ಮೈಸೂರಿನ ವೆಂಕಟಾರ್ಜುನ ಧ್ಯಾನ ಮಂದಿರದಲ್ಲಿ ಗುರು ಪೂರ್ಣಿಮೆ ಆಚರಣೆ… ಅವಧೂತರಿಗೆ ಬೆಳ್ಳಿ ಕಿರೀಟ ಧಾರಣೆ

ಮೈಸೂರು: ಮೈಸೂರಿನ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ವತಿಯಿಂದ ಆಷಾಢ ಮಾಸದ ಮೊದಲ ಹುಣ್ಣಿಮೆ ದಿನದ ಅಂಗವಾಗಿ ಗುರು ಪೂರ್ಣಿಮೆಯನ್ನು ಮೈಸೂರು-ಬನ್ನೂರು ರಸ್ತೆ ಹಾರೋಹಳ್ಳಿ ಮತ್ತು ಬಿದರಗೂಡು ಗ್ರಾಮದ ನಡುವೆ ಇರುವ ವೆಂಕಟಾರ್ಜುನ ಧ್ಯಾನ ಮಂದಿರದಲ್ಲಿ ಅತ್ಯಂತ ವೈಭವದಿಂದ ಆಚರಿಲಾಯಿತು.
ಪರಮಪೂಜ್ಯ ಶ್ರೀ ಶ್ರೀ ಶ್ರೀ ವೇಂಕಟಾಚಲ ಅವಧೂತರ ಆಶೀರ್ವಾದ ಮತ್ತು ಶ್ರೀ ಶ್ರೀ ಅರ್ಜುನ ಅವಧೂತರ ದಿವ್ಯ ಉಪಸ್ಥಿತಿಯಲ್ಲಿ ಹಾಗೂ ಸಾವಿರಾರು ಜನರ ಸಮ್ಮುಖದಲ್ಲಿ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮವನ್ನು ಮಾಜಿ ಸಚಿವ ಶಿವಣ್ಣ , ಮಾಜಿ ಶಾಸಕ ನಾಗೇಂದ್ರ ಸೇರಿದಂತೆ ಗಣ್ಯರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಗುರುಗಳ ಸಾಮಿಪ್ಯದಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡರು. ಮಾಜಿ ಸಚಿವ ಶಿವಣ್ಣ ಅವರು ಮಾತನಾಡಿ ಇದು ಸರ್ವ ಜನಾಂಗದ ಸಮ್ಮೇಳನ ಎಂದು ಬಣ್ಣಿಸಿದರೆ, ಮಾಜಿ ಶಾಸಕ ನಾಗೇಂದ್ರ ಮಾತನಾಡಿ ಇದೊಂದು ಅದ್ಭುತ ಧಾರ್ಮಿಕ ಕಾರ್ಯಕ್ರಮ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಅರ್ಜುನ ಅವಧೂತರು ಮಾತನಾಡಿ ಗುರು ಪೂರ್ಣಿಮೆ ಗುರುವಿನ ಹಬ್ಬವಲ್ಲ… ಪ್ರತಿಯೊಬ್ಬ ಶಿಷ್ಯರು ಒಂದಾಗಿ ಸೇರಿ ಆಚರಿಸುವ ಹಬ್ಬವೆ ಗುರು ಪೂರ್ಣಿಮೆ ಎಂದು ಬಣ್ಣಿಸುವ ಮೂಲಕ ಪ್ರವಚನ ನೀಡಿದರು. ಮೊದಲಿಗೆ ಬನ್ನೂರು ಮುಖ್ಯ ರಸ್ತೆಯಿಂದ ಆಶ್ರಮದವರೆಗೂ ಬೃಹತ್ ಶೋಭಾಯಾತ್ರೆಯನ್ನು ಅದ್ಧೂರಿಯಾಗಿ ನಡೆಸಲಾಯಿತು. ಇದಕ್ಕೂ ಮುನ್ನ ಗುರು ನಿವಾಸದಲ್ಲಿ ವ್ಯಾಸ ಪೂಜೆ, ಗೋ ಪೂಜೆ ನಡೆದರೆ, ಧ್ಯಾನ ಮಂದಿರದಲ್ಲಿ ಕಾಕಡಾರತಿ, ಗಣಪತಿ ಹೋಮ, ದತ್ತಾತ್ರೇಯ ಹೋಮ, ವೆಂಕಟಾಚಲ ಅವಧೂತರ ಹೋಮ, ಪಾದುಕ ಪೂಜೆ ನಡೆಯಿತು. ನಂತರ ಗುರುಗಳು ಪೂರ್ಣಾಹುತಿ ನೆರವೇರಿಸಿದರು.
ಈ ಶುಭ ಸಂದರ್ಭದಲ್ಲಿ ಭಕ್ತರೊಬ್ಬರು ಅರ್ಜುನ ಅವಧೂತರಿಗೆ ಬೆಳ್ಳಿ ಕಿರೀಟ ಧಾರಣೆ ಮಾಡಿದರು. ಅದನ್ನು ಗುರುಗಳು ತಮ್ಮ ಗುರುಗಳಾದ ವೆಂಕಟಾಚಲ ಅವಧೂತರಿಗೆ ಸಮರ್ಪಿಸಿದರು. ಇದೇ ಸಮಯದಲ್ಲಿ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಅಭಿನಂದಿಸಲಾಯಿತು. ಬಡ ವಿದ್ಯಾರ್ಥಿಗಳಿಗೆ ವಾರ್ಷಿಕ ಶಾಲಾ ಶುಲ್ಕ ಭರಿಸುವ ಮೂಲಕ ನೆರವು ನೀಡಲಾಯಿತು. ಸಂಗೀತ ವಿಧುಷಿಗಳು ಮತ್ತು ಕಲಾವಿದರು ಭಕ್ತಿ ಗೀತೆಗಳು ಮತ್ತು ದೇವರ ನಾಮಗಳನ್ನು ಹಾಡುವ ಮೂಲಕ ಕಾರ್ಯಕ್ರಮದ ಮೆರಗು ಹೆಚ್ಚಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಭಕ್ತಾದಿಗಳಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು ಮತ್ತು ಭಕ್ತಾದಿಗಳಿಗೆ ಭಗವದ್ಗೀತೆ ಪುಸ್ತಕಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ರಾಜಕಾರಣಿಗಳು, ಚಲನಚಿತ್ರ ಮತ್ತು ಕಿರು ತೆರೆ ನಟ ನಟಿಯರು ಸೇರಿದಂತೆ ಗಣ್ಯಾತಿ ಗಣ್ಯರು ಭಾಗವಹಿಸಿದ್ದು ವಿಶೇಷವಾಗಿತ್ತು.