ಇವತ್ತು ನಾವು ಹಣ್ಣು, ತರಕಾರಿ, ಸೇರಿದಂತೆ ಧಾನ್ಯಗಳ ಮೂಲಕ ರಾಸಾಯನಿಕ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ದೇಹವನ್ನು ತಲುಪುತ್ತಿದೆ. ಅದರಲ್ಲೂ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದಾಗಿ ಭೂಮಿ ಫಲವತ್ತತೆ ಕಳೆದುಕೊಂಡು ಬರಡಾಗುತ್ತಿದೆ. ಮತ್ತೊಂದೆಡೆ ರಾಸಾಯನಿಕವಾಗಿ ಬೆಳೆದ ಫಸಲನ್ನು ನಾವು ಅನಿವಾರ್ಯವಾಗಿ ಸೇವಿಸಬೇಕಾಗಿದೆ. ಹೀಗಾಗಿ ನಮ್ಮ ಆರೋಗ್ಯ ಕೆಡುತ್ತಿದೆ.. ಹೊಸ ರೋಗಗಳು, ದೈಹಿಕ ತೊಂದರೆಗಳು ನಮ್ಮನ್ನು ಅಪ್ಪಿಕೊಳ್ಳುತ್ತಿವೆ.. ಆದರೆ ಅದನ್ನು ಸರಿಪಡಿಸಿಕೊಳ್ಳಲಾರದ ಪರಿಸ್ಥಿತಿಗೆ ಬಂದು ನಿಂತಿದ್ದೇವೆ.. ಹಾಗಾದರೆ ಇದಕ್ಕೆಲ್ಲ ಪರಿಹಾರ ಇಲ್ಲವೆ?
ಖಂಡಿತಾ ಇದೆ… ಇದನ್ನು ಮಾಡಬೇಕಾದವರು ರೈತರಾಗಿದ್ದಾರೆ. ಅವರು ತಮ್ಮ ಕೃಷಿ ಪದ್ಧತಿಯಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ. ರಾಸಾಯನಿಕವನ್ನು ದೂರವಿಟ್ಟು ಸೆಗಣಿ- ಗಂಜಲವನ್ನು ಬಳಸುವುದನ್ನು ಆರಂಭಿಸಿದರೆ ಸಾಧ್ಯವಾಗುತ್ತದೆ. ಆದರೆ ಅಷ್ಟು ಸುಲಭವಾಗಿ ಆಗುವಂತಹದಲ್ಲ.. ಏಕೆಂದರೆ ಬದಲಾದ ಕಾಲಘಟ್ಟದಲ್ಲಿ ನಾವು ಒಂದಷ್ಟು ದೂರ ಬಂದಾಗಿದೆ.. ಮತ್ತೆ ಹಿಂತಿರುಗಿ ಹೋಗಿ ಎಂದರೆ ಅದು ಸಾಧ್ಯವಾಗದ ಮಾತಾಗಿದೆ. ಈಗಾಗಲೇ ರೈತರು ಸಂಕಷ್ಟದಲ್ಲಿದ್ದಾರೆ. ಅವರದ್ದು ಮುಗಿಯದ ಸಮಸ್ಯೆಯಾಗಿದೆ. ಅವರ ಬೆನ್ನಿಗೆ ಸರ್ಕಾರಗಳು ಎಲ್ಲಿಯವರೆಗೆ ನಿಲ್ಲುವುದಿಲ್ಲವೋ ಅಲ್ಲಿವರೆಗೆ ರೈತರಿಗೆ ಕಷ್ಟ ತಪ್ಪಿದಲ್ಲ..
ಇದನ್ನೂ ಓದಿ: ಕೊಡಗಿನಲ್ಲಿ ಭತ್ತದ ಕೃಷಿ ಮರೆಯಾಗುತ್ತಿದೆ.. ಭಾವನಾತ್ಮಕ ಸಂಬಂಧ ದೂರವಾಗಿಲ್ಲ…!
ಇವತ್ತಿನ ಪರಿಸ್ಥಿತಿಯಲ್ಲಿ ಕೃಷಿಯೇ ಬೇಡವೆಂದು ಕೂಲಿ ಕೆಲಸವಾದರೂ ಪರ್ವಾಗಿಲ್ಲ ಮಾಡಿಕೊಂಡು ಬದುಕೋಣವೆಂದು ರೈತರು ಜಮೀನು ಬಿಟ್ಟು ಪಟ್ಟಣದ ಕಡೆಗೆ ಮುಖ ಮಾಡಿರುವ ಸಂದರ್ಭದಲ್ಲಿ ಅವರಿಗೆ ನೀನು ರಾಸಾಯನಿಕ ಗೊಬ್ಬರ ಬಿಟ್ಟು ಸಗಣಿ, ಗಂಜಲ ಬಳಸಿ ಬೆಳೆ ಬೆಳೆಸು ಎಂದರೆ ಹೇಗೆ? ಇವತ್ತು ಹಳ್ಳಿಗಳ ಮನೆಗಳಲ್ಲಿ ವಯಸ್ಸಾದವರನ್ನು ಹೊರತು ಪಡಿಸಿದರೆ ಯುವಕರು ಕೆಲಸ ಹುಡುಕಿಕೊಂಡು ಹೊರಗೆ ಹೋಗಿದ್ದಾರೆ. ಓದಿದವರು ದನ ಸಾಕಿಕೊಂಡು ಕೃಷಿ ಮಾಡಿಕೊಂಡು ಮುಂದುವರೆಯಲು ಒಪ್ಪುತ್ತಿಲ್ಲ. ಜತೆಗೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ದನಕರುಗಳನ್ನು ಸಾಕಲು ಜನರಾಗಲೀ ಅವುಗಳಿಗೆ ಮೇಯಲು ಖಾಲಿ ಸ್ಥಳಗಳಾಗಲೀ ಇಲ್ಲದಾಗಿದೆ.
ಇದೆಲ್ಲ ಕಾರಣಗಳಿಂದ ಇವತ್ತಿನ ಪರಿಸ್ಥಿತಿಯಲ್ಲಿ ದನಕರುಗಳನ್ನು ಸಾಕಿ ಸಲಹುವುದು ರೈತರಿಗೆ ಕಷ್ಟವಾಗುತ್ತಿದೆ. ಪರಿಣಾಮ ಸೆಗಣಿ ಗೊಬ್ಬರವಿಲ್ಲದೆ ಭೂಮಿ ಬರಡಾಗುತ್ತಿದೆ. ಇಳುವರಿ ಉದ್ದೇಶದಿಂದ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಸಲಾಗುತ್ತಿದ್ದು ಪರಿಣಾಮ ಪೌಷ್ಠಿಕಾಂಶವುಳ್ಳ ಆಹಾರ ಪದಾರ್ಥವನ್ನು ಪಡೆಯುವುದು ಕಷ್ಟವಾಗುತ್ತಿದೆ. ಮೇಲಿಂದ ಮೇಲೆ ಆರೋಗ್ಯ ಕೆಡುತ್ತಿರುವ ಇವತ್ತಿನ ದಿನಗಳಲ್ಲಿ ಜನ ಕೂಡ ಸಾವಯವ ಗೊಬ್ಬರಗಳಿಂದ ಬೆಳೆದ ಬೆಳೆಗಳನ್ನು ಇಷ್ಟಪಡುತ್ತಿದ್ದಾನೆ. ಆದರೆ ಸಾವಯವ ಕೃಷಿ ಮಾಡುವುದು ಅಷ್ಟು ಸುಲಭವಾಗಿ ಉಳಿದಿಲ್ಲ. ಆದರೂ ನಾವು ಈಗಿನಿಂದಲೇ ನೈಸರ್ಗಿಕ ಪದ್ಧತಿಯನ್ನು ಬಳಸಿಕೊಂಡು ಮಣ್ಣನ್ನು ಫಲವತ್ತತೆಯತ್ತ ಕೊಂಡೊಯ್ಯಲು ಏನು ಮಾಡಬೇಕೆಂಬುದರ ಬಗ್ಗೆ ಚಿಂತೆ ಮಾಡಬೇಕಾಗಿದೆ. ಸರ್ಕಾರಗಳು ಈ ನಿಟ್ಟಿನಲ್ಲಿ ಏನಾದರೊಂದು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಇದನ್ನೂ ಓದಿ: ಕೊಡಗಿನಲ್ಲಿ ಸಾಂಬಾರ ರಾಣಿಯ ವೈಭವ ಮರೆಯಾಗಿದ್ದು ಹೇಗೆ?
ಈಗಿನ ಪರಿಸ್ಥಿತಿಯಲ್ಲಿ ಇರುವ ಸೌಲಭ್ಯಗಳನ್ನು ಬಳಸಿಕೊಂಡು ರೈತರು ರಾಸಾಯನಿಕ ಗೊಬ್ಬರವನ್ನು ತಮ್ಮ ಜಮೀನಿನಿಂದ ದೂರವಿಡುವ ಪ್ರಯತ್ನ ಮಾಡಬೇಕಾಗಿದೆ. ಅದು ಸುಲಭವಾಗಿ ಆಗುವ ಕೆಲಸವಲ್ಲ. ಆದರೆ ಆ ನಿಟ್ಟಿನಲ್ಲಿ ಪ್ರಯತ್ನ ಪಟ್ಟರೆ ಮುಂದೆ ಅದರಿಂದ ಒಂದಷ್ಟು ಪ್ರಯೋಜನಗಳು ಆದರೂ ಆಗಬಹುದೇನೋ? ಮುಖ್ಯವಾಗಿ ರೈತರಿಗೆ ದನಸಾಕಲು ಮೇವಿನ ಕೊರತೆಯಿದೆ. ಹೀಗಾಗಿ ಅಜೋಲ್ಲಾವನ್ನು ಪಶು ಆಹಾರವಾಗಿ ಬಳಸುವುದರ ಬಗ್ಗೆ ತರಬೇತಿ ನೀಡಿ, ರೈತರೇ ಅದನ್ನು ಬೆಳೆಸಿಕೊಳ್ಳಲು ಸಹಾಯ ಮಾಡಬೇಕಾಗಿದೆ. ಈಗಾಗಲೇ ಈ ಬಗ್ಗೆ ಕೆಲವು ಕೃಷಿ ಸಂಸ್ಥೆಗಳು ಮಾಡುತ್ತಾ ಬಂದಿವೆ. ಅದನ್ನು ಪರಿಣಾಮಕಾರಿಯನ್ನಾಗಿಸುವ ಕೆಲಸ ಇನ್ನಷ್ಟು ನಡೆಯಬೇಕಿದೆ.
ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ, ಮುಂದಿನ ತಲೆಮಾರಿನವರು ಆರೋಗ್ಯವಂತರಾಗಿ ಉಳಿಯಬೇಕಾದರೆ ಸಾವಯವ ಕೃಷಿಯತ್ತ ಹೊರಳುವುದು ಅಗತ್ಯವಾಗಿದೆ. ಈ ಕುರಿತಂತೆ ತಜ್ಞರು ಕೂಡ ಅದನ್ನೇ ಪ್ರತಿಪಾದಿಸುತ್ತಿದ್ದಾರೆ. ಅವರು ಹೇಳುವ ಪ್ರಕಾರ ಕೃಷಿ ಕ್ಷೇತ್ರದಲ್ಲಿ ರೈತರು ಬೆಳೆ ಉತ್ಪಾದನೆಗೆ ಹೆಚ್ಚಾಗಿ ರಾಸಾಯನಿಕ ರಸಗೊಬ್ಬರ ಮತ್ತು ಕೀಟನಾಶಕಗಳ ಮೇಲೆ ಅವಲಂಬಿತರಾಗಿರುವುದರಿಂದ ಮಣ್ಣು, ನೀರು ಮತ್ತು ಆಹಾರ ಪದಾರ್ಥಗಳು ಕಲುಷಿತಗೊಂಡು ಜೀವವೈವಿಧ್ಯತೆಯಲ್ಲಿ ಅಸಮತೋಲನಕ್ಕೆ ಕಾರಣವಾಗಿರುತ್ತವೆ. ರೈತರು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು, ರಾಸಾಯನಿಕ ಮುಕ್ತ ಆಹಾರ ಉತ್ಪಾದಿಸಲು ಮತ್ತು ಆರ್ಥಿಕವಾಗಿ ಸಧೃಡವಾಗಿರಲು ಸಾವಯುವ ಕೃಷಿ ಆಥವಾ ನೈಸರ್ಗಿಕ ಕೃಷಿ ಪದ್ಧತಿಗೆ ಒತ್ತು ನೀಡುವುದು ಇಂದಿನ ಅಗತ್ಯವಾಗಿದೆ.
ಇದನ್ನೂ ಓದಿ: ಕೊಡಗಿನ ಕಿತ್ತಳೆಯ ವೈಭವ ಮರುಕಳಿಸಲು ಸಾಧ್ಯನಾ?..
ಕೃಷಿಯಲ್ಲಿ ರಾಸಾಯನಿಕಗಳನ್ನು ಬಳಸದೆ ಸ್ಥಳೀಯವಾಗಿ ಲಭ್ಯವಿರುವ ಪರಿಕರಗಳನ್ನು ಬಳಸಿ ಆರೋಗ್ಯಕರ ಮತ್ತು ಯಶಸ್ವಿ ಕೃಷಿಯನ್ನು ಮಾಡಬಹುದಾಗಿದೆ. ನಮ್ಮಲ್ಲಿ ಸ್ಥಳೀಯವಾಗಿ ಸಿಗುವ ದೇಸಿ ಹಸುವಿನ ಸಗಣಿ-ಗಂಜಲಗಳಿಂದ ಬೀಜಾಮೃತ ಮತ್ತು ಜೀವಾಮೃತವನ್ನು ತಯಾರಿಸಿಕೊಂಡು ಮಣ್ಣಿನಿಂದ ಬರುವಂತಹ ರೋಗ ಮತ್ತು ಕೀಟಗಳನ್ನು ತಡೆಯುವುದಲ್ಲದೇ ಮಣ್ಣಿನಲ್ಲಿರುವ ಜೈವಿಕ ಜೀವಿಗಳ ಸಂಖ್ಯೆಯನ್ನು ಹೆಚ್ಚಿಸಬಹುದಾಗಿದೆ. ಬೇವು, ಹೊಂಗೆ, ಎಕ್ಕ, ಸೀಬೆ, ಮಾವು, ಪಪಾಯ, ಸೀತಾಫಲ, ಖಾರದ ಮೆಣಸಿನಕಾಯಿ, ಬೆಳ್ಳುಳ್ಳಿ ಹಾಗು ಇತರೆ ಎಲೆಗಳನ್ನು ದೇಸಿ ಹಸುವಿನ ಗಂಜಲದ ಜೊತೆ ಉಪಯೋಗಿಸಿಕೊಂಡು ಕೀಟದ ಬಾಧೆಗಳನ್ನು ತಡೆಯಬಹುದಾಗಿದೆ ಹಾಗು ಮಜ್ಜಿಗೆ, ಶುಂಠಿ ಪುಡಿ, ಹಾಲು ಇತರೆ ಹಸುವಿನ ಪದಾರ್ಥಗಳಿಂದ ರೋಗಗಳನ್ನು ತಡೆಯಬಹುದಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಹೈನುಗಾರಿಕೆಯಲ್ಲಿ ಬರುವ ಶೇ. 60ರಿಂದ-70 ರಷ್ಟು ಭಾಗದ ಖರ್ಚು ಪಶು ಆಹಾರವೇ ಆಗಿರುವುದರಿಂದ ರೈತರು ಸಾವಯುವ ಕೃಷಿ ಪದ್ಧತಿಯಲ್ಲಿ ಅಜೋಲ್ಲಾವನ್ನು ಮನೆಯಲ್ಲೇ ಬೆಳೆದು ಜಾನುವಾರುಗಳಿಗೆ ನೀಡುವುದರಿಂದ ಪಶು ಆಹಾರದ ಖರ್ಚನ್ನು ಕಡಿಮೆ ಮಾಡುವುದರ ಜೊತೆಗೆ ಹೆಚ್ಚಿನ ಹಾಲಿನ ಇಳುವರಿ ಪಡೆಯಬಹುದು, ಅಜೋಲ್ಲಾದಲ್ಲಿ ಶೇ.25 ರಷ್ಟು ಪ್ರೋಟಿನ್ ಇರುತ್ತದೆ ಮತ್ತು ಉತ್ತಮ ಖನಿಜಾಂಶಗಳಿಂದ ಕೂಡಿರುವುದರಿಂದ ಪ್ರತಿ ಹಸುವಿಗೆ ದಿನಕ್ಕೆ 1 ಕೆಜಿಯಷ್ಟು ಅಜೋಲ್ಲಾವನ್ನು ಬೂಸದ ಜೊತೆ ಮಿಶ್ರಣ ಮಾಡಿ ನೀಡುವುದರಿಂದ ಹಾಲಿನಲ್ಲಿ ಕಂಡುಬರುವ ಡಿಗ್ರಿ ಸಮಸ್ಯೆಯನ್ನು ಕಡಿಮೆ ಮಾಡಬಹುದು ಮತ್ತು ಹಸುವು ಉತ್ತಮ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ ಎಂಬುದು ತಜ್ಞರು ನೀಡುವ ಸಲಹೆಯಾಗಿದೆ.
ಇದನ್ನೂ ಓದಿ: ಕರಿಮೆಣಸು ಬಳ್ಳಿಯನ್ನು ರಕ್ಷಿಸಿ ಫಸಲು ಪಡೆಯುವುದೇ ರೈತರಿಗೆ ಸವಾಲ್…
ಸಾವಯವ ಅಥವಾ ನೈಸರ್ಗಿಕ ಕೃಷಿ ಎನ್ನುವುದು ಹೇಳಿದಷ್ಟು ಸುಲಭದಲ್ಲ.. ಹಾಗೆಂದು ಕಷ್ಟವೂ ಅಲ್ಲ.. ಇವತ್ತು ಬಹುತೇಕ ಹೊಲಗದ್ದೆಗಳು ಸೆಗಣಿ ಗೊಬ್ಬರ ಅರ್ಥಾತ್ ಕೊಟ್ಟಿಗೆ ಗೊಬ್ಬರವನ್ನೇ ನೋಡದ ಪರಿಸ್ಥಿತಿಗೆ ಬಂದಿದೆ. ಅವರೆಲ್ಲರೂ ಜಮೀನಿಗೆ ರಾಸಾಯನಿಕ ಗೊಬ್ಬರವನ್ನಷ್ಟೆ ಹಾಕಿ ಬೆಳೆ ಬೆಳೆಯುತ್ತಿದ್ದಾರೆ. ಹೀಗೆ ಬೆಳೆದ ಬೆಳೆಗಳಿಂದ ನಾವು ಪೋಷಕಾಂಶವನ್ನು ನಿರೀಕ್ಷೆ ಮಾಡುವುದಾದರೂ ಹೇಗೆ? ಇದರಿಂದಲೇ ನಾವು ರೋಗದ ಗುಡಾಗುತ್ತಿದ್ದೇವೆ. ಬಹುತೇಕ ತರಕಾರಿ ಹಣ್ಣುಗಳು ನೈಜ ರುಚಿಯನ್ನು ಕಳೆದುಕೊಳುತ್ತಿವೆ. ಆದ್ದರಿಂದ ಈಗಿನಿಂದೇ ಆದಷ್ಟು ರೈತರು ಸಾವಯವ ಕೃಷಿ ಕಡೆಗೆ ಮುಖ ಮಾಡಿದರೆ ಮುಂದೆ ಒಳ್ಳೆಯ ಫಲಗಳನ್ನು ನಿರೀಕ್ಷಿಸ ಬಹುದೇನೋ?
B M Lavakumar