ಶುಂಠಿಗೆ ಕಾಡುವ ‘ಎಲೆಚುಕ್ಕೆʼ ರೋಗಕ್ಕೆ ಕಾರಣವೇನು? ನಿರ್ವಹಣೆ ಹೇಗೆ?.. ಸಂಶೋಧನೆಗೆ ಮಾದರಿ ರವಾನೆ…

ಬಂಡವಾಳ ಸುರಿದು ಶುಂಠಿ ಕೃಷಿ ಮಾಡಿರುವ ಬೆಳೆಗಾರರು ಇದೀಗ ತಗುಲಿರುವ ಬೆಂಕಿರೋಗ ಮತ್ತು ಎಲೆಚುಕ್ಕೆ ರೋಗದಿಂದ ಭಯಭೀತರಾಗಿದ್ದಾರೆ.. ಅಷ್ಟೇ ಅಲ್ಲದೆ ಕೈ ಗೆ ಬಂದ ತುತ್ತು ಬಾಯಿಗೆ ಬರುತ್ತಾ? ಎಂಬ ಚಿಂತೆಯಲ್ಲಿದ್ದು, ಶುಂಠಿ ಕೃಷಿಕರ ಸಹಾಯಕ್ಕೆ ಧಾವಿಸಿರುವ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ ತಂಡ ಈ ಸಂಬಂಧ ಅಧ್ಯಯನ ನಡೆಸಿದ್ದಲ್ಲದೆ, ಮಾದರಿಯನ್ನು ಸಂಶೋಧನೆಗಾಗಿ ಹೈದರಾಬಾದಿನ ರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗಿದೆ.
ಕಳೆದ ವರ್ಷ ಬೆಂಕಿ ರೋಗದಿಂದ ಶುಂಠಿ ಬೆಳೆದ ಹಾಸನ, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ ಬೆಳೆಗಾರರು ಸಂಕಷ್ಟ ಅನುಭವಿಸಿದ್ದರು ಈ ಬಾರಿಯೂ ಅದೇ ಮುಂದುವರೆದಿದೆ. ಅದರಲ್ಲೂ ಬಿಡುವಿಲ್ಲದೆ ಮಳೆ ಸುರಿಯುತ್ತಿರುವುದು, ಮೋಡ ಮುಸುಕಿದ ವಾತಾವರಣ, ಕಡಿಮೆ ಬಿಸಿಲು, ಮಣ್ಣಿನಲ್ಲಿ ಹೆಚ್ಚಿರುವ ತೇವಾಂಶ, ಸೂಕ್ತ ಬಸಿಗಾಲುವೆ ಇಲ್ಲದಿರುವುದು ಹಾಗೂ ವೇಗವಾಗಿ ಬೀಸುವ ಗಾಳಿ ಇದೆಲ್ಲವೂ ಬೆಂಕಿ ರೋಗ ಅಥವಾ ದೊಮ್ಮೆ ರೋಗ ಉಲ್ಭಣಿಸಲು ಕಾರಣವಾಗಿದೆ.
ಅದರಲ್ಲೂ ತೆಂಗಿನ ತೋಟಗಳಲ್ಲಿ ಶುಂಠಿ ಬೆಳೆದಿರುವ ಕಡೆ ರೋಗ ಹೆಚ್ಚು ಉಲ್ಬಣವಾಗಿರುವುದನ್ನು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ ತಂಡ ಜುಲೈ ಮೂರನೇ ವಾರ ಕೊಡಗು, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸರ್ವೇಕ್ಷಣೆ ನಡೆಸಿ ಮನದಟ್ಟು ಮಾಡಿದೆ. ಅಲ್ಲದೆ ಇದು ಯಾವುದೇ ‘ವೈರಸ್ (ನಂಜಾಣು)ʼನಿಂದ ಬಂದಿರುವ ರೋಗವಲ್ಲ. ಬದಲಾಗಿ ಇದು ಶಿಲೀಂಧ್ರ ಮೂಲದ ರೋಗವಾಗಿದೆ ಎಂಬುದನ್ನು ಪತ್ತೆ ಹಚ್ಚಿದೆ.
ಹಾಗೆನೋಡಿದರೆ ಶುಂಠಿಗೆ ಎಲೆಚುಕ್ಕೆ ರೋಗ ಹೊಸದೇನಲ್ಲ. ಆದರೆ ಇಷ್ಟು ತೀವ್ರವಾಗಿ ಈ ಮೊದಲು ಬರುತ್ತಿರಲಿಲ್ಲ ಹಾಗೂ ಸುಲಭವಾಗಿ ನಿರ್ವಹಿಸಬಹುದಿತ್ತು. ಆದರೆ ಈ ಬಾರಿ ಉಲ್ಭಣವಾಗಿರುವುದು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯ ಸರ್ವೇಕ್ಷಣೆ ವೇಳೆ ತಿಳಿದು ಬಂದಿದೆ. ಅಲ್ಲದೆ ವಿವಿಧ ರೀತಿಯ ಶಿಲೀಂಧ್ರ (ಫಂಗಸ್)ಗಳು ಪತ್ತೆಯಾಗಿವೆ. ಅವುಗಳಲ್ಲಿ ಪ್ರಮುಖವಾಗಿ ಪೈರಿಕ್ಯುಲೇರಿಯಾ (ಭತ್ತದ ಬೆಂಕಿ ರೋಗಕ್ಕೆ ಕಾರಣವಾದ ಶಿಲೀಂಧ್ರದ ಜಾತಿಗೆ ಸೇರಿದ್ದು), ಫಿಲ್ಲೋಸ್ಟಿಕ್ಟ ಹಾಗೂ ಕೊಲ್ಲೆಟೋಟ್ರೈಕಂ ಬಗೆಗಳಾಗಿದ್ದು, ಇವುಗಳ ಪೈಕಿ ಪೈರಿಕ್ಯುಲೇರಿಯಾ ಅತಿ ಶೀಘ್ರವಾಗಿ ಹರಡುವ ರೋಗಾಣುವಾಗಿದೆ. (ಪೈರಿಕ್ಯುಲೇರಿಯಾದ ಪ್ರಬೇಧ ದೃಢಪಡಿಸುವ ಸಲುವಾಗಿ ರೋಗದ ಮಾದರಿಯನ್ನು ಹೈದರಾಬಾದಿನ ರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆಗೆ ಕಳುಹಿಸಿಕೊಡಲಾಗಿದೆ).
ಕೊಡಗು (ಕುಶಾಲನಗರ) ಮೈಸೂರು (ಪಿರಿಯಾಪಟ್ಟಣ, ಹುಣಸೂರು) ಮತ್ತು ಹಾಸನ (ಅರಕಲಗೂಡು) ಜಿಲ್ಲೆಗಳಲ್ಲಿನ ಶುಂಠಿ ತಾಕುಗಳಲ್ಲಿ ಈ ರೋಗ ಲಕ್ಷಣಗಳು ಮತ್ತು ರೋಗಾಣುಗಳು ಕಂಡು ಬಂದಿವೆ. ಕುಶಾಲನಗರ ಮತ್ತು ಅರಕಲಗೂಡು ಭಾಗಗಳಲ್ಲಿ ರೋಗ ಹರಡಲು ಪೂರಕವಾದ ಅಂಶಗಳಿರುವುದರಿಂದ ಬಹಳಷ್ಟು ಕಡೆ ತುಸು ಹೆಚ್ಚೇ ಚುಕ್ಕೆ ಮತ್ತು ಬೆಂಕಿ ರೋಗ ಕಂಡು ಬಂದಿದೆ. ಉಳಿದಂತೆ ಮಳೆ ಕಡಿಮೆ ಇರುವ ಮತ್ತು ಶುಷ್ಕ ವಾತಾವರಣ ಅಥವಾ ಆಧ್ರ್ರತೆ ಕಡಿಮೆಯಿರುವ ತಾಲ್ಲೂಕುಗಳಲ್ಲಿ ರೋಗದ ಸಮಸ್ಯೆ ಕಡಿಮೆಯಿದೆ.
ಇದನ್ನೂ ಓದಿ: ಕೊಡಗಿನ ಕಿತ್ತಳೆಯ ವೈಭವ ಮರುಕಳಿಸಲು ಸಾಧ್ಯನಾ?.. ಕಿತ್ತಳೆಯತ್ತ ಆಸಕ್ತಿ ಕಡಿಮೆಯಾಗಿದ್ದು ಹೇಗೆ?
ನಿರಂತರ ಮಳೆ (ಸಿಂಪಡಣೆಗೆ ಬಿಡುವು ಕೊಡದಷ್ಟು) ಶಿಲೀಂಧ್ರನಾಶಕಗಳ ಜೊತೆ ಬೆಳೆ ಉತ್ತೇಜಕಗಳು, ಹಾರ್ಮೋನುಗಳು, ಅಮೈನೋ ಆಮ್ಲ, ಕಡಲಪಾಚಿ ಆಧಾರಿತ ಉತ್ಪನ್ನಗಳ ಬಳಕೆ, ಉತ್ಪನ್ನಗಳ ಹೊಂದಾಣಿಕೆ ಅರಿವಿಲ್ಲದೆಯೇ ಒಮ್ಮೆಗೆ ನಾಲ್ಕಾರು ಉತ್ಪನ್ನಗಳನ್ನು ಬಳಸುವುದು. ಶಿಫಾರಸ್ಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚು ಅಥವಾ ಕಡಿಮೆ ಪ್ರಮಾಣದ ಔಷಧಗಳ ಬಳಕೆ ರೋಗವನ್ನು ನಿಯಂತ್ರಿಸುವಲ್ಲಿ ಪ್ರಮುಖ ತೊಡಕಾಗಿವೆ ಜತೆಗೆ ಪೋಷಕಾಂಶ ನಿರ್ವಹಣೆಯಲ್ಲಿ ತಪ್ಪು ಕ್ರಮಗಳು – ಮಣ್ಣು ಪರೀಕ್ಷೆ ಮಾಡಿಸದೆಯೇ ರಸಗೊಬ್ಬರ ನೀಡುತ್ತಿರುವುದು, ಅತಿಯಾದ ಸಾರಜನಕ ರಸಗೊಬ್ಬರಗಳ ಬಳಕೆ, ಕಡಿಮೆ ಪ್ರಮಾಣದ ಪೊಟ್ಯಾಷ್ ಬಳಕೆ, ಗೊಬ್ಬರಗಳನ್ನು ಬೆಳೆಯ ಬೇಡಿಕೆಗೆ ತಕ್ಕಂತೆ ನೀಡದಿರುವುದು, ಲಘು ಪೋಷಕಾಂಶಗಳ ಅಸಮರ್ಪಕ ಬಳಕೆ, ಔಷಧಗಳೊಂದಿಗೆ ಪೋಷಕಾಂಶಗಳನ್ನು ಮಿಶ್ರಣ ಮಾಡಿ ಸಿಂಪಡಿಸುತ್ತಿರುವುದು. ಸೂಕ್ತ ಪೋಷಣೆ ದೊರೆಯದೆ ಶುಂಠಿ ಬೆಳೆ ರೋಗಕ್ಕೆ ಸುಲಭವಾಗಿ ತುತ್ತಾಗುತ್ತಿರುವುದು ಕಂಡುಬಂದಿದೆ.
ಹಾಗಾದರೆ ನಿರ್ವಹಣೆ ಹೇಗೆ ಎಂಬುದನ್ನು ನೋಡಿದ್ದೇ ಆದರೆ, ಮುಂಜಾಗ್ರತೆಯಾಗಿ ಅಂದರೆ ರೋಗ ಬರುವ ಮೊದಲು – ಶೇ. 1ರ ಬೋರ್ಡೋ ದ್ರಾವಣ, ಮ್ಯಾಂಕೋಝೆಬ್ (2 ಗ್ರಾಂ ಪ್ರತಿ ಲೀಟರ್ ನೀರಿಗೆ) ಅಥವಾ ತಾಮ್ರದ ಆಕ್ಸಿ ಕ್ಲೋರೈಡ್ (3 ಗ್ರಾಂ ಪ್ರತಿ ಲೀಟರ್ ನೀರಿಗೆ) ಗಳನ್ನು 12-15 ದಿನಗಳ ಅಂತರದಲ್ಲಿ ಸಿಲಿಕಾನ್ ಆಧಾರಿತ ಅಂಟು (ಗಮ್) ಸೇರಿಸಿ ಸಿಂಪಡಿಸಬೇಕು. ಈಗಾಗಲೇ ರೋಗ ಬಂದಿರುವ ಕಡೆ ಮಳೆ ಇಲ್ಲದಿರುವಾಗ (ಕನಿಷ್ಟ 4-5 ಗಂಟೆ) ಪೊರೀಪಿಕೋನಝೋಲ್ 25 ಇ.ಸಿ. (1 ಮಿಲೀ ಪ್ರತಿ ಲೀಟರ್ ನೀರಿಗೆ) ಅಥವಾ ಹೆಕ್ಸಾಕೋನಝೋಲ್ 5 ಇ.ಸಿ. (1 ಮಿಲೀ ಪ್ರತಿ ಲೀಟರ್ ನೀರಿಗೆ) ಅಥವಾ ಟೆಬುಕೋನಝೋಲ್ 38.39 ಎಸ್ಸಿ (1 ಮಿಲೀ ಪ್ರತಿ ಲೀಟರ್ ನೀರಿಗೆ) ಅಂತವ್ರ್ಯಾಪಿ ಶಿಲೀಂಧ್ರನಾಶಕಗಳನ್ನು ಅಥವಾ ಕಾಬೆರ್ಂಡೈಝಿಂ 12 % + ಮ್ಯಾಂಕೋಝೆಬ್ 63% (2 ಗ್ರಾಂ ಪ್ರತಿ ಲೀಟರ್ ನೀರಿಗೆ) 8-10 ದಿನಗಳ ಅಂತರದಲ್ಲಿ ಉತ್ತಮ ಗುಣಮಟ್ಟದ ಅಂಟು ಬೆರೆಸಿ ಸಿಂಪಡಿಸಬೇಕು.
ಇದನ್ನೂ ಓದಿ: ಕೊಡಗಿನಲ್ಲಿ ಸಾಂಬಾರ ರಾಣಿಯ ವೈಭವ ಮರೆಯಾಗಿದ್ದು ಹೇಗೆ? ಬೆಳೆಗಾರನ ಆ ದಿನಗಳು ಹೇಗಿದ್ದವು?
ಬಹಳಷ್ಟು ಕೃಷಿಕರು ರೋಗ ಬಂದ ನಂತರ ಟೆಬುಕೋನಝೋಲ್ 50 % + ಟ್ರೈಫ್ಲಾಕ್ಸಿಸ್ಟ್ರಾಬಿನ್ 25 % ಡಬ್ಲ್ಯೂಜಿ ಸಿಂಪಡಿಸಿ ಉತ್ತಮ ಫಲಿತಾಂಶ ಪಡೆದಿರುವುದು ನಮ್ಮ ಗಮನಕ್ಕೆ ಬಂದಿದ್ದು ಇದನ್ನು ಸಂಶೋಧನೆಯಿಂದ ದೃಢಪಡಿಸಬೇಕಿದೆ. ಆದಾಗ್ಯೂ ಸ್ಟ್ರಾಬುಲಿನ್ ಗುಂಪಿಗೆ ಸೇರಿರುವ ಶಿಲೀಂಧ್ರನಾಶಕಗಳನ್ನು ಪದೇ ಪದೇ ಬಳಕೆ ಮಾಡುವುದರಿಂದ ರೋಗಾಣು ಅಂಥಹ ಶಿಲೀಂಧ್ರನಾಶಕಗಳಿಗೆ ಪ್ರತಿರೋಧಕ ಶಕ್ತಿ ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚಿರುವ ಕಾರಣ ಅವುಗಳ ಪುನರಾವರ್ತಿತ ಬಳಕೆ ಮಾಡದಿರಲು ತಿಳಿಸಲಾಗಿದೆ.
ಇಲ್ಲಿ ಮುಖ್ಯವಾಗಿ ಆಗ್ರೋ ಕೇಂದ್ರಗಳಿಗೆ ಔಷಧ ಖರೀದಿಗೆ ಹೋಗುವ ಮೊದಲು ತಜ್ಞರ ಸಲಹೆ ಪಡೆದು ಅವರು ಶಿಫಾರಸು ಮಾಡುವ ಶಿಲೀಂಧ್ರನಾಶಕಗಳನ್ನು ಮಾತ್ರ ಬಳಸಲು ರೈತರಿಗೆ ಸೂಚಿಸಲಾಗಿದೆ (ಕೆಲವು ಡೀಲರ್‍ಗಳು, ಖಾಸಗಿ ಕಂಪನಿಗಳ ಪ್ರತಿನಿಧಿಗಳು ಅಥವಾ ನಕಲಿ ಕೃಷಿ ತಜ್ಞರುಗಳು ಕೃಷಿಕರಿಗೆ ಅವಶ್ಯಕತೆಯಿಲ್ಲದ ಉತ್ಪನ್ನಗಳನ್ನು ಶಿಫಾರಸು ಮಾಡುತ್ತಿರುವುದು ಸರ್ವೇಕ್ಷಣಾ ತಂಡದ ಗಮನಕ್ಕೆ ಬಂದಿರುತ್ತದೆ).
ಇದನ್ನೂ ಓದಿ: ರಾಸಾಯನಿಕಯುಕ್ತ ಆಹಾರ ಮನುಷ್ಯನ ದೇಹ ಸೇರುತ್ತಿದೆ…
ಹೆಚ್ಚಿನ ಮಾಹಿತಿಗಾಗಿ ಕೃಷಿಕರು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಸ್ಥೆಗಳು ಅಥವಾ ತಜ್ಞರ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದು. ತೋಟಗಾರಿಕೆ ಮಹಾವಿದ್ಯಾಲಯ, ಮೈಸೂರು ಡಾ. ಕಿರಣ್ ಕುಮಾರ್ ಮೊ.ಸಂ. 9740172729, ತೋಟಗಾರಿಕೆ ಮಹಾವಿದ್ಯಾಲಯ, ಬೆಂಗಳೂರು, ಡಾ. ಹರೀಶ್ ಬಿ ಎಸ್, ಮೊ.ಸಂ. 9480557634, ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಹಾಸನ, ಡಾ. ಮಹೇಶ್ ವೈ.ಎಸ್., ಮೊ. ಸಂ. 89713 83036, ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ದೇವಿಹೊಸೂರು, ಡಾ. ರವಿಕುಮಾರ್, ಮೊ.ಸಂ. 9886504026, ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಶಿರಸಿ, ಡಾ. ಪ್ರಸಾದ್ ಪಿ.ಎಸ್., ಮೊ.ಸಂ. 9901066699 ಅಥವಾ ತೋಟಗಾರಿಕಾ ಮಹಾವಿದ್ಯಾಲಯ, ಬೀದರ್, ಡಾ. ಅಬ್ದುಲ್ ಕರೀಮ್, ಮೊ.ಸಂ. 8792698087 ಇವರನ್ನು ಸಂಪರ್ಕಿಸಬಹುದಾಗಿದೆ.