ಚಾಮರಾಜನಗರದಲ್ಲಿ ಇದೇ ಜುಲೈ 10 ನೇ ತಾರೀಕು ಶ್ರೀ ಚಾಮರಾಜೇಶ್ವರ ಸ್ವಾಮಿ ರಥೋತ್ಸವವು ಅಭಿಜಿತ್ ಮುಹೂರ್ತದಲ್ಲಿ ಜರುಗಲಿದ್ದು, ಆ ಸುಂದರ ಮತ್ತು ಅದ್ಭುತ ಕ್ಷಣಗಳಿಗಾಗಿ ಭಕ್ತರು ಮಾತ್ರವಲ್ಲದೆ ನವದಂಪತಿಗಳು ಕಾಯುತ್ತಿದ್ದಾರೆ. ಮತ್ತೊಂದೆಡೆ ಜಿಲ್ಲಾಡಳಿತವೂ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಸಾಮಾನ್ಯವಾಗಿ ಯಾವ ಭಾಗದಲ್ಲಿಯೂ ಆಷಾಢದ ಮೂಲ ಮಾಸದಲ್ಲಿ ರಥೋತ್ಸವ ನಡೆಯುವುದಿಲ್ಲ. ಆದರೆ ಇತಿಹಾಸ ಪ್ರಸಿದ್ಧ ಶ್ರೀ ಎಂಬ ಭಾವನೆ ಈ ಭಾಗದ ಜನರಲ್ಲಿದ್ದು, ಇದೊಂದು ರೀತಿಯ ನವದಂಪತಿಗಳ ಜಾತ್ರೆ ಎಂದರೂ ತಪ್ಪಾಗಲಾರದು.
ಆಷಾಢ ಮಾಸದಲ್ಲಿ ಶ್ರೀ ಚಾಮರಾಜೇಶ್ವರ ಸ್ವಾಮಿ ರಥೋತ್ಸವದ ವಿಶೇಷವೇನೆಂದರೆ ಸಾಮಾನ್ಯವಾಗಿ, ಹೊಸದಾಗಿ ಮದುವೆಯಾದವರು ಈ ದಿನ ಕೈ, ಕೈ ಹಿಡಿದು ಉಲ್ಲಾಸದಿಂದ ಬೆರೆತು ಪಿಸು ನುಡಿಗಳನಾಡುತ್ತಾ ಕಿಲಕಿಲ ನಗುವಿನೊಂದಿಗೆ ಸಂಭ್ರಮಿಸಿ ಉತ್ಸಾಹದಿಂದ ಖುಷಿ ಪಡುತ್ತಾರೆ. ತಿಂಡಿ ತಿನಿಸುಗಳನ್ನು ತಿನ್ನುತ್ತಾ, ಹೊಸ ವಸ್ತುಗಳನ್ನು ಕೊಂಡುಕೊಳ್ಳುತ್ತಾ, ಸಂತಸ ಹಂಚಿಕೊಳ್ಳುತ್ತಾರೆ. ಹೀಗೆ ಸಾವಿರಾರು ಹೊಸ ಜೋಡಿಗಳು ತೇರಿಗೆ ಹಣ್ಣು ಜವನ ಎಸೆದು ನಮ್ಮ ಜೀವನವು ಹೂವು-ಹಣ್ಣಿನಂತಿರಲಿ ಎಂದು ಪ್ರಾರ್ಥಿಸಿದರೆ, ಮಕ್ಕಳ ಫಲವನ್ನು ದೇವರು ಬೇಗನೆ ಕರು ಕರುಣಿಸುತ್ತಾನೆ ಎಂಬ ನಂಬಿಕೆ ನಮ್ಮ ಜನಪದರಲ್ಲಿದೆ. ಹಾಗಾಗಿ ಚಾಮರಾಜೇಶ್ವರನನ್ನು ಮಕ್ಕಳ ಚಾಮರಾಜೇಶ್ವರ ಎಂದೂ ಕರೆಯುತ್ತಾರೆ.
ಇದನ್ನೂ ಓದಿ: ಚಾಮುಂಡೇಶ್ವರಿಯ ಸಹೋದರಿ ಪುರದಕಟ್ಟೆ ಚಿಕ್ಕದೇವಮ್ಮ… ಸುಂದರ ಪರಿಸರದಲ್ಲಿ ನೆಲೆನಿಂತ ತಾಯಿಗೆ ನಮೋ ಎನ್ನೋಣ
ದಕ್ಷಿಣ ತುದಿಯಲ್ಲಿರುವ ಅರಿಕೊಠಾರ ಎಂಬ ಗ್ರಾಮ ಚಾಮರಾಜನಗರ ಎಂಬ ಹೆಸರಿನೊಡನೆ ಪ್ರಖ್ಯಾತಿಯಾಗಿ 1998ರಲ್ಲಿ ಜಿಲ್ಲಾ ಕೇಂದ್ರವಾಗಿ ಇಂದಿಗೆ 27 ವರ್ಷಗಳು ಕಳೆದಿವೆ. ಮೈಸೂರು ಅರಸರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಂದ ಅವರ ತಂದೆ ಶ್ರೀ ಚಾಮರಾಜ ಒಡೆಯರ್ ಅವರ ನೆನಪಿಗಾಗಿ ಕಟ್ಟಿಸಲ್ಪಟ್ಟ ಶ್ರೀ ಚಾಮರಾಜೇಶ್ವರ ದೇವಾಲಯ 1826ರಲ್ಲಿ ನಿರ್ಮಾಣ ಆಗಿ ಇತಿಹಾಸವನ್ನು ಹೊಂದಿದೆ. ಪ್ರತಿ ವರ್ಷದ ಮೂಲ ಆಷಾಡ ಮಾಸದಲ್ಲಿ ಶ್ರೀ ಚಾಮರಾಜೇಶ್ವರ ರಥೋತ್ಸವ ಇಲ್ಲಿ ವಿಜೃಂಭಣೆಯಿಂದ ವೈಭವಯುತವಾಗಿ ನಡೆಯಲಿದೆ.
ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ತಂದೆಯ ಹೆಸರನ್ನು ಈಶ್ವರನ ದೇವಾಲಯಕ್ಕೆ ಇಡಬೇಕೆಂಬ ಇಚ್ಛೆಯನ್ನೊಂದಿ ಶ್ರೀ ಶೃಂಗೇರಿ ಶಂಕರಾಚಾರ್ಯ ಸ್ವಾಮಿಗಳ ಸಲಹೆಯನ್ನು ಕೇಳಿದ ತರುವಾಯ, ಶ್ರೀಗಳು ದೇವಸ್ಥಾನಕ್ಕೆ ಶ್ರೀ ಚಾಮರಾಜೇಶ್ವರ ಎಂಬ ಹೆಸರನ್ನು ಸೂಚಿಸಿದರಂತೆ. ಅಂದಿನಿಂದಲೂ ಈ ದೇವಾಲಯಕ್ಕೆ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ ಎಂಬ ಹೆಸರೇ ರೂಢೀಗತವಾಗಿ ಬಂದಿದೆ. ಇಲ್ಲಿ ರಕ್ತವರ್ಣದ ನರ್ಮದಾಲಿಂಗವು ನೊಂದವರ ಬಾಳಿನ ನಂದಾದೀಪವಾಗಿ ಭಕ್ತರನ್ನು ಆಕರ್ಷಿಸುತ್ತಿದೆ.
ಇದನ್ನೂ ಓದಿ: ಚಾಮರಾಜನಗರದ ಕರಿವರದರಾಜ ಸ್ವಾಮಿಬೆಟ್ಟಕ್ಕೆ ಬನ್ನಿ… ಇಲ್ಲಿ ಮನಶಾಂತಿ ಖಚಿತ!
ಈ ದೇವಾಲಯದಲ್ಲಿ ಶ್ರೀ ಚಾಮರಾಜೇಶ್ವರ ಮೂಲ ದೇವರ ಎಡಭಾಗದಲ್ಲಿ, ಪಾರ್ವತಿ ವಿಗ್ರಹ ಶ್ರೀ ಕೆಂಪನಂಜಾಂಬ ಎಂಬ ಹೆಸರಿನಿಂದ ಕಂಗೊಳಿಸುತ್ತಿದೆ. ಮೂಲ ದೇವರ ಬಲಭಾಗದಲ್ಲಿ ಸುಂದರ ಶಿಲ್ಪ ಶಾಸ್ತ್ರಗಳಿಂದ ರಚಿತವಾಗಿ ಶಕ್ತಿರೂಪಿಯು ಯದುಕುಲದ ಆದಿ ದೇವಿಯು ಆದ ಶ್ರೀ ಚಾಮುಂಡೇಶ್ವರಿ ಅಮ್ಮನ ವಿಗ್ರಹ ವಿಶೇಷ ಅಲಂಕಾರಗಳಿಂದ ರಾರಾಜಿಸುತ್ತಿದೆ. ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಾಲಯವು ಪೂರ್ವ ಭಾಗದಲ್ಲಿ ಪಂಚಕಲಶಗಳೊಂದಿಗೆ ಮಹಾ ಗೋಪುರ, ದ್ವಾರ ದಕ್ಷಿಣಕ್ಕೆ ಸುಂದರಮೂರ್ತಿ, ಪಶ್ಚಿಮದ ಕೈಸಾಲಿಯಲ್ಲಿ ಏಕ ಸಹಸ್ರಲಿಂಗಗಳು, ಉತ್ತರದ ಕೈಸಾಲೆಯಲ್ಲಿ ಏಕ ವಿಶಂತಿ ಲೀಲಾ ಮೂರ್ತಿಗಳನ್ನು ಒಳಗೊಂಡಿದೆ.
ಮೂಲ ದೇವರ ಮುಂಭಾಗದಲ್ಲಿ ಹತ್ತು ಅಡಿ ಉದ್ದದ ವೃಷಭ ವಿಗ್ರಹವಿದೆ. ದೇವರ ಸನ್ನಿಧಿಗೆ ಒಪ್ಪಿಸಿರುವ ಬೆಲೆಬಾಳುವ ದೇವಲಾಂಕೃತ ಪದಾರ್ಥಗಳು, ಪೂಜಾ ಉಪಕರಣಗಳು, ಪಾಲ್ಗುಣ ಮಾಸದಲ್ಲಿ ಉತ್ಸವ ನಡೆಯುವುದಕ್ಕೆ ರಥ ಮುಂತಾದವುಗಳು ಬಗೆ ಬಗೆಯ ಬಣ್ಣದ ವಾಹನಗಳು, ಪಲ್ಲಕ್ಕಿ ಛತ್ರಿ ಚಾಮರಗಳಿವೆ. ಈ ದೇವಾಲಯವು ತ್ರಿಕಾಲ ಪೂಜಿತವಾದದ್ದಾಗಿದೆ. ಇಲ್ಲಿ ಜೇಷ್ಠ ಮಾಸದಲ್ಲಿ ಗಿರಿಜಾ ಕಲ್ಯಾಣವು, ಆಷಾಢ ಮಾಸದಲ್ಲಿ ರಥೋತ್ಸವಗಳು ನಡೆಯುತ್ತವೆ.
ಇದನ್ನೂ ಓದಿ: ಬೇಡಿದ್ದನ್ನು ಕರುಣಿಸುವ ತುಳುನಾಡಿನ ದೈವಗಳಿಗೆ ಕೈಮುಗಿಯೋಣ.. ಇಲ್ಲಿರುವ ದೈವಗಳೆಷ್ಟು?
ಶ್ರೀ ಚಾಮರಾಜೇಶ್ವರ ಸ್ವಾಮಿಗೆ ನಿತ್ಯೋತ್ಸವ, ಪಕ್ಷೋತ್ಸವ, ಮಹೋತ್ಸವ, ಬ್ರಹ್ಮೋತ್ಸವ, ರಥೋತ್ಸವ, ಕೃತಿಕೋತ್ಸವ, ಮುಂತಾದ ಉತ್ಸವಗಳು ನಡೆಯಲಿದ್ದು, ಎಲ್ಲಾ ಜಾತಿ ಜನಾಂಗದ ಪಟ್ಟಣದ ಹಾಗೂ ಅಕ್ಕಪಕ್ಕದ ಗ್ರಾಮಗಳ ಯಜಮಾನರುಗಳು ಮತ್ತು ಮುಖಂಡರುಗಳು ಒಗ್ಗಟ್ಟಾಗಿ ಈ ರಥೋತ್ಸವವನ್ನು ನಡೆಸಿಕೊಡುತ್ತಾರೆ.
ಇದೇ ಸಂದರ್ಭದಲ್ಲಿ ಶ್ರೀ ಚಾಮರಾಜೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ಜುಲೈ 10ರಂದು ಚಂದ್ರು ಮೆಲೋಡಿ ಅವರು ಭಕ್ತಿರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಜಿಲ್ಲೆಗೆ 11ರಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ರಂಗವಾಹಿನಿ ಸಂಯುಕ್ತ ಆಶಯದಲ್ಲಿ ಮೋಹಿನಿ ಭಸ್ಮಾಸುರ ಯಕ್ಷಗಾನ ಮತ್ತು ಜಿಲ್ಲೆಯ ಗಾಯಕ ಗಾಯಕಿರಿಂದ ಹಾಡು ಬಾ ಕೋಗಿಲೆ ಎಂಬ ವಿಶೇಷ ಭಕ್ತಿ ಗೀತೆಗಳ ಪ್ರದರ್ಶನವನ್ನು ಏರ್ಪಡಿಸಿದೆ. ಈ ರಥೋತ್ಸವಕ್ಕೆ ತಾವೆಲ್ಲರೂ ಬನ್ನಿ ಭಾಗವಹಿಸಿ ಸಂಭ್ರಮವನ್ನು ಕಣ್ತುಂಬಿಕೊಳ್ಳಿ.
ಇದನ್ನೂ ಓದಿ: ನಾಡದೇವತೆಯ ನೆಲೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಬನ್ನಿ.. ತಾಯಿಗೆ ನಮೋ ಎನ್ನಿ