ಕನ್ನಡದ ಚಂದವನಕ್ಕೆ ಜೀವ ತುಂಬಿ ಹೋದ ಅದೆಷ್ಟೋ ನಟ ನಟಿಯರು, ಸಹಕಲಾವಿದರು ಆಗೊಮ್ಮೆ ಈಗೊಮ್ಮೆ ನೆನಪಾಗುತ್ತಾರೆ. ಇವತ್ತು ಬಹಳಷ್ಟು ನಟ, ನಟಿಯರು ತೆರೆ ಮೇಲೆ ಮಿಂಚಿ ಮರೆಯಾಗಿರಬಹುದು. ಅವರ ಅಭಿನಯ ಮತ್ತು ಅವರು ನೀಡಿದ ಕೊಡುಗೆ ನಾವು ಮತ್ತೊಮ್ಮೆ ನೆನಪಿಸಿಕೊಳ್ಳಲೇ ಬೇಕಾಗುತ್ತದೆ. ಅವರಲ್ಲಿ ಒಬ್ಬರು ಮೈಸೂರಿನ ಅಭಿನೇತ್ರಿ, ಹಿರಿಯ ಚಲನಚಿತ್ರ ನಟಿ ಎಂ. ಜಯಶ್ರೀ.
ಜಯಶ್ರೀ ಅವರು ಸುಮಾರು ಐನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ನಟನೆಗೊಂದು ಜೀವ ತುಂಬಿದವರು. ಆದರೆ ಅವರು ತಮ್ಮ ಕೊನೆಯ ಹದಿನೈದು ವರ್ಷಗಳಷ್ಟು ಕಾಲ ಸಿನಿಮಾ ಜಗತ್ತಿನಿಂದ ದೂರವಿದ್ದರು. ಒಂದು ಹಂತದಲ್ಲಿ ಸಿನಿಮಾಲೋಕವೂ ಅವರನ್ನು ಮರೆತೇ ಬಿಟ್ಟಿತು. ಅವರು 2006ರಲ್ಲಿ ನಿಧನರಾದಾಗ ಓ ….. ಜಯಶ್ರೀ ಇನ್ನೂ ಬದುಕಿದ್ರಾ … ಎಂದು ಆಶ್ಚರ್ಯದಿಂದ ಉದ್ಘರಿಸಿದವರೇ ಜಾಸ್ತಿ.
1995ರಲ್ಲಿ ಪದ್ಮಭೂಷಣ ಡಾ. ರಾಜ್‌ಕುಮಾರ್ ಅಧ್ಯಕ್ಷರಾಗಿದ್ದ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ಜಯಶ್ರೀ ಅವರಿಗೊಂದು ಸನ್ಮಾನ ಸಮಾರಂಭ ಏರ್ಪಡಿಸಿತ್ತು. ಅಲ್ಲಿ ಸನ್ಮಾನ ಸ್ವೀಕರಿಸಿದ ಅವರು ಅಂದೇ ಚಲನಚಿತ್ರರಂಗಕ್ಕೆ ಬೆನ್ನು ತಿರುಗಿಸಿ ವಿದಾಯ ಹೇಳಿದ್ದರು. ಮತ್ತೆಂದೂ ಅವರು ಮುಖಕ್ಕೆ ಬಣ್ಣ ಹಚ್ಚಿದವರಲ್ಲ. ಹಾಗೆಯೇ ಇದಕ್ಕಾಗಿ ಜಯಶ್ರೀ ಸಂಕಟಪಟ್ಟವರೂ ಅಲ್ಲ; ಸಂತಸಪಟ್ಟವರೂ ಅಲ್ಲ. ಈ ವಿಷಯದಲ್ಲಿ ಒಂದು ರೀತಿ ನಿರ್ಲಿಪ್ತತೆ ಇವರದು. ಆಗ ನೇರ ಆಶ್ರಮವೊಂದರ ಬಾಗಿಲು ತಟ್ಟಿದರು. ಬಳಿಕ ಅಜ್ಞಾತವಾಸಿಯಾಗಿ ಸನ್ಯಾಸ ಜೀವನದಲ್ಲಿ ಸಂತೃಪ್ತಿಯ ಬದುಕನ್ನು ಕಟ್ಟಿಕೊಂಡು ಕಾಣದ ಲೋಕದತ್ತ ಮುಖ ಮಾಡಿದ್ದರು.
ಇದನ್ನೂ ಓದಿ: ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಗುಬ್ಬಿವೀರಣ್ಣ
ಇಷ್ಟಕ್ಕೂ ಅವರ ಬದುಕಿನ ಕಥೆಯೇ ಒಂಥರಾ ರೋಚಕ ಮೂಲತಃ ಮೈಸೂರಿನವರಾದ ಜಯಶ್ರೀ ಹಾಸಿ ಹೊದಿಯುವಷ್ಟು ಬಡತನವೇ ತುಂಬಿದ್ದ ಕುಟುಂಬದಲ್ಲಿ ಜನಿಸಿದ ಹಿರಿಯ ಮಗಳು. ಬೆನ್ನಿಗೊಬ್ಬ ತಮ್ಮನೂ ಇದ್ದ. ಬಡ ತಂದೆ ತಾಯಿಗಳೊಡನೆ ಕಷ್ಟಪಟ್ಟು ಬಾಲ್ಯ ಸವೆಸುತ್ತಿರುವಾಗಲೇ ಮುಂದೊಂದು ದಿನ ತಾನು ನರ್ಸ್ ಆಗಿ ಬಡಬಗ್ಗರ, ದೀನದಲಿತರ ಸೇವೆ ಮಾಡಬೇಕೆಂಬ ಕನಸು ಜಯಶ್ರೀಯ ಎಳೆ ಕಂಗಳಲ್ಲಿ ಆಗಲೇ ಚಿಗುರಿತ್ತು. ಹಾಗೆಯೇ ಈ ಹಾದಿಯಲ್ಲಿ ತಂದೆಯ ನೆರವಿನಿಂದ ಜಯಶ್ರೀ ಓದು ಮುಂದುವರಿಸಿದ್ದರು.
ಆದರೆ ಮನೆಯ ಆಧಾರಸ್ಥಂಭವಾಗಿದ್ದ ತಂದೆಯ ಆಕಸ್ಮಿಕ ಮರಣ ಜಯಶ್ರೀಗೆ ಬರಸಿಡಿಲಿನಂತೆ ಬಂದೆರಗಿತ್ತು. ಇನ್ನು ಓದುವುದೆಲ್ಲಿಂದ ಬಂತು? ಇಡೀ ಕುಟುಂಬದ ಭಾರವನ್ನು ಜಯಶ್ರೀ ಹೊತ್ತರು. ಇವರ ಕಷ್ಟದ ಪಾಡಿಗೆ ದಿಕ್ಕು ತೋಚದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಆದರೆ ಜಯಶ್ರೀ ಕಷ್ಟಕ್ಕೆ ಅಂಜಲಿಲ್ಲ. ಬಂದದ್ದು ಬರಲಿ ನೋಡಿಯೇ ಬಿಡುತ್ತೇನೆಂಬ ಧೈರ್ಯದಿಂದ ಕಷ್ಟವನ್ನು ನೀಗಿಸಿಕೊಂಡೇ ಕೆಲವು ವರ್ಷಗಳು ತಳ್ಳಿದರು. ಆದರೆ ಇನ್ನು ತನ್ನಿಂದ ಈ ಪರಿಯ ಕಷ್ಟಗಳನ್ನು ಸಹಿಸಲಿಕ್ಕೆ ಸಾಧ್ಯವಿಲ್ಲವೆನ್ನುವಷ್ಟು ದುಃಖ ಅವರಲ್ಲಿ ಮಡುಗಟ್ಟಿದ್ದಾಗ ಮುಳುಗುವವರಿಗೆ ಹುಲ್ಲುಕಡ್ಡಿ ಆಶ್ರಯ ಸಿಕ್ಕಂತೆ ತಮಿಳುನಾಡಿನ ಪಕ್ಷಿರಾಜ ಸ್ಟುಡಿಯೋದ ಮಾಲೀಕರ ಸಹೋದರಿ ದೇವಿ ಎಂಬ ಹೆಣ್ಣು ಮಗಳು ಸ್ನೇಹಿತೆಯಾಗಿ ಜಯಶ್ರೀಗೆ ಸಿಕ್ಕಿದಳು.
ಅದೇ ಇವರ ಮುಂದಿನ ಬದುಕಿಗೆ ದಾರಿದೀಪವಾಗಿತ್ತು. ಯಾವುದೋ ಕಾಯಿಲೆಗೆ ಸಂಬಂಧಿಸಿದಂತೆ ಆಪರೇಷನ್ ಮಾಡಿಸಿಕೊಳ್ಳಲು ಮೈಸೂರಿಗೆ ಬಂದಿದ್ದ ದೇವಿಗೆ ಜಯಶ್ರೀಯ ಗುಣ ಬಹಳ ಹಿಡಿಸಿ ಅದು ಆತ್ಮೀಯ ಸ್ನೇಹಕ್ಕೆ ತಿರುಗಿತ್ತು. ಹಾಗಾಗಿ ತನ್ನ ತಾಯಿ ಮತ್ತು ತಮ್ಮನನ್ನು ಸಾಕಲು ಜಯಶ್ರೀ ಪಡಬಾರದ ಪಾಡು ಪಡುತ್ತಿರುವುದನ್ನು ಕಣ್ಣಾರೆ ಕಂಡ ದೇವಿ ಒಂದು ದಿನ ಜಯಶ್ರೀ ಕುಟುಂಬವನ್ನು ತಮಿಳುನಾಡಿಗೆ ಕರೆದುಕೊಂಡು ಹೋಗಿಯೇ ಬಿಟ್ಟಳು!
ಇದನ್ನೂ ಓದಿ: ಕನ್ನಡ ಚಿತ್ರರಂಗದ ಚೊಚ್ಚಲ ಹೀರೊ ಎಂ.ವಿ.ಸುಬ್ಬಯ್ಯನಾಯ್ಡು
ನಟನೆ ಎಂದರೆ ಏನೆಂದೇ ಅರಿಯದ ಮುಗ್ಧೆ ಜಯಶ್ರೀ ಗೆಳತಿ ದೇವಿಯ ಧೈರ್ಯದಿಂದ ಮದ್ರಾಸಿನ ಪಕ್ಷಿರಾಜ ಸ್ಟುಡಿಯೋದಲ್ಲಿ ಮೊಟ್ಟಮೊದಲಿಗೆ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ನಿಲ್ಲುವಂತಾಯ್ತು. ಹೀಗೆ ಜಯಶ್ರೀ ಅಭಿನಯಿಸಿದ ಪ್ರಥಮ ಚಿತ್ರ ವಾಳವಿಲೊ ತಿರುನಾಳ್. ಅಲ್ಲಿಂದ ಜಯಶ್ರೀ ಅವರ ಬಣ್ಣದ ಬದುಕು ಆರಂಭವಾಯ್ತು. ಹಾಗೆಯೇ ಅವರ ಅದೃಷ್ಟದ ಬಾಗಿಲು ಸಹ ವಿಶಾಲವಾಗಿ ತೆರೆದುಕೊಂಡಿತು. ಅವರ ಬದುಕಿನ ಬವಣೆಗಳೆಲ್ಲಾ ಒಂದೇ ಕ್ಷಣದಲ್ಲಿ ಮಾಯವಾಗಿಬಿಟ್ಟವು.
ಒಂದರ ಹಿಂದೆ ಒಂದು ಸಿನಿಮಾ ಅವಕಾಶಗಳು ಅವರತ್ತ ಬರತೊಡಗಿದವು. ಅವರ ಅಭಿನಯದ ಚಿತ್ರಗಳು ಹೆಚ್ಚುತ್ತಾ ಹೋದಂತೆ ಜನಪ್ರಿಯತೆಯ ಪಟ್ಟ ತನ್ನಂತಾನೆ ಅವರಿಗೆ ಒಲಿಯಿತು. ತಿದ್ದಿತೀಡಿದಂತಹ ಹಸನಾದ ಅಂದವನ್ನು ಹೊಂದಿದ್ದ ಜಯಶ್ರೀ ಆ ಕಾಲದಲ್ಲಿ ಅತ್ಯಂತ ಆಕರ್ಷಕ ಚೆಲುವೆಯಾಗಿ ಬಹುಬೇಗ ಚಿತ್ರಲೋಕದಲ್ಲಿ ಅನಾವರಣಗೊಂಡಿದ್ದರು.
ಹೊಟ್ಟೆಪಾಡಿನ ಜೀವನಕ್ಕಾಗಿ ತಮಿಳುನಾಡಿಗೆ ಹೋಗಿ ಬಣ್ಣದ ಬದುಕನ್ನು ಅಪ್ಪಿಕೊಂಡಿದ್ದ ಅಚ್ಚಕನ್ನಡದ ಮೈಸೂರು ಮಲ್ಲಿಗೆ ಜಯಶ್ರೀ ತಮಿಳು ಚಿತ್ರಗಳಲ್ಲಿ ಜನಪ್ರಿಯತೆ ಗಳಿಸುತ್ತಿದ್ದಂತೆಯೇ ಇತ್ತ ಕನ್ನಡ ಚಿತ್ರರಂಗ ತಾರೆ ಜಯಶ್ರೀಯತ್ತ ದೃಷ್ಟಿಹರಿಸಿತು. ಆಗ ಅಂದಿನ ಖ್ಯಾತನಟ ಹೊನ್ನಪ್ಪ ಭಾಗವತರು ತಾವು ನಾಯಕನಟರಾಗಿದ್ದ ಭಕ್ತಕುಂಬಾರ ಚಿತ್ರದ ನಾಯಕಿಯಾಗಿ 1942ರಲ್ಲಿ ಜಯಶ್ರೀ ಅವರನ್ನು ಮತ್ತೆ ಕನ್ನಡನಾಡಿಗೆ ಕರೆತಂದರು.
ಆ ನಂತರ ಅವರು ತನ್ನ ತವರು ನೆಲದಲ್ಲೇ ಅಭಿನಯವನ್ನು ಮುಂದುವರಿಸಿದರು. ಮಾತೃಭಾಷಾ ಪ್ರೇಮವೋ ಏನೋ ಮತ್ತೆ ತಮಿಳಿನತ್ತ ಮುಖಮಾಡಲು ಜಯಶ್ರೀ ಮನಸ್ಸು ಮಾಡಲಿಲ್ಲ. ಜತೆಗೆ ಇಲ್ಲೂ ಕೂಡ ತಮಿಳಿನಷ್ಟೇ ಅವರಿಗೆ ಬೇಡಿಕೆ ಇದ್ದುದರಿಂದ ಇಲ್ಲಿಂದ ಹೊರ ಹೋಗಬೇಕಾದ ಪ್ರಮೇಯವೂ ಆಗ ಬರಲಿಲ್ಲ.
ಇದನ್ನೂ ಓದಿ: ನಟನೆಯಿಂದ ನಿಬ್ಬೆರಗಾಗಿಸಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ..
ನಲವತ್ತರ ದಶಕದಲ್ಲಿ ತಾರೆ ಜಯಶ್ರೀ ಎಷ್ಟೊಂದು ಪ್ರಖ್ಯಾತಿಯಲ್ಲಿದ್ದರೆಂದರೆ ಅವರನ್ನು ನೋಡಲು ಚಿತ್ರರಸಿಕರು ಆ ಕಾಲದಲ್ಲಿ ಮುಗಿಬೀಳುತ್ತಿದ್ದರಂತೆ. ಕನ್ನಡ ಚಿತ್ರರಂಗದ ಜಮಾನದಲ್ಲೇ ನಂಬರ್ ಒನ್ ತಾರೆಯಾಗಿ ಮೆರೆದರು. 1949ರಲ್ಲಿ ಬಿಡುಗಡೆಯಾದ ಇವರ ನಾಗಕನ್ನಿಕಾ ಚಿತ್ರವಂತೂ ಕನ್ನಡ ಚಿತ್ರಂಗದಲ್ಲೊಂದು ಹೊಸಕ್ರಾಂತಿಯನ್ನೇ ಮಾಡಿತ್ತು. ಖ್ಯಾತ ನಿರ್ದೇಶಕರಾಗಿರುವ ಎಸ್.ವಿ. ರಾಜೇಂದ್ರಸಿಂಗ್‌ಬಾಬು ಅವರ ತಂದೆ ಡಿ. ಶಂಕರ್‌ಸಿಂಗ್ ಅವರು ಮಹಾತ್ಮ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಪಕರೂ ಆಗಿ ಈ ಚಿತ್ರವನ್ನು ನಿರ್ದೇಶಿಸಿದ್ದರು.
ಜಯಶ್ರೀ ಅವರ ಮಾದಕ ಸೌಂದರ್ಯ ಮತ್ತು ಭಾವಪೂರ್ಣ ಅಭಿನಯದಿಂದ ನಾಗಕನ್ನಿಕಾ ಚಿತ್ರ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ನಿರ್ಮಾಪಕರಿಗಂತೂ ಹಣದ ಮಳೆಯನ್ನೇ ಸುರಿಸಿತ್ತು. ಆ ಕಾಲದಲ್ಲೇ ಬೆಂಗಳೂರಿನ ಮೂವಿಲ್ಯಾಂಡ್ ಚಿತ್ರಮಂದಿರದಲ್ಲಿ ಶತದಿನೋತ್ಸವ ಆಚರಿಸಿದ ದಾಖಲೆ ಜಯಶ್ರೀ ಅವರ ನಾಗಕನ್ನಿಕಾ ಚಿತ್ರದ್ದು. ಇಂದಿನ ಯಾವ ನಟಿಯರಿಗೂ ಕಡಿಮೆ ಇಲ್ಲದಂತೆ ಅಂದೇ ಬಹಳ ಬೋಲ್ಡಾಗಿ ಈ ಚಿತ್ರದಲ್ಲಿ ಮೈಚಳಿ ಬಿಟ್ಟು ನಟಿಸಿದ್ದ ಜಯಶ್ರೀ ಆ ಕಾಲದ ಚಿತ್ರರಸಿಕರ ಕನಸಿನ ರಾಣಿಯಾಗಿದ್ದರು.
ಜಯಶ್ರೀ ಅವರ ತೆರೆದೆದೆಯ ಮೋಹಕ ಚೆಲುವಿನ ಹಲವು ಭಂಗಿಗಳ ವಾಲ್‌ಪೋಸ್ಟರ್‌ಗಳು ಬೀದಿ ಬೀದಿಗಳಲ್ಲಿ ಮಿಂಚಿದ್ದವು. ಆದರೆ ನಾಗಕನ್ನಿಕಾ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ನಟಿ ಜಯಶ್ರೀ ಅವರಂತಹ ಪ್ರತಿಭಾವಂತ ಕಲಾವಿದೆಯನ್ನು ಸೆಕ್ಸಿಯಾಗಿ ಬಳಸಿಕೊಳ್ಳಲಾಗಿದೆ ಎಂದು ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಡಿ. ಶಂಕರ್‌ಸಿಂಗ್ ಮಡಿವಂತರ ಕೆಂಗಣ್ಣಿಗೆ ಗುರಿಯಾಗಿದ್ದರು.
ಜಯಶ್ರೀ ಕ್ರಮೇಣ ವಯೋಮಾನಕ್ಕೆ ತಕ್ಕ ಹಾಗೆ ಅಮ್ಮನ ಪಾತ್ರಕ್ಕೆ ಬಡ್ತಿ ಪಡೆದರು. ಅವರ ವೃತ್ತಿ ಬದುಕಿನಲ್ಲಿ ಒಂದೇ ಒಂದು ವಿಲನ್ ಅರ್ಥಾತ್ ಕೆಟ್ಟಪಾತ್ರ ಮಾಡಿಲ್ಲವಂತೆ. ಮಂಗಳಗೌರಿ, ಮಿಸ್ ಲೀಲಾವತಿ, ಶಿವಶರಣೆ ನಂಬಿಯಕ್ಕ, ಅಮರಭಾರತಿ, ತಿಲೋತ್ತಮೆ, ಜಗನ್ಮೋಹಿನಿ, ಚಂದವಳ್ಳಿಯ ತೋಟ, ಶಿವಗಂಗೆ, ಜಗಜ್ಯೋತಿ ಬಸವೇಶ್ವರ, ನಾಗರಹಾವು, ಸಾವಿರಮೆಟ್ಟಿಲು…… ಸೇರಿದಂತೆ ಸುಮಾರು ಐನೂರು ಚಿತ್ರಗಳಲ್ಲಿ ಜಯಶ್ರೀ ಅಭಿನಯಿಸಿದ್ದರು! ಇದರಲ್ಲಿ ಸುಮಾರು ಐವತ್ತು ಚಿತ್ರಗಳಲ್ಲಿ ವರನಟ ಡಾ. ರಾಜ್‌ಕುಮಾರ್ ಅವರಿಗೆ ಅಮ್ಮನಾಗಿ ಅವರು ನಟಿಸಿರುವುದೂ ಒಂದು ದಾಖಲೆಯೆ.
ಇದನ್ನೂ ಓದಿ: ಸಕಲಕಲಾವಲ್ಲಭ ಅಚ್ಚಕನ್ನಡಿಗ ಹೊನ್ನಪ್ಪ ಭಾಗವತರ್
ವಿಪರ್ಯಾಸವೆಂದರೆ ಇಷ್ಟೊಂದು ಸಂಖ್ಯೆಯ ದಾಖಲಾರ್ಹ ಚಲನಚಿತ್ರಗಳಲ್ಲಿ ನಟಿಸಿರುವ ಅಭಿನೇತ್ರಿಗೆ ಅಮರ ಭಾರತಿ ಚಿತ್ರಕ್ಕೆ 1970ರಲ್ಲಿ ದೊರೆತ ಶ್ರೇಷ್ಠ ಪೋಷಕನಟಿ ರಾಜ್ಯ ಪ್ರಶಸ್ತಿಯನ್ನು ಹೊರತುಪಡಿಸಿದರೆ ಸರ್ಕಾರದಿಂದ ಅವರಿಗೆ ಯಾವುದೇ ರೀತಿಯ ಪ್ರಶಸ್ತಿ, ಪುರಸ್ಕಾರ, ಪ್ರೋತ್ಸಾಹ ಸಿಗಲಿಲ್ಲ ಇವರ ಅತ್ಯಂತ ಹೆಚ್ಚು ಸಂಭಾವನೆ ಎರಡು ಸಾವಿರ ರೂಪಾಯಿಗಳಂತೆ.. ಹತ್ತು ಸಾವಿರ, ಇಪ್ಪತ್ತು ಸಾವಿರಕ್ಕೆ ಸಹಿ ಹಾಕಿಸಿಕೊಂಡು ಇವರಿಗೆ ಕೊಡುತ್ತಿದ್ದುದು ಒಂದೋ ಎರಡೋ ಸಾವಿರವಂತೆ.
ನಟಿ ಜಯಶ್ರೀ ಅವರು ಜನಪ್ರಿಯತೆಯ ತುತ್ತತುದಿಯಲ್ಲಿದ್ದಾಗಲೇ ಭಾಸ್ಕರ್ ಎಂಬ ಬಿಸಿನೆಸ್ ಮೆನ್‌ನನ್ನು ವಿವಾಹವಾಗಿದ್ದರು. ಅವರಿಗೆ ಲಕ್ಷ್ಮೀಪತಿ ಎಂಬ ಎರಡು ವರ್ಷದ ಮಗನಿದ್ದಾಗ ವ್ಯಾಪಾರಕ್ಕೆಂದು ಆತ ಶ್ರೀಲಂಕಾಕ್ಕೆ ಹೋದ. ಅಲ್ಲಿಗೇ ಬಂದುಬಿಡುವಂತೆ ಜಯಶ್ರೀ ಅವರನ್ನು ಒತ್ತಾಯಿಸಿದ. ಆದರೆ ಅವರಿಗೆ ಹೆತ್ತಮ್ಮ, ಒಡಹುಟ್ಟಿದ ತಮ್ಮ ಎಲ್ಲರನ್ನೂ ಬಿಟ್ಟು ಜೊತೆಗೆ ದೇಶವನ್ನೂ ಬಿಟ್ಟು ಅಲ್ಲಿಗೆ ಹೋಗುವ ಮನಸ್ಸಾಗಲಿಲ್ಲ. ಆತನೂ ಮತ್ತೆ ಇಲ್ಲಿಗೆ ಬರುವ ಮನಸ್ಸು ಮಾಡಲಿಲ್ಲ.
ಕಾಲ ಉರುಳುತ್ತಲೇ ಹೋಯಿತು. ಹೀಗೆ ವೈವಾಹಿಕ ಬದುಕಿನ ಸಂಕಟವನ್ನು ಒಡಲಲ್ಲಿಟ್ಟುಕೊಂಡು, ಸಾರ್ವತ್ರಿಕ ಜೀವನದ ಬಣ್ಣದ ಬದುಕಿನ ನೋವನ್ನು ಮಡಿಲಲ್ಲಿ ತುಂಬಿಕೊಂಡು ಸೀದಾ ಆಶ್ರಮದತ್ತ ಹೆಜ್ಜೆ ಇಟ್ಟವರು ಜಯಶ್ರೀ. ಪ್ರಶಾಂತಿ ಶಾಂತಿಧಾಮದಲ್ಲಿ ಒಂದಷ್ಟು ವರ್ಷಗಳು, ಜಿಗಣಿ ಆಶ್ರಮದಲ್ಲಿ ಕೆಲವು ವರ್ಷಗಳು ಹೀಗೆ ಹಲವಾರು ಆಶ್ರಮವಾಸಿಯಾಗಿ ದೀನದಲಿತರ, ನಿರ್ಗತಿಕ ಬಡಬಗ್ಗರ ಸೇವೆ ಮಾಡುತ್ತಾ ಅಜ್ಞಾತರಾಗಿಯೇ ಅವರು ಬದುಕು ಕಳೆಯತೊಡಗಿದರು.
ಪ್ರಶಾಂತಿ ಶಾಂತಿಧಾಮದಲ್ಲಿದ್ದಾಗ ಒಮ್ಮೆ ಮಾಜಿ ಮುಖ್ಯಮಂತ್ರಿ ವೀರೇಂದ್ರಪಾಟೀಲರು ಇವರನ್ನು ಕಂಡು ಕಷ್ಟ-ಸುಖ ವಿಚಾರಿಸಿಕೊಂಡಿದ್ದರಂತೆ. ಆದರೆ ಯಾವ ನೋವುಗಳನ್ನೂ ಅವರಿಗೆ ಇವರು ಹೇಳಿಕೊಳ್ಳದೆ ನಾನು ಪ್ರೀತಿಯಿಂದ ಇಷ್ಟಪಟ್ಟು ಇಲ್ಲಿದ್ದೇನೆ. ಜನಸೇವೆ ಮಾಡುವ ಉದ್ದೇಶ ತನ್ನದೆಂದು ಹೇಳಿದ್ದರಂತೆ. ಆಶ್ಚರ್ಯವೆಂದರೆ ಅವರ ಸೇವೆಗಾಗಿ ಆಶ್ರಮದವರು ಪ್ರತಿತಿಂಗಳು ಇಂತಿಷ್ಟು ಹಣವನ್ನು ಕೊಡಲು ಮುಂದೆ ಬಂದಾಗ ಅದನ್ನು ತೆಗೆದುಕೊಳ್ಳದೆ ನಿರಾಕರಿಸಿದರು.
ಇದನ್ನೂ ಓದಿ: ಭಾರತದ ಚಿತ್ರರಂಗದಲ್ಲಿ ಅಚ್ಚಳಿಯದ ಹೆಸರು ಬಿ.ಆರ್.ಪಂತುಲು..
ತಮ್ಮ ಬದುಕಿನ ಕಡೆಯ ದಿನಗಳಲ್ಲಿ ಬೆಂಗಳೂರನ್ನು ಬಿಟ್ಟು ಹುಟ್ಟೂರು ಮೈಸೂರಿಗೆ ಬಂದಿದ್ದ ಜಯಶ್ರೀ ಅವರು ಸಚ್ಚಿದಾನಂದ ಆಶ್ರಮಕ್ಕೆ ಸೇರಿಕೊಂಡು ತಮ್ಮ ಸೇವೆಯನ್ನು ಮುಂದುವರಿಸಿದ್ದರು. ಅವರ ಪ್ರಾಣಪಕ್ಷಿ ಕೂಡ ಇಲ್ಲಿಯೇ ಹಾರಿಹೋಗಬೇಕೆಂಬ ವಿಧಿಲಿಖಿತವಿತ್ತೆಂದು ಕಾಣುತ್ತದೆ. 2006ರ ಅಕ್ಟೋಬರ್ 29ರ ಮುಂಜಾನೆ 8ಗಂಟೆಯಲ್ಲಿ ಆಶ್ರಮದ ಕೊಠಡಿಯಲ್ಲಿ ತಿಂಡಿತಿನ್ನುತ್ತಾ ಕುಳಿತಿದ್ದ ಹೃದಯವಂತೆ ಕಲಾವಿದೆಯ ಹೃದಯ ಬಡಿತ ಥಟ್ಟನೆ ನಿಂತುಹೋಗಿತ್ತು. ವಿಷಯ ಅರಿತ ಮಗ ಲಕ್ಷ್ಮೀಪತಿ ತಕ್ಷಣವೇ ಬಂದು ಎಲ್ಲರ ಅಮ್ಮ ನಾಗಿದ್ದ ತನ್ನ ಹೆತ್ತಮ್ಮ ಜಯಶ್ರೀ ಅವರನ್ನು ಕೊನೆಬಾರಿ ಎಂಬಂತೆ ಕಣ್ತುಂಬ ನೋಡಿ ಕಣ್ಣೀರಿಟ್ಟು ಅಂತ್ಯಕ್ರಿಯೆ ಮಾಡಿ ಮುಗಿಸಿದರು. ದುರಂತವೆಂದರೆ ಇಡೀ ಚಲನಚಿತ್ರೋದ್ಯಮವೇ ತುಂಬಿ ತುಳುಕುತ್ತಿರುವ ಬೆಂಗಳೂರಿನಲ್ಲೇ ಅವರ ಅಂತ್ಯಕ್ರಿಯೆ ನಡೆದರೂ ಕೂಡ ಆಗ ಬಂದಿದ್ದವರು ಕೆಲವೇ ಕೆಲವು ಮಂದಿ ಮಾತ್ರ!