ಮನೆ ಬಾಡಿಗೆಗೆ ನೀಡುವ ಮುನ್ನ ಎಚ್ಚರವಿರಲಿ… ನಿಮ್ಮ ಮನೇನ ಅಕ್ರಮ ಚಟುವಟಿಕೆಗೆ ಬಳಸ್ತಾರೆ… ಹುಷಾರ್!

ಬಾಡಿಗೆ ಹೆಚ್ಚು ಸಿಗುತ್ತದೆ ಎಂಬ ಕಾರಣಕ್ಕೆ ಮನೆಯನ್ನು ಬಾಡಿಗೆಗೆ ನೀಡುವ ಮುನ್ನ ಮನೆ ಮಾಲೀಕರೇ ಹುಷಾರಾಗಿರಿ.. ಸಭ್ಯರಂತೆ ಬಂದು ನಿಮ್ಮಿಂದ ಮನೆಯನ್ನು ಬಾಡಿಗೆ ಪಡೆಯುವ ಕೆಲವರು ಆ ಬಳಿಕ ಮನೆಯನ್ನು ಅನೈತಿಕ ಚಟುವಟಿಕೆಯ ಅಡ್ಡೆಯನ್ನಾಗಿ ಮಾಡಿಬಿಡುತ್ತಾರೆ.. ಈಗಾಗಲೇ ಮೈಸೂರಿನಲ್ಲಿ ಬಾಡಿಗೆ ಮನೆಗಳಲ್ಲಿ ಅಕ್ರಮ ಚಟುವಟಿಕೆ ನಡೆದ ಪ್ರಕರಣಗಳು ಬೇಕಾದಷ್ಟು ಸಿಗುತ್ತಿವೆ. ಅದರಲ್ಲೂ ನಗರದ ಹೊರವಲಯದ ಬಡಾವಣೆಗಳನ್ನು ಟಾರ್ಗೆಟ್ ಮಾಡುತ್ತಿರುವ ದಂಧೆಕೋರರು ಬಾಡಿಗೆಗೆ ಮನೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ಬೆಳಕಿಗೆ ಬರುತ್ತಲೇ ಇದೆ..
ವೇಶ್ಯಾವಾಟಿಕೆ ದಂಧೆ ಮೂಲಕವೇ ಹೈಫೈ ಜೀವನ ಕಟ್ಟಿಕೊಂಡಿರುವ ಕೆಲವರು ಅದನ್ನು ಬೇರೆ, ಬೇರೆ ರೀತಿಯಲ್ಲಿ ನಡೆಸುತ್ತಾ ಕೈತುಂಬಾ ಹಣ ಸಂಪಾದಿಸಿಕೊಂಡು ಜಾಲಿಯಾಗಿದ್ದಾರೆ. ಯಾವುದೋ ಅಮಾಯಕ ಹೆಣ್ಣು ಮಕ್ಕಳಿಗೆ ಹಣದ ಆಮಿಷವೊಡ್ಡಿ ಈ ದಂಧೆಗೆ ಬಳಸಿಕೊಳ್ಳುತ್ತಿದ್ದು ಅವರ ಮೂಲಕವೇ ಇವರು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಮೈಸೂರಿನ ಹೊರವಲಯದಲ್ಲಿ ಹೊಸ ಬಡಾವಣೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದು, ಅಲ್ಲಿನ ಹೊಸ ಮನೆಗಳನ್ನು ಬಾಡಿಗೆಗೆ ಪಡೆದುಕೊಂಡು ಅಲ್ಲಿ ತಮ್ಮ ದಂಧೆ ಮುಂದುವರೆಸುತ್ತಾರೆ.
ಮೈಸೂರಿನಲ್ಲಿ ವೇಶ್ಯಾವಾಟಿಕೆಯನ್ನು ತಡೆಯಬೇಕೆಂದು ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸೋಷಿಯಲ್ ಮೀಡಿಯಾ ಬಂದ ನಂತರವಂತೂ ಈ ವ್ಯವಹಾರಗಳು ಸುಲಭವಾಗಿವೆ. ಯಾರಿಗೂ ಗೊತ್ತೇ ಆಗದಂತೆ ವ್ಯವಹಾರ ನಡೆಯುತ್ತದೆ. ಹೀಗಾಗಿ ಮೈಸೂರು ನಗರ ಸುತ್ತಮುತ್ತ ಮಾತ್ರವಲ್ಲದೆ ಹಳ್ಳಿ ಪ್ರದೇಶಕ್ಕೂ ದಂಧೆಕೋರರು ಕಾಲಿಟ್ಟಿರುವುದು ಗುಟ್ಟಾಗಿ ಉಳಿದಿಲ್ಲ. ಈ ದಂಧೆಯಲ್ಲಿ, ಪುರುಷರು, ಮಹಿಳೆಯರು ಎಲ್ಲರೂ ತೊಡಗಿಸಿಕೊಂಡಿದ್ದು, ಅಮಾಯಕ ಹೆಣ್ಣುಮಕ್ಕಳನ್ನು ಮುಂದಿಟ್ಟುಕೊಂಡು ತಮ್ಮ ತಿಜೋರಿ ತುಂಬಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ವೀಕ್ ನೆಸ್ಸೇ ವಂಚಕರಿಗೆ ಮಹಾಅಸ್ತ್ರ!
ಮಾಲೀಕರು ಕೇಳಿದಷ್ಟು ಮನೆಗೆ ಬಾಡಿಗೆ ಕೊಡಲು ಇವರು ತಯಾರು ಇರುವುದರಿಂದ ಅದಕ್ಕಿಂತ ಹೆಚ್ಚಾಗಿ ನಗರದ ಹೊರವಲಯದ ಗ್ರಾಮೀಣ ಪ್ರದೇಶಗಳಲ್ಲಿರುವ ಮನೆಗಳಿಗೆ ಬಾಡಿಗೆದಾರರು ಕೂಡ ಹೆಚ್ಚಾಗಿ ಬಾರದೆ ಇರುವುದರಿಂದ ಸಿಕ್ಕವರಿಗೆ ಕೊಟ್ಟರೆ ಆದಾಯ ಬರುತ್ತದೆ ಎಂಬ ಕಾರಣಕ್ಕೆ ಮಾಲೀಕರು ಕೂಡ ಹಿಂದೂ ಮುಂದು ನೋಡದೆ ಇಂತಹವರಿಗೆ ಮನೆ ನೀಡಿ ಬಿಡುತ್ತಾರೆ. ಇಂಥ ಮನೆಗಳಲ್ಲಿ ಯಾವುದೇ ಅಡ್ಡಿಯಿಲ್ಲದೆ ಅಕ್ರಮ ಚಟುವಟಿಕೆ ನಡೆಸಲಾಗುತ್ತದೆ.
ಇದೀಗ ಮೈಸೂರು ನಗರದ ಹೊರವಲಯದ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ದಾಸನಕೊಪ್ಪಲಿನ ಬಡಾವಣೆಯೊಂದರಲ್ಲಿ ಮನೆಯಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಯನ್ನು ಪತ್ತೆ ಹಚ್ಚಲಾಗಿದೆ. ಇಲ್ಲೊಂದು ಮನೆಯಲ್ಲಿ ರಾಜಾರೋಷವಾಗಿ ಅಕ್ರಮ ನಡೆಯುತ್ತಿದೆ ಎಂಬುದು ಸ್ಥಳೀಯರಿಗೆ ಗೊತ್ತಾಗಿರಲಿಲ್ಲ. ಅಷ್ಟು ಗುಟ್ಟಾಗಿ ಇದನ್ನು ನಡೆಸಲಾಗುತ್ತಿತ್ತು. ಈ ದಂಧೆಯನ್ನು ಮಂಜು ಎಂಬಾತ ತನ್ನ ಗೆಳೆಯನೊಂದಿಗೆ ಸೇರಿ ನಡೆಸುತ್ತಿದ್ದನು. ಈ ದಂಧೆಯಲ್ಲಿ ಪಳಗಿದ್ದ ಈತ ನಗರದ ಹೊರವಲಯದಲ್ಲಿರುವ ಆಫೀಷಿಯಲ್ ಏರಿಯಾಗಳನ್ನೇ ಆಯ್ಕೆ ಮಾಡಿಕೊಂಡು ಅಲ್ಲಿ ಮನೆಗಳನ್ನು ಬಾಡಿಗೆ ಪಡೆದುಕೊಳ್ಳುತ್ತಿದ್ದನು. ಅಷ್ಟೇ ಅಲ್ಲದೆ ಅಲ್ಲಿ ಒಂದಷ್ಟು ವ್ಯವಹಾರಗಳನ್ನು ಮಾಡಿಕೊಂಡು ಒಂದೇ ತಿಂಗಳಲ್ಲಿ ಆ ಮನೆ ಖಾಲಿ ಮಾಡಿಕೊಂಡು ಮತ್ತೊಂದು ಮನೆಗೆ ಹೋಗುತ್ತಿದ್ದನು. ಹೀಗಾಗಿ ಸುತ್ತಮುತ್ತಲಿನವರಿಗೆ ಅನುಮಾನ ಬರುತ್ತಿರಲಿಲ್ಲ. ಒಂದು ವೇಳೆ ಅನುಮಾನ ಬಂದರೂ ಅಷ್ಟು ಹೊತ್ತಿಗೆ ಮನೆ ಖಾಲಿಯಾಗಿರುತ್ತಿತ್ತು.
ಇದನ್ನೂ ಓದಿ : ಜನ ಸ್ಪಾಗಳನ್ನು ಅನುಮಾನದಿಂದ ನೋಡುತ್ತಿರುವುದೇಕೆ?
ಇತ್ತೀಚೆಗೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಕೊಪ್ಪಲಿನ ಬಡಾವಣೆಯಲ್ಲಿ ಮನೆ ಬಾಡಿಗೆಗೆ ಪಡೆದುಕೊಂಡಿದ್ದನು ಏನೇ ಮಾಡಿದರೂ ಅದಕ್ಕೊಂದು ವ್ಯಾಲಿಡಿಟಿ ಅಂಥ ಇದ್ದೇ ಇರುತ್ತದೆ. ನಾವು ಮಾಡುವ ಅಕ್ರಮ ತಕ್ಷಣಕ್ಕೆ ಕೈತುಂಬಾ ಹಣ ತಂದುಕೊಡಬಹುದು ಆದರೆ ಕರ್ಮ ಅನ್ನೊದು ಯಾವತ್ತಿದ್ದರೂ ತಿರುಗಿ ಬಂದೇ ಬರುತ್ತದೆ. ಅದರಂತೆ ಮಂಜು ಅಂಡ್ ಟೀಮ್ ನಸೀಬು ಕೆಟ್ಟಿತ್ತು. ಇವನ ಮನೆಗೆ ಹುಡುಗಿಯರು, ಮಹಿಳೆಯರು, ಗಂಡಸರು, ಹುಡುಗರು ಆಗಾಗ್ಗೆ ಕಾರು, ಬೈಕ್, ಆಟೋಗಳಲ್ಲಿ ಬಂದು ಹೋಗುವುದು, ಕಿಲಕಿಲ ನಗು ಎಲ್ಲವೂ ಅನುಮಾನವನ್ನುಂಟು ಮಾಡಿತ್ತು. ಈ ಬಗೆಗಿನ ಮಾಹಿತಿ ಒಡನಾಡಿ ಸಂಸ್ಥೆಯನ್ನು ತಲುಪಿತ್ತು. ಅವರು ಇದರ ಹಿಂದೆ ಬಿದ್ದು ಪರಿಶೀಲನೆ ನಡೆಸಿದಾಗ ಅವರಿಗೆ ಇಲ್ಲಿ ಅಕರಮ ನಡೆಯುತ್ತಿರುವುದು ಮನದಟ್ಟಾಗಿತ್ತು.
ಮಂಜುವಿನ ಬಗ್ಗೆ ಮಾಹಿತಿ ಕಲೆಹಾಕಿದಾಗ ಹೊರವಲಯದ ಒಂದೊಳ್ಳೆಯ ಮನೆಯನ್ನೇ ಅನೈತಿಕ ಚಟುವಟಿಕೆಗಳಿಗೆ ಈತ ಬಳಸಿಕೊಳ್ಳುತ್ತಿದ್ದ. ಇದಕ್ಕಾಗಿ ಅಮಾಯಕ ಹೆಣ್ಣು ಮಕ್ಕಳನ್ನು ಹಣದ ಆಮಿಷವೊಡ್ದಿ ಕರೆತರುತ್ತಿದ್ದನು. ಈತನಿಗೆ ಮತ್ತೊಬ್ಬ ಸಹಾಯ ಮಾಡುತ್ತಿದ್ದನು. ಈತ ಬಹಳಷ್ಟು ವರ್ಷಗಳಿಂದ ದಂಧೆ ನಡೆಸುತ್ತಿದ್ದು, ಬೇರೆ, ಬೇರೆ ಮೂಲಗಳಿಂದ ಅಮಾಯಕ ಹೆಣ್ಣು ಮಕ್ಕಳನ್ನು ಕರೆಯಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದನು ಅಷ್ಟೇ ಅಲ್ಲದೆ, 20 ದಿನ ಅಥವಾ 30 ದಿನಗಳಲ್ಲಿ ಆ ಮನೆಯನ್ನು ಬದಲಾಯಿಸುತ್ತಿದ್ದ, ಈ ರೀತಿಯಾಗಿ ಆತ ತನ್ನ ತಂತ್ರಗಾರಿಕೆಯನ್ನು ಬಳಸಿಕೊಂಡು ತುಂಬಾ ಚಾಣಾಕ್ಷತನದಿಂದ ದಂಧೆಯನ್ನು ನಡೆಸುತ್ತಿದ್ದಾನೆ ಎನ್ನುವುದು ಗೊತ್ತಾಗಿತ್ತು.
ಇದನ್ನೂ ಓದಿ : ಮಗಳು ಮನೆ ಬಿಟ್ಟಳು.. ಹೆತ್ತವರು ಹೆಣವಾದರು.. ಇದೆಂತಹ ದುರಂತ ಕಥೆ !
ಈ ಬಗ್ಗೆ ಸಂಪೂರ್ಣ ಮಾಹಿತಿ ಅರಿತ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶು ಅವರು ತಕ್ಷಣ ಮೈಸೂರಿನ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರ ಗಮನಕ್ಕೆ ತಂದಿದ್ದರು. ಕೂಡಲೇ ಅವರು ಅವರು ಸೆನ್ (CEN : Cyber, Economic and Narcotics Crime) ನ ಇನ್ಸ್ ಪೆಕ್ಟರ್ ಸುನೀಲ್ ರವರಿಗೆ ತಿಳಿಸಿ ಒಂದು ತಂಡ ವನ್ನು ರಚನೆ ಮಾಡಿ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಿದ್ದರು. ಅದರಂತೆ ಸೆನ್ ಇನ್ಸ್ ಪೆಕ್ಟರ್ ಸುನಿಲ್ ಮತ್ತು ಸಿಬ್ಬಂದಿ ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ ಪರಶು ಹಾಗೂ ಒಡನಾಡಿ ಸಂಸ್ಥೆಯ ಸಿಬ್ಬಂದಿಗಳಾದ ಪ್ರದೀಪ್.ಕೆ, ಬಾಲುಕುಮಾರ್, ಸಚಿನ್, ಮಣಿ, ಸುಮಾ, ಶಶಾಂಕ್, ನಾಝಿಯಾ ಬಾನು ಅವರು ದಂಧೆ ನಡೆಯುತ್ತಿದ್ದ ದಾಸನಕೊಪ್ಪಲುನಲ್ಲಿದ್ದ ಮನೆ ಮೇಲೆ ಜುಲೈ 5ರಂದು ಶನಿವಾರ ದಾಳಿ ಮಾಡಿದ್ದಾರೆ.
ಈ ವೇಳೆ ಆ ಮನೆಯಲ್ಲಿ ದಂಧೆಯಲ್ಲಿ ನಿರತರಾಗಿದ್ದ ಮಂಜು ಮತ್ತು ಆತನ ಸಹಚರ ಸೇರಿದಂತೆ ಆರು ಜನ ಗಿರಾಕಿಗಳು ಸಿಕ್ಕಿ ಬಿದ್ದಿದ್ದು, ಇಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಮಂಜು ಮತ್ತು ಆತನ ಸಹಚರನನ್ನು ಬಂಧಿಸಲಾಗಿದ್ದರೆ, ಆರು ಜನರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳ ವಿರುದ್ದ ಮಾನವ ಕಳ್ಳ ಸಾಗಾಣಿಕೆ ಕಾಯ್ದೆ-1956 ಹಾಗೂ ಭಾರತೀಯ ನ್ಯಾಯ ಸಂಹಿತೆ-2023 ಕಾಯ್ದೆಯಡಿ ದೂರು ದಾಖಲಾಗಿದೆ. ಇನ್ನಾದರೂ ಹೊಸ ಬಡಾವಣೆಗಳಲ್ಲಿ ವಾಸ ಮಾಡುವವರೇ ಎಚ್ಚರವಾಗಿರಿ.. ಇಂತಹವರು ನಿಮ್ಮ ಮನೆಯ ಸಮೀಪವೇ ಇದ್ದರೂ ಇರಬಹುದು.. ಅದರಲ್ಲೂ ನಮನೆಯನ್ನು ಬಾಡಿಗೆ ಕೊಡುವ ಮಾಲೀಕರು ಕೂಡ ಎಚ್ಚೆತ್ತುಕೊಳ್ಳಬೇಕಿದೆ. ಬಾಡಿಗೆ ಕೊಡುವ ಮುನ್ನ ಅವರ ಪೂರ್ವಾಪರ ಅರಿತು ಮನೆಯನ್ನು ಬಾಡಿಗೆ ನೀಡಿ.. ಇಲ್ಲದೆ ಹೋದರೆ ನಿಮಗೂ ದಂಧೆಕೋರರು ನೀರು ಕುಡಿಸುವುದರಲ್ಲಿ ಎರಡು ಮಾತಿಲ್ಲ..
B M Lavakumar