CinemaLatest

ಚಂದನವನದಲ್ಲಿ ನೆನಪಾಗಿ ಉಳಿದ ಹಿರಿಯ ನಟಿ ಎಂ.ವಿ.ರಾಜಮ್ಮ… ಇವರು ದೇಶದ ಮೊಟ್ಟ ಮೊದಲ ನಿರ್ಮಾಪಕಿ!

ಚಂದನವನದಲ್ಲಿ  ನಿರ್ಮಾಣವಾದ ಹತ್ತುಹಲವು ಕನ್ನಡ ಸಿನಿಮಾಗಳಲ್ಲಿ ನಟಿಸುವ ಮೂಲಕ ಇವತ್ತಿಗೂ ಮನೆಮಾತಾಗಿ ಉಳಿದಿರುವ ನಟಿಯರಿದ್ದಾರೆ. ಅವರು ಇವತ್ತು ನಮ್ಮ ಮುಂದೆ ಇಲ್ಲದಿರಬಹುದು. ಆದರೆ ಸಿನಿಮಾ ನಟಿಯರ ಬಗ್ಗೆ ಮಾತನಾಡುವಾಗಲೆಲ್ಲ ಅವರನ್ನು ನೆನಪಿಸಿಕೊಂಡು ಮುನ್ನಡೆಯ ಬೇಕಾಗುತ್ತದೆ. ಇಂತಹ ನಟಿಯರಲ್ಲಿ ಎಂ.ವಿ.ರಾಜಮ್ಮ ಒಬ್ಬರಾಗಿದ್ದಾರೆ. ಇವರು ಬರೀ ನಟಿ ಮಾತ್ರ ಆಗಲಿಲ್ಲ ದೇಶದ ಮೊಟ್ಟ ಮೊದಲ ನಟಿ ನಿರ್ಮಾಪಕಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅವರ ಬಗೆಗಿನ ಮಾಹಿತಿಯನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ತೆರೆದಿಟ್ಟಿದ್ದಾರೆ.

 ಇದನ್ನೂ ಓದಿ: ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಗುಬ್ಬಿವೀರಣ್ಣ

ಎಂ.ವಿ.ರಾಜಮ್ಮನವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಕಂದನಹಳ್ಳಿಯ ಮಧ್ಯಮ ವರ್ಗದ ರೈತ ಕುಟುಂಬ ದಂಪತಿಗೆ ಏಕೈಕ ಪುತ್ರಿಯಾಗಿ 26.1.1923ರಂದು ಜನಿಸಿದರು. ಬೆಂಗಳೂರಿನ ಆರ್ಯ ಬಾಲಿಕಾ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವಾಗ ಬಣ್ಣದ ಬದುಕಿಗೆ ಬೆರಗಾಗಿ ಚಂದ್ರಕಲಾ ಥಿಯೇಟರ್ ಗೆ ಎಂಟ್ರಿ ಕೊಟ್ಟರು. ಮೂರ್ನಾಲ್ಕು ನಾಟಕ ಕಂಪನಿಗಳಲ್ಲಿ ಜನಪ್ರಿಯ ನಟಿ ಆಗಿದ್ದ ರಾಜಮ್ಮನವರು ತಮ್ಮ12ನೇ ವಯಸ್ಸಿನಲ್ಲೇ ಹಲವಾರು ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಗಣ್ಯಾತಿಗಣ್ಯರಿಂದ, ರಾಜಮಹಾರಾಜರಿಂದ ಬ್ರಿಟಿಷ್ ಅಧಿಕಾರಿಗಳಿಂದ ಶಹಬ್ಬಾಸ್‍ಗಿರಿ ಪಡೆದರು.

ಅನೇಕ ಶ್ರೀಮಂತರೂ ಸಾಹುಕಾರರೂ ಜಮೀನ್ದಾರರೂ ಪಟೇಲ ಶ್ಯಾನುಭೋಗ ಆದಿಯಾಗಿ ನಗರದ-ನಾಡಿನ ಅನೇಕ ಪ್ರಮುಖರು ಇವರ ಅಭಿನಯದ ಮೋಡಿಗೆ ತಲೆದೂಗುತ್ತಿದ್ದರು. ಆ ಪೈಕಿ ಕೆಲವರಂತೂ ಇವರನ್ನು ವಿವಾಹವಾಗಲು ತುದಿಗಾಲಲ್ಲಿ ನಿಂತಿದ್ದರು! ಈ ಪರಿ ಸೊಬಗಿನ ಚೆಲುವೆ, ಸೌಮ್ಯಗುಣದ ಅಭಿನೇತ್ರಿ  ಎಂ.ವಿ. ರಾಜಮ್ಮ! ನಾಟಕ ಮತ್ತು ಚಲನಚಿತ್ರ ಎರಡೂ ರಂಗದಲ್ಲಿ ಹೆಸರು ಗಳಿಸಿದ್ದ ಜನಪ್ರಿಯ ಮಹಾನ್ ಚಿತ್ರೋದ್ಯಮಿ ಬಿ.ಆರ್.ಪಂತುಲು ಅವರ ಪರಿಚಯ ಅನಿರೀಕ್ಷಿತವಾಗಿ ಆಯಿತು. ಅಂದಿನ ಕಾಲದ ಕೆಲವೇ ನಟ-ನಿರ್ಮಾಪಕ-ನಿರ್ದೇಶಕರಲ್ಲಿ ಅಗ್ರಗಣ್ಯರಾದ ಆಂಧ್ರ ಮೂಲದ ತೆಲುಗು-ಕನ್ನಡಿಗ ಬಿ.ಆರ್.ಪಂತುಲು ಕರ್ನಾಟಕದ ಗಡಿನಾಡು ಕೋಲಾರ ಜಿಲ್ಲೆಯ ಗ್ರಾಮವೊಂದರಲ್ಲಿ ಜನಿಸಿದ್ದರು. ಬಿಆರ್.ಪಂತುಲು-ಎಂವಿ.ರಾಜಮ್ಮ ಪರಸ್ಪರ ಪ್ರೇಮಿಸಿ 1944ರಲ್ಲಿ ಮದುವೆಯಾದರು.

 ಇದನ್ನೂ ಓದಿ: ಬಾಲಿವುಡ್ ನಲ್ಲಿ ಕನ್ನಡಬಾವುಟ ಹಾರಿಸಿದ್ದ ಆರ್.ನಾಗೇಂದ್ರರಾವ್

ಈ ತಾರಾದಂಪತಿಯ ಮಗಳು ವಿಜಯಲಕ್ಷ್ಮಿ, ಮಗ ರವಿಶಂಕರ್. ಕ್ರಮೇಣ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ಕಲೆಗಳ ತವರೂರು, ಹಾಗೂ ಇವರ ಸ್ವಂತ ಸಿನಿಮಾ ನಿರ್ಮಾಣ ಸಂಸ್ಥೆಗೆ ಎಲ್ಲ ರೀತಿ ಅನುಕೂಲವಾಗಿದ್ದ ಪ್ರತಿಷ್ಠಿತ ಪ್ರೀಮಿಯರ್ ಸ್ಟುಡಿಯೊ ಇದ್ದ ಮೈಸೂರು ನಗರದಲ್ಲಿ ಮನೆ ಮಾಡಿಕೊಂಡು ಬಹುಕಾಲ ವಾಸವಿದ್ದರು. ರಾಜಮ್ಮನವರ ಅಭಿನಯದ ಪ್ರಪ್ರಥಮ ಸಿನಿಮಾ 1936ರಲ್ಲಿ ತೆರೆಕಂಡ ಸಂಸಾರನೌಕ. ಆಗ ಇವರಿಗೆ ಕೇವಲ 13 ವಯಸ್ಸು. ವಿವಿಧ ಭಾಷೆಗಳಲ್ಲಿ ಇವರು ನಟಿಸಿದ ಒಟ್ಟು ಚಿತ್ರಗಳು 300ಮೀರಿದರೂ ಕನ್ನಡದಲ್ಲಿ ಅಭಿನಯಿಸಿದ ಚಲನಚಿತ್ರಗಳು 175ಮಾತ್ರ. ಇವುಗಳಲ್ಲಿ ಪ್ರಮುಖವಾದವು ಸತಿಶಕ್ತಿ, ಸ್ಕೂಲ್‍ಮಾಸ್ಟರ್,  ಕಿತ್ತೂರುಚೆನ್ನಮ್ಮ, ಮಕ್ಕಳರಾಜ್ಯ, ಶ್ರೀಕೃಷ್ಣದೇವರಾಯ, ತಾಯಿದೇವರು, ತ್ರಿಮೂರ್ತಿ, ಜಗಮೆಚ್ಚಿದಮಗ,  ಬಂಗಾರದಪಂಜರ, ದಾರಿತಪ್ಪಿದಮಗ, ಸಂಪತ್ತಿಗೆಸವಾಲ್ ಮುಂತಾದವು. ಇವರ ಶ್ರೇಷ್ಠ ಅಭಿನಯಕ್ಕೆ ‘ಕಲಾದೀವಿಗೆ’ ‘ನಿರ್ಮಾಪಕಿರತ್ನ’ ಬಿರುದು ಸೇರಿದಂತೆ 12 ರಾಷ್ಟ್ರ ಪ್ರಶಸ್ತಿ, 38 ರಾಜ್ಯ ಪ್ರಶಸ್ತಿಗಳ ಜತೆಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯೂ ದೊರಕಿದೆ.

ಎಂ.ವಿ.ರಾಜಮ್ಮ, ಕನ್ನಡ ಚಲನಚಿತ್ರ ರಂಗದ ಪ್ರಪ್ರಥಮ ಮಹಿಳಾ ನಿರ್ಮಾಪಕಿ. ಪದ್ಮಿನಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ 25ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಸೇರಿದಂತೆ ಭಾರತದ ಇನ್ನಿತರ ಭಾಷೆಗಳ ಸುಮಾರು 58 ಚಿತ್ರಗಳನ್ನು ನಿರ್ಮಾಣ ಮಾಡಿದ ಇತಿಹಾಸವಿದೆ. ಸಾಕ್ಷಾತ್ ಮಹಾಲಕ್ಷ್ಮಿ ಕಳೆಯುಳ್ಳ ಮಂದಸ್ಮಿತ ಬೊಗಸೆಕಂಗಳ ಎಂ.ವಿ.ರಾಜಮ್ಮನವರು ತಮ್ಮ ಸಿನಿಮಾ ಜೀವನದ ಪ್ರಾರಂಭದಲ್ಲಿ ರಾಜ್‍ಕುಮಾರ್ ಎಂ.ಜಿ.ಆರ್. ಎನ್.ಟಿ.ರಾಮರಾವ್ ಶಿವಾಜಿಗಣೇಶನ್ ರಂತಹ ಹಲವಾರು ಖ್ಯಾತ ಹೀರೋಗಳ ಜತೆಗೆ ಹೀರೋಯಿನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸದಾ ಮುಗುಳ್ನಗೆ ಮುಖಾರವಿಂದದ  ರಾಜಮ್ಮನವರು ತಮ್ಮ ಸಮಕಾಲೀನ ನಟಿಯರಾದ ಅಂಜಲಿ ದೇವಿಕಾ ಸಾವಿತ್ರಿ ಸಂಧ್ಯಾ ಪ್ರತಿಮಾದೇವಿ ಜಮುನಾ ಸಾಹುಕಾರ್ ಜಾನಕಿ ಕೃಷ್ಣಕುಮಾರಿ ಬಿ.ಸರೋಜಾದೇವಿ ಮುಂತಾದವರೊಡನೆ ಸ್ನೇಹದಿಂದಿದ್ದರು. ಹೆಚ್ಚು ಸಲುಗೆಯಿಂದ ಇದ್ದುದು ಕನ್ನಡದ ಮತ್ತೊಬ್ಬ ಮೇರು ನಟಿಯಾದ ಪಂಡರಿಬಾಯಿ ರೊಡನೆ ಮಾತ್ರ. ಇದಕ್ಕೆ ರಾಜಮ್ಮನವರು ಕೊಡುತ್ತಿದ್ದ ಕಾರಣ ವಿಶಿಷ್ಟವಾದದ್ದು..

ಇದನ್ನೂ ಓದಿ:  ಕನ್ನಡ ಸಿನಿಲೋಕಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನ ಕೊಡುಗೆಯೇನು?

ಪಂಡರಬಾಯಿ ಮತ್ತು ನಾನು ಸಮಾನ ಮನಸ್ಕರಷ್ಟೆ ಅಲ್ಲ, ಹೆಚ್ಚೂ ಕಮ್ಮಿ ಸಮಾನ ವಯಸ್ಕರು ಹೌದು. ಯಾವಾಗಲೂ ನಾವಿಬ್ಬರು ಪರಸ್ಪರ ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ಯಾವುದೇ ಕಾರಣವಿರಲಿ ನಾವು ಒಬ್ಬರನ್ನೊಬ್ಬರು ಎಂದೂ ಏನನ್ನೂ ಬಿಟ್ಟುಕೊಟ್ಟವರಲ್ಲ, ನನ್ನಭಿಪ್ರಾಯದಲ್ಲಿ ನನ್ನ ಓರಗೆಯವರಲ್ಲಿ ಪಂಡರಿಬಾಯಿ ಓರ್ವ ಸುಗುಣವಂತ ಮಹಾನ್‍ ಕಲಾವಿದೆ. ಇವರನ್ನು ಹೊರತುಪಡಿಸಿ ನನಗೆ ಪ್ರಿಯವಾದ ಸಹೋದ್ಯೋಗಿ ಗೆಳತಿಯರೆಂದರೆ ಹರಿಣಿ, ಬಿ.ಸರೋಜಾದೇವಿ ಹಾಗೂ ಸಂಧ್ಯಾ [ಜಯಲಲಿತಳತಾಯಿ]” ಎಂಬುದಾಗಿ ಹಲವಾರು ಬಾರಿ ಸಾರ್ವಜನಿಕವಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು?!

ಎಂ.ವಿ.ರಾಜಮ್ಮನವರ ಅಭಿಪ್ರಾಯವನ್ನು ಒಪ್ಪಿಕೊಂಡ ಪಂಡರಿಬಾಯಿ ಕೂಡಾ ಅನೇಕ ಕಾರ್ಯಕ್ರಮದಲ್ಲಿ ಬಹಿರಂಗವಾಗಿಯೇ ರಾಜಮ್ಮನವರ ಮಾತುಗಳನ್ನು ಪುಷ್ಟೀಕರಿಸಿದ್ದರು. ಈ ಇಬ್ಬರು ಲೆಜೆಂಡರಿ ನಟಿಯರ ಮನದಾಳದ ಮಾತುಗಳಿಂದಾಗಿ ದ.ಭಾರತದ ಚಿತ್ರರಂಗದಲ್ಲಿ ಇಬ್ಬರಿಗೂ ಅಭಿಮಾನಿಗಳು ಹುಟ್ಟಿಕೊಳ್ಳುವಂತಹ ಪರಿಣಾಮ ಬೀರಿತು. ಹಲವು ಬಾರಿ ಪಂಡರಿಬಾಯಿಗೆ ಬಿಡುವಿಲ್ಲದಂತೆ ಕಾಲ್‍ಶೀಟ್‍ ಗೆ ಡಿಮ್ಯಾಂಡ್ ಇದ್ದ ವೇಳೆ ಪಂಡರಿಬಾಯಿವರು ನುಡಿದುದು ಹೀಗಿದೆ: “ನನಗಿಂತ ಚೆನ್ನಾಗಿ ರಾಜಮ್ಮನೂ ತಾಯಿ ಪಾತ್ರಗಳಿಗೆ ಹೇಳಿ ಮಾಡಿಸಿದಂತಿದ್ದಾರೆ. ಸಾಮರ್ಥ್ಯವಿರುವ ಅವರಿಗೂ ಅವಕಾಶ ಕೊಡಿ”  ಈ ಮಾತುಗಳನ್ನು ಸ್ವಯಂ ಪಂಡರಿಬಾಯವರೇ ಹಲವಾರು ನಿರ್ಮಾಪಕ ನಿರ್ದೇಶಕರಿಗೆ ಉತ್ತಮ ಸಲಹೆ ನೀಡಿ ತಮ್ಮ ಬದಲಿಗೆ ನಟಿಸುವಂಥ ಪರ್ಯಾಯ ಪರಿಹಾರವನ್ನು ಸೂಚಿಸುತ್ತಿದ್ದರು, ಅನಿವಾರ್ಯ ಅವಶ್ಯ ಎನಿಸಿದ ಸಂದರ್ಭದಲ್ಲೆಲ್ಲ ಖುದ್ದು ರಾಜಮ್ಮ ನವರೊಡನೆ ಮಾತುಕತೆಯಾಡಿ ಸೂಕ್ತ ವ್ಯವಸ್ಥೆ ಮಾಡುತ್ತಿದ್ದರು.

ಇದನ್ನೂ ಓದಿ:  ಕನ್ನಡದ ಪ್ರಪ್ರಥಮ ವಾಕ್ ಚಿತ್ರದ ಹೀರೋಯಿನ್  ತ್ರಿಪುರಾಂಭ…

ರಾಜಮ್ಮನವರ ಶಿಫಾರಸ್ಸು ಸಹಾಯದಿಂದ ಇವರದ್ದೇ ಪದ್ಮಿನಿ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ ಚಿತ್ರಗಳ ಮೂಲಕ ವೈ.ಆರ್.ಸ್ವಾಮಿ, ಎಸ್‍ಆರ್. ಪುಟ್ಟಣ್ಣ ಕಣಗಾಲ್, ಕಣಗಾಲ್‍ಪ್ರಭಾಕರ್‍ಶಾಸ್ತ್ರಿ, ಷಣ್ಮುಗಂ, ಆರ್.ಎನ್. ಜಯಗೋಪಾಲ್, ಟಿ.ಜಿ.ಲಿಂಗಪ್ಪ, ರಾಜ್‍ಕುಮಾರ್, ನರಸಿಂಹರಾಜು, ಉದಯಕುಮಾರ್, ಸತ್ಯ, ಬಾಲಕೃಷ್ಣ, ಡಿಕ್ಕಿಮಾಧವರಾವ್, ಅಶ್ವಥ್, ಮುಂತಾದ ನಟರು. ಕಲ್ಪನಾ, ಜಯಂತಿ, ಭಾರತಿ, ವಾಣಿಶ್ರೀ, ಶೈಲಶ್ರೀ ಮುಂತಾದ ನಟಿಯರು ಚಲನಚಿತ್ರ ರಂಗದಲ್ಲಿ ಭದ್ರವಾಗಿ ತಳ ಊರಿ ಸಿನಿಲೋಕದಲ್ಲಿ ನೆಲೆ ಕಂಡುಕೊಂಡರು, ದೇಶದಾದ್ಯಂತ ಖ್ಯಾತರಾದರು. ಇವರ ಗರಡಿಯಲ್ಲಿ ತಯಾರಾದ ಪ್ರಮುಖ ಶಿಷ್ಯರಲ್ಲಿ ಖ್ಯಾತ ನಿರ್ದೇಶಕ ಎಸ್.ಆರ್.ಪುಟ್ಟಣ್ಣಕಣಗಾಲ್ ಮೊದಲಿಗರು.

ರಾಜಮ್ಮನವರ ಪದ್ಮಿನಿ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ 25ನೇ ಹಾಗೂ ಕಟ್ಟಕಡೆಯ ಸಿನಿಮಾ ಕಾಲೇಜುರಂಗ 1976ರಲ್ಲಿ ತೆರೆಕಂಡಿತು. ಈ ಚಿತ್ರದ ನಿರ್ಮಾಪಕ ಈಕೆಯ ಪುತ್ರ ಬಿ.ಆರ್. ರವಿಶಂಕರ್, ಇದರ ನಿರ್ದೇಶಕರು ಪುಟ್ಟಣ್ಣ ಕಣಗಾಲ್! ಅಪ್ಪಟ ಕನ್ನಡತಿ, ನೇರನುಡಿಯ ಪರೋಪಕಾರಿ ಭಾರತದ ಶ್ರೇಷ್ಠ ಚಲನಚಿತ್ರ ಉದ್ಯಮಿ ಧೀರಮಹಿಳೆ ಅನಿರೀಕ್ಷಿತವಾಗಿ ಅನಾರೋಗ್ಯ ನಿಮಿತ್ತ ಚೆನ್ನೈ ಆಸ್ಪತ್ರೆ ಸೇರಿ 24.4.1999ರಂದು ನಿಧನರಾದರು. ಚಂದನವನದ ಚೇತನ ಹಿರಿಯಕಲಾವಿದೆ ಮೇರುನಟಿ ದಕ್ಷಿಣ ಭಾರತದ ಜೇಷ್ಠ ಮಹಿಳಾ ಚಿತ್ರೋದ್ಯಮಿ ಎಂ.ವಿ.ರಾಜಮ್ಮ ಸದಾ ನಮ್ಮೊಂದಿಗಿದ್ದಾರೆ. ಕನ್ನಡ ಕುಲಕೋಟಿ ಆದಿಯಾಗಿ ಚಿತ್ರರಂಗದ ಪ್ರತಿಯೊಬ್ಬರು ಸರ್ವಕಾಲದಲ್ಲು ಸ್ಮರಿಸುತ್ತಲಿರುತ್ತಾರೆ.

ಇದನ್ನೂ ಓದಿ:  ಇದು ಮೈಸೂರಿನ ನಟಿಯಾಗಿದ್ದ ಎಂ. ಜಯಶ್ರೀರವರ ಬಣ್ಣದ ಬದುಕಿನಾಚೆಗಿನ ಕಥೆ…

ಸಂಸಾರನೌಕಾ 1936, ಯಯಾತಿ[ತ] ರಾಧಾರಮಣ, ಉತ್ತಮಪುತ್ರನ್[ತ] ಮೊದಲತೇದಿ ಜ್ಞಾನಸುಂದರಿ[ತ] ಶಿವಶರಣೆ ನಂಬೆಕ್ಕ ತಂಗಮಲೈರಹಸ್ಯಂ[ತ] ರತ್ನಗಿರಿರಹಸ್ಯ ಲೈಲಾಮಜ್ನು [ತ]ಸ್ಕೂಲ್‍ಮಾಸ್ಟರ್ ಪೆಣ್‍ಮನಂ, ಅಬ್ಬಾಆಹುಡುಗಿ, ಜಮೀನ್ದಾರ್, ಮಕ್ಕಳರಾಜ್ಯ, ಪಾರಿಜಾತಂ, ತಾಯಿಕರುಳು, ಕಾರ್‍ಕೋಟ್ಟೈ ಗಾಳಿಗೋಪುರ ಭಕ್ತಪ್ರಹ್ಲಾದ[ತೆ] ಸತಿಶಕ್ತಿ ಯೋಗಿವೇಮನ[ತೆ] ಕಿತ್ತೂರುಚೆನ್ನಮ್ಮ ಇದ್ದರುಪಿಲ್ಲಲು[ತೆ] ಎಮ್ಮೆತಮ್ಮಣ್ಣ ಕುಲವಧು, ಬೀದಿಬಸವಣ್ಣ, ಗಂಡೊಂದುಹೆಣ್ಣಾರು, ಚಿನ್ನದ ಗೊಂಬೆ, ಶ್ರೀಕೃಷ್ಣದೇವರಾಯ, ಮಾಲತಿ ಮಾಧವ ಒಂದುಹೆಣ್ಣಿನಕಥೆ, ತಾಯಿದೇವರು, ಯಾರಸಾಕ್ಷಿ, ಜಗಮೆಚ್ಚಿದಮಗ , ಶತ್ರು, ಬಂಗಾರದಪಂಜರ, ಬಿಳಿಗಿರಿಯಬನದಲ್ಲಿ, ದಾರಿತಪ್ಪಿದಮಗ, ಕೂಡಿಬಾಳೋಣ, ಬೆಸುಗೆ ಸಂಪತ್ತಿಗೆಸವಾಲ್.

admin
the authoradmin

12 Comments

  • ಎಂ.ವಿ.ರಾಜಮ್ಮ ನವರು ಬಿ.ಆರ್.ಪಂತುಲು ರವರ ತಾರಾಪತ್ನಿ ಎಂಬ ವಿಷಯ ತಿಳಿದಾಕ್ಷಣ ಆಶ್ಚರ್ಯವಾಯಿತು. ಏಕೆಂದರೆ ಬಹುತೇಕ ಕನ್ನಡ ಚಲನಚಿತ್ರ ಅಭಿಅಭಿಮಾನಪ್ರೇಕ್ಷಕರಿಗೆ ಈ ವಿಚಾರ ಗೊತ್ತಿರಲಿಲ್ಲವೇನೋ?! ಮಾಹಿತಿ ಲೇಖನ ಬರೆದ ಕುಮಾರಕವಿಯವರಿಗೆ ಧನ್ಯವಾದ,ಪ್ರಕಟಿಸಿದ ಸಂಪಾದಕರಿಗೂ ನಮಸ್ಕಾರ.

  • ಭಾರತ ದೇಶದ ಮೊಟ್ಟಮೊದಲ ನಾಯಕನಟಿ ನಿರ್ಮಾಪಕಿ ಎಂ.ವಿ.ರಾಜಮ್ಮ ಕನ್ನಡತಿ ಮತ್ತು ಕನ್ನಡ ನಾಡಿನವರು ಎಂಬುದು ನಮಗೆಲ್ಲ ಹೆಮ್ಮೆಯ ಸಂಗತಿ, ವಿಚಾರ ತಿಳಿಸಿದ ಲೇಖಕ ನಟರಾಜ ಅವರಿಗೆ ಧನ್ಯವಾದ
    ಬಸವರಾಜ ಪಾಟೀಲ, ಬೆಳಗಾವಿ

  • ಮೈಸೂರಿನ ಎಂ.ವಿ.ರಾಜಮ್ಮ ನವರ ಲೇಖನ ಬಹಳ ಚೆನ್ನಾಗಿ ಬರೆದಿದ್ದಾರೆ. ಇದು ಸತ್ಯವೂ ಹೌದು. ದೇವರಾಜ ಮೊಹಲ್ಲ ರಾಜಕಮಲ್ ಟಾಕೀಸ್ ಹಿಂಭಾಗ ವಾಸವಿದ್ದ ನಮ್ಮ ಕುಟುಂಬದ ಎಲ್ಲರಿಗೂ ಇವರ ಪರಿಚಯ ಇತ್ತು.
    ಅಣ್ಣಯ್ಯಪಾಪು (T.S.Kumar Taranath) retired high school teacher, Mysore

  • Very well written good article and impressive to me as well as for the younger generations 👍 👏 😀 😊 👌

  • ಎಂ.ವಿ.ರಾಜಮ್ಮ ಮೈಸೂರಿನ ದೇವರಾಜ ಮೊಹಲ್ಲದಲ್ಲಿ ವಾಸವಿದ್ದರು ಎಂಬ ವಿಷಯ ಸತ್ಯ. ಇದಕ್ಕೆ ನಾನು ಮತ್ತು ನಮ್ಮ ಕುಟುಂಬದವರೇ ಸಾಕ್ಷಿ

  • ಹಿರಿಯ ಕಲಾವಿದೆ ನಾಯಕನಟಿ ನಿರ್ಮಾಪಕಿ ನಿರ್ದೇಶಕಿ ಎಂ.ವಿ.ರಾಜಮ್ಮ ನಿಜವಾಗಲೂ ಮೈಸೂರಿನ ದೇವರಾಜ ಮೊಹಲ್ಲ ರಾಜಕಮಲ್ ಟಾಕೀಸ್ ಹಿಂಭಾಗ ಇದ್ದ ನಮ್ಮ ಮನೆಯ ಹತ್ತಿರವೇ ಬಹಳಕಾಲ ವಾಸಮಾಡುತ್ತಿದ್ದರು.

  • ಎಅಂ.ವಿ.ರಾಜಮ್ಮನವರ ಬಗ್ಗೆ ಬರೆದ ಅತ್ತ್ಯುತ್ತಮ ಲೇಖನ

  • ಹಿರಿಯ ಪೋಷಕನಟಿ ನಾಯಕನಟಿ ನಿರ್ಮಾಪಕಿ ನಿರ್ದೇಶಕಿ ಶ್ರೀಮತಿ ಪಂತುಲು ಎಂ.ವಿ.ರಾಜಮ್ಮನವರ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದಾರೆ, ಧನ್ಯವಾದ

Leave a Reply