ArticlesLatest

ಬಿಳಿಗಿರಿ ಬೆಟ್ಟದ ಮೇಲೆ ವೀರಾಜಮಾನನಾದ ರಂಗನಾಥ… ಬಿಳಿಗಿರಿರಂಗನಬೆಟ್ಟದ ವಿಶೇಷತೆಗಳು ಏನೇನು?

ಶ್ರೀರಂಗಪಟ್ಟಣದ ರಂಗನಾಥ, ಶಿವನಸಮುದ್ರ  ಮತ್ತು ತಿರುಚನಾಪಳ್ಳಿಯ ಶ್ರೀರಂಗ, ವೆಂಕಟೇಶ ಇವರೆಲ್ಲರೂ ಸಹೋದರರಾಗಿದ್ದು, ಇವರ ಮತ್ತೊಬ್ಬ ಸಹೋದರ ಬಿಳಿಗಿರಿರಂಗನಾಥ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ನೆಲೆ ನಿಂತಿದ್ದು, ತನ್ನನ್ನು ಅರಸಿ ಬರುವ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿದ್ದಾನೆ…

ನಿಸರ್ಗದ ಮಡಿಲಲ್ಲಿ ಹಸಿರ ಬೆಟ್ಟದ ಮೇಲೆ ವೀರಾಜಮಾನನಾಗಿರುವ ಬಿಳಿಗಿರಿರಂಗನಾಥನ ದರ್ಶನ ಪಡೆಯುವುದು ನಮ್ಮ ಜನ್ಮದ ಪಾವನ ಕಾರ್ಯವಾಗಿದೆ. ಬಿಳಿಗಿರಿರಂಗನಾಥ, ಶ್ರೀರಂಗಪಟ್ಟಣದ ರಂಗನಾಥ, ಶಿವನಸಮುದ್ರ, ತಿರುಚನಾಪಳ್ಳಿಯ ಶ್ರೀರಂಗನ ದರ್ಶನ ಮಾಡಿಕೊಂಡು ಬಂದರೆ ಇಷ್ಟಾರ್ಥ ನೆರವೇರುತ್ತದೆ ಎಂಬುದು ಜನರಲ್ಲಿರುವ ನಂಬಿಕೆಯಾಗಿದೆ. ಇವತ್ತು ಬಿಳಿಗಿರಿರಂಗನಾಥ ನೆಲೆ ನಿಂತಿರುವ ಬೆಟ್ಟವನ್ನು ಬಿಳಿಗಿರಿ ರಂಗನಬೆಟ್ಟ ಎಂದು ಕರೆಯಲಾಗುತ್ತಿದೆಯಾದರೂ ಇದಕ್ಕೆ ಬಿಳಿಗಿರಿ, ಬಿಳಿಕಲ್ಲ, ಶ್ವೇತಾದ್ರಿ ಬೆಟ್ಟ ಹೆಸರುಗಳಿವೆ.

ಸಮುದ್ರಮಟ್ಟದಿಂದ 1552 ಮೀಟರ್ ಎತ್ತರದಲ್ಲಿರುವ ಬಿಳಿಗಿರಿರಂಗನ ಬೆಟ್ಟವು ಮೈಸೂರಿನಿಂದ ಸುಮಾರು ತೊಂಬತ್ತು ಕಿ.ಮೀ. ಹಾಗೂ ಚಾಮರಾಜನಗರ ಜಿಲ್ಲೆಯ ಯಳಂದೂರಿನಿಂದ ಸುಮಾರು ಹದಿನೈದು ಕಿಮೀ ದೂರದಲ್ಲಿದೆ. ಪವಿತ್ರ ಕ್ಷೇತ್ರ ಮಾತ್ರವಲ್ಲದೆ, ಪ್ರವಾಸಿ ತಾಣವೂ ಆಗಿರುವುದರಿಂದ ಇಲ್ಲಿಗೆ ವರ್ಷಪೂರ್ತಿ  ಭಕ್ತರು, ಪ್ರವಾಸಿಗರು ಬರುತ್ತಿರುತ್ತಾರೆ. ಕೆಲವರು ಚಾರಣಿಗರಾಗಿ ಬಂದರೆ ಇನ್ನು ಕೆಲವರು ಭಕ್ತರಾಗಿ ಬಂದು ಸ್ವಾಮಿಯ ದರ್ಶನ ಪಡೆದು ತಮ್ಮ ಊರಿಗೆ ಹಿಂತಿರುಗುತ್ತಾರೆ.

ಇದನ್ನೂ ಓದಿ: ದಕ್ಷಿಣ ಕೊಡಗಿನ ಹಾತೂರಿನಲ್ಲಿ ವನಭದ್ರಕಾಳೇಶ್ವರಿ ಹಬ್ಬದ ಸಂಭ್ರಮ…

ಬೆಟ್ಟದ ಮೇಲ್ಭಾಗದಲ್ಲಿರುವ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯವನ್ನು ಇತ್ತೀಚೆಗಿನ ವರ್ಷಗಳಲ್ಲಿ ಜೀರ್ಣೋದ್ಧಾರಗೊಳಿಸಲಾಗಿದೆ. ಹಳೆಯ ದೇವಾಲಯವನ್ನು  ಹಲವು ಶತಮಾನಗಳ ಹಿಂದೆ ನಿರ್ಮಿಸಿದ್ದು, ದ್ರಾವಿಡ ಶೈಲಿಯಲ್ಲಿತ್ತು. ದೇವಾಲಯವು ಪ್ರಾಕಾರ, ನವರಂಗ ಹಾಗೂ ಮುಖಮಂಟಪ ಹೊಂದಿ ಗಮನಸೆಳೆಯುತ್ತದೆ.  ದೇವಾಲಯದ ಅಧಿದೇವತೆಯಾದ  ಬಿಳಿಗಿರಿ ರಂಗಸ್ವಾಮಿ (ಶ್ರೀನಿವಾಸ)ಯ ಲೋಹ ನಿರ್ಮಿತ ಮೂರ್ತಿಗಳು ನವರಂಗದ ಬಲಭಾಗದ ಮೂರು ಗೂಡುಗಳಲ್ಲಿದ್ದು, ಇಲ್ಲಿಯೇ ಹನುಮಂತ ಮಣವಾಳ ಮಹಾಮುನಿಗಳ ಮೂರ್ತಿಗಳಿವೆ.

ಬಲ ಭಾಗದಲ್ಲಿ ಅಲಮೇಲು ಮಂಗೈ ಅಮ್ಮನವರ ಸನ್ನಿಧಿಯಿದೆ. ನವರಂಗದ ಎಡಭಾಗದ ಗೂಡುಗಳಲ್ಲಿ ನಮ್ಮಾಳ್ವಾರ್ ಮತ್ತು ರಾಮಾನುಜರ ವಿಗ್ರಹಗಳಿವೆ. ದ್ವಾರದ ಬಲಗಡೆಯಲ್ಲಿರುವ ಇನ್ನೊಂದು ಗೂಡಿನಲ್ಲಿ ವೇದಾಂತಚಾರ್ಯರ ವಿಗ್ರಹವನ್ನು ನಾವು ಕಾಣಬಹುದು. ಮೂಲದೇವರಾದ ಬಿಳಿಗಿರಿ ರಂಗಸ್ವಾಮಿ ಮೂರ್ತಿಯನ್ನು ವಸಿಷ್ಠರು ಪ್ರತಿಷ್ಠಾಪಿಸಿದರೆಂಬ ಪ್ರತೀತಿಯಿದೆ.

ಇದನ್ನೂ ಓದಿ: ಕೊಳ್ಳೇಗಾಲ ಅರಣ್ಯ ಕಚೇರಿಯಲ್ಲಿ ಪಿ.ಶ್ರೀನಿವಾಸ್ ನೆನಪು ಜೀವಂತ… ವೀರಪ್ಪನ್ ಮಾಡಿದ್ದೇನು?

ಪೌರಾಣಿಕ ಇತಿಹಾಸದಂತೆ ಹೇಳುವುದಾದರೆ ಬ್ರಹ್ಮಾಂಡ ಪುರಾಣದಲ್ಲಿ ಬಿಳಿಗಿರಿರಂಗಬೆಟ್ಟವನ್ನು ದಕ್ಷಿಣ ತಿರುಪತಿ  ಎಂದು ಕರೆಯಲಾಗಿದೆ. ಬೆಟ್ಟದ ಮೇಲೆ ಗಂಗಾಧರೇಶ್ವರನ ಗುಡಿ ಇದೆ. ದೇವಸ್ಥಾನದಿಂದ 16 ಕಿಮೀ ದೂರದಲ್ಲಿ ಭಾರ್ಗವೀ ನದಿ ಹರಿಯುತ್ತದೆ. ಬಿಳಿಗಿರಿರಂಗಸ್ವಾಮಿಯ ದೇವಸ್ಥಾನದಿಂದ ಸುಮಾರು 19 ಕಿಮೀ ದೂರದಲ್ಲಿ ಶಿವಸಮುದ್ರದ ಗಂಗರಾಜ ತನ್ನ ಅಳಿಯನಾಗಿ ಕುಂಚುಕೋಟೆಯನ್ನು ನಿರ್ಮಿಸಿದುದಾಗಿ ತಿಳಿಯುತ್ತದೆ. ಈಗಲೂ ಆ ಕೋಟೆಯ ಅವಶೇಷಗಳನ್ನು ನೋಡಬಹುದಾಗಿದೆ. ಬೆಟ್ಟದ ಬುಡದಲ್ಲಿ ಬೃಂದಾವನವೆಂಬ ತುಳಸಮ್ಮನ ಗುಡಿ ಇದೆ. ಮಧ್ಯಭಾಗದಲ್ಲಿ ಕನಕದಾಸರದೆಂದು ಹೇಳಲಾಗುವ ಗುಹೆ ಇದೆ.

ಇಲ್ಲಿರುವ ತಾಮ್ರಶಾಸನದ ಪ್ರಕಾರ ಬಿಳಿಕಲ್ಲು ತಿರುವೆಂಕಟನಾಥನಿಗೆ ಹದಿನಾಡಿನ ಮುದ್ದರಾಜ 1667ರಲ್ಲಿ ದತ್ತಿ ಬಿಟ್ಟಿದ್ದನಂತೆ. ಇನ್ನು ದಿವಾನ್ ಪೂರ್ಣಯ್ಯ ಈ ದೇವಾಲಯದ ಸೇವೆಗಾಗಿ 2ಗ್ರಾಮಗಳನ್ನು ದತ್ತಿ ಬಿಟ್ಟರು ಎಂದು ಕೂಡ ಹೇಳಲಾಗುತ್ತಿದೆ.

ದೇವಾಲಯದಿಂದ ಸುಮಾರು ಹತ್ತು ಕಿ.ಮೀ. ದೂರದಲ್ಲಿ ಶತಮಾನಗಳನ್ನು ಸವೆಸಿದ ದೊಡ್ಡಸಂಪಿಗೆ ಮರ, ಕೆ.ಗುಡಿ ಎಂಬ ನಿಸರ್ಗ ತಾಣವಿದೆ. ಇಲ್ಲಿನ ಸುತ್ತಮುತ್ತಲ ಪರಿಸರ ಹಾಗೂ ಬಿಳಿಗಿರಿರಂಗನ ಬೆಟ್ಟ ವ್ಯಾಪ್ತಿಗೆ ಸೇರುವಂತಹ ಬೇಡಗುಳಿ, ಹೊನ್ನಮೇಟಿ, ಅತ್ತಿಖಾನಿ ಮೊದಲಾದ ಅರಣ್ಯ ಪ್ರದೇಶಗಳು ನಿಸರ್ಗ ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಿದೆ.

ಇದನ್ನೂ ಓದಿ; ನಿಸರ್ಗದ ಸುಂದರತೆಯನ್ನು ಕಣ್ತುಂಬಿಕೊಳ್ಳಲು ಚಾಮರಾಜನಗರದ ಕರಿವರದರಾಜ ಸ್ವಾಮಿಬೆಟ್ಟ

ಬಿಳಿಗಿರಿ ರಂಗನಬೆಟ್ಟದ ಬಗ್ಗೆ ಹೇಳುವುದಾದರೆ, ಇದು ಸುಮಾರು 540 ಚದರ ಕಿ.ಮೀ. ವಿಸ್ತಾರವನ್ನು ಹೊಂದಿದೆ. ಅಲ್ಲದೆ ಸದಾ ಹಸಿರು ಹಚ್ಚಡದಿಂದ ಕೂಡಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಬಿಳಿಗಿರಿರಂಗನಬೆಟ್ಟವನ್ನು ಪ್ರವೇಶಿಸುತ್ತಿದ್ದಂತೆಯೇ  ಮೇಲಿಂದ ಮೇಲೆ ಬೀಸಿ ಬರುವ ತಂಗಾಳಿಯಿಂದಾಗಿ ನಡುಬೇಸಿಗೆಯೂ ಕೂಡ ಬೆಳದಿಂಗಳೆನೋ ಎಂಬಂತೆ ಭಾಸವಾಗುತ್ತದೆ.

ಕಣ್ಣು ಹಾಯಿಸಿದುದ್ದಕ್ಕೂ ಶ್ರೀಗಂಧ, ಹೊನ್ನೆ, ಮತ್ತಿ, ಬೀಟೆ, ಬನ್ನಿ ಮೊದಲಾದ ಅಮೂಲ್ಯ ಮರಗಳು.. ಹುಲಿ, ಚಿರತೆ, ಕರಡಿ, ಆನೆ, ಕಾಡೆಮ್ಮೆ, ಜಿಂಕೆ ಸೇರಿದಂತೆ ಕಾಡು ಪ್ರಾಣಿಗಳು… ಕಾಡಿನ ನಡುವೆ ಅಲ್ಲಲ್ಲಿ ಸೋಲಿಗರ ಜೋಪಡಿಗಳು..  ಕಾಫಿ, ಕಿತ್ತಳೆ, ಬಾಳೆ, ಹಿಪ್ಪನೇರಳೆ ಬೆಳೆಯ ತೋಟಗಳು… ಅದರಾಚೆಗಿನ ಕಾಡಿನ ನಡುವಿನ ಅಂಕುಡೊಂಕಿನ ರಸ್ತೆಗಳಲ್ಲಿ ತಲೆ ಮೇಲೆ  ಅರಣ್ಯ ಉತ್ಪನ್ನಗಳನ್ನು ಹೊತ್ತು ಸಾಗುವ ಸೋಲಿಗರು… ಅರಣ್ಯದ ನಡುವಿನಿಂದ ಛಂಗನೆ ನೆಗೆದು ಓಡುವ ಜಿಂಕೆಗಳು… ಘೀಳಿಡುವ ಆನೆಗಳು… ಹೀಗೆ ಒಂದು, ಎರಡಲ್ಲ ಹತ್ತಾರು ವಿಸ್ಮಯ ನೋಟಗಳು ಕಣ್ಮುಂದೆ ಹಾದು ಹೋಗುತ್ತವೆ.

ಇದನ್ನೂ ಓದಿ: ಶಿವನಸಮುದ್ರದಲ್ಲಿ ಕಾವೇರಿಯ ಜಲನರ್ತನ ನೋಡುವುದೇ ಕಣ್ಣಿಗೊಂದು ಹಬ್ಬ…

ಬಿಳಿಗಿರಿರಂಗನಬೆಟ್ಟ ವನ್ಯಧಾಮವಾಗಿದ್ದು, ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕೊಂಡಿ ಎಂದರೆ ತಪ್ಪಾಗುವುದಿಲ್ಲ. ಏಷ್ಯಾದ ಆನೆಗಳು, ಬಿಳಿಪಟ್ಟೆಗಳ ಹುಲಿಗಳ ವಾಸಕ್ಕೆ ಯೋಗ್ಯವಾಗಿರುವ ಈ ತಾಣದಲ್ಲಿ ಸುಮಾರು 700ಕ್ಕೂ ಹೆಚ್ಚು ವೈವಿಧ್ಯಮಯ ಸಸ್ಯ ಪ್ರಭೇದಗಳಿವೆ. ಇಷ್ಟು ಮಾತ್ರವಲ್ಲದೆ ಚಿರತೆ, ಜಿಂಕೆ, ಸೀಳುನಾಯಿ ಮುಂತಾದ ಪ್ರಾಣಿಗಳು 200ಕ್ಕೂ ಅಧಿಕ ಪಕ್ಷಿ ಸಂಕುಲಗಳು ಇಲ್ಲಿವೆ. ಈ ಅರಣ್ಯದಲ್ಲಿ ಬಹಳ ಹಿಂದಿನಿಂದಲೂ ಸೋಲಿಗರು ವಾಸ ಮಾಡುತ್ತಾ ಬಂದಿದ್ದು, ಇಲ್ಲಿ ಸಿಗುವ ಅರಣ್ಯ ಉತ್ಪನ್ನವೇ ಅವರ ಬದುಕಿಗೆ ಆಸರೆಯಾಗಿದೆ.

ಇಷ್ಟೆಲ್ಲಾ ವೈಶಿಷ್ಟ್ಯತೆಗಳನ್ನು ಹೊಂದಿರುವ ಬಿಳಿಗಿರಿರಂಗನ ಬೆಟ್ಟಕ್ಕೆ ನೀವು ಇನ್ನೂ ಭೇಟಿ ನೀಡದೆ ಇದ್ದರೆ ಖಂಡಿತಾ ಒಮ್ಮೆ ಭೇಟಿ ನೀಡಿ… ನಿಸರ್ಗ ಸುಂದರ ಮಡಿಲಲ್ಲಿ ಹಾಯಾಗಿ ಓಡಾಡಿ… ಬಿಳಿಗಿರಿರಂಗನಾಥನ ಕೃಪೆಗೆ ಪಾತ್ರರಾಗಿ…

 

B M Lavakumar

admin
the authoradmin

Leave a Reply