ಹುಣಸೂರು (ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ವೃದ್ದಾಪ್ಯದ ಬದುಕು ಬಹತೇಕರಿಗೆ ಸಮಸ್ಯೆ, ಸವಾಲನ್ನು ತಂದೊಡ್ಡುತ್ತಿದ್ದು, ಮೈಗಂಟಿಕೊಂಡ ಅನಾರೋಗ್ಯ, ಕುಂದಿದ ಶಕ್ತಿ, ನೋಡಿಕೊಳ್ಳುವವರಿಲ್ಲದ ನೋವು ಹೀಗೆ ಒಂದೇ ಎರಡೇ ಹತ್ತಾರು ಸಮಸ್ಯೆಗಳು ವೃದ್ಧಾಪ್ಯದಲ್ಲಿ ಕಾಡಲಾರಂಭಿಸುತ್ತದೆ. ಇಂತಹ ಸಂದರ್ಭದಲ್ಲಿ ಹೆಚ್ಚಿನವರು ಬದುಕು ಸಾಕು ಮಾಡುವ ತೀರ್ಮಾನಕ್ಕೆ ಬಂದು ಬಿಡುತ್ತಾರೆ. ಇವತ್ತು ಮೈಸೂರು ಜಿಲ್ಲೆಯ ಹುಣಸೂರುತಾಲೂಕಿನ ಬಿಳಿಕೆರೆ ಹೋಬಳಿಯ ಹೊಸಪುರ ಗ್ರಾಮದ ಮಲ್ಲೇಶಪ್ಪ(70)-ಶಿವಲಿಂಗಮ್ಮ(60) ದಂಪತಿ ಅದನ್ನೇ ಮಾಡಿದ್ದಾರೆ.
ಯೌವನದಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ನಿತ್ಯದ ದುಡಿಮೆಯಲ್ಲಿ ಕಾಲಕಳೆಯುವುದೇ ಕಷ್ಟವಾಗಿರುವಾಗ ಅವರು ಸಂಧ್ಯಾಕಾಲಕ್ಕೆಂದು ಕೂಡಿಡುವುದಾದರೂ ಎಲ್ಲಿಂದ? ಕೈಕಾಲು ಗಟ್ಟಿಯಿರುವ ತನಕ ದುಡಿಯುತ್ತಾ ಬಂದರು. ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಟ್ಟ ವೃದ್ಧ ದಂಪತಿ ತಮ್ಮ ಬದುಕನ್ನು ತಾವೇ ನೋಡಿಕೊಂಡಿದ್ದರು.

ಬದುಕುವುದಕ್ಕಾಗಿ ಸಾಲ ಮಾಡಿಕೊಂಡಿದ್ದರು. ಆದರೆ ಅದನ್ನು ತೀರಿಸೋಣವೆಂದರೆ ಅನಾರೋಗ್ಯ ಕಾಡಿ ಕೆಲಸ ಮಾಡದ ಪರಿಸ್ಥಿತಿಯಲ್ಲಿದ್ದರು. ಇವರಿಗೆ ಜಮೀನು ಮನೆ ಯಾವುದೂ ಇಲ್ಲದ ಕಾರಣದಿಂದಾಗಿ ಹೊಸಪುರದಲ್ಲಿರುವ ಅಣ್ಣನ ಮನೆಯಲ್ಲಿ ವಾಸವಿದ್ದರು.. ಈ ನಡುವೆ ಬದುಕು ಕಷ್ಟವಾಗಲಾರಂಭಿಸಿತು. ಸಾಲ ಹೆಚ್ಚಾಗಿತ್ತು. ಇನ್ನು ಹೀಗೆ ಬದುಕು ಸಾಗಿಸುವುದು ಕಷ್ಟವೆಂದರಿತ ಆ ವೃದ್ಧ ದಂಪತಿ ಕೊನೆಯ ನಿರ್ಧಾರಕ್ಕೆ ಬಂದು ಬಿಟ್ಟಿದ್ದರು. ಅದು ಏನೆಂದರೆ ಬದುಕಿಗೆ ಇತಿಶ್ರೀ ಹೇಳುವುದು…
ವೃದ್ಧ ದಂಪತಿ ಮಂಗಳವಾರ ಹುಣಸೂರಿನ ಆಸ್ಪತ್ರೆಗೆ ಹೋಗುತ್ತೇವೆಂದು ತಿಳಿಸಿ ಮನೆಯಿಂದ ಆಟೋವೊಂದರಲ್ಲಿ ಹೋಗಿದ್ದವರು ಹೆದ್ದಾರಿ ಬಳಿಯ ಅರಬ್ಬಿತಿಟ್ಟು ಅರಣ್ಯ ಪ್ರದೇಶದ ಪಕ್ಕದ ಬಸರಿಕಟ್ಟೆಯ ಹೊಲದಲ್ಲಿ ಇಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆದರೆ ಮನೆಗೆ ಮರಳಿ ಬಾರದ ಹಿನ್ನಲೆಯಲ್ಲಿ ಬುಧವಾರ ಇವರ ಪುತ್ರಿ ಕಾಳೇಗೌಡನಕೊಪ್ಪಲಿನ ಲಲಿತಮ್ಮ ಮನೆಯಿಂದ ಆಸ್ಪತ್ರೆಗೆ ಹೋಗುತ್ತೇವೆಂದು ಹೇಳಿ ಹೋದವರು ವಾಪಾಸ್ ಬಂದಿಲ್ಲವೆಂದು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಬುಧವಾರ ಜಮಿನಿಗೆ ತೆರಳಿದ್ದವರು ಶವಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಶವಗಳನ್ನು ಹುಣಸೂರು ಶವಾಗಾರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ರಾತ್ರಿ ಹೊಸಪುರದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಆದರೂ ಇಂತಹದೊಂದು ದುರಂತ ಸಾವು ಯಾರಿಗೂ ಬಾರದಿರಲಿ…








