ಮಹಿಳೆಯೊಬ್ಬಳು ಸಹಚರರೊಂದಿಗೆ ಸೇರಿ ತನಗೆ ಅನ್ನ ಹಾಕಿದ ಕುಟುಂಬವನ್ನೇ ಅಕ್ರಮ ಬಂಧನದಲ್ಲಿಟ್ಟು ಬೆದರಿಸಿ ಅವರಿಂದ ಹಣ ಮತ್ತು ಚಿನ್ನವನ್ನು ಕಸಿದು ಎಸ್ಕೇಪ್ ಆಗಿರುವ ಘಟನೆ ಮೈಸೂರಿನ ಕುವೆಂಪುನಗರದಲ್ಲಿ ನಡೆದಿದ್ದು, ಈ ಘಟನೆ ಬಳಿಕ ಜನರು ಬೆಚ್ಚಿಬಿದ್ದಿದ್ದು ಹೀಗೂ ನಡೆಯುತ್ತಾ? ಎಂದು ಮಾತಾಡಿಕೊಳ್ಳುತ್ತಿದ್ದಾರೆ….
ಐಷಾರಾಮಿ ಜೀವನ ಸಾಗಿಸುವ ಸಲುವಾಗಿ ತಮ್ಮ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಕಮಿಟ್ ಮೆಂಟ್ ಗಳನ್ನು ಮಾಡಿಕೊಳ್ಳುತ್ತಿರುವ ಕೆಲವು ಮಹಿಳೆಯರು ಬಳಿಕ ಹಣ ಸಂಪಾದನೆಗಾಗಿ ಅಡ್ಡ ಮಾರ್ಗಗಳನ್ನು ಹಿಡಿದು ತಮ್ಮ ಸುಂದರ ಬದುಕನ್ನೇ ನಾಶ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಮೋಸ, ವಂಚನೆ, ಅಪಹರಣ, ಅನೈತಿಕ ವ್ಯವಹಾರ, ಕೊಲೆ ಮುಂತಾದ ಪ್ರಕರಣಗಳಲ್ಲಿ ಮಹಿಳೆಯರು ಹೆಚ್ಚಾಗಿ ಭಾಗಿಯಾಗುತ್ತಿರುವುದು ಆತಂಕಕಾರಿಯಾಗಿದೆ.
ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಎಂಬ ಮಾತನ್ನು ಹಿರಿಯರು ಸುಮ್ಮನೆ ಹೇಳಿಲ್ಲ. ಅನುಭವದಿಂದಲೇ ಹೇಳಿದ್ದಾರೆ. ತಮ್ಮ ಸಂಪಾದನೆಗೆ ತಕ್ಕಂತೆ ಖರ್ಚು ಮಾಡುತ್ತಾ ಇತಿಮಿತಿಯಲ್ಲಿ ಜೀವನ ಸಾಗಿಸುತ್ತಾ ಹೋದರೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ. ಆದರೆ ಇಲ್ಲಸಲ್ಲದ ಕಮಿಟ್ ಮೆಂಟ್ ಗಳನ್ನು ಮಾಡಿಕೊಂಡು ಸಾಲ ಕೊಡುತ್ತಾರೆ ಎಂಬ ಕಾರಣಕ್ಕಾಗಿ ಸಾಲ ಮಾಡಿ ಬಳಿಕ ಅದನ್ನು ತೀರಿಸಲು ಅನೈತಿಕ ಮಾರ್ಗಗಳನ್ನು ಹಿಡಿಯುವುದು ಇತ್ತೀಚೆಗೆ ಜಾಸ್ತಿಯಾಗುತ್ತಿದೆ.

ಮೊದಲೆಲ್ಲ ಅಲ್ಲೊಂದು ಇಲ್ಲೊಂದು ಎಂಬಂತೆ ಮಹಿಳೆಯರ ಮೇಲೆ ಅಪವಾದಗಳು ಬರುತ್ತಿದ್ದವು. ಆದರೀಗ ಬಹುತೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಮಹಿಳೆಯ ಸಹಭಾಗಿತ್ವ ಇರುವುದು ನಿಜಕ್ಕೂ ಸಮಾಜಕ್ಕೆ ಮಾರಕವಾಗಿದೆ. ಯುವತಿಯರಿಂದ ಆರಂಭವಾಗಿ ಮಹಿಳೆಯರ ತನಕ ನಿತ್ಯವೂ ಒಂದಲ್ಲ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಕಂಡು ಬರುತ್ತಿದೆ. ಅದರಲ್ಲೂ ಅಡ್ಡದಾರಿ ಹಿಡಿದು ಬದುಕುತ್ತೇನೆಂದು ಹೊರಡುತ್ತಿರುವುದು ಮಾತ್ರ ಒಳ್ಳೆಯ ಬೆಳವಣಿಗೆಯಲ್ಲ.
ಮೊದಲೆಲ್ಲ ಸಿನಿಮಾಗಳಲ್ಲಿ ಮಾತ್ರ ಲೇಡಿಡಾನ್ ಗಳನ್ನು ನೋಡುತ್ತಿದ್ದವು. ಆದರೀಗ ಹಣಕ್ಕಾಗಿ ಮಹಿಳೆಯರು ಡಾನ್ ಗಳಂತೆ ವರ್ತಿಸಿ ಅಮಾಯಕರ ಬದುಕಿಗೆ ಕೊಳ್ಳಿಯಿಡುತ್ತಿದ್ದಾರೆ. ಹೀಗಾಗಿ ಯಾರನ್ನೂ ಯಾರು ನಂಬದ ಸ್ಥಿತಿಗೆ ಬಂದು ತಲುಪುವಂತಾಗಿದೆ. ಇದೀಗ ಮೈಸೂರಿನಲ್ಲಿ ದಂಪತಿಯನ್ನು ಪರಿಚಿತ ಮಹಿಳೆ ಉಪಾಯವಾಗಿ ಮನೆಗೆ ಕರೆಯಿಸಿಕೊಂಡು ಅವರನ್ನು ಅಕ್ರಮಗಾಗಿ ಮನೆಯ ಕೊಠಡಿಯಲ್ಲಿ ಕೂಡಿ ಹಾಕಿ ಬಳಿಕ ಅವರ ಮಕ್ಕಳನ್ನು ಶಾಲೆಯಿಂದ ಕರೆತಂದು ಮನೆಯಲ್ಲಿಟ್ಟು ಬೆದರಿಸಿ ಹಣ ಮತ್ತು ಚಿನ್ನವನ್ನು ಕಸಿದುಕೊಂಡು ಕೊಲೆ ಬೆದರಿಕೆ ಹಾಕಿ ಬಿಡುಗಡೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆಯ ಬಳಿಕ ಯಾರನ್ನು ನಂಬಬೇಕು ಎನ್ನುವುದೇ ತಿಳಿಯದಂತಾಗಿದೆ. ಇವತ್ತು ದಂಪತಿಯನ್ನು ತನ್ನ ಸಹಚರರ ಸಹಕಾರದಿಂದ ಅಪಹರಿಸಿದ ಮಹಿಳೆಯ ಮುಖವನ್ನು ನೋಡಿದರೆ ಯಾರಿಗೂ ಆಕೆ ಒಬ್ಬಳು ಕ್ರಿಮಿನಲ್ ಮೈಂಡ್ ನ ಲೇಡಿ ಎಂದು ಊಹೆ ಮಾಡುವುದೇ ಕಷ್ಟವಾಗುತ್ತದೆ. ಸಭ್ಯಸ್ಥ ಮಹಿಳೆಯಂತೆ ಕಾಣುವ ಈಕೆ ಮಾಡಿರುವುದು ಮಾತ್ರ ಅಸಹ್ಯ ಮತ್ತು ಭಯಹುಟ್ಟಿಸುವ ಕೆಲಸವಾಗಿದೆ. ಇಷ್ಟಕ್ಕೂ ಏನಿದು ಅಪಹರಣದ ಕಥೆ? ಆಗಿದ್ದೇನು? ಎಂಬುದನ್ನು ನೋಡುತ್ತಾ ಹೋದರೆ ಮಹಿಳೆಯೊಬ್ಬಳ ಕ್ರಿಮಿನಲ್ ಚಟುವಟಿಕೆ ಬಯಲಾಗುತ್ತಾ ಹೋಗುತ್ತದೆ.

ದಂಪತಿ, ಮಕ್ಕಳನ್ನು ಅಪಹರಿಸಿ ಮನೆಯಲ್ಲಿ ಕೂಡಿಟ್ಟು ಹಣ ಮತ್ತು ಚಿನ್ನಾಭರಣವನ್ನು ಕಿತ್ತುಕೊಂಡು ಪರಾರಿಯಾಗಿರುವ ಕ್ರಿಮಿನಲ್ ಲೇಡಿಯ ಹೆಸರು ರಮ್ಯಾ…. ಕುವೆಂಪುನಗರ ಕೆಹೆಚ್ ಬಿ ಕಾಲೋನಿಯ ನಿವಾಸಿಯಾಗಿರುವ ಈಕೆ ನೋಡಲು ಸುಂದರ ಲೇಡಿಯಾಗಿದ್ದು, ಆ ಸುಂದರತೆ ಹಿಂದೆ ಕ್ರಿಮಿನಲ್ ಬುದ್ದಿ ಇದೆ ಎನ್ನುವುದನ್ನು ತಕ್ಷಣಕ್ಕೆ ಯಾರಿಗೂ ಒಪ್ಪಿಕೊಳ್ಳುವುದು ಕಷ್ಟವೇ… ಈಕೆ ನ್ಯಾಯಯುತವಾಗಿ ಜೀವನ ಮಾಡಿಕೊಂಡು ಹೋಗಿದ್ದರೆ ಇವತ್ತು ಅಪಹರಣದಂತಹ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಳ್ಳಬೇಕಾದ ಪ್ರಮೇಯ ಬರುತ್ತಿರಲಿಲ್ಲವೇನೋ?
ರಮ್ಯಾ ಖತರ್ನಾಕ್ ಲೇಡಿಯಾಗಿದ್ದು, ಐಷಾರಾಮಿ ಜೀವನ ಸಾಗಿಸುವ ಸಲುವಾಗಿ ಹಲವು ಕಡೆಗಳಲ್ಲಿ ಸಾಲ ಮಾಡಿಕೊಂಡಿದ್ದಳು. ಅಲ್ಲದೆ ಚೆಕ್ ಬೌನ್ಸ್ ಕೇಸ್ ಗಳು ಆಕೆಯನ್ನು ಸುತ್ತಿಕೊಂಡಿದ್ದವು. ಹೀಗಾಗಿ ಸಾಲ ತೀರಿಸುವ ಸಲುವಾಗಿ ಎಲ್ಲರ ತಲೆ ಸವರುತ್ತಿದ್ದ ಈಕೆಯ ಮೇಲೆ ಸಿನಿಮಾದಲ್ಲಿ ಕಿಡ್ನಾಪ್ ಮಾಡಿ ಲಕ್ಷಾಂತರ ಹಣ ವಸೂಲಿ ಮಾಡುವ ಸೀನ್ ಪ್ರಭಾವ ಬೀರಿತ್ತು. ಆದರೆ ಸಿನಿಮಾದಲ್ಲಿ ಮಾಡುವಂತೆ ಮಕ್ಕಳನ್ನು ಕಿಡ್ನಾಪ್ ಮಾಡಿ ಹೆತ್ತವರಿಂದ ಹಣ ವಸೂಲಿ ಮಾಡುವುದು ಇವತ್ತಿನ ಮಟ್ಟಿಗೆ ಕಷ್ಟವೇ ಆಗಿತ್ತು.

ಆದರೆ ಪರಿಚಿತರು ಒಂದಷ್ಟು ಹಣವಿರುವ ಕುಟುಂಬವನ್ನು ಟಾರ್ಗೆಟ್ ಮಾಡಿ ಅವರನ್ನು ಅಪಹರಿಸಿ ಬಳಿಕ ಹೆದರಿಸಿ ಹಣ ವಸೂಲಿ ಮಾಡಿದರೆ ಅವರು ಮಾರ್ಯಾದೆಗೆ ಅಂಜಿ ಪೊಲೀಸ್ ಗೆ ದೂರು ನೀಡಲ್ಲ ತಾವು ಸೇಫ್ ಆಗಿರ ಬಹುದು ಎಂಬ ಐಡಿಯಾ ರಮ್ಯಾಳಿಗೆ ಬಂದಿತ್ತು. ಹೀಗಾಗಿಯೇ ಆಕೆ ರಾಮಕೃಷ್ಣ ನಗರದ ಇ ಎಂಡ್ ಎಫ್ ಬ್ಲಾಕ್ ನಿವಾಸಿಗಳಾದ ಸುನಿತಾ, ಗಣೇಶ್ ದಂಪತಿ ಮತ್ತು ಮಕ್ಕಳ ಮೇಲೆ ಕಣ್ಣಿಟ್ಟಿದ್ದಳು.
ಈ ಕುಟುಂಬದ ಬಗ್ಗೆ ಆಕೆಗೆ ಚೆನ್ನಾಗಿಯೇ ಗೊತ್ತಿತ್ತು. ಹಿಂದಿನಿಂದಲೂ ಇವರೊಂದಿಗೆ ಒಡನಾಟ ಹೊಂದಿದ್ದಳು. ರಮ್ಯಾ ಸಭ್ಯಸ್ಥ ಹೆಂಗಸು ಎಂದು ಅವರು ನಂಬಿದ್ದರು. ಮನೆಗೆ ಹೋಗಿ ಬರುತ್ತಿದ್ದರು. ಹಾಗಾಗಿ ಸುನೀತಾ ಗಣೇಶ್ ದಂಪತಿಗೆ ಮಾತ್ರವಲ್ಲದೆ ಅವರ ಮಕ್ಕಳಿಗೂ ರಮ್ಯಾ ಪರಿಚಿತಳಾಗಿದ್ದಳು. ಅಲ್ಲದೆ ಅವರೊಂದಿಗ ಹಣಪಡೆಯುವುದು ಕೊಡುವುದು ಹೀಗೆ ವ್ಯವಹಾರ ಮಾಡುತ್ತಿದ್ದರಿಂದ ನಂಬಿಕೆಯೂ ಇತ್ತು. ಆದರೆ ರಮ್ಯಾ ತಮ್ಮ ಬುಡಕ್ಕೆ ಬಿಸಿನೀರು ಸುರಿಯುತ್ತಾರೆ ಎಂಬ ಚಿಕ್ಕ ಅನುಮಾನವೂ ಆ ದಂಪತಿಗೆ ಬಂದಿರಲಿಲ್ಲ.
ಏಕೆಂದರೆ ಇದೇ ರಮ್ಯಾ ಈ ಹಿಂದೆ ಸಂಕಷ್ಟದಲ್ಲಿ ಸಿಲುಕಿದಾಗ ಇದೇ ಸುನೀತಾ ಮನೆಯಲ್ಲಿ ತಿಂಗಳ ಕಾಲ ವಾಸ್ತವ್ಯ ಹೂಡಿದ್ದಳು. ಈ ವೇಳೆ ಸುನೀತಾ ದಂಪತಿಯ ಆರ್ಥಿಕ ವ್ಯವಹಾರ, ಅವರ ಬಳಿಯಿರುವ ಚಿನ್ನಾಭರಣ ಹೀಗೆ ಎಲ್ಲದರ ಬಗ್ಗೆಯೂ ಅವಳು ತಿಳಿದುಕೊಂಡಿದ್ದಳು. ಆದ್ದರಿಂದ ಅವರನ್ನೇ ಟಾರ್ಗೆಟ್ ಮಾಡಿದರೆ ಸುಲಭವಾಗಿ ಲಕ್ಷಾಂತರ ರೂಪಾಯಿ ಹಣವನ್ನು ಪೀಕಬಹುದು ಆ ಮೂಲಕ ತಾನು ಸಾಲದಿಂದ ಮುಕ್ತಿಹೊಂದಬಹುದು ಎಂಬ ತೀರ್ಮಾನಕ್ಕೆ ಬಂದಿದ್ದಳು. ಈಗಾಗಲೇ ಸಾಲಗಾರರ ಕಾಟ ಮತ್ತು ಚೆಕ್ ಬೌನ್ಸ್ ಕೇಸ್ ಗಳನ್ನು ಎದುರಿಸುತ್ತಿದ್ದ ಆಕೆ ಕ್ರಿಮಿನಲ್ ಐಡಿಯಾದಿಂದಲೇ ಲೈಫ್ ಸೆಟ್ಲ್ ಮಾಡಿಕೊಳ್ಳುವ ತೀರ್ಮಾನ ಮಾಡಿಯಾಗಿತ್ತು.

ಒಂದಿಡಿ ಕುಟುಂಬವನ್ನು ಮನೆಯಲ್ಲಿ ಅಕ್ರಮವಾಗಿ ಕೂಡಿ ಹಾಕಿ ಹಣ ವಸೂಲಿ ಮಾಡುವುದು ಒಬ್ಬ ಮಹಿಳೆಯಿಂದ ಸಾಧ್ಯವಿಲ್ಲ ಎಂಬುದು ರಮ್ಯಾಳಿಗೆ ಗೊತ್ತಿತ್ತು. ಹೀಗಾಗಿ ಅವಳು ಸಹಾಯಕ್ಕಾಗಿ ಮತ್ತೊಬ್ಬಳು ಲೇಡಿ ಡಾನ್ ನಂತಿರುವ ಮಂಜುಳಾ ಹಾಗೂ ರಾಮು ಅಲ್ಲದೆ ಮತ್ತೊಬ್ಬ ವ್ಯಕ್ತಿಯನ್ನು ಕರೆಯಿಸಿಕೊಂಡು ತಾನು ಹಾಕಿರುವ ಸ್ಕೆಚ್ ಬಗ್ಗೆ ಹೇಳಿದ್ದಾಳೆ. ಅವರು ಇವಳದ್ದೇ ಕ್ಯಾಟಗರಿಯವರು ಆಗಿರುವುದರಿಂದ ಕ್ಯಾಕರಿಸಿ ಉಗಿದು ಬುದ್ದಿ ಹೇಳುವ ಬದಲಿಗೆ ರಮ್ಯಾಳ ಜತೆಗೆ ಕೈಜೋಡಿಸಿದ್ದಾರೆ.
ಡೀಲ್ ನ್ನು ಎಲ್ಲಿ? ಹೇಗೆ? ಏನು ಮಾಡಬೇಕು ಎಂಬುದ ಬಗ್ಗೆ ಪ್ಲಾನ್ ಮಾಡಿಕೊಂಡ ಖತರ್ ನಾಕ್ ರಮ್ಯಾಳ ತಂಡ ಕುವೆಂಪು ನಗರದ ಕೆಹೆಚ್ ಬಿ ಕಾಲೋನಿಯಲ್ಲಿರುವ ಮನೆಯಲ್ಲಿಯೇ ಮಾಡಲು ಸ್ಕೆಚ್ ಹಾಕಿದ್ದು ಅದರಂತೆ ಜುಲೈ 30ರಂದು ಗಣೇಶ್ ಗೆ ಫೋನ್ ಮಾಡಿದ ರಮ್ಯಾ ತನ್ನ ಮನೆಗೆ ಅರ್ಜೆಂಟ್ ಬರುವಂತೆ ಹೇಳಿದ್ದಾಳೆ. ಹಾಗೆಯೇ ಆತನ ಹೆಂಡತಿ ಸುನೀತಾಳಿಗೂ ಬರುವಂತೆ ಹೇಳಿದ್ದಾಳೆ.
ರಮ್ಯಾ ಮೊದಲಿನಿಂದಲೂ ಪರಿಚಯ ಇರುವ ಕಾರಣದಿಂದಾಗಿ ಹಿಂದೆ ಮುಂದೆ ಆಲೋಚಿಸದೆ ಗಣೇಶ್ ನೇರವಾಗಿ ರಮ್ಯಾಳ ಮನೆಗೆ ಬಂದಿದ್ದಾನೆ. ಆತ ಮನೆಯೊಳಗೆ ಬರುತ್ತಿದ್ದಂತೆಯೇ ಅಲ್ಲಿದ್ದ ಗ್ಯಾಂಗ್ ಅವನ ಮೊಬೈಲ್ ಕಸಿದುಕೊಂಡು ಒಂದು ರೂಂನಲ್ಲಿ ಕೂಡಿ ಹಾಕಿದೆ. ಇದಾದ ನಂತರ ಸುನೀತಾ ಬಂದಾಗಲೂ ಇದೇ ರೀತಿ ಮಾಡಿದೆ. ರಮ್ಯಾಳ ಈ ವರ್ತನೆಗೆ ಅವರಿಬ್ಬರು ಶಾಕ್ ಆಗಿದ್ದಾರೆ. ಇದಾದ ನಂತರ ಮಧ್ಯಾಹ್ನ 1ಗಂಟೆ ವೇಳೆಗೆ ಸುನೀತಾ, ಗಣೇಶ್ ದಂಪತಿ ಮಕ್ಕಳು ಓದುತ್ತಿದ್ದ ಶಾಲೆಗೆ ಹೋಗಿ ಐದು ವರ್ಷದ ಮಗಳು ಮತ್ತು 13 ವರ್ಷದ ಮಗನನ್ನು ಶಾಲೆಯಿಂದ ನಿಮ್ಮ ಅಪ್ಪ ಅಮ್ಮ ನಮ್ಮ ಮನೆಯಲ್ಲಿದ್ದಾರೆ ಬನ್ನಿ ಎಂದು ಕರೆದಿದ್ದಾರೆ. ಮೊದಲೇ ರಮ್ಯಾಳ ಪರಿಚಯವಿದ್ದ ಕಾರಣದಿಂದ ಮಕ್ಕಳು ಅವರೊಂದಿಗೆ ಬಂದಿದ್ದಾರೆ.

ಇಷ್ಟಾದ ನಂತರ ಇಡೀ ಕುಟುಂಬನ್ನು ತನ್ನ ಮನೆಯಲ್ಲಿ ಅಕ್ರಮವಾಗಿ ಕೂಡಿ ಹಾಕಿಕೊಂಡ ರಮ್ಯಾ ಅಂಡ್ ಟೀಮ್ ಅವರಿಗೆ 20ಲಕ್ಷ ರೂಪಾಯಿ ಕೊಡುವಂತೆ ಡಿಮ್ಯಾಂಡ್ ಮಾಡಿದ್ದು ಕೊಡದೆ ಹೋದರೆ ನಿಮ್ಮ ಯಾರನ್ನೂ ಇಲ್ಲಿಂದ ಬಿಡಲ್ಲ ಎಂದು ಬೆದರಿಕೆ ಹಾಕಿದೆ. ಮಕ್ಕಳನ್ನು ಹೆದರಿಸಿ, ಬೆದರಿಸಿದ್ದಲ್ಲದೆ, ಗಣೇಶ್ ಮೇಲೆ ರೇಪ್ ಕೇಸ್ ಹಾಕುತ್ತೇನೆ ಬಟ್ಟೆ ಬಿಚ್ಚಿ ಬೆತ್ತಲೆಯಾಗಿ ಮನೆಯಿಂದ ಓಡಿಸುತ್ತೇನೆ ಎಂದೆಲ್ಲ ಹೆದರಿಸಿದೆ. ಹೀಗಾಗಿ ಮಾನ ಮರ್ಯಾದೆಗೆ ಅಂಜಿದ ಗಣೇಶ್ ಮತ್ತು ಸುನೀತಾ ತಮ್ಮ ಬಳಿಯಿದ್ದ 50 ಸಾವಿರ ಹಣ ಮತ್ತು 51ಗ್ರಾಂನ ಚಿನ್ನದ ಬ್ರಾಸ್ ಲೇಟ್ ನ್ನು ನೀಡಿದ್ದಾರೆ. ಇದಾದ ನಂತರ ಸಂಜೆ 4.30ರ ವೇಳೆಗೆ ಅವರನ್ನು ರಮ್ಯಾ ಅಂಡ್ ಟೀಮ್ ಬಿಡುಗಡೆ ಮಾಡಿದೆ. ಅಕ್ರಮ ಬಂಧನದಿಂದ ತಪ್ಪಿಸಿಕೊಂಡು ಬಂದ ಗಣೇಶ್ ಕುಟುಂಬ ನೆಮ್ಮದಿಯುಸಿರು ಬಿಟ್ಟಿದೆ. ಆದರೆ ಮಕ್ಕಳು ಮಾತ್ರ ಆ ಆಘಾತದಿಂದ ಹೊರ ಬರದೆ ಮೌನಕ್ಕೆ ಶರಣಾಗಿದ್ದಾರೆ.
ರಮ್ಯಾ ಅಂಡ್ ಟೀಮ್ ಹೆದರಿಸಿದ್ದರಿಂದ ಮತ್ತು ಮಾನಮರ್ಯಾದೆಗೆ ದಂಪತಿ ಅಂಜಿ ಪೊಲೀಸ್ ಠಾಣೆಗೆ ಹೋಗದೆ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಆದರೆ ಭಯಭೀತರಾದ ಮಕ್ಕಳು ಶಾಲೆಗೆ ಹೋಗಲು ಭಯಪಡಲು ಶುರು ಮಾಡಿದಾಗ ದಂಪತಿಗ ಬೇರೆ ದಾರಿಕಾಣದೆ ನೇರವಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ ಎಸ್ ಆಶಾ ಅವರನ್ನು ಭೇಟಿ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಅವರು ಸುನಿತಾ ಮತ್ತು ಗಣೇಶ್ ನೀಡಿದ ಮಾಹಿತಿ ಆದರಿಸಿ ಕುವೆಂಪು ನಗರ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದಾರೆ. ಅದರಂತೆ ಕುವೆಂಪುನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಘಟನೆಯ ಬಳಿಕ ರಮ್ಯಾ ಅಂಡ್ ಟೀಮ್ ನಾಪತ್ತೆಯಾಗಿದೆ. ಇದೇ ಮೊದಲಾ ಅಥವಾ ಈ ಹಿಂದೆ ಇದೇ ರೀತಿ ಬೇರೆ ಯಾರಿಗಾದರೂ ಮಾಡಿದೆಯಾ? ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗ ಬೇಕಾಗಿದೆ. ಇವತ್ತಲ್ಲ ನಾಳೆ ಖತರ್ ನಾಕ್ ರಮ್ಯಾ ಅಂಡ್ ಟೀಮ್ ಖಾಕಿ ಬಲೆಗೆ ಬೀಳಲಿದ್ದು ಪೊಲೀಸ್ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದಾಗ ಎಲ್ಲವನ್ನು ಕಕ್ಕುವ ಸಾಧ್ಯತೆಯಿದೆ. ಜನರೇ ಎಚ್ಚರ.. ಎಚ್ಚರ.. ಇಂತಹ ಕ್ರಿಮಿನಲ್ ಗಳು ನಿಮ್ಮ ಸುತ್ತಲೂ ಇರಬಹುದು ಹುಷಾರ್!
-ಬಿ.ಎಂ.ಲವಕುಮಾರ್








