ಮಹಿಳೆಯರಲ್ಲಿ ಫಲವಂತಿಕೆ ದರ ಇಳಿಯುತ್ತಿದೆಯಾ? ಇದಕ್ಕೆ ಕಾರಣಗಳೇನು? ತಜ್ಞ ವೈದ್ಯರು ಹೇಳುವುದೇನು? ಇಲ್ಲಿದೆ ಮಾಹಿತಿ….

ಇತ್ತೀಚೆಗಿನ ವರ್ಷಗಳಲ್ಲಿ ವಿವಾಹವಾದ ದಂಪತಿಗಳು ಮಗುವಿಗಾಗಿ ಫರ್ಟಿಲಿಟಿ ತಜ್ಞರ ಬಳಿಗೆ ಅಲೆದಾಡುವುದನ್ನು ಸ್ವಲ್ಪ ಹೆಚ್ಚಾಗಿಯೇ ಕಾಣುತ್ತಿದ್ದೇವೆ. ಇದಕ್ಕೆ ಕಾರಣಗಳು ಹಲವು ಇರಬಹುದು.. ಬಹುಮುಖ್ಯವಾಗಿ ಬದಲಾದ ಜೀವನ ಕ್ರಮ, ಸೇವಿಸುವ ಆಹಾರ, ಒತ್ತಡದ ಕೆಲಸಗಳು, ದುಶ್ಚಟಗಳು ಹೀಗೆ ಹತ್ತಾರು ಕಾರಣಗಳನ್ನು ವೈದ್ಯರು ನೀಡುತ್ತಾರೆ. ಇವತ್ತಿನ ಬದುಕಿನಲ್ಲಿ ನಾವು ದೈಹಿಕ ಮತ್ತು ಮಾನಸಿಕವಾಗಿ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಅದಕ್ಕಾಗಿ ಹಲವು ರೀತಿಯ ಚಿಕಿತ್ಸೆಯನ್ನು ಪಡೆಯುತ್ತಿದ್ದೇವೆ. ಇದರ ನಡುವೆ ಬಂಜೆತನದ ಸಮಸ್ಯೆಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ.
ಇವತ್ತು ಹೆಣ್ಣುಮಕ್ಕಳಲ್ಲಿ ಅದರಲ್ಲೂ ವಯಸ್ಕ ಮಹಿಳೆಯರಲ್ಲಿ ಫಲವಂತಿಕೆಯ ಸರಾಸರಿ ದರವು ಕುಸಿಯಲಾರಂಭಿಸಿರುವುದು ಸಂತಾನದ ಸಮಸ್ಯೆಗೆ, ಬಂಜೆತನ ಕಾಡಲು ಕಾರಣವಾಗಿದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿರುವ ವಿಚಾರವಾಗಿದೆ. ಹೀಗಾಗಿ ನಾವು ಒಂದೊಳ್ಳೆಯ ಶಿಸ್ತುಬದ್ಧ ಜೀವನವನ್ನು ರೂಢಿಸಿಕೊಳ್ಳುವ ಅಗತ್ಯತೆ ಎದ್ದು ಕಾಣಿಸುತ್ತಿದೆ. ಅಧ್ಯಯನ ಪ್ರಕಾರ ವಯಸ್ಕ ಮಹಿಳೆಯಲ್ಲಿ ಸರಾಸರಿ ಫಲವಂತಿಕೆಯ ದರವು 1.6ಕ್ಕೆ ಇಳಿದಿದೆಯಂತೆ.
ಇಲ್ಲಿ ನೀಡಿರುವ ವರದಿಯು ಕರ್ನಾಟಕದ್ದಾಗಿದ್ದು, ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಮ್ ಇದನ್ನು ನೀಡಿದೆ. ಫಲವಂತಿಕೆ ದರ ಇಳಿಕೆಗೆ ಮುಖ್ಯವಾಗಿ ಹಾರ್ಮೋನ್ ಅಸಮತೋಲನ, ಪರಿಸರದಲ್ಲಿರುವ ವಿಷಕಾರಕಗಳಿಗೆ ಒಡ್ಡಿಕೊಳ್ಳುವುದು ಮತ್ತು ಜೀವನಶೈಲಿ ಕಾರಣ ಎಂಬುದು ತಿಳಿದು ಬಂದಿರುವ ಅಂಶವಾಗಿದೆ. ಇದರ ನಡುವೆ ಇವತ್ತು ಮಕ್ಕಳನ್ನು ಬಯಸುವ ದಂಪತಿಗಳ ಪೈಕಿ ವಿಶ್ವದಲ್ಲಿ ಪ್ರತೀ 6 ದಂಪತಿಗಳಲ್ಲಿ ಒಂದು ದಂಪತಿ ಬಂಜೆತನ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಕಟು ಸತ್ಯವನ್ನು ವಿಶ್ವ ಆರೋಗ್ಯ ಸಂಸ್ಥೆಯು ಹೊರ ಹಾಕಿದೆ.
ಬಂಜೆತನಕ್ಕೆ ಸಂಬಂಧಿಸಿದ ಸಮಸ್ಯೆಗಳು ಆತಂಕ ತಂದಿದ್ದು, ಹೀಗಾಗಿಯೇ ದೇಶದಲ್ಲಿ ರಾಷ್ಟ್ರೀಯ ಬಂಜೆತನ ಜಾಗೃತಿ ಸಪ್ತಾಹ ಆಚರಿಸಿ ಫಲವಂತಿಕೆ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಉಂಟು ಮಾಡುವ ಕೆಲಸವನ್ನು ಮಾಡಲಾಗುತ್ತಿದೆ. ಈ ವರ್ಷ #ಆಲ್ ಇನ್ ಫರ್ಟಿಲಿಟಿ ಎಂಬ ಥೀಮ್ ಇಡಲಾಗಿದ್ದು, ಬಂಜೆತನ ಸಮಸ್ಯೆ ವಿರುದ್ಧ ಹೋರಾಡುವಾಗ ವೈದ್ಯರು, ಮನಶಾಸ್ತ್ರಜ್ಞರು, ಕುಟುಂಬ ಮತ್ತು ಕಚೇರಿಯಲ್ಲಿ ಬೆಂಬಲ ಪಡೆಯುವ ಅಗತ್ಯದ ಕುರಿತು ಜಾಗೃತಿಯನ್ನು ಮಾಡಲಾಗುತ್ತಿದೆ.
ಇನ್ನು ಬಂಜೆತನದ ಬಗ್ಗೆ ಹೇಳಬೇಕೆಂದರೆ ಒಂದು ವರ್ಷದವರೆಗೆ ನಿಯಮಿತವಾಗಿ ಯಾವುದೇ ರಕ್ಷಣೆಯಿಲ್ಲದೆ ನಡೆಸುವ ದೈಹಿಕ ಸಂಪರ್ಕದ ನಂತರವೂ ಗರ್ಭಧಾರಣೆಯಾಗದೇ ಇದ್ದರೆ ಅದನ್ನು ಬಂಜೆತನ ಎಂದೇ ಪರಿಗಣಿಸಲಾಗುತ್ತಿದ್ದು, ಇಂತಹ ಸಂದರ್ಭಗಳಲ್ಲಿ ಫರ್ಟಿಲಿಟಿ ತಜ್ಞರ ಅಗತ್ಯತೆ ಹೆಚ್ಚಾಗಿರುತ್ತದೆ. ಮಹಿಳೆಯರಲ್ಲಿ ಬಂಜೆತನ ಕಂಡು ಬಂದರೆ ಕೂಡಲೇ ಹಾರ್ಮೋನ್ ಮಟ್ಟದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ತಜ್ಞರು ಹೇಳುವ ಪ್ರಕಾರ ಮೊದಲಿಗೆ ಆಂಟಿ-ಮುಲ್ಲೇರಿಯನ್ ಹಾರ್ಮೋನ್ (ಎಎಂಎಚ್) ಪರೀಕ್ಷೆ ನಡೆಸಬೇಕಂತೆ.
ಈ ಪರೀಕ್ಷೆಯು ಅಂಡಾಶಯದ ಮೀಸಲು ಅಥವಾ ಒವೇರಿಯನ್ ರಿಸರ್ವ್ ಅನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಅಲ್ಟ್ರಾಸೌಂಡ್ ಗಳನ್ನು ನಡೆಸಬಹುದಾಗಿದ್ದು, ಅದರಿಂದ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್ ಅಥವಾ ಪಿಸಿಓಡಿ) ಮತ್ತು ಗರ್ಭಾಶಯ ಸಮಸ್ಯೆಗಳನ್ನು ಗುರುತಿಸಬಹುದಾಗಿದೆ. ಅದೇ ಥರ ಪುರುಷರು ವೀರ್ಯ ವಿಶ್ಲೇಷಣೆ ಅಥವಾ ಸೀಮೆನ್ ಅನಾಲಿಸಿಸ್ ಅನ್ನು ಮಾಡಿಕೊಳ್ಳುವ ಮೂಲಕ ವೀರ್ಯದ ಆರೋಗ್ಯದ ಕುರಿತು ಮೌಲ್ಯಮಾಪನ ಮಾಡಬಹುದಾಗಿದೆ. ಶೇ.30ರಷ್ಟು ಬಂಜೆತನ ಸಮಸ್ಯೆಗಳು ಪುರುಷರಿಂದ ಉಂಟಾಗುತ್ತವೆ ಎನ್ನುವುದು ಇಲ್ಲಿ ಗಮನಾರ್ಹವಾಗಿದೆ. ಸ್ಪರ್ಮ್ ಕೌಂಟ್ ಕಡಿಮೆ ಇರುವುದು ಅಥವಾ ವೀರ್ಯದ ಗುಣಮಟ್ಟ ಕಡಿಮೆ ಇರುವುದು ಕೂಡ ಬಂಜೆತನಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬಂಜೆತನದ ಕುರಿತಂತೆ ಒಂದಷ್ಟು ಮಾಹಿತಿ ನೀಡಿರುವ ಬೆಂಗಳೂರಿನ ಕಲ್ಯಾಣ ನಗರದ ನೋವಾ ಐವಿಎಫ್ ಫರ್ಟಿಲಿಟಿಯ ಫರ್ಟಿಲಿಟಿ ತಜ್ಞೆ ಡಾ. ಅಪೂರ್ವ ಸತೀಶ್ ಅಮರನಾಥ್ ಅವರು, ಶೇ.30ರಷ್ಟು ಬಂಜೆತನ ಸಮಸ್ಯೆಗಳು ಪುರುಷರಿಂದ ಉಂಟಾಗುತ್ತವೆ. ಸಮಸ್ಯೆ ಎದುರಿಸುವ ಪುರುಷರು ಸಾಮಾನ್ಯವಾಗಿ ಸ್ಪರ್ಮ್ ಕೌಂಟ್ ಕಡಿಮೆ ಹೊಂದಿರುತ್ತಾರೆ ಅಥವಾ ಇತರ ಸಮಸ್ಯೆ ಹೊಂದಿರುತ್ತಾರೆ. ಇನ್ನು ಶೇ.30ರಷ್ಟು ಬಂಜೆತನ ಮಹಿಳೆಯರಿಂದ ಉಂಟಾಗುತ್ತವೆ. ಅದಕ್ಕೆ ಆ ಮಹಿಳೆಯರ ಅಂಡೋತ್ಪತ್ತಿ ಸಮಸ್ಯೆ, ಆನುವಂಶೀಯತೆ ಇತ್ಯಾದಿ ಕಾರಣವಾಗಿರುತ್ತದೆ ಎಂಬುದಾಗಿ ಹೇಳಿದ್ದಾರೆ.
ಶೇ.10ರಷ್ಟು ಬಂಜೆತನಗಳು ವಿವರಿಸಲಾಗದ ಕಾರಣಗಳನ್ನ ಹೊಂದಿರುತ್ತವೆ ಮತ್ತು ಉಳಿದ ಶೇ.30ರಷ್ಟು ಸಮಸ್ಯೆಗಳು ಪುರುಷ ಮತ್ತು ಮಹಿಳೆ ಇಬ್ಬರಿಂದಲೂ ಉಂಟಾಗಬಹುದು. 12 ತಿಂಗಳುಗಳ ಕಾಲ ನಿಯಮಿತವಾಗಿ ರಕ್ಷಣೆಯಿಲ್ಲದ ದೈಹಿಕ ಸಂಪರ್ಕ ಮಾಡಿದ ಬಳಿಕವೂ ಗರ್ಭಧಾರಣೆಯಾಗದಿದ್ದಾಗ ಅಥವಾ 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು 6 ತಿಂಗಳ ನಂತರ ಗರ್ಭಧಾರಣೆ ಆಗದಿದ್ದಾಗ ತಕ್ಷಣ ಫರ್ಟಿಲಿಟಿ ತಜ್ಞರನ್ನು ಭೇಟಿಯಾಗಿ ಸಮಾಲೋಚನೆ ನಡೆಸುವುದು ಸೂಕ್ತ ಎಂಬ ಸಲಹೆಗಳನ್ನು ನೀಡಿದ್ದಾರೆ.
ಅಂತರರಾಷ್ಟ್ರೀಯ ಮಾನದಂಡಗಳ ಫರ್ಟಿಲಿಕಿ ಚಿಕಿತ್ಸಾ ಪದ್ಧತಿಗಳನ್ನು ಹೊಂದಿರುವ ಅತಿದೊಡ್ಡ ಫರ್ಟಿಲಿಟಿ ಚೈನ್ ಗಳಲ್ಲಿ ಒಂದಾಗಿರುವ ನೋವಾ ಐವಿಎಫ್ ಫರ್ಟಿಲಿಟಿ ಹೇಳುವಂತೆ ಕನಿಷ್ಠ ಶೇ.10ರಷ್ಟು ಮಹಿಳೆಯರು ಬಂಜೆತನ ಎದುರಿಸುವ ಸಮಯದಲ್ಲಿ ತೀವ್ರ ಖಿನ್ನತೆಗೆ ಒಳಗಾಗುತ್ತಾರೆ ಎಂಬುದನ್ನು ಹೇಳಿದೆ. ಅಲ್ಲದೇ ಶೇ.50-60 ಮಹಿಳೆಯರು ಬಂಜೆತನ ಸಮಸ್ಯೆ ಮತ್ತು ಫರ್ಟಿಲಿಟಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಒತ್ತಡ ಅನುಭವಿಸುವುದಾಗಿ ಹೇಳಿದೆ. ಬಂಜೆತನ ಸಮಸ್ಯೆ ಎದುರಿಸುತ್ತಿರುವ ದಂಪತಿಗಳು ತಜ್ಞರನ್ನು ಕಂಡು ಚಿಕಿತ್ಸೆ ಪಡೆಯಬೇಕಾಗುತ್ತದೆ. ವೈದ್ಯರ ಸಲಹೆಯನ್ನು ಪಾಲಿಸುವುದು ಅಗತ್ಯ ಎಂಬುದನ್ನು ಅವರು ತಿಳಿಸಿದ್ದಾರೆ.
B.M.Lavakumar