ArticlesLatest

ಕಣ್ಣಿಗೆ ಕಾಣುವ ದೇವರು ಎಂದರೆ ವೈದ್ಯರು ತಾನೇ…  ನಮ್ಮ ಆರೋಗ್ಯ ಕಾಪಾಡುವ ಅವರಿಗೊಂದು ಸಲಾಮ್ !

ದೇಶದಲ್ಲಿ ಯಾವುದ್ಯಾವುದಕ್ಕೋ  ವಿಶೇಷ ದಿನಗಳನ್ನು ಆಚರಿಸುವಾಗ ನೂರಾರು ಜನರ ಪ್ರಾಣ ರಕ್ಷಿಸುವ ಕಾಯಕವನ್ನೇ ಉಸಿರನ್ನಾಗಿಸಿ ಕೊಂಡಿರುವ ವೈದ್ಯರಿಗೇಕೆ ಒಂದು ದಿನವನ್ನು ಮೀಸಲಿರಿಸಬಾರದು? ವ್ಯಾಲೆಂಟೈನ್ಸ್ ಡೇ, ಫ್ರೆಂಡ್ ಶಿಪ್ ಡೇ, ಆ…ಡೇ, ಈ… ಡೇ ಅಂತೆಲ್ಲಾ ವಾರಕ್ಕೂ ಮುಂಚೆ ನೆನಪಿಸಿಕೊಳ್ಳುವ ನಮಗೆ ಅದ್ಯಾಕೋ ಏನೋ ಈ ಡಾಕ್ಟರ್ಸ್ ಡೇ ನೆನಪಿಗೇ ಬರುವುದೇ ಇಲ್ಲ…

ಉಚಿತ ಆರೋಗ್ಯ ತಪಾಸಣಾ ಶಿಬಿರ ಎಂಬ ದೊಡ್ಡ ಪ್ಲೆಕ್ಸ್ ಓದುವಾಗಲಷ್ಟೇ ಇದು ವೈದ್ಯರ ದಿನದ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮ ಅನ್ನೋದು ತಿಳಿಯುತ್ತದೆ. ಜುಲೈ 1 ವೈದ್ಯರ ದಿನವಲ್ಲವಾ… ಅನ್ನೋ ಅರಿವಾಗುತ್ತದೆ.  ವೈದ್ಯರ ದಿನವನ್ನು ದೇಶದಿಂದ ದೇಶಕ್ಕೆ ವಿಭಿನ್ನ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ. ಆದರೆ ಉದ್ದೇಶ ಮಾತ್ರ ಒಂದೇ. ಎಲ್ಲರ ಜೀವನವನ್ನೂ ಜತನವಾಗಿ ಕಾಪಾಡುವ ವೈದ್ಯರನ್ನು ಮನಃಪೂರ್ತಿಯಾಗಿ ನೆನಪಿಸಿಕೊಳ್ಳುವ ದಿನ. ವೈದ್ಯರ ದಿನವನ್ನು ಅಮೆರಿಕದಲ್ಲಿ ಮಾ. 30ರಂದು ಆಚರಿಸಿದರೆ, ಕ್ಯೂಬಾ ಡಿ.3, ಇರಾನ್‌ನಲ್ಲಿ ಆ.23ರಂದು ಆಚರಿಸಲಾಗುತ್ತದೆ. ವಿಶ್ವದಲ್ಲೇ ಮೊದಲ ಬಾರಿಗೆ ವೈದ್ಯರ ದಿನಾಚರಣೆ ನಡೆದಿದ್ದು ಅಮೆರಿಕದಲ್ಲಿ. ಯುಡೋರಾ ಬ್ರೌನ್ ಆಲ್ಮಂಡ್ ಎಂಬ ವೈದ್ಯೆ 1933, ಮಾ. 30ರಂದು ಹೀಗೊಂದು ದಿನಾಚರಣೆ ಆರಂಭಿಸಿದರು.

ಭಾರತದಲ್ಲಿ: ನಮ್ಮ ದೇಶದಲ್ಲಿ ವೈದ್ಯರ ದಿನಾಚರಣೆ ಯನ್ನು ಡಾ. ಭಿದನ್ ಚಂದ್ರ ರಾಯ್ ಜನ್ಮದಿನದಂದು ಆಚರಿಸಲಾಗುತ್ತದೆ. ಭಾರತದ ಖ್ಯಾತ ವೈದ್ಯ ಅದರ ಜೊತೆಗೆ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯೂ ಹೌದು. ಅವರು 1882 ಜು. 1ರಂದು ಹುಟ್ಟಿದರು. ತೀರಿಕೊಂಡದ್ದು 1962 ಜು.1ರಂದೇ. ರಾಯ್‌ಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ  ನೀಡಿ ಗೌರವಿಸಲಾಗಿದೆ. ವೈದ್ಯರು ರೋಗಿಗಳಿಗೆ, ದೇಶಕ್ಕೆ ಮಾಡಿದ ಸೇವೆಯನ್ನು ಗೌರವಿಸಲು, ಸಮುದಾಯಕ್ಕೆ, ವ್ಯಕ್ತಿಗೆಅವರು ನೀಡಿದ ಪ್ರೀತಿಯನ್ನು ಗುರುತಿಸಲು ಈ ದಿನಾಚರಣೆ ವಿಶ್ವದೆಲ್ಲೆಡೆ ನಡೆಸಿಕೊಂಡು ಬರಲಾಗುತ್ತಿದೆ.

ಕ್ಯಾನ್ಸರ್‌ನಂತಹ ಮಹಾರೋಗ ಸಾವಿರಾರು ಮಂದಿಯ ಜೀವ ತೆಗೆಯುತ್ತಿರುವ ನಡುವೆಯೇ ಅವರನ್ನುಳಿಸಲು ಇತ್ತೀಚೆಗೆ ವೈದ್ಯರು ಯಶಸ್ವಿಯಾಗುತ್ತಿದ್ದಾರೆ. ಇಂತಹ ವೈದ್ಯರು ಲಕ್ಷಾಂತರ ಮಂದಿಯ ನೆಮ್ಮದಿಗೆ ಕಾರಣರಾಗಿದ್ದಾರೆ. ಈ ಕೃತಜ್ಞತೆ ದಿನಾಚರಣೆಯ ಮೂಲಕ ನೆನಪಿಸಿಕೊಳ್ಳಲಾಗುತ್ತದೆ. ರೆಡ್ ಕಾರ್ನೇಶನ್ ಹೂವು ವೈದ್ಯ ದಿನಾಚರಣೆಯ ಸಂಕೇತ. ಕೆಂಪು ಕಾರ್ನೇಶನ್ ಹೂವು ಪ್ರೀತಿ, ತ್ಯಾಗ, ಧೈರ್ಯ, ಸಾಹಸ ಹಾಗೂ ಸೇವೆಯ ಪ್ರತೀಕವಾಗಿದೆ. ತಮ್ಮ ಜೀವನದ ಅತ್ಯಮೂಲ್ಯ ಸಮಯವನ್ನು ರೋಗಿಗಳ ಚಿಕಿತ್ಸೆಗೆಂದೇ ಮುಡಿಪಾಗಿಟ್ಟಿರುವ ಪರೋಪಕಾರ ಗುಣವನ್ನೇ ಮೈಗಂಟಿಸಿಗೊಂಡಿರುವ ಜೀವವೇ ವೈದ್ಯರು. ತಮ್ಮ ಸ್ವಂತ ಕೆಲಸಕ್ಕಿಂತ ಸಾರ್ವಜನಿಕ ಕೆಲಸಕ್ಕೆ ತಮ್ಮ ಜೀವವನ್ನು ತೇಯುತ್ತಾರೆ. ಸದಾ ದುಡಿಮೆಗೆ ಹೆಸರಾದ ವೈದ್ಯರನ್ನು ವರ್ಷಕ್ಕೊಮ್ಮೆ ಅವರ ದಿನಾಚರಣೆಯನ್ನು ಆಚರಿಸುವುದರ ಮೂಲಕ ಜ್ಞಾಪಿಸಿಕೊಂಡು ಕೃತಾರ್ಥರಾದರೆ ಅದಕ್ಕಿಂತ ಒಳ್ಳೆಯ ಕೆಲಸ ಮತ್ತೊಂದಿಲ್ಲ.

ರಾತ್ರಿ ಹಗಲು, ಹಸಿವು ನಿದ್ರೆಗಳ ಪರಿವೇ ಇಲ್ಲದೆ ಸದಾ ಇನ್ನೊಂದು ಜೀವವನ್ನು ಸುಖವಾಗಿಡಲು ಶ್ರಮಿಸುವ ಈ ವೈದ್ಯರು ಕೂಡಾ ನಮ್ಮ  ನಮ್ಮಂತೆಯೇ ಮನುಷ್ಯ ಜೀವಿ. ಅವರಿಗೂ ಆರಾಮ ಬೇಕು, ಅವರಿಗೂ ಕುಟುಂಬ ಬೇಕು. ಅಷ್ಟೇ ಅಲ್ಲ ಮನಸ್ಸಿಗೊಂದಿಷ್ಟು ಮನರಂಜನೆ, ಕರ್ತವ್ಯದ ಏಕಾನತೆಯಿಂದ ಹೊರಬರಬೇಕು ಎಂಬ ಆಸೆ ಅವರಿಗೂ ಇರುತ್ತದೆ. ಚೋದ್ಯವೆಂದರೆ ಅದೆಲ್ಲವನ್ನೂ ಎದುರು ಕೂತ ರೋಗಿಯ ಕಂಡಾಗ ಅನಿವಾರ್ಯವಾಗಿ ಮರೆಯಲೇ ಬೇಕಾಗುತ್ತದೆ. ಮರೆಯುತ್ತಾರೆ ಕೂಡಾ. ಅವರಿಗೆ ತಮ್ಮ ಸ್ವಂತ ಸಂತೋಷಕ್ಕಿಂತ ರೋಗಿಯ ಮುಖದಲ್ಲಿ ಕಾಣುವ ನಗುವೇ ಮುಖ್ಯವಾಗುತ್ತದೆ. ರೋಗಿ ಸಂತಸದಿಂದದ ಎದ್ದು ಕುಳಿತಾಗ ಅವರಿಗಾಗುವ ಸಂತೋಷಕ್ಕೆ ಪಾರವೇ ಇಲ್ಲ.

ಇದನ್ನೂ ಓದಿ: ನೀವು ತಡವಾಗಿ ವಿವಾಹವಾಗಿದ್ದೀರಾ…? ಆದಷ್ಟು ಬೇಗ ಮಗು ಪಡೆಯುವ ಬಗ್ಗೆ ಆಲೋಚಿಸಿ… ಈ ಬಗ್ಗೆ ವೈದ್ಯರು ಹೇಳುವುದೇನು?

ನಮ್ಮ ಹಿರಿಯರಾದ ಡಾ. ನಾ. ಸೋಮೇಶ್ವರ ಅವರು ಹೇಳುವಂತೆ ವೈದ್ಯನಾದವನಿಗೆ ಹದ್ದಿನ ಕಣ್ಣುಗಳು, ಸಿಂಹದ ಹೃದಯ ಹಾಗೂ ಹೆಣ್ಣಿನ ಕೋಮಲ ಕರಗಳಿರಬೇಕಾಗುತ್ತದೆ. ಆಗ ಮಾತ್ರ ಅವನು ವೃತ್ತಿಗೆ ನ್ಯಾಯವನ್ನು ಒದಗಿಸಬಲ್ಲನು ಎನ್ನುವುದು ಅಕ್ಷರಶಃ ಸತ್ಯ.   ವೈದ್ಯರು ತಮ್ಮ ವೃತ್ತಿಯನ್ನು ಕೇವಲ ಸಂಪಾದನೆಗಾಗಿ ಮಾಡುತ್ತಿಲ್ಲ. ಅವರಲ್ಲಿ ಸದಾ ನಿಸ್ವಾರ್ಥವಾದ ಸೇವಾ ಮನೋಭಾವ ಮನೆ ಮಾಡಿರುತ್ತದೆ. ಮಾನವೀಯತೆ ಸದಾ ತುಡಿಯುತ್ತಿರುತ್ತದೆ. ತನ್ನ ಒತ್ತಡಗಳನ್ನು ಮಾನಸಿಕ ತುಮಲಗಳನ್ನು ರೋಗಿಗಳ ಮುಂದೆ ಪ್ರದರ್ಶಿಸದೆ ಸದಾ ಜಾಗೃತನಾಗಿರುವ ವೈದ್ಯರ ಉಪಕಾರವನ್ನು ಸ್ಮರಣೆ ಮಾಡುವ ಈ ಸುದಿನವನ್ನು ಆಚರಿಸಬೇಕಾದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯ.

ತನ್ನ ಖಾಸಗಿ ಬದುಕನ್ನು ಗೌಣ ಮಾಡಿ ಮತ್ತೊಬ್ಬರ ಬದುಕನ್ನು ಹಸನು ಮಾಡುವ ವೃತ್ತಿಯನ್ನೇ ಕಾಯಕವನ್ನಾಗಿಸಿಕೊಂಡಿರುವ ವೈದ್ಯರು ಪ್ರತೀ ಕ್ಷಣವನ್ನು ರೋಗಿಗಳ ಸೇವೆಗೆಂದೇ ಮುಡಿಪಾಗಿಟ್ಟಿರುತ್ತಾರೆ. ಸಂಪಾದನೆಯೂ ಜೀವನದ ಒಂದು ಅಂಗವಾದರೂ ಅದನ್ನೇ ಪ್ರಧಾನವಾಗಿರಿಸಿಕೊಳ್ಳದೆ ಸೇವಾಧರ್ಮವನ್ನು ಸದಾ ಗಮನದಲ್ಲಿಟ್ಟುಕೊಳ್ಳುವ ಉದಾರ ಗುಣವನ್ನು ಮೈಗೂಡಿಸಿಕೊಂಡಿರುವವರೇ ವೈದ್ಯರು. ವೈದ್ಯರ ದಿನಾಚರಣೆಯನ್ನು ನಾವು ಆಚರಿಸಿದರೆ ಸಾಲದು. ವೈದ್ಯರೂ ಸಹ ಇದರ ಮಹತ್ವವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ವೈದ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಂದು ಮಾಡಿದ ಪ್ರತಿಜ್ಞೆಯನ್ನು ಸದಾ ಸ್ಮೃತಿಪಟಲದಲ್ಲಿ ಅಚ್ಚೊತ್ತಿಸಿಕೊಂಡಿರಬೇಕು. ಯಾರೋ ಒಬ್ಬ ವೈದ್ಯ ಮಾಡಿದ ತಪ್ಪಿಗೆ ಇಡೀ ವೈದ್ಯ ವರ್ಗವೇ ಒಮ್ಮೊಮ್ಮೆ ತಲೆ ತಗ್ಗಿಸಬೇಕಾದ ಅನಿವಾರ್ಯ ಪ್ರಸಂಗಗಳೂ ಉಂಟು ತಮ್ಮ ವೃತ್ತಿಧರ್ಮಕ್ಕೆ ವಿರುದ್ಧವಾಗಿ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗದೆ ಒಮ್ಮೆ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡದೆ ಸದಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ.

ವೈದ್ಯರ ದಿನಾಚರಣೆಯೆಂದ ಮಾತ್ರಕ್ಕೆ ಅದನ್ನು ರೋಗಿಗಳಷ್ಟೇ ಮುಖ್ಯವಾಗಿ ವೈದ್ಯರೂ ಮಹತ್ವ ನೀಡಬೇಕಾಗಿದೆ. ಸಮಾಜದಲ್ಲಿ ತಮ್ಮ ಸ್ಥಾನಮಾನವನ್ನು ಅರಿತು ಅದಕ್ಕೆ ತಕ್ಕಂತೆ ತಮ್ಮ ಜೀವನವನ್ನು ರೂಪುಗೊಳಿಸಬೇಕಾಗಿದೆ. ಸೇವೆಯನ್ನೇ ಉಸಿರಾಗಿಸಿಕೊಳ್ಳುವ ಪ್ರತಿಜ್ಞೆಯನ್ನು ಸ್ವೀಕರಿಸಿರುವುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ರೋಗಿಯ ಮುಂದೆ ನಿಂತಾಗ ತನ್ನ ಸುತ್ತಲಿನ ಆಗುಹೋಗುಗಳೆಲ್ಲಾ ಗೌಣವಾಗಿ ಕೇವಲ ವೃತ್ತಿ ಧರ್ಮವೊಂದೇ ಪ್ರಧಾನವಾಗಬೇಕಾಗುತ್ತದೆ. ಆದರೆ ಕೆಲವು ವೈದ್ಯರು ಸಮಾಜಬಾಹಿರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವುದು ಅಲ್ಲಲ್ಲಿ ಕಂಡು ಬರುತ್ತದೆ. ಆದರೆ ಈ ದಿನದಿಂದಲಾದರೂ ತಮ್ಮ ನಿಜವಾದ ಸೇವಾ ಮನೋಭಾವವನ್ನು ಅರಿತು ಅದಕ್ಕೆ ತಕ್ಕಂತೆ ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಇದು ಸಕಾಲ. ಸೇವೆಯನ್ನೇ ತಮ್ಮ ಜೀವನದ ಮುಖ್ಯ ಧ್ಯೇಯವನ್ನಾಗಿಸುವತ್ತ ದಾಪುಗಾಲು ಹಾಕಬೇಕಾಗಿದೆ.

ವೈದ್ಯರೆಂದರೆ ಅವರನ್ನು ದೇವರೆಂದೇ ಪರಿಗಣಿಸುವ ಕಾಲವೊಂದಿತ್ತು. ಆದರೆ ಈಗ ಹಾಗಿಲ್ಲ. ಅದೂ ಒಂದು ಉದ್ಯಮವಾಗಿ ಬೆಳೆದು ನಿಂತಿದೆ. ಇದರಿಂದಾಗಿ ಮೊದಲೆಲ್ಲಾ ವೈದ್ಯ ಹಾಗೂ ರೋಗಿಯ ಮಧ್ಯೆ ಇದ್ದ ಸುಮಧುರ ಭಾವನೆ ಮಾಯವಾಗಿದೆ. ಎಲ್ಲವೂ ಹಣಮಯವಾಗಿದೆ. ನಂಬಿಕೆ, ವಿಶ್ವಾಸಗಳು ಒಂದು ರೀತಿ ವ್ಯಾಪಾರೀಕರಣವಾಗಿದೆ. ಮಾರಾಟಗಾರ ಹಾಗೂ ಗ್ರಾಹಕರ ನಡುವಿನ ಬಾಂಧವ್ಯ ಮಾತ್ರ ಇಂದು ಗಟ್ಟಿಯಾಗ ತೊಡಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ನಾಯಿಕೊಡೆಗಳಂತೆ ಚಿಕ್ಕ ಚಿಕ್ಕ ಪ್ರಮಾಣದಲ್ಲಿ ಕ್ಲಿನಿಕ್‌ ಗಳು ತಲೆ ಎತ್ತುತ್ತಿವೆ. ಅದರೊಟ್ಟಿಗೆ ಕೆಲವು ಪ್ರಯೋಗಾಲಯಗಳೂ ಎಲ್ಲೆಂದರಲ್ಲಿ ಕಾಣಿಸತೊಡಗಿವೆ. ವೈದ್ಯಕೀಯ ಶಿಕ್ಷಣವೂ ಇಂದು ಉಳ್ಳವರ ಪಾಲಿನ ವಿದ್ಯೆಯಾಗಿರುವುದೂ ಸಹ ವೈದ್ಯರ ಪಾಲಿಗೆ ಮುಳ್ಳಾಗಿದೆ. ಒಳ್ಳೆಯ ಸೇವಾ ಮನೋಭಾವನೆ ಇರಿಸಿಕೊಂಡಿದ್ದರೂ ಸಹ ಪದವಿಗಾಗಿ ತಾವು ಲಕ್ಷಾಂತರ ಹಣ ನೀಡಿ ಪಡೆದ ದೃಶ್ಯ ಕಣ್ಣು ಮುಂದೆ ಧುತ್ತೆಂದು ಕಂಡಾಗ ಸೇವೆಗಿಂತ ಹಣವೇ ಪ್ರಧಾನವಾಗುತ್ತದೆ. ಹೀಗಿರುವಾಗ ಹಣದಿಂದಲೇ ವೈದ್ಯರಾದ ಇವರು ಜನಸಾಮಾನ್ಯರಿಗೆ ದಕ್ಕುವಂತಹ ವೆಚ್ಚದಲ್ಲಿ ಚಿಕಿತ್ಸೆಯನ್ನು ನೀಡಲು ಸಾಧ್ಯವೇ…?

ಇದನ್ನೂ ಓದಿ: ಹಾಲುಣಿಸಿದರೆ ತಾಯಿಯ ಸೌಂದರ್ಯಕ್ಕೆ ಧಕ್ಕೆ ಬರುತ್ತಾ? ಈ ತಪ್ಪು ಕಲ್ಪನೆ ಬಂದಿದ್ದೇಕೆ? ವೈದ್ಯರು ಹೇಳುವುದೇನು?

ಅದು ಏನೇ ಇರಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುವ ಎಲ್ಲಾ ವೈದ್ಯರನ್ನು ಸ್ಮರಿಸುವ ದಿನ ನಿಜಕ್ಕೂ ಅತ್ಯಮೂಲ್ಯವಾದದ್ದು. ವೈದ್ಯರು ಎಷ್ಟೇ ವೈಯಕ್ತಿಕ ಒತ್ತಡದಲ್ಲಿದ್ದರೂ ಅದನ್ನು ರೋಗಿಗಳ ಮುಂದೆ ಪ್ರದರ್ಶಿಸುವಂತಿಲ್ಲ. ರೋಗಿಗೆ ಅಗತ್ಯವಾದ ಚಿಕಿತ್ಸೆಯನ್ನು ಸರಿಯಾಗಿಯೇ ನೀಡಬೇಕಾಗುತ್ತದೆ. ರೋಗಿಯ ನೋವಿಗೆ ಸ್ಪಂದಿಸಬೇಕಾಗುತದೆ. ತನ್ನ ಖಾಸಗಿ ಬದುಕನ್ನು ವೃತ್ತಿ ಬದುಕಿನಲ್ಲಿ ವಿಲೀನಗೊಳಿಸಲಾಗದು. ಅಂದರೆ ತಮ್ಮ ಬದುಕನ್ನು ಕಟ್ಟಿಕೊಳ್ಳುವ ತವಕಕ್ಕಿಂತ ಬೇರೆಯವರ ಬದುಕಿನೊಡನೆ ಸರಸವಾಡದೆ ಎಲ್ಲವನ್ನೂ ಅತ್ಯಂತ ನಿಸ್ಪೃಹವಾಗಿ ನಿಭಾಯಿಸುವ ಸೇವಾ ಮನೋಭಾವಕ್ಕೆ ಮತ್ತೊಂದು ಹೆಸರೇ ವೈದ್ಯರು ಎಂಬುದು ಇನ್ನೂ ನಮ್ಮ ಸಮಾಜದಲ್ಲಿ ಇರುವುದರಿಂದಲೇ ಅವರನ್ನು ವೈದ್ಯೋ ನಾರಾಯಣೋ ಹರಿಃ ಎಂದು ಸದಾ ಸ್ಮರಿಸುವುದು.

admin
the authoradmin

Leave a Reply