LatestLife style

ನಾವೆಲ್ಲರೂ ದೇಹದ ಆರೋಗ್ಯ ಮಾತ್ರವಲ್ಲ.. ಮನಸ್ಸಿನ ಆರೋಗ್ಯಕ್ಕೂ ಒತ್ತು ನೀಡಬೇಕು… ಏಕೆ ಗೊತ್ತಾ?

ನಾವು ದೇಹದ ಆರೋಗ್ಯದ ಬಗ್ಗೆ ಬಹಳಷ್ಟು ಕಾಳಜಿ ವಹಿಸುತ್ತೇವೆ. ಅದು ಸದಾ ಆರೋಗ್ಯಕರವಾಗಿ ಇರುವಂತೆ ನೋಡಿಕೊಳ್ಳುತ್ತೇವೆ. ಆದರೆ ಎಲ್ಲೋ ಒಂದು ಕಡೆ ಸಣ್ಣ, ಪುಟ್ಟ ವಿಚಾರಕ್ಕೂ ಮನಸ್ಸನ್ನು ಕೆಡಿಸಿಕೊಂಡು ಅದನ್ನು ಅನಾರೋಗ್ಯಕ್ಕೆ ತಳ್ಳಿ ಬಿಡುತ್ತೇವೆ. ಮನಸ್ಸನ್ನು ಆಹ್ಲಾದಕರವಾಗಿರುವಂತೆ ನೋಡಿಕೊಳ್ಳುವಲ್ಲಿ ಸೋಲುತ್ತಿದ್ದು, ಇಲ್ಲಸಲ್ಲದ ವಿಚಾರಗಳನ್ನೆಲ್ಲ ತುಂಬಿಕೊಂಡು ಒದ್ದಾಡುತ್ತಿರುತ್ತೇವೆ.. ಹೀಗಾಗಿಯೇ ಬಹಳಷ್ಟು ಜನ ದೈಹಿಕವಾಗಿ ಆರೋಗ್ಯವಾಗಿದ್ದರೂ ಮಾನಸಿಕ ತುಮುಲಗಳಿಂದ ಬಳಲುತ್ತಿರುತ್ತಾರೆ. ಕ್ರಮೇಣ ಇದು ಅವರ ಆರೋಗ್ಯದ ಮೇಲೆಯೂ ಪರಿಣಾಮ ಬೀರಲಾರಂಭಿಸುತ್ತದೆ.

ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಾದ ವಿಚಾರ ಏನೆಂದರೆ? ದೇಹದ ಆರೋಗ್ಯದ ಜತೆಗೆ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಜಾಣ್ಮೆಯನ್ನು ನಾವು ಬೆಳೆಸಿಕೊಳ್ಳದೆ ಹೋದರೆ ನಮ್ಮ ಅಮೂಲ್ಯ ಕ್ಷಣಗಳನ್ನು ಸುಖವಾಗಿ ಕಳೆಯಲು ಸಾಧ್ಯವಾಗುವುದಿಲ್ಲ. ಇವತ್ತು ಎಲ್ಲರೂ ಒಂದಲ್ಲ ಒಂದು ಕಾರಣಕ್ಕೆ ಒತ್ತಡದಲ್ಲಿ ಬದುಕುತ್ತಿದ್ದಾರೆ. ಆ ಒತ್ತಡಗಳು ಕೇವಲ ದೇಹದ ಮೇಲೆ ಮಾತ್ರವಲ್ಲ ಮನಸ್ಸಿನ ಮೇಲೆಯೂ ಪರಿಣಾಮ ಬೀರುತ್ತಿದೆ. ಹೀಗಾಗಿಯೇ ಬಹಳಷ್ಟು ಜನರ ವಿಚಿತ್ರವಾಗಿ ವರ್ತಿಸುವುದನ್ನು ನಾವು ಕಾಣಬಹುದಾಗಿದೆ.

ನಮ್ಮ ದೇಹವನ್ನು ಹೇಗೆ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತೇವೆಯೋ ಹಾಗೆಯೇ ಮನಸ್ಸನ್ನು ಕೂಡ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಬೇಕು ಎಂಬುದು ತುಂಬಾ ಜನಕ್ಕೆ ಗೊತ್ತೇ ಇಲ್ಲ. ಹೀಗಾಗಿಯೇ ಅವರು ಚಿಕ್ಕ ವಿಚಾರಕ್ಕೆ ಸಿಡುಕಾಡುವುದು, ಕೂಗಾಡುವುದು, ಜನರೊಂದಿಗೆ ಬೆರೆಯದೆ ಏನೋ ತಲೆಮೇಲೆ ಹೊತ್ತುಕೊಂಡವರಂತೆ ವರ್ತಿಸುವುದು, ಸದಾ ಚಿಂತೆಯಲ್ಲಿರುವಂತೆ ಕಾಣಿಸುವುದು, ಕೆಲವೊಮ್ಮೆ ಏನನ್ನೂ ಮಾಡದೆ ಯಾರೊಂದಿಗೆ ಬೆರೆಯದೆ ಪ್ರತ್ಯೇಕವಾಗಿ ಇರುವುದು ಹೀಗೆ ಏನೇನೋ ವರ್ತನೆಗಳನ್ನು ತೋರ್ಪಡಿಸುತ್ತಿರುತ್ತಾರೆ.

ಇದನ್ನೂ ಓದಿ: ಯಶಸ್ಸು ಪುಕ್ಕಟೆ ಸಿಗುವ ವಸ್ತುವಲ್ಲ..  ಅದು ನಿರಂತರ ಶ್ರಮದ ಫಲ…

ನಿಜ ಹೇಳಬೇಕೆಂದರೆ ದೇಹಕ್ಕೆ ಉಂಟಾಗುವ ತೊಂದರೆಗಳು ಹೊರ ಪ್ರಪಂಚಕ್ಕೆ ತಿಳಿಯುತ್ತದೆ. ಅದಕ್ಕೆ ಚಿಕಿತ್ಸೆಯನ್ನು ಕೂಡ ನೀಡಬಹುದು. ಆದರೆ ಅನಾರೋಗ್ಯಕರ ಮನಸ್ಸು ಹೊರ ಜಗತ್ತಿಗೆ ಕಾಣುವುದಿಲ್ಲ. ಅದರಿಂದ ಉಂಟಾಗುವ ಪರಿಣಾಮ ಕೇವಲ ಅವರು ಮಾತ್ರವಲ್ಲದೆ, ಅವರ ಸಂಸಾರ.. ಅದನ್ನು ಮೀರಿ ಕೆಲವೊಮ್ಮೆ ಸುತ್ತಮುತ್ತಲಿನ ಜನರ ಮೇಲೆ ಬೀರಿದರೂ ಅಚ್ಚರಿಪಡಬೇಕಾಗಿಲ್ಲ. ಕೆಟ್ಟ ಮನಸ್ಸು ಪ್ರತಿಯೊಂದನ್ನೂ ಕೆಟ್ಟದಾಗಿಯೇ ನೋಡುತ್ತದೆ. ಹಾಗಾಗಿ ನಾವು ಮಾಡುತ್ತಿರುವುದು ಸರಿ ಎಂಬ ಮನೋಭಾವ ಬಹಳಷ್ಟು ಅನಾಹುತಗಳಿಗೆ ಎಡೆಮಾಡಿಕೊಡುತ್ತದೆ. ಕೆಲವೊಮ್ಮೆ ಇಂತಹವರು ಸಮಾಜಕ್ಕೆ ಕಂಟಕರಾಗಿ ಭಾರೀ ಶಿಕ್ಷೆಗೆ ಗುರಿಯಾಗಬಹುದು.  ಆದುದರಿಂದ ನಮ್ಮ ಮನಸ್ಸನ್ನು ಸದಾ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುವತ್ತ ಹೆಚ್ಚು ಗಮನಹರಿಸಬೇಕಾಗಿದೆ.

ಇದನ್ನೂ ಓದಿ: ಕಾಯಕವೇ ಕೈಲಾಸ…. ನಾವು ನಮಗಾಗಿ ಕೆಲಸ ಮಾಡುವುದನ್ನು ಕಲಿಯೋಣ

ಹಾಗೆನೋಡಿದರೆ ಇಂದಿನ ಒತ್ತಡದ ಬದುಕಿನಲ್ಲಿ ಸದಾ ಒಂದಲ್ಲ ಒಂದು ರೀತಿಯ ಉದ್ವೇಗಗಳಿಗೆ ಒಳಗಾಗುವ ನಾವು ದೇಹಕ್ಕಿಂತ ಹೆಚ್ಚಿನ ಕೆಲಸವನ್ನು ಮೆದುಳಿಗೆ ನೀಡುತ್ತೇವೆ. ಮನಸ್ಸು ಸದಾ ಒತ್ತಡದಲ್ಲಿರುತ್ತದೆ. ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಲಾಗದೆ ಒದ್ದಾಡುತ್ತಿರುತ್ತೇವೆ. ಜತೆಗೆ ನಾವು ಮಾಡಿಕೊಳ್ಳುವ ಕಮಿಟ್ ಮೆಂಟ್ ಗಳು ಕೆಲವೊಮ್ಮೆ ಸಂಕಷ್ಟ ದೂಡಿ ಬಿಡುತ್ತದೆ. ಅದಕ್ಕಿಂತ ಹೆಚ್ಚಾಗಿ ಏನೇನೋ ಆಲೋಚನೆಗಳನ್ನು ಮಾಡಿ ಅದು ನಡೆಯದೆ ಹೋದಾಗಲೂ ನಿರಾಸರಾಗಿ ಬಿಡುತ್ತೇವೆ. ಈ ವೇಳೆ ನಮಗೆ ಗೊತ್ತಿಲ್ಲದಂತೆ ಚಿಂತೆ ಆವರಿಸಲಾರಂಭಿಸಿ ಬಿಡುತ್ತದೆ.

ಇದನ್ನೂ ಓದಿ: ಒತ್ತಡದ ಬದುಕಿನಲ್ಲಿ ಮರೀಚಿಕೆಯಾಗುತ್ತಿರುವ ಮಾನಸಿಕ ನೆಮ್ಮದಿ…

ಇನ್ನು ಕೆಲಸದ ವಿಚಾರದಲ್ಲಿಯೂ ಅಷ್ಟೇ.. ಕೆಲವರ ಕೆಲಸವೇ ಹಾಗಿದೆ. ಅದನ್ನು ಆಫೀಸಿನಲ್ಲಿಯೇ ಬಿಟ್ಟು ಮನೆಗೆ ಹೋಗುವಂತಿಲ್ಲ. ಮನೆಗೆ ಹೋದ ನಂತರವೂ ಅದರ ಸುತ್ತ ಗಿರಿಕಿ ಹೊಡೆಯಬೇಕಾದ ಅನಿವಾರ್ಯತೆ. ಬಹಳಷ್ಟು ಮಂದಿಯ ಕೆಲಸಕ್ಕೆ ನಿಗದಿತ ಸಮಯವಿಲ್ಲ. ಎಲ್ಲಿಯೇ ಇದ್ದರೂ ಕೆಲಸದ ನಂಟು ಇದ್ದೇ ಇರುತ್ತದೆ. ಹೀಗಾದಾಗ ಮನಸ್ಸು ಒತ್ತಡಕ್ಕೊಳಗಾಗುತ್ತದೆ. ಇದರಿಂದ ಕ್ರಮೇಣ ಮಾನಸಿಕ ಅಸ್ವಸ್ಥತೆಗೆ ಗುರಿಯಾದರೂ ಅಚ್ಚರಿಯಿಲ್ಲ. ಇಂತಹ ಒತ್ತಡಗಳ ಬದುಕು ನಡೆಸುವವರು ದಿನದಲ್ಲಿ ಕೆಲವು ಸಮಯವನ್ನಾದರೂ ಒತ್ತಡಗಳನ್ನು ದೂರವಿಟ್ಟು, ಪ್ರಶಾಂತ ವಾತಾವರಣದಲ್ಲಿದ್ದು ಮನಸ್ಸು ಹಗುರ ಮಾಡುವ ಪ್ರಯತ್ನ ಮಾಡಬೇಕಾಗುತ್ತದೆ.

ಇದನ್ನೂ ಓದಿ: ನಿಮಗೆ ಗೊತ್ತಾ ನಿಮ್ಮ ಬಯಕೆಗಳೇ ನಿಮಗೆ ವೈರಿಯಂತೆ… ಅದು ಹೇಗೆ? ಏಕೆ?..

ಆರಂಭದಿಂದಲೇ ನಾವು ಮನಸ್ಸಿನ ತುಂಬಾ ದುರ್ಭಾವನೆಗಳನ್ನು ತುಂಬಿಕೊಳ್ಳದೆ,  ತಪ್ಪು ಆವೇಗಗಳನ್ನು ಸಂಚಯಿಸಿಕೊಳ್ಳದೆ ಬೇರೆಯವರ ಬಗ್ಗೆ ಅಸೂಯೆಪಡದೆ ನಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾ ಇತರರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ ಅಸಂಗತ್ವವನ್ನೂ, ಕ್ಷಮೆಯನ್ನೂ, ವಿನಯವನ್ನೂ ರೂಢಿಸಿಕೊಳ್ಳುತ್ತಾ, ನಮ್ಮಲ್ಲಿ ಮಾನವೀಯತೆಯನ್ನು ಬೆಳೆಸುವ ಪ್ರಯತ್ನ ಮಾಡಿದರೆ ಮನಸ್ಸು ಕಲ್ಮಶವಾಗುವುದಿಲ್ಲ. ಬದಲಿಗೆ ಮೃದುವಾಗುತ್ತದೆ. ತಕ್ಷಣಕ್ಕೆ ಕಾಠಿಣ್ಯ ರೂಪ ತಾಳದ ಕಾರಣ ದಿಢೀರ್ ಆಗಿ ನಮ್ಮಿಂದಾಗುವ ಆಚಾತುರ್ಯವನ್ನು ತಪ್ಪಿಸಲು ಸಾಧ್ಯವಾಗುತ್ತದೆ.

ನಮ್ಮಲ್ಲಿ ಮಾನವೀಯ ಸಂಬಂಧಗಳ ಬಗ್ಗೆ ಅರಿವು ಮೂಡಬೇಕು. ನಾನು ಮತ್ತೊಬ್ಬನಿಗೆ ನೋವು ನೀಡಿದೆನಲ್ಲಾ ಎಂಬ ಪಶ್ಚಾತಾಪದ ಮನೋಭಾವ ಬರಬೇಕು. ಬದಲಾಗಿ ಆತನಿಗೆ ತಕ್ಕ ಶಾಸ್ತಿ ಮಾಡಿದೆ. ಅವನು ಇರುವಷ್ಟು ದಿನ ನೆನಪಿಸಿಕೊಳ್ಳಬೇಕು ಹಾಗೆ ಮಾಡಿದೆ ಎಂಬ ಮನೋಭಾವ ತಕ್ಷಣಕ್ಕೆ  ನಾಯಕನಂತೆ ಪ್ರತಿಬಿಂಬಿಸಬಹುದಾದರೂ, ನಂತರದ ಎಲ್ಲಾ ಕೆಡುಕುಗಳ ಫಲವನ್ನು ನಾವೇ ಅನುಭವಿಸಬೇಕಾಗುತ್ತದೆ. ಮೊದಲು ನಮ್ಮಲ್ಲಿ ಕ್ಷಮಾಗುಣ ಬೆಳೆಯಬೇಕು ಅನ್ನೋದಕ್ಕಿಂತ ಬೆಳೆಸಬೇಕು.

ಇದನ್ನೂ ಓದಿ: ನಮ್ಮೊಳಗೆ  ಸದಾ ಒಳ್ಳೆಯ ಕಲ್ಪನೆಗಳಿರಲಿ.. ಅದು ನಮ್ಮನ್ನು ಸುಖವಾಗಿಡುತ್ತದೆ..

ಮಾತೆ ಶಾರದಾದೇವಿಯವರ ಪ್ರಕಾರ ಕ್ಷಮಾಗುಣವೇ ತಪಸ್ಸಂತೆ. ಬೈಬಲಿನ ಉಪದೇಶದಲ್ಲಿ ಕ್ರಿಸ್ತ ಹೇಳುತ್ತಾನೆ ನೀನು ಪೂಜಾ ವೇದಿಕೆಗೆ ಕಾಣಿಕೆ ತಂದಾಗ ನೆನಪಿಡು ನಿನ್ನ ಸೋದರನಿಗೆ ನಿನ್ನ ಬಗ್ಗೆ ಏನಾದರೂ ಮನಸ್ತಾಪವಿರುವ ಪಕ್ಷಕ್ಕೆ ನಿನ್ನ ಉಡುಗೊರೆಯನ್ನು ಅಲ್ಲಿಯೇ ಇಟ್ಟು ಹೊರಟು ಹೋಗು. ಮೊದಲು ಸೋದರನೊಂದಿಗೆ ಹೊಂದಾಣಿಕೆ ಮಾಡಿಕೋ ಆ ನಂತರ ಬಂದು ನಿನ್ನ ಕಾಣಿಕೆ ಒಪ್ಪಿಸು. ಯಾರನ್ನೋ ನೋಯಿಸಿ, ತೊಂದರೆ ನೀಡಿ, ಕಣ್ಣೀರು ಹಾಕಿಸಿ ತಂದ ಹಣದಲ್ಲಿ ದೇವರಿಗೆ ಹರಕೆ ಹಾಕಿದರೆ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.

ಹರಕೆ ಹಾಕಿದ್ದೇನೆ ದೇವರು ಕ್ಷಮಿಸಿದ್ದಾನೆ ಎಂಬುದು ತಾತ್ಕಾಲಿಕ ನೆಮ್ಮದಿ ನೀಡಬಹುದು. ಆದರೆ ಕ್ರಮೇಣ ನಾವು ಮಾಡುವ ಎಲ್ಲ ಕರ್ಮಗಳಿಗೂ ದೇವರು ಕಂದಾಯ ಕಟ್ಟಿಸಿಕೊಳ್ಳದೆ ಬಿಡುವುದಿಲ್ಲ. ಆದುದರಿಂದ  ನಾವು ಗಮನಿಸಬೇಕಾದ ವಿಚಾರ ಏನೆಂದರೆ? ನಮ್ಮಲ್ಲಿರುವ ದ್ವೇಷ, ಅಸೂಯೆ, ಮತ್ಸರ ಎಲ್ಲವೂ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಅನಾರೋಗ್ಯಕರವಾದ ಹಾಗೂ ಛಿದ್ರವಾದ ವಿಚಾರಗಳು ನಮ್ಮ ಮನಸ್ಸನ್ನು ಪ್ರವೇಶಿಸದಂತೆ ಎಚ್ಚರವಹಿಸಬೇಕಾಗಿದೆ. ಅಡೆ-ತಡೆಗಳನ್ನು ಭೇದಿಸಿ ಬರುವ ಬಯಕೆಗಳು, ಗೊಂದಲಗಳನ್ನು ತಡೆದು, ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸಬೇಕು. ಸಾಧ್ಯವಾದರೆ ಧ್ಯಾನದಲ್ಲಿ ತೊಡಗಬೇಕು.

ಇದನ್ನೂ ಓದಿ: ಕೌಶಲತೆ ನಿಮ್ಮಲ್ಲಿದ್ದರೆ  ಕೆಲಸ ಸಿಕ್ಕೇ ಸಿಗುತ್ತದೆ… ಮೊದಲು ಕೆಲಸ ಸಂಪಾದಿಸಿ…

ಯಾವುದು ಪರಿಶುದ್ಧ? ಯಾವುದು ಮನಸ್ಸಿಗೆ ಹಿತ ನೀಡಬಲ್ಲದೋ ಅದರ ಕಡೆಗೆ ಮನಸ್ಸನ್ನು ಕೊಂಡೊಯ್ಯಬೇಕು. ದಾನ, ಕರ್ತವ್ಯಪರತೆ, ನಿರ್ದಿಷ್ಟವಾದ ಹಾಗೂ ಸಾರ್ವತ್ರಿಕವಾದ ವ್ರತಗಳ ಆಚರಣೆ, ಸತ್ಕಾರ್ಯ ನಿರ್ವಹಣೆ, ಒಟ್ಟಾರೆ ಭಗವದ್ ಚಿಂತನೆಗೆ ಒತ್ತು ನೀಡಿದರೆ ಆರೋಗ್ಯಕರ ಮನಸ್ಸು ನಮ್ಮದಾಗುವುದರಲ್ಲಿ ಸಂಶಯವಿಲ್ಲ. ಇಂತಹ ಆರೋಗ್ಯಕರ ಮನಸ್ಸುಗಳು ನಮ್ಮನ್ನು ಒಳ್ಳೆಯ ದಾರಿಯಲ್ಲಿ ಕರೆದೊಯ್ಯುವುದರಿಂದ ಹಲವು ರೀತಿಯ ಕಷ್ಟ, ಕೋಟಲೆಗಳಿಂದ ನಮ್ಮನ್ನು ಪಾರು ಮಾಡುತ್ತವೆ. ಅಷ್ಟೇ ಅಲ್ಲದೆ, ಮನಸ್ಸು ಮತ್ತು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವ ಶಕ್ತಿ ನೀಡುತ್ತದೆ.

 

B M Lavakumar

admin
the authoradmin

Leave a Reply