ArticlesLatest

ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ, “ಕುಮಾರಕವಿ” ಬಿರುದಾಂಕಿತ ಬಿ.ಎನ್.ನಟರಾಜ್

ಜನಮನ ಕನ್ನಡ ಆರಂಭದಿಂದ ಇಲ್ಲಿವರೆಗೂ ಸದಾ ಒಂದಲ್ಲ ಒಂದು ರೀತಿಯ ಲೇಖನಗಳನ್ನು ಬರೆಯುತ್ತಾ ಬಂದಿರುವ ಕುಮಾರಕವಿ ನಟರಾಜ್ ಅವರು ದಣಿವರಿಯದ ಅಕ್ಷರ ಜೀವಿ.. ಅವರು ವೃತ್ತಿ ಬದುಕಿನ ಒತ್ತಡದ ನಡುವೆಯೂ ಪ್ರವೃತ್ತಿಯಾಗಿ ಬರವಣಿಗೆಯನ್ನು ಉಸಿರಿನಂತೆ ಪ್ರೀತಿಸಿದವರು.. ಉದ್ಯೋಗಕ್ಕೆ ವಿಶ್ರಾಂತಿ ಸಿಕ್ಕರೂ ಬರವಣಿಗೆಗೆ ವಿಶ್ರಾಂತಿ ನೀಡಿಲ್ಲ.. ಹೀಗಾಗಿಯೇ ಅವರಿಗೆ ಸರಾಗವಾಗಿ ಬರೆಯಲು ಸಾಧ್ಯವಾಗಿದೆ… ಅವರ ಬಗ್ಗೆ ಇಲ್ಲಿ ಲೇಖಕ ಕಾಳಿಹುಂಡಿ ಶಿವಕುಮಾರ್ ಒಂದಷ್ಟು ವಿಚಾರವನ್ನು ಹಂಚಿಕೊಳ್ಳುತ್ತಾ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ… ಸರ್ಕಾರ ಈ ಬಗ್ಗೆ ಗಮನಹರಿಸುವಂತಾಗಲಿ… ಇದು ನಮ್ಮ ಆಶಯವೂ ಹೌದು!

ಇವರ ಹೆಸರು ಬಿ.ಎನ್.ನಟರಾಜ. ರಾಷ್ಟ್ರಕವಿ ಕುವೆಂಪು ರವರಿಂದ 1969 ರಲ್ಲಿ “ಕುಮಾರಕವಿ” ಎಂದು ಕರೆಸಿ ಕೊಂಡವರು. ಅಲ್ಲಿಂದ ಈ ದಿನದವರೆಗೆ ಇವರ ಸಾಧನೆ ಅಪಾರವಾದದ್ದು. ಮೂಲತಃ ಇವರು ಮೈಸೂರಿನ ರಾಮಕೃಷ್ಣನಗರದ ನಿವಾಸಿ. ಸಧ್ಯಕ್ಕೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇವರು ಇತ್ತೀಚಿಗೆ ಮೈಸೂರಿಗೆ ಬಂದಿದ್ದಾಗ ನಾನು ಇವರನ್ನು ಭೇಟಿ ಮಾಡಿದಾಗ ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡಿದರು ಮೈಸೂರಿನ ಪಾರಂಪರಿಕ ಕಟ್ಟಡ ರಾಜ ಮಹಾರಾಜರು ಸ್ಥಳಗಳ ಬಗ್ಗೆ ಅಪಾರ ಜ್ಞಾನವನ್ನು ಪಡೆದಿದ್ದಾರೆ. ಇಳಿ ವಯಸ್ಸಿನಲ್ಲೂ ಕೂಡ ಅವರ ಸಾಹಿತ್ಯದ ಜೊತೆಗೆ, ಅನೇಕ ಗಣ್ಯ ವ್ಯಕ್ತಿಗಳ ಒಡನಾಟ ಮೆಚ್ಚುವಂತದ್ದು.

72 ವರ್ಷ ವಯಸ್ಸಿನ ನಟರಾಜರವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ (1977-2014) ನಿವೃತ್ತರಾಗಿದ್ದಾರೆ. ಇವರ ಹವ್ಯಾಸಗಳು ಒಂದೇ? ಎರಡೇ? ಬಾಲ್ಯದಿಂದಲೇ ಕನ್ನಡಾಭಿಮಾನಿ, ಸಾಹಿತ್ಯಾಭಿಮಾನಿ. ಕನ್ನಡ ನಾಡು-ನುಡಿ ಸಂಸ್ಕೃತಿಗೆ ಒಂದಲ್ಲ ಒಂದು ರೀತಿಯಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಜೊತೆಗೆ ಸಾವಿರಾರು ಪುಸ್ತಕಗಳನ್ನ ಓದಿದ್ದರ ಫಲವಾಗಿ ಇವರು ಒಬ್ಬ ಕವಿಯಾಗಿ, ಲೇಖಕರಾಗಿ ಅನೇಕ ಪುಸ್ತಕಗಳನ್ನು ಕೂಡ ಬರೆದಿದ್ದಾರೆ. ಜೊತೆಗೆ ತಮ್ಮ ಚಿಂತನೆಯ ಮಾತುಗಳು ಅನೇಕ ವೇದಿಕೆಗಳಲ್ಲಿ, ಶಾಲಾ-ಕಾಲೇಜು ತರಗತಿಗಳಲ್ಲಿ, ಭಾಷಣದ ರೂಪದಲ್ಲಿ ಹೊರಬಂದಿವೆ. ಜೊತೆಗೆ ಅನೇಕ ಕಾರ್ಯಗಾರಗಳಲ್ಲೂ ಕೂಡ ಇವರು ಭಾಗಿಯಾಗಿದ್ದಾರೆ.

ಇವರ ಸಾಧನೆಯನ್ನ ನಾವು ಅಂಕಿ-ಅಂಶಗಳ ಮೂಲಕ ನೋಡಬಹುದು. ಎಲ್ಲವನ್ನು ದಾಖಲಿಕರಿಸಿದ್ದಾರೆ. ಜೊತೆಗೆ ಅನೇಕ ಬ್ಲಾಗಗಳಲ್ಲಿ, ಯೂಟ್ಯೂಬ್ ಗಳಲ್ಲಿ ಇವರ ಲೇಖನಗಳು, ಮಾತುಗಳು ಎಲ್ಲವೂ ಸಾವಿರಾರು ಜನರ ಮನೆ-ಮನ ತಲುಪಿವೆ.

ಸರಳ ಸಜ್ಜನಿಕೆ ವ್ಯಕ್ತಿತ್ವವುಳ್ಳ ಇವರು ಈಗಲೂ ಕೂಡ ನಿಯತಕಾಲಿಕೆಗಳಲ್ಲಿ ಅನೇಕ ವೈಚಾರಿಕ ಲೇಖನಗಳನ್ನು ಬರೆಯುತ್ತಾ ಬಂದಿದ್ದಾರೆ. ಅವುಗಳಲ್ಲಿ ಸಿನಿಮಾ, ಸಾಹಿತ್ಯ, ಸಂಗೀತ, ಆಧ್ಯಾತ್ಮ ಮುಂತಾದ ವಿಷಯಗಳಿಗೂ ಸೇರಿವೆ. ಇವರು ಅನೇಕ ಕವಿಗಳ, ಲೇಖಕರ ಒಡನಾಡಿಯಾಗಿದ್ದಾರೆ. ಜೊತೆಗೆ ಅವರೊಟ್ಟಿಗೆ ಬೆರೆಯುವ ಎಲ್ಲವನ್ನ ಹಂಚಿಕೊಳ್ಳುವ ವ್ಯಕ್ತಿತ್ವವನ್ನು ಕೂಡ ಹೊಂದಿದ್ದಾರೆ. ಇವರು ಮೈಸೂರು ಮತ್ತು ಬೆಂಗಳೂರಿನಲ್ಲಿ ಅನೇಕ ಸ್ಥಳಗಳ ವ್ಯಕ್ತಿಗಳ ಮಾಹಿತಿಗಳನ್ನ ಕೇಳಿದರೆ ಸಾಕು ಪಟಪಟನೆ ಹೇಳುತ್ತಾರೆ.

ಎಲ್ಲವನ್ನು ತಿಳಿದು ಕೊಂಡಿರುವುದರ ಜೊತೆಗೆ ಅದು ಮತ್ತಷ್ಟು ಜನರಿಗೆ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ನಮ್ಮ ಕನ್ನಡ ನಾಡು-ನುಡಿ,ಸಂಸ್ಕೃತಿಗೆ ಇವರ ಕೊಡುಗೆ ಅಪಾರ. ಇವರ ಸಾಹಿತ್ಯಕೃಷಿ, ಅನೇಕರೊಡನೆ ಒಡನಾಟ ಗಳಿಸಿದ ಬಹುಮಾನ ಬಿರುದು ಪ್ರಶಸ್ತಿ-ಸನ್ಮಾನ ಹೀಗೆ ಎಲ್ಲವುಗಳ ಬಗ್ಗೆ ಚಿಕ್ಕದಾಗಿ ಮೆಲುಕು ಹಾಕೋಣ.

ಇವರು ಬರೆದಿರುವ ಪುಸ್ತಕ/ಪ್ರಕಟಿತ ಕೃತಿಗಳು: (1977-2025ವರೆಗೆ) ಕವನಸುಧೆ, ಕಪ್ಪುಸಮುದ್ರ, ಕಸ್ತೂರಿ, ಕನ್ನಡಡಿಂಡಿಮ, ಕಲ್ಲುಸಕ್ಕರೆ, ಮಕ್ಕಳಮಿಠಾಯಿ, ಅಸೂಯೆಫಲ, ಸಂಗಾತಿ, ದುಂಬಿಯೆರಡುಹೂವೊಂದು, ಅನುಭವಾಮೃತಅನರ್ಘ್ಯರತ್ನ, ಕೊಡಲಿ, ಆಧುನಿಕಪಾಂಚಾಲಿ, ಹೂಗೊಂಚಲು, ಮರೆಯಲಾರದ ಮಹಾನುಭಾವರು, ದೊಡ್ಡವರ ಸಣ್ಣತನಗಳು, ಕನ್ನಡವೆನ್ನುವ ಕನ್ನಡೇತರಪದಕೋಶ, ಅ-ಸಾಮಾನ್ಯಜ್ಞಾನ, ಅವಲೋಕನ, ಅರಳಿದಮೊಗ್ಗುಗಳು, ಆಶಾಕಿರಣ(ಸಂ) ಕನ್ನಡಫಿಲಂಡೈರೆಕ್ಟರಿ-1 (ಸಮಗ್ರ ಕನ್ನಡ ಚಿತ್ರಾವಲೋಕನ), ಚಂದನವನ ಚರಿತ್ರೆ (5 ಸಂಪುಟಗಳು). ಇವರು ಬರೆದಿರುವ ಪ್ರತಿಯೊಂದು ಸಾಹಿತ್ಯವೂ ಕೂಡ  ಸಂಗ್ರಹ ಯೋಗ್ಯ ಮಾಹಿತಿಯನ್ನು ನೀಡುತ್ತವೆ. ಪ್ರತಿಯೊಬ್ಬರ ಗ್ರಂಥಾಲಯಗಳಲ್ಲು ಇಂತಹ ಪುಸ್ತಕಗಳು ಇರಬೇಕು. ಇತರರೊಡನೆ ಸೇರಿ ಬರೆದ ಕೃತಿಗಳು ಕೂಡ ಅನೇಕ ಇವೆ.

ಅನನ್ಯ, ಅನ್ವೇಷಣೆ, ಹೆಜ್ಜೆಮೂಡದಹಾದಿ, ಶತಮಾನ, ಕಾವ್ಯಕುಸುಮ, ಮಾವುಬೇವು, ಮನಸುಗಳಮಂಥನ, ವಸಂತ, ರಾಜಕುಮಾರ್ ಗೀತಮಾಲೆ, ಡಾ.ರಾಜ್‌ ಅಭಿಮಾನಿಗಳ ಚುಟುಕು, ಕಲಾತಪಸ್ವಿ, ಅಭಿನವ ಸಾಮ್ರಾಟ್ ಡಾ.ಪುನೀತ್ (ಅಪ್ಪು), ಕನ್ನಡಕಿರಣ, ಕನ್ನಡಶಿಲ್ಪಿಗಳು, ಕನ್ನಡಪ್ರಭುತ್ವ, ಗುಲಾಬಿಗುಚ್ಛ, ಹೊಂಗಿರಣ, ಗೆಜ್ಜೆನಾದ, ಪೈರುಪಚ್ಚೆತೆನೆ, ಹೊಂಬಾಳೆ, ಕಾವ್ಯಮಾಧುರ್ಯ, ಅಮೃತಬಿಂದು, ಕಾವ್ಯಲಹರಿ, ಸಾಹಿತ್ಯಮಂದಾರ, ಮಾಧುರಿ, ಮಧುರವಾಣಿ, ಭಗೀರಥ, ನಿಜಶರಣ, ಮಣ್ಣಿನಹಣತೆ, ಮುಂತಾದವುಗಳು.

ಇವರ ಮತ್ತೊಂದು ದಾಖಲೆಯ ವಿಷಯ ಎಂದರೆ ಒಬ್ಬ ವ್ಯಕ್ತಿ ಒಂದು ಸ್ಥಳೀಯ ಭಾಷೆ ಅಂದರೆ ಉದಾಹರಣೆಗೆ ಕನ್ನಡ ಈ ಭಾಷೆಯಲ್ಲಿ ಸುಮಾರು 2000ಕ್ಕೂ ಹೆಚ್ಚು ಲೇಖನಗಳನ್ನು ಬರೆಯುವುದರ ಮೂಲಕ ದಾಖಲೆಯನ್ನು ಸ್ಥಾಪಿಸಿದ್ದಾರೆ. ಒಬ್ಬ ವ್ಯಕ್ತಿ ಸಾಮಾನ್ಯವಾಗಿ 800 ಲೇಖನಗಳನ್ನ ಬರೆದಿರಬಹುದು.    ಆದರೆ ಇವರು ನಿರಂತರವಾಗಿ ಸಾಹಿತ್ಯ ಕೃಷಿಯನ್ನು ಮಾಡಿದ್ದರ ಫಲವಾಗಿ ಈ ರೀತಿಯ ದಾಖಲೆಯ ಸಾಹಿತ್ಯ ಸೃಷ್ಟಿಯಾಗಿದೆ. ಇದು ತಮಾಷೆಯಲ್ಲ. ಜೊತೆಗೆ ತಮ್ಮ ಚಿಂತನೆಯ ಶೈಲಿಯ ಅಕ್ಷರಗಳ ಚಮತ್ಕಾರ ಇವರ ಲೇಖನಗಳಲ್ಲಿ ಅಡಗಿರುತ್ತದೆ.

ಮಾಹಿತಿಗಳ ಜೊತೆಗೆ ಚಿಂತನೆಯ ಬರಹಗಳನ್ನು ಇವರು ಪ್ರಕಟಿಸಿದ್ದಾರೆ. ಇವರ ಲೇಖನಗಳು ಪ್ರಕಟವಾಗಿರುವ ಪ್ರಮುಖ ಪತ್ರಿಕೆಗಳೆಂದರೆ…. ಪ್ರಬುದ್ಧ ಕರ್ನಾಟಕ, ಮಾನವಿಕ ಕರ್ನಾಟಕ, ಗ್ರಂಥಲೋಕ, ಪುಸ್ತಕಪುರವಣಿ, ಸುಧಾ, ತರಂಗ, ಪ್ರಜಾಮತ, ರಾಗಸಂಗಮ, ಕರ್ಮವೀರ, ಮಯೂರ, ಮಲ್ಲಿಗೆ, ಮಂಗಳ, ವೈದ್ಯತರಂಗಿಣಿ, ಲಹರಿ, ಚೆನ್ನುಡಿ, ವಾರಪತ್ರಿಕೆ, ಲಂಕೇಶ್ ಪತ್ರಿಕೆ, ಶ್ರೀನಾಥ್ ಪತ್ರಿಕೆ, ಪ್ರಿಯಾಂಕ, ಉದಯವಾಣಿ, ಕನ್ನಡಪ್ರಭ, ಪ್ರಜಾವಾಣಿ, ಉದಯಕಾಲ, ಸಂಯುಕ್ತಕರ್ನಾಟಕ, ವಿಜಯಕರ್ನಾಟಕ, ಸಾಧ್ವಿ, ವರ್ತಮಾನ್, ಪ್ರತಿನಿಧಿ, ರಾಜ್ಯಧರ್ಮ, ಮೈಸೂರುಮಿತ್ರ, ಆಂದೋಲನ, ಸಂಕ್ರಾಂತಿ, ಮಹಾನಂದಿ, ಈವ್ನಿಂಗ್ ಮೇಲ್, ನವಧ್ವನಿ, ಕನ್ನಡ ಕಂಠೀರವ, ಕನ್ನಡಪುತ್ರ, ಮೈಸೂರುಪತ್ರಿಕೆ, ಪೌರಧ್ವನಿ, ಪ್ರಜಾನುಡಿ, ಜನಮನಕನ್ನಡ, ಮೈಸೂರುಮಿರರ್, ಪ್ರತಿಲಿಪಿ, ಮುಂತಾದ ಬಹುತೇಕ ಎಲ್ಲ ಪತ್ರಿಕೆ, ನಿಯತಕಾಲಿಕೆ ಹಾಗೂ ವಾರ್ಷಿಕ ಸಂಚಿಕೆಯಲ್ಲಿ 2258 ಲೇಖನಗಳು ಪ್ರಕಟ ಗೊಂಡಿರುವುದು ದೇಶದಲ್ಲೇ ನೂತನ ದಾಖಲೆ.!

ಕುಮಾರಕವಿ ನಟರಾಜು ರವರ ಬಗ್ಗೆ ಮತ್ತಷ್ಟು ಮಾಹಿತಿ… 1980-ಬೆಳಗಾವಿ 52ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಕೃತಿ “ಕಪ್ಪುಸಮುದ್ರ”, ಡಾ.ಹಂಪನಾ ಅವರಿಂದ ಬಿಡುಗಡೆ ಹಾಗೂ 1985ರಲ್ಲಿ ಜರುಗಿದ ಪ್ರಪ್ರಥಮ ವಿಶ್ವ ಕನ್ನಡ ಸಮ್ಮೇಳನ ದಿನದಂದು “ಕನ್ನಡಡಿಂಡಿಮ” ಕೃತಿ ಲೋಕಾರ್ಪಣೆ ಗೊಂಡಿರುವುದು ವಿಶೇಷ. ಕುಮಾರಕವಿ ಬಿ.ಎನ್.ನಟರಾಜ್ ಕುರಿತು ಅನ್ಯರ ಬರಹಗಳು ದಾಖಲಾಗಿವೆ. ದೇಜಗೌ ರವರ ವಜ್ರದೀಪ್ತಿ (60ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನೆನಪಿನ ಸಂಚಿಕೆ) ಮಂಜೂಷ (51ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣ ಸಂಚಿಕೆ)

ಸಿಪಿಕೆಯವರ ಮುನ್ನುಡಿ ಮಾಲೆ, ಅನನ್ಯ ಮಾಸಪತ್ರಿಕೆ ಸಂಪಾದಕರ”ಎಲೆಮರೆಕಾಯಿ” ಮೈಸೂರು ಆರ್ಟ್ ಗ್ಯಾಲರಿ “ಸಾಧಕರ ಸವಿಹೆಜ್ಜೆ” ಆರ್.ಎಲ್. ಅನಂತರಾಮಯ್ಯ ನವರ ವಾರ್ಷಿಕ ಗ್ರಂಥಾವಳಿ, ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ- ಪ್ರಸಾರಾಂಗ ಪ್ರಕಟಣೆಗಳಾದ ಗ್ರಂಥಸೂಚಿ, ವಿಶ್ವಕೋಶ,ಆಧುನಿಕ ಕನ್ನಡ ಬರಹಗಾರರು, ಪ್ರಬುದ್ಧಕರ್ನಾಟಕ, ಮಾನವಿಕಕರ್ನಾಟಕ, ಮುಂತಾದವುಗಳು.

ಇವರು ಲೇಖನಗಳನ್ನು ಬರೆಯುವುದರ ಜೊತೆಗೆ ಕವಿಯು ಕೂಡ ಆಗಿದ್ದಾರೆ. ಅನೇಕ ಕವಿಗೋಷ್ಠಿ ಗಳಲ್ಲಿ ಭಾಗಿಯಾಗಿದ್ದಾರೆ. ಇದರ ಜೊತೆ ಜೊತೆಗೆ ಆಕಾಶವಾಣಿ ಅಂತಹ ಪ್ರಬಲ ಮಾಧ್ಯಮದಲ್ಲೂ ಕೂಡ ಇವರ ಧ್ವನಿ ಮಾಹಿತಿಗಳೊಂದಿಗೆ ಅನೇಕ ಕೇಳುಗರನ್ನು ತಲುಪಿದೆ. ಅನೇಕ ಟಿವಿ ವಾಹಿನಿಗಳಲ್ಲೂ ಕೂಡ ಇವರು ಭಾಗಿಯಾಗಿದ್ದಾರೆ. ವಿದ್ಯುನ್ಮಾನಗಳ ಇವತ್ತಿನ ಭರಾಟೆಯಲ್ಲಿ ಇವರು ಸಮಯವನ್ನ ಸದುಪಯೋಗ ಪಡಿಸಿಕೊಂಡು ಇವತ್ತಿನ ಯುವಕರಿಗೆ ಮಾದರಿಯಾಗಿದ್ದಾರೆ. ಇವರು ನಾಡಿನಾದ್ಯಂತ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ, ಶೈಕ್ಷಣಿಕ, ಮುಂತಾದ ವಿಷಯಗಳನ್ನೊಳಗೊಂಡಂತೆ ಭಾಗಿಯಾದ ಹಲವು ಪ್ರಮುಖ ಕಾರ್ಯಕ್ರಮಗಳ ಬಗ್ಗೆ ಹೇಳುವುದಾದರೆ……..

1979-ಅ.ಭಾ.51ನೇಕ.ಸಾ.ಸ.ಧರ್ಮಸ್ಥಳ ಕವಿಗೋಷ್ಠಿ. 1980-ಅ.ಭಾ.52ನೇ ಕ.ಸಾ.ಸ. ಬೆಳಗಾವಿ ಚರ್ಚಾಗೋಷ್ಠಿ. ಸುತ್ತೂರು ಮಠದ “ಅ.ಭಾ.ಶರಣರ ಆಧ್ಯಾತ್ಮಕಿರಣ” ಕಮ್ಮಟದಲ್ಲಿ ಪ್ರಬಂಧ ಮಂಡನೆ. 2 ಬಾರಿ ಮೈಸೂರು ದಸರಾ ಕವಿಗೋಷ್ಠಿ. 5 ಬಾರಿ ಮೈ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿ, 8 ಬಾರಿ ಚುಟುಕು ಸಾಹಿತ್ಯ ಪರಿಷತ್ ಸಮ್ಮೇಳನ ಕವಿಗೋಷ್ಠಿ, ಕರ್ನಾಟಕ ರಾಜ್ಯದಾದ್ಯಂತ ಅನೇಕ ಸಂಘ ಸಂಸ್ಥೆಗಳ 100ಕ್ಕೂ ಹೆಚ್ಚಿನ ಸಾಹಿತ್ಯ ಸಮ್ಮೇಳನ/ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ.

ಮೊದಲೇ ಹೇಳಿದಂತೆ ಆಕಾಶವಾಣಿ ಚಿಂತನ ಕಾರ್ಯಕ್ರಮ, ಎಫ್.ಎಂ.ರೇಡಿಯೋದಲ್ಲಿ ಇವರ ಸಂದರ್ಶನ ಮಾಡಲಾಗಿದೆ. ಅಲ್ಲದೆ ಉದಯ ಟಿವಿ, ರಾಜ್ ಟಿವಿ. ಚಂದನ ಟಿವಿ. ಅಮೋಘ ಟಿವಿ, ಸಮರ ಟಿವಿ. ಶ್ರೀಗರಿ ಟಿ.ವಿ. ಮುಂತಾದ ದೂರದರ್ಶನದ  ಮೂಲಕ ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಒಟ್ಟಿನಲ್ಲಿ ಇವರ ಸಾಧನೆ ನಾಡಿನದ್ದಕ್ಕೂ ಹರಡಿದೆ ಕೇವಲ ಪ್ರಿಂಟ್ ಮೀಡಿಯಾ ಅಲ್ಲದೆ ದೃಶ್ಯ ಮಾಧ್ಯಮಗಳಲ್ಲೂ ಕೂಡ ಇವರ ಪ್ರತಿಭೆಯ ಮೇರು ದಾಖಲಾಗಿದೆ.

“ಕರ್ತವ್ಯ ಮಾಡು ಫಲ ನಿರೀಕ್ಷಿಸದಿರು”- ಎನ್ನುವ ಗೀತಸಾರದಂತೆ ಇವರು ತಮ್ಮ ಕೆಲಸವನ್ನು ಬಹಳ ಪ್ರಾಮಾಣಿಕವಾಗಿ ಅಚ್ಚುಕಟ್ಟಾಗಿ ದಾಖಲೆ ರೀತಿಯಲ್ಲಿ ಮಾಡುತ್ತ ಮುಂದೆ ಸಾಗುತ್ತಿದ್ದಾರೆ. ಎಲೆಮರೆ ಕಾಯಿಯಂತಿರುವ ಇಂತಹ ಮೇರು ಪ್ರತಿಭೆಯನ್ನು ಹಲವು ಪ್ರಶಸ್ತಿಗಳು ಕೈಬೀಸಿ ಕರೆದಿವೆ. ಅವರು ಸಾಹಿತ್ಯ ಕೃಷಿ ಶುರು ಮಾಡಿದ ಅಂತದಿಂದ ಇವತ್ತಿನವರೆಗೂ ಕೂಡ ಇವರ ಮುಕುಟಕ್ಕೆ ಅನೇಕ ಪ್ರಶಸ್ತಿ, ಸನ್ಮಾನ ಸಂದಿವೆ. ಇವುಗಳಲ್ಲಿ ಪ್ರಮುಖವಾದವು: ಆಶುಕವಿ, ಯುವಕವಿ, ಯುವರತ್ನ, ಸಾಹಿತ್ಯರತ್ನ, ಕಸ್ತೂರಿಸಿರಿರತ್ನ, ಪ್ರಬುದ್ಧಶ್ರೀ, ಕವಿರತ್ನ, ಆಯುಶ್‍ಕವಿ, ಕವಿಪುಂಗವ, ಚುಟುಕುಶ್ರೀ, ವರ್ತಮಾನಶ್ರೀ, ವರ್ಷದವ್ಯಕ್ತಿ, ವರ್ಷದಕವಿ, ವರ್ಷದಸಾಧಕ, ಪರಿಸರಪ್ರೇಮಿ, ನಿಸರ್ಗಚಿಂತಕ, ರೈತಮಿತ್ರ, ಯುವಜ್ಞಾನಿ, ವಾಗ್ಮಯವಾಚಸ್ಪತಿ, ಕವಿತಾಶ್ರೀ, ಸಾಹಿತ್ಯಸಾಧಕ, ಇತ್ಯಾದಿ….

ಇವರ ದಾಖಲೆಯ ಕೆಲಸದ ಬಗ್ಗೆ ಪ್ರಸ್ತಾಪ ಮಾಡಲೇಬೇಕು. ಅವರು ಯಾವುದೇ ಪತ್ರಿಕೆಗಳಲ್ಲಿ ಅಥವಾ ಇನ್ನಿತರ ವಾಹಿನಿಗಳಲ್ಲಿ ತಮ್ಮ ಲೇಖನ, ಭಾಷಣ ಬಂದರೆ ದಿನಾಂಕ ಸಮೇತ ನಮೂದು ಮಾಡಿ ಇಟ್ಟಿದ್ದಾರೆ. 15.6.2026ವರೆಗೆ ಇವರ ಲೇಖನಿಯಿಂದ ಪ್ರಕಟಿತವಾದ್ದು:- 321 ಚುಟುಕುಗಳು 542 ಕವಿತೆಗಳು, ಚಂದನವನದ(ಕನ್ನಡ ಚಿತ್ರರಂಗ) ಚರಿತ್ರೆಯ 589 ಲೇಖನ ಸೇರಿದಂತೆ ಒಟ್ಟಾರೆ 2122 ಲೇಖನಗಳು ದಿನಪತ್ರಿಕೆ/ನಿಯತಕಾಲಿಕೆ ಗಳಲ್ಲಿ ಪ್ರಕಟವಾಗಿದೆ. 2000ಕ್ಕೂ ಹೆಚ್ಚಿನ ಲೇಖನ ಪ್ರಕಟಗೊಂಡ ಮೊಟ್ಟಮೊದಲ ಪ್ರಾದೇಶಿಕ ಭಾಷೆ(ಕನ್ನಡ) ಲೇಖಕನಾಗಿ ರಾಷ್ಟ್ರಪ್ರಶಸ್ತಿ ಗಳಿಸಿದ್ದಾರೆ.

ಮೈವಿವಿ ಪ್ರಸಾರಾಂಗ ಪ್ರಕಟಣೆ: ಆಧುನಿಕ ಕನ್ನಡ ಬರಹಗಾರರು WHO-IS-WHO Kannada writers ಗ್ರಂಥಸೂಚಿಯಲ್ಲಿ ಕುಮಾರಕವಿ ನಟರಾಜರ ಉಲ್ಲೇಖ ಇದೆ.     ಡಾ.ವೈದೇಹಿ ಮತ್ತು ಡಾ.ಚಂದ್ರಮತಿ ಸೋಂದಾ ಇವರಿಬ್ಬರ ಪಿ.ಹೆಚ್ಡಿ., ಪ್ರೌಢಪ್ರಬಂಧದಲ್ಲಿ ಕುಮಾರಕವಿಯವರ ಬುದ್ಧ, ಕಲಿಯುಗ ಹಾಗೂ ಇನ್ನಿತರ ಕವನಗಳ ಉಲ್ಲೇಖವಿದೆ. ಡಾ.ಮಂಜಪ್ಪಶೆಟ್ಟಿ ಮಸಗಲಿ ರವರ ‘ಮುಕ್ತಕಗಳು’ ಪಿ.ಹೆಚ್ಡಿ., ಪ್ರೌಢಪ್ರಬಂಧದಲ್ಲಿ ಕುಮಾರಕವಿಯವರ ಬುದ್ಧ ಮತ್ತು ಇತರೆ ಕವನಗಳನ್ನು ಆಧಾರ/ಉಲ್ಲೇಖಗಳನ್ನಾಗಿ ತೆಗೆದುಕೊಳ್ಳಲಾಗಿದೆ.

ಅಖಿಲ ಕರ್ನಾಟಕ ಆಯುರ್ವೇದಿಕ್ ಮೆಡಿಕಲ್ ಅಸೋಸಿಯೇಷನ್(ರಿ)ಮೈಸೂರು ಇವರಿಂದ ರಾಜ್ಯ ಪ್ರಶಸ್ತಿ ಸನ್ಮಾನ; ಕರ್ನಾಟಕ ಸರ್ಕಾರದ ತಲಕಾಡು ಪಂಚಲಿಂಗ ದರ್ಶನ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಜಿಲ್ಲಾಡಳಿತ ವತಿಯಿಂದ ಪ್ರಶಸ್ತಿ-ಸನ್ಮಾನ, ಕರ್ನಾಟಕ ಸರ್ಕಾರ ಮೈಸೂರು ಜಿಲ್ಲಾಡಳಿತ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದ ಮುಖ್ಯಭಾಷಣಕಾರನಾಗಿ ಸತತ 3 ಬಾರಿ (ಹ್ಯಾಟ್ರಿಕ್) ಆಯ್ಕೆ, ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ.ಎನ್. ಪುಟ್ಟಬುದ್ಧಿ ಅವರಿಂದ “ಉಪನ್ಯಾಸರತ್ನ” ಬಿರುದು ಸನ್ಮಾನ ಪುರಸ್ಕೃತ, ಕೊಳ್ಳೇಗಾಲ.

The Institution of Engineers(India) ವರ್ಷದ ಸಾಹಿತಿ ವಿಶೇಷ ಬಹುಮಾನ-2010. Universal Academy’s ‘man of the year’ award in the year 2009. B.N.NATARAJ(KUMARA KAVI) published books titles are included as reference(Page No.693) in the GAZETTEER OF INDIA, Karnataka State, published by Government of India1987.Chief EditorSURYANATH U. KAMATH,1988, ©Government of Karnataka Publication. INDIAN EXPRESS newspaper dt. 18.10.2017 article on B.N.Nataraj “CITYMAN’S MULTIPLE HOBBIES OPENS WINDOW TO ERA GONE BY” written by -K.RATHNA.

ಹೀಗೆ ಎಲ್ಲವನ್ನೂ ಕೂಡ ದಾಖಲೆ ರೀತಿಯಲ್ಲಿ ಸಂಗ್ರಹ ಮಾಡುವುದು ಕೂಡ ಇವರ ಮತ್ತೊಂದು ಹವ್ಯಾಸ. ಇಂತಹ ನಾಡು ಕಂಡ ಅಪರೂಪದ ಸಾಧಕನಿಗೆ 2026ನೇ ಇಸವಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬರಬೇಕು ಎನ್ನುವುದು ನನ್ನಂತಹ ಲಕ್ಷಾಂತರ ಕನ್ನಡಿಗರೆಲ್ಲರ ಆಶಯ. ಈ ಗೌರವಕ್ಕೆ ಎಲ್ಲರೀತಿ ಅರ್ಹರಾದ ಕುಮಾರಕವಿ ನಟರಾಜ ರವರಿಗೆ ಇದು ತಡವಾಗಿ ಯಾದರೂ ಈ ವರ್ಷವೇ ಬರಲಿ. ಇವತ್ತಿನ ದಿನಗಳಲ್ಲಿ ಓದುವುದು ಬರೆಯುವುದು ಕಡಿಮೆಯಾಗುತ್ತಿದೆ ಮೊಬೈಲ್ ಮಾಲ್ ಸಂಸ್ಕೃತಿಯತ್ತ ಎಲ್ಲರ ಚಿತ್ತದ ಜೊತೆಗೆ ಸಮಸ್ಯೆಗಳ ಸುಳಿಯಲ್ಲಿ ಸದಾ ಒತ್ತಡದ ಜೀವನವನ್ನು ನಡೆಸುತ್ತ ಬರುತ್ತಿದ್ದೇವೆ.

ಇಂತಹ ಸಂದರ್ಭದಲ್ಲಿ ಪುಸ್ತಕಗಳು ಪತ್ರಿಕೆಗಳು ಆಕಾಶವಾಣಿ ಅಂತಹ ಪ್ರಬಲ ಮಾಧ್ಯಮಗಳು ಕೂಡ ಒತ್ತಡ ನಿವಾರಣೆ ಮಾಡುತ್ತವೆ ಆದರೆ ಇಂತಹ ಹವ್ಯಾಸವನ್ನು ಯಾರು ಕೂಡ ರೂಡಿಸಿಕೊಳ್ಳುತ್ತಿಲ್ಲ ಇನ್ನೊಂದು ಮುಖ್ಯವಾದ ಅಂಶವೆಂದರೆ ನಮ್ಮ ಮಕ್ಕಳಿಗೆ ಪಠ್ಯ ವಿಷಯ ಸಂಬಂಧಿಸಿದ ವಿಷಯವನ್ನು ಬಿಟ್ಟು ಬೇರೆ ಓದಲು ಹೇಳುವುದೇ ಇಲ್ಲ ಅದರಿಂದಾಗಿ ನಾವು ನಮ್ಮ ಕನ್ನಡ ನಾಡಿನಲ್ಲಿ ಅನೇಕ ಸಾಧಕರು ನಮ್ಮ ಎದುರು ಇದ್ದಾರೆ ಅವರ ಸಾಹಿತ್ಯವನ್ನ ಅವರ ಜೀವನ ಚರಿತ್ರೆಗಳನ್ನು ಓದಬೇಕು ಆಗ ಮಾತ್ರ ನಾವು ಏನಾದರೂ ಒಂದು ಸಾಧನೆ ಮಾಡಬಹುದು

ಕುಮಾರಕವಿ ನಟರಾಜ ರವರಂತಹ ಧೀಮಂತ ಪ್ರತಿಭೆ ಕನ್ನಡ ನಾಡಿನಲ್ಲಿ ಇರುವುದೇ ನಮ್ಮ ಸೌಭಾಗ್ಯ ಎಲ್ಲಾ ವಿಷಯಗಳನ್ನು ಕೂಡ ಇವರು ತಿಳಿದುಕೊಂಡಿದ್ದಾರೆ ತಿಳಿಸುತ್ತಾ ಇದ್ದಾರೆ ಇವರಿಗೆ ಈ ಬಾರಿಯಾದರೂ ಘನತೆವೆತ್ತ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಿ ಎನ್ನುವುದು ನಮ್ಮೆಲ್ಲರ ಒಕ್ಕೊರಲಿನ ಆಶಯ.

admin
the authoradmin

Leave a Reply