CinemaLatest

ಆಗಿನ ಕಾಲದಲ್ಲೆ ಬಾಲಿವುಡ್ ನಲ್ಲಿ ಕನ್ನಡಬಾವುಟ ಹಾರಿಸಿದ್ದ ಆರ್.ನಾಗೇಂದ್ರರಾವ್… ಇಲ್ಲಿದೆ ಅವರ ಸಿನಿಮಾಕಥೆ!

ಕನ್ನಡ ಸಿನಿಮಾರಂಗದ ಕುರಿತಂತೆ ತಿಳಿಯುತ್ತಾ ಹೋದಂತೆ ಹತ್ತು ಹಲವು ವಿಚಾರಗಳು ಹೊರ ಬರುತ್ತಲೇ ಹೋಗುತ್ತದೆ. ಕನ್ನಡ ಸಿನಿಮಾರಂಗಕ್ಕೆ ಹಲವರು ಹಲವು ರೀತಿಯಲ್ಲಿ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಆ ಸಿನಿಮಾಗಳು ಇಂದಿಗೂ ಕನ್ನಡ ಚಿತ್ರರಂಗದ ಮೈಲುಗಲ್ಲಾಗಿ ಉಳಿದಿವೆ. ಅವತ್ತಿನ ಸಿನಿಮಾರಂಗದಲ್ಲಿ ಮಿನುಗಿದ ದಿಗ್ಗಜರಲ್ಲಿ ಆರ್.ನಾಗೇಂದ್ರರಾವ್ ಒಬ್ಬರಾಗಿದ್ದಾರೆ.

ಉತ್ತರ ಭಾರತದ ಪೃಥ್ವಿರಾಜ್‌ ಕಪೂರ್‌ ರ ಮಕ್ಕಳು ರಾಜ್‌ಕಪೂರ್, ಶಮ್ಮಿಕಪೂರ್ ಶಶಿಕಪೂರ್ ಬಾಲಿವುಡ್ ನಲ್ಲಿರುವಂತೇ ದಕ್ಷಿಣಭಾರತದಲ್ಲಿ ಆರ್.ನಾಗೇಂದ್ರರಾವ್ ರವರ ಮಕ್ಕಳಾದ ಆರ್.ಎನ್.ಜಯಗೋಪಾಲ್, ಆರ್.ಎನ್.ಕೆ. ಪ್ರಸಾದ್, ಆರ್.ಎನ್.ಸುದರ್ಶನ್, ಸ್ಯಾಂಡಲ್‌ ವುಡ್ ನಲ್ಲಿದ್ದಾರೆ! ಕನ್ನಡದ ಪೃಥ್ವಿರಾಜ್‌ ಕಪೂರ್ ಎಂದೇ ಕರೆಯಲ್ಪಡುವ ಚಂದನವನ ಚಿತ್ರರಂಗದ ಭೀಷ್ಮಾಚಾರ್ಯ ನಾಗೇಂದ್ರರಾವ್ ಆಗಿದ್ದಾರೆ.

ಇವರು ಬಾಲ್ಯದಲ್ಲೇ ನಾಟಕದ ಗೀಳು ಹಚ್ಚಿಕೊಂಡಿದ್ದರು. ತಮ್ಮ 8ನೇ ವಯಸ್ಸಲ್ಲೆ ರಂಗಪ್ರವೇಶ ಮಾಡಿದ ಆರ್.ನಾಗೇಂದ್ರರಾವ್ ಅವರು ಟೈಗರ್ ವರದಾಚಾರ್ಯರ ರತ್ನಾವಳಿ ನಾಟಕ ಕಂಪನಿ ಮತ್ತು ಶ್ರೀಚಾಮುಂಡೇಶ್ವರಿ ನಾಟಕ ಕಂಪನಿಗಳಲ್ಲಿ ಮಹಿಳೆಯರೂ ನಾಚುವಂತೆ ಸ್ತ್ರೀಪಾತ್ರ ಮಾಡುತ್ತಿದ್ದರು. ಕೆಲವು ಶ್ರೀಮಂತ(ರಸಿಕ)ರ ಆಸೆಕಣ್ಣಿಗೆ ಬಿದ್ದು ಅವರೆಲ್ಲರೂ ಈ ಚೆಲು(ವನನ್ನ)ವೆಯನ್ನ ಮೋಹಿಸುವಂಥ ಫಜೀತಿ ತಂದೊಡ್ಡಿದ್ದರು!

ಇದನ್ನೂ ಓದಿ: ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಗುಬ್ಬಿವೀರಣ್ಣ

1931-1938ವರೆಗೆ 50ಕ್ಕೂ ಹೆಚ್ಚು ಹಿಂದಿ- ಮರಾಠಿ ಸಿನಿಮಾ-ನಾಟಕಗಳಲ್ಲಿ ಅಭಿನಯಿಸಿ ಆಗಿನ ಕಾಲದಲ್ಲೆ ಬಾಲಿವುಡ್ ನಲ್ಲಿ ಕನ್ನಡಬಾವುಟ ಹಾರಿಸಿದ್ದರು. ಪಾರಿಜಾತಪುಷ್ಪಹರಣಂ, ಅನ್ಬೇದೈವಂ, ಕೋವಲನ್ ಜಾತಕಂ ನಾಗದೇವತೈ ಮುಂತಾದ ತಮಿಳ್ ಚಿತ್ರಗಳಲ್ಲೂ, ರಾಮದಾಸು ಭೂಕೈಲಾಸ ಶ್ರೀಕೃಷ್ಣಲೀಲ ಮುಂತಾದ ತೆಲುಗು ಚಿತ್ರಗಳಲ್ಲೂ, ಮಾಲೈಪೊಳುತ್ತಿನ್ ಮಯಕ್ಕತಿಲೆ ಮಲಯಾಳಂ ಚಿತ್ರಗಳಲ್ಲೂ, ನಟಿಸಿ ಕನ್ನಡದಕೀರ್ತಿ ಹರಡಿದ್ದರು!

1934ರಲ್ಲಿ ತೆರೆಕಂಡ ಸತೀಸುಲೋಚನ ಚಿತ್ರದಲ್ಲಿ ಚಂದನವನದ ಪ್ರಪ್ರಥಮ ಹೀರೋ ಆಗಬೇಕಾಗಿದ್ದ ಸುವರ್ಣಾವಕಾಶ ವಂಚಿತ ನತದೃಷ್ಟನಟ ತಮಗೆ ಸಿಗಬೇಕಾದುದು ಕೈತಪ್ಪಿದಮೇಲೆ ನಿರಾಶೆಯಿಂದ ಬೆಂಗಳೂರಿಗೆ ಹಿಂದಿರುಗಿದರು. 1935ರಲ್ಲಿ  ಶ್ರೀಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿ ಸ್ಥಾಪಿಸಿ ನೂರಾರು ಪೌರಾಣಿಕ ಐತಿಹಾಸಿಕ ಹಾಗೂ ಸಾಮಾಜಿಕ ನಾಟಕಗಳ ಅಮೋಘ ಪ್ರದರ್ಶನ ನೀಡಿದರು. ಬ್ರಿಟಿಷ್ ಅಧಿಕಾರಿ, ಮೈಸೂರು ಮಹಾರಾಜರು ಸೇರಿದಂತೆ ಎಲ್ಲರಿಂದ ಸೈ-ಎನಿಸಿಕೊಂಡರು.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಚೊಚ್ಚಲ ಹೀರೊ ಎಂ.ವಿ.ಸುಬ್ಬಯ್ಯನಾಯ್ಡು

ನೂರಾರು ಪ್ರದರ್ಶನಕಂಡ ಭೂಕೈಲಾಸ ನಾಟಕವನ್ನು ಸಿನಿಮಾವನ್ನಾಗಿಸಿ ಕನ್ನಡ ತಮಿಳು ತೆಲುಗು 3ಭಾಷೆಗಳಲ್ಲಿ 1938,1940,1958ರಲ್ಲಿ 3ಬಾರಿ ನಿರ್ಮಿಸಿ ಅಖಿಲಭಾರತ ದಾಖಲೆ ಸೃಷ್ಟಿಸಿದರು. 1951ರಲ್ಲಿ ಪ್ರದರ್ಶನಗೊಂಡ ಈ ನಾಟಕದಲ್ಲಿ ಮುತ್ತುರಾಜು (ಡಾ.ರಾಜ್) ನಾರದನಾಗಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಆಶ್ಚರ್ಯದ ಇತಿಹಾಸ.

ಆರ್.ಎನ್.ಆರ್. ಪಿಕ್ಚರ್ಸ್ ಮೂಲಕ 1951-70ವರೆಗೆ 22 ಚಿತ್ರಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದರು. ಪ್ರೇಮದಪುತ್ರಿ, ನಗುವಹೂವು, ಮುಂತಾದ ಫಿಲಂಸ್ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಗಳಿಸಿದವು. ಇವರು ನಟಿಸಿದ ಕಟ್ಟಕಡೆಯ ಫಿಲಂ ಪ್ರೇಮಪಾಶ. 70 ವರ್ಷಕಾಲ 8 ಭಾಷೆಯ ಸಿನಿಮಗಳಲ್ಲಿ  ಅಭಿನಯಿಸಿ ಫಿಲಂ ಇಂಡಸ್ಟ್ರೀ ದಿಗ್ಗಜರಾದರು. ಚಂದನವನಕ್ಕೆ ಹೊಸತನದ ಮುನ್ನುಡಿ ಬರೆದು ಸಿನಿಮಾ ಮತ್ತು ನಾಟಕ ಕ್ಷೇತ್ರಗಳಲ್ಲಿ ನಟಸಾಮ್ರಾಟನಾಗಿ ಮೆರೆದರು. ರತ್ನಾಬಾಯಿ-ಕಮಲಾಬಾಯಿ (ದ್ವಿ)ಪತ್ನಿಯರಿದ್ದು ಮಕ್ಕಳು ಮೊಮ್ಮಕ್ಕಳ ಬಳಗವನ್ನೇ ಹೊಂದಿದ್ದರು. ಪ್ರತಿಯೊಬ್ಬರನ್ನು ವಿಶ್ವಾಸಗೌರವದಿಂದ ಕಾಣುತ್ತಿದ್ದ ಸರಳಸಜ್ಜನಿಕೆಯ ಅಪ್ರತಿಮ ಕಲಾವಿದ.

ಇದನ್ನೂ ಓದಿ: ನಟನೆಯಿಂದ ನಿಬ್ಬೆರಗಾಗಿಸಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ..

ಆರ್.ನಾಗೇಂದ್ರರಾವ್ ರವರ ಸತಿಸುಲೋಚನ(1934), ವಸಂತಸೇನ, ಸತ್ಯ ಹರಿಶ್ಚಂದ್ರ, ಮಹಾತ್ಮಕಬೀರ್, ಜಾತಕಫಲ, ಆದರ್ಶಸತಿ, ಭಕ್ತಮಾರ್ಕಂಡೇಯ, ಬೆಟ್ಟದಕಳ್ಳ, ರೇಣುಕಾಮಹಾತ್ಮೆ, ಮಹಿರಾವಣ, ಭೂಕೈಲಾಸ, ರಾಯರಸೊಸೆ,ಪ್ರೇಮದಪುತ್ರಿ, ಆಶಾಸುಂದರಿ, ರಣಧೀರಕಂಠೀರವ, ಗಾಳಿಗೋಪುರ, ಚಂದ್ರಹಾಸ, ಬಾಲರಾಜನಕಥೆ, ಮಧುಮಾಲತಿ, ಹಣ್ಣೆಲೆಚಿಗುರಿದಾಗ, ಕರುಳಿನಕರೆ, ನಾಡಿನಭಾಗ್ಯ, ಮುಂತಾದ ನೂರಾರು ಚಿತ್ರಗಳು ಚಿರಸ್ಮರಣೀಯ.

ದೇವರನ್ನೂ ಪ್ರೇಕ್ಷಕರನ್ನೂ ಹೆಚ್ಚು ನಂಬುತ್ತಿದ್ದ ಅಪರೂಪದ ಕಲಾವಿದ. ಇವರ ಸಿನಿಮಾಗಳಿಗೆ ಇವರದ್ದೇ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡು ಇರುತ್ತಿದ್ದವು. ಜತೆಗೇ ಸ್ವಯಂ ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ, ಹಿನ್ನೆಲೆ ಗಾಯಕ, ಖಳನಟ, ಹಾಸ್ಯನಟ, ನಾಯಕನಟ, ಪೋಷಕನಟ, ಆಲ್ ಇನ್ ಆಲ್ ಮಾತ್ರವಲ್ಲದೆ ಹಿರಿಯ ಚಿತ್ರೋದ್ಯಮಿಯೂ ಹೌದು. ರಟ್ಟೀಹಳ್ಳಿ ನಾಗೇಂದ್ರ ರಾವ್ ಅವರು 23 ಜೂನ್ 1896ರಲ್ಲಿ ಜನಿಸಿ  9 ಫೆಬ್ರವರಿ 1977 ರಂದು ಬೆಂಗಳೂರಲ್ಲಿ ದೈವಾಧೀನರಾದರೂ ಅಜರಾಮರ.

admin
the authoradmin

Leave a Reply