CrimeLatest

ಜನ ಸ್ಪಾಗಳನ್ನು ಅನುಮಾನದಿಂದ ನೋಡುತ್ತಿರುವುದೇಕೆ? ಇಷ್ಟಕ್ಕೂ ಮಸಾಜ್ ಸ್ಪಾ ಸೆಂಟರ್ ಗಳಲ್ಲಿ ನಡೆಯುವುದೇನು? ಹೆಣ್ಮಕ್ಕಳೇ ಹುಷಾರ್!

ದೇಹದ ಆರೋಗ್ಯ ಕಾಪಾಡುವ ಮತ್ತು ಮೈಮನ ಹಗುರವಾಗಿಸುವ ಸಲುವಾಗಿ ಹುಟ್ಟಿಕೊಂಡ ಮಸಾಜ್ ಸೆಂಟರ್ ಗಳು ಇದೀಗ ಅನೈತಿಕ ಚಟುವಟಿಕೆಯ ಅಡ್ಡೆಯಾಗುತ್ತಿವೆ. ಮೇಲಿಂದ ಮೇಲೆ ನಡೆಯುತ್ತಿರುವ ದಾಳಿಗಳಲ್ಲಿ ಮಸಾಜ್ ಸೆಂಟರ್ ನಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಯ ಬಗ್ಗೆಯೇ ಸುದ್ದಿಗಳು ಹೊರಬರುತ್ತಿವೆ. ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಈ ಅಡ್ಡೆಗಳಿಗೆ ಇದಕ್ಕೆ ಕಡಿವಾಣ ಹಾಕುವುದು ಸವಾಲ್ ಆಗಿ ಪರಿಣಮಿಸುತ್ತಿದೆ.

ಕೇವಲ ದೊಡ್ಡ, ದೊಡ್ಡ ನಗರಗಳಲ್ಲಷ್ಟೆ ನಡೆಯುತ್ತಿದ್ದ ಮಸಾಜ್ ಅಂಡ್ ಸ್ಪಾ ಸೆಂಟರ್ ಇದೀಗ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿವೆ. ಹೆದ್ದಾರಿಗಳ ಮುಖ್ಯರಸ್ತೆಯಲ್ಲಿಯೇ ತೆರೆದುಕೊಳ್ಳುತ್ತಿದ್ದು, ಗ್ರಾಮೀಣ ಪ್ರದೇಶದ ಜನರ ಕಣ್ಣಿಗೆ ಮಣ್ಣೆರಚಿ ಒಳಗೊಳಗೆ ನಡೆಯುವುದು ಮಾತ್ರ ಯಾರೂ ಊಹಿಸದೆ ಚಟುವಟಿಕೆಯಾಗಿದೆ. ಇಂತಹವರಿಂದ ನಿಜವಾಗಿ ಮಸಾಜ್ ಸೆಂಟರ್ ನಡೆಸಿ ಬದುಕು ಕಟ್ಟಿಕೊಳ್ಳುವವರನ್ನು ಜನ ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇವತ್ತಿನ ದಿನಗಳಲ್ಲಿ ಬಹುತೇಕರ ಕಣ್ಣು ಹಣದ ಮೇಲೆಯೇ ನೆಟ್ಟಿರುವುದರಿಂದ ಮತ್ತು ಅನೈತಿಕ ಮಾರ್ಗದಲ್ಲಿ ಹೆಚ್ಚಿನ ಹಣ ಸಂಪಾದಿಸಬಹುದು ಎಂಬ ಕಾರಣದಿಂದಾಗಿ ಬೇರೆ, ಬೇರೆ, ಮುಖವಾಡಗಳನ್ನು ಧರಿಸಿ ಆ ಮೂಲಕ ಅನೈತಿಕ ಚಟುವಟಿಕೆ ನಡೆಸುವ ಮಟ್ಟಕ್ಕೆ ಬಂದು ನಿಂತಿದ್ದಾರೆ. ಹೀಗಾಗಿ ಬಹುತೇಕ ಸ್ಪಾ ಸೆಂಟರ್ ಗಳು ಬೇರೆಯದ್ದೇ ದಂಧೆ ನಡೆಸುವ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಈ ದಂಧೆಯಲ್ಲಿ ಮಹಿಳೆಯರು ತೊಡಗಿಕೊಂಡಿದ್ದು ಅವರಿಗೆ ಬೆಂಗಾವಲಾಗಿ ಒಂದಷ್ಟು ಮಂದಿ ಪುರುಷರು ನಿಂತಿದ್ದು, ಅವರಿಂದ ಅಮಾಯಣ ಹೆಣ್ಮಕ್ಕಳ ಬದುಕು ಹಳ್ಳ ಹಿಡಿಯುತ್ತಿದೆ.

ಈಗಾಗಲೇ ಅನೈತಿಕ ಚಟುವಟಿಕೆಗೆ ಹಲವು ಕ್ಷೇತ್ರಗಳನ್ನು ದಂಧೆಕೋರರು ಬಳಸಿಕೊಂಡಿದ್ದಾರೆ. ಅವರು ಯೋಗ ಸೆಂಟರ್ ನ್ನು ಕೂಡ ಬಿಟ್ಟಿಲ್ಲ. ಹೀಗಾಗಿ ತಮ್ಮ ದಂಧೆ ಯಾವುದೇ ಅಡೆ ತಡೆಗಳಿಲ್ಲದೆ ನಡೆಯ ಬೇಕೆಂಬ ಕಾರಣಕ್ಕಾಗಿ ಬಹುಕೃತ ವೇಷವನ್ನು ತೊಡುತ್ತಿದ್ದಾರೆ. ಪ್ರತಿಷ್ಠಿತ ಕಾಲೇಜು ಪಕ್ಕವೇ ಮಸಾಜ್ ಸೆಂಟರ್ ತೆರೆದು ಶ್ರೀಮಂತ ಸ್ಟುಡೆಂಟ್ ಗಳನ್ನೇ ಟಾರ್ಗೆಟ್ ಮಾಡಿ ಹಣ ಪೀಕುವ ಮಟ್ಟಕ್ಕೆ ಕೆಲವರು ಬಂದು ನಿಂತಿದ್ದಾರೆ. ಜತೆಗೆ ಮಸಾಜ್ ಸೆಂಟರ್ ಗೆ ಉತ್ತರ ಭಾರತ ಮಾತ್ರವಲ್ಲದೆ ಬಾಂಗ್ಲಾ ಮತ್ತು ನೇಪಾಳದ ಹೆಣ್ಮಕ್ಕಳನ್ನು ಕರೆತಂದು ಅವರನ್ನು ದಂಧೆಗೆ ದೂಡುತ್ತಿದ್ದು ಇದರ ಹಿಂದೆ ಬಹುದೊಡ್ಡ ಜಾಲ ಕೆಲಸ ಮಾಡುತ್ತಿವೆ ಎನ್ನುವುದು ಅಷ್ಟೇ ಸತ್ಯ.

 

ಬ್ಯೂಟಿಪಾರ್ಲರ್, ಮಸಾಜ್ ಸೆಂಟರ್, ಪಿಜಿ, ಯೋಗ ತರಗತಿ, ಆಯುರ್ವೇದಿಕ್ ಸೆಂಟರ್ ಹೀಗೆ ಕೆಲವೊಂದು ನಾಮಫಲಕವನ್ನು ಕಟ್ಟಡದ ಮುಂದೆ ನೇತು ಹಾಕಿಕೊಂಡು ಒಳಗೆ ಬೇರೆಯದ್ದೇ ಆದ ಚಟುವಟಿಕೆ ನಡೆಸಿ  ಸಿಕ್ಕ ಬಿದ್ದ ಉದಾಹರಣೆಗಳು ಬಹಳಷ್ಟಿವೆ. ಈಗ  ಮಸಾಜ್ ಸೆಂಟರ್ ಗಳಂತು ಎಲ್ಲೆಂದರಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿವೆ. ಈ ಮಸಾಜ್ ಸೆಂಟರ್ ಪೈಕಿ ಹೆಚ್ಚಿನವು ಬರೀ ಗಂಡಸರ ಮಸಾಜ್ ಗಾಗಿ ತೆರೆದವು ಎಂದರೆ ತಪ್ಪಾಗದು. ಬಾಡಿ, ಹೆಡ್ ಮಸಾಜ್ ಎನ್ನುವ ಫೋಟೋಗಳನ್ನು ಹಾಕಿ ಒಳಗೆ ಅನೈತಿಕ ಚಟುವಟಿಕೆ ನಡೆಸುವುದು ಗುಟ್ಟಾಗಿ ಉಳಿದಿಲ್ಲ.

ಬಹುತೇಕ ಕಡೆಗಳಲ್ಲಿ ಸ್ಪಾಗಳಿದ್ದು ಎಲ್ಲದರಲ್ಲಿಯೂ ದಂಧೆ ನಡೆಯುತ್ತದೆ ಎಂದರೆ ತಪ್ಪಾಗುತ್ತದೆ. ಆದರೆ ಕೆಲವರು ಇದನ್ನು ಬಂಡವಾಳವಾಗಿಸಿಕೊಂಡು ತಮ್ಮ ದಂಧೆಯನ್ನು ಮುಂದುವರೆಸುತ್ತಾರೆ. ಮೈಸೂರಿನಲ್ಲಿ ನಡೆದ ದಾಳಿಗಳ ವೇಳೆ ಒಬ್ಬಾಕೆಯೇ ಬೇರೆ, ಬೇರೆ ಕಡೆಗಳಲ್ಲಿ ಮಸಾಜ್ ಸೆಂಟರ್ ತೆರೆದು ದಂಧೆ ನಡೆಸಿದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇದರಲ್ಲಿ ಕೈತುಂಬಾ ಹಣ ಬರುವುದರಿಂದ ಪೊಲೀಸರು ಚಾಪೆಕೆಳಗೆ ತೂರಿದರೆ, ದಂಧೆ ನಡೆಸುವವರು ರಂಗೋಲಿ ಕೆಳಗೆ ನುಸುಳಲು ತಯಾರಿರುತ್ತಾರೆ. ಏಕೆಂದರೆ ಅವರ ಬೆನ್ನಿಗೆ ದೊಡ್ಡ ಗ್ಯಾಂಗೇ ನಿಂತಿರುತ್ತದೆ.

ಇಲ್ಲಿವರೆಗೆ ಮೈಸೂರು, ಮಂಡ್ಯ ಮುಂತಾದ ನಗರಗಳಲ್ಲಿ ಸ್ಪಾತೆರೆದು ಅಲ್ಲಿ ಅನೈತಿಕ ಚಟುವಟಿಕೆ ನಡೆಸಿ ಸಿಕ್ಕಿ ಬಿದ್ದು ಗಂಟುಮೂಟೆ ಕಟ್ಟಿದ್ದ ಮಹಿಳೆ ಆ ನಂತರ ಮಂಡ್ಯದ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲೇ ಕ್ಲೌಡ್-11 ಹೆಸರಿನ ಸಲೂನ್-ಸ್ಪಾ ತೆರೆದು ಅಲ್ಲಿ ಕೂಡ ಎಂದಿನ ತನ್ನ ದಂಧೆಯನ್ನು ನಡೆಸಿ ಇದೀಗ ಸಿಕ್ಕಿಬಿದ್ದಿದ್ದಾಳೆ. ಈ ದಂಧೆಗೆ ತಳ್ಳಿದ್ದ ನಾಲ್ಕು ಜನ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.

ಈ ದಂಧೆ ನಡೆಸುವ ಮಹಿಳೆಯರು ಅಮಾಯಕ ವಿದ್ಯಾರ್ಥಿನಿಯರು, ಹಳ್ಳಿಗಾಡಿನ ಯುವತಿಯರನ್ನೇ ಟಾರ್ಗೆಟ್ ಮಾಡಿ ಅವರನ್ನು ಒಲಿಸಿಕೊಂಡು ಅವರಿಗೆ ಹಣದ ಆಮಿಷವೊಡ್ಡಿ ಬಲೆಗೆ ಬೀಳಿಸಿಕೊಂಡು ಅನೈತಿಕ ಮಾರ್ಗ ಹಿಡಿಯುವಂತೆ ಮಾಡುತ್ತಾರೆ. ಇನ್ನು ಕೆಲವು ಕಡೆ ಇದಕ್ಕಾಗಿಯೇ ನೇಪಾಳ ಮತ್ತು ಬಾಂಗ್ಲಾದಿಂದ ಹೆಣ್ಣು ಮಕ್ಕಳನ್ನು ಕರೆಯಿಸಿ ಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ಒಮ್ಮೆ ಈ ಜಾಲಕ್ಕೆ ಸಿಕ್ಕಿದ ಹೆಣ್ಣುಮಕ್ಕಳು ತಾವು ಅದನ್ನು ಬಿಟ್ಟು ಹೊರಗೆ ಬರಬೇಕೆಂದರೂ ಅದು ಸಾಧ್ಯವಾಗುವುದಿಲ್ಲ.  ಕಾರಣ ಅವರ ನಗ್ನ ವೀಡಿಯೋ, ಫೋಟೋಗಳು ಇವರ ಬಳಿಯಿರುತ್ತವೆ. ಅದನ್ನಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಾ ಪಾಪಕೂಪಕ್ಕೆ ತಳ್ಳುತ್ತಾರೆ. ಈ ಕುರಿತಂತೆ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಅವರು ಮಾಧ್ಯಮಗಳಿಗೆ ಒಂದಷ್ಟು ಮಾಹಿತಿಗಳನ್ನು ನೀಡಿದ್ದು,  ಸಲೂನ್, ಸ್ಪಾ ಎನ್ನುವುದು ಸಮಾಜದ ಕಣ್ಣಿಗೆ ಮಣ್ಣೆರಚುವ ತಂತ್ರವಷ್ಟೇ. ಹೊರನೋಟಕ್ಕೆ ಕಾಣುವ ಮುಖ ಒಂದು ರೀತಿಯಾದರೆ, ಇವುಗಳ ಒಳನೋಟದ ಚಿತ್ರಣವೇ ಬೇರೆ. ಇವುಗಳಿರುವ ಕಡೆಗಳಲ್ಲಿ ಸಮಾಜಮುಖಿ ಕಾರ್ಯಗಳಿಗಿಂತ ಹೆಚ್ಚಾಗಿ ಸಮಾಜದ್ರೋಹಿ ಕೆಲಸಗಳೇ ನಡೆಯುತ್ತವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಹೇಳುವುದಾದರೆ ಮೈಸೂರು ಮಾತ್ರವಲ್ಲದೆ, ಮಂಡ್ಯದಲ್ಲಿ ಇದೀಗ ಅನೈತಿಕ ಚಟುವಟಿಕೆ ಹೆಚ್ಚುತ್ತಿದ್ದು, ಸ್ಥಳೀಯರು ಎಚ್ಚೆತ್ತುಕೊಳ್ಳಬೇಕಿದೆ. ಇವತ್ತು ಬಂಧನವಾಗುವ ದಂಧೆಕೋರರು ನಾಳೆ ದಂಡಕಟ್ಟಿ, ಜಾಮೀನು ಪಡೆದು ಜೈಲಿನಿಂದ ಹೊರುತ್ತಾರೆ. ಆ ಬಳಿಕ ತಾವು ನಡೆಸುತ್ತಿದ್ದ ದಂಧೆಯನ್ನು ಬಿಟ್ಟು ಹೊಸದಾರಿ ಹಿಡಿಯುವುದಿಲ್ಲ. ಬದಲಿಗೆ ಮತ್ತೊಂದು ಕಡೆಗೆ ಹೋಗಿ ಇದೇ ದಂಧೆಯನ್ನು ಮಾಡುತ್ತಾರೆ. ಇಂತಹರಿಂದ ಹೆಣ್ಣು ಮಕ್ಕಳು ದೂರವಿದ್ದರೆ ಅವರ ಜೀವನ ಸುಖವಾಗಿರುತ್ತದೆ. ಇನ್ನಾದರೂ ಮಸಾಜ್ ಸೆಂಟರ್, ಪಾರ್ಲರ್ ಮುಂತಾದವುಗಳ ಬಗ್ಗೆ ಸಂಬಂಧಿಸಿದವರು ಗಮನಹರಿಸಬೇಕಿದೆ.

-ಬಿ.ಎಂ.ಲವಕುಮಾರ್

admin
the authoradmin

Leave a Reply