CrimeLatest

ಸಿಎಂ ತವರಲ್ಲೇ ಡ್ರಗ್ಸ್ ಫ್ಯಾಕ್ಟರಿ…  ಸಾಂಸ್ಕೃತಿಕ ನಗರಿಗೆ ಕಳಂಕ… 390 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದ್ದು ಹೇಗೆ?

ರಾಜ್ಯದಲ್ಲಿ ಆಗಾಗ್ಗೆ ಡ್ರಗ್ಸ್ ಪ್ರಕರಣಗಳು ಪತ್ತೆಯಾಗುವುದು ಹೊಸದೇನಲ್ಲ… ಅದರಲ್ಲೂ ಬೆಂಗಳೂರು, ಮೈಸೂರಿನಲ್ಲಿ  ಇದರ ಜಾಲ ಬಲವಾಗಿ ಹರಡಿಕೊಂಡಿದೆ ಎಂದಷ್ಟೇ ಗೊತ್ತಿತ್ತು. ಆದರೆ ಸಿಎಂ ತವರು ಜಿಲ್ಲೆ ಮೈಸೂರೇ ಡ್ರಗ್ಸ್ ಫ್ಯಾಕ್ಟರಿ ಆಗಿದೆ ಎನ್ನುವುದು ಗೊತ್ತಿರಲಿಲ್ಲ. ಈಗ ಅದು ಬಹಿರಂಗಗೊಂಡಿದ್ದು ಜನ ಬೆಚ್ಚಿ ಬಿದ್ದಿದ್ದಾರೆ… ಇವತ್ತು ಓದುವ, ಕೆಲಸ ಮಾಡಿ ಬದುಕುವ ವಯಸ್ಸಿನಲ್ಲಿ  ಯುವಕರು, ಯುವತಿಯರು ಹಾಳಾಗುತ್ತಿರುವುದೇಕೆ? ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಂತಾಗಿದೆ.. ಅಷ್ಟೇ ಅಲ್ಲದೆ, ನಮ್ಮ ಸರ್ಕಾರ, ಪೊಲೀಸ್ ವ್ಯವಸ್ಥೆ ಎಲ್ಲವೂ ಇದರ ಹೊಣೆ ಹೊರಬೇಕಾಗಿದೆ.

ಇದನ್ನೂ ಓದಿ : ಹನಿಟ್ರ್ಯಾಪ್… ಇದು ಮಾಯಾಂಗನೆಯರ ವಿಷವರ್ತುಲ… ಇಲ್ಲಿ ಸಿಕ್ಕಿಬಿದ್ದರೆ ಹಣ, ಮಾನ ಮಾರ್ಯಾದೆ ಖತಂ

ಮೈಸೂರು ನಗರಕ್ಕೆ ತಾಗಿಕೊಂಡಂತಿರುವ ಬನ್ನಿಮಂಟಪ ಬಳಿಯ ರಿಂಗ್ ರಸ್ತೆಯ ನಿಗೂಢ ಸ್ಥಳದಲ್ಲಿ ಇಂತಹದೊಂದು ಫ್ಯಾಕ್ಟರಿ ಇತ್ತೆಂದರೆ ನಿಜಕ್ಕೂ ನಮ್ಮ ವ್ಯವಸ್ಥೆಗೆ ತುಕ್ಕು ಹಿಡಿದಿದೆ ಎಂಬುದು ಗೊತ್ತಾಗಿ ಬಿಡುತ್ತದೆ. ಮಾದಕ ವ್ಯಸನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕಷ್ಟೇ ಸೀಮಿತವಾದ ಕೆಲವು ಇಲಾಖೆಗಳು ಅದು ಎಲ್ಲಿಂದ ಬರುತ್ತಿದೆ? ಅದನ್ನು ಬೇರು ಸಹಿತ ಕಿತ್ತು ಹಾಕುವುದು ಹೇಗೆ? ಎಂದು ಯೋಚಿಸದ ಕಾರಣದಿಂದಾಗಿ ಇವತ್ತಿಗೂ ನಮಗೆ ಗೊತ್ತಿಲ್ಲದಂತೆ ಡ್ರಗ್ಸ್ ಗಳನ್ನು ಎಲ್ಲಿಗೆ? ಹೇಗೆ? ತಲುಪಿಸಬೇಕೋ ಅದನ್ನು ತಲುಪಿಸುತ್ತಿದ್ದಾರೆ. ಹೀಗಾಗಿ ಸದ್ದಿಲ್ಲದಂತೆ ಯುವಜನತೆ ಡ್ರಗ್ಸ್ ವ್ಯಸನಿಗಳಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದಲ್ಲದೆ, ಹೆತ್ತವರಿಗೆ ಭಾರವಾಗುತ್ತಿದ್ದಾರೆ, ಕ್ರಿಮಿನಲ್ ಗಳಾಗುತ್ತಿದ್ದಾರೆ.

ಬಹುಶಃ ಮಹಾರಾಷ್ಟ್ರದ ಮಾದಕ ವಸ್ತು ನಿಗ್ರಹ ದಳದ ಪೊಲೀಸರಿಗೆ ಮೈಸೂರು ಲಿಂಕ್ ಇರುವ ಡ್ರಗ್ ಪೆಡ್ಲರ್ ಗಳು ಸಿಗದೆ ಹೋಗಿದ್ದರೆ ಮೈಸೂರಿನಲ್ಲಿ ಡ್ರಗ್ಸ್ ಉತ್ಪಾದಿಸೋ ಫ್ಯಾಕ್ಟರಿ ಇದೆ ಎಂಬುದೇ ಗೊತ್ತಾಗುತ್ತಿರಲಿಲ್ಲವೇನೋ? ಆದರೆ ಮಹಾರಾಷ್ಟ್ರದ ಮಾದಕ ವಸ್ತು ನಿಗ್ರಹ ದಳದ ಪೊಲೀಸರಿಗೆ ಸಿಕ್ಕ ಮಾಹಿತಿ ಮತ್ತು ಅವರು ನಮ್ಮ ರಾಜ್ಯದ  ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸಹಕಾರದಲ್ಲಿ ಸ್ಥಳೀಯ ಪೊಲೀಸರೊಂದಿಗೆ ನಡೆಸಿದ ಕಾರ್ಯಾಚರಣೆ ಮೈಸೂರಿನಲ್ಲಿ ಬರೀ ಡ್ರಗ್ಸ್ ಮಾತ್ರವಲ್ಲ ಡ್ರಗ್ಸ್ ಫ್ಯಾಕ್ಟರಿಯೇ ಇತ್ತು ಎಂಬುದನ್ನು ಬಯಲು ಮಾಡಿದೆ. ಅಷ್ಟೇ ಅಲ್ಲದೆ ಇಲ್ಲಿ ಸಿಕ್ಕಿದ್ದು ಬರೋಬ್ಬರಿ 390 ಕೋಟಿ ಮೌಲ್ಯದ ಡ್ರಗ್ಸ್!

ಇದನ್ನೂ ಓದಿ :  ಫೇಸ್ ಬುಕ್ ಪ್ರೇಮ.. ಪ್ರಣಯ… ಪ್ರಾಣ ತೆಗೆಯಿತು! ಗಂಡನ ಬಿಟ್ಟು ಬಂದವಳನ್ನು ಪ್ರಿಯಕರ ಕೊಂದು ಬಿಟ್ಟ!

ಮೈಸೂರಿನಲ್ಲಿ ತಯಾರಾಗುತ್ತಿದ್ದ ಡ್ರಗ್ಸ್ ದೇಶದಾದ್ಯಂತ ಮಾರಾಟವಾಗುತ್ತಿತ್ತು ಎಂದರೆ ಅಚ್ಚರಿಯಾಗಬಹುದು ಆದರೆ ಇದು ಸತ್ಯ. ಮಹಾರಾಷ್ಟ್ರದ ಪೊಲೀಸರು ಆಳಕ್ಕಿಳಿದು ಡ್ರಗ್ಸ್ ಪ್ರಕರಣದ ತನಿಖೆ ನಡೆಸದೆ ಹೋಗಿದ್ದರೆ ಬಹುಶಃ ಇಲ್ಲಿಯವರೆಗೂ ಇಂತದಹೊಂದು ಮಹಾಜಾಲ ಮೈಸೂರಿನಲ್ಲಿ ಕಾರ್ಯಾಚರಿಸುತ್ತಿದೆ ಎಂಬುದು ಗೊತ್ತೇ ಆಗುತ್ತಿರಲಿಲ್ಲವೇನೋ? ನಾವು ಇವತ್ತು ಮಹಾರಾಷ್ಟ್ರದ ಪೊಲೀಸರಿಗೆ ಥ್ಯಾಂಕ್ಸ್ ಹೇಳಬೇಕಾಗಿದೆ. ಇನ್ನು ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಇದೆ ಎಂಬುದು ಗೊತ್ತಾಗಿದ್ದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳ ಬೇಕಾದರೆ ನಾವು ಮುಂಬೈ ಪೊಲೀಸರ ಕಾರ್ಯಾಚರಣೆ ಬಗ್ಗೆ ಹೇಳಬೇಕಾಗುತ್ತದೆ.

ಪಶ್ಚಿಮ ಮುಂಬೈನ ಬೈನಾ ಸಾಕಿನಾಕಾದಲ್ಲಿ ಕಳೆದ ಏಪ್ರಿಲ್ ನಲ್ಲಿ  ಅಲ್ಲಿನ  ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಹಳೆಯ ಡ್ರಗ್ ಪೆಡ್ಲರ್ ಸಿಕ್ಕಿ ಬಿದ್ದಿದ್ದನು. ಆತನ ಬಳಿ 52 ಗ್ರಾಂನಷ್ಟು  ಮೆಫೆಡ್ರೋನ್‌  ಡ್ರಗ್ಸ್ ಸಿಕ್ಕಿತ್ತು. ಹೀಗಾಗಿ ಆತನನ್ನು ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ಆತ ಇನ್ನು ಮೂವರ ಹೆಸರನ್ನು  ಹೇಳಿದ್ದನು. ಅದರಂತೆ  ಮೂವರನ್ನು ಬಂಧಿಸಿದಾಗ ಅವರ ಬಳಿ ಎಂಟು ಕೋಟಿ ಮೌಲ್ಯದ 4.53 ಕಿಲೋಗ್ರಾಂ ಮೆಫೆಡ್ರೋನ್‌ ಡ್ರಗ್ಸ್ ಪತ್ತೆಯಾಗಿತ್ತು. ಇದಾದ ಬಳಿಕ ಇದರ ಹಿಂದೆ ಭಾರೀ ದೊಡ್ಡ ಜಾಲ ಇರುವ ಸಂಶಯ ಪೊಲೀಸರಿಗೆ ವ್ಯಕ್ತವಾಗಿತ್ತು. ಹೀಗಾಗಿ ಇದರ ಹಿಂದಿನ ರಹಸ್ಯ  ಬೇಧಿಸಲು ಅವರು ಮುಂದಾಗಿದ್ದರು.

ಇದನ್ನೂ ಓದಿ :  ಹನಿಟ್ರ್ಯಾಪ್ ಅಡ್ಡಾದಲ್ಲಿ ಖತರ್ ನಾಕ್ ಪೊಲೀಸ್ ಪೇದೆ… ಬಟ್ಟೆ ವ್ಯಾಪಾರಿಗೆ  ಖೆಡ್ಡಾ ತೋಡಿದ್ದು ಹೇಗೆ ಗೊತ್ತಾ?

ಅದರಂತೆ ಮುಂಬೈನ ಬಾಂದ್ರಾ ರಿಕ್ಲಮೇಷನ್ ವಸತಿ ಪ್ರದೇಶದ ಸಲೀಂ ಇಮ್ತಿಯಾಜ್ ಶೇಖ್ ಅಲಿಯಾಸ್ ಸಲೀಂ ಲಾಂಗ್ಡಾ ಎಂಬಾತನನ್ನು ಬಂಧಿಸಲಾಗಿತ್ತು. ಆ ನಂತರ ಈತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಈ ಜಾಲ ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ದೇಶದ ಹಲವು ಕಡೆಗಳಿಗೆ ಹರಡಿರುವುದು ತಿಳಿದು ಬಂದಿತ್ತು. ಅದಕ್ಕಿಂತ ಹೆಚ್ಚಾಗಿ ಡ್ರಗ್ಸ್ ಕರ್ನಾಟಕದ ಮೈಸೂರಿನಿಂದ ಸರಬರಾಜಾಗುತ್ತಿದೆ ಎಂಬ ಬಹುದೊಡ್ಡ ಸ್ಪೋಟಕ ಮಾಹಿತಿಯೂ ಅವರಿಗೆ ಲಭ್ಯವಾಗಿತ್ತು. ಹೀಗಾಗಿ ಪೊಲೀಸರು ಅಲರ್ಟ್ ಆಗಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಅಲ್ಲಿನ ಪೊಲೀಸ್ ಹಿರಿಯ ಅಧಿಕಾರಿಗಳು ಮುಂಬೈನ ಡಿಸಿಪಿ ದತ್ತನಲವಾಡೆ, ಇನ್ಸ್ ಪೆಕ್ಟರ್ ಗಳಾದ ಪ್ರಮೋದ್ ದಾವ್ಡೆ, ಸಬ್ ಇನ್ಸ್ ಪೆಕ್ಟರ್ ದಯಾನಂದ ವಾಲ್ವೆ ಮತ್ತು ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡ ತನಿಖೆಯನ್ನು ಆರಂಭಿಸಿತ್ತು.  ಅದರಂತೆ ಜುಲೈ 25 ರಂದು ಕರ್ನಾಟಕದಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಲ್ಲದೆ, ಜುಲೈ 26ರಂದು ಮುಂಬೈ ಪೊಲೀಸರ ತಂಡ ಮೈಸೂರಿಗೆ ಬಂದಿಳಿದಿತ್ತು. ಮೈಸೂರು ನಗರ ಪೊಲೀಸ್‌ ಆಯುಕ್ತರಾದ ಸೀಮಾಲಾಟ್ಕರ್ ಅವರ ಜೊತೆ ಸಮಾಲೋಚಿಸಿ, ಬನ್ನಿಮಂಟಪದ ರಿಂಗ್ ರಸ್ತೆ ಬಳಿಯ ಗ್ಯಾರೇಜ್ ರೂಪದಲ್ಲಿದ್ದ  ಶೆಡ್  ಡ್ರಗ್ ತಯಾರಿಕಾ ಫ್ಯಾಕ್ಟರಿಯಾಗಿತ್ತು ಇದರ  ಮೇಲೆ ಸಂಜೆ 7ರ ಸಮಯದಲ್ಲಿ ದಾಳಿ ಮಾಡಿತ್ತು.

ಇದನ್ನೂ ಓದಿ : ಭಾರತಕ್ಕೆ ಬಾಂಗ್ಲಾ-ನೇಪಾಳಿ ಹುಡ್ಗೀರ್ ಬರೋದ್ಯಾಕೆ?… ಅವರನ್ನು ಕರೆ ತರುವ ಜಾಲ ಯಾವುದು?

ಈ ವೇಳೆ ಮೆಫೆಡ್ರೊನ್‌ (ಎಂಡಿ) ಕ್ಯಾಥಿನೋನ್‌ ಗೆ ಸಂಬಂಧಿಸಿದ ರಾಸಾಯನಿಕ ವಸ್ತುಗಳು ಪತ್ತೆಯಾಗಿದ್ದು, ಈ ರಾಸಾಯನಿಕದಿಂದ ಎಂಡಿಎಂಎ ಮತ್ತು ಕೋಕೇನ್‌ ನಂತಹ ಡ್ರಗ್ಸ್‌ ತಯಾರಿಸುತ್ತಿರುವುದು ಕಂಡು ಬಂದಿತ್ತು. ಸುಮಾರು 390ಕೋಟಿ ಮೌಲ್ಯದ ಡ್ರಗ್ಸ್ ಗೆ ಸಂಬಂಧಿಸಿದ  ರಾಸಾಯನಿಕಗಳು ಮತ್ತು ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಅಂಧೇರಿಯ ಫಿರೋಜ್ ಮೌಲಾ ಶೇಕ್, ಗುಜರಾತ್‌ ನ ಸೂರತ್ ನಿವಾಸಿ ಶೇಕ್ ಆದಿಲ್, ಬೈರೋಚ್‌ನ ಸೈಯದ್ ಮಹಪೂಜ್ ಅಲಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಮುಂಬೈ ವಲಯ ಡಿಸಿಪಿ ದತ್ತ ನಾಲ್ವಡೆ ಪ್ರಕಾರ ಸೈಯದ್ ರಸಾಯನ ವಿಜ್ಞಾನ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದಾನೆ.

ಮೈಸೂರಿನಲ್ಲಿ ತಯಾರಾಗುತ್ತಿದ್ದ ಮಾದಕ ವಸ್ತುವನ್ನು ಮಹಾರಾಷ್ಟ್ರ, ಗುಜರಾತ್‌ಗೆ ಪೂರೈಕೆ ಮಾಡಲಾಗುತ್ತಿತ್ತು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತು ಪತ್ತೆಯಾಗಿರುವುದು ರಾಜ್ಯದಲ್ಲಿ ಇದೇ ಮೊದಲು. ಮಹಾರಾಷ್ಟ್ರ ಪೊಲೀಸರು ಡ್ರಗ್ ಪೆಡ್ಲರ್ ಸಲೀಂ ಇಂತಿಯಾಜ್ ಶೇಖ್‌ ನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸದೆ ಹೋಗಿದ್ದರೆ ಮೈಸೂರಿನಲ್ಲಿದ್ದ ಡ್ರಗ್ ಫ್ಯಾಕ್ಟರಿಯ ಮಾಹಿತಿಯೇ ಹೊರ ಬರುತ್ತಿರಲಿಲ್ಲವೇನೋ?

ಇದನ್ನೂ ಓದಿ : ಮಗಳು ಮನೆ ಬಿಟ್ಟಳು.. ಹೆತ್ತವರು ಹೆಣವಾದರು.. ಇದೆಂತಹ ದುರಂತ ಕಥೆ ಅಲ್ವಾ…!

ಇನ್ನು ಡ್ರಗ್ ಜಾಲ ನಡೆಸುತ್ತಿದ್ದವರ ಕುರಿತಂತೆ ಮಾಹಿತಿ ಕಲೆ ಹಾಕಲಾಗಿದ್ದು, ಪೊಲೀಸ್ ಮೂಲಗಳ ಪ್ರಕಾರ ಇವರು ಎರಡು ತಿಂಗಳಿಗೊಮ್ಮೆ ಡ್ರಗ್ಸ್ ಫ್ಯಾಕ್ಟರಿ ಉದ್ದೇಶಕ್ಕೆ ಸ್ಥಳ ಬದಲಾವಣೆ ಮಾಡುತ್ತಿದ್ದರು. ಈ ಹಿಂದೆ ಕೇರಳದ ಪಾಲಕ್ಕಾಡ್, ಮಹಾರಾಷ್ಟ್ರದ ನಾಸಿಕ್‌ ನಲ್ಲಿ ಮಾದಕ ವಸ್ತು ತಯಾರಿಸುತ್ತಿದ್ದರು. ಪೊಲೀಸರು ದಾಳಿ ನಡೆಸಿದಾಗ ಅಲ್ಲಿಂದ ತಪ್ಪಿಸಿಕೊಂಡು ಮೂರು ವಾರಗಳ ಹಿಂದೆ ಬನ್ನಿಮಂಟಪದ ರಿಂಗ್ ರಸ್ತೆಯ ಗ್ಯಾರೇಜ್‌ಗೆ ಬಂದು ಎಂಡಿಎಂಎ ತಯಾರಿಕೆಯಲ್ಲಿ ತೊಡಗಿದ್ದರಂತೆ. ಇವರಿಗೆ ಅಜ್ಮಲ್ ಎಂಬಾತ  ಈ ಶೆಡ್ ನ್ನು ಬಾಡಿಗೆ ನೀಡಿದ್ದನು.

ಸುಮಾರು ಇಪ್ಪತ್ತು  ದಿನಗಳ ಹಿಂದೆ ಮಹೇಶ್ ಎಂಬುವವರಿಗೆ ಸೇರಿದ್ದ ಈ ಜಾಗವನ್ನು 20 ಸಾವಿರ ರೂ. ಬಾಡಿಗೆಗೆ ಪಡೆದಿದ್ದ ಅಜ್ಜಲ್ ಅಲ್ಲಿ ಗ್ಯಾರೇಜ್ ನಿರ್ಮಿಸಿದ್ದ. ಬಳಿಕ ಜಾಗವನ್ನು ಎಂಡಿಎಂಎ ಡ್ರಗ್ಸ್ ತಯಾರು ಮಾಡುತ್ತಿದ್ದ ಆರೋಪಿಗಳಿಗೆ ತಿಂಗಳಿಗೆ 2 ಲಕ್ಷ ರೂ.ಗೆ ಒಳ ಬಾಡಿಗೆಗೆ ನೀಡಿದ್ದ ಎನ್ನಲಾಗಿದ್ದು, ಸದ್ಯ ಅಜ್ಮಲ್ ನನ್ನು ಪೊಲೀಸರು ಬಂಧಿಸಿದ್ದಾರೆ.

ದ್ರವ ರೂಪದಲ್ಲಿದ್ದ ಮಾದಕ ವಸ್ತುವನ್ನು ಪೌಡರ್ ಮಾಡಿ ಪೂರೈಸುತ್ತಿದ್ದರು. ಡ್ರಗ್ಸ್ ಮಾರಾಟಕ್ಕಾಗಿ ಬೇರೆಯದೇ ತಂಡವಿದ್ದು, ಈ ಜಾಲದ ಪತ್ತೆಗೆ ತನಿಖೆ ಮುಂದುವರಿದಿದೆ. ಶೆಡ್ ಪಕ್ಕದಲ್ಲೇ ಇರುವ ಟೀ ಅಂಗಡಿಗೆ ತಂಡದಲ್ಲಿದ್ದ ಯುವಕನೊಬ್ಬ ಬಂದು ಆಗಾಗ ಟೀ ತೆಗೆದುಕೊಂಡು ಹೋಗುತ್ತಿದ್ದ. ಮತ್ಯಾರೂ ಶೆಡ್‌ ನಿಂದ ಹೊರಕ್ಕೆ ಬರುತ್ತಿರಲಿಲ್ಲ. ಶೆಡ್ ನೊಳಗೆ ಗಾಳಿ, ಬೆಳಕು ಬಾರದಂತೆ ಮುಚ್ಚಲಾಗಿತ್ತು. ಸ್ಥಳೀಯರಿಗೆ ಗ್ಯಾರೇಜ್ ನಲ್ಲಿ ಎಷ್ಟು ಮಂದಿ ಇದ್ದಾರೆ ಎಂಬುದರ ಬಗ್ಗೆ ಮಾಹಿತಿಯೂ ಇರಲಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ :  ಜನ ಸ್ಪಾಗಳನ್ನು ಅನುಮಾನದಿಂದ ನೋಡುತ್ತಿರುವುದೇಕೆ? ಇಷ್ಟಕ್ಕೂ ಮಸಾಜ್ ಸ್ಪಾ ಸೆಂಟರ್ ಗಳಲ್ಲಿ ನಡೆಯುವುದೇನು?

ಸದ್ಯ ಮೈಸೂರು ಪೊಲೀಸರು ಎಚ್ಚೆತ್ತು ಕೊಂಡಿದ್ದಾರೆ. ಈಗಾಗಲೇ  ಎನ್ ಆರ್ ಠಾಣೆಯ ಇನ್ಸ್ ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ಅವರನ್ನು ಅಮಾನತು ಮಾಡಲಾಗಿದೆ. ಅಷ್ಟೇ ಅಲ್ಲದೆ, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ಡ್ರಗ್ಸ್ ಜಾಲವನ್ನು ಭೇದಿಸಲು ಏಳು ವಿಶೇಷ ತಂಡಗಳನ್ನು ರಚನೆ ಮಾಡಿದ್ದು,  ಈಗಾಗಲೇ ನಗರದ ಮಂಡಿ ಮತ್ತು ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಪುಲಕೇಶಿ ರಸ್ತೆ, ಮೀನಾ ಬಜಾರ್, ಮಹದೇವಪುರ ರಸ್ತೆ ಸೇರಿದಂತೆ ಹಲವು ಬಡಾವಣೆ ವ್ಯಾಪ್ತಿಯ ಉದ್ಯಾನಗಳಲ್ಲಿ ರಾತ್ರಿ ವೇಳೆ ಗಸ್ತು ನಡೆಸಿ ಮಾದಕ ವ್ಯಸನಿಗಳನ್ನು ಪತ್ತೆ ಹಚ್ಚಿದಲ್ಲದೆ, ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ನಗರದ ಹಲವು ಕಡೆಗಳಲ್ಲಿ ಮಾದಕ ವ್ಯಸನಿಗಳಿದ್ದು, ಅವರನ್ಮು ಹಿಡಿದು ಅವರಿಗೆ ಎಲ್ಲಿಂದ ಸಪ್ಲೈ ಆಗುತ್ತಿದೆ ಎಂಬುದನ್ನು ಪತ್ತೆ ಹಚ್ಚಬೇಕಿದೆ. ಸದ್ಯ  ಡ್ರಗ್ಸ್ ಫ್ಯಾಕ್ಟರಿಯನ್ನೇ ತೆರೆಯಲಾಗಿತ್ತು ಎಂಬ ವಿಚಾರ ಇಡೀ ಮೈಸೂರು ಜನರನ್ನು ಆತಂಕಕ್ಕೆ ತಳ್ಳಿದೆ.  ಇನ್ನು ಮುಂದೆಯಾದರೂ ಸಂಶಯಾಸ್ಪದ ಶೆಡ್ ಗಳು, ಗಾಂಜಾ ಮಾರಾಟ, ಮಾದಕ ವ್ಯಸನಿಗಳ ಓಡಾಟದ ಬಗ್ಗೆ ಮಾಹಿತಿ ಬಂದರೆ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದೇ ಆದರೆ ಮಾದಕ ವಸ್ತುಗಳ ಮಾರಾಟ ಮತ್ತು ವ್ಯಸನಿಗಳನ್ನು ಹತ್ತಿಕ್ಕಲು ಸಾಧ್ಯವಾಗಬಹುದೇನೋ?

 

-ಬಿ.ಎಂ.ಲವಕುಮಾರ್

 

admin
the authoradmin

ನಿಮ್ಮದೊಂದು ಉತ್ತರ

Translate to any language you want