ವಿದ್ಯಾರ್ಥಿಗಳ ಬದುಕಿಗೆ ಬೆಳಕಾದವರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು:ನೀಲಾಂಬಿಕಾ

ಮೈಸೂರು: ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ ಮಹಾಪುರುಷ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಎಂದು ಮೈಸೂರಿನ ಸಾಹಿತಿ ನೀಲಾಂಬಿಕಾ ಅವರು ಹೇಳಿದರು.
ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ಮೈಸೂರಿನ ಅಗ್ರಹಾರದಲ್ಲಿರುವ ಶಿವಶ್ರೀ ವಿದ್ಯಾರ್ಥಿನಿಲಯದಲ್ಲಿ ಸುತ್ತೂರು ಜಗದ್ಗುರು ಶ್ರೀ ರಾಜೇಂದ್ರ ಮಹಾಸ್ವಾಮಿಗಳವರ ದತ್ತಿ ಹಾಗೂ ಅನ್ನಪೂರ್ಣಮ್ಮ, ಪ್ರೇಮ ಪ್ರಭುಸ್ವಾಮಿ ಅವರ ದತ್ತಿ ಅಂಗವಾಗಿ ಆಯೋಜಿಸಿದ್ದ 26ನೇ ವಿದ್ಯಾರ್ಥಿನಿಲಯಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮೀಣ ಹಾಗೂ ದೂರದ ಊರುಗಳಿಂದ ಶಿಕ್ಷಣಕ್ಕಾಗಿ ನಗರಗಳಿಗೆ ಆಗಮಿಸುತ್ತಿದ್ದ ಆರ್ಥಿಕವಾಗಿ ಹಿಂದುಳಿದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಊಟ, ವಸತಿ ಹಾಗೂ ಶಿಕ್ಷಣದ ಸೌಲಭ್ಯ ಕಲ್ಪಿಸಿ, ಪ್ರೀತಿ–ಪ್ರೋತ್ಸಾಹದ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಿದ ಪರಮ ಕರುಣಾಮೂರ್ತಿ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು. ಪೂಜ್ಯರ ನಿರ್ವ್ಯಾಜ ಪ್ರೀತಿ, ಮಾತೃವಾತ್ಸಲ್ಯ, ಸದಾ ಪ್ರಸನ್ನವಾಗಿರುವ ಮುಖ ಹಾಗೂ ಬಾಡದ ಮಂದಹಾಸವನ್ನು ಒಮ್ಮೆ ಕಂಡವರು ಮರೆಯಲು ಸಾಧ್ಯವಿಲ್ಲ.

ಆ ಪ್ರೀತಿಯ ಸವಿಯನ್ನು ಅನುಭವಿಸಿದವರಿಗಷ್ಟೇ ಅದರ ಆಳವನ್ನು ಅರಿಯಲು ಸಾಧ್ಯ. ಆರ್ಥಿಕ ಸಂಕಷ್ಟಗಳನ್ನು ಲೆಕ್ಕಿಸದೆ ಆರಂಭಿಸಿದ ವಿದ್ಯಾರ್ಥಿನಿಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಇಂದು ಸುತ್ತೂರು–ಮೈಸೂರು ಪ್ರಾಂತ್ಯವನ್ನು ಮೀರಿ ದೇಶ–ವಿದೇಶಗಳಲ್ಲಿಯೂ ಶಾಖೆಗಳನ್ನು ವಿಸ್ತರಿಸಿಕೊಂಡು, ಬೃಹದಾಕಾರದ ಶೈಕ್ಷಣಿಕ ಮಹಾವೃಕ್ಷವಾಗಿ ಬೆಳೆದಿವೆ ಎಂದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಗಂಗಾವತಿ ಅವರು ಮಾತನಾಡಿ, ವಚನ ಸಾಹಿತ್ಯವು ನಡೆ–ನುಡಿಯ ಮೂಲಕ ಸಮಾಜವನ್ನು ಸುಸಂಸ್ಕೃತಿಯತ್ತ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದೆ. ಬಸವಣ್ಣನವರ ನೀನೊಲಿದಡೆ ಕೊರಡು ಕೊನರುವುದಯ್ಯ ಎಂಬ ವಚನವು ಅಸಾಧ್ಯವೆನಿಸುವುದನ್ನೂ ಸಾಧ್ಯವಾಗಿಸುವ ಆಶಾವಾದವನ್ನು ಪ್ರತಿಯೊಬ್ಬರಲ್ಲೂ ಮೂಡಿಸುತ್ತದೆ.

ವಚನಗಳು ಮನುಷ್ಯನಲ್ಲಿ ಆತ್ಮಸ್ಥೈರ್ಯವನ್ನು ಬೆಳೆಸುವುದರ ಜೊತೆಗೆ ಬದುಕನ್ನು ಸಾರ್ಥಕವಾಗಿ ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡುತ್ತವೆ. ವಚನ ಸಾಹಿತ್ಯವು ಕೇವಲ ಓದುವ ಸಾಹಿತ್ಯವಲ್ಲ, ಬದುಕಿನಲ್ಲಿ ಅಳವಡಿಸಿಕೊಂಡು ನಡೆಯಬೇಕಾದ ಜೀವನದರ್ಶನವಾಗಿದೆ ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ ಮಾತನಾಡಿ, ವಚನ ಸಾಹಿತ್ಯವು ಜೀವನ ಮೌಲ್ಯಗಳ ಅಪೂರ್ವ ನಿಧಿಯಾಗಿದ್ದು, ಅದರ ಆಶಯಗಳನ್ನು ಜನಮಾನಸದಲ್ಲಿ ಬಿತ್ತುವ ಸದುದ್ದೇಶದಿಂದ ಸಂಸ್ಥೆಯ ವತಿಯಿಂದ ವಚನಗಳನ್ನು ವಿವಿಧ ಆಯಾಮಗಳಲ್ಲಿ ಪ್ರಚುರಪಡಿಸಲಾಗುತ್ತಿದೆ. ವಚನಗಳು ಬದುಕಿನಲ್ಲಿ ಎದುರಾಗುವ ನೋವು–ನಲಿವುಗಳನ್ನು ಸಮಚಿತ್ತದಿಂದ ಎದುರಿಸುವ ಶಕ್ತಿಯನ್ನು ನೀಡುವುದರ ಜೊತೆಗೆ ಆತ್ಮಸ್ಥೈರ್ಯವನ್ನು ತುಂಬುವ ಜೀವನದರ್ಶನವಾಗಿವೆ.

ವಚನ ಸಾಹಿತ್ಯವು ಮನುಷ್ಯನ ಬದುಕಿಗೆ ಬೆಳಕು ತೋರುವ ದಾರಿದೀಪದಂತಿದ್ದು, ವಚನಗಳಲ್ಲಿರುವ ಸರಳತೆ, ಸತ್ಯ, ಸಮಾನತೆ ಮತ್ತು ಮಾನವೀಯತೆಯ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ವಚನ ಸಾಹಿತ್ಯವನ್ನು ಓದುವುದಷ್ಟೇ ಅಲ್ಲದೆ, ಅದರ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯ.
ವಚನಗಳು ಮನಸ್ಸಿಗೆ ನೆಮ್ಮದಿ, ಬದುಕಿಗೆ ಧೈರ್ಯ ಹಾಗೂ ಚಿಂತನೆಗೆ ಹೊಸ ದಿಕ್ಕನ್ನು ನೀಡುತ್ತವೆ. ವಚನ ಸಾಹಿತ್ಯವು ಒಂದು ರೀತಿಯಲ್ಲಿ ಜೇನಿನಂತಿದ್ದು, ಅದರ ಸವಿಯನ್ನು ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಬೇಕೆನಿಸುತ್ತದೆ ಎಂದರು.ಈ ಮೂಲಕ ವಚನ ಸಾಹಿತ್ಯದ ಸವಿಯನ್ನು ಪ್ರತಿಯೊಬ್ಬರ ಬದುಕಿಗೂ ತಲುಪಿಸುವುದು ಸಂಸ್ಥೆಯ ಆಶಯವಾಗಿದೆ ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ, ವಚನ ಸಾಹಿತ್ಯವು ಪಂಡಿತರ ಅರಮನೆಯಿಂದ ಹೊರಬಂದು ಸಾಮಾನ್ಯರ ಬದುಕಿನ ಅಂಗಳಕ್ಕೆ ಬಂದ ಜನಸಾಹಿತ್ಯದ ಮಹತ್ವದ ಕ್ರಾಂತಿ ೆಂದರು. ಹನ್ನೆರಡನೆಯ ಶತಮಾನದವರೆಗೆ ರಚನೆಯಾಗುತ್ತಿದ್ದ ಬಹುತೇಕ ಸಾಹಿತ್ಯವು ಪಂಡಿತರಿಂದಲೇ ರಚಿತವಾಗುತ್ತಿದ್ದು, ಅದು ಪಂಡಿತ ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಜನಸಾಮಾನ್ಯರಿಗೆ ಅಂತಹ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವುದೇ ಕಷ್ಟವಾಗಿದ್ದ ಸಂದರ್ಭದಲ್ಲಿ, ಬಸವಾದಿ ಶರಣರು ಜನಸಾಮಾನ್ಯರು ನಿತ್ಯವೂ ಆಡುವ ಸರಳ ಭಾಷೆಯಲ್ಲಿಯೇ ತಮ್ಮ ಅನುಭವ ಮತ್ತು ಅನುಭಾವವನ್ನು ಅಭಿವ್ಯಕ್ತಿಸಿದರು.

ಅದೇ ಮುಂದೆ ವಚನ ಸಾಹಿತ್ಯವಾಗಿ ರೂಪುಗೊಂಡಿತು. ಜನರ ನುಡಿಯನ್ನೇ ಸಾಹಿತ್ಯದ ಭಾಷೆಯನ್ನಾಗಿಸಿ, ಅನುಭವದ ನೆಲೆಯಲ್ಲಿ ಮೂಡಿದ ವಚನಗಳನ್ನು ಪ್ರಜಾ ಸಾಹಿತ್ಯವನ್ನಾಗಿ ರೂಪಿಸಿದ ಹೆಗ್ಗಳಿಕೆ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದರು.
ನಂತರ ವಚನ ವಾಚನ, ವಚನ ಗಾಯನ ಹಾಗೂ ತಾತ್ಪರ್ಯವನ್ನು ಪ್ರಸ್ತುತಪಡಿಸಿದ ಮೂವತ್ತು ವಿದ್ಯಾರ್ಥಿಗಳಿಗೆ ವಚನದೀವಿಗೆ ಪ್ರಮಾಣಪತ್ರ ಹಾಗೂ ವಚನ ಪುಸ್ತಕಗಳನ್ನು ವಿತರಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ದತ್ತಿ ದಾಸೋಹಿಗಳಾದ ಪ್ರೇಮಾ ಪ್ರಭುಸ್ವಾಮಿ, ಶಿವಶ್ರೀ ವಿದ್ಯಾರ್ಥಿನಿಲಯದ ಸಂಸ್ಥಾಪಕರಾದ ಪ್ರಭಾಮಣಿ, ಶರಣು ವಿಶ್ವವಚನ ಫೌಂಡೇಷನ್ ಕಾರ್ಯದರ್ಶಿ ಅನಿತಾ ನಾಗರಾಜ್, ವಚನ ಚೂಡಾಮಣಿ, ಶ್ರೀ ಶಿವರಾತ್ರಿ ಅಕ್ಕನಬಳಗದ ಸದಸ್ಯರು ಉಪಸ್ಥಿತರಿದ್ದರು.







