ArticlesLatest

ಕಕ್ಕಡ.. ಕೊಡಗಿನವರನ್ನು ಎಚ್ಚರಿಸುವ ಕಾಲ… ಕಕ್ಕಡದ ಆ ದಿನಗಳು ಹೇಗಿದ್ದವು? ಈಗ ಏನಾಗಿದೆ?

ಕೊಡಗಿನಲ್ಲಿ ಮೇ ತಿಂಗಳಿನಿಂದ ಆರಂಭವಾದ ಮಳೆ ಬಿಡುವು ನೀಡದೆ ಸುರಿಯುತ್ತಿದ್ದು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಆರ್ಭಟ ಇನ್ನಷ್ಟು ಹೆಚ್ಚಾದರೂ ಅಚ್ಚರಿಯಿಲ್ಲ. ಸಾಮಾನ್ಯವಾಗಿ ಮಳೆಗಾಲದಲ್ಲಿ ಈ ಎರಡು ತಿಂಗಳು ನಡು ಮಳೆಗಾಲದ ಅವಧಿಯಾಗಿದ್ದು, ಈ ಸಮಯದಲ್ಲಿ ಹೆಚ್ಚಿನ ಮಳೆ ಸುರಿಯುತ್ತದೆ. ಆದರೆ ಇದುವರೆಗಿನ ಮಳೆಗಾಲಕ್ಕೆ ಹೋಲಿಸಿದರೆ ಆರಂಭದಿಂದಲೇ ಮಳೆ ಸುರಿದಿರುವ ಕಾರಣದಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟು ಪ್ರಮಾಣದಲ್ಲಿ ಮಳೆ ಸುರಿದಿರುವುದು ಗೋಚರಿಸುತ್ತಿದೆ.. ಸ್ವಲ್ಪ ದಿನ ಬಿಡುವು ಕೊಡಬಾರದೇ? ಎಂದು ಜನ ಪ್ರಶ್ನೆ ಕೇಳಿಕೊಳ್ಳುವಂತಾಗಿದೆ.

ಮುಂದಿನ ಒಂದು ತಿಂಗಳ ಕಾಲ ಮಳೆ ಬಿಡುವು ಕೊಡುವ ಸಾಧ್ಯತೆ ಕಡಿಮೆಯೇ.. ಏಕೆಂದರೆ ಈ ಸಮಯಲ್ಲಿಯೇ ಅತ್ಯಧಿಕ ಮಳೆ ಸುರಿಯುತ್ತದೆ. ಕೊಡಗಿನಲ್ಲಿ ಜುಲೈ ತಿಂಗಳ 17 ತಾರೀಕಿನಿಂದ ಕಕ್ಕಡ ಮಾಸ ಆರಂಭವಾಗಲಿದೆ. ಇದನ್ನು ಆಟಿ ಮಾಸ ಎಂದು ಕೂಡ ಕರೆಯಲಾಗುತ್ತದೆ. ಈ ಒಂದು ತಿಂಗಳು ಅತಿ ಹೆಚ್ಚು ಮಳೆ ಸುರಿಯುವುದು ವಾಡಿಕೆ. ಜತೆಗೆ ಈ ಸಮಯದಲ್ಲಿಯೇ ಭತ್ತದ ಗದ್ದೆಯಲ್ಲಿ ನಾಟಿ ಕಾರ್ಯವೂ ಬಿರುಸಿನಿಂದ ನಡೆಯುತ್ತದೆ. ಸುರಿಯುವ ಮಳೆಯಲ್ಲಿಯೇ ನಾಟಿ ಕಾರ್ಯವನ್ನು ಮಾಡಲಾಗುತ್ತದೆ.

ಈಗಾಗಲೇ ಜಿಲ್ಲೆಯ ಅಳಿದುಳಿದ ಭತ್ತದ ಬಯಲಿನಲ್ಲಿ ಭತ್ತದ ಕೃಷಿ ಕಾರ್ಯ ಆರಂಭವಾಗಿದ್ದು, ಸಸಿ ಮಡಿ ತಯಾರಿ ಮಾಡಿದ್ದು, ಪೈರು ಬೆಳೆದು ನಾಟಿ ಮಾಡಲು ಸೂಕ್ತವಾಗುತ್ತಿದ್ದಂತೆಯೇ ನಾಟಿ ಕಾರ್ಯ ಶುರುವಾಗಲಿದ್ದು, ಇನ್ನೊಂದು ತಿಂಗಳ ಅವಧಿಯಲ್ಲಿ ಬಹುತೇಕ ಭತ್ತದ ನಾಟಿಕಾರ್ಯವೂ ಮುಗಿದು ಹೋಗಲಿದೆ. ಇನ್ನು ಕಕ್ಕಡ ಮಾಸ ಕೊಡಗು ಮತ್ತು ದಕ್ಷಿಣ ಕನ್ನಡ ವ್ಯಾಪ್ತಿಯಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಇದರ ಆಚರಣೆ ಕೂಡ ವಿಭಿನ್ನ ಮತ್ತು ವಿಶಿಷ್ಟವಾಗಿದ್ದು, ಇದರ ಆಚರಣೆಯಲ್ಲಿ ವೈಜ್ಞಾನಿಕತೆ ಅಡಗಿರುವುದು ಗೋಚರಿಸುತ್ತದೆ.

ಇದನ್ನೂ ಓದಿ: ಬೆಳ್ಳಕ್ಕಿ…. ಕೊಡಗಿಗೆ ಮಳೆಗಾಲದಲ್ಲಿ ಬರುವ ಯೂರೋಪಿನ ಅತಿಥಿಗಳು… 

ಜುಲೈ 17ರಿಂದ ಕಕ್ಕಡ ಮಾಸ ಆರಂಭವಾಗಿ ಆಗಸ್ಟ್ 16ರವರೆಗಿನ ಒಂದು ತಿಂಗಳ ಕಾಲ ಇರಲಿದೆ. ಈ ವೇಳೆ ಮಳೆಯ ಅಬ್ಬರವೂ ಜಾಸ್ತಿಯಾಗಲಿದೆ. ಮೊದಲಿನ ಮಳೆಗಾಲಕ್ಕೂ ಮತ್ತು ಭತ್ತದ ಕೃಷಿಗೂ ಈಗ ವ್ಯತ್ಯಾಸ ಕಾಣಿಸುತ್ತಿದೆ. ಅವತ್ತು ಇವತ್ತಿನಂತೆ ಯಾವ ಸೌಲಭ್ಯವೂ ಇರಲಿಲ್ಲ. ಈಗ ಇಡೀ ಕೊಡಗು ಆಧುನಿಕತೆಗೆ ತೆರೆದುಕೊಂಡಿದೆ. ಆಗ ಉಳುಮೆ ಎತ್ತುಗಳಿಂದ ನಡೆಯುತ್ತಿತ್ತು. ಆದರೀಗ ಟ್ರ್ಯಾಕ್ಟರ್, ಟಿಲ್ಲರ್ ಬಂದಿವೆ. ಆಗ ಕುಟುಂಬದವರು, ಸುತ್ತಮುತ್ತಲಿನವರು ಸೇರಿಕೊಂಡು ಭತ್ತದ ನಾಟಿಯನ್ನು ಮಾಡಿ ಮುಗಿಸುತ್ತಿದ್ದರು. ಆದರೀಗ ಕೂಲಿ ಕಾರ್ಮಿಕರನ್ನು ಆಶ್ರಯಿಸುವಂತಾಗಿದ್ದು, ಕಾರ್ಮಿಕರ ಕೊರತೆ ಕೃಷಿ ಕಾರ್ಯಕ್ಕೆ ಅಡ್ಡಿಯಾಗಿದೆ.

ಇದೆಲ್ಲದರ ನಡುವೆ ಅವತ್ತಿನ ಕಾಲದ  ಮಳೆಗಾಲ ಮತ್ತು ಭತ್ತದ ಕೃಷಿ ಕಾರ್ಯವನ್ನು ನೆನಪಿಸಿಕೊಂಡಿದ್ದೇ ಆದರೆ ಆಗ ಕಾಲಕ್ಕೆ ತಕ್ಕಂತೆ ಮಳೆಯಾಗುತ್ತಿತ್ತು. ಮೇ ತಿಂಗಳ ಕೊನೆಯಲ್ಲಿ ಆರಂಭವಾದ ಮಳೆ ಒಂದೇ ಸಮನೆ ಸುರಿಯುತ್ತಿತ್ತು. ಸೆಪ್ಟಂಬರ್ ಅಕ್ಟೋಬರ್ ತಿಂಗಳವರೆಗೆ ಮಳೆ ಇರುತ್ತಿತ್ತು. ಅದರಲ್ಲೂ ಕಕ್ಕಡ ಮಾಸದಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತಿತ್ತು. ಇನ್ನು ಕಕ್ಕಡ ಮಾಸದ 18ನೇ ದಿನ (ಆ.3)  ಕಕ್ಕಡ ಪದ್ನಟ್ ಆಗಿದ್ದು, ಅದು ಹಲವು ವಿಶೇಷತೆಗಳ ದಿನವಾಗಿತ್ತು. ಆಗಿನ ಕಾಲದಲ್ಲಿ ಭತ್ತದ ಕೃಷಿಯೇ ಪ್ರಮುಖ ಬೆಳೆಯಾಗಿತ್ತು. ನೀರಿನ ಆಶ್ರಯವಿರುವ ಸ್ಥಳಗಳಲ್ಲಿ ಗದ್ದೆಗಳನ್ನು ನಿರ್ಮಿಸಿ ಕೃಷಿ ಮಾಡುತ್ತಿದ್ದರು ಭತ್ತಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಮೇ ತಿಂಗಳ ಕೊನೆಯ ವಾರದಲ್ಲಿ ಭತ್ತದ ಕೃಷಿ ಚಟುವಟಿಕೆಗಳು ಆರಂಭವಾದರೆ ಆಗಸ್ಟ್ ತಿಂಗಳಾದರೂ ಮಗಿಯುತ್ತಿರಲಿಲ್ಲ.

ಇದನ್ನೂ ಓದಿ: ಮುಂಗಾರು ಮಳೆಗೆ ದರ್ಶನ ನೀಡುವ ಅಪರೂಪದ ಅತಿಥಿಗಳು…

ಎಡೆ ಬಿಡದೆ ಸುರಿಯುವ ಮಳೆಯಲ್ಲಿ.. ಕೊರೆಯುವ ಚಳಿಯಲ್ಲಿ.. ಶೀತ ವಾತಾವರಣದಲ್ಲಿ.. ದೇಹವನ್ನು ದಂಡಿಸಿ ಭತ್ತದ ಕೃಷಿಕಾರ್ಯವನ್ನು ಮಾಡುತ್ತಿದ್ದರು. ಅದರಲ್ಲೂ ಸುರಿಯುವ ಮಳೆಯಲ್ಲಿ ಕೆಸರು ಗದ್ದೆಯಲ್ಲಿ ಮುಂಜಾನೆಯಿಂದ ಸಂಜೆವರೆಗೆ ಮೈಬಗ್ಗಿಸಿ ನಾಟಿ ಮಾಡುವುದು ಸುಲಭದ ಮಾತಾಗಿರಲಿಲ್ಲ. ಆದರೆ ಅದೆಲ್ಲವನ್ನು ಗಂಡಸರು, ಹೆಂಗಸರು ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನು ಶೀತದಿಂದ ಕಾಪಾಡಿಕೊಳ್ಳಲು ಪ್ರಕೃತಿಯಲ್ಲಿದ್ದ ಗಿಡಮೂಲಿಕೆಯನ್ನು ಆಹಾರವಾಗಿ, ಔಷಧಿಯಾಗಿ ಬಳಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಅಲ್ಲದೆ ಈ ಸಮಯದಲ್ಲಿ ಇಂತಹದ್ದೇ ಆಹಾರವನ್ನು ಸೇವಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದು ಅವರಿಗೆ ಗೊತ್ತಿತ್ತು.

ಅದೊಂದು ಸಂಪ್ರದಾಯ ತಲೆಮಾರಿನಿಂದ ತಲೆಮಾರಿಗೆ ಮುಂದುವರೆಯುತ್ತಾ ಬಂದಿತ್ತು. ಮಳೆಗಾಲದಲ್ಲಿ ಆಯಾಯ ಸಂದರ್ಭಕ್ಕೆ ತಕ್ಕಂತೆ ಸುತ್ತಮುತ್ತಲಿದ್ದ ಗಿಡಮೂಲಿಕೆಗಳಲ್ಲಿನ ಔಷಧೀಯ ಗುಣಗಳನ್ನು ಗಮನಿಸಿ ಅದನ್ನು ಬಳಸಲು ಆರಂಭಿಸಿದ್ದರಲ್ಲದೆ, ಅದರ ಸೇವನೆಗೆ ಅನುಕೂಲವಾಗುವಂತೆ ಆಚರಣೆಯನ್ನು ಜಾರಿ ಮಾಡಿದ್ದು ವಿಶೇಷವೇ.. ಆರೋಗ್ಯ ಕೆಟ್ಟಮೇಲೆ ಔಷಧಿ ಮಾಡುವುದಕ್ಕಿಂತ ಆರೋಗ್ಯ ಕೆಡದಂತೆ ನೋಡಿಕೊಳ್ಳುವ ಕಲೆಯನ್ನು ಸಿದ್ಧಿಸಿಕೊಂಡಿದ್ದರು. ಹೀಗಾಗಿಯೇ ಕಕ್ಕಡ ಪದ್ನಟ್ ಆಚರಣೆಗೆ ತರಲಾಗಿತ್ತು. ಅದು ಇವತ್ತಿಗೂ ಮುಂದುವರೆದುಕೊಂಡು ಹೋಗುತ್ತಿದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಕೊಡಗಿನತ್ತ ಪ್ರವಾಸಿಗರ ದಂಡು… ಈಗ ಟ್ರೆಂಡ್ ಆಗುತ್ತಿದೆ ಮಾನ್ಸೂನ್ ಟ್ರಿಪ್ ..

ಇನ್ನು ಮಳೆ ಇರಲಿ, ಇಲ್ಲದಿರಲಿ ಕೆಸರು ಗದ್ದೆಯಲ್ಲಿ ಮೈಬಗ್ಗಿಸಿ ದುಡಿಯಲೇ ಬೇಕಾಗಿತ್ತು. ಜತೆಗೆ ಈ ಸಮಯದಲ್ಲಿ ಗದ್ದೆ ಕೆಲಸ ಹೊರತು ಪಡಿಸಿ ಉಳಿದ ಎಲ್ಲ ಶುಭ ಕಾರ್ಯಗಳು ನಿಷಿದ್ಧವಾಗಿತ್ತು. ಅವತ್ತಿನ ದಿನಗಳಲ್ಲಿ ಕಕ್ಕಡ ತಿಂಗಳು ಎಂದರೆ ಸದಾ ಸುರಿಯುವ ಮಳೆ ಮತ್ತು ಬಿಡುವಿಲ್ಲದ ಕೆಲಸ ಎಂಬಂತಾಗಿತ್ತು. ಕಕ್ಕಡ ತಿಂಗಳಲ್ಲಿ ಮಳೆ ಹೆಚ್ಚು ಸುರಿಯುತ್ತಿದ್ದರಿಂದ ಮನೆಯಿಂದ ಹೊರಗೆ ಹೋಗಲಾಗದ ಪರಿಸ್ಥಿತಿ ಇದ್ದುದರಿಂದ ತಮ್ಮ ಸುತ್ತಮುತ್ತ ಸಿಗುವ ಏಡಿ, ಅಣಬೆ, ಬಿದಿರು ಕಣಿಲೆ, ಮರದಲ್ಲಿ ಬೆಳೆಯುವ ಕೆಸದ ಪತ್ರೊಡೆ, ನಾಟಿಕೋಳಿ ಸಾರು ಮೊದಲಾದವುಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು. ಇವುಗಳಲ್ಲಿ ಉಷ್ಣಾಂಶವನ್ನು ಹೆಚ್ಚಿಸುವ ಶಕ್ತಿಯಿತ್ತು.

ಕೊಡಗಿನಲ್ಲಿ ಎಲ್ಲವೂ ಬದಲಾಗಿದೆ. ಮೊದಲಿನಂತೆ ಭತ್ತದ ಕೃಷಿ ಮಾಡುವವರ ಸಂಖ್ಯೆ ಇಳಿಮುಖವಾಗಿದೆ. ಆದರೆ ಮಳೆಗಾಲದಲ್ಲಿ ಸಂಭವಿಸುವ ಅನಾಹುತಗಳು, ಅದರಿಂದ ಉದ್ಭವವಾಗುವ ಸಮಸ್ಯೆಗಳು ಹೆಚ್ಚಾಗಿವೆ. ಮಳೆ ಹೆಚ್ಚಾಗಿ ವಿಕೋಪಗಳು ಸಂಭವಿಸುತ್ತಿವೆ. ಇವತ್ತು ಕಕ್ಕಡ ಮಾಸವೆಂದರೆ ಕೆಲಸ ಕಾರ್ಯಗಳ ದಿನಗಳಾಗಿ ಉಳಿದಿಲ್ಲ. ಯಾವಾಗ ಎಲ್ಲಿ ಏನಾಗಿ ಬಿಡುತ್ತದೆಯೋ? ಎಂಬ ಭಯದಲ್ಲಿ ದಿನಗಳನ್ನು ಕಳೆಯುವಂತಾಗಿದೆ. ವಾರವೆಲ್ಲ ಸುರಿಯುವ ಮಳೆ ಒಮ್ಮೆಗೆ ಸುರಿದು ಅನಾಹುತಕ್ಕೆ ದಾರಿ ಮಾಡಿಕೊಡುತ್ತಿದೆ. ಇದರಿಂದ ಪ್ರವಾಹ, ಗುಡ್ಡಕುಸಿತದ ಭಯವೂ ಕಾಡುತ್ತಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಮಳೆಗಾಲ ಆರಂಭವಾಯಿತೆಂದರೆ ಗುಡ್ಡದಭೂತದ ಭಯ

ಈಗಾಗಲೇ ಗುಡ್ಡಕುಸಿತದಿಂದ ಕೊಡಗಿನಲ್ಲಿ ಸಾಕಷ್ಟು ಸಮಸ್ಯೆ, ಸಾವುನೋವುಗಾಳಾಗಿವೆ. ಆದ್ದರಿಂದ ಕಕ್ಕಡ ಮಾಸ ಕೇವಲ ಆರೋಗ್ಯ ಕಾಪಾಡಿಕೊಳ್ಳುವ ಮಾಸ ಮಾತ್ರವಲ್ಲದೆ, ಮುಂಜಾಗ್ರತೆ ವಹಿಸುವ, ಎಚ್ಚರಿಕೆಯಿಂದ ಬದುಕುವ ಕಾಲವಾಗಿದೆ ಎಂದರೂ ತಪ್ಪಾಗಲಾರದು. ಆದುದರಿಂದ ನದಿ ತಟದಲ್ಲಿ, ಬೆಟ್ಟಗುಡ್ಡಗಳ ಬಳಿ ಮನೆ ಮಾಡಿಕೊಂಡು ಬದುಕುವ ನಿವಾಸಿಗಳೆಲ್ಲರೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಈಗಾಗಲೇ ಮಳೆಯಿಂದ ನದಿಗಳು ತುಂಬಿ ಹರಿದು ಪ್ರವಾಹದಿಂದಲೂ ತೊಂದರೆಯಾಗಿದೆ. ಇದರ ಜತೆಗೆ ಮನೆಗೋಡೆಗಳು ಕುಸಿದು ಬೀಳುವುದು,  ಮರಗಳು, ವಿದ್ಯುತ್ ಕಂಬಗಳು,  ಮುರಿಯುವುದು ಹೀಗೆ ಸಮಸ್ಯೆಗಳ ಸರಮಾಲೆಯೇ ಜನರನ್ನು ಸುತ್ತಿಕೊಳ್ಳುತ್ತಿದ್ದು ಎಚ್ಚರಿಕೆ ವಹಿಸಲೇ ಬೇಕಾಗಿದೆ.

 

B M Lavakumar

admin
the authoradmin

Leave a Reply