ArticlesLatest

ಮಡಿಕೇರಿ- ಮಂಗಳೂರು ಹೆದ್ದಾರಿಯ ಬೆಳ್ಮಿಂಚು ಅಬ್ಬಿಕೊಲ್ಲಿ ಫಾಲ್ಸ್…. ರಸ್ತೆ ಬದಿಯಲ್ಲಿಯೇ ಇದರ ಜಲನರ್ತನ!

ಈಗ ಕೊಡಗಿನಲ್ಲಿ ಮನಸ್ಸೋ ಇಚ್ಛೆ ಮಳೆ ಸುರಿಯುತ್ತಿದೆ. ಹೀಗಾಗಿ ಪ್ರಯಾಣ ಬೆಳೆಸುವುದು, ಓಡಾಡುವುದು, ಕೆಲಸ ಮಾಡುವುದು ಹೀಗೆ ಎಲ್ಲವೂ ಮಳೆಯಲ್ಲಿಯೇ ಮಾಡಬೇಕಾದ ಅನಿವಾರ್ಯತೆ ಇಲ್ಲಿನ ಜನರದ್ದಾಗಿದೆ. ಮಳೆ ಬಂತೆಂದು ಮನೆಯಲ್ಲಿ ಬೆಚ್ಚಗೆ ಕೂರುವಂತಿಲ್ಲ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಲೇ ಬೇಕಾಗಿದೆ. ಆದರೆ ಹೊರಗಿನಿಂದ ಬಂದವರಿಗೆ ಇಲ್ಲಿನ ಪ್ರತಿಯೊಂದು ದೃಶ್ಯ ಮತ್ತು ಕ್ಷಣಗಳು ಖುಷಿಕೊಡುತ್ತವೆ. ಅದರಲ್ಲೂ ಪ್ರಯಾಣ ಮಾಡುವಾಗ ಅಲ್ಲಲ್ಲಿ ಕಾಣ ಸಿಗುವ ಝರಿಗಳು ಕಣ್ಮನ ಸೆಳೆಯುತ್ತವೆ.

ಇದನ್ನೂ ಓದಿ: ಶಿವನಸಮುದ್ರದಲ್ಲಿ ಕಾವೇರಿಯ ಜಲನರ್ತನ ನೋಡುವುದೇ ಕಣ್ಣಿಗೊಂದು ಹಬ್ಬ…

ಕೊಡಗಿನಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಮಳೆ ಸುರಿದ ಕಾರಣದಿಂದಾಗಿ ಬೆಟ್ಟಗುಡ್ಡಗಳ, ಕಾಫಿ ತೋಟಗಳ ನಡುವೆ ಹೀಗೆ ಎತ್ತರದ ಪ್ರದೇಶಗಳಲ್ಲಿ ನೀರು ಹರಿಯಲಾರಂಭಿಸಿದ್ದು ಎತ್ತರದಿಂದ ಧುಮ್ಮಿಕ್ಕುವಾಗ ಜಲಪಾತ ಸೃಷ್ಟಿಯಾಗುತ್ತಿದೆ. ಇದನ್ನು ನೋಡುವುದೇ ಒಂಥರಾ ಮಜಾ.. ಇನ್ನು ಕಾನನ, ತೋಟಗಳ ನಡುವೆ ಹರಿಯುವ ನದಿಗಳು ಕೂಡ ಹೆಬ್ಬಂಡೆಗಳ ಮೇಲಿಂದ ಧುಮ್ಮಿಕ್ಕಿ ಹರಿದಾಗ ಕಾಣ ಸಿಗುವ ದೃಶ್ಯಗಳು ಮನಮೋಹಕವಾಗಿವೆ.

ಕೆಲವೊಂದು ಜಲಪಾತಗಳು ನಮ್ಮ ನೋಟಕ್ಕೆ ನಿಲುಕದೆ ಕಾನನಗಳ ನಡುವೆ ತನ್ನಪಾಡಿಗೆ ತಾನು ಎಂಬಂತೆ ಶ್ವೇತಧಾರೆಯಾಗಿ ಧುಮ್ಮಿಕ್ಕುತ್ತವೆ. ದೂರದ ಬೆಟ್ಟದ ಮೇಲೆ ಹೀಗೆ ಧುಮುಕುವ ಜಲಧಾರೆಗಳು ದೂರದಿಂದಲೇ ಆಕರ್ಷಿಸುತ್ತವೆ. ಅಷ್ಟೇ ಅಲ್ಲದೆ ಹಸಿರ ಪ್ರಪಂಚದಲ್ಲಿ ಬೆಳ್ಮಿಂಚು ಸರಿದ ಅನುಭವ ನೀಡುತ್ತವೆ.  ಕೆಲವೊಂದು ಜಲಪಾತಗಳು ರಸ್ತೆ ಬದಿಯಲ್ಲಿಯೇ ನಮಗೆ ಚೆಲುವನ್ನು ತೆರೆದಿಟ್ಟರೆ ಮತ್ತೆ ಕೆಲವು ಜಲಧಾರೆಗಳನ್ನು ನೋಡಬೇಕಾದರೆ ಹತ್ತಾರು ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿಯೇ ಕ್ರಮಿಸುವ, ಬೆಟ್ಟಗುಡ್ಡಗಳನ್ನೇರುವ, ರಕ್ತ ಹೀರಲು ಬರುವ ಜಿಗಣೆಗಳನ್ನು ಸಹಿಸಿಕೊಂಡು ಮುನ್ನಡೆಯ ಬೇಕಾಗುತ್ತದೆ. ಇಂತಹ ಜಲಪಾತಗಳ ಬಳಿಗೆ ಮಳೆಗಾಲದಲ್ಲಿ ತೆರಳುವುದು ಒಳಿತಲ್ಲ. ಒಂದು ವೇಳೆ ಹೋಗುವವರು ಸ್ಥಳೀಯರ ಮಾರ್ಗದರ್ಶನ ಪಡೆಯುವುದು ಕ್ಷೇಮಕರ.

ಇದನ್ನೂ ಓದಿ: ಜಲಧಾರೆಗಳಲ್ಲಿ ರುದ್ರನರ್ತನ ಶುರು… ಈಗ ಜಲಧಾರೆಗಳ ಬಳಿಗೆ ತೆರಳುವುದು ಡೇಂಜರ್.. ಏಕೆ ಗೊತ್ತಾ?

ಇದೆಲ್ಲದರ ನಡುವೆ ಯಾವುದೇ ರೀತಿಯ ತೊಂದರೆಗಳಿಲ್ಲದೆ ಎಲ್ಲರ ಕಣ್ಣಿಗೆ ನಿಲುಕ ಬಹುದಾದ ಜಲಪಾತಗಳನ್ನು ನೋಡಬೇಕೆಂದರೆ ಮಡಿಕೇರಿಯಿಂದ ಮಂಗಳೂರು ಕಡೆಗೆ ತೆರಳುವ ಹೆದ್ದಾರಿಯಲ್ಲಿ ಸಾಗಬೇಕು. ಈ ಹೆದ್ದಾರಿಯಲ್ಲಿ ಸಾಗಿದರೆ ಕೊಡಗಿನ ಪ್ರಕೃತಿ ರಮಣೀಯ ದೃಶ್ಯಗಳ ಜತೆಗೆ ಜಲಪಾತಗಳ ಸೌಂದರ್ಯವನ್ನು ಸವಿಯಲು ಸಾಧ್ಯವಾಗುತ್ತದೆ.  ದಕ್ಷಿಣಕನ್ನಡ ಜಿಲ್ಲೆಯ ಗಡಿಯಂಚಿನವರೆಗೆ ಬೆಟ್ಟಶ್ರೇಣಿಯನ್ನು ಹೊಂದಿದ್ದು, ಇದರ ನಡುವೆ ಹೆದ್ದಾರಿ ಹಾದು ಹೋಗಿದೆ. ಈ ಹೆದ್ದಾರಿ ಘಾಟಿಯನ್ನು ಹೊಂದಿದ್ದು. ಹೆದ್ದಾರಿಯಲ್ಲಿ ಸಾಗುವವರಿಗೆ ಮಾರ್ಗದ ಬದಿಯಲ್ಲಿಯೇ ಜಲಪಾತವೊಂದು ದರ್ಶನ ನೀಡುತ್ತದೆ. ಇದುವೇ ಅಬ್ಬಿಕೊಲ್ಲಿ ಫಾಲ್ಸ್…

ಇದನ್ನೂ ಓದಿ: ಕೊಡಗಿನ ಇರ್ಪು ಜಲಪಾತದಲ್ಲೀಗ ಮುಂಗಾರು ಮಳೆ ವೈಭವ… ದಟ್ಟ ಕಾನನದ ನಡುವೆ  ಈ ಜಲಪಾತ ಸೃಷ್ಟಿಯಾಗಿದ್ದು ಹೇಗೆ?

ಇತ್ತೀಚೆಗಿನ ವರ್ಷಗಳಲ್ಲಿ ಇದನ್ನು ಅಬ್ಬಿಕೊಲ್ಲಿ ಫಾಲ್ಸ್ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಹಿಂದೆ ಇದನ್ನು ಜೋಡುಪಾಲ ಎಂಬ ಗ್ರಾಮದ ಬಳಿ ಇರುವ ಕಾರಣದಿಂದಾಗಿ ಜೋಡುಪಾಲ ಫಾಲ್ಸ್ ಎಂದು ಕರೆಯುತ್ತಿದ್ದರು. ಈ ಜಲಪಾತ ಮಡಿಕೇರಿಯಿಂದ ಹದಿನೈದು ಕಿ.ಮೀ, ದೂರದಲ್ಲಿದೆ. ಹೆದ್ದಾರಿಯ ತಿರುವಿನಲ್ಲಿ  ಗುಡ್ಡದ ನಡುವಿನ ಕಂದಕದಲ್ಲಿ ಸುಮಾರು ಎಪ್ಪತ್ತೈದು ಅಡಿಯಷ್ಟು ಎತ್ತರದಿಂದ ಭೋರ್ಗರೆದು ಧುಮುಕಿ ಹರಿದು ಹೋಗುತ್ತದೆ. ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾದ ಪರಿಣಾಮ ಹೆದ್ದಾರಿಯ ಬದಿಯಲ್ಲಿನ ಜಲಪಾತದ ಬಳಿ ಅಂಗಡಿ ಮಳಿಗೆಗಳನ್ನು ತೆರೆಯಲಾಗಿದೆ.

ಇದನ್ನೂ ಓದಿ: ಅಬ್ಬಿ ಫಾಲ್ಸ್ ನಲ್ಲಿ ಶುರುವಾಗಿದೆ ಜಲನರ್ತನ…. ಈ ಫಾಲ್ಸ್ ನೋಡಲೆಷ್ಟು ಸುಂದರವೋ ಅಷ್ಟೇ ಭಯಂಕರ…

ಮಡಿಕೇರಿಯಿಂದ ಮಂಗಳೂರು ಕಡೆಗೆ ಹೋಗುವವರು ಮತ್ತು ಅತ್ತ ಕಡೆಯಿಂದ ಬರುವವರು ತಮ್ಮ ವಾಹನವನ್ನು ಇಲ್ಲಿ ನಿಲ್ಲಿಸಿ ಜಲಪಾತವನ್ನು ನೋಡಿಕೊಂಡು ಮುಂದೆ ಸಾಗುವುದು ಮಾಮೂಲಿಯಾಗಿದೆ. ಈ ಜಲಪಾತದ ದೃಶ್ಯ ಹೆದ್ದಾರಿಯಿಂದಲೇ ಕಾಣಸಿಗುತ್ತದೆ, ಬೆಟ್ಟ ಶ್ರೇಣಿಯಲ್ಲಿನ ಹಸಿರು ಹಚ್ಚಡದ ನಡುವೆ ಶ್ವೇತ ಸುಂದರಿಯಂತೆ ಕಂಗೊಳಿಸುವ ಜಲಪಾತ ನೋಡುಗರ ಗಮನಸೆಳೆಯುತ್ತದೆ. ಈ ಜಲಪಾತವನ್ನು ಹತ್ತಿರ ಹೋಗಿ ನೋಡುವ ಬದಲು  ದೂರದಿಂದಲೇ ನೋಡಿ ಖುಷಿಪಡಬಹುದಾಗಿದೆ. ಮಳೆಗಾಲದಲ್ಲಂತು ಇದರ ಅಬ್ಬರ ಬಹಳ ಜೋರಾಗಿರುತ್ತದೆ. ಇನ್ನು ರಸ್ತೆಯುದ್ದಕ್ಕೂ ಸಾಗುವಾಗ ಕಣಿವೆಯಲ್ಲಿ ಹರಿಯುವ ಪಯಶ್ವಿನಿ ನದಿ ಅಲ್ಲಲ್ಲಿ ಹೆಬ್ಬಂಡೆಗಳ ಮೇಲೆ ಭೋರ್ಗರೆದು ಧುಮ್ಮಿಕ್ಕುವ ದೃಶ್ಯಗಳು  ಚೇತೋಹರಿಯಾಗಿರುತ್ತವೆ.

ಇದನ್ನೂ ಓದಿ: ಮೈಸೂರಿನ ಧನುಷ್ಕೋಟಿಗೆ ಜೀವಕಳೆ… ಇದು ಎಲ್ಲಿದೆ? ಸೃಷ್ಟಿಯಾಗಿದ್ದು ಹೇಗೆ?

ಒಟ್ಟಾರೆಯಾಗಿ ಹೇಳಬೇಕೆಂದರೆ ಮಡಿಕೇರಿಯಿಂದ ಮಂಗಳೂರು ಕಡೆಗೆ ಪ್ರಯಾಣ ಬೆಳೆಸುವವರಿಗೆ ಮಲೆನಾಡಿನ ಹಲವು ಸುಂದರತೆಗಳು ತೆರೆದುಕೊಳ್ಳುತ್ತವೆ. ಮಳೆಗಾಲದ ಪ್ರಯಾಣ ಒಂಥರಾ ಮಜಾವೂ ಹೌದು ಹಾಗೆಯೇ ಎಚ್ಚರ ತಪ್ಪಿದರೆ ಅಪಾಯವೂ  ಇಲ್ಲದಿಲ್ಲ. ಹೀಗಾಗಿ ಈ ಹೆದ್ದಾರಿಯಲ್ಲಿ ಪ್ರಯಾಣ ಬೆಳೆಸುವವರು ಎಚ್ಚರಿಕೆ ವಹಿಸಬೇಕಾಗುತ್ತದೆ. ಅದರಲ್ಲೂ ತಿರುವಿನ ರಸ್ತೆಗಳಾಗಿರುವುದರಿಂದ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆದರೆ ಮಲೆನಾಡಿನ ಮಳೆಗಾಲದ ವೈಭವವನ್ನು ಹತ್ತಿರದಿಂದ ನೋಡಲು ಸಾಧ್ಯವಾಗಲಿದೆ.

 

 

B M Lavakumar

admin
the authoradmin

Leave a Reply