LatestMysore

ಕೆ.ಆರ್.ನಗರ ವ್ಯಾಪ್ತಿಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಬರ ಪರಿಶೀಲನೆ.. ಅಗತ್ಯ ಕ್ರಮಕ್ಕೆ ಸೂಚನೆ

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬರಪೀಡಿತ ಸ್ಥಳಗಳಿಗೆ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಜಿ ಪರಮೇಶ್ವರ್ ಭೇಟಿ ನೀಡಿ ಅನಾವೃಷ್ಟಿ ಪರಿಣಾಮ ಉಂಟಾದ ಬೆಳೆ ಹಾನಿಯನ್ನು ವೀಕ್ಷಿಸಿದರು.

ತಾಲೂಕಿನ ಕಂಚುಗಾರ ಕೊಪ್ಪಲು ಗ್ರಾಮದಲ್ಲಿ ಶಾಸಕ ಡಿ ರವಿಶಂಕರ್ ಜೊತೆಗೂಡಿ ಒಣಗಿ ಹೋದ ರಾಗಿ ಮತ್ತು ಹೊಗೆಸೊಪ್ಪು ಬೆಳೆ ಬೆಳೆದ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು ಜಮೀನು ಮಾಲೀಕರಾದ ರೈತರೊಂದಿಗೆ ಮಾತನಾಡಿ ಅವರ ಅಹವಾಲುಗಳನ್ನು ಕೇಳಿದ ನಂತರ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಬೆಳೆ ಹಾನಿ, ರೈತರ ಸಮಸ್ಯೆಗಳ ಕುರಿತು ಮಾಹಿತಿ ಪಡೆದು ಅಗತ್ಯ ಪರಿಹಾರ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಈ ಭಾಗದಲ್ಲಿ ರಾಗಿ ಮತ್ತು ಹೊಗೆ ಸೊಪ್ಪು ಬೆಳೆದ ಜಮೀನಗಳನ್ನು ಪರಿಶೀಲಿಸಿದ್ದೇನೆ. ಟರ್ಮಿನೇಷನ್ ಆಗಿ ನಾಲ್ಕು ಇಂಚು ಬೆಳೆಯುವ ಮೊದಲೇ ಬೆಳೆ ಸಂಪೂರ್ಣ ನಾಶವಾಗಿದೆ. ಇಡಿ ತಾಲೂಕಿನಲ್ಲಿ ಕೇವಲ ಹತ್ತು ಸಾವಿರ ಹೆಕ್ಟೇರ್ ನಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಬೆಳೆ ಬಂದಿದ್ದು ಅದು ಕೂಡ ಸಂಪೂರ್ಣವಾಗಿ ಒಣಗಿ ಹೋಗಿದೆ. ಒಟ್ಟಾರೆ ಹೇಳುವುದಾದರೆ ಇಡೀ ತಾಲೂಕಿನ ವಸ್ತು ಸ್ಥಿತಿಯನ್ನು ಗಮನಿಸಿ ನೋಡಿದ್ದರಿಂದ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ ಎಂದರು.

ತಾಲೂಕಿನಲ್ಲಿ ಬೆಳೆಯಲಾಗುವ ರಾಗಿ, ಜೋಳ, ಹೊಗೆ ಸೊಪ್ಪು ಬೆಳೆ ಸಂಪೂರ್ಣ ನಾಶಗೊಂಡಿದೆ. ಇದರ ಕುರಿತು ಚರ್ಚಿಸಲಾಗುವುದು ಹಾಗೂ ತಾಲೂಕಿನ ಬರದ ಸಮಸ್ಯೆ, ರೈತರ ಸಮಸ್ಯೆ ಕುರಿತು ಕೇಂದ್ರ ಸರ್ಕಾರಕ್ಕೆ ಪರಿಹಾರಕ್ಕಾಗಿ ಮನವಿಯನ್ನು ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಎನ್ ಡಿ ಆರ್ ಎಫ್ ನಿಂದ ನೀಡುವ ಪರಿಹಾರ ಮಾರ್ಗಸೂಚಿಗಳು ಬಹಳ ಕಠಿಣವಾಗಿದ್ದು ಅದನ್ನು ಸರಳಿಕರಿಸಿ ಎಂದು ಮತ್ತೊಮ್ಮೆ ಮನವಿ ಮಾಡುತ್ತೇವೆ. ಆನಂತರ ಯಾವ ರೀತಿಯ ಪರಿಹಾರ ನೀಡಬೇಕು ಅದನ್ನು ರೈತರಿಗೆ ನೀಡಲಾಗುತ್ತದೆ ಎಂದರು.

ಬೆಳೆ ಇಲ್ಲದೆ ನಷ್ಟಕ್ಕೆ ಒಳಗಾಗಿರುವ ರೈತರು ತಾವು ತೆಗೆದುಕೊಂಡ ಸಾಲ ಮರುಪಾವತಿ ಮಾಡಲು ಕಷ್ಟ ಪಡಬೇಕಾದ ಹಿನ್ನೆಲೆ ಇರುವ ಕಾರಣ ಮೈಕ್ರೋ ಫೈನಾನ್ಸ್ ನವರು ಯಾವುದೇ ರೀತಿ ರೈತರಿಗೆ ಸಾಲ ಪಾವತಿ ಮಾಡಲು ಒತ್ತಾಯ ಮಾಡದಂತೆ ಕಾನೂನು ಮಾಡಲಾಗುತ್ತದೆ ಎಂದರು.

ಬರಪಿಡಿತ ಪ್ರದೇಶಕ್ಕೆ ಭೇಟಿ ನೀಡುವ ಮೊದಲು ಕೆ ಆರ್ ನಗರ ಹಾಸನ ಮುಖ್ಯ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಸಮುದಾಯ ಭವನವನ್ನು ವೀಕ್ಷಿಸಿ ನಂತರ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಸಚಿವರು ಜನರ ಅಹವಾಲುಗಳನ್ನು ಪರಿಶೀಲಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ ಹೀಗಾಗಿ ಖುದ್ದಾಗಿ ಪರಿಶೀಲಿಸಿ ಪರಿಹಾರ ಒದಗಿಸುವ ವ್ಯವಸ್ಥೆಯನ್ನು ಮಾಡುತ್ತೇವೆ. ಕೆಆರ್ ನಗರ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಿಆರ್ ಅಂಬೇಡ್ಕರ್ ಪ್ರತಿಮೆಗೆ ಈಗಾಗಲೇ ಎರಡೂವರೆ ಕೋಟಿ ಅನುದಾನ ಮಂಜೂರಾಗಿದೆ. ಭವನಕ್ಕೆ ಒಟ್ಟು ಆರೂವರೆ ಕೋಟಿ ಖರ್ಚಾಗುತ್ತದೆ ಎಲ್ಐಸಿ ಕಚೇರಿ ಪಕ್ಕದಲ್ಲಿರುವ ಅಂಬೇಡ್ಕರ್ ಪ್ರತಿಮೆಯನ್ನು ಬದಲಾವಣೆ ಮಾಡಲು ರವಿಶಂಕರ್ ಅವರಿಗೆ ತಿಳಿಸಿರುತ್ತೇನೆ ಮೂರು ತಿಂಗಳ ಒಳಗೆ ಅತ್ಯುತ್ತಮ ಪ್ರತಿಮೆ ನಿರ್ಮಾಣವಾಗುತ್ತದೆ ಹೀಗಾಗಿ ಕೂಡಲೇ ಆ ಜಾಗವನ್ನು ಸ್ವಚ್ಛಗೊಳಿಸಿ ಪ್ರತಿಮೆ ನಿರ್ಮಾಣ ಮಾಡುವಂತೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗೆ ಸೂಚಿಸಿದರು.

ನಮ್ಮ ಸರ್ಕಾರ ಸುಮಾರು 15 ಲಕ್ಷ ಸೈಟ್ ಗಳನ್ನು ಬಡವರಿಗೆ ಕೊಡಲು ತೀರ್ಮಾನ ಮಾಡಿದೆ. ಪ್ರತಿ ತಾಲೂಕುಗಳಿಗೆ ನಾಲ್ಕರಿಂದ ಐದು ಸಾವಿರ ಸೈಟ್ ಗಳು ಸಿಗಲಿದ್ದು, ದಲಿತರು, ಅಲ್ಪಸಂಖ್ಯಾತರು, ಬಡವರು ಹಾಗೂ ಹಿಂದುಳಿದವರಿಗೆ ಸೈಟ್ ಗಳನ್ನು ಕೊಡಲು ತೀರ್ಮಾನ ಮಾಡಲಾಗಿದೆ. ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆಗಳನ್ನು ನಡೆಸಿ ಸೈಟ್ ಗಳನ್ನು ನೀಡಲಾಗುತ್ತದೆ. ಹಾಗೂ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿ ಕೊಂಡಿರುವವರಿಗೂ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಎಂ ಡಿ ಸಿ ಸಿ ಅಧ್ಯಕ್ಷ ದೊಡ್ಡ ಸ್ವಾಮೇಗೌಡ, ತಹಶೀಲ್ದಾರ್ ಜಿ ಸುರೇಂದ್ರ ಮೂರ್ತಿ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ವಿ ಕುಲದೀಪ್, ಜಿಲ್ಲಾ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ, ಸರ್ಕಲ್ ಇನ್ಸ್ಪೆಕ್ಟರ್ ಶಿವಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಮಹಾದೇವ್, ಕಾಂಗ್ರೆಸ್ ವಕ್ತಾರ ಸೈಯದ್ ಜಾಬಿರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಶಿವಣ್ಣ, ಟಿಪಿಎಂಎಸ್ ನಿರ್ದೇಶಕ ಹೆಬ್ಬಾಳು ನಾಗೇಂದ್ರ, ಪುರಸಭೆ ಮಾಜಿ ಅಧ್ಯಕ್ಷ ಕೋಳಿ ಪ್ರಕಾಶ್, ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.

 

admin
the authoradmin

ನಿಮ್ಮದೊಂದು ಉತ್ತರ