ArticlesLatest

ಶಿವನೇ ಇಷ್ಟಪಡುವ ಸುಂದರ ಹೂ… ಇದು ಮನೆಗೆ ಮೆರಗು ಮನಸ್ಸಿಗೆ ಮುದ ನೀಡುತ್ತದೆ… ಯಾವುದು ಈ ಹೂ?

ಇವತ್ತು ಮನೆಯಿಂದ ಆರಂಭವಾಗಿ ಬೃಂದಾವನದ ತನಕ ಕೋಟ್ಯಾಂತರ ಹೂಗಳು ಕಾಣಸಿಗುತ್ತವೆ. ಇಂತಹ ಹೂಗಳಲ್ಲಿ ಒಂದೊಂದು ಹೂವಿಗೂ ಒಂದೊಂದು ರೀತಿಯ ಬಣ್ಣ, ಆಕಾರ, ಸುವಾಸನೆಗಳಿದ್ದು, ಅವುಗಳದ್ದೇ ಆದ ವೈಶಿಷ್ಟ್ಯತೆಯನ್ನು ಹೊಂದಿರುತ್ತವೆ. ಇಂತಹ ಹೂಗಳ ನಡುವೆ ಇಕ್ಸೋರವೂ ತನ್ನದೇ ಆದ ವಿಶಿಷ್ಟತೆಯಿಂದ ಗಮನಸೆಳೆಯುತ್ತದೆ. ಈ ಹೂವಿನ ಗಿಡವನ್ನು ಮನೆಯ ಅಂಗಳದಲ್ಲಿ ಮಾತ್ರವಲ್ಲದೆ, ಕುಂಡದಲ್ಲಿಯೂ ಬೆಳೆಯ ಬಹುದಾಗಿದೆ. ಇದರ ಬಗೆಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಇವತ್ತು ಇಕ್ಸೋರಾ ತಳಿಯನ್ನು ಹಲವು ರೀತಿಯಲ್ಲಿ ಅಭಿವೃದ್ಧಿಗೊಳಿಸಿದ್ದು, ನಮಗೆ ಅನುಕೂಲವಾಗುವಂತೆ ಕುಂಡದಲ್ಲಿ, ಮನೆಯ ಅಂಗಳದಲ್ಲಿ, ಬೃಂದಾವನದಲ್ಲಿ ಹೀಗೆ ಎಲ್ಲೆಂದರಲ್ಲಿ ಬೆಳೆಸಲು ಅನುಕೂಲ ಮಾಡಿಕೊಡಲಾಗಿದೆ. ಹೀಗಾಗಿ ವಿವಿಧ ಬಣ್ಣಗಳ ಹೂವಿನಿಂದ ಕಂಗೊಳಿಸುವ ಇಕ್ಸೋರಾ ನಮಗೆ ಅಲ್ಲಲ್ಲಿ ಕಾಣಸಿಗುತ್ತವೆ. ಜತೆಗೆ ಬಹಳಷ್ಟು ಮಂದಿ ಇದನ್ನು ನೆಟ್ಟು ಬೆಳೆಸುತ್ತಾರೆ. ಇದು ಮನೆಗೆ ಶೋಭೆ ತರುತ್ತಿದೆ. ಇದೇ ರೀತಿಯ ಕಾಡು ಜಾತಿಯ ಹೂಗಳ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕಾಣಸಿಗುತ್ತವೆ. ಇವುಗಳನ್ನು ಸ್ಥಳೀಯವಾಗಿ ಕೇಪಳ ಎಂದೇ ಕರೆಯಲಾಗುತ್ತದೆ.

ಕೆಂಪು ಬಣ್ಣದ ಪುಟ್ಟದಾದ ಗೊಂಚಲಿನಿಂದ ಕೂಡಿದ  ಕೇಪಳ ಹೂವಿಗೆ ದೈವದೃಷ್ಟಿಯಿಂದ  ನೋಡಲಾಗುತ್ತದೆ. ಭೂತ ಆರಾಧನೆಯ ಸಂದರ್ಭದಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ. ಕಾಡುಗಳಲ್ಲಿ ಇದೇ ಬಗೆಯ ವಿವಿಧ ಹೂಗಳು ನೋಡಲು ಸಿಗುತ್ತವೆ. ಇದೆಲ್ಲವನ್ನು ಮೀರಿ ಇಕ್ಸೋರವನ್ನು ಅಭಿವೃದ್ಧಿಪಡಿಸಲಾಗಿದ್ದು ಗಿಡಗಳಲ್ಲಿ ಗೊಂಚಲು ಗೊಂಚಲಾಗಿ ವಿವಿಧ ಬಣ್ಣಗಳಿಂದ ಈಗ ಬಹಳಷ್ಟು ಮನೆಗಳ ಮುಂದೆ ಕಾಣಸಿಗುತ್ತವೆ. ಹಾಗೆಯೇ ಕುಂಡದಲ್ಲಿಯೂ ಕುಬ್ಜ ಗಿಡಗಳಾಗಿಯೂ ಗಮನಸೆಳೆಯುತ್ತವೆ.

ಮನೆಯ ಅಂಗಳದಲ್ಲಿ ಹಲವಾರು ಬಗೆಯ ಹೂವಿನ ಗಿಡಗಳನ್ನು ನೆಟ್ಟು ಬೆಳೆಸುವುದು ನಮ್ಮೆಲ್ಲರ ಹವ್ಯಾಸವಾಗಿದೆ. ಹಾಗೆಂದು ಕೈಗೆ ಸಿಕ್ಕ ಹೂಗಿಡಗಳನ್ನು ನೆಡದೆ ಹುಲುಸಾಗಿ ಬೆಳೆದು ವರ್ಷಪೂರ್ತಿ ಹೂ ಬಿಡುವ ಮತ್ತು ಮನೆಮನಕ್ಕೆ ಶ್ರೇಯಸ್ಸು ತರುವಂತಹ ಗಿಡಗಳನ್ನು ನೆಡುವುದರತ್ತ ಗಮನಹರಿಸಿದರೆ ಚೆನ್ನಾಗಿರುತ್ತದೆ. ಹೀಗಾಗಿ ಅಂತಹ ಗಿಡಗಳಿಗೆ ಆದ್ಯತೆ ನೀಡುವುದು ಒಳ್ಳೆಯದು.

ಈ ಗಿಡವನ್ನು ಮನೆಯ ಮುಂದೆ ನೆಡುವುದರಿಂದ  ವರ್ಷಪೂರ್ತಿ ಗಿಡದ ತುಂಬಾ ಹೂಗಳನ್ನು ಪಡೆಯಲು ಸಾಧ್ಯವಾಗಿದೆ.  ಸುಂದರವಾಗಿಯೂ, ಆಕರ್ಷಕವಾಗಿಯೂ ಈ ಹೂಗಳು ಕಂಗೊಳಿಸುವುದು ಮಾತ್ರವಲ್ಲದೆ ಮನೆಗೆ ಮೆರಗು, ಮನಸ್ಸಿಗೆ ತರುವುದರಲ್ಲಿ ಎರಡು ಮಾತಿಲ್ಲ. ಒಂದು ಕಾಲದಲ್ಲಿ ಕಾಡಿಗೆ ಮಾತ್ರ ಸೀಮಿತವಾಗಿದ್ದ  ಈ ಹೂ ಇತ್ತೀಚೆಗಿನ ದಿನಗಳಲ್ಲಿ ಮನೆಯ ಹೂ ಕುಂಡಗಳಲ್ಲಿ, ಕೈತೋಟದಲ್ಲಿ, ಉದ್ಯಾನಗಳಲ್ಲಿ  ಹೀಗೆ ಎಲ್ಲೆಂದರಲ್ಲಿ ಅರಳಿ ಸ್ವಾಗತಿಸುತ್ತಾ ಜನಪ್ರಿಯ ಪುಷ್ಪವಾಗಿ ಪುಷ್ಪಪ್ರೇಮಿಗಳ ಮನ ಸೆಳೆಯುತ್ತಿದೆ.

ಇಕ್ಸೋರಾದ ಬಗ್ಗೆ ಹೇಳುವುದಾದರೆ ಉಷ್ಣವಲಯದ ವಾತಾವರಣವು ಇದು ಹುಲುಸಾಗಿ ಬೆಳೆಯಲು ಯೋಗ್ಯವಾಗಿದ್ದು, ಸಾಮಾನ್ಯವಾಗಿ ಎಲ್ಲ ಮಣ್ಣಿನಲ್ಲಿಯೂ ಬೆಳೆಯುತ್ತದೆ. ಗಿಡದ ಬೆಳವಣಿಗೆಯು ಸುಮಾರು ಐದರಿಂದ ಏಳು ಅಡಿಗಳಷ್ಟು ಎತ್ತರವಿದ್ದು, ಗಿಡವು ನೆಟ್ಟ ಒಂದೆರಡು ವರ್ಷದಲ್ಲಿ ಹೂಬಿಡಲು ಪ್ರಾರಂಭಿಸುತ್ತದೆ. ಒಂದು ಮೂಲದ ಪ್ರಕಾರ ಇದು ಸಿಂಗಾಪುರ ದೇಶದ್ದು ಎನ್ನಲಾಗಿದೆ. ನಂತರ ಇತರೆಡೆಗೆ ಹರಡಿತು ಎಂದು ಹೇಳಲಾಗುತ್ತಿದೆ. ರೂಬಿಯೇಸಿ ಕುಟುಂಬದ 150 ಜಾತಿಗಳ ಪೈಕಿ ಇದು ಒಂದಾಗಿದೆ. ಸಸ್ಯ ಶಾಸ್ತ್ರೀಯದ ಹೆಸರಿನ ಪ್ರಕಾರ ಇಕ್ಸೋರ ಸಿಂಗಪೊರೆನ್ಸಿಸ್ ಎಂದು ಕರೆಯುತ್ತಾರೆ.

ಇದೊಂದು ಹೂ ಬಿಡುವ ಪೊದೆ ಸಸ್ಯ. ಅಗಲವಾದ ಮತ್ತು ಉದ್ದವಾದ ಎಲೆಗಳ ಮಧ್ಯೆ ಚೆಂಡಿನಂತೆ, ಪ್ರಭೇದಗಳಿಗೆ ಅನುಸಾರವಾಗಿ ವಿವಿಧ ಬಣ್ಣಗಳಲ್ಲಿ ಹೂಗೊಂಚಲುಗಳನ್ನು ಹೊಂದಿದೆ. ಪೊದೆಯಾಗಿಯೂ, ಚಿಕ್ಕಮರವಾಗಿಯೂ ಬೆಳೆಯುವ ಇಕ್ಸೋರಾ ಹಸಿರಾಗಿರುವ ಬಹುವಾರ್ಷಿಕ ಸಸ್ಯವಾಗಿದೆ. ಎಲೆ ಅಭಿಮುಖ ಅಥವಾ ವೃತ್ತ ಜೋಡಣೆಯುಳ್ಳದ್ದು. ಕೊರಿಂಬ್ ಮಾದರಿಯ ಹೂಗೊಂಚಲು ತುದಿ ಅಥವಾ ಕಂಕುಳಲ್ಲಿ ಕಾಣಿಸಿಕೊಳ್ಳುತ್ತದೆ.

ಹೂಗಳ ಬಣ್ಣ ಪ್ರಭೇದಗಳಿಗೆ ಅನುಸಾರವಾಗಿ ಬಿಳುಪು, ಗುಲಾಬಿ, ಕೇಸರಿ, ಹೀಗೆ ನಾನಾ ಬಗೆ, ಹೂಗಳಿಗೆ ತೊಟ್ಟು, ಉಪದಳ, ಗಂಟಲಲ್ಲಿ ರೋಮಗಳು ಕೂಡು ದಳದ ಹೊರಭಾಗ 4ರಿಂದ5 ಭಾಗವಾಗಿ ಅಗಲವಾಗಿರುತ್ತದೆ. ಕೇಸರಗಳು ಹೂಗಂಟಲಿನ ಮೇಲೆ ಅಂಟಿಕೊಂಡಿರುತ್ತವೆ. ಕೆಳ ಅಂಡಾಶಯ ಮೇಲ್ಭಾಗವಾಗಿದೆ. ಹಣ್ಣು ಗಟ್ಟಿಯಾದ ಅಥವಾ ಮೆದುವಾದ ಬೆರ್ರಿ ಮಾದರಿಯಲ್ಲಿರುತ್ತದೆ.

ಕೆಲವರ ನಂಬಿಕೆಯ ಪ್ರಕಾರ ಈ ಹೂವು ಈಶ್ವರನಿಗೆ ಬಲು ಪ್ರಿಯವೆಂದೂ ಆದುದರಿಂದ ಇಕ್ಸೋರ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ. ಕೇರಳದ ದೇವಾಲಯಗಳಲ್ಲಿ ಈ ಹೂವಿಗೆ ಹೆಚ್ಚಿನ ಪ್ರಾಧಾನ್ಯತೆಯಿದೆ. ದೇವಾಲಯಗಳ ಸುತ್ತಮುತ್ತ ಬೆಳೆಸುವುದನ್ನು ನಾವು ಕಾಣಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಕೋಲಗಳಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ. ಕಾಡುಗಳಲ್ಲಿ ಬೆಳೆಯುವ ಇಕ್ಸೋರ(ಕೇಪಳ) ಹೂಗಳನ್ನು ಕೋಲದ ಸಂದರ್ಭದಲ್ಲಿ ಬಳಸುತ್ತಾರೆ. ಇಕ್ಸೋರ ಗಿಡಗಳು ಯಾರ ಮನೆಮುಂದೆ ಹುಲುಸಾಗಿ ಬೆಳೆಯುತ್ತದೆಯೋ ಆ ಮನೆಯಲ್ಲಿ ದಿನನಿತ್ಯ ನೆಮ್ಮದಿ ಸುಖವಿರುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಮಲೆನಾಡಿನ ಕಾಡುಗಳಿಗೊಂದು ಸುತ್ತು ಹೊಡೆದರೆ ಇದಕ್ಕೆ ಸಂಬಂಧಿಸಿದಂತೆ ಹಲವು ತಳಿಗಳು ಕಾಣಸಿಗುತ್ತವೆ. ಇವುಗಳು ಕಾಡು ಜಾತಿಯದ್ದಾಗಿವೆ. ಮೊದಲೆಲ್ಲ ಕೇವಲ ಕೆಂಪನೆಯ ಬಣ್ಣದ ಹೂಗಳು ಮಾತ್ರ ಅಲ್ಲಲ್ಲಿ ಕಾಣಸಿಗುತ್ತಿದ್ದವು. ಈಗ ವಿವಿಧ ಬಣ್ಣಗಳಿಂದ ಮನೆ ಮುಂದೆ ಶೋಭಿಸುತ್ತಿವೆ. ಈ ಗಿಡಗಳನ್ನು ಕೊಂಬೆಯಿಂದ ಹಾಗೂ ಕಸಿ ಕಟ್ಟುವುದರಿಂದ ವೃದ್ಧಿಸಬಹುದಾಗಿದೆ. ಅದು ಏನೇ ಇರಲಿ ಇಕ್ಸೋರಾ ನೋಡಲಷ್ಟೆ ಸುಂದರವಲ್ಲದೆ, ಮನೆಗೆ ಶ್ರೇಯಸ್ಸು ನೀಡುವ ಕುಸುಮವಾಗಿರುವುದರಿಂದ ಇತ್ತೀಚೆಗಿನ ದಿನಗಳಲ್ಲಿ ಇದನ್ನು ಮನೆಮುಂದೆ ನೆಟ್ಟು ಬೆಳೆಸುವ ಪುಷ್ಟಪಪ್ರೇಮಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕಂಡು ಬರುತ್ತದೆ.

 

B M Lavakumar

 

admin
the authoradmin

Leave a Reply