DistrictLatest

ಬಸವ ಮಾರ್ಗ ಸಂಸ್ಥೆಯಿಂದ ಪ್ರತಿಭಾ ಕಾರಂಜಿ.. ಸ್ಪರ್ಧೆಯಲ್ಲಿ ಭಾಗವಹಿಸಿ ಗಮನಸೆಳೆದ ಮಕ್ಕಳು

ಮೈಸೂರು: ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ವಿಕಸ ಮಾಡುವ ನಿಟ್ಟಿನಲ್ಲಿ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರ ಹಾಗೂ ಕುಕ್ಕರಹಳ್ಳಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ವತಿಯಿಂದ ನಗರದ ಸರಸ್ವತಿ ಪುರಂನಲ್ಲಿರುವ ಬಸವಮಾರ್ಗ ವಸತಿನಿಲಯದಲ್ಲಿ ಪ್ರತಿಭಾ ಕಾರಂಜಿ’ ಮತ್ತು ಪಾಲಕರ ಸಭೆ ನಡೆಯಿತು.

ರಂಗೋಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಚರ್ಚಾ ಸ್ಪರ್ಧೆ, ಜ್ಞಾಪಕ ಶಕ್ತಿ ಹೆಚ್ಚಿಸುವ ಸ್ಪರ್ಧೆಯಲ್ಲಿ ಪಾಲಕರು ಹಾಗೂ ಶಾಲೆಯ ಶಿಕ್ಷಕರೊಂದಿಗೆ ಮಕ್ಕಳು ಉತ್ಸುಕವಾಗಿ ಬೆಳಗ್ಗೆಯಿಂದ ಸಂಜೆಯ ವರೆಗೂ  ಪಾಲ್ಗೊಂಡು,  ಸಂಭ್ರಮಿಸಿದರು.  ರಂಗೋಲಿ ಸ್ಪರ್ಧೆಗಿಳಿದ ವಿದ್ಯಾರ್ಥಿನಿಯರು ಬಣ್ಣ, ಬಣ್ಣದ ರಂಗೋಲೆಯಿಂದ ವಸತಿ ನಿಲಯದ ಆವರಣವನ್ನು ಕಂಗೊಳಿಸುವಂತೆ ಮಾಡಿದರು. ತಾಮುಂದು, ನಾಮುಂದು ಎನ್ನುವಂತೆ ಒಬ್ಬರಿಗೊಬ್ಬರು ಸ್ಪರ್ಧೆ ನೀಡಿದರು. ಇನ್ನು ತಮ್ಮದೆಯಾದ ಕಲ್ಪನೆಯಲ್ಲಿ ವಿಭಿನ್ನವಾಗಿ ಚಿತ್ರಗಳನ್ನು ಬಿಡಿಸಿದ ವಿದ್ಯಾರ್ಥಿಗಳು ಎಲ್ಲರು ಉಬ್ಬೇರಿಸುವಂತೆ ಮಾಡಿದರು. ಪರಿಸರ, ವಿಜ್ಞಾನ, ದೇವರು ಸೇರಿದಂತೆ ನಾನಾ ವಿಷಯ ವಸ್ತುಗಳು ಸ್ಪರ್ಧೆಯ ರೂಪಕದಲ್ಲಿ ಅಡಕವಾಗಿತ್ತು.

ಜ್ಞಾಪಕ ಶಕ್ತಿ ಹೆಚ್ಚಿಸುವ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶನ ಮಾಡಿದರು. ಕೇವಲ ಎರಡು ನಿಮಿಷದಲ್ಲಿ ನೋಡಿದ 80 ಕ್ಕೂ ಹೆಚ್ಚು ವಸ್ತುಗಳನ್ನು  ಕೆಲವೇ ಕೆಲವು ನಿಮಿಷಗಳಲ್ಲಿ ಬರೆದು ನೋಡುಗರನ್ನು ಆಕರ್ಷಚಕಿತರನ್ನಾಗಿ ಮಾಡಿದರು. ಇನ್ನೂ ಚರ್ಚಾ ಸ್ಪರ್ಧೆಗಳಿದ ವಿದ್ಯಾರ್ಥಿಗಳು ತಮ್ಮದೆ ಆದ ಭಾಷಾ ಪ್ರಾವಿಣ್ಯತೆ, ವಿಷಯ ಜ್ಞಾನದ ಮೂಲಕ ಸೂಜಿಗಲ್ಲಿನಂತೆ  ತಮ್ಮತ್ತ ಸೆಳೆದರು. ತಮ್ಮ ಮಕ್ಕಳ ಪ್ರತಿಭೆ ಕಂಡ ಪಾಲಕರು ಬೆನ್ನುತಟ್ಟಿ ಪ್ರೋತ್ಸಾಹ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದರು.

ಪಾಲಕರ ಸಭೆಯಲ್ಲಿ ಮಾತನಾಡಿದ ಬಸವಮಾರ್ಗ ಫೌಂಡೇಷನ್ ಅಧ್ಯಕ್ಷ ಎಸ್. ಬಸವರಾಜು, ಶ್ರೀ ಶಿವಕುಮಾರ ಸ್ವಾಮೀಜಿ ಅವರು ಹೇಳಿದಂತೆ ಶ್ರೇಷ್ಠ ಸಂಕಲ್ಪ ಹೊಂದಿರುವ ವ್ಯಕ್ತಿಗೆ ಪ್ರಕೃತಿಯೇ ನೂರಾರು ಜನರನ್ನು ಸೇರಿಸುತ್ತೆ. ನನಗೆ ಪ್ರಕೃತಿಯೇ ಸಹಕಾರಿಯಾಗಿ ಎಲ್ಲರನ್ನು ಸೇರಿಸಿ ಕೊಟ್ಟಿದೆ, ಬಸವಮಾರ್ಗ ವಸತಿ ನಿಲಯದಲ್ಲಿ ಉಳಿಯುತ್ತಿರುವ ಮಕ್ಕಳನ್ನು ನಾನು ನನ್ನ ಮಕ್ಕಳಂತೆ ನೋಡುಲಾಗುತ್ತಿದೆ. ಇಲ್ಲಿ ಕಲಿತ ಮಕ್ಕಳು ನೌಕರರಾಗಬಾರದು, ಒಬ್ಬೊಬ್ಬರು ಉದ್ಯಮಿಗಳಾಗಿ ನೂರಾರು ನೌಕರರನ್ನು ತಮ್ಮಲ್ಲಿ ಇರಿಸಿಕೊಳ್ಳಬೇಕು. ಇಂದಿನ ಬಡ ಮಕ್ಕಳು ಶ್ರೀಮಂತರಾಗಿ ಜೀವನ ಸಾಗಿಸಬೇಕು ಎನ್ನುವುದೇ ನಮ್ಮ ಮಹಾ ಆಶಯ ಆಗಿದೆ. ಈ ನಿಟ್ಟಿನಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಕೌಶಲ ಕಲಿಕೆಗೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.

ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮಹತ್ವ ಹಿರಿಯದಾಗಿರುತ್ತದೆ. ಪೋಷಕರ ಬೆಂಬಲವಿಲ್ಲದೆ ಯಾವುದೇ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ. ಪೋಷಕರು ತಮ್ಮ ಪಾತ್ರವನ್ನು ಸಮರ್ಪಕವಾಗಿ ನಿಭಾಯಿಸಿದರೆ ಮಕ್ಕಳ ಭವಿಷ್ಯ ಕಟ್ಟಬಹುದು. ಮಕ್ಕಳು ಖಂಡಿತವಾಗಿ ಭವಿಷ್ಯದಲ್ಲಿ ದೊಡ್ಡ ವ್ಯಕ್ತಿಗಳಾಗಿ ಬೆಳೆಯುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದಲ್ಲಿ ಮುನ್ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದ್ದರು.

ಮೈಸೂರು ಮಹಾರಾಜ ಕಾಲೇಜಿನ ಪ್ರತಿಕೋದ್ಯಮ ವಿಭಾಗದ ಉಪನ್ಯಾಸಕಿ ಡಾ.ಶ್ವೇತಾ ಹನ್ಸ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಅಡಕವಾಗಿದೆ. ಅದನ್ನು ಗುರುತಿಸಿ ಪ್ರೋತ್ರಾಹ ನೀಡುವುದು ಶಿಕ್ಷಕರು ಮತ್ತು ಪಾಲಕರ ಕರ್ತವ್ಯವಾಗಿದೆ. ವ್ಯಾಸಂಗದ ಹಂತದಲ್ಲೇ ಮಕ್ಕಳಿಗೆ ಈ ರೀತಿಯ ವೇದಿಕೆ ಕಲ್ಪಿಸಿಕೊಡುವುದರಿಂದ ಅವರಲ್ಲಿ ಭಯ ನಿವಾರಣೆಯಾಗಿ ತಮ್ಮ ಇಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ ಎಂದು ತಿಳಿಸಿದರು.

ಚಿತ್ರ ಕಲಾವಿದ ಮಂಜುನಾಥ್ ಮಾತನಾಡಿ, ಸರ್ಕಾರಿ ಶಾಲೆ ಮಕ್ಕಳು ಎಂದ ಕೂಡಲೇ ಕೆಲವರಲ್ಲಿ ಪಠ್ಯ, ಪಠ್ಯೇತರ ಚಟುವಟಿಕೆಯಲ್ಲಿ ಹಿಂದೆ ಉಳಿದಿರುವ ಮಕ್ಕಳು ಎನ್ನುವ ಯೋಚನೆ ಬರುತ್ತದೆ. ಆದರೆ ಕುಕ್ಕರಹಳ್ಳಿ ಸರ್ಕಾರಿ ಶಾಲೆಯ ಮಕ್ಕಳು ಎಲ್ಲದರಲ್ಲೂ ಮುಂಚೂಣಿಯಲ್ಲಿದ್ದಾರೆ. ಇಂತಹ ವೇದಿಕೆಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.  ಕುಕ್ಕರಹಳ್ಳಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಂದ್ರು ಮಾತನಾಡಿದರು. ಅಕ್ಷರ ಫೌಂಡೇಷನ್ ಸಂಸ್ಥಾಪಕ ಸುನೀಲ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

admin
the authoradmin

Leave a Reply