CinemaLatest

ಕನ್ನಡ ಚಿತ್ರರಂಗ ಎಂದಿಗೂ ಮರೆಯದ ಮಹಾಕಲಾವಿದ ಜಿ.ವಿ.ಅಯ್ಯರ್… ಇವರ ಬಣ್ಣದ ಬದುಕು ಹೇಗಿತ್ತು? ಸಾಧನೆಗಳೇನು?

ಇವತ್ತಿನ ಯುವ ನಟ, ನಟಿಯರು ಕನ್ನಡ ಚಿತ್ರರಂಗದಲ್ಲಿ ಮಿಂಚಿ ತಮ್ಮ ಹೆಜ್ಜೆ ಗುರುತುಗಳನ್ನು ಅಜರಾಮರವಾಗಿಸಿ ಹೋದ ಹಿರಿಯ ಕಲಾವಿದರ ಬದುಕಿನ ಪುಟಗಳನ್ನು ತೆರೆದು ನೋಡಬೇಕು. ಅವರು ಕಲೆಗಾಗಿ ನೀಡಿದ ಕೊಡುಗೆ, ಮಾಡಿದ ಸಾಧನೆ ಪ್ರೇರಣೆಯಾಗುವುದರಲ್ಲಿ ಎರಡು ಮಾತಿಲ್ಲ. ಕನ್ನಡ ಚಿತ್ರರಂಗ ದೊಡ್ಡದೊಂದು ಹೆಮ್ಮರವಿದ್ದಂತೆ ಅದು ಇವತ್ತು ಸಾವಿರಾರು ಮಂದಿಗೆ ನೆರಳು ನೀಡುತ್ತಿದೆ. ಅಂತಹ ಹೆಮ್ಮರಕ್ಕೆ ಗೊಬ್ಬರ ಹಾಕಿ ನೀರು ಎರೆದ ಮಹಾಕಲಾವಿದರನ್ನು ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.

ಕನ್ನಡ ಚಿತ್ರರಂಗ ಎಂದಿಗೂ ಮರೆಯದ ಮಹಾಕಲಾವಿದರಲ್ಲಿ ಜಿ.ವಿ.ಅಯ್ಯರ್ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ಇವರು ಕಥೆ, ಚಿತ್ರಕಥೆ,ಸಂಭಾಷಣೆ, ಹಾಡು, ಸಂಗೀತ ನಿರ್ದೇಶನದ ಜತೆಗೆ ನಟ, ನಿರ್ಮಾಪಕ, ನಿರ್ದೇಶಕನಾಗಿ ಕೆಲಸ ಮಾಡಿದವರು. ಇವರ ಬಗ್ಗೆ ಕುಮಾರಕವಿ ನಟರಾಜ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.. ಜಿ.ವಿ.ಅಯ್ಯರ್ ಅವರ ಬಣ್ಣದ ಬದುಕು ಹೇಗಿತ್ತು? ಇಲ್ಲಿದೆ…

ದಕ್ಷಿಣಕಾಶಿ (ಹಳೇ ಮೈಸೂರು ರಾಜ್ಯ) ನಂಜನಗೂಡಿನ ಸಂಪ್ರದಾಯಸ್ಥ ಕುಟುಂಬದಲ್ಲಿ 3.9.1917ರಂದು ಜಿ.ವಿ.ಅಯ್ಯರ್ ಜನಿಸಿದರು. ಗುರುಕುಲ ವಿದ್ಯಾಭ್ಯಾಸ ಕಾಲದಲ್ಲಿ ಸಂಸ್ಕೃತ ಮತ್ತು ಸಂಗೀತ ವಿದ್ಯೆಗಳಲ್ಲಿ ಜಾಣನಾಗಿ, ಬಾಲ್ಯದಲ್ಲೆ ಸಂಗೀತ- ಸಂಸ್ಕೃತದ ಪಾಂಡಿತ್ಯ ಗಳಿಸಿದರು. ಇವರು ನಾಟಕ-ಸಿನಿಮಾರಂಗಕ್ಕೆ ಆಗಮಿಸಿದ್ದೇ ಅನಿರೀಕ್ಷಿತ-ಆಕಸ್ಮಿಕ… ಮೈಸೂರಿನಲ್ಲಿ ಮೊಕ್ಕಾಂ ಹೂಡುತ್ತಿದ್ದ ಕಂಪನಿ ನಾಟಕಗಳಿಂದ ಪ್ರಭಾವಿತರಾಗಿ ಬಣ್ಣ ಹಚ್ಚಿಕೊಂಡವರು. ಬಹುಶಃ ವಿದ್ಯಾಭ್ಯಾಸ ಮುಂದುವರೆಸಿದ್ದರೆ ಓರ್ವ ಉತ್ತಮ ಸಂಸ್ಕೃತ ಪ್ರಾಧ್ಯಾಪಕನೋ, ಸಂಗೀತ ವಿದ್ವಾಂಸನೋ ಆಗುತ್ತಿದ್ದರೆನೋ?  ಆದರೆ 9 ವರ್ಷದ ಬಾಲಕನಿದ್ದಾಗ ಟೈಗರ್ ವರದಾಚಾರ್ ಮತ್ತು ಗುಬ್ಬಿವೀರಣ್ಣ ನಾಟಕದ ಕಂಪನಿಯಲ್ಲಿ ನಟಿಸಲು ಪ್ರಾರಂಭಿಸಿದ್ದು ಇವರಲ್ಲಿ ಕಲೆ ರಕ್ತಗತವಾಗಲು ಕಾರಣವಾಯಿತು.

ಇದನ್ನೂ ಓದಿ: ನರಸಿಂಹರಾಜು ನಟನೆಯ ಸಿನಿಮಾದಲ್ಲಿ ನಗುವಿಗೆ ಬರವಿಲ್ಲ….

ನಾಟಕದಲ್ಲಿ ಕಲಾ ಬದುಕನ್ನು ಸಾಗಿಸುತ್ತಿದ್ದ ಅವರು 1943ರಲ್ಲಿ ತೆರೆಕಂಡ “ರಾಧಾರಮಣ” ಕನ್ನಡ ಫಿಲಂನಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಾಟಕ ಸಿನಿಮಾ ಎರಡೂ ಕ್ಷೇತ್ರದ ಜ್ಞಾನಕೋಶವನ್ನು ಬೇಗ ಅರ್ಥೈಸಿಕೊಂಡು ಕಿರಿಯವಯಸ್ಸಲ್ಲೆ ಸ್ವತಂತ್ರ ಚಿತ್ರೋದ್ಯಮಿಯಾದರು. ಅನಂತಲಕ್ಷ್ಮಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ 23 ಫಿಲಂಸ್ ಪೈಕಿ 18 ಕನ್ನಡ ಚಿತ್ರಗಳನ್ನು ತಯಾರಿಸಿ ಅಮೂಲ್ಯ ಕೊಡುಗೆ ನೀಡಿದರು. ಚಲನಚಿತ್ರ ಕಲಾವಿದರ ಸಂಘ ಸ್ಥಾಪಿಸಿದ ರೂವಾರಿಗಳಲ್ಲಿ ಪ್ರಮುಖರಿವರು. 1962 ರಲ್ಲಿ  ಪ್ರಪ್ರಥಮ (ಕಟ್ಟಕಡೆಯ) ಬಾರಿಗೆ ರಾಜ್, ಕಲ್ಯಾಣ್, ಉದಯ್, ಕುಮಾರತ್ರಯರು ಒಟ್ಟಿಗೇ ನಟಿಸಿದ ‘ಭೂದಾನ’ ಫಿಲಂ ನಿರ್ದೇಶಿಸುವ ಮೂಲಕ ಡೈರೆಕ್ಷನ್ ವಿಭಾಗಕ್ಕೂ ಎಂಟ್ರಿಯಾದರು.

ಕಥೆ, ಚಿತ್ರಕಥೆ, ಸಂಭಾಷಣೆ, ಹಾಡು, ಸಂಗೀತ ನಿರ್ದೇಶನದ ಜತೆಗೇ ನಟ ನಿರ್ಮಾಪಕ ನಿರ್ದೇಶಕನಾಗಿ ಅಮೋಘ ಸಾಧನೆ ಮಾಡಿದ್ದಾರೆ. ಚಿತ್ರರಂಗದ ದ್ರೋಣಾಚಾರ್ಯ ಬಿರುದಾಂಕಿತ ಜಿ.ವಿ. ಅಯ್ಯರ್ ಗರಡೀಲಿ ಪಳಗಿದ ಶಿಷ್ಯವೃಂದರಲ್ಲಿ ಅನೇಕರು ರಾಷ್ಟ್ರ ಅಂತಾರಾಷ್ಟ್ರಮಟ್ಟದ ಕೀರ್ತಿ ಯಶಸ್ಸು ಹುದ್ದೆ ಪದವಿ ಗಳಿಸಿ ಬದುಕು ಕಟ್ಟಿಕೊಂಡಿದ್ದಾರೆ.

ಇದನ್ನೂ ಓದಿ: ಟಿ.ಎಸ್.ಕರಿಬಸವಯ್ಯರವರ ಬಣ್ಣದ ಬದುಕಿನ ಕಥೆ…

1983ರಲ್ಲಿ ಸಂಸ್ಕೃತ-ಇಂಗ್ಲಿಷ್ ಎರಡು ಭಾಷೆ ಗಳಲ್ಲಿ ಏಕಕಾಲಕ್ಕೆ “ಆದಿಶಂಕರಾಚಾರ್ಯ” ಫಿಲಂ ತಯಾರಿಸಿದ ಪ್ರಪ್ರಥಮ ನಟ, ನಿರ್ಮಾಪಕ, ನಿರ್ದೇಶಕ. ಪಾಶ್ಚಿಮಾತ್ಯ  ಯೂರೋಪ್ ಏಷ್ಯಾ ರಾಷ್ಟ್ರಗಳಲ್ಲಿ ಇವರ ಮೂರೂ ಸಂಸ್ಕೃತ ಭಾಷಾ ಸಿನಿಮಾಗಳು ದಾಖಲೆ ನಿರ್ಮಿಸಿ ಇವರ ಸಾಧನೆ ಬಗ್ಗೆ ಹಾಲಿವುಡ್ ಸೇರಿದಂತೆ ಪ್ರಪಂಚದ ಪ್ರಮುಖ ಚಿತ್ರೋದ್ಯಮಿಗಳು ಶ್ಲಾಘನೆ ವ್ಯಕ್ತಪಡಿಸಿ ಅನೇಕ ಪ್ರಶಸ್ತಿ ಬಿರುದು ಬಹುಮಾನ ಸನ್ಮಾನ ನೀಡಿ ಗೌರವಿಸಿದ್ದಾರೆ.

ಆದಿ ಶಂಕರಾಚಾರ್ಯ ಸಿನಿಮಾಗೆ ಶ್ರೇಷ್ಠಚಿತ್ರ, ಅತ್ತ್ಯುತ್ತಮ ಚಿತ್ರಕಥೆ-ಛಾಯಾಗ್ರಹಣ- ಶಬ್ಧಗ್ರಹಣ, ಒಟ್ಟು 4 ರಾಷ್ಟ್ರ ಪ್ರಶಸ್ತಿ ಪಡೆಯುವುದರ ಜತೆಗೆ 2012ರ ’ಡೈರೆಕ್ಟೊರೇಟ್ ಆಫ಼್ ಫಿಲಂ ಫ಼ೆಸ್ಟಿವಲ್’ ಪ್ರಶಂಸಾಪತ್ರ, 2013ರ ಭಾರತದ ಅಂತರ್ ರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ, ಕ್ಯಾನೆ ಅಂತಾರಾಷ್ಟ್ರ ಸಂಸ್ಕೃತಿ ಪರಂಪರೆ ಚಿತ್ರೋತ್ಸವ ಪ್ರಶಸ್ತಿ ಹಾಗೂ ಜಪಾನ್ ಓವರ್ಸೀಸ್ ಫಿಲಂ ಫ಼ೆಸ್ಟಿವಿಟೀಸ್ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡ ಇಂಡಿಯಾದ ಏಕೈಕ ಸಿನಿಮಾವಾಗಿದೆ.

1993ರಲ್ಲಿ ಮತ್ತೊಂದು ಸಂಸ್ಕೃತ ಭಾಷೆಯ ಸಿನಿಮ ’ಭಗವದ್ಗೀತಾ’ ಅತ್ಯುತ್ತಮ ಚಿತ್ರವೆಂದು ರಾಷ್ಟ್ರಪ್ರಶಸ್ತಿ ಗಳಿಸಿದ್ದಲ್ಲದೆ, ಕೊಲಂಬಿಯಾದ ಬೊಗೋಟಾ ಫಿಲಂ ಫ಼ೆಸ್ಟಿವಲ್‌ನ ಅತ್ಯುತ್ತಮ ಚಿತ್ರವೆಂದು ಅಂತಾರಾಷ್ಟ್ರ ಪ್ರಶಸ್ತಿ ಪಡೆಯಿತು. 1998ರಲ್ಲಿ ಹಿಂದಿ-ಇಂಗ್ಲಿಷ್ ಎರಡು ಭಾಷೆಯಲ್ಲಿ ನಿರ್ಮಾಣಗೊಂಡ ’ಸ್ವಾಮಿವಿವೇಕಾನಂದ’ ಚಿತ್ರದ ರೂವಾರಿ. ಈ ಚಿತ್ರದ ಕತೆ ಚಿತ್ರಕಥೆ ಸಾಹಿತ್ಯ ನಿರ್ದೇಶನದ ಹೊಣೆಹೊತ್ತರು. ಶಮ್ಮಿಕಪೂರ್, ಶಶಿಕಪೂರ್, ಹೇಮಮಾಲಿನಿ, ರಾಖಿ, ಜಯಪ್ರದ ಹಾಗೂ ಮಿಥುನ್‌ ಚಕ್ರವರ್ತಿ ನಟಿಸಿ (ಅತ್ಯುತ್ತಮ ಪೋಷಕ ನಟ, ರಾಷ್ಟ್ರಪ್ರಶಸ್ತಿಗಿಟ್ಟಿಸಿ)ದರು.

ಇದನ್ನೂ ಓದಿ: ಡಾ.ಶಿವರಾಮಕಾರಂತರ ಸಿನಿಮಾ ಬದುಕು ಹೇಗಿತ್ತು?

ವಿಷ್ಣುವರ್ಧನ್, ಅನಂತನಾಗ್, ಗಂಗಾಧರ್, ಚಂದ್ರಶೇಖರ್, ಶ್ರೀನಿವಾಸಪ್ರಭು, ನಾಗಾಭರಣ, ಭರತ್ ಭೂಷಣ್, ಸರ್ವದಮನ, ಎಲ್.ವಿ.ಶಾರದ, ಕಲ್ಪನ, ಭಾರತಿ, ವಂದನ, ಜಯಂತಿ ಮುಂತಾದ ಅನೇಕ ನಟ ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ, ಪುನರ್ಜೀವನ ಕೊಟ್ಟಂಥ ಮಹಾನ್ ವ್ಯಕ್ತಿ ಪಡೆದ ಚಂದನವನವೇ ಮಾನ್ಯ, ಕನ್ನಡಿಗರೇ ಧನ್ಯ.1972ರಲ್ಲಿ ಎಸ್.ಎಲ್.ಭೈರಪ್ಪನವರ ಕಾದಂಬರಿ  “ವಂಶವೃಕ್ಷ” ಆಧಾರಿತ ಬಿ.ವಿ.ಕಾರಂತ-ಗಿರೀಶ್ ಕಾರ್ನಾಡ್ ಜಂಟಿ ನಿರ್ದೇಶನದ ವಂಶವೃಕ್ಷ  (ವಿಷ್ಣುವರ್ಧನ್ ಚೊಚ್ಚಲ) ಚಿತ್ರದ ನಿರ್ಮಾಪಕ ರಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿದರು.

1975ರಲ್ಲಿ ತ.ರಾ.ಸು. ಕಾದಂಬರಿ ಆಧಾರಿತ ಹಂಸಗೀತೆ  ಫಿಲಂ ನಿರ್ಮಿಸಿ ಮತ್ತೊಮ್ಮೆ ಎರಡೆರಡು ರಾಷ್ಟ್ರಪ್ರಶಸ್ತಿ ಪಡೆದರು. ನಂತರ ಮತ್ತೊಂದು ಸಿನಿಮ”ಹೇಮಾವತಿ”ತಯಾರಿಸಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಗಳಿಸಿದರು. ತಮಿಳಿನಲ್ಲಿ ’ರಾಮಾನುಜಾಚಾರ್ಯ’ ಕನ್ನಡದಲ್ಲಿ ’ಮಧ್ವಾಚಾರ್ಯ’ ತಯಾರಿಸಿ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ  ಡಾ.ಎಂ.ಬಾಲಮುರಳಿಕೃಷ್ಣರಿಗೆ 3 ಬಾರಿ ರಾಷ್ಟ್ರಪ್ರಶಸ್ತಿ ದೊರಕಿಸಿಕೊಟ್ಟ ಚಿತ್ರರಂಗದ ದ್ರೋಣಾಚಾರ್ಯ. ಇವರು ಒಟ್ಟು 4 ಫಿಲಂಫ಼ೇರ್ ಪ್ರಶಸ್ತಿ ಪಡೆದಿದ್ದರು.

ಸಂಜಯ್‌ದತ್ ರಾವಣ ಪಾತ್ರದ ’ರಾಮಾಯಣ’ ನಿರ್ಮಿಸುವ ಬಯಕೆ ಈಡೇರುವ ಮುನ್ನ 21.12.2003ರಂದು ಇಹಲೋಕ ತ್ಯಜಿಸಿದ್ದು ದುರಂತ. ತುಂಬು ಜೀವನದ 87ನೇ ವಯಸ್ಸಲ್ಲಿ ದಿಢೀರನೆ ಮುಂಬೈನಲ್ಲಿ ದೈವಾಧೀನರಾದ ನಂತರ ಬೆಂಗಳೂರು ದೊಡ್ಡಆಲದಮರ ಬಳಿ ಅವರ ’ಭಾರಧ್ವಾಜ ಆಶ್ರಮ’ದಲ್ಲಿ ಅಂತ್ಯಕ್ರಿಯೆ ಜರುಗಿ ಪ್ರಕೃತಿಯಲ್ಲಿ ಲೀನವಾದರು.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಗುಬ್ಬಿವೀರಣ್ಣ

ಜಿ.ವಿ.ಅಯ್ಯರ್ ಸಿನಿಮಾಗಳ ಬಗ್ಗೆ ನೋಡುವುದಾದರೆ ರಾಧಾರಮಣ, ಬೇಡರಕಣ್ಣಪ್ಪ, ಸದಾರಮೆ, ಭಕ್ತಮಲ್ಲಿಕಾರ್ಜುನ, ಸೋದರಿ, ಭೂದಾನ, ಜಗಜ್ಯೋತಿ ಬಸವೇಶ್ವರ, ರಣಧೀರ ಕಂಠೀರವ, ಕಣ್ತೆರೆದು ನೋಡು, ತಾಯಿ ಕರುಳು, ಬಂಗಾರಿ, ಗಾಳಿಗೋಪುರ, ಸಾಕುಮಗಳು, ಕಿಲಾಡಿರಂಗ, ಲಾಯರಮಗಳು, ಪೋಸ್ಟ್ ಮಾಸ್ಟರ್, ಗಂಗೆ ಗೌರಿ, ರಾಜಶೇಖರ, ಮೈಸೂರು ಟಾಂಗ, ನಾನೇ  ಭಾಗ್ಯವತಿ, ಚೌಕದದೀಪ, ವಿಚಿತ್ರ ಸಂಸಾರ, ನಾಳೆಗಳನ್ನುಮಾಡುವವರು, ಕುದುರೆಮೊಟ್ಟೆ, ಹೇಮಾವತಿ, ವಾಲ್ ಪೋಸ್ಟರ್ ಮೊದಲಾದವುಗಳಾಗಿವೆ.

admin
the authoradmin

Leave a Reply