ನಂಜನಗೂಡು: ಸಾಹಿತಿಗೆ ಸಾಮಾಜಿಕ ಪ್ರಜ್ಞೆ, ಮಾನವೀಯ ಗುಣ ಇದ್ದರಷ್ಟೇ ಸಾಹಿತ್ಯ ಕೃತಿ ಉತ್ತಮವಾಗಿ ಮೂಡಿಬರಲು ಸಾಧ್ಯ ಎಂದು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ನೀಲಗಿರಿ ಎಂ.ತಳವಾರ ಅಭಿಪ್ರಾಯಪಟ್ಟರು.
ನಗರದ ಬ್ರಾಹ್ಮಣ ಧರ್ಮ ಸಹಾಯಕ ಸಭಾ ಸಭಾಂಗಣದಲ್ಲಿ ಶೇಷಾದ್ರಿ ಪುಸ್ತಕ ಮನೆ ವತಿಯಿಂದ ಯೋಜಿಸಿದ್ದ ಕೊತ್ತಲವಾಡಿ ಶಿವಕುಮಾರ್ ರಚಿಸಿರುವ ‘ಅರವಟ್ಟಿಗೆ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಅರವಟ್ಟಿಗೆ ಕೃತಿಯಲ್ಲಿ ಒಟ್ಟು ಹತ್ತು ಕಥೆಗಳಿದ್ದು, ಒಂದೊಂದು ಕಥೆಯೂ ಒಂದೊಂದು ಸಂದೇಶವನ್ನು ಸಾರುತ್ತವೆ. ಕೃತಿಕಾರ ಕಲ್ಪನಾಲೋಕದಲ್ಲಿ ವಿಹರಿಸದೆ, ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನೇ ಕಥೆಯ ವಸ್ತುವನ್ನಾಗಿ ಸ್ವೀಕರಿಸಿ ಅಚ್ಚುಕಟ್ಟಾಗಿ ಕಥೆಗಳನ್ನು ನಿರೂಪಿಸಿದ್ದಾರೆ. ಅವರ ಕಥೆಗಳನ್ನು ಓದುತ್ತಿದ್ದರೆ ಪಳಗಿದ ಕೈ ಎನಿಸದೇ ಇರದು.
ಕೊತ್ತಲವಾಡಿ ಶಿವಕುಮಾರ್ ಅವರದು ಬೆಂದ ಸಾಹಿತ್ಯ, ಎಲ್ಲಿಯೂ ಹಸಿ ಹಸಿ, ಕಲ್ಪನೆಯನ್ನು ಕಾಣಲಾಗದು. ಅವರು ಮನೋವಿಜ್ಞಾನವನ್ನು ದೃಷ್ಟಿಯಲ್ಲಿರಿಸಿಕೊಂಡು ಕಥೆಗಳನ್ನು ಹೆಣೆದಿದ್ದಾರೆ ಎಂದರು.

ಪತ್ರಕರ್ತ ದೊಡ್ಡನಹುಂಡಿ ರಾಜಣ್ಣ ಮಾತನಾಡಿದರು.ಪತ್ರಕರ್ತ ಮುಳ್ಳೂರು ಶಿವಪ್ರಸಾದ್ ಅವರು ‘ಅರವಟ್ಟಿಗೆ’ ಕೃತಿ ಪರಿಚಯ ಮಾಡಿಕೊಟ್ಟರು.
ನಂಜನಗೂಡು ಜೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲ ಹಾಗೂ ಕೃತಿಯ ಕರ್ತೃ ಕೊತ್ತಲವಾಡಿ ಶಿವಕುಮಾರ್ ಮಾತನಾಡಿದರು. ಅಧ್ಯಕ್ಷತೆಯನ್ನು ವಿಜ್ಞಾನ ಲೇಖಕ ನಂಜನಗೂಡು ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ತಗಡೂರು ಗೋಪಿನಾಥ್, ಶಿಕ್ಷಕಿ ಶೋಭಾ ನಾಗಶಯನ, ಶಿಕ್ಷಕ ಚೇತನ ಶರ್ಮ, ಇಂದ್ರೇಶ್, ವಿಶ್ರಾಂತ ಪ್ರಾಧ್ಯಾಪಕ ಕುರಹಟ್ಟಿ ಸುಬ್ಬಣ್ಣ, ವಕೀಲ ನಂಜುಂಡಸ್ವಾಮಿ, ಪ್ರೊ.ಮಾದಪ್ಪ, ಪುರಸಭೆ ಮಾಜಿ ಅಧ್ಯಕ್ಷ ಆರ್.ವಿ.ಮಹದೇವಸ್ವಾಮಿ, ನಿವೃತ್ತ ಮುಖ್ಯಶಿಕ್ಷಕ ಬಸವಟ್ಟಿಗೆ ಬಸವರಾಜು, ಕಲೆ ನಟರಾಜು, ಚಾಮರಾಜನಗರ ಜಿಲ್ಲೆ ಲೇಖಕರ ಸಂಘದ ಅಧ್ಯಕ್ಷ ದುಂಡುಮಾದಯ್ಯ ಮತ್ತಿತರರಿದ್ದರು.








