LatestMysore

ಕಾಂಗ್ರೆಸ್ ಸಂಘಟನೆಗೆ ಸೃಜನ್ ಅಭಿಯಾನ-2.. ಬೂತ್ ಮಟ್ಟದಿಂದ ಆದ್ಯತೆ: ಮುದ್ದು ಹನುಮೇಗೌಡ

ಹುಣಸೂರು(ಮನುಕುಮಾರ್): ಬ್ಲಾಕ್ ಮಟ್ಟದಿಂದ ಜಿಲ್ಲಾ ಹಾಗೂ ರಾಜ್ಯ ಮಟ್ಟದವರೆಗೆ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸಂಘಟನಾ ಸೃಜನ್ ಅಭಿಯಾನ-2 ಆರಂಭಿಸಲಾಗಿದೆ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ವೀಕ್ಷಕ ಮುದ್ದು ಹನುಮೇಗೌಡ ತಿಳಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಸಂಘಟನಾ ಸೃಜನ್ ಅಭಿಯಾನ-2 ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಹುಣಸೂರು ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಸಮಗ್ರ ಮಾಹಿತಿ ನೀಡಿದ್ದಾರೆ. ಚುನಾವಣೆಯಲ್ಲಿ ಸೋಲು-ಗೆಲುವಿಗಿಂತ ಪಕ್ಷದ ಸಂಘಟನೆ ಮುಖ್ಯ. ಸಂಘಟನೆ ಬಲವಾಗಿಲ್ಲದಿದ್ದರೆ ಸಣ್ಣಪುಟ್ಟ ಚುನಾವಣೆಗಳಲ್ಲಿಯೂ ಗೆಲುವು ಸಾಧಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಬಸವರಾಜ್ ಮಾತನಾಡಿ, ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಪಕ್ಷ ರಚಿಸಿರುವ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುವಂತೆ ಪಕ್ಷವನ್ನು ಸಂಘಟಿಸಬೇಕು. ಬೂತ್ ಮಟ್ಟದ ಪದಾಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಎಚ್.ಪಿ.ಮಂಜುನಾಥ್ ಅವರ ಕೈ ಬಲಪಡಿಸಬೇಕು ಎಂದರು.

ಈಗಾಗಲೇ ಬ್ಲಾಕ್ ಮಟ್ಟದಲ್ಲಿ ಹಲವು ಸಮಿತಿಗಳನ್ನು ರಚಿಸಲಾಗಿದ್ದು, ಕೆಲವು ಸಮಿತಿಗಳು ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ಪದಾಧಿಕಾರಿಗಳನ್ನು ಗುರುತಿಸಿ ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಕೆಪಿಸಿಸಿ ಅಧ್ಯಕ್ಷರ ನಿರ್ದೇಶನದ ಮೇರೆಗೆ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮಾಹಿತಿ ಸಂಗ್ರಹ ಪ್ರಕ್ರಿಯೆ ಆರಂಭಿಸಲಾಗಿದೆ. ಅಕ್ಟೋಬರ್ 31ರೊಳಗೆ ಮೈಸೂರು ಜಿಲ್ಲೆಯ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ಎಚ್.ಪಿ.ಮಂಜುನಾಥ್ ಹಾಗೂ ಪಕ್ಷದ ಮುಖಂಡರೊಂದಿಗೆ ಸಮಾಲೋಚಿಸಿ ಉತ್ತಮ ಬ್ಲಾಕ್ ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.

ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಉತ್ತಮ ಅವಕಾಶ: ಎಚ್.ಪಿ.ಮಂಜುನಾಥ್ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಕಾರ್ಯಕರ್ತರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಮರೆಯಬಾರದು. ಪಕ್ಷದ ಬಗ್ಗೆ ಆಳವಾದ ಬದ್ಧತೆ, ಸಿದ್ಧಾಂತ ಹಾಗೂ ಕಾಳಜಿ ಹೊಂದಿರುವವರು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಪಕ್ಷದಲ್ಲಿ ಅಧಿಕಾರ ಸಿಗುವುದು ತಡವಾದರೂ ನಿಷ್ಠೆಯಿಂದ ದುಡಿದವರಿಗೆ ಸೂಕ್ತ ಅವಕಾಶಗಳು ದೊರೆಯುತ್ತವೆ ಎಂದರು.

ನನ್ನ ತಂದೆಯೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಹುಣಸೂರಿನಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಸಂದರ್ಭದಲ್ಲಿ ಪಕ್ಷ ದುರ್ಬಲ ಸ್ಥಿತಿಯಲ್ಲಿತ್ತು. ಆ ಸಂದರ್ಭದಲ್ಲಿ ಕಾರ್ಯಕರ್ತರ ಸಹಕಾರದೊಂದಿಗೆ ಪಕ್ಷವನ್ನು ಪುನರ್ ಸಂಘಟಿಸಿದ ಪರಿಣಾಮ ಮೂರು ಬಾರಿ ಶಾಸಕನಾಗಲು ಸಾಧ್ಯವಾಯಿತು. ಈಗ ನನಗೆ ರಾಜಕೀಯ ಅಧಿಕಾರದ ಆಸೆ ಇಲ್ಲದಿದ್ದರೂ ನನ್ನನ್ನು ನಂಬಿರುವ ಕಾರ್ಯಕರ್ತರಿಗಾಗಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ಕಾರ್ಯಕರ್ತರು ನಿಷ್ಠೆ ಹಾಗೂ ಬದ್ಧತೆಯಿಂದ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಸಂಘಟಿತರಾಗಬೇಕು… ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ಮಾತನಾಡಿ, ಕ್ಷೇತ್ರದಲ್ಲಿ ಶಾಸಕರು ಅಧಿಕಾರದಲ್ಲಿದ್ದಾಗ ಹಾಗೂ ಇಲ್ಲದಿದ್ದಾಗ ಕಾರ್ಯಕರ್ತರು ಎದುರಿಸುವ ಸಮಸ್ಯೆಗಳ ಅನುಭವ ನಿಮಗಿದೆ. ಹೀಗಾಗಿ ಅಧಿಕಾರದ ಮಹತ್ವವನ್ನು ಅರಿತು ಪಕ್ಷ ಸಂಘಟನೆಯಲ್ಲಿ ವಿಫಲರಾಗಬಾರದು. ಕ್ಷೇತ್ರದ ಜನರ ಹಿತ ಕಾಯುವ ನಿಟ್ಟಿನಲ್ಲಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.

ಹುಣಸೂರು ಕ್ಷೇತ್ರದಲ್ಲಿ ಎಚ್.ಪಿ.ಮಂಜುನಾಥ್ ಅವರ ಪರಿಶ್ರಮದಿಂದ ಕಾಂಗ್ರೆಸ್ ಪಕ್ಷ ಸದೃಢವಾಗಿದೆ. ಮುಂದಿನ ದಿನಗಳಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದು ಮಂಜುನಾಥ್ ಅವರ ಕೈ ಬಲಪಡಿಸಬೇಕಾದರೆ ಕಾರ್ಯಕರ್ತರು ಶಕ್ತಿಯುತವಾಗಿ ಹಾಗೂ ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್‌ಟಿ ಘಟಕದ ಅಧ್ಯಕ್ಷ ಸಿದ್ದರಾಜು, ಕಾನೂನು ವಿಭಾಗದ ಕಾಂತರಾಜ್, ಡಿಸಿಸಿ ಕಾರ್ಯದರ್ಶಿ ಗೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಚಂದನ್ ಗೌಡ, ತಾಲೂಕು ಕಾಂಗ್ರೆಸ್ ಕಾರ್ಯಾಧ್ಯಕ್ಷ ಗದ್ದಿಗೆ ದೇವರಾಜ್, ಬಿಳಿಕೆರೆ ಬ್ಲಾಕ್ ಅಧ್ಯಕ್ಷ ಪ್ರೇಮ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಾಘು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಕೆ.ಕುನ್ನೇಗೌಡ, ಅಕ್ರಮ-ಸಕ್ರಮ ಸಮಿತಿಯ ಮಾಜಿ ಸದಸ್ಯ ಚಿಕ್ಕಸ್ವಾಮಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ವೆಳ್ಳಾಂಗಿರಿ, ಪಕ್ಷದ ನಿಕಟಪೂರ್ವ ಕಾರ್ಯಾಧ್ಯಕ್ಷ ಹಾಗೂ ವಕೀಲ ಪುಟ್ಟರಾಜು ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

admin
the authoradmin

ನಿಮ್ಮದೊಂದು ಉತ್ತರ