ಈ ಭೂಮಿ ಮೇಲೆ ಖ್ಯಾತಿ ಮತ್ತು ಕುಖ್ಯಾತಿ ಎನ್ನುವುದು ಕೊನೆಯ ತನಕ ಉಳಿದು ಹೋಗಿ ಬಿಡುತ್ತದೆ. ಹಾಗೆಯೇ ಹೀರೋ ಮತ್ತು ವಿಲನ್ ಕಥೆಯೂ ಅಷ್ಟೇ… ರಾಮನಿರುವ ತನಕ ರಾವಣನೂ ಇರಲೇ ಬೇಕು… ಹೀಗಾಗಿಯೇ.. ಇವತ್ತಿಗೂ ಚಾಮರಾಜನಗರಕ್ಕೆ ಭೇಟಿ ನೀಡಿದವರು ಅದರಲ್ಲೂ ಕೊಳ್ಳೇಗಾಲದ ಅಂಚಿನ ಕಾಡುಗಳಲ್ಲಿ ಅಡ್ಡಾಡಿದವರು ವೀರಪ್ಪನನ್ನು ನೆನಪು ಮಾಡಿಕೊಳ್ಳದೆ ಬರಲು ಸಾಧ್ಯನಾ? ಖಂಡಿತಾ ಇಲ್ಲ.. ಇಂತಹ ವೀರಪ್ಪನ್ ಪಡೆದ ಬಲಿಗಳೆಷ್ಟು? ಆರಿಹೋದ ಮನೆಯ ದೀಪಗಳೆಷ್ಟು?
ವೀರಪ್ಪನ್ ಬಲಿ ಪಡೆದವರಲ್ಲಿ ಸಾಮಾನ್ಯ ಜನರಿಂದ ಹಿಡಿದು ಪೊಲೀಸ್, ಅರಣ್ಯ ಸಿಬ್ಬಂದಿ, ಅಧಿಕಾರಿಗಳ ತನಕ ಎಲ್ಲ ತರದವರು ಇದ್ದಾರೆ. ಇವರ ನಡುವೆ ಇವತ್ತಿಗೂ ನೆನಪಾಗಿ ತುಂಬಾ ಕಾಡುವುದು ಐಎಫ್ ಎಸ್ ಅಧಿಕಾರಿ ಪಿ.ಶ್ರೀನಿವಾಸ್. ಹಾಗಾಗಿಯೇ ಅವರ ನೆನಪುಗಳನ್ನು ಅರಣ್ಯ ಇಲಾಖೆ ಚಿರವಾಗಿಸುವ ಕೆಲಸ ಮಾಡಿದೆ. ಅದು ನಿಜಕ್ಕೂ ಶ್ಲಾಘನೀಯ.. ಇವತ್ತಿನ ತಲೆ ಮಾರಿಗೆ ಅಂದಿನ ವೀರಪ್ಪನ್ ಬಗ್ಗೆ ಗೊತ್ತಿಲ್ಲದೆ ಇರಬಹುದು ಆದರೆ ಆತನ ಬಗ್ಗೆ ತಿಳಿದಾಗಲೆಲ್ಲ ಅವನಿಂದ ಹುತಾತ್ಮರಾದ ಪಿ.ಶ್ರೀನಿವಾಸ್ ಅವರ ಬಗ್ಗೆಯೂ ಕುತೂಹಲ ಮೂಡುತ್ತದೆ.
ಹಾಗೆನೋಡಿದರೆ ಕಾಡುಗಳ್ಳ ವೀರಪ್ಪನ್ ತನ್ನ ಜೀವಿತಾವಧಿಯಲ್ಲಿ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಅರಣ್ಯದಲ್ಲಿ ಮಾಡಿದ ಅಪರಾಧಗಳಿಗೆ ಲೆಕ್ಕವೇ ಸಿಗುವುದಿಲ್ಲ. ಆತನ ಕ್ರೌರ್ಯಕ್ಕೆ ಇಂದಿಗೂ ಸಾಕ್ಷಿಗಳು ಸಿಗುತ್ತವೆ. ಇವತ್ತು ಏನಾದರೂ ಕೊಳ್ಳೇಗಾಲ ಅರಣ್ಯ ಇಲಾಖೆ ಕಚೇರಿಗೆ ತೆರಳಿದರೆ ಅಲ್ಲಿ ನಿಲ್ಲಿಸಲಾಗಿರುವ ಜೀಪು ಮತ್ತು ಐಎಫ್ ಎಸ್ ಅಧಿಕಾರಿ ಪಿ.ಶ್ರೀನಿವಾಸ್ ರವರ ಭಾವಚಿತ್ರ, ದಾಖಲೆಗಳು ಪತ್ರಗಳು, ಬರಹಗಳೆಲ್ಲವೂ ಗಮನಸೆಳೆಯುತ್ತವೆ. ಇವೆಲ್ಲವೂ ಹುತಾತ್ಮ ಶ್ರೀನಿವಾಸ್ ಅವರ ನೆನಪುಗಳನ್ನು ನಮ್ಮ ಮುಂದೆ ಎಳೆದು ತರುತ್ತಾ ಹೋಗುತ್ತವೆ.
ಅವರ ಜತೆಯಲ್ಲಿ ಕೆಲಸ ಮಾಡಿದವರು, ಸಂಬಂಧಿಕರು, ಹಿತ್ಯಷಿಗಳು ಹೀಗೆ ಹತ್ತಿರದಿಂದ ಬಲ್ಲವರು ಇಲ್ಲಿಗೆ ಬಂದರೆ ಅವರ ಕಣ್ಣಂಚಿನಲ್ಲಿ ನೀರು ಹರಿಯುವುದರಲ್ಲಿ ಎರಡು ಮಾತಿಲ್ಲ. ವಸ್ತುಸಂಗ್ರಹಾಲಯದತ್ತ ಹೆಜ್ಜೆ ಹಾಕಿದರೆ ನಮ್ಮ ಕಣ್ಣುಗಳು ಐಎಫ್ ಎಸ್ ಅಧಿಕಾರಿ ಪಿ.ಶ್ರೀನಿವಾಸ್ ಅವರ ಭಾವಚಿತ್ರ, ಅವರು ಚಾಲಿಸುತ್ತಿದ್ದ ಜೀಪು ಮತ್ತು ಅವರ ಪತ್ರಗಳು, ದಾಖಲೆಗಳು ಮತ್ತು ಬರಹಗಳ ಮೇಲೆಲ್ಲ ಹರಿದಾಡಿದಾಗ ಮನಸ್ಸು ಭಾರವಾಗುತ್ತದೆ. ಬದುಕು ಹೀಗೆನೇ ಅಲ್ವಾ?
ಕೊಳ್ಳೇಗಾಲ ಅರಣ್ಯ ಇಲಾಖೆ ಕಚೇರಿ ಒಂದು ಸಂಗ್ರಹಾಲಯವಾಗಿ ಹಲವು ವರ್ಷಗಳು ಕಳೆದಿವೆ ಆದರೆ ಅಲ್ಲಿಗೆ ತೆರಳಿದರಿಗೆ ಎಲ್ಲವೂ ಹೊಸ ಅನುಭವವನ್ನೇ ಹೊತ್ತು ತರುತ್ತದೆ ಎನ್ನುವುದು ಅಷ್ಟೇ ಸತ್ಯ. ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರನ್ನೂ ಮೊದಲಿಗೆ ಆಕರ್ಷಿಸುವುದು ಐಎಫ್ ಎಸ್ ಅಧಿಕಾರಿ ಪಿ.ಶ್ರೀನಿವಾಸ್ ಅವರು ಚಾಲಿಸುತ್ತಿದ್ದ ಜೀಪ್.. ಇದನ್ನು ನೋಡುತ್ತಿದ್ದಂತೆಯೇ ಪ್ರತಿಯೊಬ್ಬರನ್ನು ಆ ದಿನಗಳಿಗೆ ನೆನಪುಗಳು ಎಳೆದೊಯ್ಯುತ್ತವೆ.
ಇದನ್ನೂ ಓದಿ:ಶಿವನಸಮುದ್ರದಲ್ಲಿ ಕಾವೇರಿಯ ಜಲನರ್ತನ ನೋಡುವುದೇ ಕಣ್ಣಿಗೊಂದು ಹಬ್ಬ…
ಒಂದೆರಡು ದಶಕಗಳ ಹಿಂದೆ ಸದಾ ಸುದ್ದಿಯಲ್ಲಿರುತ್ತಿದ್ದ ಕಾಡುಗಳ್ಳ ವೀರಪ್ಪನ್ ಏನಾದರೊಂದು ಕುಕೃತ್ಯ ಎಸಗುವುದರೊಂದಿಗೆ ಸುದ್ದಿ ಮಾಡುತ್ತಿದ್ದುದಲ್ಲದೆ, ಅರಣ್ಯ ಮತ್ತು ಪೊಲೀಸ್ ಇಲಾಖೆಗೆ ಕಂಟಕವಾಗಿದ್ದನು. ಇಂತಹ ವೀರಪ್ಪನ್ ನಿಂದ ಹತರಾದರವರು ಈಗ ಇತಿಹಾಸಕ್ಕೆ ಸರಿದು ಹೋಗಿದ್ದಾರೆ. ವೀರಪ್ಪನ್ ಎಂತಹ ಕ್ರೂರಿ ಮತ್ತು ಕ್ರೌರ್ಯವನ್ನು ಹೇಗೆ ಮೆರೆದಿದ್ದ ಎಂಬುದು ಆತ ಮಾಡಿದ ಕೃತ್ಯಗಳನ್ನು ಮೆಲುಕು ಹಾಕಿದರೆ ಗೊತ್ತಾಗಿ ಬಿಡುತ್ತದೆ.
ವೀರಪ್ಪನ್ ನನ್ನು ಜೀವಂತವಾಗಿಯೇ ಸೆರೆಹಿಡಿಯ ಬೇಕೆಂದು ಹಲವು ಅಧಿಕಾರಿಗಳು ತೀರ್ಮಾನ ಮಾಡಿದ್ದರು. ಅಷ್ಟೇ ಅಲ್ಲ ಆತನನ್ನು ಶರಣಾಗುವಂತೆ ಮಾಡಬೇಕೆಂದು ಬಯಸಿದ್ದವರಿದ್ದರು. ಅಂತಹ ಅಧಿಕಾರಿಗಳ ಪೈಕಿ ಐಎಫ್ ಎಸ್ ಅಧಿಕಾರಿ ಪಿ.ಶ್ರೀನಿವಾಸ್ ಒಬ್ಬರಾಗಿದ್ದರು. ಆದರೆ ಈ ಅಧಿಕಾರಿಯನ್ನು ವೀರಪ್ಪನ್ ಸೇರಿದಂತೆ ಸಹಚರರರು ವೀರಪ್ಪನ್ ಜನ್ಮಸ್ಥಳವಾದ ಗೋಪಿನಾಥಂನಿಂದ 6 ಕಿಮೀ ದೂರದಲ್ಲಿರುವ ಕುಗ್ರಾಮದಲ್ಲಿ ಶಿರಚ್ಛೇದ ಮಾಡಿ ಭೀಕರವಾಗಿ ಕೊಲೆಮಾಡಿದ್ದರು.
ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಹುತಾತ್ಮರಾದ ಭಾರತೀಯ ಅರಣ್ಯ ಸೇವಾ ಅಧಿಕಾರಿ ಪಿ ಶ್ರೀನಿವಾಸ್ ಓಡಿಸುತ್ತಿದ್ದ ಜೀಪ್ ಅನ್ನು ಮತ್ತೆ ಚಾಲನೆಯಲ್ಲಿರುವ ಸ್ಥಿತಿಗೆ ತಂದು ಕೊಳ್ಳೇಗಾಲ ಅರಣ್ಯ ಇಲಾಖೆ ಕಚೇರಿಯಲ್ಲಿ ಇರಿಸಿದ್ದು ಶ್ಲಾಘನೀಯ ಕಾರ್ಯವೇ… ಶ್ರೀನಿವಾಸ್ ಅವರ ಭಾವಚಿತ್ರಗಳು, ಪತ್ರಗಳು, ದಾಖಲೆಗಳು ಮತ್ತು ಬರಹಗಳೊಂದಿಗೆ ವಸ್ತುಸಂಗ್ರಹಾಲಯ ನಿರ್ಮಾಣವಾಗಿದ್ದು ಕೂಡ ನಾವು ಖುಷಿಪಡಸಂಗತಿಯೇ..
ಭಾರತದಲ್ಲಿ ಹುತಾತ್ಮರಾದ ಅರಣ್ಯ ಅಧಿಕಾರಿಗೆ ಇದು ಮೊದಲ ಗೌರವವಾಗಿದೆ. 1992 ರಲ್ಲಿ ಕೀರ್ತಿ ಚಕ್ರ ಪುರಸ್ಕೃತರಾಗಿದ್ದ ಶ್ರೀನಿವಾಸ್ ಅವರನ್ನು ಸನ್ಮಾನಿಸಲು ಇದೇ ಉತ್ತಮ ಮಾರ್ಗ ಎಂದು ನಾವು ಭಾವಿಸಿದ್ದೇವೆ. ಅವರ ಜೀಪ್ ತಮಿಳುನಾಡಿನ ಗಡಿಭಾಗದ ಪಾಲಾರ್ ನಲ್ಲಿರುವ ಕರ್ನಾಟಕ ರೇಂಜ್ ಫಾರೆಸ್ಟ್ ಆಫೀಸ್‌ನಲ್ಲಿ ಕೈಬಿಡಲಾಗಿತ್ತು. ಅದನ್ನು ದುರಸ್ತಿ ಮಾಡಲು ಮತ್ತು ಚಾಲನೆಯಲ್ಲಿರುವ ಸ್ಥಿತಿಗೆ ಮರುಸ್ಥಾಪಿಸಲು ನಾವು 1.1 ಲಕ್ಷ ರೂ. ನಂತರ ನಾವು ಅದನ್ನು ಸ್ಮಾರಕವಾಗಿ ಇರಿಸಿದ್ದೇವೆ ಎಂದು ಕೆಲವು ವರ್ಷಗಳ ಹಿಂದೆ ಎಂಎಂ ಹಿಲ್ಸ್ ವನ್ಯಜೀವಿ ಅಭಯಾರಣ್ಯದ ನಿರ್ದೇಶಕರಾಗಿದ್ದ ವಿ ಏಳುಕೊಂಡಲು ಹೇಳಿದ್ದು ಈಗಲೂ ನೆನಪಾಗಿ ಉಳಿದಿದೆ.
ಸೆಪ್ಟೆಂಬರ್ 12, 1954 ರಂದು ಜನಿಸಿದ ಶ್ರೀನಿವಾಸ್ ಅವರನ್ನು 1991 ರ ನವೆಂಬರ್ 10 ರಂದು ಅರಣ್ಯ ದರೋಡೆಕೋರ ವೀರಪ್ಪನ್ ತನ್ನ ಜನ್ಮಸ್ಥಳವಾದ ಗೋಪಿನಾಥಂನಿಂದ 6 ಕಿಮೀ ದೂರದಲ್ಲಿರುವ ಕುಗ್ರಾಮದಲ್ಲಿ ಶಿರಚ್ಛೇದ ಮಾಡಿದ್ದನು. ಅವರನ್ನು ಕೊಂದ ಸ್ಥಳದಲ್ಲಿ ಗೌರವಾರ್ಥವಾಗಿ ದೇವಾಲಯವನ್ನೂ ನಿರ್ಮಿಸಲಾಗಿದೆ. ಶ್ರೀನಿವಾಸ್ ಅವರ ನಿಧನದ 31ನೇ ವಾರ್ಷಿಕೋತ್ಸವದ ವೇಳೆ ಮ್ಯೂಸಿಯಂ ಮತ್ತು ಜೀಪ್ ನ್ನು ಮರುಸ್ಥಾಪಿಸಲಾಗಿದೆ.
1991ರಲ್ಲಿ ಚಾಮರಾಜನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಶ್ರೀನಿವಾಸ್ ಅವರು ವೀರಪ್ಪನ್ ಸೆರೆ ಹಿಡಿಯಲು ರಚಿಸಲಾಗಿದ್ದ ವಿಶೇಷ ಕಾರ್ಯಪಡೆಯಲ್ಲಿ ಸಹಾಯಕ ಕಮಾಂಡರ್ ಆಗಿದ್ದರು. ಐಪಿಎಸ್ ಅಧಿಕಾರಿಯ ನೇತೃತ್ವದ ಎಸ್ ಟಿಎಫ್ ಗೆ ಸೇರಲು ಅವರನ್ನು ಕೇಳಲಾಯಿತು, ಏಕೆಂದರೆ ಅವರು ಪ್ರಕರಣದಲ್ಲಿ ನಿಕಟವಾಗಿ ಕೆಲಸ ಮಾಡಿದ್ದರು ಮತ್ತು ಭೂಪ್ರದೇಶವನ್ನು ಚೆನ್ನಾಗಿ ಅರಿತಿದ್ದರು.
ಶ್ರೀನಿವಾಸ್ ಒಬ್ಬ ಗಾಂಧಿವಾದಿಯಾಗಿದ್ದರಿಂದ ವೀರಪ್ಪನ್‌ನನ್ನು ಒಂದೇ ಒಂದು ಜೀವ ಮತ್ತು ಗುಂಡನ್ನು ಕಳೆದುಕೊಳ್ಳದೆ ಜೀವಂತವಾಗಿ ಸೆರೆಹಿಡಿಯಬೇಕೆಂದು ಬಯಸಿದ್ದರಲ್ಲದೆ, ಅದಕ್ಕಾಗಿ ಹಲವು ರೀತಿಯ ತಂತ್ರ, ಕಸರತ್ತು ಮಾಡಿದ್ದರು. ಹೇಗಾದರೂ ಮಾಡಿ ವೀರಪ್ಪನನ್ನು ಶರಣಾಗುವಂತೆ ಮಾಡಬೇಕು ಎನ್ನುವುದು ಅವರ ಬಯಕೆಯಾಗಿತ್ತು. ಹೀಗಾಗಿ ವೀರಪ್ಪನ್ ಸಹೋದರ ಅರ್ಜುನನ ವಿಶ್ವಾಸವನ್ನೂ ಗಳಿಸಿದ್ದರು. ಆತನ ಮೂಲಕವೇ ತಂತ್ರ ರೂಪಿಸಿದ್ದರು.
ಇದನ್ನೂ ಓದಿ:ಚಾಮರಾಜನಗರದ ಕರಿವರದರಾಜ ಸ್ವಾಮಿಬೆಟ್ಟಕ್ಕೆ ಬನ್ನಿ…
ಶ್ರೀನಿವಾಸ್ ಅವರು ಅಂದುಕೊಂಡಂತೆ ಅರ್ಜುನ ಇರಲಿಲ್ಲ. ಆದರೆ ಅದು ಶ್ರೀನಿವಾಸ್ ಅವರಿಗೆ ಗೊತ್ತಿರಲಿಲ್ಲ ಹೀಗಾಗಿ ಅರ್ಜುನನ್ನು ನಿರೀಕ್ಷೆ ಮೀರಿ ನಂಬಿ ಬಿಟ್ಟಿದ್ದರು. ಆದರೆ ಅತ್ತ ನಡೆದಿದ್ದೇ ಬೇರೆಯಾಗಿತ್ತು. ಸಹೋದರ ಅರ್ಜುನ ಅಣ್ಣ ವೀರಪ್ಪನ್ ಮನವೊಲಿಸಿ ಶರಣಾಗುವಂತೆ ಮಾಡುವ ಬದಲು ಅಣ್ಣನೊಂದಿಗೆ ಸೇರಿ ಶ್ರೀನಿವಾಸ್ ಅವರನ್ನೇ ಮುಗಿಸುವ ಸಂಚು ರೂಪಿಸಿದ್ದನು. ಅರ್ಜುನನ ಒಳಮರ್ಮ ಶ್ರೀನಿವಾಸ್ ಅವರಿಗೆ ಗೊತ್ತಾಗಿರಲಿಲ್ಲ.
ಅತ್ತ ಕಡೆ ವೀರಪ್ಪನ್ ತಮ್ಮ ಅರ್ಜುನನಿಂದ ವಿಚಾರ ತಿಳಿದುಕೊಂಡು ಶರಣಾಗುವ ಬದಲಿಗೆ ಶ್ರೀನಿವಾಸ್ ಅವರನ್ನೇ ಸುಲಭವಾಗಿ ಮುಗಿಸಿಬಿಡುವ ತೀರ್ಮಾನಕ್ಕೆ ಬಂದಿದ್ದಲ್ಲದೆ, ಅದಕ್ಕೊಂದು ತಂತ್ರವನ್ನು ತುಂಬಾ ಸುಲಭವಾಗಿ ರೂಪಿಸಿ ಬಿಟ್ಟಿದ್ದನು. ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಅರ್ಜುನ ನೇರವಾಗಿ ಮಲೆಮಹದೇಶ್ವರ ಬೆಟ್ಟದಲ್ಲಿದ್ದ ಶ್ರೀನಿವಾಸ್ ಅವರಿಗೆ ನೀವು ಒಬ್ಬರೇ ಗೋಪಿನಾಥಂನಿಂದ 6 ಕಿಮೀ ದೂರದಲ್ಲಿರುವ ಕುಗ್ರಾಮವೊಂದಕ್ಕೆ ಬಂದರೆ ಅಣ್ಣ ಶರಣಾಗುವುದಾಗಿ ತಿಳಿಸಿದ್ದಾನೆ ಎಂಬ ಸಂದೇಶವನ್ನು ರವಾನಿಸಿದ್ದನು.
ಅರ್ಜುನನ್ನು ಸಂಪೂರ್ಣವಾಗಿ ನಂಬಿದ್ದ ಶ್ರೀನಿವಾಸ್ ಅವರು ತನ್ನದೇ ಬೈಕ್ ನಲ್ಲಿ ಗೌಪ್ಯವಾಗಿ ಗೋಪಿನಾಥಂಗೆ ಸುಮಾರು ಆರು ಕಿ.ಮೀ. ದೂರದಲ್ಲಿದ್ದ ಅರ್ಜುನ ಹೇಳಿದ್ದ ಸ್ಥಳಕ್ಕೆ ಹೋಗಿದ್ದರು. ಆದರೆ ಅದಾಗಲೇ ಶ್ರೀನಿವಾಸ್ ಅವರನ್ನು ಮುಗಿಸಲೇ ಬೇಕೆಂದುಕೊಂಡಿದ್ದ ವೀರಪ್ಪನ್ ತಾನೇನು ಮಾಡಬೇಕೋ ಅದಕ್ಕೆಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದನು. ಹೀಗಾಗಿ ಶ್ರೀನಿವಾಸ್ ಅವರು ಆ ಸ್ಥಳ ತಲುಪುತ್ತಿದ್ದಂತೆಯೇ ವೀರಪ್ಪನ್ ಮತ್ತು ಸಹಚರರು ಅವರ ಮೇಲೆ ದಾಳಿ ಮಾಡಿದ್ದರು. ಅವರನ್ನು ಹಿಡಿದು ಚಿತ್ರ ಹಿಂಸೆ ನೀಡಿ ಬಿಟ್ಟರು.
ಅವರೆಷ್ಟು ಕ್ರೂರವಾಗಿ ನಡೆದುಕೊಂಡು ಬಿಟ್ಟರೆಂದರೆ? ಅವರ ಶಿರವನ್ನು ಕಡಿದು ಹೊತ್ತೊಯ್ದರು. ಇದಾದ ಬಳಿಕ ಹುಡುಕಾಟ ಮಾಡಿದಾಗ ಶ್ರೀನಿವಾಸ್ ಅವರ ಮುಂಡ ಸಿಕ್ಕಿದಾದರೂ ರುಂಡ ಮಾತ್ರ ಸಿಗಲೇ ಇಲ್ಲ. ಅವರ ದೇಹದಲ್ಲಿದ್ದ ಗಾಯದ ಗುರುತುಗಳು ಅವರು ಸಾಯುವ ಮುನ್ನ ವೀರಪ್ಪನ್ ನೀಡಿದ ಚಿತ್ರ ಹಿಂಸೆಗೆ ಸಾಕ್ಷಿಯಾಗಿತ್ತು. ಇಂತಹ ಧೀರ ಅಧಿಕಾರಿ ಎಂದೆಂದಿಗೂ ನೆನಪಾಗಿ ಉಳಿದು ಬಿಡುತ್ತಾರೆ. ಈ ನೆನಪುಗಳು ಕೊಳ್ಳೇಗಾಲದ ಅರಣ್ಯ ಇಲಾಖೆ ಕಚೇರಿಗೆ ಕಾಲಿಟ್ಟವರನ್ನು ಕಾಡದಿರದು…
B M Lavakumar