ಕೊಡಗಿಗೆ ಬರುತ್ತಿರುವ ವಲಸೆ ಕಾರ್ಮಿಕರು ನಿಜವಾಗಿಯೂ ಅಸ್ಸಾಂನವರಾ? ಬಾಂಗ್ಲಾ ನುಸುಳುಕೋರರು ಇದ್ದರಾ?

ಕೊಡಗಿನಲ್ಲಿ ತೋಟದ ಕೆಲಸಕ್ಕೆ ಸ್ಥಳೀಯ ಕಾರ್ಮಿಕರು ಸಿಗದ ಕಾರಣದಿಂದಾಗಿ ಇವತ್ತು ವಲಸೆ ಕಾರ್ಮಿಕರನ್ನು ಆಶ್ರಯಿಸಲಾಗುತ್ತಿದೆ. ಸದ್ಯ ಅಸ್ಸಾಂನವರು ಎಂದು ಹೇಳಿಕೊಂಡು ಬರುತ್ತಿರುವ ಕಾರ್ಮಿಕರನ್ನು ಅವರ ಪೂರ್ವಾಪರ ಅರಿಯದೆ ಮಾಲೀಕರು ತಮ್ಮ ತೋಟದೊಳಗೆ ಬಿಟ್ಟುಕೊಂಡು ಕೆಲಸ ಮಾಡಿಸುತ್ತಿದ್ದಾರೆ. ಆದರೆ ವಲಸೆ ಕಾರ್ಮಿಕರನ್ನು ತೋಟದಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಬೇಕಾದರೆ ಪೊಲೀಸ್ ಇಲಾಖೆ ಕೆಲವೊಂದು ನಿಬಂಧನೆಗಳನ್ನು ಮಾಡಿದ್ದು ಅದನ್ನು ಪಾಲಿಸದಿರುವುದು ಎದ್ದು ಕಾಣುತ್ತಿದೆ.. ಹಾಗೆಯೇ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಇದನ್ನೂ ಓದಿ : ಹನಿಟ್ರ್ಯಾಪ್… ಇದು ಮಾಯಾಂಗನೆಯರ ವಿಷವರ್ತುಲ…
ಹೊಟ್ಟೆಪಾಡಿಗಾಗಿ ದೂರದ ಉತ್ತರ ಭಾರತದಿಂದ ಕೊಡಗು, ಹಾಸನ, ಚಿಕ್ಕಮಗಳೂರು ಕಾಫಿ ತೋಟಗಳಿಗೆ ಕೆಲಸಕ್ಕಾಗಿ ಬರುವುದು ಕಳೆದ ಒಂದೂವರೆ ದಶಕದಿಂದ ಹೆಚ್ಚಾಗಿದೆ. ಕೊಡಗಿನವರಿಗೂ ಇವರು ಅನಿವಾರ್ಯವಾಗಿದೆ. ಏಕೆಂದರೆ ಸ್ಥಳೀಯವಾಗಿ ಕೂಲಿ ಕಾರ್ಮಿಕರ ಕೊರತೆ ಎದ್ದು ಕಾಣಿಸುತ್ತಿದೆ. ಮೊದಲಿನಂತೆ ಈಗ ತೋಟದ ಕೆಲಸಕ್ಕೆ ಜನ ಬರುತ್ತಿಲ್ಲ ಹೀಗಾಗಿ ತೋಟ ಹೊಂದಿರುವ ಮಾಲೀಕರು ಕೆಲಸಕ್ಕೆ ಜನ ಸಿಕ್ಕಿದರೆ ಸಾಕು ಎಂಬ ಪರಿಸ್ಥಿತಿಗೆ ಬಂದಿದ್ದಾರೆ. ಅವರು ಕೆಲಸಕ್ಕೆ ಬಂದವರ ಬಗ್ಗೆ ವಿಚಾರಣೆ ಮಾಡುವುದಕ್ಕಿಂತ ಹೆಚ್ಚಾಗಿ ಆಯಾಯ ಸಮಯಕ್ಕೆ ಕೆಲಸ ಮುಗಿದರೆ ಸಾಕೆಂಬ ಪರಿಸ್ಥಿತಿಗೆ ಬಂದಿದ್ದಾರೆ.
ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ವಲಸೆ ಕಾರ್ಮಿಕರು ಅಸ್ಸಾಂನಿಂದ ಬಂದಿರುವುದಾಗಿ ಹೇಳುತ್ತಾ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಾರೆ. ಹೀಗೆ ಬರುವವರು ನಿಜವಾಗಿಯೂ ಅಸ್ಸಾಂನವರಾ? ಅಥವಾ ಬಾಂಗ್ಲಾದವರು ಇದ್ದಾರಾ? ಹೀಗೊಂದು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿದೆ. ಈ ಹಿಂದೆ ಕಾಫಿಕೊಯ್ಲು ಸಮಯದಲ್ಲಿ ಕೊಡಗಿಗೆ ಬಂದು ಅದಾದ ನಂತರ ಹೊರಟು ಹೋಗುತ್ತಿದ್ದರು. ಇತ್ತೀಚೆಗೆ ಅವರು ವರ್ಷಪೂರ್ತಿ ಇಲ್ಲಿದ್ದುಕೊಂಡೇ ಕೆಲಸಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಕೊಡಗಿನ ಬಗ್ಗೆ ಚೆನ್ನಾಗಿ ಗೊತ್ತಿದೆ. ಅಷ್ಟೇ ಅಲ್ಲದೆ ಬಹುತೇಕ ಗ್ರಾಮಗಳಲ್ಲಿ ಒಂಟಿ ಮನೆಗಳು ಜಾಸ್ತಿಯಿದ್ದು, ಮಕ್ಕಳು ಹೊರಗೆ ಕೆಲಸ ಮಾಡುತ್ತಿರುವುದರಿಂದ ವಯಸ್ಸಾದವರು ಮಾತ್ರ ಮನೆಯಲ್ಲಿರುತ್ತಾರೆ.
ಇದನ್ನೂ ಓದಿ : ಭಾರತಕ್ಕೆ ಬಾಂಗ್ಲಾ-ನೇಪಾಳಿ ಹುಡ್ಗೀರ್ ಬರೋದ್ಯಾಕೆ?… ಅವರನ್ನು ಕರೆ ತರುವ ಜಾಲ ಯಾವುದು?
ಎಲ್ಲಿಂದಲೋ ಬಂದ ಕಾರ್ಮಿಕರನ್ನು ತಮ್ಮ ತೋಟದಲ್ಲಿಟ್ಟುಕೊಳ್ಳುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಗಳು ಎದುರಾಗುತ್ತಿವೆ. ಈಗಾಗಲೇ ಕೊಡಗಿನಲ್ಲಿ ಕೊಲೆ, ಕಳ್ಳತನ ಪ್ರಕರಣಗಳಲ್ಲಿ ವಲಸೆ ಕಾರ್ಮಿಕರು ಭಾಗಿಯಾಗಿರುವುದು ಗೊತ್ತಿರುವ ವಿಚಾರವೇ ಹೀಗಿದ್ದರೂ ಕಾರ್ಮಿಕರ ಪೂರ್ವಾಪರ ಅರಿಯದೆ ಅವರನ್ನು ಕೆಲಸಕ್ಕಿಟ್ಟುಕೊಳ್ಳುವುದೆಷ್ಟು ಸರಿ ಎಂಬ ಪ್ರಶ್ನೆಗಳು ಮೂಡುತ್ತಿವೆ. ಈ ನಡುವೆ ಕೊಡಗಿನವರು ಹೊರಗಿನಿಂದ ಬಂದವರನ್ನು ಅಸ್ಸಾಂನವರು ಎಂದೇ ಭಾವಿಸಿದ್ದಾರೆ. ಆದರೆ ಅಸ್ಸಾಂನವರು ಎಂದು ಹೇಳಿಕೊಂಡು ಬರುತ್ತಿರುವ ಕಾರ್ಮಿಕರು ನಿಜವಾಗಿಯೂ ಅಸ್ಸಾಂ ನವರಾ? ಎಂಬ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳು ಸಿಗುತ್ತಿಲ್ಲ.
ಬಾಂಗ್ಲಾದಿಂದ ಬಂದಿರುವ ಶಂಕೆ ಜಾಸ್ತಿಯೇ ಇದೆ. ಹೀಗಾಗಿ ಇವರ ನಡುವೆ ಯಾರು ಇದ್ದಾರೆ? ಅವರು ಹೊಟ್ಟೆಪಾಡಿಗಾಗಿ ಬಂದಿದ್ದಾರಾ? ಹೊಟ್ಟೆಪಾಡು ನೆಪದಲ್ಲಿ ಬೇರೆನೋ ಚಟುವಟಿಕೆ ನಡೆಸುತ್ತಿದ್ದಾರಾ? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಾ ಹೋಗುತ್ತಿವೆ. ನಿಜ ಹೇಳಬೇಕೆಂದರೆ ಕೊಡಗಿಗೆ ವಲಸೆ ಕಾರ್ಮಿಕರು ಇವತ್ತು ನಿನ್ನೆಯಿಂದ ಬರುತ್ತಿಲ್ಲ. ಹಿಂದಿನಿಂದಲೂ ಬರುತ್ತಿದ್ದಾರೆ. ಬಹಳಷ್ಟು ವರ್ಷಗಳ ಹಿಂದೆ ದಕ್ಷಿಣ ಕನ್ನಡದಿಂದ ಕೆಲಸ ಮಾಡಲೆಂದು ಬಂದವರು ಇಲ್ಲಿ ನೆಲೆಯೂರಿ ಕೊಡಗಿನವರೇ ಆಗಿದ್ದಾರೆ.
ಇದನ್ನೂ ಓದಿ : ಮಗಳು ಮನೆ ಬಿಟ್ಟಳು.. ಹೆತ್ತವರು ಹೆಣವಾದರು.. ಇದೆಂತಹ ದುರಂತ ಕಥೆ ಅಲ್ವಾ…!
ಆ ನಂತರ ತಮಿಳುನಾಡಿನಿಂದ ಕಾಫಿ, ಟೀ ಎಸ್ಟೇಟ್ ಗಳಿಗೆ ಬಂದು ಅವರು ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಇನ್ನು ಕೇರಳದಿಂದಲೂ ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬಂದು ನೆಲೆಯೂರಿದ್ದಾರೆ. ಆದರೆ ಇದುವರೆಗೆ ಕೊಡಗಿಗೆ ಬೇರೆ ಜಿಲ್ಲೆ, ಬೇರೆ ರಾಜ್ಯಗಳಿಂದ ಬಂದು ನೆಲೆಯೂರಿದ್ದಾರೆ. ಆದರೆ ಅಸ್ಸಾಂ ಹೆಸರಿನಲ್ಲಿ ಬರುತ್ತಿರುವವರ ಮೇಲೆ ಸಾಕಷ್ಟು ಅನುಮಾನಗಳು ಮೂಡುತ್ತಿವೆ.
ಎರಡ್ಮೂರು ದಶಕಗಳ ಹಿಂದಕ್ಕೆ ಹೋದರೆ ಕೇರಳದಿಂದ ಶುಂಠಿ ಕೃಷಿ ಮಾಡಲೆಂದು ದೊಡ್ಡ ಮಟ್ಟದಲ್ಲಿಯೇ ಕಾರ್ಮಿಕರು ಬಂದಿದ್ದರು. ಇವರು ಇಲ್ಲಿ ಪಾಳು ಬಿದ್ದಿದ್ದ, ಜಾಗಗಳನ್ನು ಭೋಗ್ಯಕ್ಕೆ ಪಡೆದು ಅಲ್ಲಿ ಶುಂಠಿ ಕೃಷಿ ಮಾಡಿದ್ದರು. ಅಷ್ಟೇ ಅಲ್ಲದೆ ಶುಂಠಿ ಕೃಷಿ ಜತೆಗೆ ಗಾಂಜಾದಂತಹ ಬೆಳೆಗಳನ್ನು ಬೆಳೆದು ತಿಜೋರಿ ತುಂಬಿಸಿಕೊಂಡು ಹೋಗಿದ್ದರು. ಆದರೆ ಅನಂತರ ಅಲ್ಲಲ್ಲಿ ಗಾಂಜಾ ಬೆಳೆದ ಪ್ರಕರಣಗಳು ಪತ್ತೆಯಾಗ ತೊಡಗಿದವು. ಅವತ್ತು ಅವರು ಅಂಟಿಸಿದ ಗಾಂಜಾದಿಂದ ಇವತ್ತಿಗೂ ಇಲ್ಲಿನ ಕೆಲವರು ಹೊರಗೆ ಬಂದಿಲ್ಲ. ಆಗಾಗ್ಗೆ ಗಾಂಜಾ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಹಲವು ಯುವಕರು ಗಾಂಜಾಕ್ಕೆ ಬಲಿಯಾಗಿ ಬದುಕನ್ನೇ ಕಳೆದು ಕೊಂಡಿದ್ದಾರೆ.
ಇದನ್ನೂ ಓದಿ : ಜನ ಸ್ಪಾಗಳನ್ನು ಅನುಮಾನದಿಂದ ನೋಡುತ್ತಿರುವುದೇಕೆ? ಇಷ್ಟಕ್ಕೂ ಇಲ್ಲಿ ನಡೆಯುವುದೇನು?
ಮೊದಲೆಲ್ಲ ಕೊಡಗಿಗೆ ತೋಟದ ಕೆಲಸಕ್ಕಾಗಿ ಮೈಸೂರು, ಚಾಮರಾಜನಗರ ಮಂಡ್ಯ ಮೊದಲಾದ ಕಡೆಗಳಿಂದ ಕೆಲಸಕ್ಕೆ ಕಾರ್ಮಿಕರು ಬರುತ್ತಿದ್ದರು ಒಂದಷ್ಟು ಸಮಯವಿದ್ದು ಕೆಲಸ ಮುಗಿಸಿಕೊಂಡು ತಮ್ಮೂರಿಗೆ ತೆರಳುತ್ತಿದ್ದರು. ಆದಾದ ನಂತರ ಆ ಕಡೆಗಳಿಂದ ಕೆಲಸಕ್ಕೆ ಬರುವವರ ಸಂಖ್ಯೆ ಕಡಿಮೆಯಾಯಿತು. ಹೀಗಾಗಿ ಕಾರ್ಮಿಕರ ಕೊರತೆ ಬೆಳೆಗಾರರನ್ನು ಕಾಡತೊಡಗಿತು. ಕೂಲಿ ಕೈತುಂಬಾ ಕೊಡ್ತೀನಿ ಎಂದರೂ ಯಾರೂ ಬಾರದೆ ಇದ್ದಾಗ ಬೆಳೆಗಾರರಿಗೂ ಯಾರಾದರೂ ಸಿಕ್ಕರೆ ಸಾಕಪ್ಪಾ ಎಂಬ ಆಲೋಚನೆ ಬಂದಿತ್ತು. ಇದೇ ವೇಳೆಗೆ ಅಸ್ಸಾಂನ ಒಂದಷ್ಟು ಮಂದಿ ಕೊಡಗಿಗೆ ಎಂಟ್ರಿ ಕೊಟ್ಟಿದ್ದರು. ಮಾಮೂಲಿ ಕೂಲಿಗಿಂತ ಕಡಿಮೆ ಕೂಲಿಗೆ ದುಡಿಯಲು ತಯಾರಿದ್ದರು. ಜಿಲ್ಲೆಯ ಯಾವುದೇ ಮೂಲೆಯಲ್ಲಿಯೂ ಇವರು ವಾಸ ಮಾಡಲು ತಯಾರಿದ್ದರು.
ಇವರನ್ನು ಹಿಂದೂಮುಂದು ನೋಡದೆ ಹಲವು ಬೆಳೆಗಾರರು ತಮ್ಮ ತೋಟದಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲು ಮುಂದಾದರು. ತದ ನಂತರ ಅಸ್ಸಾಂನಿಂದ ಸಾವಿರಾರು ಸಂಖ್ಯೆಯಲ್ಲಿ ಬರಲು ಆರಂಭಿಸಿದರು. ಈ ವೇಳೆ ಅಲ್ಲಲ್ಲಿ ಅಪರಾಧ ಚಟುವಟಿಕೆಗಳು ನಡೆಯಲು ಶುರುವಾದಾಗ ಪೊಲೀಸ್ ಇಲಾಖೆ ಇಲ್ಲಿನ ಬೆಳೆಗಾರರಿಗೆ ಕಠಿಣ ಸೂಚನೆ ನೀಡಿತು. ಯಾವುದೇ ವಲಸೆ ಕಾರ್ಮಿಕನನ್ನು ಕೆಲಸಕ್ಕೆ ಸೇರಿಸುವ ಮುನ್ನ ಆತನ ಆಧಾರ್ ಕಾರ್ಡ್ ಪರಿಶೀಲಿಸಬೇಕು, ಅಷ್ಟೇ ಅಲ್ಲದೆ ಆತನ ಭಾವಚಿತ್ರ ಸಹಿತ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡುವಂತೆ ತಿಳಿಸಲಾಯಿತು. ಆದರೆ ಇದರ ಪಾಲನೆ ಎಷ್ಟರ ಮಟ್ಟಿಗೆ ಆಗುತ್ತಿದೆ ಎಂಬುದೇ ನಿಗೂಢವಾಗಿದೆ.
ಈ ಹಿಂದೆ ಡಿಸೆಂಬರ್ ಸಮಯದಲ್ಲಿ ಜಿಲ್ಲೆಗೆ ಆಗಮಿಸುತ್ತಿದ್ದ ಅಸ್ಸಾಂನ ಕಾರ್ಮಿಕರು ಕಾಫಿ ಕೊಯ್ಲು ಮುಗಿಯುತ್ತಿದ್ದಂತೆಯೇ ತಮ್ಮೂರಿಗೆ ಹೊರಟು ಬಿಡುತ್ತಿದ್ದರು. ಆದರೀಗ ಎಲ್ಲ ಸಮಯದಲ್ಲಿಯೂ ಇಲ್ಲಿ ಕಾಣಸಿಗುತ್ತಾರೆ. ಹೀಗಾಗಿ ಇವರು ನಿಜವಾಗಿ ಅಸ್ಸಾಂ ನವರೇ? ಅಥವಾ ಬಾಂಗ್ಲಾದ ನುಸುಳು ಕೋರರೇ ಎಂಬ ಅನುಮಾನಗಳು ಹುಟ್ಟುತ್ತಿವೆ. ಅದರಲ್ಲೂ ದಿನದಿಂದ ದಿನಕ್ಕೆ ಉತ್ತರ ಭಾರತದ ಕಾರ್ಮಿಕರು ಅಲ್ಲಲ್ಲಿ ಕಾಣಿಸುತ್ತಿದ್ದು, ಇವರೆಲ್ಲರೂ ಉತ್ತರ ಭಾರತದವರೇ ಆಗಿದ್ದರೆ ಯಾವುದೇ ಆದರೆ ಬೇರೆ ಉದ್ದೇಶವನ್ನಿಟ್ಟುಕೊಂಡು ಬಂದಿರುವ ನುಸುಳುಕೋರರಾದರೆ ಮುಂದೇನು ಗತಿ ಎಂಬ ಪ್ರಶ್ನೆಗಳನ್ನು ಜನ ಕೇಳುತ್ತಿದ್ದಾರೆ.
ಇದನ್ನೂ ಓದಿ : ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ವೀಕ್ ನೆಸ್ಸೇ ವಂಚಕರಿಗೆ ಮಹಾಅಸ್ತ್ರ!
ಸದ್ಯ ಕೊಡಗು ಜಿಲ್ಲೆಯ ಮಡಿಕೇರಿ, ಸುಂಟಿಕೊಪ್ಪ, ಕುಶಾಲನಗರ, ವಿರಾಜಪೇಟೆ, ಗೋಣಿಕೊಪ್ಪಲು, ನಾಪೋಕ್ಲು ಸೇರಿದಂತೆ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ನಡೆಯುವ ವಾರದ ಸಂತೆಗಳಲ್ಲಿ ಹೊಸ ಮುಖಗಳೇ ಹೆಚ್ಚಾಗಿ ಕಂಡು ಬರುತ್ತಿವೆ. ಸಂತೆಗಳಲ್ಲಿ ವ್ಯಾಪಾರ ಮಾಡುವುದರಿಂದ ಆರಂಭಿಸಿ ಹೋಂ ಸ್ಟೇ, ರೆಸಾರ್ಟ್ ಗಳಲ್ಲಿ ರೂಮ್ ಬಾಯ್ ತನಕವೂ ಹೊರ ರಾಜ್ಯದ ಕಾರ್ಮಿಕರೇ ಹೆಚ್ಚಾಗಿ ಕಾಣಸಿಗುತ್ತಿದ್ದಾರೆ. ಅಷ್ಟೇ ಆಗಿದ್ದರೆ ತಲೆಕೆಡಿಸಿಕೊಳ್ಳಬೇಕಾಗಿರಲಿಲ್ಲ ಆದರೆ ಇತ್ತೀಚೆಗೆ ಕೆಲವು ಅಪರಾಧ ಪ್ರಕರಣಗಳಲ್ಲೂ ಹೊರ ರಾಜ್ಯದವರು ಭಾಗಿಯಾಗುತ್ತಿರುವುದು ಜಿಲ್ಲೆಯ ಜನ ಎಚ್ಚೆತ್ತುಕೊಳ್ಳುವಂತೆ ಮಾಡಿದೆ.
ಕೊಡಗಿಗೆ ಬರುವ ವಲಸೆ ಕಾರ್ಮಿಕರು ಜಿಲ್ಲಾದ್ಯಂತ ಚದುರಿ ಹೋಗುತ್ತಿದ್ದಾರೆ. ಇದರಿಂದ ಅಕ್ರಮ ವಲಸಿಗರನ್ನು ಪತ್ತೆ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ಕೆಲಸ ನೀಡುವ ಕಾಫಿ ತೋಟದ ಮಾಲೀಕರು, ಕಾರ್ಮಿಕರನ್ನು ಕರೆ ತರುವ ದಲ್ಲಾಳಿಗಳು ಆಯಾ ಕಾರ್ಮಿಕರ ಪೂರ್ವಾಪರ ವಿಚಾರಿಸಿ ಬಳಿಕ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ಪೊಲೀಸರು ಹೇಳುತ್ತಿದ್ದಾರೆ. ಒಂದು ವೇಳೆ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುವಂತೆ ಕೊಡಗು ಎಸ್ಪಿ ರಾಮರಾಜನ್ ಮನವಿ ಮಾಡುತ್ತಾ ಬಂದಿದ್ದಾರೆ. ಆದರೆ ತೋಟದ ಮಾಲೀಕರು ರಿಸ್ಕ್ ತೆಗೆದುಕೊಳ್ಳುವುದಕ್ಕೆ ತಯಾರಿಲ್ಲ. ಅವರಿಗೆ ತಮ್ಮ ತೋಟದ ಕೆಲಸ ಆದರೆ ಸಾಕು.. ನಮಗೇಕೆ ಆ ಉಸಾಬರಿ ಎಂಬಂತೆ ಮೌನ ತಾಳುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ..
ಇದನ್ನೂ ಓದಿ : ಮನೆ ಬಾಡಿಗೆಗೆ ನೀಡುವ ಮುನ್ನ ಎಚ್ಚರವಿರಲಿ… ನಿಮ್ಮ ಮನೇನ ಅಕ್ರಮ ಚಟುವಟಿಕೆಗೆ ಬಳಸ್ತಾರೆ…
ಹೊಟ್ಟೆಪಾಡಿಗೆ ಕೆಲಸ ಹುಡುಕಿಕೊಂಡು ಬಂದಿರುವ ಕಾರ್ಮಿಕರೆಲ್ಲರೂ ಅಪರಾಧ ಹಿನ್ನಲೆಯವರು ಎಂದು ಹೇಳಲಾಗದು. ಆದರೆ ಜಿಲ್ಲೆ, ರಾಜ್ಯವನ್ನು ಹೊರತುಪಡಿಸಿ ದೂರದ ಉತ್ತರ ಭಾರತದಿಂದ ಬರುವ ಕೆಲಸಗಾರರನ್ನು ಅವರ ಪೂರ್ವಾಪರ ಅರಿಯದೆ ಕೆಲಸಕ್ಕೆ ಸೇರಿಸಿಕೊಳ್ಳುವುದು, ಅವರ ಮೇಲೆ ನಂಬಿಕೆಯಿಡುವುದು ಒಳ್ಳೆಯದಲ್ಲ. ಆದ್ದರಿಂದ ವಲಸೆ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಅವರ ಬಗ್ಗೆ ದಾಖಲೆಗಳನ್ನು ಕಲೆ ಹಾಕುವುದು ಮತ್ತು ಅವು ಅಸಲಿಯೋ? ನಕಲಿಯೋ? ಎಂಬುದನ್ನು ಪರಿಶೀಲಿಸುವುದು ಕೂಡ ಬಹುಮುಖ್ಯವೇ.. ಅಷ್ಟಕ್ಕೆ ನಿಲ್ಲಿಸದೆ ತಾವು ಕೆಲಸಕ್ಕಿಟ್ಟುಕೊಂಡಿರುವ ಕಾರ್ಮಿಕರ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡುವುದು ಅಗತ್ಯವಾಗಿದೆ. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಕೊಡಗಿಗೆ ಸಂಕಷ್ಟ ಎದುರಾಗುವುದರಲ್ಲಿ ಎರಡು ಮಾತಿಲ್ಲ..
B M Lavakumar