ಸಿಗರೇಟ್ ಬದುಕನ್ನು ನಾಶ ಮಾಡುವ ಮುನ್ನ ಎಚ್ಚೆತ್ತುಕೊಳ್ಳಿ… ಸಿಗರೇಟ್ ಬದಿಗಿಟ್ಟು ಬದುಕುವುದನ್ನು ಕಲಿಯಿರಿ!

ಒಂದು ಕೈನಲ್ಲಿ ಸಿಗರೇಟು.. ಮತ್ತೊಂದು ಕೈನಲ್ಲಿ ಟೀ ಕಪ್ ಹಿಡಿದು ಟೀ ಅಂಗಡಿಗಳೊಳಗೆ ಕುಳಿತ ಯುವ ಜನರು ನಮಗೆ ಅಲ್ಲಲ್ಲಿ ಕಾಣಸಿಗುತ್ತಾರೆ… ಸಿಗರೇಟ್ ಜತೆಗೆ ಟೀ ಕುಡಿಯುವುದು ಕೆಲವರಿಗೆ ಅಭ್ಯಾಸವಾಗಿ ಹೋಗಿದೆ… ಅದರಲ್ಲೂ ಟೀ ಅಂಗಡಿಯೊಳಗೆ ಸಿಗರೇಟ್ ಸೇದಲೆಂದೇ ಎಲ್ಲ ರೀತಿಯ ಸೌಲಭ್ಯಗಳನ್ನು ಮಾಡಿಕೊಡಲಾಗುತ್ತದೆ. ಸದ್ಯ ಸಣ್ಣಪುಟ್ಟ ಟೀ ಅಂಗಡಿಗಳು ಕೇವಲ ಟೀ ಯನ್ನು ಮಾತ್ರ ನೀಡುತ್ತಿಲ್ಲ ಸಿಗರೇಟ್ ಗಳನ್ನು ನೀಡುತ್ತಿರುವುದರಿಂದ ಬಹುತೇಕ ಧೂಮಪಾನಿಗಳಿಗೆ ಟೀ ಅಂಗಡಿಗಳು ಸುರಕ್ಷಿತ ತಾಣಗಳಾಗಿವೆ.
ಬೀದಿಯಲ್ಲಿ ಸಿಗರೇಟ್ ಸೇದುವುದು ಕಂಡರೆ ಅವರ ಮೇಲೆ ದಂಡ ಹಾಕಲಾಗುತ್ತದೆ. ಹೀಗಾಗಿ ಸಿಗರೇಟ್ ಸೇದುವವರು ಟೀ ಅಂಗಡಿಗಳನ್ನು ಆಶ್ರಯಿಸುತ್ತಾರೆ. ಹೆಚ್ಚಿನ ಟೀ ಅಂಗಡಿಗಳಲ್ಲಿ ಅಂಗಡಿ ಮುಂದೆ ಧೂಮಪಾನ ನಿಷೇಧಿಸಲಾಗಿದೆ ಎಂಬ ಫಲಕಗಳಿಗೆ ಅಂದರೆ ಒಳಗೆ ಸೇದಲು ಅಡ್ಡಿಯಿಲ್ಲವೆಂಬುದು ಪರೋಕ್ಷ ಸೂಚನೆಯಾಗಿದೆ. ಸಿಗರೇಟ್ ಗಳನ್ನು ತಯಾರು ಮಾಡಲು ಅವಕಾಶ ನೀಡಿ.. ಸೇದುವವರಿಗೆ ದಂಡ ಹಾಕುವುದೆಷ್ಟು ಸರಿ? ಅದರಾಚೆಗೆ ಸಿಗರೇಟ್ ಸೇವವೆಯಿಂದ ಏನೇನು ತೊಂದರೆಗಳಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೂ ಸೇದುವವರಿಗೆ ಕೊರತೆಯಿಲ್ಲ. ಇವತ್ತು ಸಿಗರೇಟ್ ಒಂಥರಾ ಹಣ ಕೊಟ್ಟು ಕಾಯಿಲೆ ಎಳೆದುಕೊಳ್ಳುವ ವಸ್ತುವಾಗಿ ನಮ್ಮ ನಡುವೆಯಿದೆ ಎಂದರೆ ತಪ್ಪಾಗಲಾರದು.
ತಂಬಾಕಿನಿಂದ ಕ್ಯಾನ್ಸರ್ ಬರುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಹೀಗಿದ್ದರೂ ವಿದ್ಯಾವಂತರೇ ತಂಬಾಕಿನಿಂದ ತಯಾರಾದ ಸಿಗರೇಟ್ ನ್ನು ಸೇದಿ ಖುಷಿ ಪಡುತ್ತಿದ್ದಾರೆ. ಅಷ್ಟೇ ಆದರೆ ಪರ್ವಾಗಿಲ್ಲ ಇನ್ನು ಕೆಲವರು ಇದರ ಜತೆ ಮಾದಕ ವಸ್ತುಗಳನ್ನು ಬಳಸಿಕೊಳ್ಳುತ್ತಿರುವುದು ದುರಂತವೇ ಸರಿ.. ಇವತ್ತು ಕ್ಯಾನ್ಸರ್ ಗೆ ತಂಬಾಕು ಸೇವಿಸುವವರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ತಂಬಾಕು ಸೇವನೆ ಕ್ಯಾನ್ಸರ್ ಗೆ ಆಹ್ವಾನ ಎಂದು ಗೊತ್ತಿದ್ದರೂ ಕೂಡ ಯುವ ಸಮುದಾಯ ಅದರತ್ತ ಹೆಚ್ಚು ಒಲವು ತೋರುತ್ತಿದ್ದಾರೆ.
ಇದನ್ನೂ ಓದಿ: ಇದು ಹೃದಯದ ವಿಷಯ… ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನಾವೇನು ಮಾಡಬೇಕು? ಯಾವ ಆಹಾರ ಸೇವಿಸಬೇಕು?
ತಂಬಾಕಿನಿಂದ ತಯಾರಾಗುವ ಸಿಗರೇಟ್ ಈಗಾಗಲೇ ಬಹಳಷ್ಟು ಜನರ ಬದುಕನ್ನು ಆರಿಸಿದೆ. ಆದರೆ ಅದರ ಅರಿವಿಲ್ಲದೆ ಜನ ಸಿಗರೇಟ್ ಸೇವನೆ ಮಾಡುತ್ತಿದ್ದಾರೆ. ಇದರ ಬೆಲೆ ಗಗನಕ್ಕೇರಿದರೂ ಯಾವುದೇ ರೀತಿಯ ಆತಂಕಪಡದೆ ದುಪ್ಪಟ್ಟು ಹಣ ನೀಡಿಯಾದರೂ ಸೇವನೆ ಮಾಡುತ್ತಾರೆ. ಇದರ ತಡೆಗೆ ಮತ್ತು ಸಿಗರೇಟ್ ಸೇವಿಸುವವರಲ್ಲಿ ಅರಿವು ಮೂಡಿಸಿ ಅದರಿಂದ ಹೊರ ಬರುವಂತೆ ಮಾಡುವ ಕಾರ್ಯಕ್ರಮಗಳು ಪ್ರತಿದಿನವೂ ನಡೆಯುತ್ತಿದ್ದರೂ ಧೂಮಪಾನಿಗಳ ಸಂಖ್ಯೆ ಕಡಿಮೆಯಾದಂತೆ ಕಾಣುತ್ತಿಲ್ಲ.
ಬೀಡಿ, ಸಿಗರೇಟ್, ಗುಟ್ಕಾ, ನಶ್ಯ ಹೀಗೆ ತಂಬಾಕಿನಿಂದ ಆಗಿರುವ ಉತ್ಪನ್ನಗಳಿಂದ ಶುರುವಾಗುವ ಚಟಗಳು ಮೊದ ಮೊದಲಿಗೆ ಖುಷಿ ಕೊಡುತ್ತವೆ. ಹೀಗಾಗಿ ನಾವು ಅವುಗಳನ್ನು ಸೇವನೆ ಮಾಡುತ್ತೇವೆ. ಆದರೆ ದಿನಕಳೆದಂತೆ ಅದು ನಮ್ಮನ್ನು ಸೇವನೆ ಮಾಡುವಂತೆ ಪ್ರೇರೇಪಿಸುತ್ತದೆ. ಮುಂದುವರೆದ ಕಾಲಘಟ್ಟದಲ್ಲಿ ವಿದೇಶಿಯರಂತೆ ನಮ್ಮಲ್ಲಿಯೂ ಹೆಣ್ಣು ಮಕ್ಕಳು ಸಿಗರೇಟ್ ಸೇವನೆಗೆ ಮುಂದಾಗುತ್ತಿದ್ದಾರೆ. ಆದರೆ ಸಿಗರೇಟ್ ಹೊಗೆ ಶರೀರದೊಳಕ್ಕೆ ಹೋದರೆ ಅದು ಹೆಣ್ಣು ಮಕ್ಕಳ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತದೆ ಎಂಬುದು ಅಷ್ಟೇ ಸತ್ಯ.
ಸಿಗರೇಟ್ ಸೇವನೆಯಿಂದ ಶರೀರಕ್ಕಾಗಲೀ, ಆರೋಗ್ಯಕ್ಕಾಗಲೀ ಯಾವುದೇ ಪ್ರಯೋಜನವಿಲ್ಲ. ಆದರೆ ಇದರಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ದೊಡ್ಡ ಪಟ್ಟಿಯೇ ಇದೆ. ಇದು ಕ್ಯಾನ್ಸರ್ ತರುವುದರೊಂದಿಗೆ ಉಸಿರಾಟಕ್ಕೆ ಅಡಚಣೆ, ಕೆಮ್ಮು, ಕಫ, ಶ್ವಾಸಕೋಸದ ತೊಂದರೆ, ದೈಹಿಕ ಅಸಮರ್ಥತೆ ಹೀಗೆ ಹತ್ತು ಹಲವು ತೊಂದರೆಗಳಿಗೆ ದಾರಿ ಮಾಡಿಕೊಡುತ್ತದೆ.
ಸಿಗರೇಟ್ ಸೇದುವುದರಿಂದ ತಮ್ಮ ಆರೋಗ್ಯದ ಮೇಲೆ ತೊಂದರೆಯಾಗುತ್ತಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಾಗುತ್ತದೆ. ಆದರೆ ಸದಾ ಒತ್ತಡದಲ್ಲಿ ಕೆಲಸ ಮಾಡುವವರು ರಿಲ್ಯಾಕ್ಸ್ ಪಡೆಯುವ ಸಲುವಾಗಿ ಮೇಲಿಂದ ಮೇಲೆ ಸಿಗರೇಟ್ ಸೇದಲು ಆರಂಭಿಸುವುದು ಕಂಡು ಬರುತ್ತದೆ. ಇದು ಒಳ್ಳೆಯದಲ್ಲ. ಹೀಗೆ ಮಾಡುವ ವ್ಯಕ್ತಿ ಕ್ರಮೇಣ ಕಾಯಿಲೆಯ ಗೂಡಾಗಿ ಸಾವನ್ನು ಎಳೆದುಕೊಳ್ಳುತ್ತಾನೆ. ಯೌವನದ ದಿನಗಳಲ್ಲಿ ಎಲ್ಲವನ್ನೂ ಜಯಿಸುವ ಸಾಮರ್ಥ್ಯವಿರುತ್ತದೆ. ಹೀಗಾಗಿ ಅದರ ಪರಿಣಾಮಗಳು ಗೊತ್ತಾಗದೆ ಹೋಗಬಹುದು. ಆದರೆ ಒಮ್ಮೆ ಆರೋಗ್ಯ ಕೆಟ್ಟು ಆಸ್ಪತ್ರೆ ಸೇರಿದರೆ ಸಿಗರೇಟ್‌ನ ಕರಾಮತ್ತು ಗೊತ್ತಾಗಿ ಬಿಡುತ್ತದೆ.
ಇದನ್ನೂ ಓದಿ: ಹೃದಯದ ಆರೋಗ್ಯ ಕಾಪಾಡುವ ಬೀಟ್ರೋಟ್… ಅಧ್ಯಯನ ನಡೆಸಿದ ಸಂಶೋಧಕರು ಹೇಳಿದ್ದೇನು ಗೊತ್ತಾ?
ಸಿಗರೇಟ್ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದು ಗೊತ್ತಿದ್ದರೂ ಎಚ್ಚೆತ್ತುಕೊಳ್ಳುವುದಿಲ್ಲ. ಆದರೆ ಅದು ನಿಜವಾಗಿಯೂ ಒಳ್ಳೆಯದಲ್ಲ. ಇವತ್ತಿನ ಪರಿಸ್ಥಿತಿಯಲ್ಲಿ ಆಗಾಗ್ಗೆ ಒಂದಲ್ಲ ಒಂದು ರೋಗಗಳು ಬಾಧಿಸುವ ಈ ಸಮಯದಲ್ಲಿ ಸಿಗರೇಟ್ ನ್ನು ಬದಿಗಿಟ್ಟು ಬದುಕುವುದನ್ನು ಕಲಿಯದೆ ಹೋದರೆ ಅದರಿಂದ ಬೇಕಾದಷ್ಟು ಅನುಭವಿಸಬೇಕಾಗಿ ಬರಬಹುದು. ಆದ್ದರಿಂದ ಅದರ ಸಹವಾಸದಿಂದ ದೂರವಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಜಾಣತನ. ಹೀಗೆ ಸಿಗರೇಟ್ ಸೇವನೆಯಿಂದ ದೂರ ಉಳಿದವರು ನಮ್ಮ ನಡುವೆ ಬಹಳಷ್ಟು ಜನರಿದ್ದಾರೆ. ಅವರ ಸಾಲಿಗೆ ಇನ್ನಷ್ಟು ಮಂದಿ ಸೇರಿಕೊಂಡರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ.
ವರ್ಷಾನುಗಟ್ಟಲೆ ಸಿಗರೇಟ್ ಸೇದುತ್ತಾ ಬಂದವರನ್ನು ನಾಳೆಯಿಂದಲೇ ಬಿಟ್ಟುಬಿಡಿ ಎಂದರೆ ಅದು ಸಾಧ್ಯವಾಗದ ಮಾತು.. ಆದರೆ ಸೇದುವ ಪ್ರಮಾಣವನ್ನು ಕಡಿಮೆ ಮಾಡುತ್ತಾ ಕೊನೆಗೊಂದು ದಿನ ಬಿಟ್ಟು ಬಿಟ್ಟರೆ ನೀವು ಬದುಕಿಕೊಂಡಂತೆಯೇ… ಸಿಗರೇಟ್ ನಿಂದ ಹೊರಬೇಕಾದರೆ ಹಲವು ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಕೆಲವರು ಮಾನಸಿಕವಾಗಿಯೂ ಕುಗ್ಗುವ ಸಾಧ್ಯತೆ ಇರುತ್ತದೆ. ಆದರೆ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಇವತ್ತಿನ ದಿನಗಳಲ್ಲಿ ಬೀಡಿ, ಸಿಗರೇಟ್ ದುಬಾರಿಯಾಗಿದೆ. ಅದನ್ನು ಬಿಟ್ಟರೆ ಆರೋಗ್ಯ ಮಾತ್ರವಲ್ಲ, ಆರ್ಥಿಕವಾಗಿಯೂ ಸದೃಢರಾಗಲು ಸಾಧ್ಯವಿದೆ.
ಇದನ್ನೂ ಓದಿ: ಸದ್ಗುಣ ಬೆಳೆಯಬೇಕಾದರೆ ನಾವು ಯಾವ ಆಹಾರ ಸೇವಿಸಬೇಕು?
ದುಶ್ಚಟಗಳನ್ನು ಕಲಿಯುವುದು ಸುಲಭ ಆದರೆ ಅದನ್ನು ತ್ಯಜಿಸುವುದು ಕಷ್ಟದ ಕೆಲಸ. ಆದರೆ ಗಟ್ಟಿ ಮನಸ್ಸು ಮಾಡಿ ಅದಕ್ಕೆ ತಿಲಾಂಜಲಿ ಹೇಳುವುದು ಇಂದಿನ ಅನಿವಾರ್ಯತೆಯಾಗಿದೆ. ತಜ್ಞರು ಹೇಳುವ ಪ್ರಕಾರ ಧೂಮಪಾನ ಮಾಡುವುದನ್ನು ಬಿಟ್ಟರೆ, ಆ ನಂತರ ವಿಟಮಿನ್- ಇ ಮಾತ್ರೆಗಳನ್ನು ಒಂದಷ್ಟು ಪ್ರಮಾಣದಲ್ಲಿ ಸೇವಿಸಬೇಕಂತೆ. ಇದರಿಂದ ಹೃದಯದ ಆರೋಗ್ಯಕ್ಕೆ ಹಾನಿಯಾಗುವುದಿಲ್ಲವಂತೆ. ಈ ಸಂಗತಿಯನ್ನು ಅಮೆರಿಕದಲ್ಲಿರುವ ಓಹಿಯೋ ಸ್ಟೇಟ್ ಯೂನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ. ಇಂತಹ ವಿಚಾರದಲ್ಲಿ ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು..
B M Lavakumar