ತಿಂಗಳುಗಟ್ಟಲೆ ಒಂದು ಮನೆಯಲ್ಲಿದ್ದ ಆ ಸಂತೋಷ ಎಲ್ಲಿ ಹೋಯಿತು? ಕಾಡುವ ಆ ದಿನಗಳು!
ಇದು ಸಾಮಾಜಿಕ ಕಾಳಜಿಯ ಲೇಖನಗಳ ಸರಮಾಲೆ-46

ಇದು ಸಾಮಾಜಿಕ ಬರಹ, ಸಮಯವಿದ್ದರೆ ಸ್ವಲ್ಪ ಸಮಯ ಕೊಟ್ಟು ಓದುವಿರಾ…!!
ನಾವು ಅಭಿವೃದ್ಧಿಯ ಹಾದಿಯಲ್ಲಿದ್ದೇವೆ… ಅವಿಷ್ಕಾರಗಳು ನಮಗೆ ಒಂದಷ್ಟು ಸೌಲಭ್ಯಗಳನ್ನು ಒದಗಿಸಿವೆ. ಆದರೆ ನಾವು ಬೆಳೆದು ಬಂದ ಹಾದಿ ಮತ್ತು ಕಳೆದ ಆ ದಿನಗಳನ್ನು ನೆನಪಿಸಿಕೊಂಡಾಗಿ ಬಾಲ್ಯದ ದಿನಗಳಲ್ಲಿ ನಾವು ಅನುಭವಿಸಿದ ಖುಷಿ, ಸಂತಸಗಳು, ಸಂಭ್ರಮಗಳಿಂದ ಇವತ್ತಿನ ಮಕ್ಕಳು ವಂಚಿತರಾಗಿದ್ದಾರೆ ಎಂದರೆ ತಪ್ಪಾಗಲಾರದು. ಇಲ್ಲಿ ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ… ಓದಿ ಅಭಿಪ್ರಾಯ ತಿಳಿಸಿ..

ಕೊಡಗಿನ ಹಳೆಯ ದಿನಗಳನ್ನು ನೆನಪಿಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತದೆ. ಒಮ್ಮೆ ಬಂಧುಗಳ ಮನೆಗೆ ಹೋದರೆ ಎರಡು ಮೂರು ದಿನ ಅಲ್ಲ, ಕೆಲವೊಮ್ಮೆ ತಿಂಗಳಾನುಗಟ್ಟಲೆ ಅಲ್ಲೇ ಇರುತ್ತಿದ್ದೆವು. ಬೇಸಿಗೆ ರಜೆ ಎಂದರೆ ಅಂಕಲ್ ಆಂಟಿ ಮನೆ, ದಸರಾ ರಜೆ ಎಂದರೆ ಅತ್ತೆ ಮಾವನ ಮನೆ, ಕ್ರಿಸ್ಮಸ್ ರಜೆ ಎಂದರೆ ತಾತ ಅಜ್ಜಿಯ ಮನೆ. ಒಂದು ಮನೆಯಿಂದ ಇನ್ನೊಂದು ಮನೆಗೆ ಮೂಟೆ ಹೊತ್ತುಕೊಂಡು ಹೋಗುತ್ತಿದ್ದೆವು. ಅದು ಬೇಸರವಾಗಿರಲಿಲ್ಲ, ಅದೊಂದು ಸಡಗರವಾಗಿತ್ತು.
ಆ ತಿಂಗಳ ವಾಸ್ತವ್ಯದಲ್ಲಿ ನಾವು ಆ ಮನೆಯವರೇ ಆಗಿಬಿಡುತ್ತಿದ್ದೆವು. ಬೆಳಿಗ್ಗೆ ಎದ್ದು ಅವರೊಂದಿಗೆ ತೋಟಕ್ಕೆ ಹೋಗುವುದು, ಮಧ್ಯಾಹ್ನ ಅಜ್ಜಿ ಮಾಡಿದ ಊಟ ತಿನ್ನುವುದು, ಸಂಜೆ ಕಸಿನ್ ಬ್ರದರ್ ಸಿಸ್ಟರ್ ಗಳೊಂದಿಗೆ ಆಟವಾಡುವುದು, ರಾತ್ರಿ ತಾತನ ಕಥೆ ಕೇಳುತ್ತಾ ಮಲಗುವುದು. ಅಲ್ಲಿ ನಾನು, ನೀನು ಎಂಬ ಭೇದವೇ ಇರಲಿಲ್ಲ. ನಿನ್ನ ಮನೆ, ನನ್ನ ಮನೆ ಎಂಬ ಮಾತೇ ಇರಲಿಲ್ಲ. ಎಲ್ಲವೂ ನಮ್ಮ ಮನೆ. ಆ ಸಂತೋಷವನ್ನು ಇಂದು ದುಡ್ಡು ಕೊಟ್ಟರೂ ಕೊಳ್ಳಲು ಸಾಧ್ಯವಿಲ್ಲ.

ಆಗ ಬಂಧು ಬಾಂಧವರ ಸಂಬಂಧಕ್ಕೆ ಒಂದು ಬೆಲೆ ಇತ್ತು. ಅತ್ತೆ ಎಂದರೆ ತಾಯಿಯಂತೆ, ಮಾವ ಎಂದರೆ ತಂದೆಯಂತೆ, ಅಂಕಲ್ ಆಂಟಿ ಎಂದರೆ ನಮ್ಮ ಎರಡನೇ ತಂದೆ ತಾಯಿ, ತಾತ ಅಜ್ಜಿ ಎಂದರೆ ದೇವರಂತೆ ಕಾಣುತ್ತಿದ್ದರು. ಕಸಿನ್ ಬ್ರದರ್ ಸಿಸ್ಟರ್ ಗಳು ಒಡಹುಟ್ಟಿದವರಿಗಿಂತ ಹೆಚ್ಚು ಹತ್ತಿರವಾಗಿದ್ದರು. ಒಂದು ಮನೆಗೆ ಬಂದರೆ ಇಡೀ ನೆರೆಮನೆ ಬಂದು ನೋಡಿ ಹೋಗುತ್ತಿತ್ತು. ನಮ್ಮ ಮನೆಗೆ ಬಂಧುಗಳು ಬಂದಿದ್ದಾರೆ ಎಂಬುದೇ ಒಂದು ಸಂಭ್ರಮವಾಗಿತ್ತು.
ಆದರೆ ಇಂದು ಆ ಸಂಬಂಧವನ್ನು ನಾವು ಹುಡುಕಬೇಕಾದ ಸ್ಥಿತಿ ಬಂದಿದೆ. ಹಲವೆಡೆ ಬಂಧುತ್ವ ಕೇವಲ ಹಬ್ಬ ಹರಿದಿನಗಳಿಗೆ, ಮದುವೆ ಸಮಾರಂಭಗಳಿಗೆ, ಒಳ್ಳೆಯದು ಕೆಟ್ಟದ್ದಕ್ಕೆ ಮಾತ್ರ ಸೀಮಿತವಾದಂತಾಗಿದೆ. ಹಬ್ಬ ಬಂದರೆ ಒಂದು ಫೋನ್ ಕರೆ, ಮದುವೆ ಬಂದರೆ ಒಂದು ದಿನದ ಭೇಟಿ, ಸಾವು ಬಂದರೆ ಒಂದು ದಿನದ ಸಂತಾಪ. ಅಷ್ಟಕ್ಕೆ ನಮ್ಮ ಬಂಧುತ್ವ ಮುಗಿದು ಹೋಗುತ್ತಿದೆಯೇನೋ ಅನಿಸುತ್ತದೆ.

ತಿಂಗಳಾನುಗಟ್ಟಲೆ ಇದ್ದ ಆ ಮನೆಗಳಿಗೆ ಈಗ ಅರ್ಧ ದಿನವೂ ಹೋಗಲು ಸಮಯವಿಲ್ಲದಂತಾಗಿರುವುದು ಇಂದಿನ ವಾಸ್ತವ. ನಾವು ತುಂಬಾ ಬಿಜಿ ಎಂದು ಹೇಳಿಕೊಳ್ಳುತ್ತೇವೆ. ನಿಜ ಹೇಳಬೇಕೆಂದರೆ ನಾವು ಬಿಜಿ ಆಗಿಲ್ಲ, ಯಾಂತ್ರಿಕರಾಗಿದ್ದೇವೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಜವಾಬ್ದಾರಿಗಳ ನಡುವೆ ಸಿಲುಕಿ, ನಮ್ಮವರಿಗಾಗಿಯೇ ಸಮಯವಿಲ್ಲದಂತಾಗಿದ್ದೇವೆ.
ಇದರ ನಡುವೆ ಇನ್ನೊಂದು ನೋವಿನ ಸಂಗತಿ ಕಾಣುತ್ತಿದೆ. ಕೆಲವು ಮನೆಗಳಲ್ಲಿ ತನ್ನದೇ ರಕ್ತಸಂಬಂಧಿ ಕಷ್ಟದಲ್ಲಿದ್ದರೆ, ನೋಡಿಯೂ ನೋಡದಂತಾಗಿದ್ದೇವೆ. ಮೊದಲೆಲ್ಲ ಒಬ್ಬ ತಮ್ಮ ಕಷ್ಟದಲ್ಲಿದ್ದಾನೆ ಎಂದರೆ ಅಣ್ಣನ ಮನೆಯೇ ಅವನ ಮನೆಯಾಗುತ್ತಿತ್ತು. ಇಂದು ಕೆಲವೆಡೆ ಆಸ್ತಿ, ಅಂತಸ್ತು, ಹಣದ ಲೆಕ್ಕಾಚಾರದಲ್ಲಿ ಸ್ವಂತ ರಕ್ತಸಂಬಂಧಗಳೇ ದೂರವಾಗುತ್ತಿವೆ. ಒಬ್ಬರು ಮೇಲೆ ಬರುತ್ತಿದ್ದರೆ ಕೈಹಿಡಿದು ಮೇಲೆ ಎಳೆಯುವ ಮನಸ್ಸು ಕಡಿಮೆಯಾಗುತ್ತಿರುವುದು ಕಂಡಾಗ ನೋವಾಗುತ್ತದೆ.

ಈ ಬದಲಾವಣೆಯಿಂದ ನಾವು ಕಳೆದುಕೊಂಡಿರುವುದು ಬರಿ ಭೇಟಿಯಲ್ಲ, ಬದುಕಿನ ಸಡಗರವನ್ನೇ ಕಳೆದುಕೊಂಡಿದ್ದೇವೆ. ಮೊದಲೆಲ್ಲ ಒಂದು ಮನೆಗೆ ಹೋದರೆ ತಿಂಗಳು ಹೇಗೆ ಕಳೆಯಿತು ಎಂದು ಗೊತ್ತಾಗುತ್ತಿರಲಿಲ್ಲ. ಇಂದು ಅನೇಕ ಕಡೆ ಸಂಬಂಧವನ್ನು ಶ್ರೀಮಂತಿಕೆ ನೋಡಿ ಅಳೆಯುವ ಪರಿಪಾಠ ಹೆಚ್ಚಾಗಿರುವುದು ನಿಜ.
ಕಸಿನ್ ಬ್ರದರ್ ಸಿಸ್ಟರ್ ಗಳ ಕಥೆ ಕೂಡ ಇದಕ್ಕೆ ಹೊರತಾಗಿಲ್ಲ. ಮೊದಲೆಲ್ಲ ಒಬ್ಬರ ಮನೆಯಲ್ಲಿ ತಿಂಗಳುಗಟ್ಟಲೆ ಇದ್ದು ಬೆಳೆದವರು ನಾವು. ಇಂದು ಹಲವರಿಗೆ ಅವರ ಮದುವೆಗೂ ಹೋಗಲು ರಜೆ ಸಿಗದಂತಾಗಿದೆ. ಅವರ ಮಕ್ಕಳ ಹೆಸರು ಕೂಡ ಗೊತ್ತಿಲ್ಲದಂತಾಗಿದೆ.

ತಾತ ಅಜ್ಜಿಯರ ಮನೆಯಲ್ಲಿ ತಿಂಗಳುಗಟ್ಟಲೆ ಇರುತ್ತಿದ್ದ ಮೊಮ್ಮಕ್ಕಳು ಈಗ ಅವರನ್ನು ವರ್ಷಕ್ಕೆ ಒಂದು ಬಾರಿಯೂ ನೋಡದಂತಾಗಿದ್ದಾರೆ. ಅಜ್ಜಿ ತನ್ನ ಕೈಯಾರೆ ಮಾಡಿದ ತಿಂಡಿಗಳನ್ನು ತಿಂಗಳುಗಟ್ಟಲೆ ಕಾಯ್ದು ತಿನ್ನಿಸುತ್ತಿದ್ದಳು. ಇಂದು ಆ ಅಜ್ಜಿ ಮನೆಯ ಬಾಗಿಲಲ್ಲಿ ಕುಳಿತು ಮೊಮ್ಮಕ್ಕಳು ಯಾವಾಗ ಬರುತ್ತಾರೋ ಎಂದು ದಾರಿ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇದು ಎಲ್ಲರ ಕಥೆ ಅಲ್ಲ, ಆದರೆ ನಮ್ಮೆಲ್ಲರ ಸುತ್ತಲೂ ನಡೆಯುತ್ತಿರುವ ಕಥೆ.
ಒಂದು ಕಾಲದಲ್ಲಿ ಬಂಧುಗಳ ಮನೆಗೆ ಹೋಗುವುದು ಎಂದರೆ ಒಂದು ತಿಂಗಳ ಪಿಕ್ನಿಕ್ ಇದ್ದಂತೆ. ಮೊದಲು ಬಂಧುಗಳ ಮನೆಯಿಂದ ವಾಪಸ್ ಬರುವಾಗ ಅತ್ತು ಬಿಡುತ್ತಿದ್ದೆವು. ಆ ದಿನಗಳು ಎಷ್ಟು ಆತ್ಮೀಯವಾಗಿದ್ದವು ಎಂದರೆ, ವಾಪಸ್ ಬರುವಾಗ ಮನಸ್ಸೇ ಬರುತ್ತಿರಲಿಲ್ಲ. ಇಂದು ಬಂಧುಗಳ ಮನೆಗೆ ಹೋದರೂ ಮನಸ್ಸು ಮನೆಯಲ್ಲೇ ಇದ್ದು, ಜವಾಬ್ದಾರಿಗಳ ಒತ್ತಡದಲ್ಲಿ ಪೂರ್ತಿಯಾಗಿ ಅವರ ಜೊತೆ ಇರಲು ಆಗದಂತಹ ಪರಿಸ್ಥಿತಿ ಬಂದಿದೆ.

ನಿಮ್ಮ ಅನಿಸಿಕೆ ಏನು?
ಈ ಲೇಖನವನ್ನು ಓದಿದ ನಂತರ ನಿಮಗೂ ನಿಮ್ಮ ಬಾಲ್ಯದ ಆ ತಿಂಗಳ ವಾಸ್ತವ್ಯದ ದಿನಗಳು ನೆನಪಾದವೇ? ನಾವು ಬಿಜಿಯೋ, ಅಥವಾ ಯಾಂತ್ರಿಕರಾಗಿದ್ದೇವೆಯೋ? ದಯವಿಟ್ಟು ನಿಮ್ಮ ಮನಸ್ಸಿನ ಮಾತನ್ನು ಒಂದು ಕಮೆಂಟ್ ಆಗಿ ಬರೆಯಿರಿ. ನಿಮ್ಮ ಒಂದು ಕಮೆಂಟ್ ನೂರಾರು ಜನರ ಮನಸ್ಸನ್ನು ತಟ್ಟಬಹುದು. ಈ ಬರಹ ಇಷ್ಟವಾದರೆ ನಿಮ್ಮ ಬಂಧು ಬಳಗದ ವಾಟ್ಸಪ್ ಗ್ರೂಪ್ ಗೆ, ಫೇಸ್ಬುಕ್ ಗೆ ಶೇರ್ ಮಾಡಿ. ನೆನಪಿರಲಿ… ಈ ಬರಹ ಸಾಮಾಜಿಕ ಬರಹ – ಜನರಿಂದ, ಜನರಿಗಾಗಿ, ಜನಜಾಗೃತಿಗಾಗಿ.









