LatestMysore

ಶೂಟೌಟ್ ಗೆ ಬಲಿಯಾದವರು ಬೇಟೆಗಾರರೇ… ಹೀಗೆ ಹೇಳಿದ್ದು ಸಿಸಿಎಫ್ ಮಾಲತಿ ಪ್ರಿಯ

10 ವರ್ಷದಲ್ಲಿ 3289 ಅರಣ್ಯ ಅಪರಾಧ ಪ್ರಕರಣ ದಾಖಲು

ಚಾಮರಾಜನಗರ: ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಹನೂರು ಬಳಿಯ ಅರಣ್ಯದಲ್ಲಿ ನಡೆದಿದ್ದ ಮೂವರ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ವೃತ್ತದ ಮುಖ್ಯ ಅರಣ್ಯಾ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ ಅವರು ಸ್ಪಷ್ಟನೆ ನೀಡಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ನಡೆಸಿದ ಶೂಟೌಟ್ ನಲ್ಲಿ ಮೃತರಾದವರು ಬೇಟೆಗಾರರು ಎಂದು ಹೇಳಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಕಾವೇರಿ ವನ್ಯಜೀವಿಧಾಮದ  ಕಛೇರಿಯಲ್ಲಿ  ಚಾಮರಾಜನಗರ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ ಮಾತನಾಡಿ ಒಂದಷ್ಟು ಮಾಹಿತಿ ನೀಡಿದರು. ಆ.15 ರಂದು ಮುಂಜಾನೆ ಹನೂರು ತಾಲ್ಲೂಕಿನ ಮರಿಯಮಂಗಲ ಬೀಟ್ ನಲ್ಲಿ ಬೇಟೆಗಾರರು ಮೊದಲು ಅರಣ್ಯ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿದರು. ಬಳಿಕ ಅರಣ್ಯ ಸಿಬ್ಬಂದಿಗಳು ಪ್ರತಿ ದಾಳಿ ನಡೆಸಿದಾಗ ಮೂವರು ಮೃತಪಟ್ಟರು ಎಂದು ಹೇಳಿದರು.

ಅರಣ್ಯ ಸಿಬ್ಬಂದಿ ತಮ್ಮ ಆತ್ಮರಕ್ಷಣೆಗಾಗಿ ಬೇಟೆಗಾರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಚರ್ಚೆಗೆ ಗ್ರಾಸವಾಗಿದ್ದ ಹಿನ್ನಲೆಯಲ್ಲಿ ಸ್ಥಳದಲ್ಲಿ ದೊರೆತಿರುವ ಬಂದೂಕು, ಪ್ರಾಣಿಯ ಮಾಂಸ ಮತ್ತಿತ್ತರ ವಸ್ತುಗಳ ಆಧಾರದ ಮೇಲೆ ಮೃತರಾದವರು ಬೇಟೆಗಾರರು ಎಂದು ಖಚಿತಪಡಿಸಿಕೊಳ್ಳಲಾಯಿತು ಎಂದು ವಿವರಿಸಿದ್ದಾರೆ.

ಮೃತ ವ್ಯಕ್ತಿಗಳ ಕುಟುಂಬದವರು ಹೇಳಿದಂತೆ ಕಾಡಿನೊಳಗೆ ಹಸು ಹೋಗಿದೆ ಅದನ್ನು ಹುಡುಕಿಕೊಂಡು ಬರಲು ಹೋದವರ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಗುಂಡು ಹೊಡೆದಿದ್ದಾರೆ ಎನ್ನುವ ಆರೋಪವನ್ನು ತಳ್ಳಿ ಹಾಕಿದ ಮಾಲತಿ ಪ್ರಿಯ,  ಆ.15ರಿಂದ ಇಲ್ಲಿಯವರೆಗೂ ಕಾಡಿನಲ್ಲಿ ಹಸುವಿಗಾಗಿ ಕೂಡ ಶೋಧ ಕಾರ್ಯ ಮಾಡಿದ್ದೇವೆ. ಯಾವುದೇ ಹಸು ಪತ್ತೆಯಾಗಿಲ್ಲ, ಹಾಗೂ ಹಸುವಿನ ಕಳೇಬರ ಕೂಡ ಪತ್ತೆಯಾಗಿಲ್ಲ, ಈಗಲೂ ಕೂಡ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದರು.

ಶೂಟೌಟ್ ನಡೆದ ಬಳಿಕ ಇಲ್ಲಿಯ ತನಕ 8 ಕಳ್ಳಬೇಟೆ ತಡೆ ಶಿಬಿರ, 9 ವಸತಿ ಗೃಹ ಧ್ವಂಸವಾಗಿವೆ. 2 ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ ಎಂದು ತಿಳಿಸಿದ ಸಿಸಿಎಫ್ ಮಾಲತಿ ಪ್ರಿಯ, ಕಳೆದ 10 ವರ್ಷದ ಅವಧಿಯಲ್ಲಿ ಚಾಮರಾಜನಗರ ವೃತ್ತದಲ್ಲಿ 3289 ಅರಣ್ಯ ಅಪರಾಧ ಪ್ರಕರಣ ದಾಖಲಾಗಿದ್ದು,  ಈ ಪೈಕಿ 777 ವನ್ಯಜೀವಿ, 370 ಕಳ್ಳಬೇಟೆ, 66 ಫೈರಿಂಗ್ ಪ್ರಕರಣ ದಾಖಲಾಗಿದೆ ಎಂದು ಅಂಕಿ ಅಂಶ ನೀಡಿದರು.

ಶೂಟೌಟ್ ನಲ್ಲಿ ಮೃತಪಟ್ಟವರ ಮೇಲೆ ಯಾವುದೇ ಹಳೆಯ ಕೇಸ್ ಇಲ್ಲ, ಆದರೆ ನಾಪತ್ತೆಯಾಗಿರುವ ಮಹಿಮಾ ದಾಸ್ ಮೇಲೆ ಅಕ್ರಮ ಮೀನುಗಾರಿಕೆ ಪ್ರಕರಣವಿದೆ ಎಂದು ಮಾಲತಿ ಪ್ರಿಯಾ ಅವರು ಮಾಹಿತಿ ನೀಡಿದರು.

 

admin
the authoradmin

Leave a Reply