ದೇಶದಲ್ಲಿ ಆತಂಕ ಸೃಷ್ಟಿಸುತ್ತಿರುವ ಮಕ್ಕಳ ಕಳ್ಳಸಾಗಾಣಿಕೆ ಮಾಫಿಯಾ… ಇವರಿಗೆ ಅಪ್ರಾಪ್ತ ಹೆಣ್ಣು ಮಕ್ಕಳೇ ಟಾರ್ಗೆಟ್..!

ಮಕ್ಕಳ ಮತ್ತು ಮಹಿಳೆಯ ನಾಪತ್ತೆ ಪ್ರಕರಣಗಳು ಹಿಂದಿನಿಂದಲೂ ಕೇಳಿ ಬರುತ್ತಿವೆ. ಇದನ್ನು ತಡೆಗಟ್ಟುವುದು ಸಾಧ್ಯವಾಗದ ಮಾತಾಗಿದೆ. ಆದರೆ ನಾಪತ್ತೆ ಪ್ರಕರಣದ ಹಿಂದೆ ಬಿದ್ದು ಅದನ್ನು ಬೇಧಿಸಿ ಅದರ ಹಿಂದಿನ ಜಾಲಗಳನ್ನು ಹುಡುಕುವುದು ಕಷ್ಟವಾಗುತ್ತಿದೆ. ಹೀಗಾಗಿ ಹೆತ್ತವರು ಮನೆಯಿಂದ ಹೊರಗೆ ಹೋದ ಮಕ್ಕಳು ಮರಳಿ ಸುರಕ್ಷಿತವಾಗಿ ಬಂದರೆ ಸಾಕೆಂದು ಪ್ರಾರ್ಥಿಸುವಂತಾಗಿದೆ.
ಮಕ್ಕಳ ನಾಪತ್ತೆ ಪ್ರಕರಣಗಳು ರಾಜ್ಯ ಮಾತ್ರವಲ್ಲ ದೇಶದಾದ್ಯಂತ ನಡೆಯುತ್ತಿದ್ದು, ಅದರಲ್ಲೂ ಅಪ್ರಾಪ್ತ ಹೆಣ್ಣು ಮಕ್ಕಳ ಕಳ್ಳ ಸಾಗಾಣಿಕೆ ಹೆಚ್ಚು ಸುದ್ದಿ ಮಾಡುತ್ತಿದೆ. ಸೋಷಿಯಲ್ ಮೀಡಿಯಾ ಜಮಾನದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ತಲೆಕೆಡಿಸಿ ಅವರನ್ನು ಮನೆ ಬಿಟ್ಟು ಬರುವಂತೆ ಮಾಡುವುದು ಕಳ್ಳ ಸಾಗಾಣಿಕೆದಾರರಿಗೆ ಕಷ್ಟವಾಗುತ್ತಿಲ್ಲ. ಹೀಗಾಗಿ ಬಹುಸುಲಭವಾಗಿಯೇ ಮನೆ ಹೊಸ್ತಿಲು ದಾಟಿಸುವಂತೆ ಮಾಡುತ್ತಿದ್ದಾರೆ.
ಮಕ್ಕಳ ಕಳ್ಳತನ ಹಾಗೂ ಮಕ್ಕಳ ಸಾಗಾಣಿಕೆ ಪ್ರಕರಣಗಳು ಇವತ್ತು ಪ್ರಜ್ಞಾವಂತ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಇದೊಂದು ಮಾಫಿಯಾವಾಗಿ ನಮ್ಮ ನಿಮ್ಮೆಲ್ಲರನ್ನು ಚುಚ್ಚುತ್ತಿದೆ. ಅಷ್ಟೇ ಅಲ್ಲ ಮಕ್ಕಳ ಬಗೆಗಿನ ಜವಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ. ಸಾಮಾನ್ಯವಾಗಿ ನಾವೆಲ್ಲರೂ ಮಕ್ಕಳ ನಾಪತ್ತೆ ಪ್ರಕರಣದ ಬಗ್ಗೆ ಕೇಳುತ್ತಿರುತ್ತೇವೆ ಆದರೆ ಅದನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಅದರಲ್ಲೂ ಅಪ್ರಾಪ್ತ ಹೆಣ್ಣು ಮಕ್ಕಳು ನಾಪತ್ತೆಯಾದರೆ ಅದರ ಬಗ್ಗೆ ಬೇರೆಯದ್ದೇ ಆದ ರೀತಿಯಲ್ಲಿ ಮಾತನಾಡುತ್ತೇವೆ ಹೊರತಾಗಿ ಅದರ ಹಿಂದೆ ಏನಿರಬಹುದು ಎಂದು ಯೋಚಿಸುವುದೇ ಇಲ್ಲ. ಆದರೆ ಆಗಾಗ್ಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡುವ ವರದಿಗಳು ನಾಪತ್ತೆ ಪ್ರಕರಣದ ಹಿಂದಿನ ಅಸಲಿಯತ್ತನ್ನು ಹೊರಹಾಕುತ್ತವೆ. ಈ ಹಿಂದೆ ದೇಶದಲ್ಲಿ ಮಕ್ಕಳ ನಾಪತ್ತೆ ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕರ್ನಾಟಕದ ಅದರಲ್ಲಿ ಮೂರನೇ ಸ್ಥಾನ ಪಡೆದಿತ್ತು. ಇದು ನಾವೆಲ್ಲರೂ ಗಂಭೀರವಾಗಿ ಯೋಚನೆ ಮಾಡುವ ವಿಷಯವಾಗಿದೆ. ದೇಶದಲ್ಲಿ ನಾಪತ್ತೆಯಾಗುವ ಮಕ್ಕಳ ಸಂಖ್ಯೆ ಲಕ್ಷ ದಾಟುತ್ತಿದ್ದು ಅದರಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಜಾಸ್ತಿ ಇರುವುದು ನಿಜಕ್ಕೂ ಆಘಾತಕಾರಿಯಾಗಿದೆ.
ಇದನ್ನೂ ಓದಿ: ಹೆಣ್ಣು ಮಕ್ಕಳೇ ಹುಷಾರ್… ಆಮಿಷಕ್ಕೆ ಬಲಿಯಾದರೆ ಸಂಕಷ್ಟ ತಪ್ಪಿದಲ್ಲ…
ಮಕ್ಕಳ ನಾಪತ್ತೆ ಪ್ರಕರಣದಲ್ಲಿ ಕೆಲವು ಮಕ್ಕಳು ಹಲವು ಕಾರಣಗಳಿಂದ ಮನೆ ಬಿಟ್ಟು ಹೋಗಿರುತ್ತಾರೆ. ಅಂತಹ ಮಕ್ಕಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟವಾಗುವುದಿಲ್ಲ. ಆದರೆ ಮಕ್ಕಳ ಕಳ್ಳತನ ಮತ್ತು ಕಳ್ಳಸಾಗಾಣಿಕೆ ಆಗಿದ್ದರೆ ಅಂಥ ಮಕ್ಕಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲ್ ಆಗಿದೆ. ರಾಜ್ಯದಲ್ಲಿ ಪ್ರತಿದಿನ ಐದು ಮಕ್ಕಳು ನಾಪತ್ತೆಯಾಗುತ್ತಿದ್ದಾರೆ. ಇದರ ಹಿಂದೆ ಮಾನವ ಕಳ್ಳಸಾಗಾಣಿಕೆ ತಂಡ ನಿರಂತರವಾಗಿ ಕೆಲಸ ಮಾಡುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ತಂಡಕ್ಕೆ ಅಪ್ರಾಪ್ತ ಹೆಣ್ಣು ಮಕ್ಕಳೇ ಟಾರ್ಗೆಟ್ ಎನ್ನುವುದು ಕೂಡ ಅಷ್ಟೇ ಸತ್ಯ. ರಾಜ್ಯದಲ್ಲಿ 35 ಮಾನವ ಕಳ್ಳಸಾಗಣೆ ತಡೆ ಘಟಕಗಳಿದ್ದು ಅವು ಕಾರ್ಯೋನ್ಮುಖವಾಗಿದ್ದರೂ ಪ್ರಕರಣಗಳು ನಡೆಯುತ್ತಿವೆ.
ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೀಟ್ ಸಿಬ್ಬಂದಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಾನವ ಕಳ್ಳಸಾಗಣೆ ಪ್ರಕರಣಗಳ ಕುರಿತು ಮಾಹಿತಿ ಸಂಗ್ರಹಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಆದರೆ ಇಲ್ಲಿ ಇನ್ನೊಂದು ಬೆಚ್ಚಿ ಬೀಳಿಸುವ ಸಂಗತಿ ಏನೆಂದರೆ ಮಕ್ಕಳ ನಾಪತ್ತೆ ಪ್ರಕರಣ ಅತಿ ಹೆಚ್ಚು ನಡೆಯುತ್ತಿರುವುದು ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಾಗಿದೆ. ನಾಪತ್ತೆ ಪ್ರಕರಣದ ಪ್ರತಿ 10 ಪ್ರಕರಣಗಳಲ್ಲಿ 4 ಬೆಂಗಳೂರಿನಲ್ಲಿ ನಡೆಯುತ್ತಿದೆ. ಹಾಗಾದರೆ ಬೆಂಗಳೂರು ಮಕ್ಕಳಿಗೆಷ್ಟು ಸೇಪ್ ಎಂಬ ಪ್ರಶ್ನೆ ಎಲ್ಲರನ್ನು ಕಾಡದಿರದು.
ಇದೆಲ್ಲದರ ನಡುವೆ ಮಕ್ಕಳ ನಾಪತ್ತೆ ಪ್ರಕರಣ ಕುರಿತಂತೆ ಚೈಲ್ಡ್ ರೈಟ್ಸ್ ಟ್ರಸ್ಟ್ ಒಂದಷ್ಟು ಅಭಿಪ್ರಾಯಗಳನ್ನು ತಿಳಿಸಿದ್ದು, ಆ ಪ್ರಕಾರ ಕೊರೋನಾ ವೈರಸ್ ನಂತರದ ವಲಸೆಯಿಂದ ನಾಪತ್ತೆ ಪ್ರಕರಣಗಳು ಹೆಚ್ಚಾಗಿದೆ. ಜತೆಗೆ ಕೊರೋನಾ ಸಮಯದಲ್ಲಿ ಮಕ್ಕಳನ್ನು ಮನೆಯಲ್ಲಿಯೇ ಸೀಮಿತಗೊಳಿಸಿದ್ದರಿಂದ ಕೆಲವು ಮಕ್ಕಳು ತಮ್ಮದೇ ನಿರ್ಧಾರದ ಮೇಲೆ ಹೊರಡುವಷ್ಟು ನಿರಾಸರಾಗಿದ್ದಾರೆ. ಇದನ್ನು ತಡೆಯಬೇಕಾದರೆ ಮಕ್ಕಳನ್ನು ಪ್ರೀತಿಸಬೇಕು. ಅವರ ಮೇಲೆ ಬರೀ ಒತ್ತಡಗಳನ್ನು ಹಾಕಿ ತಾವು ಹೇಳಿದಂತೆ ಇರಬೇಕು ಎಂಬ ಪೊರೆಯನ್ನು ಪೋಷಕರು ಕಳಚಬೇಕಿದೆ.
ಹಿಂದೆ ಮಕ್ಕಳ ನಾಪತ್ತೆ ಪ್ರಕರಣ ಹೆಚ್ಚು ಬೆಳಕಿಗೆ ಬರುತ್ತಿರಲಿಲ್ಲ. ಕೆಲವು ಪೋಷಕರು ಪೊಲೀಸ್ ಠಾಣೆಗೆ ದೂರು ನೀಡುತ್ತಿರಲಿಲ್ಲ. ಈಗ ಬದಲಾಗಿದೆ ನಾಪತ್ತೆ ಪ್ರಕರಣಗಳು ದಾಖಲಾಗುತ್ತಿವೆ. ಜತೆಗೆ ಮಕ್ಕಳ ಬಗ್ಗೆ ಕಾಳಜಿ ವಹಿಸುವ ಹಲವು ಸಂಸ್ಥೆಗಳು ಕೆಲಸ ಮಾಡುತ್ತಿವೆ. ಆದರೂ ಮಕ್ಕಳು ನಾಪತ್ತೆಯಾಗುತ್ತಿವೆ. ಅದರಲ್ಲೂ ಅಪ್ರಾಪ್ತ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದೆ. ಇದೀಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಟ್ರ್ಯಾಕ್ ಚೈಲ್ಡ್ ಪೋರ್ಟಲ್ ನ್ನು ಅಭಿವೃದ್ಧಿಪಡಿಸಿದೆ. ಇದು ಕಾಣೆಯಾದ ಮಕ್ಕಳನ್ನು ಪತ್ತೆಹಚ್ಚಲು ನೆರವಾಗುತ್ತಿದೆ.
ಸರ್ಕಾರ ಮಕ್ಕಳ ಕಳ್ಳತನ ಸೇರಿದಂತೆ ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ನಿರ್ಭಯ ನಿಧಿ ಅಡಿಯಲ್ಲಿ 35 ಮಾನವ ಕಳ್ಳ ಸಾಗಾಣಿಕೆ ನಿಷೇಧ ಘಟಕಗಳನ್ನು ಸ್ಥಾಪಿಸಿದೆ. ಜೊತೆಗೆ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಶಾಲಾ ಕಾಲೇಜು, ಬಸ್ ನಿಲ್ದಾಣಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಓಡಾಡುವ ಸ್ಥಳಗಳಲ್ಲಿ ಹೆಚ್ಚಿನ ಗಸ್ತು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅದು ಏನೇ ಇರಲಿ ಮಕ್ಕಳ ಬಗ್ಗೆ ನಿಗಾವಹಿಸುವುದು ಪೋಷಕರ ಜವಬ್ದಾರಿಯಾಗಿದೆ. ಅಷ್ಟೇ ಅಲ್ಲದೆ ಅಪರಿಚಿತರೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಸ್ನೇಹ ಬೆಳೆಸುವುದು, ಚಾಟ್ ಮಾಡುವುದು ಇಂತಹ ವಿಚಾರದಲ್ಲಿ ಮಕ್ಕಳು ಎಚ್ಚರವಿರಬೇಕಾಗುತ್ತದೆ. ಈ ಬಗ್ಗೆ ತಿಳಿ ಹೇಳುವುದು ಅಷ್ಟೇ ಮುಖ್ಯವಾಗಿದೆ.
B M Lavakumar