ArticlesLatest

ಶ್ರೀಕೃಷ್ಣ ಜಯಂತ್ಯುತ್ಸವದ ಗೋಕುಲಾಷ್ಟಮಿ…  ಕೃಷ್ಣಹರೇ.. ಕೃಷ್ಣಹರೇ.. ಜೈಜೈ ಕೃಷ್ಣಹರೇ….

ಕೃಷ್ಣಹರೇ.. ಕೃಷ್ಣಹರೇ.. ಜೈಜೈ ಜೈಜೈ ಕೃಷ್ಣಹರೇ…. ಶ್ರಾವಣ ಮಾಸದ ಹುಣ್ಣಿಮೆ ನಂತರ 8ನೇ ದಿನ ಮಧ್ಯರಾತ್ರಿಯಲ್ಲಿ ಶ್ರೀಕೃಷ್ಣನು ಜನಿಸಿದ ಪ್ರಯುಕ್ತ ಈ ಶುಭ ಮುಹೂರ್ತದಂದು ಆಚರಿಸುತ್ತಾರೆ “ಗೋಕುಲಾಷ್ಟಮಿ” ಜಯಂತ್ಯುತ್ಸವ. ವಿಷ್ಣುವಿನ 8ನೇಅವತಾರ ಶ್ರೀಕೃಷ್ಣನು ಜನಿಸಿದ ಪ್ರಯುಕ್ತ ಗೋಕುಲಾಷ್ಟಮಿ.

ಅನೇಕ ಶತಮಾನದಿಂದ ಪ್ರತಿವರ್ಷವೂ ಭಾರತದಲ್ಲಿ ಎಲ್ಲರೂ ಆಚರಿಸಲ್ಪಡುವ ಸನಾತನ ಹಬ್ಬ! ವಿಶೇಷವಾಗಿ ಅಯ್ಯಂಗಾರ್ ಹೆಂಗೆಳೆಯರು ಅಡಿಯಿಂದ ಮುಡಿವರೆಗೆ ವಸ್ತ್ರಾಭರಣಗಳಿಂದ ಅಲಂಕಾರ ಮಾಡಿಕೊಂಡು ಶ್ರದ್ಧಾಭಕ್ತಿಯಿಂದ ಶ್ರೀಕೃಷ್ಣನ ಜಯಂತ್ಯುತ್ಸವ ಆಚರಿಸುವ ಸಂಭ್ರಮ! ಪೂಜಾಮಂಟಪದಿಂದ ಮುಂಬಾಗಿಲವರೆಗೆ ಬಾಲಕೃಷ್ಣನ ಪುಟ್ಟಪಾದ ರಂಗೋಲಿಯಿಂದ ಬಿಡಿಸಿ ಸಾಕ್ಷಾತ್ ಕೃಷ್ಣನೇ ಮನೆಯೊಳಗೆ ಬಂದಂಥ ಭಕ್ತಿಭಾವ ತರಿಸುವುದು! ವರ್ಣರಂಜಿತ ಹೂವು-ದೀಪಗಳ ಅಲಂಕಾರ, ಹಣ್ಣು ಬೆಣ್ಣೆ ತಿಂಡಿ ಹಾಲೋಗರ ಪಂಚಾಮೃತ ನೈವೇದ್ಯ ರುಚಿಕರ ತೀರ್ಥ ಪ್ರಸಾದ ಉಣ್ಣಲು ಚಿಣ್ಣರಿಗೆ ಉತ್ಸಾಹ! ಬಂಧುಮಿತ್ರರ ಜತೆಗೆ, ಜಾತಿಮತ ಭೇದ ಇಲ್ಲದೆ ನೆರೆಹೊರೆ ಯವರನ್ನೂ ಅಪರಿಚಿತರನ್ನೂ ಆಹ್ವಾನಿಸಿ ಸತ್ಕರಿಸುವ ಸಡಗರ.

ಇಸ್ಕಾನ್ ಸೇರಿದಂತೆ ದೇಶದ ಎಲ್ಲ ಶ್ರಿಕೃಷ್ಣ ಮಂದಿರಗಳಲ್ಲಿ ಉಪನ್ಯಾಸಭಜನೆ, ನೃತ್ಯಗಾಯನ, ಹಾಸ್ಯಲಾಸ್ಯ, ಗೀತಸಂಗೀತ, ಹರಿಕಥೆ ಕೀರ್ತನೆ ನಾಟಕ ಪಾರಾಯಣ ಮಕ್ಕಳ ವೇಷಭೂಷಣ ಮುಂತಾದ ಮನರಂಜನೀಯ ಕಾರ್ಯಕ್ರಮ ಪ್ರತಿಗಂಟೆಗೂ ಬಗೆಬಗೆಯ ರುಚಿಕರ ಪ್ರಸಾದ ವಿನಿಯೋಗ ದಿನವಿಡೀ ಇದ್ದು ಅದ್ಧೂರಿ ಆಚರಣೆ ನಿರಂತರ ಸಾಗುತ್ತದೆ.

ದುಃಖ ದುಮ್ಮಾನ ಉಪಶಮನಕ್ಕೆ, ಶಾಂತಿಪ್ರೀತಿ ಗಳಿಸಲಿಕ್ಕೆ ಜಗದೋದ್ಧಾರನ ಜಪಿಸಲು ಮುಗಿ ಬೀಳುವರು. ನೆಮ್ಮದಿ ಅರಸಿ ಆಪತ್ಭಾಂಧವನ ಬಳಿಬರುವರು. ವಿವಾಹಯೋಗ್ಯ ಯುವಕ ಯುವತಿಯರು ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಕಾತುರದಿಂದಲೋ ಪರಸ್ಪರ ಆಕರ್ಷಣೆಗೋಸ್ಕರವೋ ತಪ್ಪದೇ ಭಾಗವಹಿಸಿದರೆ, ರಾಜಕಾರಣಿಗಳು ವೋಟ್‍ ಬ್ಯಾಂಕ್ ಉದ್ದೇಶದಿಂದ ಭಾಗವಹಿಸುವರು? ಉತ್ತರಭಾರತದಲ್ಲಿ ಮಂತ್ರಿ ನಟನಟಿಯರನ್ನ ಆಮಂತ್ರಿಸಿ ಸಂಗೀತ ವಿದ್ವಾಂಸರ ಕಛೇರಿ ಏರ್ಪಡಿಸಿ ಅನ್ನ ವಸ್ತ್ರ ಇತ್ಯಾದಿ ದಾನಮಾಡಿ ವೈಭವದಿಂದ ಆಚರಿಸುತ್ತಾರೆ.

ಒಮ್ಮೊಮ್ಮೆ ವೈರಾಗ್ಯ ಉಂಟಾದಾಗ ಕೇಳಿಬರುವ ಮಾತು “ನೀ ಸೂತ್ರಧಾರಿ, ನಾ ಪಾತ್ರಧಾರಿ” ಡಿ.ವಿ.ಜಿ. ಮಂಕುತಿಮ್ಮನ ಕಗ್ಗದ ಬದುಕು ಜಟಕಾಬಂಡಿ, ನಾಕುದುರೆ, ವಿಧಿ ಅದರ ಸಾಹೇಬ, ಮದುವೆಗೊ ಮಸಣಕೊ ಹೋಗೆಂದೆಡೆ ಸಾಗುವೆ” ಎಂಬುದು. ಇವೆಲ್ಲಕ್ಕೂ ಮಿಗಿಲಾಗಿ ಭಗವದ್ಗೀತೆಯ: ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ|ಮಾಕರ್ಮ ಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ| (ನಿನಗೆ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ, ಅದರ ಫಲಾಫಲಗಳಲ್ಲಿ ಎಂದಿಗೂ ಇಲ್ಲ.

ನೀನು ಕರ್ಮಗಳ ಫಲಕ್ಕೆ ಕಾರಣನಾಗಬೇಡ ಕರ್ಮ ಮಾಡುವುದನ್ನು ನಿಲ್ಲಿಸಬೇಡ) ಈ ನಂಬಿಕೆಯನ್ನು ಶ್ರೀಸಾಮಾನ್ಯನ ಮನಸ್ಸಿಂದ ಹೋಗಲಾಡಿಸಲು ಅಸಾಧ್ಯ? ಈ ಕಾರಣಕ್ಕೆ ಇವತ್ತಿಗೂಸಹ ಇಡೀ ಜಗತ್ತಿಗೆ ಮಾನ್ಯವು ಶ್ರೀಕೃಷ್ಣ ಜನ್ಮಭೂಮಿ, ಈ ಭೂಲೋಕಕ್ಕೇ ಧನ್ಯರು ಶ್ರೀಕೃಷ್ಣನ ಭಕ್ತರು.!

ವಿಷ್ಣುನ 8ನೇ ಅವತಾರದ ಶ್ರೀಕೃಷ್ಣನು ದ್ವಾಪರ ಯುಗದಲ್ಲಿ ದ್ವಾರಕಾಪುರಿಯ ದೇವಕಿ-ವಸುದೇವನ ಅಷ್ಟಮ ಕಂದನಾಗಿ ಸೆರೆಮನೆಯಲ್ಲಿ ಜನ್ಮತಳೆದು ಮಥುರಾನಗರದ ಯಶೋಧ- ನಂದಗೋಪನ ಸಾಕುಮಗನಾಗಿ ಬೆಳೆಯುತ್ತಾನೆ. ಬಾಲಕೃಷ್ಣನ ಬಾಲ್ಯದ ಕು-ಚೇಷ್ಠೆಗಳು ಅಸಾಮಾನ್ಯದ್ದು. ಬೆಣ್ಣೆಯ ಕಳ್ಳತನ, ಬಾಯಲ್ಲಿವಿಶ್ವದರ್ಶನ, ಗೋಪಿಕಾಸ್ತ್ರೀ ವಸ್ತ್ರಾಪಹರಣ, ಕಾಳಿಂಗ ಮರ್ಧನ, ಕಂಸನ ವಧೆ, ಪೂತನಿಯ ಸಂಹಾರ, ಗೋವರ್ಧನ ಗಿರಿಯನ್ನು ಬೆರಳಲ್ಲಿ ಎತ್ತಿದ್ದು, ಮುಂತಾದ ಮಹೋನ್ನತ ಕಾರ್ಯಗಳು ಎಳೆವಯಸ್ಸಿಗೆ ಮೀರಿದ ಸಾಧನೆ.

ಹಾಗಾಗಿ ಅತ್ಯಂತ ಧೀರ-ವೀರ-ಶೂರ ಬಾಲಕನು ಎನಿಸಿ ಜನಪ್ರಿಯ ಆಗುವನು. ಕಾಲಕ್ರಮೇಣ ಕೃಷ್ಣಲೀಲೆ ಹಾಡಿ ಹೊಗಳುವ ಅಭಿಮಾನಿ ಭಕ್ತರ ಜತೆಗೇ (ಹಿತ)ಶತ್ರುಗಳೂ ಹುಟ್ಟಿಕೊಳ್ಳುತ್ತಾರೆ  ಒಟ್ಟಾರೆ, ಶ್ರೀಕೃಷ್ಣನ ಬಾಲ್ಯ ಜೀವನವು ನ ಭೂತೋಃ ನ ಭವಿಷ್ಯತೀಃ ಎಂಬ ಪುರಾಣವನ್ನು ಸಾರುತ್ತದೆ! 16000 ಗೋಪಿಕಾಸ್ತ್ರೀಯರ ಪ್ರಿಯಕರ ನಾದರೂ ರುಕ್ಮಿಣಿಯ ದೃಷ್ಟಾಂತದಿಂದ ಅಪಹರಣದ ವಿವಾಹವು ತಪ್ಪಲ್ಲ ಎಂದು ಪ್ರತಿಪಾದಿಸುವ ಶ್ರೀಕೃಷ್ಣನ ವಾದ: “ತಾನು ಪ್ರೀತಿಸಿದವರಿಗಿಂತ ತನ್ನನ್ನು ಪ್ರೀತಿಸಿದವರನ್ನು ಮದುವೆಯಾಗುವುದು ಲೇಸು, ಅದರಿಂದ ದಾಂಪತ್ಯ ಜೀವನವು ಸುಖಮಯವಾಗುತ್ತದೆ” ಈ ಕಾರಣದಿಂದ ಪಾರ್ಥನು ಸುಭದ್ರೆಯನ್ನು ಅಪಹರಿಸಿ ವಿವಾಹವಾಗಲು ಆಕೆಯ ಅಣ್ಣ ಶ್ರೀಕೃಷ್ಣ ನೆರವಾಗುತ್ತಾನೆ.

ಸತ್ಯಭಾಮ ಮೂಲಕ ಪ್ರೇಮಕ್ಕಿಂತ ಭಕ್ತಿಯೇ ಶ್ರೇಷ್ಠ ಎಂಬುದನ್ನು ಶ್ರೀಕೃಷ್ಣ ತುಲಾಭಾರ ಘಟನೆಯಿಂದ ಜಗತ್ತಿಗೆ ತೋರಿಸುತ್ತಾನೆ. ನಂಬಿದವರ ಕೈಬಿಡುವುದಿಲ್ಲ ಎಂಬುದನ್ನು “ಪಾಂಚಾಲಿಯ ಮಾನಹರಣ” ಸಂದರ್ಭದಲ್ಲಿ ವಸ್ತ್ರವನ್ನು ನೀಡುವುದರ ಮೂಲಕ ಮತ್ತು ಹಸಿದು ಬಂದ ಋಷಿಗಳಿಗೆ ‘ಅಕ್ಷಯಪಾತ್ರೆ’ ಮೂಲಕ ‘ಭಕ್ತರೆಲ್ಲೊ ಭಗವಂತನೂ ಅಲ್ಲೆ’ ಎಂಬುದನ್ನು ಸಾಬೀತು ಪಡಿಸುತ್ತಾನೆ.

ವಿನಾಯಕ ಚೌತಿಯಂದು ಚಂದ್ರನ ದರ್ಶನ ಮಾಡಿದ ತಪ್ಪಿಗೆ ಶಮಂತಕ ಮಣಿಯ ಕಳ್ಳನೆಂಬ ಅಪವಾದಕ್ಕೆ ಗುರಿಯಾಗಿ ಪುನಃ ಗಣೇಶನ ಕೃಪಾಶೀರ್ವಾದದಿಂದ ಶಮಂತಕಮಣಿ ಮತ್ತು ಜಾಂಭವತಿಯನ್ನು ಪಡೆಯುವ ಘಟನೆಯಿಂದ “ದೇವರು ಮತ್ತು ಅವತಾರಪುರುಷ” ನಡುವೆ ಇರುವ ಶಕ್ತಿ-ಯುಕ್ತಿಗಳ ವಸ್ತುನಿಷ್ಠೆ ಏನೆಂಬುದನ್ನು ರುಜುವಾತು ಪಡಿಸುತ್ತಾನೆ!

ಶ್ರೀಕೃಷ್ಣ 64 ವಿದ್ಯಾಪಾರಂಗತ, ನವರಸನಾಯಕ, ಸಮಾಜಶಾಸ್ತ್ರಜ್ಞ ಮಾತ್ರವಲ್ಲ ಶೃಂಗಾರಶಾಸ್ತ್ರಕ್ಕೂ ಪ್ರಾಶಸ್ತ್ಯ ನೀಡಿ ಸಮಾಜೋದ್ಧಾರದಷ್ಟೆ ದಾಂಪತ್ಯ ಉದ್ಧಾರವು ಸಹ ಜೀವನದ ಪ್ರಮುಖಾಂಶ ಎಂಬ ಸಹಜಪ್ರಜ್ಞೆಯನ್ನು ಪ್ರತಿಪಾದಿಸಿ, ಜನನ ಪ್ರಕ್ರಿಯೆಗೆ ಶೃಂಗಾರವೂ ಅವಶ್ಯಕ ಎಂಬುದನ್ನು ರುಜುವಾತು ಪಡಿಸಿದ್ದಾನೆ! ಸಂತಾನದ ಬಗ್ಗೆ ಗಂಡಹೆಂಡಿರಲ್ಲಿ ಇರಬೇಕಾದ ಜಾಣ್ಮೆ ತಾಳ್ಮೆ ಸಾಮಾನ್ಯಜ್ಞಾನ ಇತ್ಯಾದಿ ತಿಳುವಳಿಕೆ ಬಗ್ಗೆ ಸರಳವಾಗಿ ವಿವರಿಸಿದ್ದಾನೆ. ಕುಟುಂಬದಲ್ಲಿ ಇರಬೇಕಾದ ಪ್ರೇಮಕಾಮ, ಪ್ರೀತಿವಾತ್ಸಲ್ಯ, ಕೋಪತಾಪ, ದ್ವೇಷಅಸೂಯೆ, ಕರ್ಮಧರ್ಮ, ಕಾಯ ಕರ್ತವ್ಯ ಬದ್ಧತೆ ಪ್ರಾಮಾಣಿಕತೆ ಬಗ್ಗೆಯೂ ಹೇಳಿದ್ದಾನೆ.

ಪ್ರತಿಯೊಬ್ಬರು ವ್ಯಕ್ತಿಗತ ಏಕತಾನಕ್ಕೆ ನೀಡುವಷ್ಟೆ ಮಹತ್ವವನ್ನು ಸಾಮೂಹಿಕ ಬಹುತಾನಕ್ಕೂ ನೀಡುವಂತೆ ಮಾರ್ಗದರ್ಶನ ಮಾಡಿದ್ದಾನೆ. ನಿಸ್ವಾರ್ಥದ ಬಗ್ಗೆ ಮನವರಿಕೆ ಮಾಡಿಕೊಡಲು ಪವಾಡಗಳನ್ನು ಪ್ರದರ್ಶಿಸಿದ್ದಾನೆ. ಕಷ್ಟನಷ್ಟಗಳು ಪ್ರಾಪ್ತವಾದಾಗ ಧೃತಿಗೆಡದೆ ಎದುರಿಸಬೇಕೆಂದು ಸಾಂತ್ವನ ಹೇಳುವುದು ಹೀಗೆ:- “ಒಂದನ್ನು ಗಳಿಸಿಕೊಳ್ಳಬೇಕಾದರೆ ಇನ್ನೊಂದನ್ನು ಕಳೆದುಕೊಳ್ಳಲೇಬೇಕು. ಶರೀರವನ್ನು ಉಳಿಸಿಕೊಳ್ಳಬೇಕಾದರೆ ಬೆರಳನ್ನು ಕಳೆದುಕೊಳ್ಳಬೇಕಾಗುತ್ತೆ ಅಥವ ಸಮಾಜವನ್ನು ಉಳಿಸಿಕೊಳ್ಳಬೇಕಾದರೆ ಕುಟುಂಬವನ್ನು ಕಳೆದುಕೊಳ್ಳಬೇಕಾಗುತ್ತೆ [-ಶ್ರೀಕೃಷ್ಣವಚನಾಮೃತ]”

ಮಹಾಭಾರತದ ಕೃಷ್ಣ ತನ್ನದೇಆದ ಷಡ್ಯಂತ್ರ ರೂಪಿಸಿ ಶಕುನಿ ಮೂಲಕ ಪಾಂಡವರಿಗೆ 12 ವರ್ಷ ವನವಾಸ, 1 ವರ್ಷ ಅಜ್ಞಾತ ವಾಸದ ಶಿಕ್ಷೆ ಅವಧಿಯಲ್ಲಿ ಧರ್ಮರಾಯನನ್ನು ಮನೆಯ ಕೆಲಸದವನನ್ನಾಗಿಸಿ, ಭೀಮನನ್ನು ಅಡುಗೆ ಭಟ್ಟನನ್ನಾಗಿಸಿ, ಗಾಂಢೀವಿಯನ್ನು ಬೃಹನ್ನಳೆಯನ್ನಾಗಿಸಿ, ನಕುಲ, ಸಹದೇವರನ್ನು ದನಗಾಹಿಗಳನ್ನಾಗಿಸಿ ಕಪಟನಾಟಕ ಸೂತ್ರಧಾರಿ ಶ್ರೀಕೃಷ್ಣ ಸಂಧಾನ ವಿಫಲಗೊಳಿಸಿ ಕುರುಕ್ಷೇತ್ರ ರಣರಂಗದಲ್ಲಿ ಯುದಿಷ್ಠಿರನಿಂದ “ಅಶ್ವತ್ಥಾಮ ಹತಾ ಕುಂಜರಹ…” ಎಂಬ ಸುಳ್ಳು ಹೇಳಿಸಿದಂತೆ ಮಾಡುತ್ತಾ ಕರ್ಣನ ವಜ್ರಕವಚ, ಕರ್ಣಕುಂಡಲಗಳನ್ನು ಇಂದ್ರನ ಮೂಲಕ ಕಸಿದು

ಕುಂತಿಯಿಂದ ಜನ್ಮರಹಸ್ಯ ಬಹಿರಂಗಗೊಳಿಸಿ ‘ತೊಟ್ಟಬಾಣ ತೊಡಬೇಡ ಇಟ್ಟಗುರಿ ಇಡಬೇಡ’ ಎಂಬ ವಚನ ಪಡೆದು, ದಾನಶೂರ ಕರ್ಣನ ಮನೋಸ್ಥೈರ್ಯ ದುರ್ಬಲಗೊಳಿಸಿ, ಭೀಷ್ಮನನ್ನು ಶರಮಂಚದಲ್ಲಿರಿಸಿ, ದ್ರೋಣಾಚಾರ್ಯನನ್ನು ತುಂಡರಿಸಿಸಿ, ಅಶ್ವತ್ಥಾಮನಿಂದ ಉಪಪಾಂಡವರ ಹತ್ಯೆಗೈಸಿ, ಚಕ್ರವ್ಯೂಹದಲ್ಲಿ ವೀರಅಭಿಮನ್ಯುವನ್ನು ಸಿಲುಕಿಸಿ, ಧೃತರಾಷ್ಟ್ರನ ಕ್ರೋಧದಿಂದ ಬಲಭೀಮನನ್ನ ಬಚಾವ್ ಮಾಡಲು ಉಕ್ಕಿನಪುತ್ಥಳಿ ಪುಡಿಗೈಸಿ, ಪಾರ್ಥನಿಗೆ ಸಾರಥಿಯಾಗಿ “ವಿರಾಟ್ ದರ್ಶನ” ಮೂಲಕ “ದುಷ್ಟಶಿಕ್ಷಕ ಶಿಷ್ಟರಕ್ಷಕ” ಎಂದು ಕೊಂಡಾಡಿಸಿ, ತಾನು ಮಾತ್ರ ಶಸ್ತ್ರವನ್ನು ಮುಟ್ಟದೇ ಯುದ್ಧಗೆದ್ದ ದಿಗ್ವಿಜಯ ಎನಿಸಿಕೊಳ್ವನು.

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ; ಅಭ್ಯುತ್ಥಾನಂ ಅಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ (ಹೇ ಅರ್ಜುನನೇ ಯಾವ ಯಾವ ಕಾಲದಲ್ಲಿ ಧರ್ಮದ ಹಾನಿ ಮತ್ತು ಅಧರ್ಮದ ವೃದ್ಧಿಯಾಗುವುದೋ ಆವಾಗಲೆಲ್ಲ ನಾನು ನನ್ನ ಸ್ವರೂಪವನ್ನು ರಚಿಸಿ ಜನರ ಮುಂದೆ ಪ್ರಕಟವಾಗುತ್ತೇನೆ) ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಂ ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ (ಸಾಧು ಸತ್ಪುರುಷರನ್ನು ಉದ್ಧಾರ ಮಾಡುವುದಕ್ಕಾಗಿ, ಪಾಪಿಗಳನ್ನು ನಾಶ ಪಡಿಸುವುದಕ್ಕಾಗಿ ಹಾಗೂ ಧರ್ಮವನ್ನು ಪುನರ್ ಸ್ಥಾಪಿಸೆ ಯುಗ ಯುಗದಲ್ಲೂ ನಾನು ಪ್ರಕಟವಾಗುತ್ತೇನೆ)

ಧರ್ಮಕರ್ಮ, ಸತ್ಯಾಸತ್ಯ, ನ್ಯಾಯನೀತಿ, ಸಾವುಬದುಕು, ಜಯಾಪಜಯ, ಪಾಪಪುಣ್ಯ, ಮುಂತಾದವುಗಳನ್ನು ವಿವರಿಸುತ್ತ ದಶಾವತಾರ ನೀತಿಸಂಹಿತೆಯನ್ನ ಬೋಧಿಸುತ್ತ ‘ಗೀತೋಪದೇಷ’ ಮೂಲಕ ಗೀತಾಚಾರ್ಯನೆಂಬ ಬಿರುದು ಪಡೆಯುತ್ತಾನೆ. ಪಾಂಡವರಿಂದ ಅಶ್ವಮೇಧಯಾಗ ಮೂಲಕ ಅರ್ಜುನನ ಅಹಂಕಾರವನ್ನು ಅವನ ಮಗ ಬಭ್ರುವಾಹನ ನಿಂದಲೆ ಬಗ್ಗು ಬಡಿಸುತ್ತಾನೆ. ಪಾಂಡವರಿಗೆ ದಿಕ್ಕುದೆಸೆ ಮತಿಗತಿ ಶ್ರೀಕೃಷ್ಣನೇ ಎಂಬುದನ್ನು ಪದೇಪದೇ ನೆನಪಿಸುತ್ತಾನೆ.

ತ್ರೇತಾ ಯುಗದಲ್ಲಿ ವಾಲಿಯನ್ನು ಕೊಂದು ಶಾಪಗ್ರಸ್ಥನಾದ ರಘುರಾಮ ತನ್ನ ಶಾಪ ವಿಮೋಚನೆಗಾಗಿ ದ್ವಾಪರ ಯುಗದಲ್ಲಿ ಶ್ರೀಕೃಷ್ಣನಾಗಿ ಅವತರಿಸಿ, ಅಣ್ಣ ಬಲರಾಮನಿಗೆ ಸಾಮ್ರಾಜ್ಯ ಆಳುವ ಉಸ್ತುವಾರಿ ನೀಡುತ್ತಾನೆ. ಮುನಿಯ ಶಾಪದಿಂದಾಗಿ ಉದ್ಭವಿಸಿದ ಯಾದವೀ ಕಲಹದಿಂದಾಗಿ ಯದುಕುಲ ಸರ್ವನಾಶವಾಗುತ್ತದೆ. ಇದೇ ಚಿಂತೆಯಲ್ಲಿದ್ದ ಕೃಷ್ಣನು ಸಮುದ್ರ ತೀರದ ಬಳಿ ವಿಶ್ರಾಂತಿ ತೆಗೆದುಕೊಳ್ಳುವಾಗ ಬೇಡನ (ವಾಲಿ ಪುನರ್ಜನ್ಮ) ಶಬ್ಧವೇದಿ ಬಾಣ ತನ್ನ ಪಾದಕ್ಕೆ ಚುಚ್ಚಿದಾಗ ತ್ರಿಕಾಲ ಜ್ಞಾನಿ ಮುರಳಿಲೋಲನ ಅಂತ್ಯವಾಗುತ್ತದೆ. ಈ ರೀತಿಯಲ್ಲಿ ವಿಷ್ಣುವಿನ ಕೃಷ್ಣಾವತಾರ ಅಂತ್ಯ ಆಗುವುದರೊಡನೆ ದ್ವಾಪರ ಯುಗವು ಸಹ ಪರ್ಯಾವಸಾನ ಆಗುತ್ತದೆ?!

ಶ್ರೀಕೃಷ್ಣನ ಬಗ್ಗೆ ಅಸಂಖ್ಯಾತ ಉಧಾಹರಣೆ ನೀಡಬಹುದು: “ಕೃಷ್ಣ….ಎನಬಾರದೇ…..”   “ಕೃಷ್ಣ..ನೀ ಬೇಗನೆ ಬಾರೋ….’‘ “ಬೇಡಕೃಷ್ಣ…ರಂಗಿನಾಟ ಸೀರೆನೆನೆವುದು…”   “ಕರೇ.. ಕರೇ…. ಕೃಷ್ಣನ…ಕೊಳಲಿನ…ಕರೇ..” ಕೃಷ್ಣನ ಅವಲಕ್ಕಿ ಮಿತ್ರ ಕುಚೇಲನ “ಕೃಷ್ಣಎಂದರೆ ಭಯವಿಲ್ಲ ಶ್ರೀಕೃಷ್ಣಎನದೆ ಸುಖವಿಲ್ಲ” ಇವೆಲ್ಲವು ಚಿರಸ್ಥಾಯಿ ಅವಿಸ್ಮರಣೀಯ! ಪ್ರಸ್ತುತ ಕಲಿಯುಗದ 1970ರ ದಶಕದಲ್ಲಿ ಅಂದಿನ ಹಿಪ್ಪೀ ಸಂಸ್ಕೃತಿಯಿಂದ ಸ್ಫೂರ್ತಿಗೊಂಡ ಬಾಲಿವುಡ್‍ ಖ್ಯಾತನಟ ದೇವಾನಂದ್  “ಹರೇ ರಾಮ ಹರೇ ಕೃಷ್ಣ”

ಹಿಂದಿ ಸಿನಿಮಾದ ನಟಿ ಝೀನತ್ತಮಾನ್ ಮೂಲಕ “ದಂ….ಮಾರೋ.. ದಂ..ಮಿಟ್ ಜಾಯೇ ಹಂ..” ನಶೆಯ ಹಾಡು ಹೇಳಿದ ಚಿತ್ರ ತಯಾರಿಸಿ ಬಿಡುಗಡೆ ಗೊಳಿಸಿದರು. ಈ ಹಾಡು ಮತ್ತು ದೃಶ್ಯ ಇವತ್ತಿಗೂ ಎಂಜಾಯ್ ಮಾಡುವಂತಿದೆ? ಅಂದಿನ ಕಾಲದ ಈ ಚಿತ್ರವು ಪ್ರಪಂಚದಾದ್ಯಂತ ನವ ಯುವಕರಲ್ಲಿ ವಿದ್ಯುತ್ ಸಂಚಲನವುಂಟು ಮಾಡಿ ‘ಶ್ರೀಕೃಷ್ಣ ಪಂಥವನ್ನು ಒಪ್ಪಿಕೊಂಡು ಅಪ್ಪಿಕೊಂಡ ಹಿಪ್ಪೀ ಕ್ರಾಂತಿ’ ಒಂದು ಹೊಸ ಅಲೆಯನ್ನೆ ಸೃಷ್ಟಿಸಿತು!

“ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ” ಭಕ್ತಿಗೀತೆ ಹಾಡುತ್ತ ಉಡುಪಿ ಶ್ರೀಕೃಷ್ಣ ದೇವಾಲಯದ ಗರ್ಭಗುಡಿ ದಿಕ್ಕನ್ನೆ ಬದಲಿಸಿ ಕಿಂಡಿಯಾಗಿಸಿದ ಕನಕದಾಸ ಮತ್ತು “ಈಪರಿಯ ಸೊಬಗು ಇನ್ನಾವ ದೇವರಲು ಕಾಣೇ ಗೋಪಿ ಜನಪ್ರಿಯ ಗೋಪಾಲಗಲ್ಲದೇ…” ಎಂದು ಹಾಡಿ ಹೊಗಳಿದ ಪುರಂದರದಾಸ. ಇಂತಹ ಶ್ರೇಷ್ಠಭಕ್ತರೆಲ್ಲರ ಜತೆಗೇ ಇತ್ತೀಚೆಗೆ ಓರ್ವಬಾಲಕಿ ಹಾಡಿದ “ಜಯ ಜನಾರ್ಧನ ಕೃಷ್ಣ ರಾಧಿಕಾಪತೇ…” ಮುಂತಾದ ಅನೇಕ ಭಕ್ತಿಗೀತೆಗಳು, ಕೀರ್ತನೆಗಳು ಆಚಂದ್ರಾರ್ಕ ಅಜರಾಮರ!

admin
the authoradmin

ನಿಮ್ಮದೊಂದು ಉತ್ತರ