ್ಯತೆ ನೀಡುತ್ತಾ ಅಂತಸ್ತು-ಹಣಕ್ಕೆ ಪ್ರಾಧಾನ್ಯತೆ ಕೊಡಬಾರದು, ಒಂದುವೇಳೆ ಕೊಟ್ಟದ್ದೆ ಆದರೆ ಮೋಸ ಹೋಗುತ್ತೇವೆ, ಪ್ರಾಣ ಕಳೆದುಕೊಳ್ಳುತ್ತೇವೆ ಎಂಬ ಶುಭಾಷಿತ ನೆನಪಿಸುವಂತಿದೆ.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬುದಕ್ಕೆ ಅನ್ವರ್ಥದಂತೆ ಇರುವ ‘ಅಳಿಲುಭಕ್ತಿ’ ಕತೆಯ ಮೂಲಕ ರಾವಣನ ಬಂಧನದಲ್ಲಿದ್ದ ಸೀತೆ ಯನ್ನು ಕರೆತರಲು ರಾಮನು ಆಂಜನೇಯ ಮತ್ತು ವಾನರ ಸೈನ್ಯದೊಡನೆ ಲಂಕೆಗೆ ಸೇತುವೆ ಕಟ್ಟುವ ಸಂದಭದಲ್ಲಿ ನೆರವಾದ ಅಳ್ಳಿಕುಂಚದ ದಿ[ಟ]ಟ್ಟ ಭಕ್ತಿಯನ್ನು ಪುಷ್ಠೀಕರಿಸಿದ್ದಾರೆ. ‘ನಿಸ್ವಾರ್ಥ’ದಲ್ಲಿ ನರಿ ಮತ್ತು ಮೊಸಳೆ ಕತೆಯನ್ನು ಸಿಹಿ ಕಹಿಗಳೊಡನೆ ಉಣಬಡಿಸಿದರೆ ‘ಸ್ನೇಹ’ ಕತೆಯಲ್ಲಿ ಸಿಂಹ ಮತ್ತು ಕಾಡುಹಂದಿ ನಡುವೆಇದ್ದ ಮೈತ್ರಿ ಮತ್ತು ದ್ವೇಷದ ಹಂದರವನ್ನು ಸ್ಪಷ್ಟವಾಗಿ ಬಿಡಿಸಿದ್ದಾರೆ.

‘ಬದುಕಿನ ಸತ್ಯಗಳು’ ಮಾನವನ ಪ್ರತಿ ಹಂತದಲ್ಲಿಯೂ ಬರಬಹುದಾದ ವಾಸ್ತವದ ಕಡೆಗೆ ಒತ್ತುಕೊಟ್ಟಿದೆ. ಬದುಕು, ಬದುಕಲುಬಿಡು ಎಂಬ ತತ್ವವನ್ನು ಪ್ರತಿಪಾದಿಸುತ್ತದೆ. ‘ಸುಬ್ಬು’ ಕತೆಯಲ್ಲಿ ಎಂದಿಗೂ ಕಳ್ಳತನ ಒಳ್ಳೆಯದಲ್ಲ ಎಂಬುದನ್ನು ಸಾರುವುದರ ಜೊತೆಗೆ ಅಪರಾಧಕ್ಕೆ ತಕ್ಕ ದಂಡನೆ/ಶಿಕ್ಷೆಯೂ ಇರುತ್ತದೆ ಎಂಬುದನ್ನು ಒತ್ತಿ ಹೇಳುವ ನೀತಿಕತೆಯಾಗಿದೆ. ‘ಕುರುಬನ ಶಾಂತಿ’ ಕತೆಯು ‘ಮನ:ಶಾಂತಿ’ ಕತೆಯನ್ನೆ ಸ್ವಲ್ಪ ಹೋಲುವಂತಿದ್ದರೂ ಓರ್ವ ಅಮಾಯಕನ ಮನಸ್ಥಿತಿ-ಮನೆಪರಿಸ್ಥಿತಿ ಹಾಗೂ ನಿಷ್ಕಪಟ ತನವನ್ನು ಪ್ರತಿಬಿಂಬಿಸುವಂತಿದೆ. ಪ್ರಮುಖ ಪಾತ್ರಧಾರಿ ಕುರುಬನ ಮುಖೇನ ಶಾಂತಿ ಸಂದೇಶ ಸಾರಲಾಗಿದೆ. ‘ಪಾರಿವಾಳದ ತೀರ್ಪು’ ಕತೆಯಲ್ಲಿ ಘಟಾನುಘಟಿ ಪ್ರಾಣಿಗಳಾದ ಸಿಂಹ ಮತ್ತು ಹುಲಿಗಳು ಪಂದ್ಯಕಟ್ಟಿ ಕಾದಾಡುತ್ತವೆ. ಈ ಬಗ್ಗೆ ಪಾರಿವಾಳವು ತೀರ್ಪು ನೀಡುತ್ತದೆ. ಇದು ಆಬಾಲವೃದ್ಧರಾದಿ ಎಲ್ಲರು ಇಷ್ಟಪಡುವಂಥ ಕತೆ. ಪ್ರತಿಯೊಬ್ಬ ಪುಟಾಣಿಯ ಮನ ಮೆಚ್ಚುವಂಥ ಕತೆಯೇ ‘ಉತ್ತರ’. ಇದರಲ್ಲಿ

ತಾತ-ಮೊಮ್ಮಕ್ಕಳ ನಡುವಿನ ಪೀಳಿಗೆಅಂತರ

[ಜನರೇಶನ್ ಗ್ಯಾಪ್]ವಿಷಯದಲ್ಲಿ ಸಾಮಾನ್ಯವಾಗಿ ಕಂಡುಬರುವ ತಪ್ಪು ತಿಳುವಳಿಕೆ ಅಥವ ಹೊಂದಾಣಿಕೆ ಇಲ್ಲದ ಸಂಗತಿ ಇಲ್ಲ, ಬದಲಿಗೆ ತಾತನು ಸ್ವಂತ ಮೊಮ್ಮಕ್ಕಳನ್ನು ಮಾತ್ರವಲ್ಲದೆ ಇತರರ ಮಕ್ಕಳನ್ನೂ ವಾತ್ಸಲ್ಯದಿಂದ ಕಾಣುವ ಅಪರೂಪದ ಕಥಾವಸ್ತು.ಇದುಎಂಥವರನ್ನು ಆಶ್ಚರ್ಯಚಕಿತರನಾಗಿ ಮಾಡುತ್ತದೆ.

‘ಅತಿಆಸೆ ಇರಬಾರದು’ ಮತ್ತು ‘ಮಾತೇ ಬಂಡವಾಳ’ ಕತೆಗಳು ಪರವಾಗಿಲ್ಲ ಎನಿಸಿ ಚಿನ್ನಾರಿಗಳನ್ನು ಅತ್ಯಾಕರ್ಷಣೆಯಿಂದ ತನ್ನತ್ತ ಸೆಳೆಯುತ್ತವೆ. ಮೊದಲನೇದರಲ್ಲಿ ‘ಆಸೆಯೇ ದುಃಖಕ್ಕೆ ಕಾರಣ’ ಎಂಬುದನ್ನು 2ನೇ ಕಥೆಯಲ್ಲಿ ಅಂಗಡಿ ವ್ಯಾಪಾರಿ ಸುಲೇಮಾನ್ ಮಾತನ್ನೇ ಮುಖ್ಯ ಬಂಡವಾಳವನ್ನಾಗಿಸಿ ವ್ಯಾಪಾರದಲ್ಲಿ ಮುಂದುವರೆದ ನಿರೂಪಣೆ ಇದೆ. ಮಾತಿನ ಚಮತ್ಕಾರದಿಂದ ಲಾಭವಿದೆ ಎಂಬುದನ್ನು ಬಾಲ-ಬಾಲೆಯರಿಗೆ ನವಿರಾಗಿ ನಿರೂಪಿಸಲಾಗಿದೆ.‘ಜ್ಞಾನ’ ಕತೆಯಲ್ಲಿ ಇಬ್ಬರು ಆಪ್ತಮಿತ್ರರು ತಮ್ಮ ಜೀವನದ/ಜ್ಞಾನದ ಏಳಿಗೆಯನ್ನು ವಿವಿಧ ದಾರಿಯಲ್ಲಿ ಕಂಡು ಕೊಳ್ಳುತ್ತಾರೆ. ಒಬ್ಬ ಧನವಂತನಾಗುವಲ್ಲಿ ಅತ್ಯಂತ ಶ್ರಮವಹಿಸಿದರೆ ಮತ್ತೊಬ್ಬ ಸನ್ಯಾಸಿಯಾಗುವಲ್ಲಿ ಅತ್ಯಾಸಕ್ತಿ ವಹಿಸುತ್ತಾನೆ.

ಒಬ್ಬನು ಲೌಕಿಕ ಶ್ರೀಮಂತ ಆಗುವೆಡೆ ಮನಸ್ಸು ಮಾಡಿದರೆ ಮತ್ತೊಬ್ಬ ಆಧ್ಯಾತ್ಮಿಕ ಸಿರಿವಂತನಾಗುವಲ್ಲಿ ಆಸಕ್ತಿ ವಹಿಸುತ್ತಾನೆ. ಈ ಸಂಕಲನದ ಕಟ್ಟಕಡೆಯ ಕಥೆ ‘ಸ್ನೇಹಭಾವ’. ಇದರಲ್ಲಿ ಅಪರೂಪದ ಕೊಡುಗೆ[ಗಿಫ್ಟ್] ವಸ್ತುಗಳನ್ನು ಹಿರಿಯರು ಶಾಲಾಮಕ್ಕಳಿಗೆ ನೀಡಿದಾಗ ಅವು, ಹೇಗೆ ಕಾಣೆಯಾಗುತ್ತವೆ ಮತ್ತು ಯಾವುದೇ ದುಬಾರಿ ವಸ್ತುಗಳನ್ನ ಹೇಗೆ ಜೋಪಾನ ಪಡಿಸಬೇಕು ಮತ್ತು ಎಲ್ಲೆಲ್ಲಿ ಉಪಯೋಗಿಸಬೇಕು ಎಂಬುದನ್ನು ‘ಸ್ಕೂಲ್ ಟೀಚರ್’ ಮೂಲಕ ಮಾರ್ಗದರ್ಶನ ಮಾಡಿಸುತ್ತ ಕಿರಿಯರಿಗೆ ಆಪ್ಯಾಯಮಾನ ಆಗುವಂತೆ ರಚಿಸಿದ್ದಾರೆ. ಪೋಷಕರ ಅತಿಯಾದ ಪ್ರೀತಿಯು ಮಕ್ಕಳಮೇಲೆ ಪೂರಕವಾಗಬೇಕೆ ಹೊರತು ಮಾರಕ ಆಗಬಾರದು ಎಂಬ ಉಪದೇಶವೂ ಇಲ್ಲಿ ಅಡಗಿದೆ.

1979 ಅಂತರ್ರಾಷ್ಟ್ರೀಯ ಮಕ್ಕಳ ವರ್ಷ ದ 12 ತಿಂಗಳ ಅವಧಿಯಲ್ಲಿ ವಿವಿಧ ಪ್ರಾಕಾರಗಳ ನೂರಾರು ಮಕ್ಕಳ ಸಾಹಿತ್ಯವು ದಿನ/ವಾರ/ಪಾಕ್ಷಿಕ/ಮಾಸ ಪತ್ರಿಕೆಗಳು ಸೇರಿದಂತೆ ಅನೇಕ ನಿಯತ ಕಾಲಿಕೆಗಳಲ್ಲಿ ವಿವಿಧ ಪ್ರಕಾಶಕ/ಲೇಖಕರಿಂದ ಪ್ರಕಟಣೆಗೊಂಡವು. ಉಧಾ.: ಕುವೆಂಪು, ಪು.ತಿ.ನ. ಕಾರಂತಜ್ಜ, ಜಿ.ಪಿ.ರಾಜರತ್ನಂ, ಕಾವ್ಯಾನಂದ, ಕಯ್ಯಾರಕಿಝ್ಞಣ್ಣರೈ, ಆನಂದಕಂದ, ಇತ್ಯಾದಿ ದಿಗ್ಗಜರುಗಳ ಜತೆಗೆ  ಶ್ರೀಕೃಷ್ಣಆಲನಹಳ್ಳಿ, ಕಾಳೇಗೌಡನಾಗವಾರ, ಶಿವರಾಮುಕಾಡನಕುಪ್ಪೆ, ಭದ್ರಯ್ಯ ತಿಮ್ಮಸಂದ್ರ, ಕುಮಾರಕವಿ ನಟರಾಜ, ವಿಶುಕುಮಾರ್, ಕೆ.ರಮೇಶಕಾಮತ್, ಪುಸ್ತಕ ಚಿಲುಮೆ ಶ್ರೀಧರ್, ಚೇತನಕನ್ನಡಸಂಘ ಸ.ರ.ಸುದರ್ಶನ, ಹೊರೆಯಾಲ ದೊರೆಸ್ವಾಮಿ, ಕೆ.ಸದಾಶಿವಎಣ್ಣೆಹೊಳೆ,  ಜಯಲಕ್ಷ್ಮಿಸೀತಾಪುರ,ಎಂ.ಜಯಂತಿಬಾಯಿಲಾವಣ್ಯ, ನಗುವನಹಳ್ಳಿರತ್ನ, ಮುಂತಾದವರು ಸಹ ಜತೆಗೂಡಿದರು.

ತದನಂತರ 2012ವರೆಗೆ ಸುಮಾರು 33 ವರ್ಷಗಳ ಧೀರ್ಘಾವಧಿಯಲ್ಲಿ ಕೇವಲ ನೂರಾರು ಸಂಖ್ಯೆಯಲ್ಲಿ ಮಕ್ಕಳ ಸಾಹಿತ್ಯ ಪ್ರಕಟಗೊಂಡಿರಬಹುದು?  ಮಕ್ಕಳ ಸಾಹಿತ್ಯ ಕಣ್ಮರೆ  ಆಗುತ್ತಿರುವ ಸಂದರ್ಭದಲ್ಲಿ ಇಂತಹದ್ದೊಂದು ಅಪರೂಪದ ಪ್ರಯತ್ನ ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಗಿದೆ.

ಅನನ್ಯ ಪ್ರಕಾಶಕರ ಸಾಹಸಕ್ಕೆ ಮತ್ತು ಹಿರಿಯ ಲೇಖಕರ ಸಾರ್ಥಕತೆಗೆ ಹಿಡಿದ ಕನ್ನಡಿ ಇದು. ಕನ್ನಡ ಮಕ್ಕಳಿಗೆ ಅವಶ್ಯಕ ವಾದ ಶ್ಲಾಘನೀಯ ಕಾರ್ಯ ಎನಿಸುವಂತಿದೆ. ಇಷ್ಟಾದರೂ ನಿರಂತರ ಮಕ್ಕಳ ಕತೆ-ಕವನಗಳನ್ನು ಪ್ರಕಟಿಸುತ್ತಾ ಬಂದಿರುವ ಕನ್ನಡದ ನಿಯತಕಾಲಿಕೆಗಳು:

ಚಂದಮಾಮ, ಬಾಲಮಿತ್ರ, ನಗುವನಂದ, ಪುಟಾಣಿ, ಚಿಣ್ಣರಲೋಕ, ಇತ್ಯಾದಿ ಕೇವಲ ಬೆರಳೆಣಿಕೆಯಷ್ಟು ಮಾತ್ರ. ಒಟ್ಟಾರೆ, ಪ್ರತಿಯೊಂದು ಕತೆಗಳು ಅನುಭವಾಮೃತದ ಅನರ್ಘ್ಯ ರತ್ನಗಳು ಇದ್ದಂತೆ ಭಾಸವಾಗಿ ಮಕ್ಕಳಿಗೆ ರಸವತ್ತಾಗಿದೆ. ಸಂಗ್ರಹ ಯೋಗ್ಯ ಕಥಾಸಂಕಲನ.  ಆಬಾಲವೃದ್ಧಆದಿಯಾಗಿ ಎಲ್ಲರ ಲೈಬ್ರರಿ ಸೇರುವಂಥ ಗುಣಮಟ್ಟ-ಗಾತ್ರ [ಕ್ವಾಲಿಟಿ-ಕ್ವಾಂಟಿಟಿ] ಎರಡರಲ್ಲೂ ಸೈ ಎನಿಸಿ ಗರಿಷ್ಠ ಅಂಕ ಗಳಿಸುವ ಸಾಧ್ಯತೆಯಿದೆ. ಚಂದ್ರಬಿಂಬ ಮಕ್ಕಳಿಗೆ ಮುದ-ಖುಶಿ ಕೊಡುತ್ತದೆ ಎಂಬುದರಲ್ಲಿ ಎರಡನೆ ಮಾತೇ ಇಲ್ಲ! ಎಂದಷ್ಟೇ ಬರೆದು ವಿರಮಿಸುತ್ತೇನೆ.

– ಕುಮಾರಕವಿ ಬಿ.ಎನ್.ನಟರಾಜ, ಮೈಸೂರು, 15.6.2012

79- ಹಿನ್ನುಡಿ ಮತ್ತು ಪುಸ್ತಕ ವಿಮರ್ಶೆ

ಕೃತಿ:ಅನುಭವಾಮೃತ ಅನರ್ಘ್ಯರತ್ನಗಳು

ಲೇಖಕ:ಕುಮಾರಕವಿ ಬಿ.ಎನ್.ನಟರಾಜ

ಪುಟಗಳು: 84, ಬೆಲೆ: ಸಾದಾ-6 ರೂ. ಉತ್ತಮ-10 ರೂ.

ಪ್ರಕಾಶಕರು: ವರ್ತಮಾನ ಪ್ರಕಾಶನ ಈವ್ನಿಂಗ್ ಬಜಾರ್ ಶಿವರಾಂಪೇಟೆ ಮೈಸೂರು-570001

 (1) ಹಿನ್ನುಡಿ (ಬೆನ್ನುಡಿ)

ಕುಮಾರಕವಿ ಕಾವ್ಯನಾಮದ ಬಿ.ಎನ್. ನಟರಾಜರವರು ಇದುವರೆಗೆ ಐದಾರು ಪುಸ್ತಕಗಳನ್ನೂ ನೂರಾರು ಕವನ ಲೇಖನಗಳನ್ನು ಬರೆಯುವ ಮೂಲಕ ಈಗಾಗಲೇ ನಾಡಿನ ಜನತೆಗೆ ಪರಿಚಿತರಾಗಿದ್ದಾರೆ. ಬಹುಶಃ ‘ಅನುಭವಾಮೃತ ಅನರ್ಘ್ಯರತ್ನಗಳು’ ಕೃತಿಯು ಇವರ 8ನೇ ಪ್ರಕಟಣೆ ಇರಬಹುದು. ಯುವಸಾಹಿತಿ ಕುಮಾರಕವಿ ಅವರ ಮಾತುಗಳು ಇಲ್ಲಿ ಸುಭಾಷಿತಗಳು. ಅವುಗಳು ಅನುಭವದ ಹಿನ್ನೆಲೆಯಲ್ಲಿ ಹೊರಹೊಮ್ಮಿದ ಹೇಳಿಕೆಗಳು ಅಥವಾ ಸೂಕ್ತಿಗಳು.

ನ್ಯಾಯಾಲಯದಲ್ಲಿ ವಾದ ವಿವಾದಗಳ ನಂತರ ಬರುವ ತೀರ್ಪಿನಂತೆ, ಇವು ಅನುಭವದ ಮಥನದಿಂದ ಬಂದಿರುವ ಸಿದ್ಧಾಂತಗಳು. ಅನುಭವದ ಫಲಿತವನ್ನು ಸರ್ವಮಾನ್ಯ ಆಗಿರಬೇಕೆಂದು ನಿರೀಕ್ಷಿಸಬೇಕಾಗಿಲ್ಲ. ಮುಂದಿನ ಅನುಭವಗಳು ಇದನ್ನು ಬದಲಿಸಲೂ ಬಹುದು. ಆದರೆ ಅನೇಕ ಫಲಿತಗಳು ಸರ್ವಮಾನ್ಯವೂ ಸಾರ್ವಕಾಲಿಕವೂ ಆಗುತ್ತವೆ. ಅಂತಹ ಹಲವಾರು ಸಿದ್ಧಾಂತಗಳು ಇಲ್ಲಿವೆ ಎಂಬುದನ್ನು ಹೇಳಬಯಸುತ್ತೇನೆ.

ಒಟ್ಟಿನಲ್ಲಿ ಗಂಭೀರ ಚಿಂತನೆ ಇಲ್ಲಿಯ ನೆಲಗಟ್ಟು. ಇದರಲ್ಲಿರುವ ಸೂಕ್ತಿಗಳನ್ನು ಯಾವುದೇ ಸನ್ನಿವೇಶದಲ್ಲಿ ಒರೆಹಚ್ಚಿನೋಡಿ ಅವುಗಳ ಶಕ್ತಿಯನ್ನು ನಾವು ಕಂಡುಕೊಳ್ಳಬಹುದು, ಚಿಂತನ ಶೀಲರಿಗೆ ಉಪಯುಕ್ತವಾದ ಸೂಕ್ತಿಗಳು. ಕುಮಾರಕವಿಯವರಿಂದ ಇಂತಹ ಅರ್ಥಭರಿತ ಮಾತುಗಳು ಅವರ ಅನುಭವದ ಆಳದಿಂದ ಮತ್ತಷ್ಟು ಹೊರಬರಲಿ ಎಂದು ಹಾರೈಸುತ್ತೇನೆ.

-ಡಾ.ಪಿ.ಎಸ್.ರಾಮಾನುಜಂ

ದಕ್ಷಿಣ ವಲಯ ಪೊಲೀಸ್ ಡಿ.ಐ.ಜಿ, ಮೈಸೂರು, 14.1.1987.

(2) ಪುಸ್ತಕ ವಿಮರ್ಶೆ

ಶೀರ್ಷಿಕೆ: ಅನುಭವದ ನುಡಿಮುತ್ತು

ಕೃತಿ: ಅನುಭವಾಮೃತ ಅನರ್ಘ್ಯರತ್ನಗಳು

ಲೇಖಕ: ಕುಮಾರಕವಿ ಬಿ.ಎನ್.ನಟರಾಜ

ಪುಟಗಳು: 84, ಬೆಲೆ: ಸಾದಾ-6ರೂ. ಉತ್ತಮ-10ರೂ.

ಪ್ರಕಾಶಕರು : ವರ್ತಮಾನ ಪ್ರಕಾಶನ, ಈವ್ನಿಂಗ್ ಬಜಾರ್ ಶಿವರಾಂಪೇಟೆ ಮೈಸೂರು-570001

ಪ್ರತಿಯೊಂದು ವ್ಯಕ್ತಿಗೂ ತನ್ನ ಜೀವಿತ ಕಾಲದಲ್ಲಿ ನಾನಾ ರೀತಿಯ ಅನುಭವಗಳು ಉಂಟಾಗುತ್ತವೆ. ಇವುಗಳ ಬಗ್ಗೆ ಚಿಂತನಶೀಲರು ತಮ್ಮ ಭಾವನೆಗಳನ್ನು ಒಂದೆರಡು ವಾಕ್ಯಗಳಲ್ಲಿ ಸೂಚಿಸಿ ಇತರರಿಗೆ ಜೀವನದ ಪರಿಚಯ ಮಾಡಿಕೊಡುತ್ತಾರೆ. ಬುದ್ಧ, ವಿವೇಕಾನಂದ, ಗಾಂಧೀಜಿ, ರಾಮಕೃಷ್ಣಪರಮಹಂಸ, ದಾಸವರೇಣ್ಯರು, ವಚನಕಾರರು, ಮುಂತಾದವರು ತಾವು ಕಂಡಂಥ ಸತ್ಯಗಳನ್ನು ಕಾವ್ಯಮಯವಾಗಿ ಹೇಳಿದ್ದಾರೆ.

ಅವುಗಳಲ್ಲಿ ಅನೇಕ ಜೀವನಾದರ್ಶಗಳು ಅಡಗಿವೆ. ಮೇಲೆ ಹೇಳಿದ ಮಹಾನ್ ವ್ಯಕ್ತಿಗಳ ಅನುಭವದ ಮಾತುಗಳ ಹಿಂದೆ ಭಾರತದ ಸಂಸ್ಕೃತಿ, ಧರ್ಮ, ರಾಜಕೀಯ, ಇತ್ಯಾದಿ ಎಲ್ಲವೂ ಅಡಗಿದೆ ಎಂಬುದು ಸತ್ಯವಾದರೂ ಎಲ್ಲರಿಗೂ ಒಂದೇ ರೀತಿಯ ಅನುಭವ ಆಗಲಾರದು. ಒಬ್ಬೊಬ್ಬರ ಪರಿಸರಕ್ಕೆ ತಕ್ಕಂತೆ ಅನುಭವವಾಗುತ್ತದೆ.

‘ವರ್ತಮಾನ’ ದಿನಪತ್ರಿಕೆಯಲ್ಲಿ ಪ್ರತಿ ಮಂಗಳವಾರದಂದು ಪ್ರಕಟವಾದ ತಮ್ಮ ‘ಸ್ವಂತ’ ಅನುಭವ ಅಮೃತದ ಅನರ್ಘ್ಯ ರತ್ನಗಳ ಸಂಗ್ರಹ ಇದು. ಕುಮಾರಕವಿ ನಟರಾಜ ರವರು ಪಡೆದ ಅನುಭವದ ಪ್ರತೀಕ. ಇದರಲ್ಲಿ ಜೀವನದ ವಿವಿಧ ಪ್ರಾಕಾರಗಳು ಇರುತ್ತವೆ: ಹೆಣ್ಣು ಗಂಡಿನ ಸಂಬಂಧ ಸತ್ಯಾಸತ್ಯತೆಯ ಸಂದರ್ಭಗಳು ಅಡಗಿವೆ. 500 ಚಿಂತನ ವಾಚ್ಯಗಳಿದ್ದು ಎಲ್ಲವೂ ಗಂಭೀರವಾಗಿದೆ, ಅರ್ಥಪೂರ್ಣವಾಗಿದೆ. ಲೇಖಕರು ಹೇಳಿದ್ದನ್ನೆಲ್ಲಾ ಒಪ್ಪದೇ ಇದ್ದರೂ ಅವರ ಭಾವನೆಗಳು ಬಹಳ ಉದಾತ್ತವಾಗಿದ್ದು ಆಧುನಿಕವಾಗಿ ಸಂಗ್ರಹ ಅರ್ಹವಾಗಿದೆ. ಹಾಗಾಗಿ ಒಂದೆರಡು ಉದಾಹರಣೆಗಳನ್ನು ಕೊಟ್ಟರೆ, ಅವರ ಲೇಖನದ ಪರಿಚಯ ಚೆನ್ನಾಗಿ ಆದೀತು.

ಉದಾಹರಣೆಗೆ… ಅವಕಾಶ ಇದ್ದಾಗ ವಿವೇಕ ಇರುವುದಿಲ್ಲ, ವಿವೇಕ ಇದ್ದಾಗ ಅವಕಾಶ ಇರುವುದಿಲ್ಲ, ಇವೆರಡೂ ಇದ್ದಾಗ ಬದುಕು ಇರುವುದಿಲ್ಲ”  “ನಾವು ಸಂಪಾದಿಸದೇ ತಿನ್ನುವ ಅನ್ನವು ನಮ್ಮನ್ನು ಕಂಡು ಅಳುತ್ತದೆ”

ಇಂತಹ ನುಡಿಮುತ್ತುಗಳನ್ನು ಪ್ರಕಟಿಸಿದ ಪ್ರಕಾಶಕರು ಇವುಗಳನ್ನು ಸೃಷ್ಟಿಸಿದ ಲೇಖಕರು, ಇಬ್ಬರೂ ಅಭಿನಂದನಾರ್ಹರು. ಈ ಪುಸ್ತಕವು ಕಿರು ಹೊತ್ತಗೆ ಯಾದರೂ ಸಾಹಿತ್ಯಕವಾಗಿ ಬಹಳ ಬೆಲೆಯುಳ್ಳದ್ದಾಗಿದೆ. ಕನ್ನಡ ಸಾಹಿತ್ಯ ಸಂಪತ್ತಿಗೆ ಒಂದು ಉತ್ತಮ ಕೊಡುಗೆ ಈ ಪುಸ್ತಕ.

ದೊ.ಶ್ರೀ.ಶೇಷರಾಘವಾಚಾರ್ , ಸಂಯುಕ್ತ ಕರ್ನಾಟಕ, ಪುಟ-4 “ಸಾಪ್ತಾಹಿಕ ಸೌರಭ” 17.7.1988

 

80- ಕೃತಿ: ಅರಳಿದ ಮೊಗ್ಗುಗಳು

ಸಂ: ಕುಮಾರಕವಿ ಬಿ.ಎನ್.ನಟರಾಜ

ಪ್ರಕಾಶಕರು: ಯುವಶಕ್ತಿ ಪ್ರಕಾಶನ, ಮೈಸೂರು-10

124 ಪುಟಗಳು, ಬೆಲೆ 13 ರೂ.

ಮೊದಲ ಮುದ್ರಣ 1984.

ಪುಸ್ತಕದ ವಿಮರ್ಶಕರು ಈ ಕೆಳಕಂಡ ಇಬ್ಬರು

(1) ರಸಿಕಪುತ್ತಿಗೆ(ಕನ್ನಡಪ್ರಭ ಪತ್ರಿಕೆ) ಮತ್ತು

(2) ಆರ್.ಎಲ್.ಅನಂತರಾಮಯ್ಯ (ಗ್ರಂಥಲೋಕ, ಮಾಸಿಕ)

1988ರಲ್ಲಿ ಒಟ್ಟು 84 ಯುವಕವಿಗಳ ಎಂಭತ್ತನಾಲ್ಕು  ಕವಿತೆಗಳನ್ನು ಒಂದು ಸಂಕಲನದಲ್ಲಿ ಹೊರ ತಂದಿರುವ ಮೈಸೂರಿನ ಕುಮಾರಕವಿ ರವರ ಸಾಹಸ ಸ್ತುತ್ಯವಾದುದು. ಪತ್ರಿಕೆಯ ಪುಟಗಳಲ್ಲಿ ಕವಯಿತ್ರಿಯರು ಕಾಣಿಸದಿರುವ ಈ ದಿನಗಳಲ್ಲಿ”ಅರಳಿದಮೊಗ್ಗುಗಳು” ಕವನ ಸಂಕಲನದಲ್ಲಿ ಮೂರನೇ ಒಂದು ಭಾಗದಷ್ಟು ಕವಿಯಿತ್ರಿಯರಿದ್ದಾರೆ. ಅವರ ಕವಿತೆಗಳೂ ತುಂಬಾ ಚೂಟಿಯಾಗಿವೆ.

ಕುಮಾರಕವಿ ತಮ್ಮ ಸಂಪಾದಕೀಯದಲ್ಲಿ ಹೇಳಿರುವ: “ಪ್ರತಿಭೆಗೇ ಅಥವ ಪ್ರೌಢತೆಗೇ ಆದ್ಯತೆ ನೀಡಿಲ್ಲ, ಯಾಕೆಂದರೆ ಬೆಳೆಯುವ ಕವಿಗಳಿಗೆ ಅನ್ಯಾಯವಾದೀತೆಂದು. ಅದೇವೇಳೆ ಬಂದಎಲ್ಲಾ ಬರಹಗಳಿಗೆ ಅಥವ ಬರೆದಎಲ್ಲಾ ಹಾಳೆಗಳಿಗೆ ಮಾನ್ಯತೆ ನೀಡಿಲ್ಲ. ಏಕೆಂದರೆ ಕವನಸಂಕಲನ ಅಧ್ವಾನವಾದೀತೆಂದು! ಹಲವು ಸರಿಯಾಗಿ ಅರ್ಥಗರ್ಭಿತವಾಗಿಲ್ಲ ಕೆಲವು ಒಂದಕ್ಕೊಂದು ವಿರುದ್ಧವಾಗಿವೆ. ಹಾಗಾಗಿ ಬಹುತೇಕ ಕವಿತೆಗಳನ್ನು ತಿದ್ದಿ ಪ್ರಕಟಿಸಲಾಗಿದೆ.” ಎಂಬ ಮಾತುಗಳು ಮೆಚ್ಚತಕ್ಕದ್ದು. ಆದರೆ ಆ ತಿದ್ದುವ ಕೆಲಸವನ್ನು ಸ್ವತಃ ಸಂಪಾದಕರೇ ಮಾಡುವ ಬದಲು ಇನ್ನೊಬ್ಬ ಸಹೃದಯಿ ಹಿರಿಯರಿಂದ ಮಾಡಿಸಬಹುದಿತ್ತು.

ಸಂತೋಷದ ಒಂದಂಶವೆಂದರೆ ಅರಳಿದಮೊಗ್ಗುಗಳು ಕೃತಿಯಲ್ಲಿ ಇಡಿಯ ಕರ್ನಾಟಕದ ಕವಯಿತ್ರಿ-ಕವಿಗಳು ಕಾಣಿಸುತ್ತಾರೆ. ಹಾಗೇ ಕೆಲವು ಉತ್ತಮ ಭವಿಷ್ಯದ ಕವಿಗಳೂ ಇದ್ದಾರೆ. ಹಲವರು, ಕೆಲವು ಹಿರಿಯ ಕವಿಗಳ ಅನುಕರಣೆ ಮಾಡಿರುವುದನ್ನು ಸಂಪಾದಕರು ಗಮನಿಸಬಹುದಿತ್ತು. ರಾಜಶ್ರೀ, ಸುಧೀರ್, ವೀರಣ್ಣಮರಡಿ, ವಿಜಯಾದಬ್ಬೆ, ಸಿ.ವಿ.ಮುರಳೀಧರ, ದಾಕ್ಷಾಯಣೀ ಹಿರೇಮಠ, ಭದ್ರಯ್ಯ ತಿಮ್ಮಸಂದ್ರ ಮುಂತಾದ ಕೆಲವು ಹೊಸ ಕವಿಗಳ ಕವಿತೆಗಳು ಮಿಂಚುತ್ತವೆ. ಸಂಪಾದಕರ ಪ್ರಯತ್ನ ಮುಂದಿನ ಹೆಜ್ಜೆಯಲ್ಲಿ ಇನ್ನೂ ಚೆನ್ನಾಗಿ ಬೆಳಗಲಿ ಎಂಬ ಆಶಯದಿಂದ ಈ ಸಂಕಲನವನ್ನು ಸ್ವಾಗತಿಸಬೇಕು.

-ರಸಿಕಪುತ್ತಿಗೆ

ಕನ್ನಡಪ್ರಭ ಪುಟ-5, ವಾಙಯ ವಿಹಾರ , 6.10.1985 ಭಾನುವಾರ

ಕವನ ಸಂಕಲನ : ಅರಳಿದ ಮೊಗ್ಗುಗಳು

ಸಂಪಾದಕರು : ಕುಮಾರಕವಿ ನಟರಾಜ

(2)ಆರ್.ಎಲ್.ಅನಂತರಾಮಯ್ಯ*

ಕುಮಾರಕವಿ ನಟರಾಜ ರವರ ಪ್ರಪ್ರಥಮ ಸಂಪಾದಕತ್ವದ ಹಾಗೂ ಯುವಶಕ್ತಿ ಪ್ರಕಾಶನವು ಪ್ರಕಟಿಸಿದ ಚೊಚ್ಚಲ ಕೃತಿ “ಅರಳಿದ ಮೊಗ್ಗುಗಳು”. ಮೈ.ವಿ.ವಿ. ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಡಾ.ಸಿ.ಪಿ. ಕೃಷ್ಣಕುಮಾರ್(ಸಿ.ಪಿ.ಕೆ)ಅವರು ಈ ಕವಿತಾ ಸಂಕಲನವನ್ನು ಮೈಸೂರು ಪುರಭವನದಲ್ಲಿ ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಕವನ ಸಂಕಲನದಲ್ಲಿ ೮೪ ಕವಿ-ಕವಯಿತ್ರಿ ಬರೆದ ಎಂಭತ್ತನಾಲ್ಕು ಪ್ರಾತಿನಿಧಿಕ ಕವಿತೆಗಳಿವೆ.

1984ನೇ ಇಸವಿಯ ಸ್ಮರಣೆಗಾಗಿ ರಾಜ್ಯದ ಒಟ್ಟು ಎಂಬತ್ತನಾಲ್ಕು ಉದಯೋನ್ಮುಖ ಕವಿ-ಕವಯಿತ್ರಿಯರು ರಚಿಸಿದ 84 ಪ್ರಾತಿನಿಧಿಕ ಕವನಗಳಿದ್ದು ಹೊಸ ಲೇಖಕರಿಗೆ ಅವರವರ ಜಿಲ್ಲೆಯನ್ನು ಪ್ರತಿನಿಧಿಸುವ ಅವಕಾಶ ಕಲ್ಪಿಸಿ ಎಲ್ಲಜಿಲ್ಲೆಗಳ ಬರಹಗಾರರಿಗೂ ಆದ್ಯತೆ ನೀಡುವ ನಿಟ್ಟಿನಲ್ಲಿ ಲೇಖಕ ಹಾಗು ಪ್ರಕಾಶಕ ಇಬ್ಬರೂ ಯಶಸ್ವಿಯಾಗಿದ್ದಾರೆ. ತನ್ಮೂಲಕ 84ಕವಿತೆಗಳ ಈ ಸಂಕಲನ ಒಂದು ನೂತನ ದಾಖಲೆಯನ್ನು ಮಾಡಿರಬಹುದು.

ಕತೆ, ಕಾದಂಬರಿ ಪ್ರಕಟಿಸುವುದಕ್ಕಿಂತಲೂ ಕಾವ್ಯ ಪ್ರಕಟಣೆಯ ಕೆಲಸವು ದುಸ್ತರವೂ ದುಬಾರಿಯೂ ಆಗಿರುವ ಈ ದಿನಗಳಲ್ಲಿ ಹೊಸ ಕವಿಗಳಿಗೆ ಅವಕಾಶ, ಪ್ರೋತ್ಸಾಹ ಕೊಡಬೇಕೆಂಬ ಒಳ್ಳೆಯ ಉದ್ದೇಶದಿಂದ ಕನ್ನಡ ನಾಡಿನ ವಿವಿಧ ಭಾಗಗಳ 84 ಯುವ ಬರಹಗಾರರ ಒಂದೊಂದೇ ಕವನವನ್ನು ಒಂದೆಡೆ ಕಲೆಹಾಕಿ ಪುಸ್ತಕ ರೂಪದಲ್ಲಿ ಪ್ರಕಟಿಸಿ ಲೋಕಾರ್ಪಣೆ ಮಾಡಿರುವ ಸಂಪಾದಕ ಕುಮಾರಕವಿ ಬಿ.ಎನ್.ನಟರಾಜ್ ಹಾಗೂ ಪ್ರಕಾಶಕ ಬಿ.ಬಸವರಾಜ್ ಅವರುಗಳು ದಿಟವಾಗಿ ಅಭಿನಂದನಾರ್ಹರು. ಇದರಲ್ಲಿರುವ ಎಲ್ಲಾ ಕವಿತೆಗಳು ವಾಚಿಸಲು ಪ್ರೋತ್ಸಾಹ ನೀಡಲು ಯೋಗ್ಯ ಎನಿಸುತ್ತವೆ.

ಆರ್.ಎಲ್.ಅನಂತರಾಮಯ್ಯ

ನಿರ್ದೇಶಕ, ಪ್ರಸಾರಾಂಗ, ಮೈವಿವಿ, ಮಾನಸಗಂಗೋತ್ರಿ, ಮೈಸೂರು-6

ಹಾಗು ಸಂಪಾದಕರು-ಪ್ರಕಾಶಕರು

“ಗ್ರಂಥಲೋಕ” ಮಾಸಪತ್ರಿಕೆ (ಸೆಪ್ಟೆಂಬರ್1984)

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ…  ಐದು ಕೃತಿಗಳ ಪರಿಚಯ.. ಭಾಗ-15

admin
the authoradmin

Leave a Reply