LatestLife style

ಮರ್ಕಟದಂತಹ ಮನಸ್ಸನ್ನು ಏಕಾಗ್ರತೆಯ ಗೂಟಕ್ಕೆ ಕಟ್ಟಿ ಹಾಕುವುದು ಹೇಗೆ..? ಸ್ವಾಮಿ ವಿವೇಕಾನಂದರು ಹೇಳಿದ್ದೇನು?

ಅವನು ಈಗಿದ್ದಂತೆ ಇನ್ನು ಸ್ವಲ್ಪ ಹೊತ್ತಿಗೆ ಇರಲ್ಲ… ಅವನ ಹೇಗ್ರಿ ನಂಬೋದು? ಇಂತಹದೊಂದು ಪ್ರಶ್ನಾರ್ಥಕ ಮಾತೊಂದನ್ನು ನಾವು ಬಹಳಷ್ಟು ಸಲ ಆಡಿಕೊಂಡಿರುತ್ತೇವೆ.. ಅದಕ್ಕಿಂತ ಹೆಚ್ಚಾಗಿ ಒಂದೇ ನಿಲುವಿಗೆ ಗಟ್ಟಿಯಾಗಿ ನಿಲ್ಲದೆ ಆಗಾಗ್ಗೆ ಬದಲಾಗುವವರನ್ನು, ಏನು ಮಾಡಬೇಕೆಂದು ಗೊತ್ತಾಗದೆ ಗೊಂದಲ ಮಾಡಿಕೊಳ್ಳುವವರನ್ನು ನೋಡಿದ್ದೇವೆ. ಅದಕ್ಕಿಂತ ಹೆಚ್ಚಾಗಿ ಬಹಳಷ್ಟು ಸಲ ನಾವುಗಳೇ ಮನಸ್ಸಿನ ಚಂಚಲತೆಗೆ ಸಿಕ್ಕಿಹಾಕಿಕೊಂಡು ಬೇಕಾ? ಬೇಡ್ವಾ? ಎಂಬ ಪ್ರಶ್ನೆಗಳನ್ನು ಮನಸ್ಸಿನಲ್ಲಿಯೇ ಕೇಳಿಕೊಂಡು ಒದ್ದಾಡಿರುತ್ತೇವೆ.. ಇದರಿಂದ ಒಂದೊಳ್ಳೆ ಅವಕಾಶವನ್ನು ಕೂಡ ಕಳೆದುಕೊಂಡಿರುತ್ತೇವೆ..

ನಿಜವಾಗಿ ಹೇಳಬೇಕೆಂದರೆ ಇದೆಲ್ಲ ಗೊಂದಲಗಳು ಹುಟ್ಟಿಕೊಳ್ಳುವುದೇ ಮನಸ್ಸಿನ ಚಂಚಲತೆಯಿಂದ… ಚಂಚಲ ಮನಸ್ಸು ನಮ್ಮದಾದರೆ ಖಂಡಿತ ನಾವು ಏನನ್ನೂ ಸಾಧಿಸಲಾರೆವು.. ಏಕೆಂದರೆ ಈ ಮನಸ್ಸು ಇದೆಯಲ್ಲ ಅದು ಸಾಮಾನ್ಯದಲ್ಲ. ಅದಕ್ಕೆ ನಮ್ಮನ್ನು ಗಿರಿಗಿಟ್ಲೆ ಆಡಿಸೋ ಶಕ್ತಿಯಿದೆ.. ಹೀಗಾಗಿಯೇ ನಾವು ನಮಗೆ ಗೊತ್ತಿಲ್ಲದಂತೆ ಹೇಗೇಗೋ ವರ್ತಿಸುತ್ತೇವೆ.. ಅದಕ್ಕಿಂದ ಹೆಚ್ಚಾಗಿ ಅವತ್ತು ಮನಸ್ಸು ಮಾಡಿದ್ದರೆ ಇವತ್ತು ಚೆನ್ನಾಗಿರಬಹುದಿತ್ತು ಅಂಥ ಮನಸ್ಸಿನೊಳಗೆ ನಮ್ಮನ್ನು ನಾವೇ ಬೈದು ಕೊಳ್ಳುತ್ತಿರುತ್ತೇವೆ.. ಮನಸ್ಸಿನ ಚಂಚಲತೆಯಿಂದ ನಮ್ಮ ಬದುಕಿನಲ್ಲಿ ಪಡೆದುಕೊಂಡಿದಕ್ಕಿಂತ ಕಳೆದುಕೊಂಡ ಪಟ್ಟಿಯೇ ದೊಡ್ಡದಿರುತ್ತದೆ.

ಇದನ್ನೂ ಓದಿ: ನಾವೆಲ್ಲರೂ ದೇಹದ ಆರೋಗ್ಯ ಮಾತ್ರವಲ್ಲ.. ಮನಸ್ಸಿನ ಆರೋಗ್ಯಕ್ಕೂ ಒತ್ತು ನೀಡಬೇಕು…

ಅದೆಷ್ಟೋ ಸಲ ನನ್ನ ಮನಸ್ಸು ಸರಿಯಿಲ್ಲ. ಹಾಗಾಗಿ ಏನು ನಿರ್ಧಾರ ಕೈಗೊಳ್ಳಲಾಗುತ್ತಿಲ್ಲ ಎಂಬಂತಹ ನಿರಾಶೆಯ ಮಾತುಗಳನ್ನಾಡುತ್ತೇವೆ. ಇಂತಹ ಮಾತುಗಳು ನಮ್ಮಲ್ಲಿರುವ ಆತ್ಮವಿಶ್ವಾಸವನ್ನು ಕುಂದಿಸಿ ಬಿಡುತ್ತವೆ. ಇಂತಹ ಚಂಚಲ ಮನಸ್ಸಿಗೆ ನಾವು ಬ್ರೇಕ್ ಹಾಕದಿದ್ದರೆ ನಮ್ಮ ದಿನನಿತ್ಯದ ಬದುಕಿನಲ್ಲಿ ಏನನ್ನೂ ಮಾಡದೆ ಉಳಿದು ಬಿಡಬೇಕಾಗುತ್ತದೆ. ಹಲವು  ಸಂದರ್ಭಗಳಲ್ಲಿ ಈಗ ಇದ್ದ ಮನಸ್ಥಿತಿ ಸ್ವಲ್ಪ ಹೊತ್ತಿಗೆ ಇಲ್ಲದಾಗಬಹುದು. ಇದರಿಂದ ನಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲಾಗದೆ ಇತರರ ವಿಶ್ವಾಸ ಕಳೆದು ಕೊಳ್ಳಬೇಕಾಗುತ್ತದೆ. ಹೀಗಾದಾಗ ಯಾವುದೇ ದೃಢ ನಿರ್ಧಾರ ಕೈಗೊಳ್ಳಲಾಗದೆ ನಮಗೆ ನಾವೇ ವಂಚನೆ ಮಾಡಿಕೊಂಡಂತಾಗುತ್ತದೆ.

ಚಂಚಲ ಮನಸ್ಸಿನಿಂದ ಆಗುವ ಅನಾಹುತಗಳು ಒಂದೆರಡಲ್ಲ.  ಅದು ಎಲ್ಲರ ಅರಿವಿಗೂ ಬಂದಿರುತ್ತದೆ. ಹಾಗಾದರೆ ನಮ್ಮೆಲ್ಲರನ್ನು ಕಾಡುವ ಚಂಚಲ ಮನಸ್ಸಿಗೆ ಅಂಕುಶ ಹಾಕಲು ಸಾಧ್ಯವಿಲ್ಲವೆ? ಚಂಚಲ ಮನಸ್ಸನ್ನು ಹಿಡಿತದಲ್ಲಿಟ್ಟು ಕೊಳ್ಳುವುದಾದರೂ ಹೇಗೆ? ಹೀಗೆ ಹತ್ತಾರು ಪ್ರಶ್ನೆಗಳು ನಮ್ಮನ್ನು ಕಾಡದಿರದು. ಇಂತಹ ಮನಸ್ಥಿತಿಗೆ ಅಧ್ಯಾತ್ಮಿಕ ಚಿಂತಕರು ಕೆಲವೊಂದು ಪರಿಹಾರಗಳನ್ನು ಕೂಡ ನೀಡಿದ್ದಾರೆ. ಆಧ್ಯಾತ್ಮದಲ್ಲಿ ಎಲ್ಲದಕ್ಕೂ ಪರಿಹಾರ ಇದ್ದೇ ಇದೆ. ಆದರೆ ನಮ್ಮಲ್ಲಿ ಆಧ್ಯಾತ್ಮದ ಬಗ್ಗೆ ಮಾತನಾಡಿದರೆ ಅಚ್ಚರಿಯಿಂದ ನೋಡುತ್ತಾರೆ. ಆಧ್ಯಾತ್ಮ ಎನ್ನುವುದು ಅರವತ್ತರ ನಂತರ ಎನ್ನುವ ಮನಸ್ಥಿತಿಯಿದೆ. ಆದರೆ ಆಧ್ಯಾತ್ಮದಲ್ಲಿ ನಮ್ಮ ಬದುಕಿನ ಅದೆಷ್ಟೋ ಸಮಸ್ಯೆಗಳಿಗೆ ಸರಳ ಉತ್ತರವಿದೆ ಎನ್ನುವುದು ಹೆಚ್ಚಿನವರಿಗೆ ಗೊತ್ತೇ ಆಗುವುದಿಲ್ಲ.

ಇದನ್ನೂ ಓದಿ: ನಮ್ಮೊಳಗೆ  ಸದಾ ಒಳ್ಳೆಯ ಕಲ್ಪನೆಗಳಿರಲಿ.. ಅದು ನಮ್ಮನ್ನು ಸುಖವಾಗಿಡುತ್ತದೆ..

ಆಧ್ಯಾತ್ಮಿಕ ಚಿಂತಕರ ಪ್ರಕಾರ ಸದಾ ಚಂಚಲವಾಗಿರುವ  ಮನಸ್ಸನ್ನು ಹಿಡಿದು ನಮ್ಮ ಅಂಕೆಯಲ್ಲಿಟ್ಟುಕೊಳ್ಳುವುದೇ ಸಾಧನೆ. ಆ ಸಾಧನೆ ಮಾಡಿದ್ದೇ ಆದರೆ ಬದುಕು ಸುಖಕರವಾಗಿರುವುದರಲ್ಲಿ ಎರಡು ಮಾತಿಲ್ಲ. ಈ ಮನಸ್ಸು ಇದೆಯಲ್ಲ ಅದು ಗಾಳಿ ಬಂದು ದೋಣಿಯನ್ನು ಸೆಳೆದುಕೊಂಡು ಹೋಗುವ ರೀತಿಯದ್ದೇ.. ನಾವು ಎಷ್ಟೇ ದೃಢವಾಗಿದ್ದರೂ  ಮನಸ್ಸು ನಮ್ಮನ್ನು ಮತ್ತೆಲ್ಲಿಗೋ ಎಳೆದೊಯ್ದು ಬಿಡಬಹುದು. ಇಂತಹ ಸಂದರ್ಭಗಳಲ್ಲಿ ನಾವು ಕೆಲವೊಂದು ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಚಂಚಲ ಮನಸ್ಸಿಗೆ ಕಡಿವಾಣ ಹಾಕದೇ ಹೋದರೆ ಮಾನಸಿಕ ಶಾಂತಿ ಕಳೆದುಕೊಂಡು ಉದ್ವೇಗಗಳಿಗೆ ಬಲಿಯಾಗಿ ಹಠಮಾರಿತನದ ಮನೋರೋಗಗಳಿಗೆ ಒಳಗಾಗುವಂತಹ ಸನ್ನಿವೇಶವೂ ಇಲ್ಲದಿಲ್ಲ.

ಅಸೂಯೆ, ದ್ವೇಷ, ಕ್ರೋಧ, ಭಯ, ಈರ್ಷ್ಯೆ, ಕಾಮ, ಲೋಭ, ಕಪಟ, ಪ್ರಲೋಭನೆಯಂತಹ ಮಾಲಿನ್ಯಗಳು ನಮ್ಮ ಮೇಲೆ ಪರಿಣಾಮ ಬೀರುವುದರಿಂದ ಮನಸ್ಸು ಚಂಚಲವಾಗಿ ಬಿಡುತ್ತದೆ. ಆದ್ದರಿಂದ ಮೊದಲಿಗೆ ನಾವು ಮನಸ್ಸನ್ನು ಪರಿಶುದ್ಧವಾಗಿಸಿಕೊಳ್ಳಬೇಕು. ಮನಸ್ಸು ಪರಿಶುದ್ಧವಾದರೆ ನಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಸುಲಭವಾಗುತ್ತದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ಮನಸ್ಸು ಪರಿಶುದ್ಧವಾದಷ್ಟು ಅದರ ನಿಗ್ರಹ ಸುಲಭ. ಆದ್ದರಿಂದ  ಮನಸ್ಸಿನ ಪರಿಶುದ್ಧತೆಗೆ ಆದ್ಯತೆ ನೀಡಬೇಕು. ಪರಿಪೂರ್ಣವಾದ  ನೈತಿಕ ವರ್ತನೆಗಳಿಂದ  ಸಮಗ್ರವಾದ ಮನೋನಿಗ್ರಹ ಸಾಧ್ಯ. ನಿಜವಾದ ನೀತಿವಂತ ಬೇರೇನೂ  ಮಾಡಬೇಕಾಗಿಲ್ಲ. ಆತ ಚಾಂಚಲ್ಯಗಳಿಂದ ಮುಕ್ತನಾಗಿರುತ್ತಾನೆಂದು ಹೇಳಿದ್ದಾರೆ.

ಇದನ್ನೂ ಓದಿ: ನಿಮಗೆ ಗೊತ್ತಾ ನಿಮ್ಮ ಬಯಕೆಗಳೇ ನಿಮಗೆ ವೈರಿಯಂತೆ… ಅದು ಹೇಗೆ? ಏಕೆ?..

ಅಂಡಲೆಯುವ ಮನಸ್ಸನ್ನು ಕಟ್ಟಿ ಹಾಕುವ ಮುನ್ನ ಅದನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಅಷ್ಟೇ ಅಲ್ಲ ಎಲ್ಲೆಲ್ಲೊ ಅಂಡಲೆಯುವ ಮನಸ್ಸನ್ನು ಹಿಡಿದು ವಿಚಾರದ ಗೂಟಕ್ಕೆ ಕಟ್ಟಿಹಾಕಬೇಕು. ಇದು ಒಮ್ಮೆಗೆ ಆಗುವ ಕೆಲಸವಲ್ಲ. ಇದನ್ನು ಆಗಾಗ್ಗೆ ಮಾಡುತ್ತಲೇ ಇರಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ ಅಷ್ಟೇ ಅಲ್ಲದೆ, ಮನಸ್ಸಿನ ಚಾಂಚಲ್ಯವನ್ನು ದೂರ ಅಟ್ಟಬೇಕಾದರೆ ಮೊದಲಿಗೆ ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು. ಮನಸ್ಸಿನಲ್ಲಿ ಅನಪೇಕ್ಷಣೀಯ ಬಯಕೆ, ಗೊಂದಲಗಳು ಸುಳಿಯದಂತೆ ಸದಾ ಒಳ್ಳೆಯ ವಿಚಾರಗಳಿಗೆ ಮನಸ್ಸನ್ನು ಒಡ್ಡಬೇಕು. ಕೆಲವೊಂದು ಸಂದರ್ಭಗಳಲ್ಲಿ ನಾವು ಮನಸ್ಸಿನಾಚೆಗೆ ಪ್ರೇಕ್ಷಕನಂತೆ  ನಿಂತು ನೋಡುವ ಗುಣವನ್ನು ರೂಢಿಸಿಕೊಳ್ಳಬೇಕು ಆಗ ನಮ್ಮ ಮನಸ್ಸಿನ  ವಿಕಾರತೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಸಲಹೆಗಳನ್ನು ನೀಡಿದ್ದಾರೆ.

ಸಜ್ಜನರ ಒಡನಾಟದಲ್ಲಿರುವುದು, ಒಂದೊಳ್ಳೆಯ ಕೆಲಸದಲ್ಲಿ ತೊಡಗಿಸಿಕೊಳ್ಳುವುದು, ಸುವಿಚಾರಗಳನ್ನು ಮನನ ಮಾಡುವುದು, ಸದಾ ಒಳ್ಳೆಯ ವಿಚಾರಗಳನ್ನೇ ಧ್ಯಾನಿಸುವುದು, ದೇಗುಲಗಳಿಗೆ ಭೇಟಿ ನೀಡುವುದು, ಪ್ರಕೃತಿ ನಡುವೆ ಒಂದಷ್ಟು ಸಮಯ ಕಳೆಯುವುದು.. ಏಕಾಂಗಿಯಾಗಿ ಕೆಲಸಕ್ಕೆ ಬಾರದನ್ನು ಯೋಚಿಸುತ್ತಾ ಕುಳಿತುಕೊಳ್ಳದೆ ಏನಾದರೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು, ಏಕಾಗ್ರತೆಯಿಂದ ಪುಸ್ತಕಗಳನ್ನು ಓದುವುದು ಹೀಗೆ ಒಂದಷ್ಟು ಕಸರತ್ತುಗಳನ್ನು ಮಾಡುತ್ತಾ ಮನಸ್ಸನ್ನು ನಾವು ಏನು ಮಾಡುತ್ತಿದ್ದೇವೆಯೋ ಅದರತ್ತ ಎಳೆದು ತಂದು ನಿಲ್ಲಿಸುವ ಪ್ರಯತ್ನ ಮಾಡಿದರೆ ಮನಸ್ಸಿನ ಚಂಚಲತೆ ದೂರ ಮಾಡಲು ಸಾಧ್ಯವಾಗುತ್ತದೆ..

 

admin
the authoradmin

Leave a Reply