ಹೆಚ್.ಡಿ.ಕೋಟೆಯಲ್ಲಿರುವ ಆ ನಾಲ್ಕು ಜಲಾಶಯಗಳ ಬಗ್ಗೆ ನಿಮಗೆ ಗೊತ್ತಾ? ಮುಂಗಾರು ಆರಂಭದಲ್ಲಿಯೇ ಹರಿದು ಬಂದ ನೀರು…

ಮೈಸೂರು: ತನ್ನದೇ ಆದ ನಿಸರ್ಗ ಸಿರಿಯನ್ನು ಹೊಂದುವುದರೊಂದಿಗೆ ನಾಲ್ಕು ಜಲಾಶಯಗಳನ್ನು ಹೊಂದಿದ ಖ್ಯಾತಿಗೆ ಪಾತ್ರವಾಗಿರುವ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ಮಳೆಗಾಲದಲ್ಲಿ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ. ನದಿ ಮೂಲ ಮತ್ತು ಮಳೆಯ ನೀರನ್ನು ಆಶ್ರಯಿಸಿ ಜಲಾಶಯಗಳನ್ನು ನಿರ್ಮಿಸಲಾಗಿದ್ದು, ಇವು ರೈತರ ಜೀವನಾಡಿಯಾಗಿ ಗಮನಸೆಳೆಯುತ್ತಿವೆ.
ಹಾಗೆನೋಡಿದರೆ ನಿಸರ್ಗದ ಸುಂದರತೆಯನ್ನು ನೋಡಬೇಕೆಂದರೆ ಹೆಚ್.ಡಿ.ಕೋಟೆಗೆ ಹೋಗಬೇಕಾಗುತ್ತದೆ. ರಾಜಮಹಾರಾಜರಿಗೂ ಇದೇ ಕಾರಣಕ್ಕೆ ಹೆಚ್.ಡಿ.ಕೋಟೆ ಪ್ರಿಯವಾಗಿತ್ತು. ಇವತ್ತಿಗೂ ಇಲ್ಲಿನ ನಿಸರ್ಗ ಸೌಂದರ್ಯವನ್ನು ಸವಿಯಲೆಂದೇ ಪ್ರವಾಸಿಗರು ಬರುತ್ತಿರುತ್ತಾರೆ. ಅದರಲ್ಲೂ ಮಳೆಗಾಲದಲ್ಲಿ ಇಲ್ಲಿರುವ ನಾಲ್ಕು ಜಲಾಶಯಗಳು ಭರ್ತಿಯಾದರೆ ಅದರ ವೈಭವವನ್ನು ನೋಡಲು ಎರಡು ಕಣ್ಣುಗಳೇ ಸಾಲದಾಗುತ್ತವೆ.
ಇಲ್ಲಿರುವ ನಾಲ್ಕು ಜಲಾಶಯಗಳ ಪೈಕಿ ಕಬಿನಿ ಜಲಾಶಯವು ಇತರೆ ಮೂರು ಜಲಾಶಯಕ್ಕಿಂತ ಹಿರಿದಾಗಿದೆ. ಇದನ್ನು ನಂಬಿಕೊಂಡು ರೈತರು ಮಾತ್ರವಲ್ಲದೆ, ಬೆಂಗಳೂರು ಮತ್ತು ಮೈಸೂರು ಜನರಿದ್ದು, ಇಲ್ಲಿಂದಲೇ ನಗರಕ್ಕೆ ಕುಡಿಯುವ ನೀರು ಸರಬರಾಜಾಗುತ್ತದೆ.
ಈ ಬಾರಿ ಮುಂಗಾರು ಆರಂಭದಲ್ಲಿಯೇ ಜಲಾಶಯ ಭರ್ತಿಯಾಗುವತ್ತ ಸಾಗುತ್ತಿದೆ. ಕಬಿನಿ ಜಲಾಶಯಕ್ಕೆ ಕೇರಳದಲ್ಲಿ ಉತ್ತಮವಾಗಿ ಮಳೆಯಾದರೆ ನೀರು ಹರಿದು ಬಂದು ಬಿಡುತ್ತದೆ. ಆದರೆ ಉಳಿದ ಮೂರು ಜಲಾಶಯಗಳಿಗೆ ಜಲಮೂಲಗಳ ಕೊರತೆಯಿದೆ. ಹೀಗಾಗಿ ಆ ಮೂರು ಜಲಾಶಯಗಳು ಭರ್ತಿಯಾಗಬೇಕಾದರೆ ಮಳೆ ಇನ್ನಷ್ಟು ಸುರಿಯಲೇ ಬೇಕಾಗುತ್ತದೆ. ಈ ಬಾರಿ ಹೆಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ಅದರಲ್ಲೂ ಜಲಾಶಯಗಳ ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದು ಜಲಾಶಯದ ನೀರಿನ ಮಟ್ಟವು ಉತ್ತಮವಾಗಿದೆ. ಹೀಗಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಮುಂಗಾರು ಮಳೆ ಕೇರಳ ಮತ್ತು ತಾಲೂಕಿನಾದ್ಯಂತ ಉತ್ತಮವಾಗಿ ಸುರಿದ ಕಾರಣ ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ, ತಾರಕ ಮತ್ತು ನುಗು ಮಾತ್ರವಲ್ಲದೆ ಹೆಬ್ಬಾಳ ಜಲಾಶಯಗಳಲ್ಲಿ ನೀರು ಅಲೆಯಾಡುತ್ತಿದೆ. ಕಬಿನಿ ಜಲಾಶಯವನ್ನು ಹೊರತುಪಡಿಸಿ ಉಳಿದು ಮೂರು ಜಲಾಶಯದಲ್ಲಿ ಉತ್ತಮ ಪ್ರಮಾಣದಲ್ಲಿ ನೀರು ಕಾಣಿಸಿಕೊಳ್ಳುತ್ತಿರುವುದು ಎಲ್ಲವೂ ಖುಷಿಪಡುವ ವಿಚಾರವೇ.. ಎಲ್ಲ ವರ್ಷಗಳಲ್ಲೂ ಈ ಜಲಾಶಯಗಳು ಭರ್ತಿಯಾಗುವುದಿಲ್ಲ. ಈ ಜಲಾಶಯಗಳು ಅದರಲ್ಲೂ ತಾರಕ ಜಲಾಶಯದಲ್ಲಿ ನೀರಿದೆ ಎಂದರೆ ಅದಕ್ಕಿಂತ ಸಂತಸ ಬೇರೊಂದಿಲ್ಲ.
ಮೊದಲೆಲ್ಲ ತಾರಕ, ನುಗು ಜಲಾಶಯಗಳು ಎರಡೋ ಮೂರು ವರ್ಷಕ್ಕೊಮ್ಮೆ ಭರ್ತಿಯಾಗುತ್ತಿತ್ತು. ಆದರೆ 2018ರ ನಂತರ 2022ರವರೆಗೂ ಈ ಎಲ್ಲ ಜಲಾಶಯಗಳು ಪ್ರತಿವರ್ಷವೂ ಭರ್ತಿಯಾಗುತ್ತಾ ಬಂದಿತ್ತು. ಆದರೆ ಕಳೆದ 2023ರಲ್ಲಿ ಮುಂಗಾರು ಕ್ಷೀಣಗೊಂಡಿದ್ದರಿಂದ ಜಲಾಶಯಗಳು ಭರ್ತಿಯಾಗಿರಲಿಲ್ಲ. ಆದರೆ 2024ರಲ್ಲಿ ಮಳೆ ಉತ್ತಮವಾಗಿದ್ದರಿಂದ ಭರ್ತಿಯಾಗಿತ್ತು. 2017ರ ಬಳಿಕ ಉತ್ತಮ ಮಳೆಯಾದ ಪರಿಣಾಮ ಕಬಿನಿ, ತಾರಕ ಹಾಗೂ ನುಗು ಜಲಾಶಯದಲ್ಲಿ ನೀರಿನ ಶೇಖರಣೆ 2023ನ್ನು ಹೊರತು ಪಡಿಸಿ ಕಳೆದ ವರ್ಷವೂ ಉತ್ತಮ ಪ್ರಮಾಣದಲ್ಲಿಯೇ ಇತ್ತು.
ಇಲ್ಲಿರುವ ತಾರಕ ಜಲಾಶಯವನ್ನು. 1998ರಲ್ಲಿ ಕೃಷಿ ಉದ್ದೇಶಕ್ಕೆ ನಿರ್ಮಿಸಲಾಗಿದ್ದು, 2425 ಅಡಿ ಸಾಮರ್ಥ್ಯದ ಈ ಜಲಾಶಯ ಕ್ರಸ್ಟ್ ಗೇಟ್ 2006ರಲ್ಲಿ ಒಡೆದು ಜಲಾಶಯದ ನೀರು ಮನೆ, ಜಮೀನಿಗೆ ನುಗ್ಗಿ ಹಾನಿಯಾಗಿತ್ತು. ಈ ಜಲಾಶಯಕ್ಕೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೆಟಿಕುಪ್ಪೆ ವನ್ಯಜೀವಿ ವಲಯದಿಂದ ನೀರು ಹರಿದು ಬರುತ್ತದೆ. ಜತೆಗೆ ನಾಗರಹೊಳೆ ಹಾಗೂ ಸಾರಥಿ ಹೊಳೆಯೂ ಇದಕ್ಕೆ ಸೇರುತ್ತದೆ.
ಈ ಬಾರಿ ಅದರಲ್ಲೂ ನೀರಿನ ಪ್ರಮಾಣ ಹೆಚ್ಚಾಗಿದೆ. ಇದರ ಜತೆಗೆ ಹೆಬ್ಬಳ್ಳ ಜಲಾಶಯವಿದ್ದು, ಇದು ನಾಗರಹೊಳೆ ಅಭಯಾರಣ್ಯದೊಳಗಿಂದ ಹರಿಯುವ ಹೆಬ್ಬಳ್ಳ ನದಿ ಅಡ್ಡಲಾಗಿ ನಿರ್ಮಿಸಲಾದ ಜಲಾಶಯವಾಗಿದೆ. ಇದು 0.428 ಟಿಎಂಸಿ ನೀರಿನ ಸಂಗ್ರಹಮಟ್ಟ ಹೊಂದಿದೆ. ಕಬಿನಿಯ ನಂತರ ನುಗು ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ. ಇದಕ್ಕೆ ಕೇರಳದ ಮೂಲೆಹೊಳೆ ಚಿಕ್ಕಬರಗಿ, ದೊಡ್ಡಬರಗಿ, ಅಲನಹಳ್ಳಿ, ಕುರುಣೆಗಾಲ, ಕಾಡಬೇಗೂರು, ಹೊಸಕೋಟೆ, ಮುತ್ತಿಗೆಹುಂಡಿ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನ ನುಗು ಜಲಾಶಯದ ನೀರಿನ ಮಟ್ಟ 93 ಅಡಿಗೆ ದಾಟಿದೆ.
ಈ ಹಿಂದೆ 82 ಅಡಿಗಳಷ್ಟು ನೀರು ಜಲಾಶಯದಲ್ಲಿ ಸಂಗ್ರಹವಾಗಿತ್ತು. ಸದ್ಯ ಜಲಾಶಯಕ್ಕೆ 1392 ಕ್ಯೂಸೆಕ್ಸ್ ನೀರು ಒಳ ಹರಿವಿದೆ. ಇನ್ನು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೇ ತಿಂಗಳಿನಲ್ಲಿ ಜಲಾಶಯದಲ್ಲಿ ನೀರು ಸಂಗ್ರಹವಾಗಿದ್ದು, ಜಲಾಶಯದ ಗರಿಷ್ಠ ಮಟ್ಟ 110 ಅಡಿ ಇದೆ. ಸದ್ಯ ನೀರಿನ ಮಟ್ಟ 93 ಅಡಿ ಇದೆ. ಹಾಗೆಯೇ 5.44 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದರ ವ್ಯಾಪ್ತಿಗೆ ಸುಮಾರು 18,110 ಎಕರೆ ಅಚ್ಚುಕಟ್ಟು ಪ್ರದೇಶ ಬರಲಿದೆ. ಒಟ್ಟಾರೆ ನುಗು ಜಲಾಶಯದಲ್ಲಿ ನೀರು ತುಂಬಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿರುವುದಂತು ನಿಜ.