LatestState

ಹತ್ತನೇ ಚಾಮರಾಜ ಒಡೆಯರಿಂದ ನಾಮಕರಣ ಮಾಡಿಸಿಕೊಂಡ ನಾನು ಹೊಸ-ಅಗ್ರಹಾರ…!

ಒಂದು ಕಾಲದಲ್ಲಿ ಯಾಚನಕುಪ್ಪೆಯಾಗಿದ್ದ ಊರು  ಇವತ್ತು ಹೊಸ ಅಗ್ರಹಾರವಾಗಿದೆ.. ಈ ಊರಿನ ಕುರಿತಂತೆ ಎಚ್ಸಿ ಆನಂದ ಹೊಸ ಅಗ್ರಹಾರ ಅವರು ಸ್ವಗತದ ಮೂಲಕ ಹೇಳುತ್ತಾ ಹೋಗಿದ್ದಾರೆ.. ಓದುತ್ತಾ ಹೋದಂತೆ ರಾಜಮಹಾರಾಜರ ಕಾಲಕ್ಕೆ ಹೊಸ ಅಗ್ರಹಾರ ಕರೆದೊಯ್ಯುತ್ತದೆ… ಇದೇ ಅಲ್ಲವೆ ಊರಿನ ತಾಕತ್….!

ನಾನು ಹೊಸ-ಅಗ್ರಹಾರ ಅಂತ. ಈಗಿನ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಒಂದು ಗ್ರಾಮ. ನನ್ನನ್ನು ಈ ಹೆಸರಲ್ಲಿ ಕರೆಯುವುದನ್ನು ತಿಳಿದಿರುವವರಲ್ಲಿ ಬಹಳಷ್ಟು ಮಂದಿಗೆ ನಾನು ಮುಂಚೆ ಏನಾಗಿದ್ದೆ? ಎಲ್ಲಿದ್ದೆ? ಅಂತ ಗೊತ್ತಿಲ್ಲ. ಶತಮಾನಕ್ಕೂ ಹಳೆಯ ಕಥೆ ನನ್ನದು. ಏನಿಲ್ಲ ಅಂದ್ರು ಈಗ್ಗೆ 130 ವರ್ಷಗಳ ಹಿಂದಿನ ನೆನಪನ್ನು ಹೆಕ್ಕಿ ತೆಗೀಬೇಕು. ನೂರಾರು ವರ್ಷ ಹಿಂದಕ್ಕೆ ಹೋದರೂ ಬರಿ ಹೆಸರಿಗೆ ಸಂಬಂಧಿಸಿದಷ್ಟೆ ಇತಿಹಾಸ! ಯಾಕೋ ಮುಂಚಿನ ನೆನಪಿನ ಬುತ್ತಿ ಬಿಚ್ಚಿದರೆ ಸಾವಿರಾರು ವರ್ಷಗಳ ಹಿಂದಿನದು ತೆರೆದುಕೊಳ್ಳುತ್ತದೆ; ಅದು ಪುರಾಣಕ್ಕೆ ಸಂಬಂಧಿಸಿದ್ದು, ಕೊನೆಗೆ ಹೇಳ್ತೀನಿ ಅದನ್ನೂ ಕೇಳುವಿರಂತೆ.

ಮುಂಚೆ ನಾನು ಏನಾಗಿದ್ದೆ?! ಅಂದೆನಲ್ಲ. ಆಗ ನನ್ನನ್ನು ಯಾಚನಕುಪ್ಪೆ ಅಂತ ಕರೀತಿದ್ರು. ಎಲ್ಲಿದ್ದೆ ಅಂದ್ರೆ ನಾ ಈಗಿರೋ ಜಾಗದಿಂದ (ಹೊಸ-ಅಗ್ರಹಾರದ) ಮೂಡಣ ದಿಕ್ಕಿಗೆ ಕೂಗಳತೆ ದೂರದ ಸದರಿ ಕೆರೆ ಇರೋ ಜಾಗದಲ್ಲಿ ನನ್ನ ಆವಾಸ! ಈಗಲೂ ಈಶ್ವರನ ಗುಡಿ ಐತಲ್ಲ, ಅದರ ಆಸುಪಾಸು. ಆಗೆಲ್ಲ ಈ ಕೆರೆ-ಕಾವಲೆ (ಕೆರೆ-ಕಾಲುವೆ) ಯಾವುದೂ ಇರ್ಲಿಲ್ಲ ಬಿಡಿ. ಅಂದಂಗೇ ಈ ಕಾಲುವೆ ಬಂದು ಕೆರೆ ಕಟ್ಟಿದ್ದಕ್ಕೆ ತಾನೇ ಅಲ್ಲಿದ್ದ ನಾನು ಈ ದಡ ಸೇರಿಕೊಳ್ಳಬೇಕಾಗಿ ಬಂದದ್ದು. ಆಗೆಲ್ಲ ಮಳೆಗಾಲ ಚೆನ್ನಾಗಿ ಆಗ್ತಿತ್ತಾದರೂ ಬೇಸಿಗೇಲಿ ನೀರಿನ ತತ್ವಾರ ಹೇಳತೀರದು. ಆಗೊಮ್ಮೆ ಈಗೊಮ್ಮೆ ಬರ ಕಾಣಿಸಿಕೊಂಡ್ರಂತೂ ದೇವ್ರೇ ಗತಿ! ಹೀಗಿದ್ದಾಗ ನನ್ನಲ್ಲಿದ್ದ ಕೆಲವರು ಮೈಸೂರಿನ ಅರಮನೇಲಿ ಆಯಕಟ್ಟಿನ ಸ್ಥಾನಮಾನದಲ್ಲಿದ್ದವರ ಸಂಬಂಧಿಗಳಂತೆ. ಅವರ ಮೂಲಕ ನನ್ನಲ್ಲಿಯ ಬರದ ಛಾಯೆ, ನೀರಿನ ಬವಣೆ ಆಳರಸರ ಕಿವಿಗೆ ಮುಟ್ತು. ಆಗ ಈ ನಾಡನ್ನು ಆಳುತ್ತಿದ್ದ ಅರಸರು ಬಹದ್ದೂರ್ ಹತ್ತನೇ ಚಾಮರಾಜ ಒಡೆಯರ್. ಪುಣ್ಯಾತ್ಮರು!

ಇದನ್ನೂ ಓದಿ: ಮೈಸೂರಿನ ಸಂಕನಹಳ್ಳಿಯಲ್ಲಿ ಮದ್ಯವೂ ಇಲ್ಲ… ಮಾಂಸವೂ ಇಲ್ಲ…

ತಂಪೊತ್ತಲ್ಲಿ ನೆನುಸ್ಕೋಬೇಕು ಅವರನ್ನು. ನನ್ನಿಂದ ಹತ್ತಾರು ಮೈಲಿ ಹತ್ತಿರದಲ್ಲೆ ಹರೀತ್ತಿದ್ದ ಕಾವೇರಿ ನದಿಗೆ ಒಂದು ಅಣೆಕಟ್ಟೆ ಕಟ್ಟಿಸಿ ಕಾಲುವೆ ಮೂಲಕ ನನ್ನಲ್ಲಿಗೆ ನೀರನ್ನು ಹರಿಸಲು ಮುಂದಾಗಿಯೇ ಬಿಟ್ಟರು. ಅವರು ಹಾಗೆ ಮನಸ್ಸು ಮಾಡಿದ್ದು ಸುಮಾರು 1890ನೇ ಇಸವಿ ಅಂತ ಕಾಣುತ್ತೆ. ಸಾಲಿಗ್ರಾಮದ ಬಳಿ ಬಳ್ಳೂರು, ಆ ಕಡೆಗೆ ಚುಂಚನಕಟ್ಟೆ ಸಮೀಪ ಸಕ್ಕರೆ ಅನ್ನುವ ಊರ ಹತ್ರ ಕಾವೇರಿ ಹೊಳೆಗೆ ಕಟ್ಟೆ ಕಟ್ಟಲು ದಿವಾನರಾದ ಶೇಷಾದ್ರಿ ಅಯ್ಯರ್ ಅವರ ಮುಂದಾಳತ್ವದಲ್ಲಿ ಸ್ಥಳ ಪರಿಶೀಲನೆ ಮಾಡಿಸಿದ್ರು. ಅಲ್ಲಿಂದ ಬಳ್ಳೂರು ಎಡದಂಡೆ ಹೆಸರಲ್ಲಿ ನನ್ನವರೆಗೆ ನಾಲೆಯ ಮೋಜಿಣಿ (ಸರ್ವೆ)ಯೂ ಆಯ್ತು. ಕಾಲುವೆ ನನ್ನಲ್ಲಿಗೆ ಬಂದು ಕೊನೆಯಾಗುವುದನ್ನು ಕಂಡು, ನನ್ನ (ಯಾಚನಕುಪ್ಪೆಯ) ಎದುರಿಗಿದ್ದ ವಿಶಾಲವಾದ ಜಾಗದಲ್ಲಿ ಕೆರೆ ನಿರ್ಮಾಣ ಮಾಡಲು ನಿರ್ಧರಿಸಿದರು. ಆ ನೀರನ್ನು ಬೇಸಿಗೆಯಲ್ಲಿ ಜನ-ಜಾನುವಾರು ಹಾಗೂ ಜಮೀನುಗಳಿಗೆ ಬಳಸಿಕೊಳ್ಳಲು ಯೋಜನೆಯೊಂದು ತಯಾರಾಯಿತು.

ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಬ್ರಿಟಿಷರಿಂದಾಗಿ ಆಗತಾನೆ ದೇಶದಲ್ಲೆಲ್ಲಾ ಬಸುಗುಡುತ್ತಿದ್ದ ಚುಕುಬುಕು ರೈಲು ಮೈಸೂರಿನಿಂದ ಹಾಸನದತ್ತ ತೆರಳಲು ನನ್ನ ಪಡುವಲ ಮುಗುಲಲ್ಲೇ ದಾರಿ ಮಾಡಿಕೊಡಲಾಯಿತು. ಇದೆಲ್ಲದರ ಪರಿಣಾಮ ನಾನು (ಯಾಚನಕುಪ್ಪೆ) ಅಕ್ಷರಶಃ ಕಿಷ್ಕಿಂದೆಯಂತಾದೆ. ಯಾಕೆ ಹಂಗೆ ನೋಡ್ತೀರಾ ಮುಕ್ಕಗಳಾ?  ಅರ್ಥ ಆಗಲಿಲ್ಲವಾ? ಮೂಡ್ಲಾಗೆ ಬಡಗ್ಲಾಗೆ ಕೆರೆ ನೀರು ತುಂಬಿಕೊಂಡರೆ ತೆಂಕ್ಲಾಗೆ ಕಾಲುವೆ, ಪಡುವ್ಲಾಗೆ ರೈಲ್ ರಸ್ತೆ. ಹಂಗೆ ಇದ್ದಿದ್ರೆ ನನ್ನೇನ್ ಊರು ಅಂತಿದ್ರಾ…? ಲಂಕೆ ಅಂತಿದ್ರಾ…? ಅದೇನೆಂತಿದ್ರೊ ಬಿಡ್ತಿದ್ರೊ ಅಂತೂ ಬಚಾವಾದೆ! ಒಟ್ನಲ್ಲಿ ಈಗ ಆ ಪರಿಸ್ಥಿತಿ ಇಲ್ಲ. ಆವಾಗ ಮೈಸೂರ ಮಹಾರಾಜರು ಅಂತಾ ಆಗ್ಲೇ ಹೇಳಿದ್ನಲ್ಲ ಅದೇ ಚಾಮರಾಜ ಒಡೆಯರ್ ಅವರು ಹಾಸನಕ್ಕೆ ಯಾವ್ದೋ ಸಭೆಗೆ ಅಂತ ಕುದುರೆ ಮ್ಯಾಲೆ ಹೋಗ್ತಾರೆ ಅನ್ನೋದು ನನ್ನ ಜನಕ್ಕೆ ಗೊತ್ತಾಯ್ತು. ಅವರೆಲ್ಲ ಅಂದು ದಾರಿಲಿ ಕಾಯ್ಕೊಂಡಿದ್ದು ಅರಸರ ಸವಾರಿಯನ್ನು ಬರಮಾಡಿಕೊಂಡರು. ಬಳಿಕ ಬಸವಪ್ಪ ಶಾಸ್ತ್ರಿಗಳ ಸಂಬಂಧಿಕರು ಒಂದಷ್ಟು ಮಂದಿ ‘ಕಾಯೌ ಶ್ರೀಗೌರಿ’ ಗೀತೆಯನ್ನು ರಾಜರೆದುರು ಪಠಿಸಿದರು. ಅದಾದ ಮೇಲೆ ಅಲ್ಲಿ ಸೇರಿದ್ದವರ ಮುಖ ನೋಡಿಯೇ ಅವರ ದುಗುಡ ಅರಿತ ಮಹಾರಾಜರು ಏನೆಂದು ವಿಚಾರಿಸಿದರು.

ಇದನ್ನೂ ಓದಿ: ಮುಂಗಾರು ಮಳೆಗೆ ಸ್ವರ್ಗವನ್ನೇ ಧರೆಗಿಳಿಸುವ ಬಿಸಿಲೆಘಾಟ್… ಈ ಸುಂದರ ತಾಣ ಇರುವುದು ಎಲ್ಲಿ?

ವಿಷಯದ ಗಂಭೀರತೆಯನ್ನು ತಿಳಿದು ನಾಲ್ಕೂ ನಿಟ್ಟಿನಲ್ಲಿ ಬಂಧಿಯಾಗಿದ್ದ ನನ್ನನ್ನು ಅಲ್ಲಿಂದ ಬಿಡುಗಡೆಗೊಳಿಸಿ ಪಡುವಣ ದಿಕ್ಕಿಗೆ ಅಂದ್ರೆ ಈಗಿರೋ ಜಾಗಕ್ಕೆ ಸ್ಥಳಾಂತರಿಸಲು ಅನುಮತಿ ನೀಡಿದರು. ಅಲ್ಲಿದ್ದ ನಾನು ಇಲ್ಲೀಗ್ ಬಂದು ಮನೆ ಮಠ ಮಾಡ್ಕೊಂಡು ಒಂದ್ ಹಂತುಕ್ಕೆ ಬದುಕ ಕಟ್ಕೊಳ್ಳೋ ಹೊತ್ಗೆ ಒಂದೈದ್ ವರ್ಷಾನೆ ಆಯ್ತು ಅನ್ನಿ. ಕಾಲುವೇಲಿ ನೀರು ಹರಿದು ಬಂದು ಕೆರೆ ಸೇರ್ತಿದ್ದಂಗೇ ನನ್ನೂರ ಜನಗಳ ಕಣ್ಣಾಲಿಗಳೂ ತುಂಬಿ ಬಂದಿದ್ದ ನೆನೆಸ್ಕೊಂಡ್ರೇ ಮೈ ಮುಳ್ಳೇಳ್ತದೆ. ಕೆರೆಕಟ್ಟೆ ಮುಚ್ಚಿ ಊರು ಕಟ್ಟೋ ಈಗಿನ ಮುಕ್ಕಗಳ್ಗೆ ಆವತ್ತಿನ ಹೆಚ್ಗಾರಿಕೇನ ಎಷ್ಟೇಳುದ್ರೂ ಅಷ್ಟೆ. ಅದೇನೊ ಹೊಳೇಲಿ ಹುಣಸೆ ಹಣ್ಣ ಕಿವುಚ್ದಂಗೆ ಅಂತಾರಲ್ಲ ಹಂಗೆ! ಆದ್ರೆ, ಆಗಿನ ಜನರ ಮನಸ್ಥಿತಿ ನೋಡಿ. ಈಗಿರೋ ಕಡೆ ನನ್ನ ಮುಂದೇನೆ ಕಾಲುವೆ, ಕೆರೆ ಇದ್ರೂ ಊರ ತುಂಬಾ ಹೆಚ್ಚೇ ಅನ್ನೋವಷ್ಟು ಬಾವೀನ ತೋಡ್ಕೊಂಡು ಸಮೃದ್ಧವಾಗಿದ್ರು; ಅದೇ ಅವ್ರ ಹೆಚ್ಚುಗಾರಿಕೆ!

ಇದನ್ನೂ ಓದಿ: ಇತಿಹಾಸದ ಕಥೆ ಹೇಳುವ ತೊಣ್ಣೂರು ಕೆರೆ.. ಇಲ್ಲಿನ ನಿಸರ್ಗ ಸೌಂದರ್ಯಕ್ಕೆ ತಲೆದೂಗದವರಿಲ್ಲ..

ಯಾಕೋ ಆಗಿನ ನನ್ನ ಯಾಚನಕುಪ್ಪೆ ಅನ್ನೋ ಹೆಸರು ಮಹಾರಾಜರ ಮನಸಿಗೆ ಹಿಡಿಸಲಿಲ್ಲ ಅಂತ ಕಾಣ್ಸುತ್ತೆ. ಹಂಗಾಗಿ ಸ್ಥಳಾಂತರಗೊಂಡ ಜಾಗದಲ್ಲಿ ಅಗ್ರಹಾರ ಎಂದು ಕರೆಯಲು ಸೂಚಿಸಿದರು. ಅದಕ್ಕೆ ದಿವಾನರು ಈಗಾಗಲೇ ಮೈಸೂರಲ್ಲಿ ಅಗ್ರಹಾರ ಇದೆಯಲ್ಲ! ಎಂದಿದ್ದಕ್ಕೆ ಮಹಾರಾಜರು, ನನಗೆ ಹೊಸ-ಅಗ್ರಹಾರ ಅಂತಾ ನಾಮಕರಣ ಮಾಡಿದರು. ಮಹಾರಾಜರೊಂದಿಗೆ ನನ್ನಲ್ಲಿಗೆ ಆಗಮಿಸಿದ್ದ ಕಟ್ಟುಮಸ್ತಾದ ಭಟರನ್ನು (ಸೈನಿಕರನ್ನು) ನನ್ನವರು ನೋಡಿದ್ದರು. ಹಾಗೆ ನೋಡಿ ಸುಮ್ಮನಿರುವ ಜಾಯಮಾನವಲ್ಲ ಇಲ್ಲಿನವರದು. ಹಾಗಾಗಿ ಗರಡಿ ಮನೆ ಮಾಡ್ಕೊಂಡು ತಾಲೀಮು ಶುರು ಹಚ್ಕೊಂಡಿದ್ದರು. ಎಂಥಾ ಮೈಕಟ್ಟಿನ ಆಳುಗಳಿದ್ದರೂ ಅಂತೀರಿ! ಗರಡಿ ಆಳುಗಳು ತಾನೆ! ಅವ್ರು ಬೀದಿಲಿ ನಡೀತಿದ್ರೆ ನೆಲಾನೆ ಇಡಿದಂಗೆ ಸದ್ದಾಗೋದು! ಮೈಸೂರ ದಸರಾದ ಕುಸ್ತಿ ಅಖಾಡಾದವರೆಗೂ ಹೋಗ್ತಿದ್ರು ನನ್ನೂರ ಪೈಲ್ವಾನ್ರು! ಅವ್ರು ಗೆದ್ದು ಬಂದಾಗ ಇಲ್ಲಿ ಮಾಡ್ತಿದ್ದ ಆರತಿ, ಮೆರವಣಿಗೆ ಏನೈಭೋಗ ಅಂತೀನಿ. ನೋಡಕ್ಕೆ ಏಡು ನೇತ್ರ ಸಾಲವು!

ಇದನ್ನೂ ಓದಿ:ಗಿನ್ನೆಸ್ ದಾಖಲೆ ಬರೆದ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಬೋನ್ಸಾಯ್ ಗಾರ್ಡನ್

ಆಗಿನಿಂದ ಎರಡು ಮೂರು ತಲೆಮಾರುಗಳ ಕಾಲ ಇಲ್ಲಿಗೆ ಹೊಸದಾಗಿ ಬಂದವರೆಷ್ಟೋ… ಇಲ್ಲಿಂದ ಕಾಲ್ತೆಗೆದವರೆಷ್ಟೋ… ಇಷ್ಟು ಕಥೆಯನ್ನು ಹಿಂದಿನವರು ಆಗಾಗ ನೆಂಟರಿಷ್ಟರಿಗೆ, ಮನೆಯ ಕಿರಿಯರಿಗೆ ಹೇಳುತ್ತಲೇ ಇದ್ದರು. ರಾಜರ ಕಾಲ, ನೂರು ವರ್ಷಗಳ ಹಿಂದೆ ಎಂದೆಲ್ಲಾ ಹೇಳುತ್ತಿದ್ದರಾದರೂ ನಿಖರವಾದ ಕಾಲ ಸೂಚನೆ ಸಾಧ್ಯವಾಗಿರಲಿಲ್ಲ. ಆದರೆ, ಈಗ ನನ್ನ ಕೈಯಲ್ಲೇ ನನ್ನ ಕಥೆಯನ್ನು ಹೇಳಿಸುತ್ತಿದ್ದಾನಲ್ಲ, ದೊಡ್ಡಪ್ಪಾಜಿ ಚನ್ನೇಗೌಡರ ಮಗ ಈ ಆನಂದ, ಅವನು ಒಮ್ಮೆ ಇಲ್ಲಿಗೆ ಕಾಲುವೆ ಮೂಲಕ ನೀರು ಬರುವ ಅಣೆಕಟ್ಟೆಯನ್ನು ನೋಡಕ್ಕೆ ಅಂತಾ ಬಳ್ಳೂರ ಕಟ್ಟೆ ಹತ್ರ ಹೋದಾಗ ಅದರ ಮೇಲೆ ಬರೆದಿರುವ ಚಾಮರಾಜ ಅಣೆಕಟ್ಟೆ, ಸ್ಥಾಪನೆ: ಮೇ 1895 ಎಂಬುದನ್ನು ತಿಳಿದು ಈಗ ನನಗೆ ಹುಟ್ಟಿದ ದಿನಾಂಕ ನಿಖರವಾಗಿ ಗೊತ್ತಿಲ್ಲದಿದ್ದರೂ ಅಣೆಕಟ್ಟೆ, ಕಾಲುವೆ, ಕೆರೆ, ರೈಲುಮಾರ್ಗಗಳ ನಿರ್ಮಾಣ ಸಂದರ್ಭದಲ್ಲಿ ನಾ ಹೇಗೆ ಆವಿರ್ಭವಿಸಿರಬಹುದು ಎಂಬುದನ್ನು ಹೇಳಿಕೊಳ್ಳುವಷ್ಟರ ಮಟ್ಟಿಗೆ ಆತ್ಮವಿಶ್ವಾಸ ತುಂಬಿದ್ದಾನೆ. ಅವನಿಗೆ ನಾ ಚಿರಋಣಿ!

ಇಂಥ ಸ್ಥಿತಿ ಬೇಕಿತ್ತು ನಂಗೆ. ಯಾಕಂದ್ರೆ ಕನ್ನಂಬಾಡಿ ಕಟ್ಟೆ ಕಟ್ಟೋಕೆ ಶುರು ಮಾಡೋಕೂ ಒಂದ್ವರ್ಷ ಮುಂಚೇನೆ ನಮ್ಮ ಚಾಮರಾಜ ಅಣೆಕಟ್ಟೆ ಸಿದ್ಧವಾಗಿ ಅದೇ ಚಾಮರಾಜ ನಾಲೆಗಳ ಮೂಲಕ ನೀರು ಹರಿದು ಕರೆಕಟ್ಟೆ ತುಂಬಿಕೊಂಡಿದ್ವು ನಮ್ಮಲ್ಲಿ. ಅದರ ಅಪ್ಪನಂಗೆ ಬುಕ್ದೋರು ನಾವು. ಯಾಕಂದ್ರೆ ಆ ಕಟ್ಟೆ ಕಟ್ಟಿಸಿದವರ ಅಪ್ಪನೇ ತಾನೆ ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ್ದು! ಓದಿದ, ಓದಿ ಕೇಳಿಸಿಕೊಂಡ ನಿಮಗೆಲ್ಲ ಧನ್ಯವಾದಗಳು!

 -ಇಂತಿ ನಿಮ್ಮ ಹೊಸ-ಅಗ್ರಹಾರ ಉರುಫ್ ಯಾಚನಕುಪ್ಪೆ.

 

admin
the authoradmin

Leave a Reply