ArticlesLatest

ಸಂಭ್ರಮದ ಖುಷಿಯಲ್ಲಿ ….. ಲೇಖಕಿ ಡಾ.ಮಂಗಳಾ ಪ್ರಿಯದರ್ಶಿನಿ  ತಮ್ಮ ಕೃತಿಯ ಕುರಿತು ಹೇಳಿದ್ದೇನು?

ಲೇಖಕಿ(ಕ) ಆದವರಿಗೆ ತಾವು ಬರೆದ ಕೃತಿಯನ್ನು ಹೊರತರುವುದೆಂದರೆ ಅದೊಂದು ರೀತಿಯ ಸಂಭ್ರಮ… ಅದನ್ನು ಅಕ್ಷರಗಳಲ್ಲಿ ಹೇಳುವುದು ಕಷ್ಟವೇ… ಹೀಗಿರುವಾಗಿ ಮೂರನೇ ಬಾರಿಗೆ ತಮ್ಮ ಕೃತಿ ಮುದ್ರಣವಾಗಿದೆ ಎಂದಾಗ ಅದೆಷ್ಟು ಸಂತಸವಾಗಿರಬಹುದು… ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖುಷಿಯನ್ನು ಲೇಖಕಿ ಡಾ.ಮಂಗಳಾ ಪ್ರಿಯದರ್ಶಿನಿ  ಹಂಚಿಕೊಂಡಿದ್ದನ್ನು ಇಲ್ಲಿ ಯಥಾರೀತಿ ಪ್ರಕಟಿಸಲಾಗಿದೆ… ಅವರಿಗೊಂದು ಶುಭಹಾರೈಕೆ…

ನನ್ನ , ‘ ಸ್ರೀವಾದ ಮತ್ತು ಮಹಿಳಾ ಅಧ್ಯಯನ ಒಂದು ಪ್ರವೇಶಿಕೆ ‘ – ಕೃತಿಯ  ಮೂರನೇ ಮುದ್ರಣದ ಪ್ರತಿಗಳು ಇದೀಗ ತಲುಪಿವೆ. ಇದನ್ನು ಹೇಮಂತ ಪ್ರಕಾಶನದವರು ಹೊರ ತಂದಿದ್ದಾರೆ . ಒಮ್ಮೆ ಪ್ರಕಟಗೊಳ್ಳುವುದೇ ಸಂತೋಷ ಎನ್ನವಾಗ ಮೂರನೆಯ ಮುದ್ರಣ ಭಾಗ್ಯವಲ್ಲವೇ ?

ಈ ಹಿಂದೆ ಕರ್ನಾಟಕ ಸಾಹಿತ್ಯ ಅಕಾಡಮಿಗಾಗಿ ನಾನು ಬರೆದ ‘ ಬೇಂದ್ರೆ ‘ ಐದು ಮರು ಮುದ್ರಣಗಳನ್ನು ಕಂಡಿತ್ತು . ಅಮೂರರು,  ವಾಮನ ಬೇಂದ್ರೆಯವರು , ಗುರುಲಿಂಗ ಕಾಪ್ಸೆಯವರು,  ಜಿ ಎಸ್ ಎಸ್ , ಎಂ ಎಂ ಕಲಬುರ್ಗಿಯವರು –  ಮುಂತಾದ ಹಿರಿಯರು ಕೃತಿಯನ್ನು ಓದಿ , ಮೆಚ್ಚಿ ಹಾರೈಸಿದ್ದರು , ಎಂಬ ಹೆಮ್ಮೆ ನನ್ನದು .

ನನ್ನ ‘ ಸ್ರೀವಾದ ಮತ್ತು ಮಹಿಳಾ ಅಧ್ಯಯನ ‘ ಕೃತಿ  ಮೊದಲ ಬಾರಿಗೆ ಹಂಪಿ ವಿಶ್ವವಿದ್ಯಾಲಯದಿಂದ 2007 ರಲ್ಲಿ ಪ್ರಕಟಗೊಂಡು ಮಹಿಳಾ ಅಧ್ಯಯನ ವಿಭಾಗದ ಎಂ . ಎ , ಎಂಫಿಲ್ ಅಭ್ಯಾಸಿಗಳಿಗೆ ಅಧ್ಯಯನ ಕೃತಿಯಾಗಿದೆ . ಆ ಸಮಯದಲ್ಲಿ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದ ಡಾ . ಶ್ರೀಮತಿ ಮೇಡಂ ಅವರು ನನಗೆ ಸಿಲಬಸ್ ಕಳಿಸಿ ನನ್ನಿಂದ ಕೃತಿ ರಚನೆಗೆ ಕಾರಣರಾಗಿದ್ದರು. ಕುಲಪತಿಗಳಾದ ಡಾ ವಿವೇಕ ರೈ ಅವರು ಬೆನ್ನುಡಿ ಬರೆದಿದ್ದರು .

ಪುಸ್ತಕಗಳ ಪ್ರತಿಗಳು ಮುಗಿದಿದ್ದರ ಕಾರಣ , ಕನ್ನಡ ನಾಡಿನ ಪ್ರತಿಷ್ಠಿತ ಪುಸ್ತಕ ಪ್ರಕಾಶನ ಸಂಸ್ಥೆ  ಹೇಮಂತ ಪ್ರಕಾಶನ 2018 ರಲ್ಲಿ ಎರಡನೆಯ ಮುದ್ರಣ ಹೊರ ತಂದಿತ್ತು . ಇದೀಗ ಮತ್ತೊಂದು ಮುದ್ರಣ , ಮೂರನೆಯ ಮುದ್ರಣ.  ಸದ್ದಿಲ್ಲದೆ ಕೆಲಸ ಮಾಡುವ ನನ್ನಂಥವರಿಗೆ ಇದಕ್ಕಿಂತ ಸಂತೋಷ ಬೇರೇನು ಬೇಕು?

ಹೇಮಂತ ಪ್ರಕಾಶನದ ಮಾಲೀಕರಾದ ಶ್ರೀ ವಂಕಟೇಶ್ ಅವರದು ಇಂದು ನಿನ್ನೆಯ ಪರಿಚಯವಲ್ಲ . ನನ್ನ ತಾಯಿ ಶ್ರೀಮತಿ ವಿಶಾಲಾಕ್ಷಿ ದಕ್ಷಿಣಾಮೂರ್ತಿಯವರ ಬಹು ಪಾಲು ಕೃತಿಗಳನ್ನು ಪ್ರಕಟಿಸಿದವರು . ಅವರ ವಿಶೇಷವೆಂದರೆ ಒಂದು ಕೈಯ್ಯಲ್ಲಿ ಗೌರವ ಪ್ರತಿಗಳ ಕಟ್ಟು , ಮತ್ತೊಂದು ಕೈಯ್ಯಲ್ಲಿ ಚೆಕ್ಕು ಹಿಡಿದು ಮನೆಗೇ ಬಂದು ತಲುಪಿಸುವ ಪರಿ . ವೆಂಟೇಶ್ ಅವರಿಗೆ , ಅವರ ಪುತ್ರ ಹೇಮಂತ್ ಅವರಿಗೆ  ಧನ್ಯವಾದಗಳು.

ಇದೇ ಸಂದರ್ಭದಲ್ಲಿ ಮುನ್ನುಡಿ ಬರೆದ  ಡಾ . ಶ್ರೀಮತಿಯವರಿಗೆ , ಬೆನ್ನುಡಿ ಬರೆದ ಡಾ . ವಿವೇಕ ರೈಅವರಿಗೆ , ಇದನ್ನು ಮೊದಲ ಬಾರಿಗೆ ಪ್ರಕಟಿಸಿ ಪಠ್ಯವಾಗಿಸಿದ ಹಂಪಿ ವಿಶ್ವವಿದ್ಯಾಲಯಕ್ಕೆ ,  ಪಠ್ಯವಾಗಿ  2007 ರಿಂದ ಓದಿ , ಪ್ರತಿಕ್ರಿಯೆ ಮಾಡುತ್ತಿರುವ ಅಪಾರ ಓದುಗ ಬಳಗಕ್ಕೆ ಧನ್ಯವಾದಗಳನ್ನರ್ಪಿಸುವ ಸಮಯ ಇದಾಗಿದೆ…

admin
the authoradmin

ನಿಮ್ಮದೊಂದು ಉತ್ತರ