CinemaLatest

ಕನ್ನಡ ಸಿನಿಲೋಕಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನ ಕೊಡುಗೆಯೇನು? ಚಂದನವನದಲ್ಲಿ ಮಿನುಗಿದ ಇಲ್ಲಿನ ತಾರೆಗಳೆಷ್ಟು?

ಕನ್ನಡ ಚಿತ್ರರಂಗಕ್ಕೆ ಮೈಸೂರಿನ ಬಹಳಷ್ಟಿದೆ.. ಇಲ್ಲಿನ ತಾರೆಗಳು ದೊಡ್ಡದೊಂದು ಹೆಸರನ್ನೇ ಮಾಡಿದ್ದಾರೆ.. ಮಾಡುತ್ತಲೇ ಇದ್ದಾರೆ. ಕನ್ನಡ ಚಿತ್ರರಂಗಕ್ಕೆ ಮೈಸೂರಿನ ನಂಟಿನ ಕುರಿತಂತೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ ಅವರು ಇಲ್ಲಿ ಹೇಳಿದ್ದಾರೆ.. ಅದೇನು? ಎಂಬುದನ್ನು ನೀವೇ ಓದಿಬಿಡಿ…

ಡಾ.ರಾಜ್ ತಂದೆ ಪುಟ್ಟಸ್ವಾಮಯ್ಯನವರ ಹುಟ್ಟೂರು ಸಿಂಗಾನಲ್ಲೂರು, ಡಾ.ರಾಜ್ ತಾಯಿ ಲಕ್ಷ್ಮಮ್ಮ (ಅಂದಿನ ಮೈಸೂರು) ಕರ್ನಾಟಕ- ತಮಿಳುನಾಡು ಗಡಿನಾಡು ಗ್ರಾಮ ದೊಡ್ಡ ಗಾಜನೂರಿನವರು. ಈ ದಂಪತಿಯ ಮಕ್ಕಳು ಮುತ್ತುರಾಜು (ರಾಜಕುಮಾರ) ಮತ್ತು ವರದರಾಜು. ಕೆ.ಆರ್.ನಗರ ತಾಲೂಕು ಸಾಲಿಗ್ರಾಮದ ಅಪ್ಪಾಜಿಗೌಡರ ಮಕ್ಕಳು ಪಾರ್ವತಮ್ಮ ರಾಜಕುಮಾರ್, ಗೋವಿಂದರಾಜು, ಚಿನ್ನೇಗೌಡ, ಭರತರಾಜು. ಇದೇಗ್ರಾಮದ ಇನ್ನೊಬ್ಬ ಖ್ಯಾತರು ನಿರ್ಮಾಪಕ, ಸಾ.ರಾ.ಗೋವಿಂದು!

ಇದನ್ನೂ ಓದಿ: ರಿಯಲ್ ಹೀರೋ ಮೈಸೂರಿನ ಕೆಂಪರಾಜ ಅರಸು… ಇದು ಕನ್ನಡಚಿತ್ರರಂಗದಲ್ಲಿ ಶೋಕಿಗಾಗಿ ನಟನಾದವನ ಕಥೆ!

ದಕ್ಷಿಣ ಭಾರತದ 2ನೇ ಮತ್ತು ಕರ್ನಾಟಕ ರಾಜ್ಯದ ಮೊಟ್ಟ ಮೊದಲ ಸಿನಿಮಾ ಸ್ಟುಡಿಯೋ “ನವಜ್ಯೋತಿ” ಸ್ಥಾಪಿತವಾದ್ದು ಮತ್ತು ಪ್ರಪಂಚದ 15 ವಿವಿಧ ಭಾಷೆಯ ಸಾವಿರಾರು ಸಿನಿಮಾಗಳ ಚಿತ್ರೀಕರಣ ನಡೆದ ಪ್ರೀಮಿಯರ್  ಫಿಲಂ ಸ್ಟುಡಿಯೋ ರಾರಾಜಿಸಿದ್ದು ಮೈಸೂರು ನಗರದಲ್ಲಿ. ಇವೆರಡೂ ಸಿನಿಮ ಸ್ಟುಡಿಯೋದ ರೂವಾರಿಗಳು ಮೈಸೂರಿನವರೇ ಎಂಬುದು ಸಹ ಗತವೈಭವದ ಇತಿಹಾಸ!

ಮೈಸೂರು ರಾಮಾನುಜ ರಸ್ತೆ ಶ್ರೀನಿವಾಸ ಅಗ್ರಹಾರ 8ನೇ ಕ್ರಾಸಿನಲ್ಲಿ (ಸತ್ಯಹರಿಶ್ಚಂದ್ರ, ಭಕ್ತಕುಂಬಾರ, ಬಬ್ರುವಾಹನ, ಮುಂತಾದ ಅನೇಕ ಅದ್ದೂರಿ ಫಿಲಂಸ್ ಖ್ಯಾತಿಯ) ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಮತ್ತು ಭಾರ್ಗವ ಇದ್ದರು. ಭಾರತದ ಶ್ರೇಷ್ಠ ನಿರ್ದೇಶಕಲ್ಲಿ ಒಬ್ಬರಾಗಿದ್ದ ಎಸ್.ಆರ್.ಪುಟ್ಟಣ್ಣ ಕಣಗಾಲ್ ಮತ್ತು ಇವರಣ್ಣ ಕಣಗಾಲ್ ಪ್ರಭಾಕರಶಾಸ್ತ್ರಿ ಇಬ್ಬರೂ ಇಲ್ಲಿಯೇ ಇದ್ದರು. ಇಲ್ಲಿನ 10ನೇ ಕ್ರಾಸ್ ಪಾರ್ಕಿನ ಮೂಲೆ ಮನೆಯಲ್ಲಿ ನಟ, ನಿರ್ಮಾಪಕ ಚೇತನ್ ರಾಮರಾವ್ ಮತ್ತು 18ನೇ ಕ್ರಾಸ್ ಬಲಭಾಗದ ಎರಡನೇ ಮನೆಯಲ್ಲಿ ಹಾಸ್ಯನಟ ನಿರ್ಮಾಪಕ, ನಿರ್ದೇಶಕರಾದ ರತ್ನಾಕರ್-ಮಧು ಸೋದರರು ವಾಸವಿದ್ದರು. ನಾಟಕ- ಚಿತ್ರರಂಗದ ದಿಗ್ಗಜರಾದ ಮಾಸ್ಟರ್ ಹಿರಣ್ಣಯ್ಯ ಮತ್ತು ಇವರ ತಂದೆ ಕೆ.ಹಿರಣ್ಣಯ್ಯ ಇದೇ ಮೊಹಲ್ಲಾದಲ್ಲಿ ವಾಸವಿದ್ದರು.

ಇದನ್ನೂ ಓದಿ: ಬಾಲಿವುಡ್ ನಲ್ಲಿ ಕನ್ನಡಬಾವುಟ ಹಾರಿಸಿದ್ದ ಆರ್.ನಾಗೇಂದ್ರರಾವ್

ಇನ್ನು ಪಕ್ಕದಲ್ಲೆ ಇರುವ ಹತ್ತೊಂಬತ್ತನೇ ತಿರುವಿನಲ್ಲಿ ಪ್ರಸ್ತುತ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ತಂದೆ ಖ್ಯಾತ ವಿಲನ್ (ಭಾರತದ ಖ್ಯಾತ ಖಳನಾಯಕ ನಟ) ಫೈಟರ್ ಶೆಟ್ಟಿ ವಾಸವಾಗಿದ್ದರು. ನೂರೊಂದು ಗಣಪತಿ ಹಿಂಭಾಗದ ಬಸವೇಶ್ವರ ರಸ್ತೆಯಲ್ಲಿ ಜೂ.ನರಸಿಂಹರಾಜು ಹುಟ್ಟಿ ಬೆಳೆದು ಬದುಕಿ ಬಾಳಿದರು.  ಬಸವೇಶ್ವರ ರಸ್ತೆಯಲ್ಲಿ ವಾಸವಿದ್ದ ಮತ್ತೊಬ್ಬ ಪ್ರಮುಖ ನಟ ಅಮರ್,  ಹಾಗೂ ವಿದ್ಯಾರಣ್ಯಪುರಂ ಸಾರ್ವಜನಿಕ ಹಾಸ್ಟೆಲ್ ಬಿಲ್ಡಿಂಗ್ ನಲ್ಲಿ ಮತ್ತೊಬ್ಬ ಪ್ರಮುಖ ಪೋಷಕನಟಿ ಹಾಗೂ ಖ್ಯಾತ ರಂಗಭೂಮಿ ಕಲಾವಿದೆ ಶಾಂತಾದೇವಿ ಬಿ.ಎ.ವಾಸವಿದ್ದರು.

ಇದೇ ನೂರೊಂದು ಗಣಪತಿ ದೇವಸ್ಥಾನ ಸರ್ಕಲ್  ಬಳಸಿ ಕೊಂಡು ನಂಜುಮಳಿಗೆ ಸರ್ಕಲ್ ಹತ್ತಿ ನೈರುತ್ಯಕ್ಕೆ ಬಂದರೆ ಸಿಗೋದು ಗೋಪಾಲಸ್ವಾಮಿ ಶಿಶುವಿಹಾರ. ಸಂಪತ್ ಕುಮಾರ್ @ ವಿಷ್ಣುವರ್ಧನ್ ಹುಟ್ಟಿಬೆಳೆದ ಚಾಮುಂಡಿಪುರಂ, ವಿದ್ಯಾರಣ್ಯಪುರಂ. ಇದೇ ಮೊಹಲ್ಲಾ ಪದ್ಮಾ ಟಾಕೀಸ್ (ಪ್ರಭುದೇವ ಥಿಯೇಟರಿನ) ಎದುರುಗಡೆ ಮೂಲೆಯಲ್ಲಿದ್ದ ಚಪಾತಿ ಸಾಗು ಫೇಮಸ್ ಹೋಟೆಲಿನ ಚಡ್ಡಿಗುರುಮಲ್ಲಪ್ಪ ಹೋಟೆಲಿನ ಹಿಂಭಾಗ ಬಾಡಿಗೆ ಮನೆಯಲ್ಲಿದ್ದು, ಈ ಹೋಟೆಲ್ ನ  ಖಾಯಂ ಅತಿಥಿಯಾಗಿದ್ದು ಮತ್ತು ಅನೇಕ ವರ್ಷಕಾಲ ಇವರ ಕುಟುಂಬದ ಸದಸ್ಯ-ಕಂ-ಕುಟುಂಬಮಿತ್ರರೂ ಆಗಿದ್ದ ಕಲಾಕೇಸರಿ ಉದಯಕುಮಾರ್ ಅವರನ್ನು ಮರೆಯಲಾದೀತೆ?!

ಇದನ್ನೂ ಓದಿ: ಕನ್ನಡ ಚಿತ್ರರಂಗ ಎಂದಿಗೂ ಮರೆಯದ ಜಿ.ವಿ.ಅಯ್ಯರ್…

ಕೃಷ್ಣರಾಜ(K.R)ಮೊಹಲ್ಲಾ ಸಿದ್ದಪ್ಪ ಸ್ಕ್ವೇರ್ ಸುಣ್ಣದಕೇರಿ ಬಳಿ  ಹೆಂಚಿನ ಮನೆಯಲ್ಲಿ ವಾಸವಿದ್ದರು ಹಿರಿಯ ನಾಯಕಿ ಹಾಗೂ ಖ್ಯಾತ ಪೋಷಕ ನಟಿ M.ಜಯಶ್ರೀ. ಇದೇ ಮೊಹಲ್ಲಾದ ಬಸವೇಶ್ವರ ರಸ್ತೆಯಲ್ಲಿದ್ದ ಮತ್ತೊಬ್ಬ ಖ್ಯಾತ ನಟಿ (ಮೈಸೂರು) M.N.ಲಕ್ಷ್ಮೀದೇವಿ ವಾಸ ಮಾಡುತ್ತಿದ್ದರು. 500ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟಿದ್ದಾರೆ.  ಇದೇ ಚಾಮರಾಜ ಮೊಹಲ್ಲಾದ ಚಾಮರಾಜ ಜೋಡಿ(ನೂರಡಿ)ರಸ್ತೆಯಲ್ಲಿರುವ ಸೀತಾವಿಲಾಸ ಛತ್ರದ ವಸತಿಗೃಹದ ಮನೆಯೊಂದರಲ್ಲಿ ಖ್ಯಾತ ಪೋಷಕನಟ ಅನಂತರಾಮ್ ಮಚ್ಚೇರಿ ಸಹ ವಾಸವಿದ್ದರು”(ನರಸಿಂಹರಾಜು ಜತೆ ನಟಿಸುತ್ತಿದ್ದರು. ವಿಶೇಷವಾಗಿ ಆ ಕಾಲದ ಬ್ಲಾಕ್ ಬಸ್ಟರ್ ಫಿಲಂ “ರತ್ನಮಂಜರಿ” ಚಿತ್ರದ “ಯಾರು ಯಾರು ನೀ ಯಾರು, ಎಲ್ಲಿಂದ ಬಂದೆ ಯಾವೂರು” ಹಾಡು ಜನಮನ ಸೂರೆಗೊಂಡಿತ್ತು) ಈಕೆ 500ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ!

ಇಲ್ಲಿಂದ ನೇರವಾಗಿ ಲಕ್ಷ್ಮೀಪುರಂಗೆ ಬಂದರೆ ಇಲ್ಲಿ ಹಿರಿಯನಟಿ ಸಂಧ್ಯಾ ಮತ್ತು ಈಕೆಯ ಮಗಳು ಜಯಲಲಿತ ಹುಟ್ಟಿ ಬೆಳೆದ ಮನೆ ಮತ್ತು ಓದಿದ ಲಕ್ಷ್ಮೀಪುರಂ ಶಾಲೆ ಮುಂತಾದವುಗಳನ್ನು ಕಾಣಬಹುದು. ಇಲ್ಲಿಂದ ಮುಂದೆ ಬಂದರೆ ಸೀದ ಕೆಳಕ್ಕಿಳಿದು ಬಲ್ಲಾಳ್ ಸರ್ಕಲ್ ದಾಟಿ ಕೆ.ಜಿ.(ಕನ್ನೇಗೌಡ್ರ) ಕೊಪ್ಪಲ್ ರೈಲ್ವೆ ಸೇತುವೆ ಕೆಳಗೆ ಬಂದ್ರೆ ಸರಸ್ವತಿಪುರಂ  3ನೇ ಮೇನ್ ನಲ್ಲಿ ಮೈಸೂರು ಜಾಣ ಮಂಡ್ಯದ ಗಂಡು one & only ರೆಬೆಲ್ ಸ್ಟಾರ್ ಅಂಬರೀಷ್ ಹುಟ್ಟಿಬೆಳೆದ ಮನೆ.

ಇದನ್ನೂ ಓದಿ: ಭಾರತದ ಚಿತ್ರರಂಗದಲ್ಲಿ ಅಚ್ಚಳಿಯದ ಹೆಸರು ಬಿ.ಆರ್.ಪಂತುಲು..

ಇಲ್ಲಿನ ಮೊದಲ ಮೈನ್ ಲ್ಲಿ 1951ರ “ಜಗನ್ಮೋಹಿನಿ” ಚಿತ್ರದ ನಾಯಕಿ ಪ್ರತಿಮಾದೇವಿ, ಇವರ ಪತಿ ಖ್ಯಾತ ಚಿತ್ರೋದ್ಯಮಿ, ನಟ-ನಿರ್ಮಾಪಕ- ನಿರ್ದೇಶಕ ಕೆ.ಶಂಕರ್ ಸಿಂಗ್ ಮತ್ತು ಇವರ ಮಕ್ಕಳು ನಟ ಸಂಗ್ರಾಮ್ ಸಿಂಗ್, ನಿರ್ಮಾಪಕ-ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ಇವರ ಪುತ್ರ ಆದಿತ್ಯ. ನಂತರ ನಾಯಕನಟಿ ನಿರ್ಮಾಪಕಿ ನಿರ್ದೇಶಕಿ (ರಾಜೇಂದ್ರಸಿಂಗ್ಬಾಬುತಂಗಿ) ವಿಜಯಲಕ್ಷ್ಮಿಸಿಂಗ್ ಮತ್ತು ಈಕೆಯ ಪತಿ ನಟ ಜೈಜಗದೀಶ್. ಇಲ್ಲಿಂದ ಎರಡೇ ಕ್ರಾಸ್ ನಡೆದುಹೋದರೆ ನಾಗರಹಾವು ಮೇಷ್ಟ್ರು ಕೆ.ಎಸ್.ಅಶ್ವಥ್ ಮನೆ. ಸರಸ್ವತಿಪುರಂ ದಾಟಿ ಮಾನಸಗಂಗೋತ್ರಿಪಕ್ಕದ ಪಡುವಾರಳ್ಳಿಯಲ್ಲಿ ನಮ್ ಅಣ್ತಮ್ಮ ರಾಕೀ ಭಾಯ್ ಯಶ್ ಹುಟ್ಟಿ ಬೆಳೆದ ಮನೆ.

ಇಲ್ಲಿಂದ ಸೀದಾ ಕಾಳಿದಾಸ ರಸ್ತೆಗೆ ಬಂದರೆ ಗಂಧದಗುಡಿ ನಿರ್ಮಾಪಕ-ನಿರ್ದೇಶಕ “ಕುಲದಲ್ಲಿ ಕೀಳ್ಯಾವುದೋ  ಹುಚ್ಚಪ್ಪ….” ವೀರಬಾಹು ಖ್ಯಾತನಟ ಎಂ.ಪಿ.ಶಂಕರ್ ಮನೆ ಪಂಚವಟಿ, ಇದೇ ಹೆಸರನ್ನೇ ಇಲ್ಲಿನ ಸರ್ಕಲ್ ಗೆ ಇಟ್ಟಿದ್ದು, ಸಿಟಿ ಬಸ್ಟಾಪ್ ಕೂಡ ಹೌದು. ಕಾಲಕ್ರಮೇಣ ಶಂಕರ್ ಈ ಮನೆಯನ್ನು ಮಾರಿ ಇಲ್ಲಿಂದ ಸ್ವಲ್ಪ ಮುಂದೆ ಇರುವ ಕವಿಶೈಲ ಬಳಿ ಚಂದ್ರಕಲ ಆಸ್ಪತ್ರೆ ಪಕ್ಕದ ಮನೆಗೆ ಹೋದರು. ಇದೆಲ್ಲಕ್ಕೂ ಮುನ್ನ ಎಂ.ಪಿ. ಶಂಕರ್ ರೈಲ್ವೆ ವರ್ಕ್ ಶಾಪ್  ಉದ್ಯೋಗಿ ಆಗಿದ್ದಾಗ ಬನುಮಯ್ಯ ಚೌಕ ಡಿ.ಬನುಮಯ್ಯ ಶಾಲೆ ಹಿಂಭಾಗ ದಳವಾಯಿ ಸ್ಕೂಲ್ ಬಳಿಯ ಜಾಲರಿ ಮನೆಯಲ್ಲಿ ಹುಟ್ಟಿ ಬೆಳೆದಿದ್ದರು. ಪಂಚವಟಿ ಮನೆ ಎದುರು ಮನೆಯಲ್ಲಿ ಖ್ಯಾತ ನಟಿ ಬಿ.ವಿ. ರಾಧಾ ಮತ್ತು ನಟ, ನಿರ್ಮಾಪಕ, ನಿರ್ದೇಶಕ ರವಿ(k s ಸ್ವಾಮಿ) ವಾಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸಕಲಕಲಾವಲ್ಲಭ ಅಚ್ಚಕನ್ನಡಿಗ ಹೊನ್ನಪ್ಪ ಭಾಗವತರ್

ಮೈಸೂರಿನ ಪ್ರಭ ಟಾಕೀಸ್ ಬಳಿ ಸಿಟಿ ಪವರ್ ಪ್ರೆಸ್ ಮಾಲೀಕ ಹಾಗೂ  ರಂಗಭೂಮಿ ಕಲಾವಿದ, ಡಾ.ರಾಜ್ ಅವರಿಂದ ಅಪ್ಪಾಜಿ ಎಂದೇ ಕರೆಸಿಕೊಳ್ಳುತ್ತಿದ್ದ, “ಬ್ಲಾಕ್ ಮಾರ್ಕೆಟ್” ಚಿತ್ರದ ಹೀರೋ ಆಗಿದ್ದ ಖ್ಯಾತ ಪೋಷಕ ನಟ ಸಂಪತ್ ವಾಸವಿದ್ದರು. ಇವರ ಮಗ ಮುಕುಂದ ಕೂಡ ಓರ್ವ ಪೋಷಕನಟ. ಇಲ್ಲಿಂದ (ದೇವರಾಜಮೊಹಲ್ಲ) ದೇವರಾಜ ಅರಸು ರಸ್ತೆ ಹಿಂಭಾಗದಲ್ಲೆ ಖ್ಯಾತಗಾಯಕ ಪಿ.ಕಾಳಿಂಗರಾಯರು ವಾಸವಿದ್ದರು. ಇನ್ನು ಹಾರ್ಡಿಂಜ್ (ಜಯಚಾಮರಾಜ) ಸರ್ಕಲ್ ಪಕ್ಕದಲ್ಲಿರುವ ಇಟ್ಟಿಗೆ ಗೂಡಲ್ಲಿ ಬಂಗ್ಲೆ ಶಾಮರಾಯರ ಮಗ ಕುಳ್ಳ ಏಜೆಂಟ್ ದ್ವಾರಕೀಶ್ ಹುಟ್ಟಿ ಬೆಳೆದು ಡಿ.ಬನುಮಯ್ಯ ಶಾಲೆ ವಿದ್ಯಾರ್ಥಿಯಾಗಿದ್ದರು. ಇಲ್ಲಿಂದ ತುಸು ದೂರದಲ್ಲೇ ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ರವರ ನಿವಾಸ ಮತ್ತು ಹೋಟೆಲ್(ನಜರ್ಬಾದ್ ಮುಖ್ಯರಸ್ತೆಯಲ್ಲಿ) SANDESH’D’PRINCE ಇದೆ!

ಇಲ್ಲಿಂದ ಕಾರಂಜಿಕೆರೆ ಈಜಿಕೊಂಡು ಆ ಕಡೆ ದಡ ಮುಟ್ಟಿದ್ರೆ ಸಿದ್ದಾರ್ಥಲೇಔಟ್. ಇಲ್ಲಿದೆ ತೂಗುದೀಪಶ್ರೀನಿವಾಸ್ ಮನೆ. (ಈಮುನ್ನ ಎನ್.ಆರ್.ಮೊಹಲ್ಲಾದ ಬಾಡಿಗೆ ಮನೆಯಲ್ಲಿದ್ದರು) ಚಾಲೆಂಜಿಂಗ್ ಸ್ಟಾರ್ ದರ್ಶನ್  ಹುಟ್ಟಿ ಬೆಳೆದಿದ್ದು. ನಿರ್ಮಾಪಕ ದಿನಕರ್ ತೂಗುದೀಪ ಈಗಲೂ ಇಲ್ಲೇ ಇದ್ದಾರೆ. ಇದೇ ಮೊಹಲ್ಲಾ ಎ.ಜಿ.(ಅಗ್ರಿಕಲ್ಚರ್)ಬ್ಲಾಕ್ ನಲ್ಲಿ ಪೋಷಕನಟ ರಾಜಾನಂದ್ ವಾಸವಿದ್ದರು. ಮಂಡಿಮೊಹಲ್ಲಾ (K.T.Street) ಕಾಳಮ್ಮನಗುಡಿ ಬೀದಿ ಮನೆಯಲ್ಲಿ ಹುಟ್ಟಿಬೆಳೆದ ಡಿ.ಬನುಮಯ್ಯ ಶಾಲೆಯ ವಿದ್ಯಾರ್ಥಿ ಪೋಷಕ/ಹಾಸ್ಯನಟ ಮೈಸೂರು ಲೋಕೇಶ್, ಇವರ ಪತ್ನಿ ಪೋಷಕನಟಿ ಪಾರ್ವತಿಲೋಕೇಶ್, ಮಗಳು ಖ್ಯಾತನಟಿ ಪವಿತ್ರಾಲೋಕೇಶ್, ಮಗ ಪೋಷಕನಟ ಆದಿ(ತ್ಯ)ಲೋಕೇಶ್. ಕ್ರಮೇಣ ಇವರೆಲ್ಲರೂ ಗೋಕುಲಂ ಕಂಟೂರ್ ರಸ್ತೆ ಡಾಕ್ಟರ್ಸ್ ಕಾರ್ನರ್ ಬಳಿ ವಾಸವಿದ್ದರು.

ಇದನ್ನೂ ಓದಿ: ನಟನೆಯಿಂದ ನಿಬ್ಬೆರಗಾಗಿಸಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ..

ಮೈಸೂರು ಬಳಿಯಿರುವ “ದೂರ” ಎಂಬ ಹಳ್ಳಿಯಲ್ಲಿ ಜನಿಸಿದ ಭಾರತದ ಖ್ಯಾತ ನಟ ಪ್ರಭುದೇವ ಮತ್ತು ಸೋದರರ ತಾಯಿ ತವರೂರೇ ದೂರ. ಇವರ ತಂದೆ ಮೂಗೂರ್ ಸುಂದರ್  ಕೂಡ ಭಾರತೀಯ ಚಿತ್ರರಂಗದ ಅದರಲ್ಲೂ ವಿಶೇಷವಾಗಿ ದ.ಭಾರತ ಚಿತ್ರರಂಗದ ಖ್ಯಾತ ನೃತ್ಯನಿರ್ದೇಶಕ, ನಟ-ನಿರ್ಮಾಪಕ ಹಾಗೂ ನಿರ್ದೇಶಕ. ಸುಂದರ್ ಹುಟ್ಟೂರು ಮೈಸೂರು ಜಿಲ್ಲೆಯ ತಿರುಮ ಕೂಡಲು(ಟಿ)ನರಸೀಪುರ ಬಳಿ ಇರುವ ಮೂಗೂರು! ಭಾರತದ ಖ್ಯಾತಗಾಯಕ ವಿಜಯಪ್ರಕಾಶ್ ಬೋಗಾಧಿ ಮತ್ತು ನಟಿ ಸುಧಾಬೆಳವಾಡಿ, ಈಕೆ ಅಣ್ಣ ಹಾಲಿವುಡ್, ಬಾಲಿವುಡ್, ಸೇರಿದಂತೆ ಭಾರತೀಯ ಚಿತ್ರರಂಗದ ಪಂಚಭಾಷಾ ಖ್ಯಾತನಟ ಪ್ರಕಾಶ್ ಬೆಳವಾಡಿ (THE KASHMIR FILES) ಮೈಸೂರು ಅಸ್ಮಿತೆಯ ಕುಡಿಗಳು.

ಮೈಸೂರುಅನಂತಸ್ವಾಮಿ ಮತ್ತು ಇವರ ಪುತ್ರ ನಟ-ಗಾಯಕ ರಾಜುಅನಂತಸ್ವಾಮಿ, ರಘುದೀಕ್ಷಿತ್, ಡಾಲಿಧನಂಜಯ್ ಮುಂತಾದ ನೂರಾರು ಕಲಾವಿದರ, ಸಾವಿರಾರು ಕಲಾರಾಧಕರ ಜನ್ಮಸ್ಥಳ. ಖ್ಯಾತ ಹಾಸ್ಯನಟ-ಹೀರೋ ಚಿಕ್ಕಣ್ಣ, ಮೈಸೂರಿಗೆ ಸೇರಿದ ಬಲ್ಲಹಳ್ಳಿ ಎಂಬ ಪುಟ್ಟಗ್ರಾಮಕ್ಕೆ ಸೇರಿದವರು ಅದು ಏನೇ ಇರಲಿ  ಚಂದನವನ ಚಿತ್ರರಂಗದ ಬಹುತೇಕ ಸಿನಿತಾರೆಯರ ತವರೂರು ನಮ್ಮಹೆಮ್ಮೆಯ ಮೈಸೂರು! ಸ್ಯಾಂಡಲ್‍ವುಡ್ ನ ಸಿರಿಕನ್ನಡ ಚಿತ್ರಲೋಕದ ನಕ್ಷತ್ರಗಳಿರುವ ಅರಮನೆಗಳ ನಗರಿ ವಾಹ್…ಚಿರಸ್ಮರಣೀಯ! ಇಂತಹ ಭವ್ಯ ಸೊಬಗಿನ ಸುವರ್ಣ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಆಚಂದ್ರಾರ್ಕ ಅಜರಾಮರ!

admin
the authoradmin

5 Comments

  • ಅತುತ್ತಮ ಲೇಖನ, ಮೈಸೂರಿನ ನಟನಟಿಯರ ಬಗ್ಗೆ ಇಷ್ಟೆಲ್ಲ ವಿವರ ವಿಚಾರ ಗೊತ್ತೇ ಇರಲಿಲ್ಲ

    • ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಸಿನಿತಾರೆಯರ ಕೊಟ್ಟಿದ್ದ ಮೈಸೂರು ನಗರ ನಮ್ಮ ಹೆಮ್ಮೆಯ ನಗರ ಎಂದು ತಿಳಿಸಿದ ನಿಮಗೂ ಲೇಖಕರಿಗೂ ಧನ್ಯವಾದ

  • Most Sandalwood actors actresses are contributed from Mysore city. Wonderful and nice explaining article with more useful information, thanks sir

Leave a Reply