ಕೊಡಗಿನಲ್ಲಿ ಸುರಿಯುವ ಮಳೆಯಲ್ಲಿಯೇ ಭತ್ತದ ಕೃಷಿ ಚಟುವಟಿಕೆ ನಡೆಯುತ್ತಿದ್ದುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಹಿಂದಿನ ಕಾಲದವರು ಸ್ಥಳೀಯವಾಗಿ ಸಿಗುತ್ತಿದ್ದ ಔಷಧೀಯ ಗುಣಗಳುಳ್ಳ ಗಿಡಮೂಲಿಕೆಗಳನ್ನು ಆಹಾರವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು. ಮತ್ತು ಅವುಗಳನ್ನು ಮಳೆಗಾಲದಲ್ಲಿ ಅದರಲ್ಲೂ ಕಕ್ಕಡ(ಆಟಿ) ತಿಂಗಳ 18ನೇ ದಿನ (ಆಗಸ್ಟ್ 03) ಅವುಗಳನ್ನು ಸೇವಿಸಬೇಕೆನ್ನುವ ರೂಢಿಯನ್ನು ಮಾಡಿದ್ದರು. ಅದು ಇವತ್ತಿಗೂ ಮುಂದುವರೆದುಕೊಂಡು ಬಂದಿದ್ದು ಜಿಲ್ಲೆಯಾದ್ಯಂತ ಆಟಿ(ಕಕ್ಕಡ) ಪದ್ನಟ್ ಆಚರಣೆಯ ಸಂಭ್ರಮ ಮನೆ ಮಾಡುತ್ತದೆ.
ಇದನ್ನೂ ಓದಿ: ಕೊಡಗಿನಲ್ಲಿ ಮಳೆಗಾಲ ಆರಂಭವಾಯಿತೆಂದರೆ ಗುಡ್ಡದಭೂತದ ಭಯ
ಇವತ್ತು ಕೊಡಗಿನಲ್ಲಿ ಆಚರಣೆಯಲ್ಲಿರುವ ಎಲ್ಲ ಹಬ್ಬಗಳು ಭತ್ತದ ಕೃಷಿಯನ್ನು ಆದರಿಸಿ ಮಾಡಿದ ಆಚರಣೆಗಳಾಗಿವೆ. ಅವತ್ತಿನ ಪರಿಸ್ಥಿತಿಗನುಗುಣವಾಗಿ ಕೆಲವು ಆಚರಣೆಯನ್ನು ಹಿರಿಯರು ಜಾರಿಗೆ ತಂದಿದ್ದರು. ಅದು ಇವತ್ತಿಗೂ ನಡೆದುಕೊಂಡು ಬರಲಾಗುತ್ತಿದೆ. ಆಚರಣೆಯಲ್ಲಿ ಒಂದಿಷ್ಟು ಬದಲಾವಣೆಗಳು ಕಾಲಕ್ಕೆ ತಕ್ಕಂತೆ ಆಗಿವೆ. ಆದರೂ ಆಚರಣೆ ಮಸುಕಾಗಿಲ್ಲ. ಈ ಆಚರಣೆಗಳನ್ನು ಆಳವಾಗಿ ನೋಡಿದ್ದೇ ಆದರೆ ಆಚರಣೆ ಹಿಂದೆ ವೈಜ್ಞಾನಿಕ ಕಾರಣಗಳು ಇರುವುದನ್ನು ನಾವು ಕಾಣಬಹುದಾಗಿದೆ.
ಇದನ್ನೂ ಓದಿ: ಮಳೆಗಾಲದಲ್ಲಿ ಕೊಡಗಿನತ್ತ ಪ್ರವಾಸಿಗರ ದಂಡು… ಈಗ ಟ್ರೆಂಡ್ ಆಗುತ್ತಿದೆ ಮಾನ್ಸೂನ್ ಟ್ರಿಪ್ ..
ಆಗಿನ ಕಾಲದಲ್ಲಿ ಭತ್ತದ ಕೃಷಿಯೇ ಪ್ರಮುಖ ಬೆಳೆಯಾಗಿತ್ತು. ನೀರಿನ ಆಶ್ರಯವಿರುವ ಸ್ಥಳಗಳಲ್ಲಿ ಗದ್ದೆಗಳನ್ನು ನಿರ್ಮಿಸಿ ಕೃಷಿ ಮಾಡುತ್ತಿದ್ದರು. ಅವತ್ತಿನ ದಿನಗಳಲ್ಲಿ ಅವರ ಸಾಮರ್ಥ್ಯಕ್ಕೆ ತಕ್ಕಷ್ಟು ಜಾಗವನ್ನು ಬಳಸಿಕೊಂಡು ಕೃಷಿ ಮಾಡುತ್ತಿದ್ದರು. ಇದೊಂದೇ ಕೃಷಿ ಅವತ್ತಿನ ದಿನದಲ್ಲಿ ಪ್ರಮುಖವಾಗಿತ್ತು. ಹೀಗಾಗಿ ಭತ್ತದ ಕೃಷಿ ಚಟುವಟಿಕೆಗಳು ಮೇ ತಿಂಗಳ ಕೊನೆಯ ವಾರದಲ್ಲಿ ಆರಂಭವಾದರೆ ಆಗಸ್ಟ್ ತಿಂಗಳು ಬಂದರೂ ಮಗಿಯುತ್ತಿರಲಿಲ್ಲ. ಸುರಿಯುವ ಮಳೆಯಲ್ಲಿಯೇ ತಿಂಗಳಾನುಗಟ್ಟಲೆ ಭತ್ತದ ಕೃಷಿಯನ್ನು ಮಾಡುತ್ತಿದ್ದರು.
ಇದನ್ನೂ ಓದಿ: ಮುಂಗಾರು ಮಳೆಗೆ ದರ್ಶನ ನೀಡುವ ಅಪರೂಪದ ಅತಿಥಿಗಳು… ಇವು ನಿಸರ್ಗದ ಅಳಿದುಳಿದ ಜೀವರಾಶಿಗಳು…
ಶೀತ ವಾತಾವರಣದಲ್ಲಿ ದೇಹವನ್ನು ಬಿಸಿಯಾಗಿಟ್ಟುಕೊಳ್ಳಬೇಕಾಗಿತ್ತು. ಅದಕ್ಕಾಗಿ ಮಳೆಗಾಲದಲ್ಲಿ ಆಯಾಯ ಸಂದರ್ಭಕ್ಕೆ ತಕ್ಕಂತೆ ಸುತ್ತಮುತ್ತಲಿದ್ದ ಗಿಡಮೂಲಿಕೆಗಳಲ್ಲಿನ ಔಷಧೀಯ ಗುಣಗಳನ್ನು ಗಮನಿಸಿ ಅದನ್ನು ಬಳಸಲು ಆರಂಭಿಸಿದ್ದರಲ್ಲದೆ, ಅದರ ಸೇವನೆಗೆ ಅನುಕೂಲವಾಗುವಂತೆ ಆಚರಣೆಯನ್ನು ಜಾರಿ ಮಾಡಿದರು. ಅದು ಹಾಗೆಯೇ ಮುಂದುವರೆದು ಇಂದಿಗೂ ಅಚರಣೆಯಲ್ಲಿದೆ. ಕೆಲವು ದಶಕಗಳ ಹಿಂದಕ್ಕೆ ಹೋದರೆ ಮಳೆಗಾಲ ಎನ್ನುವುದು ಕೊಡಗಿನವರ ಪಾಲಿಗೆ ಒಂದು ರೀತಿಯ ಚಾಲೆಂಜ್ ಆಗಿತ್ತು. ಸುರಿಯುವ ಮಳೆಯಲ್ಲಿಯೇ ಎಲ್ಲವನ್ನೂ ಮಾಡಬೇಕಾಗಿತ್ತು.
ಇದನ್ನೂ ಓದಿ: ಬೆಳ್ಳಕ್ಕಿ…. ಕೊಡಗಿಗೆ ಮಳೆಗಾಲದಲ್ಲಿ ಬರುವ ಯೂರೋಪಿನ ಅತಿಥಿಗಳು… ಇವುಗಳ ವಿಶೇಷತೆ ಗೊತ್ತಾ?
ಇನ್ನು ಮುಂಗಾರು ಮಳೆಯ ಅವಧಿಯಲ್ಲಿ ಬರುವ ಕಕ್ಕಡ(ಆಟಿ) ತಿಂಗಳು ಕೊಡಗಿನವರ ಮಟ್ಟಿಗೆ ಬಿಡುವಿಲ್ಲದ ದುಡಿಮೆಯ ಕಾಲವಾಗಿತ್ತು. ಸದಾ ಸುರಿಯುವ ಮಳೆಯಲ್ಲಿ, ಮೈಕೊರೆಯುವ ಚಳಿಯಲ್ಲಿ ಮುಂಜಾನೆಯಿಂದ ಸಂಜೆಯವರೆಗೂ ಮಳೆಯಲ್ಲಿ ನೀರು ತುಂಬಿದ ಕೆಸರು ಗದ್ದೆಯಲ್ಲಿ ಮೈಬಗ್ಗಿಸಿ ದುಡಿಯಲೇ ಬೇಕಾಗಿತ್ತು. ಈ ವೇಳೆ ಅಂದರೆ ಜುಲೈ 17ರಿಂದ ಆರಂಭವಾಗಿ ಆಗಸ್ಟ್ 16ರವರೆಗಿನ ಒಂದು ತಿಂಗಳ ಅವಧಿ ಕಕ್ಕಡ(ಆಟಿ) ತಿಂಗಳಾಗಿತ್ತು. ಈ ಸಮಯದಲ್ಲಿ ಗದ್ದೆ ಕೆಲಸ ಹೊರತು ಪಡಿಸಿ ಉಳಿದ ಎಲ್ಲ ಶುಭ ಕಾರ್ಯಗಳು ನಿಷಿದ್ಧವಾಗಿದ್ದವು.
ಇದನ್ನೂ ಓದಿ: ಈಗ ಜಲಧಾರೆಗಳ ಬಳಿಗೆ ತೆರಳುವುದು ಡೇಂಜರ್.. ಏಕೆ ಗೊತ್ತಾ?
ಆಟಿ(ಕಕ್ಕಡ) ತಿಂಗಳಲ್ಲಿ ಮಳೆ ಹೆಚ್ಚು ಸುರಿಯುತ್ತಿದ್ದರಿಂದ ಮನೆಯಿಂದ ಹೊರಗೆ ಹೋಗಲಾಗದ ಪರಿಸ್ಥಿತಿ ಇದ್ದುದರಿಂದ ತಮ್ಮ ಸುತ್ತಮುತ್ತ ಸಿಗುವ ಏಡಿ, ಅಣಬೆ, ಬಿದಿರು ಕಣಿಲೆ, ಮರದಲ್ಲಿ ಬೆಳೆಯುವ ಕೆಸದ ಎಲೆಯಿಂದ ಪತ್ರೊಡೆ, ನಾಟಿಕೋಳಿ ಸಾರು ಮೊದಲಾದವುಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು. ಇವುಗಳಲ್ಲಿ ಉಷ್ಣಾಂಶವನ್ನು ಹೆಚ್ಚಿಸುವ ಶಕ್ತಿಯಿತ್ತು. ಇನ್ನು ಆಟಿ ತಿಂಗಳ 18ನೇ ದಿನ ಕಾಡಿನಲ್ಲಿ ಸಿಗುವ ಆಟಿಸೊಪ್ಪನ್ನು ತಂದು ಅದನ್ನು ಚೆನ್ನಾಗಿ ತೊಳೆದು ಬಳಿಕ ನೀರಿನಲ್ಲಿ ಬೇಯಿಸಿ ಅದು ಬಿಡುವ ನೀರಿನಲ್ಲಿ ಪಾಯಸ, ಸೇರಿದಂತೆ ಇನ್ನಿತರ ತಿನಿಸು ಮಾಡಿ ಜೇನುತುಪ್ಪದೊಂದಿಗೆ ಸೇವಿಸುತ್ತಿದ್ದರು. ಅದನ್ನು ಈಗಲೂ ಮಾಡಲಾಗುತ್ತಿದೆ.
ಇದನ್ನೂ ಓದಿ: ಕಕ್ಕಡ.. ಕೊಡಗಿನವರನ್ನು ಎಚ್ಚರಿಸುವ ಕಾಲ… ಕಕ್ಕಡದ ಆ ದಿನಗಳು ಹೇಗಿದ್ದವು? ಈಗ ಏನಾಗಿದೆ?
ಮಳೆಗಾಲದಲ್ಲಿ ಬಿದಿರಿನಿಂದ ಬರುವ ಮೊಳಕೆ(ಕಣಿಲೆ) ಹೆಚ್ಚಿನ ಜನರ ಮುಖ್ಯ ತರಕಾರಿಯಾಗಿತ್ತು. ಅವತ್ತಿನ ದಿನಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗಿ ಧೋ ಎಂದು ಸುರಿಯುತ್ತಿದ್ದರೆ, ನದಿ ದಡದಲ್ಲಿ, ಕಾಡಿನ ನಡುವೆ, ಗದ್ದೆ ಬದಿಯಲ್ಲಿ ಹೀಗೆ ಎಲ್ಲೆಂದರಲ್ಲಿ ಬೆಳೆದು ನಿಂತಿದ್ದ ಬಿದಿರು ಮೆಳೆಗಳಿಂದ ಕಣಿಲೆ ಕಡಿದು ತಂದು ತರಕಾರಿಯಾಗಿ ಬಳಸುತ್ತಿದ್ದರು. ಇನ್ನು ಗದ್ದೆ ಬಯಲು, ತೋಟಗಳಲ್ಲಿ ಹಲವು ಬಗೆಯ ಅಣಬೆಗಳು ಮಳೆಗಾಲದಲ್ಲಿ ಹುಟ್ಟುತ್ತಿದ್ದವು. ಇವುಗಳು ಆಕಾರ, ರುಚಿಯಲ್ಲಿಯೂ ವಿಭಿನ್ನವಾಗಿರುತ್ತಿದ್ದವು.
ಇದನ್ನೂ ಓದಿ: ಕಾವೇರಿಗೆ ಶಾಂತಳಾಗುವಂತೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪೊಲಿಂಕಾನ ಪೂಜೆ…. ಏನಿದರ ವಿಶೇಷ?
ಇಷ್ಟೇ ಅಲ್ಲದೆ ಇಲ್ಲಿನ ಗದ್ದೆ ಬಯಲು, ತೋಟದ ಅಂಚಿನಲ್ಲಿ, ಕಾಡಿನಲ್ಲಿ ನೂರಾರು ಬಗೆಯ ಅಣಬೆಗಳು ಅಲ್ಲಲ್ಲಿ ಕಂಡು ಬಂದರೂ ಅವುಗಳಲ್ಲಿ ಕೆಲವೊಂದನ್ನು ಮಾತ್ರ ಸೇವನೆಗೆ ಬಳಸುತ್ತಿದ್ದರು. ಯಾವ ಜಾತಿಯ ಅಣಬೆಯನ್ನು ಸೇವಿಸಬಹುದು ಎಂಬುದು ಇಲ್ಲಿನವರಿಗೆ ಚೆನ್ನಾಗಿ ಗೊತ್ತಿತ್ತು. ಇಷ್ಟೇ ಅಲ್ಲದೆ ಕಾಡು, ತೋಟಗಳಲ್ಲಿ ಮರಗಳ ಬುಡದಲ್ಲಿ ಮತ್ತು ಕೊಂಬೆಗಳಲ್ಲಿ, ನೆಲದಲ್ಲಿ ಅಲ್ಲಲ್ಲಿ ಬೆಳೆಯುವ ಮರ ಕೆಸವನ್ನು ಬಳಸಿ ಪತ್ರೊಡೆ ಮಾಡಿ ತಿನ್ನುತ್ತಿದ್ದರು. ಹೊಳೆ, ನದಿ, ನೀರಿನಾಶ್ರಯವಿರುವ ಪ್ರದೇಶಗಳಲ್ಲಿ ಬೆಳೆಯುವ ಕೆಸದ ದಂಟು, ಬೇರು, ಚಿಗುರನ್ನು ಸಾರು ಮಾಡುತ್ತಿದ್ದರು. ಇದರಲ್ಲಿ ಉಷ್ಣಾಂಶವನ್ನು ಹೆಚ್ಚಿಸುವ ಗುಣವಿರುವುದರಿಂದ ಇದರ ಬಳಕೆಯನ್ನು ಹೆಚ್ಚು ಮಾಡುತ್ತಿದ್ದರು. ಅವತ್ತಿನಿಂದ ಇವತ್ತಿನವರೆಗೂ ಮಳೆಗಾಲದಲ್ಲಿ ಇದರ ಬಳಕೆಯನ್ನು ಜನ ಮಾಡುತ್ತಾ ಬರುತ್ತಿದ್ದಾರೆ.
ಇದನ್ನೂ ಓದಿ: ಕೊಡಗಿನ ಭತ್ತದ ನಾಟಿ ಮತ್ತು ಅದರ ಸುತ್ತ ಹೆಣೆದುಕೊಂಡಿರುವ ಭಾವನಾತ್ಮಕ ಸಂಬಂಧಗಳು ಏನೇನು ಗೊತ್ತಾ?
ಒಟ್ಟಾರೆಯಾಗಿ ಹೇಳಬೇಕೆಂದರೆ ಕೊಡಗಿನಲ್ಲಿ ಸೇವಿಸುವ ಆಹಾರ ಪದಾರ್ಥಗಳ ಹಿಂದೆ ಅಲ್ಲಿನ ವಾತಾವರಣಕ್ಕೆ ತಕ್ಕ ವೈಜ್ಞಾನಿಕ ಕಾರಣಗಳಿದ್ದು, ಆ ಉದ್ದೇಶದಿಂದಲೇ ಅದನ್ನು ಜನ ಬಳಕೆ ಮಾಡುತ್ತಾ ಬರುತ್ತಿದ್ದಾರೆ. ಈಗ ಹಿಂದಿನಂತೆ ಕಾಡುಗಳು ಹೆಚ್ಚಿಲ್ಲದ ಕಾರಣ ಎಲ್ಲೆಂದರಲ್ಲಿ ಹೇರಳವಾಗಿ ಕೆಲವೊಂದು ಆಹಾರ ಪದಾರ್ಥ ಸಿಗದಂತಾಗಿದೆ. ಆದರೂ ಜನ ಅದನ್ನು ಹಣ ನೀಡಿ ಖರೀದಿಸಿ ಉಪಯೋಗಿಸುತ್ತಾರೆ ಎನ್ನುವುದೇ ಅದರ ಮಹತ್ವಕ್ಕೆ ಸಾಕ್ಷಿಯಾಗಿದೆ.
B M Lavakumar