ಆಲೂ ಕಟ್ಲೆಟ್, ಆಲೂಚಾಟ್, ಆಲೂಪಲಾವ್ ಮಾಡುವುದು ಹೇಗೆ? ಇಲ್ಲಿದೆ ಅದರ ಸಂಪೂರ್ಣ ವಿವರಗಳು.. ನೀವು ಮಾಡಿ ನೋಡಿ…

ಬಿಸಿಬಿಸಿಯಾಗಿ ಏನಾದರೊಂದು ಸೇವಿಸಬೇಕೆಂಬ ಬಯಕೆಯಾಗುವುದು ಸಹಜ. ಅದರಲ್ಲೂ ನಾವೇ ಮಾಡಿದ ತಿಂಡಿಯನ್ನು ಬಿಸಿಬಿಸಿಯಾಗಿ ಸೇವಿಸುವ ಮಜಾವೇ ಬೇರೆ… ಹಾಗಾದರೆ ಯಾವ ತಿಂಡಿ ಮಾಡೋದಪ್ಪಾ ಎಂಬ ಆಲೋಚನೆಯಲ್ಲಿದ್ದರೆ ಆಲೂಗೆಡ್ಡೆಯಿಂದ ತಯಾರಿಸಬಹುದಾದ ಆಲೂ ಕಟ್ಲೆಟ್, ಆಲೂಚಾಟ್, ಆಲೂ ಪಲಾವ್ ನ ವಿವರ ಇಲ್ಲಿದೆ.
1-ಆಲೂ ಕಟ್ಲೆಟ್ ಇದನ್ನು ಮಾಡುವುದು ಹೇಗೆ?
ಆಲೂಗೆಡ್ಡೆಯಿಂದ ತಯಾರಿಸಬಹುದಾದ ಆಲೂಕಟ್ಲೆಟ್ ಗೆ ಬೇಕಾಗುವ ಪದಾರ್ಥಗಳು: ಆಲೂಗೆಡ್ಡೆ: ಎರಡು, ಈರುಳ್ಳಿ- ಒಂದು, ಶುಂಠಿಬೆಳ್ಳುಳ್ಳಿ ಪೇಸ್ಟ್: ಒಂದು ಟೇಬಲ್ ಚಮಚೆ, ಹಸಿಮೆಣಸಿನಕಾಯಿ ಪೇಸ್ಟ್: ಒಂದು ಟೇಬಲ್ ಚಮಚೆ, ಉದ್ದಿನ ಬೇಳೆ, ಕಡ್ಲೆಬೇಳೆ, ಸಾಸಿವೆ: ಸ್ವಲ್ಪ, ಗರಂಮಸಾಲೆ: ಅರ್ಧ ಟೀ ಚಮಚೆ, ಸಣ್ಣ ರವೆ: ಮೂರು ಟೀ ಚಮಚೆ, ಜೋಳದಹಿಟ್ಟು: ನಾಲ್ಕು ಟೀ ಚಮಚೆ, ಕೊತ್ತಂಬರಿ ಸೊಪ್ಪು: ಸ್ವಲ್ಪ, ಎಣ್ಣೆ: ಕರಿಯಲು ಅಗತ್ಯವಿರುವಷ್ಟು
ಕಟ್ಲೆಟ್ ತಯಾರಿ ಮಾಡುವ ವಿಧಾನ: ಮೊದಲಿಗೆ ಆಲೂಗೆಡ್ಡೆಯನ್ನು ಚೆನ್ನಾಗಿ ಬೇಯಿಸಿ ಸಿಪ್ಪೆತೆಗೆದು ಪುಡಿಮಾಡಿಟ್ಟುಕೊಳ್ಳಬೇಕು. ಈರುಳ್ಳಿಯನ್ನು ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಬೇಕು. ಇನ್ನೊಂದು ಪಾತ್ರೆಯಲ್ಲಿ ಜೋಳದ ಹಿಟ್ಟು, ರವೆಯನ್ನು ಹಾಕಿ ಸ್ವಲ್ಪ ನೀರು ಹಾಕಿ ಕಲೆಸಿ ಪೇಸ್ಟ್ ರೀತಿಯಲ್ಲಿ ಮಾಡಿಕೊಳ್ಳಬೇಕು. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದು ಕಾದನಂತರ ಸಾಸಿವೆ ಹಾಕಬೇಕು.
ಅದು ಸಿಡಿದ ಬಳಿಕ ಅದಕ್ಕೆ ಉದ್ದಿನ ಬೇಳೆ, ಕಡ್ಲೆಬೇಳೆ ಹಾಕಿ ಚೆನ್ನಾಗಿ ಹುರಿಯಬೇಕು ಅದು ಕೆಂಪಾಗುತ್ತಿದ್ದಂತೆಯೇ ನಿಧಾನ ಉರಿಯಲ್ಲಿ ಹಸಿಮೆಣಸಿಕಾಯಿ ಪೇಸ್ಟ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಈರುಳ್ಳಿ ಚೂರುಗಳನ್ನು ಹಾಕಿ ಚೆನ್ನಾಗಿ ಕಲೆಸಬೇಕು. ಆ ನಂತರ ಮೊದಲೇ ತಯಾರಿ ಮಾಡಿಟ್ಟ ಬೇಯಿಸಿದ ಆಲೂಗೆಡ್ಡೆಯನ್ನು ಅದರೊಂದಿಗೆ ಹಾಕಿ ಕಲೆಸಬೇಕು. ಬಳಿಕ ತಮಗೆ ಯಾವ ಆಕಾರ ಬೇಕೋ ಅದೇ ರೀತಿಯಲ್ಲಿ ಮಾಡಿಕೊಂಡು ಅದನ್ನು ಜೋಳ ರವೆ ಮಿಶ್ರಣದ ಪೇಸ್ಟ್ ನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಹಾಕಿ ಕರಿದು ತೆಗೆದರೆ ಕಟ್ಲೆಟ್ ಸೇವಿಸಲು ಸಿದ್ಧವಾದಂತೆಯೇ..
2-ಆಲೂಚಾಟ್ ನ್ನು ಹೀಗೆ ಮಾಡಿ ನೋಡಿ
ಆಲೂ ಚಾಟ್ ಮಾಡಲು ಬೇಕಾಗುವ ಪದಾರ್ಥಗಳು ಹೀಗಿವೆ.. ಬೇಬಿ ಆಲೂಗಡ್ಡೆ- ಅರ್ಧ ಕೆಜಿ, ಮೊಸರು- ಒಂದು ಬಟ್ಟಲು, ಗರಂಮಸಾಲೆ- ಒಂದು ಚಮಚೆ, ಆಮೆಚೂರ್ ಪುಡಿ- ಒಂದು ಚಮಚೆ, ಅಚ್ಚಕಾರದ ಪುಡಿ- ಒಂದು ಚಮಚೆ, ಹಸಿಮೆಣಸಿನ ಕಾಯಿ- ಎರಡು, ಸಾಸಿವೆ- ಒಂದು ಚಮಚೆ, ಕರಿಬೇವು- ಸ್ವಲ್ಪ, ಕೊತ್ತಂಬರಿ ಸೊಪ್ಪು- ಸ್ವಲ್ಪ, ಎಣ್ಣೆ- ನಾಲ್ಕು ಚಮಚೆ, ಉಪ್ಪು- ರುಚಿಗೆ ತಕ್ಕಷ್ಟು,
ಮಾಡುವ ವಿಧಾನ ಹೇಗೆ?: ಮೊದಲಿಗೆ ಆಲೂಗೆಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದುಕೊಳ್ಳಬೇಕು. ನಂತರ ಅದನ್ನು ಒಂದು ಬೌಲಿಗೆ ಹಾಕಬೇಕು. ಹಸಿಮೆಣಸನ್ನು ಹಚ್ಚಿ ಹಾಕಬೇಕು. ನಂತರ ಅಚ್ಚಕಾರದ ಪುಡಿ, ಗರಂಮಸಾಲೆ, ಅಮೆಚೂರ್ ಪುಡಿ, ಉಪ್ಪು ಹಾಕಿ ಎಲ್ಲವನ್ನು ಚೆನ್ನಾಗಿ ಬೆರೆಸಬೇಕು. ನಂತರ ಮೊಸರು ಕಲೆಸಿ ಹತ್ತು ನಿಮಿಷ ಇಡಬೇಕು.
ಇದಾದ ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ನಿಧಾನ ಉರಿಯಲ್ಲಿ ಎಣ್ಣೆ ಹಾಕಿ ಅದು ಕಾದ ಬಳಿಕ ಸಾಸಿವೆ ಹಾಕಿ ಅದು ಸಿಡಿದ ನಂತರ ಕರಿಬೇವು ಸೊಪ್ಪು ಹಾಕಿ ಹುರಿಯಬೇಕು. ನಂತರ ಮಸಾಲೆ ಬೆರೆಸಿದ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು. ಆ ನಂತರ ಕೊತ್ತಂಬರಿ ಸೊಪ್ಪು ಉದುರಿಸಿ ಇಳಿಸಿದರೆ ಆಲೂಚಾಟ್ ಸಿದ್ಧವಾದಂತೆಯೇ…
3- ಆಲೂಪಲಾವ್ ಹೀಗೂ ಮಾಡಬಹುದು
ದಿನ ನಿತ್ಯದ ಅಡುಗೆಯಲ್ಲಿ ಆಲೂಗೆಡ್ಡೆ ಹಲವು ರೀತಿಯಲ್ಲಿ ಬಳಕೆಯಾಗುತ್ತದೆ. ಸಾರು, ಪಲ್ಯ, ಬಜ್ಜಿ ಹೀಗೆ ಒಂದೇ ಎರಡೇ ಹಲವಾರು ಖಾದ್ಯಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೀಗಿರುವಾಗ ಆಲೂ ಪಲಾವ್ ಏಕೆ ಮಾಡಬಾರದು ಎಂಬ ಆಲೋಚನೆ ನಿಮ್ಮಲ್ಲಿ ಬಂದಿದ್ದರೆ ಅದನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಆಲೂಪಲಾವ್ ಮಾಡಲು ಬೇಕಾಗುವ ಪದಾರ್ಥಗಳು: ಆಲೂಗೆಡ್ಡೆ-ಎರಡು, ಅಕ್ಕಿ- ಒಂದು ಪಾವು, ಹಸಿಮೆಣಸು- ಎಂಟು, ಬೆಳ್ಳುಳ್ಳಿ- ಒಂದು ಗೆಡ್ಡೆ, ಹಸಿಶುಂಠಿ-ಚಿಕ್ಕ ತುಂಡು, ಕೊತ್ತಂಬರಿ-ಅರ್ಧ ಕಟ್ಟು, ಗರಂಮಸಾಲಾ-ಒಂದು ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- ಎರಡು ಚಮಚ, ತುಪ್ಪ- ಮೂರು ಚಮಚ
ಆಲೂಪಲಾವ್ ಮಾಡುವ ವಿಧಾನ: ಮೊದಲಿಗೆ ಆಲೂಗೆಡ್ಡೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ಬಳಿಕ ಸಿಪ್ಪೆ ತೆಗೆದು ಉದ್ದಕ್ಕೆ ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಬೇಕು. ಮತ್ತೊಂದೆಡೆ ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಶುಂಠಿ ಉಪ್ಪು ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಬೇಕು.
ಒಂದು ಪಾತ್ರೆಯಲ್ಲಿ ತುಪ್ಪ ಮತ್ತು ಎಣ್ಣೆಯನ್ನು ಕಾಯಿಸಿ ಅದಕ್ಕೆ ಆಲೂಗೆಡ್ಡೆ ಮತ್ತು ರುಬ್ಬಿದ ಮಸಾಲೆಯನ್ನು ಹಾಕಿ ಒಂದು ನಿಮಿಷ ಹುರಿಯಬೇಕು. ಎಲ್ಲವೂ ಮಿಶ್ರಣವಾದ ಬಳಿಕ ಇಳಿಸಬೇಕು. ಕುಕ್ಕರ್ ತೆಗೆದುಕೊಂಡು ಅಕ್ಕಿಯನ್ನು ತೊಳೆದು ಹಾಕಿ ಅದಕ್ಕೆ ಹುರಿದ ಆಲೂಗೆಡ್ಡೆ ಮಿಶ್ರಣವನ್ನು ಹಾಕಿ, ಸುಮಾರು ಎರಡು ಮುಕ್ಕಾಲು ಪಾವು ನೀರು ಹಾಕಿ ಮುಚ್ಚಳ ಮುಚ್ಚಿ ಎರಡು ವಿಶಲ್ ಬಂದ ಬಳಿಕ ಇಳಿಸಬೇಕು. ನಂತರ ಚೆನ್ನಾಗಿ ಮಿಶ್ರಣ ಮಾಡಿದರೆ ಆಲೂ ಪಲಾವ್ ರೆಡಿ.