LatestMysore

ಶಾಲೆಗಳೆಡೆಗೆ ವಚನಗಳ ನಡಿಗೆ, ಅನ್ವರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮ

ಲಿಂಗಸುಗೂರು: ಶರಣು ವಿಶ್ವ ವಚನ ಫೌಂಡೇಷನ್, ರಾಯಚೂರು ಜಿಲ್ಲಾ ಘಟಕ ಮತ್ತು ಲಿಂಗಸುಗೂರು ತಾಲೂಕು ಘಟಕದ ವತಿಯಿಂದ  ಧಾರವಾಡದ ಆರ್ ಎಂ ಪಾಟೀಲ್ ಎಂ ಎಲ್ ಪಾಟೀಲ್ ಅವರ ದತ್ತಿ ಅಂಗವಾಗಿ ಸರ್ಕಾರಿ ಪ್ರೌಢಶಾಲೆ, ಅನ್ವರಿಯಲ್ಲಿ 131ನೇ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಶರಣ ಮೌನುದ್ದೀನ್ ಬೂದಿನಾಳ ಅವರು ಶರಣ ಬಂಧುಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಶರಣು ವಿಶ್ವವಚನ ಫೌಂಡೇಷನ್‌ನ ರಾಯಚೂರು ಜಿಲ್ಲಾ ಅಧ್ಯಕ್ಷ ಬೆಟ್ಟಪ್ಪ ಕಸ್ತೂರಿ ಅತ್ತನೂರು ಅವರು, ಶಾಲೆಗಳೆಡೆಗೆ ವಚನಗಳ  ನಡಿಗೆ ಕಾರ್ಯಕ್ರಮದ ಮಹತ್ವ, ಧ್ಯೇಯ ಹಾಗೂ ಉದ್ದೇಶಗಳನ್ನು ವಿದ್ಯಾರ್ಥಿಗಳ ಮನಮುಟ್ಟುವಂತೆ ವಿವರಿಸಿದರು. ವಚನ ಸಾಹಿತ್ಯವನ್ನು ವಿದ್ಯಾರ್ಥಿಗಳ ಬದುಕಿನೊಂದಿಗೆ ಬೆಸೆಯುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಸವಚಿಂತಕ ಬಸವರಾಜಪ್ಪ ವಚನಗಳ ಮಹತ್ವ ಮತ್ತು ಸಾರವನ್ನು ವಿದ್ಯಾರ್ಥಿಗಳು ತಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಂಡು, ತಾವು ಕಲಿಯುತ್ತಿರುವ ವಿಷಯಗಳಿಗೂ ಅವುಗಳನ್ನು ಅನ್ವಯಿಸಿಕೊಳ್ಳಬೇಕು ಎಂದು ದೃಷ್ಟಾಂತಗಳ ಮೂಲಕ ಮನವರಿಕೆ ಮಾಡಿಕೊಟ್ಟರು.

ನಂತರ ಮಾತನಾಡಿದ ರವಿ ಎಸ್. ಚುಕನಟ್ಟಿ ವಿದ್ಯಾರ್ಥಿಗಳು ವಚನಗಳ ಸತ್ಯಾಸತ್ಯತೆ, ಮಹತ್ವ ಹಾಗೂ ಅವುಗಳಲ್ಲಿರುವ ವೈಜ್ಞಾನಿಕ ಚಿಂತನೆಗಳನ್ನು ಅರಿತುಕೊಳ್ಳಬೇಕು. ವಚನಗಳು 12ನೇ ಶತಮಾನದ ಶಿವಶರಣರ ಅನುಭವದ ನುಡಿಗಳಾಗಿದ್ದು, ಕಟ್ಟುಕಥೆಗಳಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ನಿತ್ಯವೂ ಒಂದೊಂದು ವಚನವನ್ನು ಪಠಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ನೆನಪಿನ ಶಕ್ತಿ ವೃದ್ಧಿಯಾಗುವುದರ ಜೊತೆಗೆ ಉತ್ತಮ ಚಿಂತನೆ ಮತ್ತು ಮೌಲ್ಯಗಳು ಬೆಳೆಯುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರೌಢಶಾಲೆ, ಅನ್ವರಿಯ ಮುಖ್ಯಶಿಕ್ಷಕ ಶಂಕರಪ್ಪ ಎಲ್. ಸಕ್ರಿ ಅವರು ಮಾತನಾಡಿ, ಬಸವಧರ್ಮ ನಡೆದು ಬಂದ ಹಾದಿ ಹಾಗೂ ವಚನ ಸಾಹಿತ್ಯದ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿದರು. ವಚನಗಳ ಸಂದೇಶವನ್ನು ಸಮಾಜದ ವಿವಿಧ ವರ್ಗಗಳಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ತಲುಪಿಸುವ ಮಹತ್ವದ ಕಾರ್ಯವನ್ನು ಮಾಡುತ್ತಿರುವ ಶರಣು ವಿಶ್ವವಚನ ಫೌಂಡೇಷನ್‌ನ ಸಂಸ್ಥಾಪಕರು ಹಾಗೂ ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳನ್ನು ಅಭಿನಂದಿಸಿದರು.

ವೈಜ್ಞಾನಿಕ ಚಿಂತನೆ, ಮಾನವೀಯ ಮೌಲ್ಯಗಳು ಹಾಗೂ ಸಮಾನತೆಯ ಸಂದೇಶವನ್ನು ಒಳಗೊಂಡ ವಚನ ಸಾಹಿತ್ಯವನ್ನು ಶಾಲಾ ವಿದ್ಯಾರ್ಥಿಗಳ ಬದುಕಿನೊಂದಿಗೆ ಜೋಡಿಸುವ ಇಂತಹ ಕಾರ್ಯಕ್ರಮಗಳು ಇನ್ನಷ್ಟು ವ್ಯಾಪಕವಾಗಿ ನಡೆಯಬೇಕೆಂದು ಅವರು ಆಶಿಸಿದರು. ಇದೇ ಸಂದರ್ಭದಲ್ಲಿ ಬಸವಗುರು ಬಸವಣ್ಣನವರ “ಕಾಯಕವೇ ಕೈಲಾಸ” ಎಂಬ ಮಹತ್ವದ ಸಂದೇಶದ ಅರ್ಥ ಮತ್ತು ಪ್ರಸ್ತುತತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಶರಣು ವಿಶ್ವವಚನ ಫೌಂಡೇಷನ್‌ನ ಲಿಂಗಸುಗೂರು ತಾಲೂಕು ಘಟಕದ ಕಾರ್ಯಕರ್ತ ಶರಣಪ್ಪ ಹೊಳೆಆಚೆ ಅವರು ಮಾತನಾಡಿ, ವಿದ್ಯಾರ್ಥಿಗಳು ನಿತ್ಯವೂ ವಚನವನ್ನು ಪಠಿಸುವ ಪರಿಪಾಠವನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಚನಗಳನ್ನು ಸ್ಪಷ್ಟವಾಗಿ ಹಾಗೂ ನಿರರ್ಗಳವಾಗಿ ಪಠಿಸಿದುದನ್ನು ಪ್ರಶಂಸಿಸಿ, ಅವರ ಪ್ರತಿಭೆಯನ್ನು ಮೆಚ್ಚಿಕೊಂಡರು.

ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲೆಯ ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳು ಹಾಗೂ ಶರಣ ಬಂಧುಗಳು ಉಪಸ್ಥಿತರಿದ್ದರು. ಇತ್ತೀಚೆಗೆ ಶರಣು ವಿಶ್ವವಚನ ಫೌಂಡೇಷನ್‌ಗೆ ಸೇರ್ಪಡೆಗೊಂಡ ರಾಯಚೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರನ್ನು ಈ ಸಂದರ್ಭದಲ್ಲಿ ಗೌರವಿಸಿ ಸತ್ಕರಿಸಲಾಯಿತು.

ವಿದ್ಯಾರ್ಥಿಗಳಲ್ಲಿ ವಚನ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಿ, ವಚನಗಳಲ್ಲಿರುವ ವೈಜ್ಞಾನಿಕ, ಸಾಮಾಜಿಕ, ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಅವರ ಬದುಕಿನಲ್ಲಿ ಅಳವಡಿಸುವ ಉದ್ದೇಶದೊಂದಿಗೆ ನಡೆದ ಈ ಕಾರ್ಯಕ್ರಮವು ಅರ್ಥಪೂರ್ಣವಾಗಿ ಮೂಡಿಬಂದಿತು.

admin
the authoradmin

ನಿಮ್ಮದೊಂದು ಉತ್ತರ