ಕೊಡಗಿನಲ್ಲಿ ಸುರಿಯುತ್ತಿರುವ ಗಾಳಿ ಮಳೆಗೆ ಬಹುತೇಕ ಪಕ್ಷಿಗಳು ವಲಸೆ ಹೋಗಿವೆ.. ಆದರೆ ಗಾಳಿಮಳೆಯನ್ನರಸಿಕೊಂಡು ದೂರದ ಯುರೋಪ್ ನಿಂದ ಬೆಳ್ಳಕ್ಕಿಗಳು ಬಂದಿವೆ ಎಂದರೆ ಅಚ್ಚರಿಯಾಗಬಹುದು. ಆದರೆ ಇದು ನಿಜ.. ಹೀಗೆ ದೂರದಿಂದ ಬಂದ ಬೆಳ್ಳಕ್ಕಿಗಳು ನಗರ ವ್ಯಾಪ್ತಿಯಲ್ಲಿರುವ ಮರಗಳಲ್ಲಿ ಆಶ್ರಯ ಪಡೆದು ತಮ್ಮ ಸಂತಾನೋತ್ಪತ್ತಿಯಲ್ಲಿ ತೊಡಗಿಕೊಂಡಿವೆ.. ಹೀಗಾಗಿ ಹಾರಾಟ.. ಚೀರಾಟ.. ಜೋರಾಗಿದೆ.
ಇವತ್ತು ಕೊಡಗಿಗೊಂದು ಸುತ್ತು ಹೊಡೆದರೆ ಕೆಲವು ಪಟ್ಟಣಗಳ ನಡುವೆ ಬೆಳೆದು ನಿಂತ ಹೆಮ್ಮರದಲ್ಲಿ ಬೆಳ್ಳಕ್ಕಿಗಳು ಆಶ್ರಯ ಪಡೆದ ದೃಶ್ಯಗಳು ಕಣ್ಣಿಗೆ ಕಾಣಿಸುತ್ತವೆ. ಅದರಲ್ಲೂ ಪ್ರತಿವರ್ಷವೂ ಇವು ಮೂರ್ನಾಡು, ನಾಪೋಕ್ಲು, ವೀರಾಜಪೇಟೆಗೆ ತಪ್ಪದೆ ಬರುತ್ತವೆ. ಅಷ್ಟೇ ಅಲ್ಲದೆ ಪ್ರತಿವರ್ಷವೂ ಅದೇ ಮರವನ್ನು ಆಶ್ರಯಿಸುತ್ತವೆ. ಈ ಮರಗಳನ್ನು ಸಂಪೂರ್ಣ ಅಕ್ರಮಿಸಿಕೊಂಡು ಅತ್ತಿಂದ ಇತ್ತ ಹಾರುತ್ತಾ.. ಚೀರಾಡುತ್ತಾ ಎಲ್ಲರ ಗಮನವನ್ನು ತಮ್ಮೆಡೆಗೆ ಸೆಳೆಯುತ್ತವೆ.
ನಿಜಹೇಳಬೇಕೆಂದರೆ ಕೊಡಗಿನಲ್ಲಿ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಮಳೆ, ಗಾಳಿಯನ್ನು ಸಹಿಸದ ಹಲವು ಪಕ್ಕಿಗಳು ಇಲ್ಲಿಂದ ದೂರದ ಸುರಕ್ಷಿತ ತಾಣವನ್ನು ಅರಸುತ್ತಾ ವಲಸೆ ಹೋಗುತ್ತವೆ. ಇಲ್ಲಿ ಕೆಲವೇ ಕೆಲವು ಪಕ್ಷಿಗಳು ಮಾತ್ರ ಉಳಿದುಕೊಳ್ಳುತ್ತವೆ.
ಇದನ್ನೂ ಓದಿ: ಕೊಡಗಿನಲ್ಲಿ ಮಳೆಗಾಲ ಆರಂಭವಾಯಿತೆಂದರೆ ಗುಡ್ಡದಭೂತದ ಭಯ
ಆದರೆ ಇದೀಗ ಕೊಡಗಿನಲ್ಲಿ ಕಾಣಸಿಗುತ್ತಿರುವ ಬೆಳ್ಳಕ್ಕಿಗಳು ಹಾಗಿಲ್ಲ. ಇವುಗಳ ವಿಶೇಷತೆ ಏನೆಂದರೆ ಪ್ರತಿವರ್ಷವೂ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಇಲ್ಲಿಗೆ ಅತಿಥಿಗಳಾಗಿ ಬರುತ್ತಿವೆ. ಹೀಗೆ ಬರುವ ಅವು ಎಲ್ಲೆಂದರಲ್ಲಿ ಬೀಡು ಬಿಡದೆ ಸುರಕ್ಷಿತ ಸ್ಥಳವನ್ನು ಆಯ್ದು ಕೊಳ್ಳುತ್ತವೆ. ಅದರಲ್ಲೂ ಪೇಟೆ ಪಟ್ಟಣದ ಜನಸಂದಣಿ ಇರುವ ಪ್ರದೇಶದಲ್ಲಿಯೇ ಬೀಡು ಬಿಡುತ್ತವೆ. ಮತ್ತು ಸದಾ ಚೀರಾಡುತ್ತಾ ಪಟ್ಟಣದ ಜನಜಂಗಳಿಯ ನಡುವೆ ನೀಲಾಗಸದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಾ ಗೂಡುಕಟ್ಟುವುದರಲ್ಲಿ, ಮೊಟ್ಟೆಯಿಟ್ಟು ಮರಿಮಾಡುವುದರಲ್ಲಿ ನಿರತವಾಗಿ ಬಿಡುತ್ತವೆ.
ಒಂದೆರಡು ದಶಕಗಳ ಹಿಂದೆ ಒಂದಷ್ಟು ಬೆಳ್ಳಕ್ಕಿಗಳು ನಾಪೋಕ್ಲಿನ ಹೆಮ್ಮರಗಳಲ್ಲಿ ಕಂಡು ಬಂದಿದ್ದವು. ಕೆಲವೇ ಕೆಲವು ಬಂದಿದ್ದ ಬೆಳ್ಳಕ್ಕಿಗಳು ತಮ್ಮ ಸಂತಾನೋತ್ಪತ್ತಿ ಮಾಡಿಕೊಂಡು ಹಿಂತಿರುಗಿದ್ದವು. ಇಲ್ಲಿ ಆಹಾರದ ಸಮಸ್ಯೆ, ಜನರಿಂದ ಕಿರುಕುಳ ಇಲ್ಲದ್ದರಿಂದ ನಂತರದ ವರ್ಷಗಳಿಂದ ವಲಸೆ ಬರುವ ಹಕ್ಕಿಗಳ ಸಂಖ್ಯೆಯೂ ಹೆಚ್ಚಾಯಿತು. ಆ ನಂತರ ನಾಪೋಕ್ಲು ಮಾತ್ರವಲ್ಲದೆ, ಮೂರ್ನಾಡು ಮಡಿಕೇರಿ ರಸ್ತೆಯಲ್ಲಿರುವ ಹಾಕತ್ತೂರಿನ ಹೆಮ್ಮರಗಳಲ್ಲಿ ಬೀಡು ಬಿಡತೊಡಗಿದವು. ಕೆಲವು ವರ್ಷಗಳ ಕಾಲ ಇಲ್ಲಿ ಬೆಳ್ಳಕ್ಕಿಗಳ ಕಲರವ ಕೇಳಿಸುತ್ತಿತ್ತಾದರೂ ಇಲ್ಲಿದ್ದ ಮರಗಳನ್ನು ಕಡಿದಿದ್ದರಿಂದ ಮೂರ್ನಾಡು, ನಾಪೋಕ್ಲು ಹಾಗೂ ವೀರಾಜಪೇಟೆಯಲ್ಲಿ ತಮ್ಮ ವಾಸ್ತವ್ಯ ಬದಲಿಸಿದ ಬೆಳ್ಳಕ್ಕಿಗಳು ಇದೀಗ ಖಾಯಂ ಮಾಡಿಕೊಂಡಿವೆ.
ಇದನ್ನೂ ಓದಿ: ಮಳೆಗಾಲದಲ್ಲಿ ಕೊಡಗಿನತ್ತ ಪ್ರವಾಸಿಗರ ದಂಡು… ಈಗ ಟ್ರೆಂಡ್ ಆಗುತ್ತಿದೆ ಮಾನ್ಸೂನ್ ಟ್ರಿಪ್ ..
ಸಾಮಾನ್ಯವಾಗಿ ಮುಂಗಾರು ಆರಂಭವಾಗುತ್ತಿದ್ದಂತೆಯೇ ಅಂದರೆ ಮೇ-ಜೂನ್ ತಿಂಗಳಲ್ಲಿ ಹಿಂಡು ಹಿಂಡಾಗಿ ಬರುವ ಬೆಳ್ಳಕ್ಕಿಗಳು ನಾಪೋಕ್ಲು ಹಾಗೂ ಮೂರ್ನಾಡು, ವೀರಾಜಪೇಟೆ (ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ) ಪಟ್ಟಣದ ಹೆಮ್ಮರಗಳಲ್ಲಿ ಬೀಡುಬಿಡುತ್ತವೆ. ಆ ನಂತರ ಸುತ್ತಮುತ್ತಲಿನ ಕಾಫಿ, ಏಲಕ್ಕಿ ತೋಟಗಳಿಂದ ಕಡ್ಡಿಕಸಗಳನ್ನು ಹೆಕ್ಕಿ ತಂದು ಮರಗಳ ಕೊಂಬೆಗಳಲ್ಲಿ ಗೂಡುಕಟ್ಟುವುದರಲ್ಲಿ ನಿರತವಾಗುತ್ತವೆ. ಬಳಿಕ ಮೊಟ್ಟೆಯಿಡುವ ಸಂಭ್ರಮ. ಈ ಸಂದರ್ಭ ಹೆಣ್ಣುಹಕ್ಕಿಗಳು ಮರಗಳಲ್ಲಿಯೇ ಉಳಿದು ಮೊಟ್ಟೆಯಿಡುವುದರಲ್ಲಿ, ಕಾವು ಕೊಡುವುದರಲ್ಲಿ ನಿರತರಾದರೆ, ಗಂಡು ಬೆಳ್ಳಕ್ಕಿಗಳು ದೂರದ ಗದ್ದೆ ಬಯಲಿನಿಂದ ಅಡ್ಡಾಡಿ ಹುಳಹುಪ್ಪಟೆಗಳನ್ನು ತರುತ್ತವೆ. ಜತೆಗೆ ಗಂಡು ಹಕ್ಕಿಯೂ ಕಾವು ನೀಡುವ ಮೂಲಕ ಹೆಣ್ಣು ಹಕ್ಕಿಗಳಿಗೆ ಸಹಕರಿಸುತ್ತದೆ.
ಸುತ್ತಮುತ್ತ ಗದ್ದೆಬಯಲುಗಳಿರುವುದರಿಂದ ಉಳುಮೆ ಮಾಡಿದಾಗ ಗದ್ದೆಗಳಲ್ಲಿ ಹುಳಹುಪ್ಪಟೆಗಳು ಹೇರಳವಾಗಿ ಸಿಗುತ್ತವೆ. ಮರಿಗಳು ಬೆಳೆದು ರೆಕ್ಕೆಪುಕ್ಕ ಹುಟ್ಟುತ್ತಿದ್ದಂತೆಯೇ ಹಾರಾಟ ಕಲಿಸುತ್ತವೆ. ಈ ಸಂದರ್ಭ ಹಕ್ಕಿಗಳ ಚೀರಾಟ… ಹಾರಾಟದ ಸದ್ದು ಮುಗಿಲು ಮುಟ್ಟುತ್ತದೆ. ಜನರ ಸದ್ದಿಗೆ, ವಾಹನಗಳ ಓಡಾಟಕ್ಕೆ ಇವು ಸೊಪ್ಪು ಹಾಕದೆ ತಮ್ಮ ಕಾರ್ಯಗಳಲ್ಲಿ ನಿರತವಾಗಿಬಿಡುತ್ತವೆ. ನವೆಂಬರ್ ತಿಂಗಳ ವೇಳೆಗೆ ತಮ್ಮ ಮರಿಗಳೊಂದಿಗೆ ತಮ್ಮ ಸ್ವಸ್ಥಾನಕ್ಕೆ ಮರಳುತ್ತವೆ. ಮತ್ತೆ ಇವುಗಳನ್ನು ನೋಡಬೇಕಾದರೆ ಮುಂದಿನ ವರ್ಷದ ಮಳೆಗಾಲವೇ ಬರಬೇಕು. ಪಟ್ಟಣಗಳ ಹೃದಯ ಭಾಗದಲ್ಲಿಯೇ ಬೀಡು ಬಿಡುತ್ತಿರುವುದರಿಂದ ಜನರಿಗೆ ತೊಂದರೆಯಾಗುತ್ತದೆಯಾದರೂ ಇವುಗಳನ್ನು ಸಹಿಸಿಕೊಂಡು ಸಂತನೋತ್ಪತ್ತಿಗೆ ಸಹಕರಿಸುತ್ತಿದ್ದಾರೆ. ಹಾಗಾಗಿ ಪ್ರತಿವರ್ಷವೂ ಇಲ್ಲಿಗೆ ಬಂದೇ ಬರುತ್ತವೆ.
ಇದನ್ನೂ ಓದಿ: ಮುಂಗಾರು ಮಳೆಗೆ ದರ್ಶನ ನೀಡುವ ಅಪರೂಪದ ಅತಿಥಿಗಳು…
ಬೆಳ್ಳಕ್ಕಿಗಳ ಬಗ್ಗೆ ತಿಳಿಯುತ್ತಾ ಹೋದರೆ ಒಂದಷ್ಟು ಮಾಹಿತಿಗಳು ಲಭಿಸುತ್ತವೆ. ಇವುಗಳ ಮೂಲ ನೆಲೆ ಯುರೋಪ್, ಏಷಿಯಾ, ಆಸ್ಟೇಲಿಯಾದ ಉಷ್ಣವಲಯದ ಒಳನಾಡಿನ ಹಾಗೂ ಕರಾವಳಿಯ ಜೌಗು ಪ್ರದೇಶ ಎಂದು ಹೇಳಲಾಗುತ್ತದೆ. ಅದರಲ್ಲೂ ಯುರೋಪಿನಲ್ಲಿ ನೆಲೆ ಬಿಟ್ಟಿರುವ ಇವು ಚಳಿಗಾಲದಲ್ಲಿ ಏಷ್ಯಾ ಖಂಡದ ಕಡೆಗೆ ವಲಸೆ ಹೋಗುತ್ತವೆಯಂತೆ. ಮರದ ಕೊಂಬೆ, ಪೊದೆಗಳಲ್ಲಿ ಕಸ ಕಡ್ಡಿಗಳಿಂದ ಗೂಡು ಕಟ್ಟಿಕೊಂಡು ಗುಂಪು ಗುಂಪಾಗಿ ವಾಸಿಸುವುದು ಜತೆಗೆ ತಮ್ಮ ಗೂಡಿನ ಸುತ್ತಲಿನ ಮೂರರಿಂದ ನಾಲ್ಕು ಮೀಟರ್ ವ್ಯಾಪ್ತಿ ಪ್ರದೇಶವನ್ನು ಗಡಿಯಾಗಿ ಪರಿಗಣಿಸಿ ಶತ್ರುಗಳಿಂದ ರಕ್ಷಿಸಿಕೊಳ್ಳುವುದು ಇವುಗಳ ವಿಶೇಷವಾಗಿದೆ.
ಹೆಣ್ಣು ಕೊಕ್ಕರೆ ಒಮ್ಮೆ ಮೂರರಿಂದ ನಾಲ್ಕು ಮೊಟ್ಟೆ ಇಟ್ಟು, ಇಪ್ಪತ್ತೊಂದರಿಂದ ಇಪ್ಪತ್ತೈದು ದಿನಗಳವರೆಗೆ ಸರದಿಯಲ್ಲಿ ಗಂಡು ಹೆಣ್ಣು ಎರಡೂ ಹಕ್ಕಿಗಳು ಕಾವು ಕೊಟ್ಟು ಮರಿ ಮಾಡುತ್ತವೆ. ಹುಟ್ಟಿದ ಮರಿಗಳು ಸುಮಾರು ಒಂದೂವರೆ ತಿಂಗಳ ಕಾಲ ತಾಯಿಯಿಂದ ಗುಟುಕು ಪಡೆಯುತ್ತವೆ. ಬಳಿಕ ಹಾರಲು ಆರಂಭಿಸಿ ಆಹಾರವನ್ನು ತಾವೇ ಹುಡುಕಿಕೊಳ್ಳುತ್ತವೆ. ಕೊಡಗಿನಲ್ಲಿ ಬೆಳ್ಳಕ್ಕಿಗಳಿಗೆ ಇಷ್ಟದ ಆಹಾರವಾದ ಕಪ್ಪೆ, ಮೀನು, ಏಡಿ, ಹುಳ, ಹುಪ್ಪಟೆಗಳು ಹೇರಳವಾಗಿ ಸಿಗುತ್ತಿದ್ದು, ಗದ್ದೆ, ಹೊಳೆ, ಕೆರೆಗಳ ಬದಿಯಲ್ಲಿ ಅವುಗಳನ್ನು ಬೇಟೆಯಾಡುತ್ತವೆ. ಅದೇನೇ ಇರಲಿ ಕೊಡಗಿನ ಮಳೆಗೆ ಮೈಯೊಡ್ಡಿ ತಮ್ಮ ಸಂತಾನೋತ್ಪತ್ತಿಗಾಗಿ ಸಹಸ್ರಾರು ಕಿ.ಮೀ. ದೂರದಿಂದ ಬರುವ ಬೆಳ್ಳಕ್ಕಿಗಳ ಸಾಹಸವನ್ನು ನಾವು ಮೆಚ್ಚಲೇ ಬೇಕು.
B M Lavakumar