ಫೇಸ್ ಬುಕ್ ಪ್ರೇಮ.. ಪ್ರಣಯ… ಪ್ರಾಣ ತೆಗೆಯಿತು! ಗಂಡನ ಬಿಟ್ಟು ಬಂದವಳನ್ನು ಪ್ರಿಯಕರ ಕೊಂದು ಬಿಟ್ಟ!

ಕಟ್ಟಿಕೊಂಡ ಗಂಡನೊಂದಿಗೆ ಮನೆ, ಮಕ್ಕಳು ಸಂಸಾರ ಅಂಥ ಜವಬ್ದಾರಿಯುತ ಬದುಕನ್ನು ಸಾಗಿಸಬೇಕಾದ ಕೆಲವು ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುವ ಯುವಕರೊಂದಿಗೆ ಪ್ರೀತಿ, ಪ್ರೇಮ, ಪ್ರಣಯವೆಂದು ಸಲುಗೆಯಿಂದ ವರ್ತಿಸಿ ಅವರೊಂದಿಗೆ ಸಂಬಂಧ ಬೆಳೆಸಿ ಕೊನೆಗೆ ಅವರಿಂದಲೇ ಹತ್ಯೆಗೀಡಾಗುವ ಪ್ರಕರಣಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಆದರೂ ಎಚ್ಚೆತ್ತುಕೊಳ್ಳದೆ ಹಾಸನದ ವಿವಾಹಿತ ಮಹಿಳೆ ಫೇಸ್ ಬುಕ್ ಪ್ರಿಯಕರನ ಹಿಂದೆ ಬಿದ್ದು ಮಂಡ್ಯದ ಕೆ.ಆರ್.ಪೇಟೆ ಬಳಿ ಬೀದಿ ಹೆಣವಾಗಿ ಹೋಗಿದ್ದಾಳೆ…
ಅನೈತಿಕ ಸಂಬಂಧಕ್ಕಾಗಿ ಕೊಲೆಗಳು ನಡೆಯುವುದು ಹೊಸತೇನಲ್ಲ. ಹಿಂದಿನಿಂದಲೂ ನಡೆದುಕೊಂಡೇ ಬಂದಿದೆ. ಆದರೆ ಸೋಷಿಯಲ್ ಮೀಡಿಯಾ ಜಮಾನದಲ್ಲಿ ಒಬ್ಬರಿಗೊಬ್ಬರು ಪರಿಚಯವಾಗುವುದು ಸುಲಭವಾಗಿರುವ ಕಾರಣದಿಂದಾಗಿ ಪರಿಚಯ, ಪ್ರಣಯ ಮತ್ತು ಕೊಲೆ ಎಲ್ಲವೂ ಬಹುಬೇಗವೇ ಆಗಿಬಿಡುತ್ತದೆ. ಸಾಮಾಜಿಕ ಜಾಲತಾಣದ ಬಳಕೆಯನ್ನು ಒಳ್ಳೆ ಉದ್ದೇಶಕ್ಕೆ ಮಾಡಿದ್ದರೂ ಅದನ್ನು ದುರ್ಬಳಕೆ ಮಾಡುವವರೇ ಹೆಚ್ಚಾಗಿರುವ ಕಾರಣದಿಂದಾಗಿ ಯಾವುದೇ ಘಟನೆಗಳಾದರೂ ಅದರ ಹಿಂದೆ ಸೋಷಿಯಲ್ ಮೀಡಿಯಾದ ಲಿಂಕ್ ಗಳಿರುವುದು ಕಂಡು ಬರುತ್ತಿದೆ.
ಇವತ್ತು ಗಂಡ ಮತ್ತು ಎರಡು ಮಕ್ಕಳನ್ನು ಬಿಟ್ಟು ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದವನ ಜತೆಗೆ ಬಂದು ಎಲ್ಲೆಡೆ ಸುತ್ತಾಡಿ, ದೈಹಿಕ ಸುಖಪಡೆದು ಬಳಿಕ ಅವನಿಂದಲೇ ಕೊಲೆಯಾಗಿ ಹೋದವಳ ಹೆಸರು ಪ್ರೀತಿ ಅಲಿಯಾಸ್ ಅಸುಮತಿ. ಈಕೆ ಹಾಸನದ ಹೊಸಕೊಪ್ಪಲಿನ ನಿವಾಸಿ. ಆಟೋ ಡ್ರೈವರ್ ನಂದೀಶ್ ಎಂಬುವರ ಪತ್ನಿಯಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಗಂಡ ಮಕ್ಕಳೆಂದು ಸಂಸಾರದ ಜವಬ್ದಾರಿ ಹೊತ್ತುಕೊಂಡು ನ್ಯಾಯಯುತವಾಗಿ ಬದುಕಬೇಕಾಗಿದ್ದ ಈಕೆ ಸ್ಟೈಲ್ಲಾಗಿ ಸೀರೆಯುಟ್ಟುಕೊಂಡು ರೀಲ್ಸ್ ಮಾಡೋಡು, ಸೋಷಿಯಲ್ ಮೀಡಿಯಾದಲ್ಲಿ ಹುಡುಗರನ್ನು ಪರಿಚಯಿಸಿಕೊಂಡು ಅವರೊಂದಿಗೆ ಚಾಟ್ ಮಾಡೋದು ಹೀಗೆ ಸದಾ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿದ್ದಳು. ಈಕೆ ಗಾರ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಳು. ಆದ್ದರಿಂದ ಖರ್ಚಿಗೆ ಸ್ವಲ್ಪ ಹಣ ಬರುತ್ತಿದ್ದುದರಿಂದ ಜಾಲಿಯಾಗಿದ್ದಳು.
ಅತ್ತ ಗಂಡ ಹೆಂಡತಿ, ಮಕ್ಕಳು ಅಂಥ ಕಷ್ಟಪಟ್ಟು ಆಟೋ ಓಡಿಸಿಕೊಂಡು ಜೀವನ ಮಾಡಲು ಹೋರಾಟ ಮಾಡುತ್ತಿದ್ದರೆ ಈಕೆ ಮಾತ್ರ ಶೋಕಿ ಮಾಡಿಕೊಂಡು ಗಂಡನಿಗೆ ಗೋಲಿ ಹೊಡೆದು ಬೇರೆ ಗಂಡಸರ ಸಹವಾಸ ಮಾಡಿಕೊಂಡು ಜಾಲಿಯಾಗಿರುತ್ತಿದ್ದಳು. ಏನಾದರೂ ನೆಪ ಹೇಳಿ ಮನೆಯಿಂದ ಆಚೆ ಹೋಗುತ್ತಿದ್ದ ಈಕೆ ಜಾಲಿಯಾಗಿ ಸುತ್ತಾಡಿಕೊಂಡು ಮನೆ ಸೇರುತ್ತಿದ್ದಳು. ಮೈತುಂಬಾ ಒಡವೆ ಹಾಕಿಕೊಂಡು ರೀಲ್ಸ್ ಮಾಡುತ್ತಿದ್ದ ಪ್ರೀತಿ ಗಂಡಸರ ಸಹವಾಸದಲ್ಲಿಯೇ ಸುಖ ಕಾಣುತ್ತಿದ್ದಳು. ಆಕೆ ಯಾವತ್ತೂ ಗಂಡ, ಮಕ್ಕಳ ಬಗ್ಗೆ ಕಿಂಚಿತ್ತೂ ಯೋಚಿಸಿದವಳಲ್ಲ. ಬದಲಿಗೆ ಎಂಜಾಯ್ ಮಾಡುವುದಷ್ಟೇ ಅವಳಿಗೆ ಮುಖ್ಯವಾಗಿತ್ತು.
ಆದರೆ ಇದೇ ಚಟ ಅವಳಿಗೆ ಮುಂದೊಂದು ದಿನ ಚಟ್ಟ ಕಟ್ಟಿ ಬಿಡುತ್ತದೆ ಎಂಬುದು ಗೊತ್ತೇ ಇರಲಿಲ್ಲ. ಬದುಕೇ ಹೀಗೆ ಇದ್ದಷ್ಟು ದಿನ ಸುಖಿಸಿಕೊಂಡು ಜಾಲಿಯಾಗಿರಬೇಕೆಂಬ ತೀರ್ಮಾನ ಮಾಡಿ ಬಿಟ್ಟಿದ್ದಳು. ಹಾಗಾಗಿ ಕಟ್ಟಿಕೊಂಡ ಗಂಡನಿಗಾಗಲೀ, ಸಂಬಂಧಿಕರಿಗಾಗಲೇ ಯಾರಿಗೂ ಸೊಪ್ಪು ಹಾಕದೆ ತಾನು ಇರುವುದೇ ಹೀಗೆ ಎಂಬಂತೆ ಇದ್ದಳು. ಆದರೆ ಪರಪುರುಷರ ಸಂಗ ಯಾವತ್ತಿದ್ದರೂ ಡೇಂಜರ್ ಎಂಬುದು ಗೊತ್ತಾಗುವ ವೇಳೆಗೆ ಅವಳ ಉಸಿರು ನಿಂತು ಹೋಗಿತ್ತು. ಅವಳಿಗೂ ಗೊತ್ತಾಗಿರಲಿಲ್ಲ. ಕಾರಿನಲ್ಲಿ ಸುತ್ತಾಡಿಸಿ, ಲಾಡ್ಜ್ ನಲ್ಲಿ ಹಾಸಿಗೆ ಹಂಚಿಕೊಂಡವನು ತನ್ನ ಪಾಲಿಗೆ ಯಮನಾಗುತ್ತಾನೆಂದು.. ಆದರೆ ಅದು ಗೊತ್ತಾಗುವ ವೇಳೆಗೆ ಅವಳು ಇಹಲೋಕ ತ್ಯಜಿಸಿಯಾಗಿತ್ತು.
ಇಷ್ಟಕ್ಕೂ ಆಗಿದ್ದೇನು ಎಂಬುದನ್ನು ನೋಡಿದ್ದೇ ಆದರೆ ಪ್ರೀತಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕರೋಟಿ ಗ್ರಾಮದ ಪುನೀತ್ ಎಂಬಾತನಿಗೆ ಫೇಸ್ ಬುಕ್ ನಲ್ಲಿ ರಿಕ್ವೆಸ್ಟ್ ಕಳಿಸಿದ್ದಳು. ಹೆಂಗಸು ರಿಕ್ವೆಸ್ಟ್ ಕಳಿಸಿದ್ದಾಳೆ ಎಂದ ಮೇಲೆ ಗಂಡು ಜೀವವಾದ ಪುನೀತ್ ಅದನ್ನು ಅಕ್ಸೆಪ್ಟ್ ಮಾಡದೆ ಇರುತ್ತಾನಾ? ಮಾಡಿದ್ದಾನೆ. ಅಲ್ಲಿಂದ ಊಟ ಆಯಿತಾ? ಕಾಫಿ ಆಯಿತಾ? ಹೀಗೆ ಮೆಸೇಜ್ ಗಳು ಹರಿದಾಡಿವೆ. ಅದೆಷ್ಟು ಬೇಗ ಇವರ ಪರಿಚಯ ಸಂಬಂಧವಾಗಿ ಮಾರ್ಪಾಡಾಗಿದೆ ಎಂದರೆ ಕೇವಲ 4 ದಿನದಲ್ಲಿ ಸ್ನೇಹ, ಪ್ರೀತಿ, ಪ್ರಣಯ ಎಲ್ಲವೂ ಚಾಟಿಂಗ್ ನಲ್ಲಿಯೇ ಆಗಿ ದೇಹ ಹಂಚಿಕೊಳ್ಳೋದಕ್ಕೆ ಮೂಹೂರ್ತವೂ ಫಿಕ್ಸ್ ಮಾಡಿಕೊಂಡು ಬಿಟ್ಟಿದ್ದಾರೆ.
ಇವರ ಫೇಸ್ ಬುಕ್ ಲವ್ ಕಹಾನಿ ಹೇಗಿತ್ತೆಂದರೆ ಪ್ರೀತಿ ಜೂನ್ 19ರ ಗುರುವಾರ ಪುನೀತ್‌ಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಾಳೆ. ಅದನ್ನು ಪುನೀತ್ ಅಕ್ಸೆಪ್ಟ್ ಮಾಡುತ್ತಾನೆ. ಜೂ.20 ಶುಕ್ರವಾರ ಇಬ್ಬರ ನಡುವೆ ಚಾಟಿಂಗ್ ಶುರುವಾಗುತ್ತದೆ. ಜೂ.21ರ ಶನಿವಾರದ ವೇಳೆಗೆ ಮೊಬೈಲ್ ನಂಬರ್ ಗಳು ವಿನಿಮಯವಾಗಿ ಮೊಬೈಲ್ ನಲ್ಲಿ ಮಾತನಾಡಲು ಶುರುಮಾಡಿ ಜೂ.22ರ ಭಾನುವಾರದಂದು ಇಬ್ಬರೂ ಹಾಸಿಗೆ ಹಂಚಿಕೊಳ್ಳುವ ಮಟ್ಟಕ್ಕೆ ಬಂದು ಬಿಡುತ್ತಾರೆ. ಪ್ರೀತಿ ಹಾಸನದಿಂದ ಅವನ ಬಳಿಗೆ ಬರಲು ತಯಾರಾಗುತ್ತಾಳೆ. ಇತ್ತ ಪುನೀತ್ ಅವಳೊಂದಿಗೆ ಜಾಲಿಯಾಗಿ ಕಳೆಯಲು ಸಜ್ಜಾಗುತ್ತಾನೆ.
ಅವಳು ಹಾಸನದಿಂದ ನೇರವಾಗಿ ಮೈಸೂರಿಗೆ ಬರುತ್ತಾಳೆ. ಇತ್ತ ಪುನೀತ್ ತನ್ನ ಊರು ಕೆ.ಆರ್.ಪೇಟೆಯ ಕೆರೋಟಿಯಿಂದ ಕಾರು ತೆಗೆದುಕೊಂಡು ಮೈಸೂರಿಗೆ ಬರುತ್ತಾನೆ. ಮೈಸೂರಿನಿಂದ ಕಾರಿನಲ್ಲಿ ಅವಳನ್ನು ಕರೆದುಕೊಂಡು ಕೆ.ಆರ್.ಎಸ್ ಗೆ ಹೋಗುತ್ತಾನೆ. ದಾರಿಯುದ್ದಕ್ಕೂ ಪ್ರಣಯದಲ್ಲಿ ತೊಡಗಿದ್ದ ಅವರು ಕೆಆರ್ ಎಸ್ ಬಳಿಯಿರುವ ಲಾಡ್ಜ್ ಗೆ ಹೋಗುತ್ತಾರೆ. ಅಲ್ಲಿ ತಮ್ಮ ಬಯಕೆ ತೀರಿಸಿಕೊಂಡು ಸ್ವಲ್ಪ ಹೊತ್ತು ಸುತ್ತಾಡಿದ್ದಾರೆ. ಅಲ್ಲಿಂದ ಹೊರಟಿದ್ದಾರೆ. ಆದರೆ ರೊಮ್ಯಾನ್ಸ್ ಮೂಡ್ ನಲ್ಲಿದ್ದ ಪ್ರೀತಿ ಪದೇ, ಪದೇ ದೈಹಿಕ ಸುಖದ ಆಸೆ ವ್ಯಕ್ತಪಡಿಸಿದ್ದಾಳೆ. ತನ್ನದೇ ಊರಾಗಿರುವುದರಿಂದ ಯಾರಾದರೂ ನೋಡಿದರೆ ಎಂಬ ಭಯವೂ ಪುನೀತ್ ಗೆ ಆಗಿದೆ.
ಪ್ರೀತಿ ಮಾತ್ರ ಹಸಿದ ಹುಲಿಯಂತೆ ವರ್ತಿಸಲು ಆರಂಭಿಸಿದ್ದಳು. ಹೀಗಾಗಿ ಮತ್ತೆ ದೈಹಿಕ ಸಂಬಂಧ ಹೊಂದುವ ಸಲುವಾಗಿ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಕಾಡಿನ ಬಳಿಗೆ ಬಂದಿದ್ದಾರೆ. ಆದರೆ ಅಲ್ಲಿ ಆಕೆಯನ್ನು ಕರೆದುಕೊಂಡು ಹೋಗಿ ಸಿಕ್ಕಿ ಬಿದ್ದರೆ ಎಂಬ ಭಯವಾಗಿದೆ. ಹೀಗಾಗಿ ಅದೆಲ್ಲ ಬೇಡವೆಂದು ಪುನೀತ್ ಹೇಳಿದ್ದಾನೆ. ಆದರೆ ಆಕೆ ಮಾತ್ರ ಒಪ್ಪದೆ ಮತ್ತೆ, ಮತ್ತೆ ಪೀಡಿಸಿದ್ದಾಳೆ. ಇದಕ್ಕೆ ಪುನೀತ್ ಒಪ್ಪದಿದ್ದಾಗ ನೀನು ಗಂಡಸಾ ಎಂದು ವ್ಯಂಗ್ಯ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಪುನೀತ್ ಆಕೆಯ ಕಪಾಳಕ್ಕೆ ಹೊಡೆದಿದ್ದಾನೆ.
ಇಬ್ಬರಿಗೂ ಜೋರಾದ ಜಗಳವಾಗಿದೆ. ಅವನು ಹೊಡೆದ ಏಟು ತಲೆಗೆ ಬಿದ್ದಿದ್ದರಿಂದ ಆಕೆ ನೆಲಕ್ಕೆ ಬಿದ್ದು ತಲೆಗೆ ಪೆಟ್ಟಾಗಿದ್ದು, ರಕ್ತ ಸೋರಲಾರಂಭಿಸಿದ್ದಲ್ಲದೆ ಹೊಡೆದ ಏಟಿಗೆ ಅವಳು ಪ್ರಜ್ಞೆ ತಪ್ಪಿದ್ದಾಳೆ. ಇನ್ನು ಅವಳು ಎಚ್ಚರವಾದರೆ ತನಗೆ ಕಷ್ಟವೆಂದರಿದ ಪುನೀತ್ ಕೋಪದಲ್ಲಿಯೇ ಆಕೆಯ ತಲೆಗೆ ಕಲ್ಲು ಎತ್ತಿ ಹಾಕಿದ್ದಾನೆ. ಅಲ್ಲಿಗೆ ಅವಳು ಉಸಿರು ಚೆಲ್ಲಿದ್ದಾಳೆ. ಇನ್ನು ಹೆಣವನ್ನು ಅಲ್ಲಿಯೇ ಬಿಟ್ಟರೆ ಕಷ್ಟವೆಂದರಿತು ಹೆಣವನ್ನು ಕಾರಿನಲ್ಲಿ ಹಾಕಿಕೊಂಡು ತನ್ನೂರಿನ ಕೆರೋಟಿಗೆ ತಂದು ಜಮೀನಿನಲ್ಲಿ ಮುಚ್ಚಿಟ್ಟಿದ್ದಾನೆ.
ಅತ್ತ ಮನೆಯಿಂದ ಹೋದ ಪ್ರೀತಿ ಮನೆಗೆ ಮರಳಿ ಬಾರದೆ ಇದ್ದಾಗ ಆಕೆಯ ಗಂಡ ಹಾಸನದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದನು. ಜೊತೆಗೆ ಫೋನ್ ಮಾಡಿದಾಗ ಮೊಬೈಲ್ ರಿಂಗ್ ಆಗುತ್ತಿದ್ದರೂ ರಿಸೀವ್ ಆಗುತ್ತಿರಲಿಲ್ಲ. ಇದಾದ ನಂತರ ಫೋನ್ ರಿಸೀವ್ ಮಾಡಿದ ಪುನೀತ್ ಈ ಮೊಬೈಲ್ ಕಾರಿನಲ್ಲಿ ಸಿಕ್ಕಿದೆ. ಯಾರೋ ಹೆಂಗಸು ಕಾರಿನಲ್ಲಿ ಬಿಟ್ಟು ಹೋಗಿದ್ದಾಗಿ ಹೇಳಿದ್ದಾನೆ. ಈ ವೇಳೆ ಕೆಲವು ಪ್ರಶ್ನೆಗಳನ್ನು ಕೇಳಿದರೆ ಸರಿಯಾಗಿ ಉತ್ತರ ಹೇಳದೆ ನುಣುಚಿಕೊಂಡಿದ್ದಾನೆ.
ಆದರೆ ಪೊಲೀಸರು ವಿಚಾರಣೆ ನಡೆಸಿದಾಗ ಮೊದ ಮೊದಲು ಪುನೀತ್ ಸುಳ್ಳು ಮಾಹಿತಿ ಹೇಳಿದ್ದು, ಪ್ರೀತಿ ಎನ್ನುವ ಮಹಿಳೆ ನನ್ನ ಕಾರನ್ನು ಬಾಡಿಗೆ ಪಡೆದಿದ್ದರು. ಮೊಬೈಲ್ ಅನ್ನು ಕಾರಿನಲ್ಲೇ ಬಿಟ್ಟು ಹೋಗಿರುವುದಾಗಿ ಮಾಹಿತಿ ನೀಡಿ, ಪ್ರೀತಿ ಅವರ ಮೊಬೈಲ್ ಅನ್ನು ಪೊಲೀಸರಿಗೆ ಕೊಟ್ಟಿದ್ದಾನೆ. ಆದರೂ, ಆತನ ಮೇಲೆ ಅನುಮಾನಗೊಂಡ ಪೊಲೀಸರು ಮೊಬೈಲ್ ಗೆ ಬಂದಿದ್ದ ಕಾಲ್ ಲೀಸ್ಟ್ ಸೇರಿದಂತೆ ಚಾಟಿಂಗ್ ಮೊದಲಾದವುಗಳನ್ನು ನೋಡಿದಾಗ ಇವರಿಬ್ಬರ ನಡುವಿನ ಲವ್ವಿಡವ್ವಿ ಬೆಳಕಿಗೆ ಬಂದಿದೆ. ಹೀಗಾಗಿ ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಬಳಿಕ ಆತ ನೀಡಿದ ಮಾಹಿತಿಯನ್ನು ಆದರಿಸಿ ಜಮೀನಿಗೆ ತೆರಳಿದ ಪೊಲೀಸರಿಗೆ ಪ್ರೀತಿಯ ಕೊಳೆತ ಶವ ಪತ್ತೆಯಾಗಿದೆ. ಈ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆ ಎಸ್ ಐ ರೇವತಿ ಅವರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅತ್ತ ಗಂಡ ನಂದೀಶ್ ಹೇಳುವ ಪ್ರಕಾರ ಪ್ರೀತಿ ಚಿನ್ನಾಭರಣ ಸಹಿತ ಬಂದಿದ್ದಳು. ಹೀಗಾಗಿ ಅವಳ ಕೊಲೆ ಮಾಡಿ ಚಿನ್ನಾಭರಣವನ್ನು ಪುನೀತ್ ದೋಚಿರುವುದಾಗಿ ಆರೋಪ ಮಾಡುತ್ತಿದ್ದಾನೆ. ಇನ್ನು ಪುನೀತ್ ಆಕೆಯನ್ನು ಅವಳ ಬಳಿಯಿದ್ದ ಚಿನ್ನಾಭರಣಕ್ಕಾಗಿ ಕೊಲೆ ಮಾಡಿ ಕಥೆ ಕಟ್ಟಿದ್ದಾನಾ? ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.
ಅದು ಏನೇ ಇರಲಿ.. ವಿವಾಹಿತೆಯಾಗಿ ಮನೆ ಮಕ್ಕಳು ಅಂಥ ಸಂಸಾರದ ಜವಬ್ದಾರಿಯನ್ನು ನಿಭಾಯಿಸುವ ಸಮಯದಲ್ಲಿ ಅಪರಿಚಿತ ಪರಪುರುಷನ ಸಹವಾಸಕ್ಕೆ ಬಿದ್ದು ಪ್ರೀತಿ, ಪ್ರೇಮ, ಪ್ರಣಯ ಅಂಥ ಆತನ ಹಿಂದೆ ಹೋಗಿ ಅವನಿಂದಲೇ ಕೊಲೆಯಾಗಿ ಹೋಗಿರುವುದು ದುರಂತವೇ ಸರಿ… ಇದು ಮುಂದೆ ಈ ರೀತಿ ಮಾಡುವವರಿಗೆ ಎಚ್ಚರಿಕೆಯ ಗಂಟೆ ಎಂದರೆ ತಪ್ಪಾಗಲಾರದು. ಅನೈತಿಕ ಸಂಬಂಧಗಳು ನಮಗೆ ತಾತ್ಕಾಲಿಕ ಸುಖಗಳನ್ನು ನೀಡಬಹುದಾದರೂ ಬದುಕನ್ನು ಸುಖವಾಗಿಡಲ್ಲ ಎಂಬುದಕ್ಕೆ ಪ್ರೀತಿಯ ದುರಂತ ಸಾವು ಸಾಕ್ಷಿಯಾಗಿದೆ.
-ಬಿ.ಎಂ.ಲವಕುಮಾರ್