ArticlesLatest

ಕಾವೇರಿಗೆ ಶಾಂತಳಾಗುವಂತೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪೊಲಿಂಕಾನ ಪೂಜೆ…. ಏನಿದರ ವಿಶೇಷ?

ಈ ಬಾರಿ ನಿರೀಕ್ಷೆಗೂ ಮೀರಿ ಬಹುಬೇಗವೇ ಮುಂಗಾರು ಆರಂಭವಾಗಿದ್ದು, ಮೇ ತಿಂಗಳಲ್ಲಿ ಆರಂಭವಾದ ಮಳೆ ಇಲ್ಲಿಯವರೆಗೆ ಬಿಡುವು ನೀಡದೆ ಸುರಿಯುತ್ತಿದೆ. ಹೀಗಾಗಿ ಮಲೆನಾಡಿನಲ್ಲಿ ಅದರಲ್ಲೂ ಕೊಡಗಿನಲ್ಲಿ ಜನಜೀವನ ಕಷ್ಟವಾಗುತ್ತಿದೆ. ಕಾವೇರಿ ಉಕ್ಕಿ ಹರಿದ ಪರಿಣಾಮದಿಂದಾಗಿ ಹಲವು ರೀತಿಯ ಕಷ್ಟನಷ್ಟಗಳಾಗಿವೆ. ಹಾಗೆಯೇ ಒಂಬತ್ತು ದಶಕಗಳ ಬಳಿಕ ಜೂನ್ ನಲ್ಲಿಯೇ ಕೆಆರ್ ಎಸ್ ಜಲಾಶಯವನ್ನು ಭರ್ತಿ ಮಾಡಿದ ದಾಖಲೆಯನ್ನು ಬರೆದಾಗಿದೆ… ಇದೀಗ ಉಕ್ಕಿಹರಿದು ರೌದ್ರಾವತಾರ ತಾಳುವ ಕಾವೇರಿಗೆ ಶಾಂತಳಾಗು ಎಂದು ಪ್ರಾರ್ಥಿಸುವ ಸಮಯ ಬಂದಿದೆ..

ಪ್ರತಿವರ್ಷವೂ ಕೊಡಗಿನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಭಗಂಡೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ  ಸುಮಂಗಲಿ ಮಂಟಪವನ್ನು ತಂದು ಕಾವೇರಿ ನದಿಯಲ್ಲಿ ವಿಧಿ, ವಿಧಾನಗಳನ್ನು ನೆರವೇರಿಸಿ ಮಂಟಪವನ್ನು ತೇಲಿ ಬಿಡುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯವಾಗಿದೆ.  ಇದು ಉಕ್ಕಿ ಹರಿಯುವ ಕಾವೇರಿಗೆ ಶಾಂತಳಾಗುವಂತೆ ಪ್ರಾರ್ಥಿಸುವುದಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದೆ. ಹೀಗಾಗಿ ಹತ್ತಾರು ಸಂಕಷ್ಟಗಳು ಜನರನ್ನು ಕಾಡುತ್ತಿದೆ. ಹೀಗಾಗಿ ಮಳೆ ಅಬ್ಬರಿಸದೆ ಶಾಂತವಾಗಿ ಬಂದರೆ ಅಷ್ಟೇ ಸಾಕು ಎಂಬಂತಾಗಿದೆ.

ಇದನ್ನೂ ಓದಿ: ಮುಂಗಾರು ಮಳೆಗೆ ದರ್ಶನ ನೀಡುವ ಅಪರೂಪದ ಅತಿಥಿಗಳು…

2018ರ ನಂತರದ ಮಳೆಗಾಲವನ್ನು ಗಮನಿಸಿದರೆ ಜುಲೈ ಮತ್ತು  ಆಗಸ್ಟ್ ತಿಂಗಳಿನಲ್ಲಿ ಒಮ್ಮೆಗೆ ಧಾರಾಕಾರವಾಗಿ ಮಳೆ ಸುರಿದು ಅದರಿಂದ ಗುಡ್ಡಕುಸಿತದಂತಹ ಅನಾಹುತಗಳು ಸೃಷ್ಟಿಯಾಗಿರುವುದು ಗೋಚರಿಸುತ್ತದೆ. ಹೀಗಾಗಿ ಎಲ್ಲರ ಪ್ರಾರ್ಥನೆಯೂ ಮುಂದಿನ ದಿನಗಳಲ್ಲಿ ಮಳೆ ಕಡಿಮೆಯಾಗಲಿ ಎನ್ನುವುದಾಗಿದೆ. ಅದು ಏನೇ ಇರಲಿ ಭಾಗಮಂಡಲದಲ್ಲಿ ಕಕ್ಕಡ(ಆಟಿ) ಅಮಾವಾಸ್ಯೆಯಂದು ನಡೆಯುವ ಪೊಲಿಂಕಾನ ಪೂಜೆಯ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇಲ್ಲ. ಹಾಗಾದರೆ ಏನಿದು ಪೂಜೆ?

ಕೊಡಗಿನ ಮಟ್ಟಿಗೆ ಅತಿಹೆಚ್ಚಿನ ಮಳೆ ಸುರಿಯುವುದೇ  ಕಾವೇರಿ ಉಗಮಸ್ಥಾನ ತಲಕಾವೇರಿ ವ್ಯಾಪ್ತಿಯಲ್ಲಿ ಎಂದರೆ ತಪ್ಪಾಗಲಾರದು. ಪಶ್ಚಿಮ ಘಟ್ಟದ ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿ ಮಳೆ ಧಾರಾಕಾರವಾಗಿ ಸುರಿಯುವುದು ಮಾಮೂಲಿ ಹೀಗೆ ಸುರಿಯುವ ಮಳೆ ಬೆಟ್ಟಶ್ರೇಣಿಯಿಂದ ಹರಿದು ಬಂದು ಭಾಗಮಂಡಲವನ್ನು ಸೇರುತ್ತದೆ. ಈ ವೇಳೆ ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಕಾವೇರಿ, ಕನ್ನಿಕಾ ಮತ್ತು ಸುಜ್ಯೋತಿ ಸಂಗಮಗೊಂಡು ಮುಂದೆ ಹರಿಯುತ್ತವೆ. ಆದರೆ ಭಾಗಮಂಡಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ಮುಂದೆ ಹರಿಯುವ ವೇಳೆ ತ್ರಿವೇಣಿ ಸಂಗಮ ಜಲಾವೃತಗೊಳ್ಳುತ್ತದೆ. ಈ ವೇಳೆ ಇಲ್ಲಿನ ಸ್ನಾನಘಟ್ಟ ಸೇರಿದಂತೆ ಭಗಂಡೇಶ್ವರ ದೇಗುಲದ ಮೆಟ್ಟಿಲನ್ನು ಕಾವೇರಿ ಸ್ಪರ್ಶಿಸುತ್ತಾಳೆ.

ಇದನ್ನೂ ಓದಿ: ಮಳೆಗಾಲದಲ್ಲಿ ಕೊಡಗಿನತ್ತ ಪ್ರವಾಸಿಗರ ದಂಡು… ಈಗ ಟ್ರೆಂಡ್ ಆಗುತ್ತಿದೆ ಮಾನ್ಸೂನ್ ಟ್ರಿಪ್ ..

ಯಾವಾಗ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಯಿತೋ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಯಿತು ಎಂದರ್ಥ. ಹೀಗೆ ಕಾವೇರಿ ಪ್ರವಾಹೋಪಾದಿಯಲ್ಲಿ ಹರಿದರೆ ಹಲವು ಗ್ರಾಮಗಳು ಪ್ರವಾಹಪೀಡಿತವಾಗುತ್ತವೆ. ಜನ ಸಂಕಷ್ಟಕ್ಕೀಡಾಗುತ್ತಾರೆ. ಇತ್ತೀಚೆಗೆ ಭೂಕುಸಿತಗಳು ನಡೆಯುತ್ತಿರುವುದರಿಂದ ಭಯದ ವಾತಾವರಣ ಜಿಲ್ಲೆಯಾದ್ಯಂತ ಇದೆ. ಹೀಗಾಗಿಯೇ ಎಲ್ಲರೂ ಮಳೆ ಕಡಿಮೆಯಾಗಿ ಕಾವೇರಿ ಶಾಂತಳಾಗಲಿ ಎಂದು ಬಯಸುವುದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಎಲ್ಲರೂ ದೇವರನ್ನು ಪ್ರಾರ್ಥಿಸದೆ ಬೇರೆ ದಾರಿಯೇ ಇಲ್ಲದಾಗಿದೆ. ಪ್ರಕೃತಿ ಮುಂದೆ ನಮ್ಮದೇನು ನಡೆಯಲ್ಲ ಎಂಬುದು ಇಲ್ಲಿ ನಡೆದ ಭೂಕುಸಿದಂತಹ ವಿಕೋಪಗಳಿಂದ ಗೊತ್ತಾಗಿದೆ.

ವಾತಾವರಣ ಬದಲಾದ ಹಿನ್ನಲೆಯಲ್ಲಿ ಇತ್ತೀಚೆಗೆ ಮಳೆಗಾಲದಲ್ಲಿ ಬದಲಾವಣೆ ಕಾಣಿಸಿದೆ. ಇತ್ತೀಚೆಗಿನ ವರ್ಷಗಳಲ್ಲಿ ಸುರಿದ ಮಳೆಯನ್ನು ನೋಡಿದ್ದೇ ಆದರೆ ಆಗಸ್ಟ್ ತಿಂಗಳಲ್ಲಿ ಭಾರೀ ಮಳೆ ಸುರಿದು ಅನಾಹುತಗಳನ್ನು ಸೃಷ್ಟಿ ಮಾಡುತ್ತಿದೆ. ಈಗಲೂ ಇಲ್ಲಿಯ ಜನ ಭಯದಲ್ಲಿಯೇ ಬದುಕುತ್ತಿದ್ದಾರೆ. ಹೀಗಾಗಿ ಎಲ್ಲರ ಭಯ ದೂರವಾಗ ಬೇಕಾದರೆ ಕಾವೇರಿ ಶಾಂತರೂಪತಾಳ ಬೇಕಾಗಿದೆ. ಇದಕ್ಕಾಗಿಯೇ ಪೊಲಿಂಕಾನ ಪೂಜೆ ನಡೆಯುತ್ತಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಮಳೆಗಾಲ ಆರಂಭವಾಯಿತೆಂದರೆ ಗುಡ್ಡದಭೂತದ ಭಯ

ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಕಕ್ಕಡ ಅಮಾವಾಸ್ಯೆಯಂದು ಶ್ರದ್ಧಾಭಕ್ತಿಯಿಂದ ಸಂಪ್ರದಾಯದೊಂದಿಗೆ ಪೊಲಿಂಕಾನ ಪೂಜೆಯನ್ನು ನಡೆಸಲಾಗುತ್ತದೆ. ಪೊಲಿಂಕಾನ ಪೂಜೆಯ ದಿನದಂದು ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮಹಾಗಣಪತಿ, ಮಹಾವಿಷ್ಣು, ಸುಬ್ರಹ್ಮಣ್ಯ, ಭಗಂಡೇಶ್ವರ ದೇವಾಲಯಗಳಲ್ಲಿ ಪೂಜಾ ಕೈಂಕರ್ಯ ನಡೆಯುತ್ತದೆ ಆ ನಂತರ ಬಾಳೆದಿಂಡಿನಿಂದ ತಯಾರಿಸಿದ ಸುಮಂಗಲಿ ಮಂಟಪಕ್ಕೆ ದೀಪ ಬೆಳಗಿ ಕರಿಮಣಿ, ತಾಳಿ, ಬಳೆ, ಸೀರೆ, ಬೆಳ್ಳಿತಟ್ಟೆ ಮತ್ತಿತರ ಆಭರಣಗಳನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಿ ಮಂಗಳವಾದ್ಯದೊಂದಿಗೆ ಭಗಂಡೇಶ್ವರ ದೇವಾಲಯದ ಸುತ್ತ ಪ್ರದಕ್ಷಿಣೆ ಮಾಡಲಾಗುತ್ತದೆ.

ಇದಾದ ನಂತರ ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ತ್ರಿವೇಣಿ ಸಂಗಮಕ್ಕೆ ತರಲಾಗುತ್ತದೆ. ಆ ನಂತರ ವಿವಿಧ ಪೂಜಾ ವಿಧಿ ವಿಧಾನಗಳನ್ನು ಕೈಗೊಂಡು ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುತ್ತದೆ. ಈ ವೇಳೆ ಹಚ್ಚಿದ ದೀಪ ಹಾಗೆಯೇ ಉರಿಯುತ್ತಾ ಮುಂದೆ ಸಾಗುತ್ತದೆ. ಈ ಸಂದರ್ಭ ನಾಡಿಗೆ ಸಮೃದ್ದಿ ತರುವಂತಾಗಲಿ ಎಂದು ಕಾವೇರಿ ಮಾತೆಯಲ್ಲಿ ಪ್ರಾರ್ಥಿಸಲಾಗುತ್ತದೆ. ಇದು ಪ್ರತಿವರ್ಷವೂ ನಡೆಯುತ್ತಾ ಬರುತ್ತಿದೆ. ಕಾವೇರಿ ಕೃಪೆಯಿಂದಲೇ ಇಡೀ ನಾಡು ಸುಭೀಕ್ಷೆಯಿಂದ ಇರಲು ಸಾಧ್ಯವಾಗಿದೆ.

B M Lavakumar

admin
the authoradmin

Leave a Reply