ನಾವು ನಿತ್ಯ ಸೇವಿಸುವ ಹಲವಾರು ತರಕಾರಿಗಳು ನಮ್ಮ ಆರೋಗ್ಯವನ್ನು ಹಲವು ರೀತಿಯಲ್ಲಿ ಕಾಪಾಡುತ್ತವೆ. ಅವು ನಮ್ಮ ಆರೋಗ್ಯಕ್ಕೆ ಯಾವ ರೀತಿಯ ಪೋಷಕ ಶಕ್ತಿಯನ್ನು ನೀಡುತ್ತವೆ? ಯಾವ ತರಕಾರಿಯಿಂದ ಏನು ಪ್ರಯೋಜನವಿದೆ ಎಂಬುದನ್ನು ಅರಿತು ಅಂತಹ ತರಕಾರಿಗಳಿಗೆ ನಿತ್ಯದ ಬಳಕೆಯಲ್ಲಿ ಆದ್ಯತೆ ನೀಡಿದರೆ ಆರೋಗ್ಯವಾಗಿ ಇರಲು ಸಾಧ್ಯವಾಗುತ್ತದೆ. ಇವತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚೆಚ್ಚು ಕಾಣಿಸುತ್ತಿದ್ದು, ಹೃದಯವನ್ನು ಕಾಪಾಡುವ ನಿಟ್ಟಿನಲ್ಲಿ ನಮಗೆ ಯಾವ ತರಕಾರಿ ಒಳ್ಳೆಯದು ಎಂಬುದನ್ನು ನೋಡಿದ್ದೇ ಆದರೆ ಬೀಟ್ರೋಟ್ ಮೊದಲ ಸಾಲಿನಲ್ಲಿ ನಿಲ್ಲುತ್ತದೆ.
ಬೀಟ್ರೋಟ್ ಗೂ ಹೃದಯಕ್ಕೂ ಏನು ಸಂಬಂಧ? ಇದು ಹೇಗೆ ಹೃದಯದ ಆರೋಗ್ಯ ಕಾಪಾಡುತ್ತದೆ? ಎಂಬಿತ್ಯಾದಿ ಪ್ರಶ್ನೆಗಳು ಮೂಡಿಯೇ ಮೂಡುತ್ತವೆ. ಆದರೆ ಬೀಟ್ರೋಟ್ ಬಗೆಗಿನ ಅಧ್ಯಯನಗಳು ಅದರಲ್ಲಿರುವ ಆರೋಗ್ಯಕಾರಿ ಗುಣಗಳ ಬಗ್ಗೆ ತಿಳಿಸಿದೆ. ಸಾಮಾನ್ಯವಾಗಿ ನಾವೆಲ್ಲರೂ ಮನೆಗೆ ತರುವ ತರಕಾರಿಗಳಲ್ಲಿ ಬೀಟ್ರೋಟ್ ಇದ್ದೇ ಇರುತ್ತದೆ. ಮತ್ತು ಅದರಿಂದ ಸಾರು, ಪಲ್ಯ, ಸೇರಿದಂತೆ ಹಲವು ರೀತಿಯ ಖಾದ್ಯಗಳನ್ನು ತಯಾರಿಸಿ ಸೇವಿಸುತ್ತಲೇ ಇರುತ್ತೇವೆ. ಇದೀಗ ಅದರಲ್ಲಿರುವ ಪೋಷಕಾಂಶಗಳು, ಔಷಧೀಯ ಗುಣಗಳನ್ನು ನೋಡಿದ ಮೇಲೆ ಅದರ ಸೇವನೆಯನ್ನು ಇನ್ನಷ್ಟು ಮಾಡಿಕೊಳ್ಳಬೇಕು ಎನಿಸದಿರದು.
ಬೀಟ್ರೋಟ್ ನ್ನು ಎಲ್ಲರೂ ಇಷ್ಟಪಟ್ಟು ಸೇವಿಸುತ್ತಾರೆ ಎಂದು ಹೇಳಲಾಗದು. ಏಕೆಂದರೆ ಕೆಲವರು ಅದನ್ನು ಇಷ್ಟಪಡದೆ ಇರಬಹುದು. ಆದರೆ ಹೃದಯದ ಆರೋಗ್ಯದಲ್ಲಿ ಇದರ ಪಾತ್ರವಿದೆ ಎನ್ನುವುದು ಸಂಶೋಧನೆಗಳಿಂದ ಗೊತ್ತಾಗಿದೆ. ಹೀಗಾಗಿ ಅದನ್ನು ಸೇವಿಸುವತ್ತ ಗಮನಹರಿಸುವುದು ಒಳಿತು. ಇದರ ಮೇಲಿನ ಅಧ್ಯಯನಗಳು ಬೀಟ್ರೋಟ್ ಔಷಧೀಯ ಕಣಜ ಎಂಬುದನ್ನು ಹೇಳಿದೆ. ಜತೆಗೆ ಹೃದಯದ ಆರೋಗ್ಯ ಕಾಪಾಡುವ, ರಕ್ತದೊತ್ತಡ ತಗ್ಗಿಸುವ ಮಾಂತ್ರಿಕ ಶಕ್ತಿ ಇದರಲ್ಲಿದೆ ಎಂಬುದನ್ನು ಸಂಶೋಧಕರು ತೆರೆದಿಟ್ಟಿದ್ದಾರೆ. ಇವತ್ತಿನ ಪರಿಸ್ಥಿತಿಯಲ್ಲಿ ನಾವು ಪಾಶ್ಚಿಮಾತ್ಯರ ಲೈಫ್ ಸ್ಟೈಲ್ ಗಳನ್ನು ಅನುಕರಿಸುತ್ತಿರುವುದರಿಂದಾಗಿ ಕೆಲವೊಂದು ಆರೋಗ್ಯದ ಸಮಸ್ಯೆಗಳನ್ನು ಎಳೆದುಕೊಳ್ಳುತ್ತಿದ್ದೇವೆ.
ಇದನ್ನೂ ಓದಿ: ಹೃದಯಾಘಾತಕ್ಕೆ ಬದಲಾದ ಜೀವನ ಶೈಲಿ ಕಾರಣವೇ..? ನಗರ ಪ್ರದೇಶಗಳಲ್ಲಿ ಪ್ರಕರಣ ಹೆಚ್ಚಾಗುತ್ತಿದೆಯಾ?
ನಮ್ಮ ಪೂರ್ವಜರ ಆಹಾರ ಕ್ರಮಗಳನ್ನು ನೋಡಿದರೆ ಅದರಿಂದಲೇ ಅವರು ಆರೋಗ್ಯವಾಗಿದ್ದರು ಎನ್ನುವುದು ತಿಳಿಯುತ್ತದೆ. ಈಗ ನಮಗೆ ಎಲ್ಲವೂ ಇದೆ ಆದರೆ ಆರೋಗ್ಯವೇ ಇಲ್ಲದಾಗಿದೆ. ಆದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಕೆಲವೊಂದು ಕ್ರಮಗಳನ್ನು ಅನುಸರಿಸಬೇಕಾಗಿದೆ. ಜತೆಗೆ ದೇಹಕ್ಕೆ ಪೋಷಕ ಶಕ್ತಿಯನ್ನು ನೀಡುವ ತರಕಾರಿಗಳನ್ನು ಉಪಯೋಗಿಸುವುದನ್ನು ಕಲಿಯ ಬೇಕಾಗಿದೆ. ಅದರಂತೆ ಬೀಟ್ರೋಟ್ ಗೂ ಆದ್ಯತೆ ನೀಡಬೇಕಾಗುತ್ತದೆ. ಇನ್ನು ದೈನಂದಿನ ನಮ್ಮ ಲೈಫ್ ಸ್ಟೈಲ್ ನೋಡಿದರೆ ಪ್ರತಿಯೊಬ್ಬರದ್ದೂ ಒಂಥರಾ ಒತ್ತಡದಲ್ಲಿರುತ್ತಾರೆ. ಕೆಲಸದ ನಡುವೆ ಅಡುಗೆ, ಊಟದ ಕಡೆಗೆ ಹೆಚ್ಚಿನ ಗಮನಕೊಡುವುದೇ ಕಷ್ಟವಾಗುತ್ತಿದೆ.
ಸದಾ ರೆಡಿಮೆಡ್ ಫುಡ್ ಗಳಿಗೆ ಆದ್ಯತೆ ನೀಡುತ್ತಿದ್ದಾರೆ ಅವು ತಕ್ಷಣಕ್ಕೆ ಹಸಿವನ್ನಷ್ಟೇ ನೀಗಿಸುತ್ತಿವೆ. ಆದರೆ ಶರೀರಕ್ಕೆ ಪೋಷಕ ಶಕ್ತಿಯನ್ನು ನೀಡುವುದಿಲ್ಲ. ಹೀಗಾಗಿ ಕೆಲವು ಹಣ್ಣು, ತರಕಾರಿಗಳನ್ನು ಬೇರೆ, ಬೇರೆ ರೀತಿಯಲ್ಲಿ ಉಪಯೋಗಿಸುವುದನ್ನು ಕಲಿತುಕೊಳ್ಳುವುದು ಜಾಣತನವಾಗಿದೆ. ಇಲ್ಲದೆ ಹೋದರೆ ಆರೋಗ್ಯ ಕೆಡುವುದು ಖಚಿತ.. ಆರೋಗ್ಯ ಕೆಟ್ಟ ಮೇಲೆ ಏನೇ ಮಾಡಿದರೂ ಅದರಿಂದ ಯಾವುದೇ ಪ್ರಯೋಜನವಾಗಲಾರದು.
ಇನ್ನು ನಾವ್ಯಾಕೆ ಬೀಟ್ರೋಟ್ ಉಪಯೋಗಿಸಬೇಕು ಅದರಲ್ಲಿ ಅಂತಹದ್ದೇನಿದೆ? ಎಂಬ ಪ್ರಶ್ನೆಗಳಿಗೆ ಸಂಶೋಧಕರು ಒಂದಷ್ಟು ಉತ್ತರಗಳನ್ನು ನೀಡಿದ್ದಾರೆ. ಅವರ ಪ್ರಕಾರ ಇದರಲ್ಲಿರುವ ಔಷಧೀಯ ಗುಣಗಳು ಹಲವು ರೋಗಗಳಿಗೆ ರಾಮಬಾಣವಾಗಿದೆಯಂತೆ. ಅಷ್ಟೇ ಅಲ್ಲದೆ, ಅಧಿಕ ರಕ್ತದೊತ್ತಡದಿಂದ ಬಳಲುವವರು ಬೀಟ್ರೂಟ್ ರಸ ಸೇವಿಸುವುದು ಬಹಳ ಉತ್ತಮವಾಗಿದೆ. ಪ್ರತಿದಿನ ಒಂದು ಬಟ್ಟಲು ಬೀಟ್ರೋಟ್ ನ ರಸವನ್ನು ಸೇವಿಸಿದರೆ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವುದನ್ನು ಭಾರತದ ಸಂಶೋಧಕರು ಹೊರಗೆಡವಿದ್ದಾರೆ.
ಈ ಕುರಿತಂತೆ ಸಂಶೋಧನೆ ನಡೆಸಿದ ಸಂಶೋಧಕರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕೆಲವು ಮಂದಿಗೆ 8 ಔನ್ಸ್ ನಷ್ಟು ಬೀಟ್ರೋಟಿನ ರಸವನ್ನು ಸೇವಿಸುವಂತೆ ಮಾಡಿದ್ದರಿಂದ 10 ಎಂ ಎಂ ಎಚ್ ಜಿ ಯಷ್ಟರ ಪ್ರಮಾಣದ ರಕ್ತದೊತ್ತಡ ಕಡಿಮೆ ಆಗಿದ್ದಾಗಿ ಹೇಳಿದ್ದಾರೆ. ಈ ಪ್ರಯೋಗವನ್ನು 15 ರೋಗಿಗಳ ಮೇಲೆ ಮಾಡಲಾಗಿದೆಯಂತೆ. ಆಗ ಅವರಲ್ಲಿ ಅಧಿಕ ರಕ್ತದೊತ್ತಡದ ಪ್ರಮಾಣ ಇಳಿಮುಖವಾದದ್ದು ಕಂಡು ಬಂದಿತು. ಅದರಲ್ಲೂ ಸೇವಿಸಿದ 3ರಿಂದ 6 ಗಂಟೆ ನಂತರ ಅತ್ಯುತ್ತಮವಾದ ಫಲಿತಾಂಶ ಕಂಡು ಬಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನಾವೇನು ಮಾಡಬೇಕು? ಯಾವ ಆಹಾರ ಸೇವಿಸಬೇಕು?
ಲಂಡನ್ ಮೆಡಿಕಲ್ ಶಾಲೆಗೆ ಸೇರಿರುವ ಬಾರ್ಟ್ ಹೆಲ್ತ್ ಎನ್ ಎಚ್ ಎಸ್ ಟ್ರಸ್ಟ್ ನ ಸಂಶೋಧಕರು ನಡೆಸಿದ ಸಂಶೋಧನೆಯಿಂದ ಬೀಟ್ರೋಟಿನಲ್ಲಿ ನೈಟ್ರೇಟ್ ಇದ್ದು ಇದು ರಕ್ತ ಕಣಗಳನ್ನು ಅಗಲಗೊಳಿಸುತ್ತದೆ, ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. (ಎದೆ ನೋವಿನಿಂದ ಬಳಲುವವರು ನೈಟ್ರೇಟ್ ನ್ನು ಬಳಸುತ್ತಾರೆ) ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಈ ಸಂಶೋಧನೆಯನ್ನು ಅವರು ಹಲವು ವರ್ಷಗಳ ಕಾಲ ನಡೆಸಿದ್ದರು. ಬಿಟ್ರೋಟ್ ಬಗ್ಗೆ ಪ್ರಯೋಗ ನಡೆಸುತ್ತಿದ್ದಾಗ ಒಂದು ಅನಿರೀಕ್ಷಿತ ಸಂಗತಿ ಅವರಿಗೆ ಗೋಚರವಾಯಿತಂತೆ. ಈ ರಸವನ್ನು ಸೇವಿಸಿದ ವ್ಯಕ್ತಿಗಳ ಮೂತ್ರ ಗುಲಾಬಿ ಬಣ್ಣಕ್ಕೆ ಬದಲಾಯಿತಂತೆ. ಅಂದರೆ ಇದು ಮೂತ್ರದ ಬಣ್ಣದ ಮೇಲೂ ಪ್ರಭಾವ ಬೀರುತ್ತದೆ ಎನ್ನುವ ಸಂಗತಿ ವಿಜ್ಞಾನಿಗಳಿಗೆ ಮೂಡಿತಂತೆ.
ಇದನ್ನೂ ಓದಿ: ಐವತ್ತರ ನಂತರದ ಬದುಕಿಗೆ ಮಹಿಳೆಯರು ಮಾನಸಿಕ-ದೈಹಿಕವಾಗಿ ತಯಾರಾಗುವುದು ಹೇಗೆ?
ನೈಟ್ರೆಟ್ ಮಣ್ಣಿನಿಂದ ದೊರಕುತ್ತದೆ. ಅದನ್ನು ಹೀರಿ ತರಕಾರಿ ಬೆಳೆಯುತ್ತದೆ. ಪುಟ್ಟ ನೈಟ್ರೇಟ್ ನಿಂದ ಎಷ್ಟೊಂದು ಪ್ರಯೋಜನಗಳಿವೆ ಎನ್ನುವ ಸಂಗತಿಗಳು ಬೆಳಕಿಗೆ ಬಂದಾಗ ನಮಗೆ ತುಂಬಾ ಆಶ್ಚರ್ಯವಾಗಿತ್ತು ಎನ್ನುವ ಅಭಿಪ್ರಾಯವನ್ನು ಸಂಶೋಧಕ ಡಾ. ಅಮ್ರಿತ್ ಅಹ್ಲುವಾಲಿಯ ಹಲವು ವರ್ಷಗಳ ಹಿಂದೆಯೇ ಹೊರಗೆಡವಿದ್ದಾರೆ. ಹಸಿರು ಸೊಪ್ಪುಗಳಲ್ಲಿ ಮತ್ತು ಬಿಟ್ರೋಟ್ ನಲ್ಲಿ ಜೀರ್ಣವಾಗುವ ನೈಟ್ರೇಟ್ ಪ್ರಮಾಣ ಹೇರಳವಾಗಿದ್ದು, ಇದು ಹೃದಯದ ಆರೋಗ್ಯವನ್ನು ನಿಸ್ಸಂದೇಹವಾಗಿ ಕಾಪಾಡುತ್ತದೆ ಎಂದು ಹೇಳಲಾಗಿದೆ.
ಬ್ರಿಟಿಷ್ ಹಾರ್ಟ್ ಫೌಂಡೇಷನ್‌ನ ವೈದ್ಯಕೀಯ ನಿರ್ದೇಶಕರಾದ ಪ್ರೊ. ಪೀಟರ್ ವಿಸ್ಬೆರಗ್ ಪ್ರಕಾರ ನಮಗೆ ತರಕಾರಿ ಸೇವನೆಯ ಮಹತ್ವ ತಿಳಿದಿದೆ. ಆದರೆ ಯಾವ ತರಕಾರಿಗಳಲ್ಲಿ ನೈಟ್ರೇಟ್ ಪ್ರಮಾಣಹೆಚ್ಚಿದೆ ಎಂದು ತಿಳಿದು ರಕ್ತದೊತ್ತಡದವನ್ನು ದೂರ ಮಾಡಿಕೊಳ್ಳುವತ್ತ ಗಮನ ನೀಡಬೇಕು. ಇಷ್ಟು ದಿನಗಳ ಕಾಲ ಈ ತರಕಾರಿ ರಕ್ತಹೀನತೆಯನ್ನು ದೂರ ಮಾಡುತ್ತಿತ್ತು, ಈಗ ಅಧಿಕರಕ್ತದೊತ್ತಡಕ್ಕೂ ಸಹ ಕಡಿವಾಣ ಹಾಕುತ್ತದೆ ಎಂದಿದ್ದಾರೆ. ಇನ್ನಾದರೂ ಯಾರಾದರೂ ಬಿಟ್ರೋಟ್ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರೆ, ದಯವಿಟ್ಟು ನೀವು ಬಳಸುವ ತರಕಾರಿಯಲ್ಲಿ ಬಿಟ್ರೋಟ್ ಬಳಸಲು ಆರಂಭಿಸಿ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳುವ ಮೂಲಕ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಪಾರಾಗಲು ಇದು ಸಹಾಯ ಮಾಡಬಹುದು.
ಇದನ್ನೂ ಓದಿ: ಮಹಿಳೆಯರಲ್ಲಿ ಫಲವಂತಿಕೆ ದರ ಇಳಿಯುತ್ತಿದೆಯಾ? ಇದಕ್ಕೆ ಕಾರಣಗಳೇನು?
ರಕ್ತದೊತ್ತಡದಿಂದ ಪಾರಾದರೆ ನಮ್ಮ ಹೃದಯವು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಹೀಗಾಗಿ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಬೀಟ್ರೋಟ್ ಪಾತ್ರವೂ ಇದೆ ಎಂಬುದು ಮನದಟ್ಟಾದಂತಾಯಿತು. ಇವತ್ತಿನ ಪರಿಸ್ಥಿತಿಯಲ್ಲಿ ನಾವು ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಲೇ ಬೇಕಾಗಿದೆ. ದುಶ್ಚಟಗಳಿಂದ ದೂರವಿದ್ದು ಆರೋಗ್ಯಕ್ಕೆ ಪೂರಕವಾದ ಆಹಾರ, ಒಂದಷ್ಟು ವ್ಯಾಯಾಮ, ವಾಕಿಂಗ್ ನಲ್ಲಿ ತೊಡಗಿಸಿಕೊಂಡು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ಔಷಧೋಪಚಾರ ಮಾಡಿಕೊಂಡರೆ ನೆಮ್ಮದಿಯಾಗಿ ಬದುಕನ್ನು ಸವೆಸಬಹುದಾಗಿದೆ.
B M Lavakumar