ಮೈಸೂರು: ನಗರದ ಕಾಳಿದಾಸ ರಸ್ತೆಯಲ್ಲಿರುವ ಯದುಗಿರಿ ಯತಿರಾಜ ಇದರ ಶಾಖಾ ಮಠ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಬೆಳಿಗ್ಗೆಯಿಂದಲೇ ದೇವಸ್ಥಾನವನ್ನು ಶುಚಿಗೊಳಿಸಿ, ತಳಿರು ತೋರಣಗಳಿಂದ ಸಿಂಗರಿಸಿ, ವಿಧವಿಧವಾದ ರಂಗೋಲಿ ಬಿಡಿಸಿ ಅಲಂಕರಿಸಲಾಗಿತ್ತು. ಶ್ರೀ ಕೃಷ್ಣನ ಮಂಟಪಕ್ಕೆ ಫಲವಸ್ತ್ರಗಳನ್ನು ಕಟ್ಟಿ, ಹೂವಿನಿಂದ ಸಿಂಗರಿಸಲಾಗಿತ್ತು.

ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ಕೆ.ಆರ್.ಯೋಗಾನರಸಿಂಹನ್ (ಮುರುಳಿ) ಇವರ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಅನೇಕ ಧಾರ್ಮಿಕ ಕಾರ್ಯಗಳು ನಡೆಯುತ್ತಿರುವುದು ಶ್ಲಾಘನೀಯ ಎಂದು ತಿಳಿಸಿ, ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಭಕ್ತರ, ದಾನಿಗಳ ಸಹಾಯದಿಂದ ನೆರವೇರಲಿ ಎಂದು ಆಶಿಸಿದರು.

ಇದೇ ವೇಳೆ ಆಗಮಿಸಿದ್ದ ಎಲ್ಲ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟಿ ಶಾಂತಾರಂ, ಅರ್ಚಕ ರಾಘವನರಸಿಂಹನ್, ನಾರಾಯಣ ಹಾಗೂ ಅಪಾರ ಭಕ್ತವೃಂದ ಉಪಸ್ಥಿತರಿದ್ದರು.








