FoodLatest

ಸಾಗು, ಉದ್ದಿನ ಇಡ್ಲಿ ಸಾಂಬಾರ್, ಅಡೆದೋಸೆ… ಇದೆಲ್ಲವನ್ನು ಆರಾಮಾಗಿ ಮನೆಯಲ್ಲಿ ಮಾಡಿ… ರುಚಿ ನೋಡಿ ಖುಷಿಪಡಿ…

ಚಪಾತಿಯನ್ನು ನಾವು ಚಟ್ನಿ, ಸಾಂಬಾರ್ ಹೀಗೆ ಯಾವುದಾದರೊಂದರಲ್ಲಿ ಸೇವಿಸುತ್ತೇವೆ. ಆದರೆ ಅದನ್ನು ಸಾಗುನಲ್ಲಿ ಸೇವಿಸಿದರೆ ಅದರಲ್ಲಿ ಸಿಗುವ ಮಜಾವೇ ಬೇರೆ. ಸಾಮಾನ್ಯವಾಗಿ ಪೂರಿಗೆ ಸಾಗು ಕಾಂಬಿನೇಷನ್ ಚಪಾತಿಗೂ ಸಾಗುಗೂ ಹಾದು ಬರುತ್ತಾ ಎಂಬ ಪ್ರಶ್ನೆ ಕಾಡಬಹುದು? ಅದಕ್ಕೇಕೆ ಚಿಂತೆ ಒಂದು ಸಾರಿ ಚಪಾತಿಗಾಗಿಯೇ ತಯಾರಿಸಲಾದ ಸಾಗುವಿನಲ್ಲೊಮ್ಮೆ ಸೇವಿಸಿ ನೋಡಿ.. ಜತೆಗೆ ಉದ್ದಿನ ಇಡ್ಲಿ ಸಾಂಬಾರ್, ಅಡೆದೋಸೆಯನ್ನು ಒಮ್ಮೆ ಮಾಡಿ ನೋಡಿ..

1-ರುಚಿಯಾದ ಸಾಗು ಮಾಡೋದು ಹೇಗೆ?

ಬೇಕಾಗುವ ಪದಾರ್ಥಗಳು: ತೆಂಗಿನಕಾಯಿ ತುರಿ- 1/2(ಕಾಯಿಯ ಅರ್ಧ ಭಾಗ), ಹುರಿಗಡಲೆ- ಸ್ವಲ್ಪ, ಕರಿಮೆಣಸು- 15, ಜೀರಿಗೆ- 2ಚಮಚ, ಹಸಿಮೆಣಸಿನ ಕಾಯಿ- 3 ರಿಂದ 4, ಗಸಗಸೆ- 1ಚಮಚ, ಚಕ್ಕೆ- ಸ್ವಲ್ಪ, ಲವಂಗ- 2, ಇಂಗು ಚೂರು, ಕೊತ್ತಂಬರಿ ಸೊಪ್ಪು ಇವುಗಳನ್ನು ಸೇರಿಸಿ ಮಿಕ್ಸಿ ಮಾಡಿಟ್ಟುಕೊಳ್ಳಬೇಕು. ಇನ್ನೊಂದೆಡೆ ಬೀನ್ಸ್, ಗೆಡ್ಡೆಕೋಸು, ಕ್ಯಾರೆಟ್, ಆಲೂಗೆಡ್ಡೆ, ಟೊಮೆಟೋ, ಈರುಳ್ಳಿಯನ್ನು ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಬೇಕು. ಇದರ ಜತೆಗೆ ಬಟಾಣಿಯನ್ನು ಮೊದಲೇ ಬೇಯಿಸಿಕೊಳ್ಳುವುದು ಒಳ್ಳೆಯದು.

ಮಾಡುವ ವಿಧಾನ: ಮೊದಲು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದು ಕಾದ ಬಳಿಕ ಸಾಸಿವೆ, ಕರಿಬೇವು ಹಾಕಿ ಹಚ್ಚಿಟ್ಟ ತರಕಾರಿಗಳನ್ನು ಹಾಗೂ ಬಟಾಣಿಯನ್ನು ಹಾಕಿ ನಿಧಾನ ಉರಿಯಲ್ಲಿ ಚೆನ್ನಾಗಿ ಬಾಡಿಸಬೇಕು. ಜತೆಗೆ ಸ್ವಲ್ಪ, ಸ್ವಲ್ಪ ನೀರು ಚಿಮುಕಿಸುತ್ತಾ ಸೌಟಿನಿಂದ ತಿರುಗಿಸಬೇಕು. ಬಳಿಕ  ಮಿಕ್ಸಿ ಮಾಡಿಟ್ಟಿದ್ದ ಮಸಾಲೆಗಳನ್ನು ಅದಕ್ಕೆ ಸುರಿದು ನಮಗೆ ಹೇಗೆ ಬೇಕೋ ಹಾಗೆ ತೆಳ್ಳಗೆ ಅಥವಾ ಗಟ್ಟಿಗೆ ತಕ್ಕಂತೆ ನೀರು ಹಾಕಿ, ರುಚಿಗೆ ತಕ್ಕಂತೆ ಉಪ್ಪು ಹಾಕಿ ಬೇಯಿಸಬೇಕು. ಬಳಿಕ ಬಿಸಿಬಿಸಿಯಾಗಿ ಚಪಾತಿಯೊಂದಿಗೆ ಸೇವಿಸಬಹುದಾಗಿದೆ.

2- ಉದ್ದಿನ ಇಡ್ಲಿ/ಸಾಂಬಾರ್ ರುಚಿನೋಡಿ

ಉದ್ದಿನ ವಡೆ ಎಲ್ಲರಿಗೂ ಗೊತ್ತಿದೆ. ಆದರೆ ಉದ್ದಿನ ಇಡ್ಲಿ ಯಾವುದಪ್ಪಾ ಎಂದು ಯೋಚಿಸುತ್ತಿದ್ದೀರಾ? ಇದರ ಬಗ್ಗೆ ಕುತೂಹಲವಿದ್ದರೆ ಮನೆಯಲ್ಲೇ ಮಾಡಿ ಸವಿಯ ಬಹುದಾಗಿದೆ. ಮೊದಲಿಗೆ ಇಡ್ಲಿ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ.

ಬೇಕಾಗುವ ಪದಾರ್ಥಗಳು: ಉದ್ದಿನ ಬೇಳೆ- ಒಂದೂವರೆ ಪಾವು, ಅಕ್ಕಿ ತರಿ- ಎರಡು ಪಾವು, ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಬೆಳಗ್ಗಿನ ಉಪಹಾರಕ್ಕೆ ಇಡ್ಲಿ ಮಾಡುವುದಾದರೆ ಹಿಂದಿನ ದಿನವೇ ಉದ್ದಿನ ಬೇಳೆಯನ್ನು ಸುಮಾರು ಮೂರು ಗಂಟೆಗಳ ಕಾಲ ನೀರಿನಲ್ಲಿ ನೆನೆಯಲು ಹಾಕಿ ಬಳಿಕ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಬೇಕು. ಇದಕ್ಕೂ ಮೊದಲು ಇನ್ನೊಂದೆಡೆ ಅಕ್ಕಿತರಿಯನ್ನು ಸ್ವಲ್ಪ ಬಿಸಿ ಮಾಡಿಕೊಂಡು ಅದಕ್ಕೆ ಸ್ವಲ್ಪ ಬಿಸಿ ನೀರು ಹಾಕಬೇಕು. ಅಲ್ಲದೆ ಅದರ ಮೇಲೆ ರುಚಿಗೆ ತಕ್ಕಷ್ಟು ಉಪ್ಪು ಉದುರಿಸಿ ಮಿಶ್ರಮಾಡಿಕೊಳ್ಳಬೇಕು. ಆ ನಂತರ ಅದನ್ನು ಸುಮಾರು ಒಂದು ಗಂಟೆಗಳ ಕಾಲ ಮುಚ್ಚಿಡಬೇಕು. ಆ ನಂತರ ಅಕ್ಕಿ ತರಿಗೆ ರುಬ್ಬಿದ ಉದ್ದಿನಬೇಳೆಯನ್ನು ಹಾಕಿ ಚೆನ್ನಾಗಿ ಕಲೆಸಿಡಬೇಕು.

ಬೆಳಿಗ್ಗೆ ಇಡ್ಲಿ ಪಾತ್ರೆಗೆ ಸ್ವಲ್ಪ ಎಣ್ಣೆ ಸವರಿ (ಒಂದುವೇಳೆ ಸಂಪಣ ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಹಾಕಿ ಹದ ಮಾಡಿಕೊಳ್ಳಬೇಕು) ಸಂಪಣವನ್ನು ಹಾಕಿ ಬೇಯಿಸಿದರೆ ಉದ್ದಿನ ಇಡ್ಲಿ ಸಿದ್ದವಾಗುತ್ತದೆ.

3-ಉದ್ದಿನ ಇಡ್ಲಿಗೆ ಸಾಂಬಾರ್ ಹೀಗೆ ಮಾಡಿ

ಬೇಕಾಗುವ ಪದಾರ್ಥ: ತೊಗರಿಬೇಳೆ- ಅರ್ಧ ಪಾವು, ಸಣ್ಣಗೆ ಹಚ್ಚಿದ ಈರುಳ್ಳಿ- ಕಾಲು ಕೆಜಿ, ರಸಂ ಪುಡಿ- ಮೂರು ಚಮಚ, ಹುರಿಗಡಲೆ- ಒಂದು ಹಿಡಿ, ಕೊತ್ತಂಬರಿ ಬೀಜ- ಅರ್ಧ ಹಿಡಿ, ತೆಂಗಿನ ಕಾಯಿ- ಅರ್ಧ ಭಾಗ, ಬ್ಯಾಡಗಿ ಮೆಣಸು- ಎರಡು, ಟೋಮ್ಯಾಟೋ- ಎರಡು,

ಮಾಡುವ ವಿಧಾನ: ಮೊದಲಿಗೆ ತೊಗರಿ ಬೇಳೆಯನ್ನು ಪಾತ್ರೆಯಲ್ಲಿ ಚೆನ್ನಾಗಿ ಬೇಯಿಸಿಟ್ಟುಕೊಳ್ಳಬೇಕು. ಮತ್ತೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಈರುಳ್ಳಿ, ಟೋಮ್ಯಾಟೋ ಹಾಕಿ ಬಾಡಿಸಿ ಅದನ್ನು ಬೆಂದ ಬೇಳೆಗೆ ಹಾಕಬೇಕು. ಮತ್ತೊಂದೆಡೆ ರಸಂಪುಡಿ, ಹುರಿಗಡಲೆ, ತೆಂಗಿನಕಾಯಿ, ಕೊತ್ತಂಬರಿ ಬೀಜ, ಮೆಣಸು ಮೊದಲಾದ ಪದಾರ್ಥಗಳನ್ನೆಲ್ಲ ಹಾಕಿ ಚೆನ್ನಾಗಿ ರುಬ್ಬಬೇಕು. ಅದನ್ನು ಬೆಂದ ಬೇಳೆಗೆ ಹಾಕಬೇಕು ಈ ಸಂದರ್ಭ ರುಚಿನೋಡಿಕೊಂಡು ಉಪ್ಪು, ಹುಣಸೆಹಣ್ಣಿನ ಹುಳಿಯನ್ನು ಹಾಕಿ ಕುದಿಸಿ ಇಳಿಸಿದರೆ ಸಾಂಬಾರ್ ರೆಡಿಯಾದಂತೆ.

4-ಬೆಳಗ್ಗಿನ ಉಪಹಾರಕ್ಕೆ ಅಡೆದೋಸೆ

ಸಾಮಾನ್ಯವಾಗಿ ನಾವು ಬಹಳ ರೀತಿಯ ದೋಸೆಗಳನ್ನು ಮಾಡಿರುತ್ತೇವೆ. ಈ ದೋಸೆಗಳ ಪೈಕಿ ಕಾಳುಗಳನ್ನು ಅಕ್ಕಿಯೊಂದಿಗೆ ಬಳಸಿ ಮಾಡುವ ಅಡೆದೋಸೆಯೂ ಒಂದಾಗಿದೆ. ತನ್ನದೇ ಆದ ರುಚಿಯನ್ನು ಹೊಂದಿರುವ ಈ ದೋಸೆ ಇತರೆ  ದೋಸೆಗಳಿಗಿಂತ ಭಿನ್ನವಾಗಿರುತ್ತದೆಯಲ್ಲದೆ, ಆರೋಗ್ಯಕಾರಿಯೂ ಆಗಿದೆ. ಈ ದೋಸೆಯನ್ನು ಮಾಡಲು ಏನೆಲ್ಲ ಪದಾರ್ಥಗಳು ಬೇಕೆಂಬುದು ಇಲ್ಲಿದೆ.

ಬೇಕಾಗುವ ಪದಾರ್ಥ: ಅಕ್ಕಿ- 1ಪಾವು, ತೊಗರಿಬೇಳೆ- ಅರ್ಧ ಪಾವು, ಉದ್ದಿನಬೇಳೆ- ಅರ್ಧ ಪಾವು, ಹೆಸರುಬೇಳೆ- ಅರ್ಧ ಪಾವು, ಕಡ್ಲೆ ಬೇಳೆ- ಅರ್ಧ ಪಾವು, ಒಣಮೆಣಸಿನ ಕಾಯಿ(ಬ್ಯಾಡಗಿ ಅಥವಾ ಗುಂಟೂರು)- ಆರು, ಇಂಗು- ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು, ಕ್ಯಾರೆಟ್ ತುರಿ- ಕಾಲು ಕೆಜಿ, ತೆಂಗಿನತುರಿ- ಅರ್ಧ ಬಟ್ಟಲು, ಕೊತ್ತಂಬರಿಸೊಪ್ಪು- ಒಂದು ಕಂತೆ

ಮಾಡುವ ವಿಧಾನ: ಬೆಳಗ್ಗಿನ ಉಪಹಾರಕ್ಕೆ ದೋಸೆ ಮಾಡುತ್ತೀರಾ ಎನ್ನುವುದಾದರೆ ಹಿಂದಿನ ರಾತ್ರಿಯೇ ಕಾಳುಗಳನ್ನು ಹಾಗೂ ಅಕ್ಕಿಯನ್ನು ನೀರಿನಲ್ಲಿ ನೆನೆಯಲು ಹಾಕಿ. ಬೆಳಿಗ್ಗೆ ಅದನ್ನು ತೆಗೆದು ಇಡ್ಲಿ ಹದಕ್ಕೆ ರುಬ್ಬಬೇಕು. ಬಳಿಕ ಅದಕ್ಕೆ ಉಪ್ಪು, ಇಂಗು, ಕ್ಯಾರೆಟ್, ತೆಂಗಿನ ತುರಿ, ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲೆಸಬೇಕು. ಇದಾದ ಬಳಿಕ ತಾವಕ್ಕೆ ಎಣ್ಣೆ ಹಾಕಿ ದೋಸೆ ಹೊಯ್ದು ಮುಚ್ಚಿ ನಿಧಾನ ಉರಿಯಲ್ಲಿ ಬೇಯಿಸಬೇಕು. ಬಿಸಿಯಾಗಿದ್ದಾಗಲೇ ದೋಸೆಯನ್ನು ಸೇವಿಸಿದರೆ ರುಚಿಯಾಗಿರುತ್ತದೆ.

 

 

admin
the authoradmin

Leave a Reply