ಕೊಡಗಿನ ಸಮಸ್ತ ಜನತೆಗೆ ಮರದ ಅಮೃತ – ಶುದ್ಧ ನೀರಾ(ಬೊಳ್ಳೆ ಕಳ್ಳ್) ಬೇಕು…. ಇದು ಕಾರ್ಮಿಕರೊಬ್ಬರ ಕಥೆಯಲ್ಲ. ಇದು ನನ್ನ, ನಿಮ್ಮ, ನಮ್ಮೆಲ್ಲರ ಮನೆಯ ಕಥೆ. ನಮ್ಮ ಅಜ್ಜಂದಿರನ್ನು ಒಮ್ಮೆ ಕಣ್ಣು ಮುಚ್ಚಿ ನೆನಪಿಸಿಕೊಳ್ಳೋಣ…
ಮೈ ತುಂಬಾ ಗಟ್ಟಿ, ಎದೆ ತುಂಬಾ ಧೈರ್ಯ. ಮುಂಜಾನೆ 4 ಗಂಟೆಗೆ ಏಳುವ ಮನುಷ್ಯ. ತೆಂಗಿನ ಮರ ಹತ್ತಿ, ತಾಜಾ ನೀರಾ ಇಳಿಸಿ, ಅದನ್ನು ಹಾಗೆಯೇ ಕುಡಿದು, ಮನೆಯಲ್ಲಿ ಹೆಂಡತಿ ಮಾಡಿದ ಬಿಸಿ ಬಿಸಿ ಅಕ್ಕಿ ರೊಟ್ಟಿ, ಬೇಂಬಳೆ ತಿಂದು ತೋಟಕ್ಕೆ ಹೋಗುತ್ತಿದ್ದ. ಯಾವ ಡಾಕ್ಟರ್ ಇಲ್ಲ, ಯಾವ ಮಾತ್ರೆ ಇಲ್ಲ. 100 ವರ್ಷ ಬದುಕಿದರೂ ಕಣ್ಣು ಮಂಜಾಗಲಿಲ್ಲ, ಕೈ ನಡುಗಲಿಲ್ಲ. ಬಿಪಿ, ಶುಗರ್, ಹೃದಯಾಘಾತ ಎಂಬ ಪದಗಳೇ ಅವರ ನಿಘಂಟಿನಲ್ಲಿ ಇರಲಿಲ್ಲ.

ಈಗ ನಮ್ಮನ್ನು ನೋಡಿಕೊಳ್ಳಿ…
40ಕ್ಕೆ ಕಣ್ಣಿಗೆ ಕನ್ನಡಕ, 45ಕ್ಕೆ ಶುಗರ್ ಮಾತ್ರೆ, 50ಕ್ಕೆ ಬಿಪಿ ಮಾತ್ರೆ. ಕೊಡಗಿನ ಪ್ರತಿ ಊರಿನಲ್ಲಿ ಈಗ ಸಾಮಾನ್ಯವಾಗಿ ಕೇಳುವ ಸುದ್ದಿ – “ನಿನ್ನೆ ತಾನೇ ಮಾತನಾಡಿದ, 42 ವರ್ಷದ ಯುವಕ ಹೃದಯಾಘಾತದಿಂದ ಹೋದನಂತೆ”. ಏಕೆ ಈ ಸಾವುಗಳು? ನಮ್ಮ ಹಿರಿಯರಿಗಿಂತ ನಾವು ಏನು ಕಡಿಮೆ ತಿಂದಿದ್ದೇವೆ? ಉತ್ತರ ಕಹಿಯಾಗಿದೆ, ಆದರೆ ಸತ್ಯವಾಗಿದೆ. ನಾವು ತಿನ್ನುತ್ತಿರುವುದು ಆಹಾರವಲ್ಲ, ನಾವು ಕುಡಿಯುತ್ತಿರುವುದು ಪಾನೀಯವಲ್ಲ – ಅದು ರಾಸಾಯನಿಕ. ನಮ್ಮ ಹಿರಿಯರು ಪ್ರಕೃತಿಯಿಂದ ನೇರವಾಗಿ ಬಂದಿದ್ದನ್ನು ತಿಂದರು. ನಾವು ಕಾರ್ಖಾನೆಯಲ್ಲಿ ಬಾಟಲಿಯಲ್ಲಿ ತುಂಬಿ ಬಂದಿದ್ದನ್ನು ಕುಡಿಯುತ್ತಿದ್ದೇವೆ.
ಇಂದು ಅಂಗಡಿಯಲ್ಲಿ ಸಿಗುವ ಚಿತ್ರ-ವಿಚಿತ್ರ ಹೆಸರಿನ ಮದ್ಯ ನೋಡಿ – ರಾಯಲ್, ಇಂಪೀರಿಯಲ್, ಗೋಲ್ಡ್. ಹೆಸರು ರಾಜನದ್ದು, ಒಳಗೆ ಇರುವುದು ವಿಷ. ಅದರಲ್ಲೂ 90 ರೂ, 120 ರೂ ಗೆ ಸಿಗುವ Cheaper ಮದ್ಯವಂತೂ ಕಾರ್ಮಿಕ ವರ್ಗದ ಕೈಗಳನ್ನು ಕೊಲ್ಲುತ್ತಿದೆ. ದಿನಕ್ಕೆ 500 ರೂ ದುಡಿದವನು 250 ರೂ ಅನ್ನು ಅದಕ್ಕೆ ಸುರಿದು, ಮರುದಿನ ಕೈ ನಡುಗುತ್ತಾ ಕೆಲಸಕ್ಕೆ ಬಾರದೆ ಮನೆಯನ್ನೇ ಹಾಳು ಮಾಡಿಕೊಳ್ಳುತ್ತಿದ್ದಾನೆ.

ಅದೇ ಅಂಗಡಿಯಲ್ಲಿ ಸಿಗುವ ಬಣ್ಣದ ತಂಪು ಪಾನೀಯಗಳಲ್ಲೂ ರಾಸಾಯನಿಕವೇ. ನಮ್ಮ ದೇಹವೇ ಇಂದು ರಾಸಾಯನಿಕದ ಗೋದಾಮಾಗಿದೆ. ಅದರ ಪರಿಣಾಮವೇ ಈ ಅಕಾಲಿಕ ಹೃದಯಾಘಾತಗಳು, ಕಿಡ್ನಿ ವೈಫಲ್ಯಗಳು. ಇದಕ್ಕೆ ನಮ್ಮ ಹಿರಿಯರು ನಮಗೆ ಕೊಟ್ಟುಹೋಗಿದ್ದ ನೈಸರ್ಗಿಕ ಪರಿಹಾರವೇ – ಶುದ್ಧ ತಾಜಾ ನೀರಾ. ಶುದ್ಧ ನೀರಾ ಎಂದರೆ ಮದ್ಯವಲ್ಲ, ಅದು ಮರದ ಅಮೃತ.. ಹಲವರಿಗೆ ತಪ್ಪು ಕಲ್ಪನೆ ಇದೆ. ನೀರಾ ಎಂದರೆ ಹೆಂಡ ಎಂದು. ಅಲ್ಲ.
ಬೆಳಗ್ಗೆ 6 ಗಂಟೆಯೊಳಗೆ ಮರದಿಂದ ಇಳಿಸಿದ ತಾಜಾ ರಸವೇ ನೀರಾ. ಅದು ಹಣ್ಣಿನ ರಸದಂತೆ ಸಿಹಿ. ಅದನ್ನು ಹಾಗೆಯೇ 4-5 ಗಂಟೆ ಇಟ್ಟರೆ ಮಾತ್ರ ಅದು ಹುದುಗಿ ಹೆಂಡವಾಗುತ್ತದೆ. ನಾವು ಕೇಳುತ್ತಿರುವುದು ಆ ಹೆಂಡವನ್ನಲ್ಲ, ಆ ತಾಜಾ ಅಮೃತವನ್ನು ಒಂದು ಲೋಟ ತಾಜಾ ನೀರಾದಲ್ಲಿ ಏನಿದೆ ಗೊತ್ತಾ? ವಿಜ್ಞಾನ ಹೇಳುವಂತೆ, ಪ್ರಕೃತಿ ಕೊಟ್ಟ ಅತ್ಯುತ್ತಮ ಆರೋಗ್ಯ ಪಾನೀಯಗಳಲ್ಲಿ ನೀರಾ ಒಂದು. ತಕ್ಷಣದ ಶಕ್ತಿ ನೈಸರ್ಗಿಕ ಗ್ಲೂಕೋಸ್ ಇರುವುದರಿಂದ ಕುಡಿದ 10 ನಿಮಿಷದಲ್ಲಿ ಸುಸ್ತು ಮಾಯ. ದೇಹಕ್ಕೆ ತಂಪು ಕೊಡಗಿನ ಬಿಸಿಲಿನಲ್ಲಿ ದುಡಿಯುವ ರೈತ, ಕಾರ್ಮಿಕನಿಗೆ ಇದು ನೈಸರ್ಗಿಕ ORS. ವಿಟಮಿನ್ ಗಳ ಆಗರ B-Complex, ವಿಟಮಿನ್ C, ಕಬ್ಬಿಣಾಂಶ, ಇನ್ನೂ ಅನೇಕ.

ಜೀರ್ಣಕ್ರಿಯೆಗೆ ಅಮೃತ ಹೊಟ್ಟೆಯ ಹುಣ್ಣು, ಮಲಬದ್ಧತೆಗೆ ಹಿರಿಯರು ಇದನ್ನೇ ಔಷಧಿಯಾಗಿ ಕೊಡುತ್ತಿದ್ದರು. ಯಕೃತ್ತಿಗೆ ಅಲ್ಲ, ಯಕೃತ್ತಿನ ರಕ್ಷಣೆಗೆ ಮದ್ಯ ಯಕೃತ್ತನ್ನು ಕೊಲ್ಲುತ್ತದೆ, ತಾಜಾ ನೀರಾ ಯಕೃತ್ತನ್ನು ಸ್ವಚ್ಛಗೊಳಿಸುತ್ತದೆ ಇದನ್ನು ಕುಡಿದರೆ ನಶೆ ಬರುವುದಿಲ್ಲ, ಆರೋಗ್ಯ ಬರುತ್ತದೆ.
ಕೊಡಗಿಗೆ ನೀರಾ ಬಂದರೆ ಏನೆಲ್ಲಾ ಬದಲಾಗುತ್ತದೆ?
ಇದು ಕೇವಲ ಒಂದು ಪಾನೀಯದ ಪ್ರಶ್ನೆಯಲ್ಲ, ಇದು ಕೊಡಗಿನ ಭವಿಷ್ಯದ ಪ್ರಶ್ನೆ.ದುಡಿಯುವ ವರ್ಗದ ರಕ್ಷಣೆ ಹಾನಿಕಾರಕ Cheaper ಮದ್ಯದ ದಾಸ್ಯದಿಂದ ನಮ್ಮ ಕಾರ್ಮಿಕ ಸಹೋದರರನ್ನು ಬಿಡಿಸಬಹುದು. 150 ರೂ ಕೊಟ್ಟು ವಿಷ ಕುಡಿಯುವ ಬದಲು 30 ರೂ ಗೆ ಆರೋಗ್ಯ ಗಳಿಸುವಂತೆ ಮಾಡಬಹುದು.

ಸ್ವಯಂ ಉದ್ಯೋಗದ ಕ್ರಾಂತಿ
ಒಬ್ಬ ರೈತನಿಗೆ ಅನುಮತಿ ಸಿಕ್ಕರೆ ಅಲ್ಲಿ ಮೂವರಿಗೆ ಕೆಲಸ. ಮರ ಹತ್ತುವವನಿಗೆ ಕೆಲಸ, ಮಾರುವವನಿಗೆ ಕೆಲಸ, ಸಾಗಿಸುವವನಿಗೆ ಕೆಲಸ. ಕಾಫಿ ಸೀಸನ್ ಇಲ್ಲದ ಸಮಯದಲ್ಲೂ ರೈತನಿಗೆ ಆದಾಯ. ಇದು ಕೊಡಗಿನ ಯುವಕರನ್ನು ಗುಳೆ ಹೋಗದಂತೆ ತಡೆಯುತ್ತದೆ.
ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆಯ ಪುನರುಜ್ಜೀವನ
ಅಕ್ಕಿ ರೊಟ್ಟಿಯೊಂದಿಗೆ ನೀರಾ ಕುಡಿಯುವುದು ಕೊಡಗಿನ ಮೂಲ ಆಹಾರ ಪದ್ಧತಿ ಆಗಿತ್ತು. ಅದನ್ನು ಉಳಿಸುವುದು ನಮ್ಮ ಹಿರಿಯರಿಗೆ ನಾವು ಕೊಡುವ ಗೌರವ. ಕಳೆದ ಚುನಾವಣೆಯಲ್ಲಿ ಕೊಡಗಿನ ಮಣ್ಣಿನಲ್ಲಿ ನಿಂತು, ಇದೇ ನೀರಾ ವಿಷಯವನ್ನು ಹೇಳಿ, “ಅನುಮತಿ ಕೊಡಿಸುತ್ತೇವೆ, ರೈತರ ಬದುಕು ಹಸನಾಗಿಸುತ್ತೇವೆ” ಎಂದು ಭರವಸೆ ಕೊಟ್ಟ ಹಾಗೆ ಇತ್ತು .!!!

ಆ ಭರವಸೆಗಳು ಈಗ ಎಲ್ಲಿವೆ?
ಕೊಡಗಿನ ಜನರಿಗೆ ಭಾಷಣ ಬೇಡ. ನಮಗೆ ಬೇಕಾಗಿರುವುದು ನಮ್ಮ ಹಿರಿಯರು ನೂರು ವರ್ಷ ಬದುಕಿದ ಆ ಆರೋಗ್ಯ. ನಮಗೆ ಬೇಕಾಗಿರುವುದು ನಮ್ಮ ಮರದ ಅಮೃತ. ಕೇವಲ ಹೇಳಿಕೆಗೆ ಸೀಮಿತವಾದ ಭರವಸೆಯನ್ನು ಕೂಡಲೇ ಸರ್ಕಾರಿ ಆದೇಶವನ್ನಾಗಿ ಪರಿವರ್ತಿಸಲಿ. ಇದು ಮದ್ಯದ ಪರವಾನಗಿ ಅಲ್ಲ, ಇದು ಕೊಡಗಿನ ಸಮಸ್ತ ಜನತೆಯ ಆರೋಗ್ಯದ ಹಕ್ಕು, ಬದುಕಿನ ಹಕ್ಕು. ಕೊಡಗಿನ ರೈತರ ಪರವಾಗಿ ದುಡಿವ ವರ್ಗದವರ ಪರವಾಗಿ ಆರೋಗ್ಯವಂತ ಜೀವನಕ್ಕಾಗಿ .. ನೀರಾ ಇಳಿಸಲು ಅನುಮತಿ ಕೊಡುತ್ತೀರಾ???
ನೀರಾ (ಬೊಳ್ಳೆ ಕಳ್ಳ್) ಅನ್ನುವ ಅಮೃತಕ್ಕೆ ಅನುಮತಿ ಕೊಡಿ…









