ಜೀವನದುದ್ದಕ್ಕೂ ನಮಗಾಗುವ ‘ಅನುಭವ’ ಲೆಕ್ಕವಿಲ್ಲದಷ್ಟು ಪಾಠವನ್ನು ಕಲಿಸುತ್ತಿರುತ್ತದೆ.. ಇದರಲ್ಲೂ ಒಳ್ಳೆಯ ಮತ್ತು ಕೆಟ್ಟ ಎಂಬ ವರ್ಗವಂತು ಇದ್ದೇ ಇದ್ದೇ… ಬದುಕಿಗೆ ಕೆಟ್ಟ ಅನುಭವ ಎಚ್ಚರಿಕೆಯಾದರೆ, ಒಳ್ಳೆಯ ಅನುಭವ ಪ್ರೇರಣೆಯಾಗುತ್ತದೆ… ಅನುಭವ ಏಕೆ ಬೇಕು ಎಂಬುದರ ಕುರಿತಂತೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಅವರು ಇಲ್ಲಿ ಬರೆದಿದ್ದಾರೆ… ಓದಿ ಅಭಿಪ್ರಾಯ ತಿಳಿಸಿ…
ಇದನ್ನೂ ಓದಿ… ಮೌನದ ಮಡಿಲಲಿ ಮನದ ಬೆಳಕು…. ಇದು ಬರೀ ಲೇಖನವಲ್ಲ… ನಿಮ್ಮೊಳಗಿನ ಗೊಂದಲಕ್ಕೆ ಟಾನಿಕ್…
ನಾನೀಗ ಹೇಳ ಹೊರಟಿರುವುದು ಬಿಸಿನೆಸ್ ನಲ್ಲಿ ಪದವಿ ಮಾಡಿದ, ಉತ್ತಮ ಅಂಕ ಗಳಿಸಿದ ಒಬ್ಬ ಯುವಕನದು. ಒಂದು ಪುಟ್ಟ ಹಳ್ಳಿಯಲ್ಲಿ ಒಬ್ಬ ಉತ್ಸಾಹಿ ಯುವಕನಿದ್ದ. ತಾತ ನೆಟ್ಟಿದ್ದ ಮಾವಿನ ಮರದಲ್ಲಿ ಭರಪೂರ ಹಣ್ಣುಗಳಾಗಿದ್ದವು. ಅವನು ಯೋಚಿಸಿದ, “ಮಾವಿನ ಹಣ್ಣು ಮಾರುವುದು ಏನು ಮಹಾ? ನಾನೂ ವ್ಯಾಪಾರ ಮಾಡಿ ಲಾಭ ಗಳಿಸುತ್ತೇನೆ.” ತಾತನ ಅನುಭವದ ಮಾತುಗಳನ್ನು ಕೇಳದೆಯೇ, ಹಣ್ಣುಗಳನ್ನು ಕಿತ್ತುಕೊಂಡು ನೇರ ಮಾರುಕಟ್ಟೆಗೆ ಹೋದ.

ಅತಿ ಹೆಚ್ಚು ಲಾಭದ ಆಸೆಗೆ ಬಿದ್ದು, ಮಾರುಕಟ್ಟೆಯ ಬೆಲೆಗಿಂತ ದುಪ್ಪಟ್ಟು ಬೆಲೆ ನಿಗದಿಪಡಿಸಿದ. ಸಂಜೆಯಾದರೂ ಒಂದು ಹಣ್ಣೂ ಮಾರಾಟವಾಗಲಿಲ್ಲ; ಬದಲಿಗೆ ಬಿಸಿಲಿಗೆ ಹಣ್ಣುಗಳೆಲ್ಲಾ ಕೊಳೆತುಹೋದವು. ಅಂದು ಅವನು ಕಣ್ಣೀರು ಹಾಕುತ್ತಾ ಮನೆಗೆ ಮರಳಿದಾಗ ತಾತ ನಗುತ್ತಾ ಹೇಳಿದರು, “ಮಗನೇ, ವ್ಯಾಪಾರ ಮಾಡುವುದು ಹೇಗೆಂದು ಪುಸ್ತಕ ಓದಿ ಅಥವಾ ಬೇರೆಯವರನ್ನು ನೋಡಿ ಕರಗತ ಮಾಡಿಕೊಳ್ಳಲು ಸಾಧ್ಯವಿಲ್ಲ. ನೀನು ಕಳೆದುಕೊಂಡ ಹಣ್ಣುಗಳು ಮತ್ತು ನಿನ್ನ ಕಣ್ಣೀರು ನೀನು ಇಂದು ಕೊಂಡುಕೊಂಡ ‘ಅನುಭವ’ದ ಬೆಲೆ!”
ಇದನ್ನೂ ಓದಿ… ರೇಷ್ಮೆ ದಾರದ ಬಂಧ, ಅಣ್ಣ-ತಂಗಿಯ ಅನುಬಂಧ..! ಪ್ರೀತಿ, ಜಗಳ, ಮುನಿಸಿನ ಸಂಗಮ
ಹೌದು, ಅನುಭವ ಪುಕ್ಕಟೆಯಾಗಿ ಸಿಕ್ಕುವುದಿಲ್ಲ. ಜೀವನದಲ್ಲಿ ಅತ್ಯಂತ ಅಮೂಲ್ಯವಾದ ಪಾಠಗಳು ನಮಗೆ ಉಚಿತವಾಗಿ ದೊರೆಯುವುದಿಲ್ಲ; ಅದಕ್ಕೆ ನಾವು ಸಮಯ, ಶ್ರಮ, ಕೆಲವೊಮ್ಮೆ ವೈಫಲ್ಯದ ಬೆಲೆಯನ್ನು ತೆರಬೇಕಾಗುತ್ತದೆ.

ಅನುಭವ ಎಂದರೆ….?
ಅನುಭವ ಎಂದರೆ ಕೇವಲ ವಯಸ್ಸಾಗುವುದಲ್ಲ. ಅದು ನಾವು ಎದುರಿಸುವ ಘಟನೆಗಳು, ಮಾಡುವ ತಪ್ಪುಗಳು, ಅನುಭವಿಸುವ ಸೋಲುಗಳು ಮತ್ತು ಗೆಲುವುಗಳ ಒಟ್ಟು ಮೊತ್ತ. ಸರಳವಾಗಿ ಹೇಳಬೇಕೆಂದರೆ, “ಅನುಭವ ಎಂಬುದು ನಮ್ಮ ತಪ್ಪುಗಳಿಗೆ ನಾವು ಕೊಡುವ ಕೃತಜ್ಞತಾ ಪೂರ್ವಕ ಹೆಸರು.” ಪುಸ್ತಕಗಳು ನಮಗೆ ಜ್ಞಾನವನ್ನು ನೀಡಬಹುದು, ಆದರೆ ಆ ಜ್ಞಾನವನ್ನು ಬದುಕಿನಲ್ಲಿ ಹೇಗೆ ಬಳಸಬೇಕೆಂದು ಕಲಿಸುವುದು ಅನುಭವ ಮಾತ್ರ.
ಇದನ್ನೂ ಓದಿ… ಇಂದಿನ ಮೋಜು, ನಾಳಿನ ಮುಳ್ಳು… ಮೋಜು ಮಸ್ತಿಯಲ್ಲಿ ತೇಲಾಡುವ ಮುನ್ನ ಒಮ್ಮೆ ಯೋಚಿಸಿ!
ಜಗತ್ತಿನ ಮಹಾನ್ ಸಾಧಕರು ಅನುಭವದ ಮಹತ್ವವನ್ನು ಹೀಗೆ ಸಾರಿದ್ದಾರೆ… ಆಲ್ಬರ್ಟ್ ಐನ್ ಸ್ಟೈನ್ : “ಮಾಹಿತಿಯೇ ಜ್ಞಾನದಲ್ಲ. ಜ್ಞಾನದ ಏಕೈಕ ಮೂಲ ಅನುಭವ.”ಎ.ಪಿ.ಜೆ. ಅಬ್ದುಲ್ ಕಲಾಂ: “ಕಷ್ಟಗಳು ಮತ್ತು ವೈಫಲ್ಯಗಳು ಬದುಕಿನ ಅತ್ಯಗತ್ಯ ಭಾಗಗಳು. ಏಕೆಂದರೆ ಅವುಗಳ ಮೂಲಕ ಸಿಗುವ ಅನುಭವವೇ ಯಶಸ್ಸಿನ ತಳಹದಿ.”ಹೆನ್ರಿ ಫೋರ್ಡ್ ” ನೀವು ಯಾವುದನ್ನಾದರೂ ಕಳೆದುಕೊಂಡಾಗ, ಅದರಿಂದ ಸಿಗುವ ಅನುಭವವನ್ನು ಮಾತ್ರ ಕಳೆದುಕೊಳ್ಳಬೇಡಿ.”

ಥಾಮಸ್ ಅಲ್ವಾ ಎಡಿಸನ್ ಸಾವಿರ ಬಾರಿ ಪ್ರಯೋಗಗಳಲ್ಲಿ ಸೋತಾಗ, ಜಗತ್ತು ಅವರನ್ನು ಅಪಹಾಸ್ಯ ಮಾಡಿತು. ಆದರೆ ಎಡಿಸನ್, “ನಾನು ಸೋತಿಲ್ಲ, ಬದಲಿಗೆ ಬಲ್ಬ್ ತಯಾರಿಸಲು ಅಸಾಧ್ಯವಾದ 1000 ದಾರಿಗಳನ್ನು ಅನುಭವದ ಮೂಲಕ ಕಂಡುಕೊಂಡಿದ್ದೇನೆ” ಎಂದರು. ಇದನ್ನೇ ಅನುಭವದ ರಸಾಯನಶಾಸ್ತ್ರ ಎನ್ನುವುದು! ಇಂದಿನ ಧಾವಂತದ ಜೀವನದಲ್ಲಿ ಅನುಭವದ ರಸಾಯನ ದಕ್ಕಿಸಿಸಿಕೊಳ್ಳದೆ ತರಾತುರಿಯಲ್ಲಿ ಓಡುತ್ತಿರುವ ಅನುಭವ ದಕ್ಕಿಸಿಕೊಳ್ಳಲು ಯುವ ಜನತೆಗೆ ಕೆಲವು ಪ್ರಾಯೋಗಿಕ ಸಲಹೆಗಳು ಇಲ್ಲಿವೆ.
ಇದನ್ನೂ ಓದಿ… ಬದುಕಿನ ಶ್ರೀಮಂತಿಕೆ ಯಾವುದರಲ್ಲಿದೆ? ಪ್ರಾಮಾಣಿಕತೆ ಕಳೆದುಕೊಂಡ ಬದುಕು ಬದುಕೇ ಅಲ್ಲ…!
ಸದಾ ಕ್ರಿಯಾತ್ಮಕರಾಗಿ….
ಇಂದಿನ ತಂತ್ರಜ್ಞಾನ ಯುಗದ ಯುವ ಜನತೆ ಪ್ರತಿಯೊಂದೂ ತತ್ ಕ್ಷಣವಾಗಿ ಸಿಗಬೇಕೆಂದು ಬಯಸುತ್ತಾರೆ. ಆದರೆ ನೆನಪಿರಲಿ, ಅಂತರ್ಜಾಲವು ನಿಮಗೆ ಮಾಹಿತಿಯನ್ನು ನೀಡಬಲ್ಲದೇ ಹೊರತು ಅನುಭವವನ್ನಲ್ಲ. ಯುವ ಪೀಳಿಗೆಯು ಇತಿಹಾಸದ ಸಾಧಕರ ಹೆಜ್ಜೆಗುರುತುಗಳನ್ನು ಗಮನಿಸುತ್ತಾ, ತಮ್ಮ ದೈನಂದಿನ ಬದುಕಿನಲ್ಲಿ ಜ್ಞಾನವನ್ನು ಕ್ರಿಯಾತ್ಮಕವಾಗಿ ಅಳವಡಿಸಿಕೊಳ್ಳಬೇಕಾಗಿದೆ. ಕೇವಲ ಯೋಚನೆಗಳಿಗೆ ಸೀಮಿತವಾಗದೆ, ನೈಜ ಜಗತ್ತಿನ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು. ಈ ನಿಟ್ಟಿನಲ್ಲಿ, ಯುವ ಪೀಳಿಗೆಯು ನಿಜವಾದ ಅನುಭವವನ್ನು ದಕ್ಕಿಸಿಕೊಳ್ಳಲು ಈ ಕೆಳಗಿನ ದಾರಿಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ.

ಸುರಕ್ಷಿತ ವಲಯದಿಂದ ಹೊರಬನ್ನಿ
ನಾಲ್ಕು ಗೋಡೆಗಳ ಮಧ್ಯೆ, ಮೊಬೈಲ್ ಪರದೆಯ ಮುಂದೆ ಕುಳಿತರೆ ಜಗತ್ತು ತಿಳಿಯುವುದಿಲ್ಲ. ಹೊಸ ಜಾಗಗಳಿಗೆ ಪ್ರಯಾಣ ಬೆಳೆಸಿ, ವಿಭಿನ್ನ ಸಂಸ್ಕೃತಿಯ ಜನರನ್ನು ಭೇಟಿಯಾಗಿ. ಕಷ್ಟಕರ ಸನ್ನಿವೇಶಗಳನ್ನು ಎದುರಿಸಿದಾಗ ಮಾತ್ರ ನಿಮ್ಮೊಳಗಿನ ನಿಜವಾದ ಸಾಮರ್ಥ್ಯ ಮತ್ತು ಸಮಯಪ್ರಜ್ಞೆ ನಿಮಗೆ ಅನುಭವದ ರೂಪದಲ್ಲಿ ದಕ್ಕುತ್ತದೆ. ಹೊಸ ಆಲೋಚನೆಗಳು ಹುಟ್ಟಿಕೊಳ್ಳುತ್ತವೆ.
ಇದನ್ನೂ ಓದಿ… ಬದುಕಿಗೆ ಬೇಕಿರುವುದು ಕ್ಷಣಿಕ ಉತ್ಸಾಹವಲ್ಲ,.. ಗುರಿ ತಲುಪುವ ನಿರಂತರತೆಯ ಛಲ…
ಸೋಲಿಗೆ ಹೆದರಬೇಡಿ
ಯುವಜನತೆ ತಪ್ಪು ಮಾಡಲು ಹೆದರಬಾರದು. ತಪ್ಪುಗಳು ನಮಗೆ “ಏನು ಮಾಡಬಾರದು” ಎನ್ನುವ ಅತ್ಯುತ್ತಮ ಅನುಭವವನ್ನು ನೀಡುತ್ತವೆ. ಹೊಸ ಕೌಶಲಗಳು ಅಥವಾ ಕಲೆಗಳನ್ನು ಕಲಿಯುವಾಗ ಆರಂಭದಲ್ಲಿ ಹಿನ್ನಡೆಯಾಗುವುದು ಸಹಜ. ಆ ಹಿನ್ನಡೆಯೇ ನಿಮ್ಮ ಮುಂದಿನ ಹಾದಿಗೆ ಮಾರ್ಗದರ್ಶಕ. ಪ್ರತಿ ಸೋಲೂ ನಿಮ್ಮನ್ನು ಯಶಸ್ಸಿನ ಹಾದಿಗೆ ಒಂದು ಹೆಜ್ಜೆ ಹತ್ತಿರವಾಗಿಸುವ ತರಬೇತಿಯಾಗಿದೆ.

ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಿ.. ಕೇವಲ ಪದವಿ ಪ್ರಮಾಣಪತ್ರಗಳು ಇಂದಿನ ಜಗತ್ತಿಗೆ ಸಾಲುವುದಿಲ್ಲ. ಕಾಲೇಜು ದಿನಗಳಲ್ಲೇ ಉದ್ಯಮಗಳಲ್ಲಿ ಪ್ರಾಯೋಗಿಕ ತರಬೇತಿ ಪಡೆಯಿರಿ. ಸಾಮಾಜಿಕ ಸಂಸ್ಥೆಗಳಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿ. ಹಣಕ್ಕಿಂತ ಹೆಚ್ಚಾಗಿ, ಅಲ್ಲಿ ಸಿಗುವ ಪ್ರಾಯೋಗಿಕ ಜ್ಞಾನ ಮತ್ತು ಜನರೊಂದಿಗೆ ವ್ಯವಹರಿಸುವ ಕಲೆ ನಿಮ್ಮ ಜೀವನದ ದೊಡ್ಡ ಆಸ್ತಿಯಾಗುತ್ತದೆ. ಇದು ನಿಮ್ಮ ನಾಯಕತ್ವ ಗುಣ ಮತ್ತು ಸಂವಹನ ಕರಗತ ಮಾಡಿಕೊಳ್ಳಲು ನೆರವಾಗುತ್ತದೆ.
ಮಾರ್ಗದರ್ಶಕರಿಂದ ಕಲಿಯಿರಿ
ನಿಮ್ಮ ಹೆತ್ತವರು, ಶಿಕ್ಷಕರು ಅಥವಾ ಸಾಧಕರ ಅನುಭವದ ಮಾತುಗಳನ್ನು ‘ಹಳೆಯ ಚಿಂತನೆ’ ಎಂದು ತಳ್ಳಿಹಾಕಬೇಡಿ. ಅವರು ಈಗಾಗಲೇ ನಡೆದು ಬಂದ ಹಾದಿಯಲ್ಲಿನ ಗುಂಡಿಗಳ ಬಗ್ಗೆ ನಿಮಗೆ ಎಚ್ಚರಿಸುತ್ತಿರುತ್ತಾರೆ. ಅವರ ಅನುಭವದಿಂದ ಕಲಿಯುವುದು ನಿಮ್ಮ ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ. ಬೇರೆಯವರ ತಪ್ಪುಗಳಿಂದ ಕಲಿಯುವವನು ಬುದ್ಧಿವಂತ, ತನ್ನದೇ ತಪ್ಪುಗಳಿಂದ ಮಾತ್ರ ಕಲಿಯುವವನು ಸಾಧಾರಣ.ಎಂಬುದನ್ನು ಮರೆಯಬೇಡಿ.

ತಾಳ್ಮೆ ಮತ್ತು ಸ್ಥಿರತೆ ರೂಢಿಸಿಕೊಳ್ಳಿ
ಯಾವುದೇ ದೊಡ್ಡ ಸಾಧನೆ ರಾತ್ರೋರಾತ್ರಿ ಆಗುವುದಿಲ್ಲ. ಒಂದು ಗಿಡ ಮರವಾಗಲು, ಹಣ್ಣು ನೀಡಲು ತನ್ನದೇ ಆದ ಸಮಯ ತೆಗೆದುಕೊಳ್ಳುತ್ತದೆ. ಪ್ರತಿದಿನದ ಸಣ್ಣ ಪ್ರಯತ್ನಗಳು ಮತ್ತು ನಿರಂತರತೆ ನಿಮ್ಮನ್ನು ಪರಿಣಿತರನ್ನಾಗಿ ಮಾಡುತ್ತದೆ. ಮಹಾತ್ಮ ಗಾಂಧೀಜಿಯವರ ಈ ಮಾತನ್ನು ನೆನಪಿಡಿ.. “ತಾಳ್ಮೆಯನ್ನು ಕಳೆದುಕೊಳ್ಳುವುದು ಯುದ್ಧವನ್ನು ಕಳೆದುಕೊಂಡಂತೆ.”
ನೈಜ ಸಾಮಾಜಿಕ ಸಂಪರ್ಕ ಬೆಳೆಸಿ
ಸಾಮಾಜಿಕ ಜಾಲತಾಣಗಳ ಅನುಯಾಯಿಗಳ ಸಂಖ್ಯೆಗಿಂತ, ನೈಜ ಜಗತ್ತಿನಲ್ಲಿ ನೀವು ಗಳಿಸುವ ಸ್ನೇಹಿತರು ಮತ್ತು ಹಿತೈಷಿಗಳು ಮುಖ್ಯ. ವಿಭಿನ್ನ ಕ್ಷೇತ್ರಗಳ ತಜ್ಞರೊಂದಿಗೆ ಮುಖಾಮುಖಿ ಚರ್ಚೆ ನಡೆಸಿ. ಇದು ನಿಮ್ಮ ಆಲೋಚನಾ ಲಹರಿಯನ್ನು ವಿಸ್ತರಿಸುತ್ತದೆ. ಉದ್ಯಮ ದೈತ್ಯ ಜಾನ್ ಡಿ. ರಾಕ್ಫೆಲ್ಲರ್ ಹೇಳುತ್ತಾರೆ: “ಜನರೊಂದಿಗೆ ವ್ಯವಹರಿಸುವ ಕಲೆ ಇತರ ಎಲ್ಲ ಕೌಶಲಗಳಿಗಿಂತ ಅಮೂಲ್ಯವಾದುದು.

ಸ್ವಯಂ ವಿಶ್ಲೇಷಣೆ ಮಾಡಿ
ದಿನದ ಕೊನೆಯಲ್ಲಿ ಐದು ನಿಮಿಷ ಅಂದು ನಡೆದ ಘಟನೆಗಳನ್ನು ಅವಲೋಕಿಸಿ. ಇಂದು ನಾನೇನು ಕಲಿತೆ? ಎಲ್ಲಿ ಎಡವಿದೆ? ಎಂದು ಯೋಚಿಸಿ. ದಿನಚರಿ ಬರೆಯುವುದರಿಂದ ನಿಮ್ಮ ತಪ್ಪುಗಳು ನಿಮಗೆ ಅರ್ಥವಾಗಿ, ಮುಂದಿನ ಬಾರಿ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ. ಸಾಕ್ರಟೀಸ್ ಹೇಳಿದಂತೆ: “ಪರಿಶೀಲಿಸದ ಜೀವನ ಬದುಕಲು ಯೋಗ್ಯವಲ್ಲ.
ಆರ್ಥಿಕ ಶಿಸ್ತು ಕಲಿಯಿರಿ
ಚಿಕ್ಕ ವಯಸ್ಸಿನಲ್ಲೇ ಹಣದ ಮೌಲ್ಯವನ್ನು ತಿಳಿಯುವುದು ಅತಿ ಮುಖ್ಯ. ಕೈಖರ್ಚಿನ ಇತಿಮಿತಿಯಲ್ಲೇ ಆಯವ್ಯಯ ಮಾಡುವುದು, ಸಣ್ಣ ಹೂಡಿಕೆ ಮಾಡುವುದು ಮತ್ತು ಖರ್ಚುಗಳನ್ನು ನಿಭಾಯಿಸುವುದರಿಂದ ಆರ್ಥಿಕ ಶಿಸ್ತಿನ ದೊಡ್ಡ ಅನುಭವ ಸಿಗುತ್ತದೆ. ವಾರೆನ್ ಬಫೆಟ್ ಅವರ ಪ್ರಸಿದ್ಧ ಮಾತು: “ಖರ್ಚು ಮಾಡಿದ ನಂತರ ಉಳಿಯುವುದನ್ನು ಉಳಿಸಬೇಡಿ, ಬದಲಿಗೆ ಉಳಿಸಿದ ನಂತರ ಉಳಿದುದನ್ನು ಖರ್ಚು ಮಾಡಿ.

ಬದುಕಿನ ರಂಗಕ್ಕೆ ಧುಮುಕಿ
ಬದುಕು ಒಂದು ಸುಂದರವಾದ ಶಾಲೆ. ಇಲ್ಲಿ ಮೊದಲು ಪರೀಕ್ಷೆ ಇರುತ್ತದೆ, ನಂತರ ಪಾಠ ಕಲಿಯಬೇಕಾಗುತ್ತದೆ. ಅನುಭವ ಎಂಬ ಶಿಕ್ಷಕ ನೀಡುವ ಪಾಠಗಳು ಕಠಿಣವಾಗಿದ್ದರೂ, ಅವು ಶಾಶ್ವತವಾಗಿರುತ್ತವೆ. ಪ್ರಿಯ ಯುವಮಿತ್ರರೇ, ಸುಮ್ಮನೆ ಕುಳಿತು ಕಾಲಹರಣ ಮಾಡುವ ಬದಲಿಗೆ, ಬದುಕಿನ ರಂಗಕ್ಕೆ ಧುಮುಕಿ. ತಪ್ಪುಗಳನ್ನು ಮಾಡಿ, ಅದರಿಂದ ಕಲಿಯಿರಿ, ಅನುಭವದ ಬೆಂಕಿಯಲ್ಲಿ ಬೆಂದು ಅಪ್ಪಟ ಚಿನ್ನವಾಗಿ ಹೊರಹೊಮ್ಮಿ.
ಇದನ್ನೂ ಓದಿ..ಇರುವೆಯಿಂದ ಮನುಷ್ಯ ಕಲಿಯ ಬೇಕಾಗಿದೆ… ಇಷ್ಟಕ್ಕೂ ಸಿರಿತನ ಅಂದ್ರೆ ಏನು?
ಏಕೆಂದರೆ, “ಅನುಭವದ ಅಂಗಡಿಯಲ್ಲಿ ಜ್ಞಾನವನ್ನು ಕೊಳ್ಳಬೇಕಾದರೆ, ನಾವು ಮುಖಬೆಲೆಯಾಗಿ ನಮ್ಮ ಸಮಯ ಮತ್ತು ಶ್ರಮವನ್ನು ನೀಡಲೇಬೇಕು.”ಬದುಕು ಎಂಬುದು ಕೇವಲ ದಿನಗಳನ್ನು ಕಳೆಯುವ ಹಾದಿಯಲ್ಲ; ಅದು ಅನುಭವದ ಮುತ್ತುಗಳನ್ನು ಪೋಣಿಸುವ ಸುಂದರ ಕಾವ್ಯ. ಅನುಭವ ಎಂಬ ಕಮ್ಮಟದಲ್ಲಿ ಬೆಂದಾಗ ಮಾತ್ರ ಬದುಕಿನ ಕಲ್ಲಿಗೆ ಶಿಲ್ಪದ ಅಂದ ಬರುತ್ತದೆ. ಸೋಲಿನ ಕಗ್ಗತ್ತಲೆಯು ಜ್ಞಾನದ ಉದಯಕ್ಕೆ ಮುನ್ನುಡಿಯೇ ಹೊರತು ಅಂತ್ಯವಲ್ಲ.

ಕೊನೆ ಹನಿ…
ಸುಮ್ಮನೆ ದಡದಲ್ಲಿ ಕುಳಿತು ಆಳವನ್ನು ಅಳೆಯದಿರಿ. ಬದುಕಿನ ಮಹಾಸಾಗರಕ್ಕೆ ಧುಮುಕಿ, ಸವಾಲುಗಳ ಅಲೆಗಳನ್ನೆದುರಿಸಿ, ಅನುಭವದ ಸಿಹಿಯನ್ನು ಸವಿಯಿರಿ. ನೆನಪಿರಲಿ, ಪ್ರತಿ ನಡುರಾತ್ರಿಯ ಗರ್ಭದಲ್ಲೂ ಒಂದು ಉಜ್ವಲ ಸೂರ್ಯೋದಯ ಅಡಗಿರುತ್ತದೆ. ನಿಮ್ಮ ಶ್ರಮ, ತಾಳ್ಮೆ ಮತ್ತು ಅನುಭವದ ದಾರಿದೀಪ ನಿಮ್ಮನ್ನು ಯಶಸ್ಸಿನ ಶಿಖರಕ್ಕೆ ಮುನ್ನಡೆಸೇ ಮುನ್ನಡೆಸುತ್ತದೆ.
ಇದನ್ನೂ ಓದಿ.. ನಮ್ಮ ಸಂಸಾರ ಆನಂದ ಸಾಗರ… ಪ್ರೀತಿಯೇ ನಮಗೆ ಆಧಾರ…. ತುಡಿತ ಮಿಡಿತಗಳ ಸಮ್ಮಿಲನ..
ನೆನಪಿಡಿ, ಬದುಕಿನ ಏರಿಳಿತಗಳ ಸಾಗರದಲ್ಲಿ ಯಶಸ್ಸಿನ ದಡ ಸೇರಲು ಬೇಕು ಅನುಭವದ ಅಲೆಗಳು! ಸದಾ ಸಕಾರಾತ್ಮಕವಾಗಿ ಯೋಚಿಸಿ, ಜಗತ್ತನ್ನು ಗೆಲ್ಲಲು ಹೆಜ್ಜೆ ಇಡಿ!









